Pages

Friday, July 24, 2009

ಅನ್ನದಲ್ಲಿ ಬಗೆ ಬಗೆ...
------------------------------


ಪುದೀನಾ ಪಲಾವು
------------------------------



ಪುದೀನಾ ಎಲೆ: ೧ ಲೋಟ
ಅಕ್ಕಿ: ೧ ಲೋಟ
ನೀರುಳ್ಳಿ: ೧
ಬೆಳ್ಳುಳ್ಳಿ: ೪ ಎಸಳು
ಶುಂಠಿ: ಒಂದು ಸಣ್ಣ ಚೂರು
ಲವಂಗ: ೪
ಕಾಳು ಮೆಣಸು: ೫
ಜಾಯಿಕಾಯಿ ಹೂವು: ಒಂದು ಸಣ್ಣ ಚೂರು
ಚಕ್ರ ಮೊಗ್ಗು: ೧ ಸಣ್ಣ ಚೂರು
ಎಣ್ಣೆ: ಎರಡು ಚಮಚ
ಹಸಿ ಮೆಣಸು: ೧
ಜೀರಿಗೆ: ೧ ಚಮಚ
ಲಿಂಬೆ ರಸ: ೧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು, ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಲವಂಗ, ಕಾಳು ಮೆಣಸು, ಜಾಯಿಕಾಯಿ ಹೂವು, ಚಕ್ರ ಮೊಗ್ಗು ಇವುಗಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
೩.ಮಿಕ್ಸಿಯಲ್ಲಿ ಪುದೀನಾ, ಬಾಣಲೆಯಲ್ಲಿ ಹುರಿದಿಟ್ಟ ಸಾಮಗ್ರಿಗಳು, ಶುಂಠಿ, ಬೆಳ್ಳುಳ್ಳಿ ಇವುಗಳನ್ನು ಒಟ್ಟಿಗೆ ರುಬ್ಬಿ.
೪.ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ.
೫.ಬಳಿಕ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಕಂದು ಬಣ್ಣ ಬರುವ ತನಕ ಹುರಿಯಿರಿ. ಒಂದು ಹಸಿ ಮೆಣಸನ್ನು ಚೂರು ಮಾಡಿ ಹಾಕಿ.
೬.ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣವನ್ನು ಹಾಕಿ, ಕಲಕಿ.
೭.ಇದು ಕುದಿಯುತ್ತಿದ್ದಂತೆ, ಅನ್ನವನ್ನು ಸೇರಿಸಿ. ನಿಂಬೆ ರಸ, ಉಪ್ಪು ಹಾಕಿ ಕಲಕಿ.
೮.ಎರಡು ನಿಮಿಷ ಮಂದ ಉರಿಯಲ್ಲಿ ಕಲಕಿ. ಇದೀಗ ಪುದೀನಾ ಪಲಾವು ತಯಾರು. ಇದೇ ಥರ ಮೆಂತೆ ಸೊಪ್ಪಿನ ಪಲಾವನ್ನು ಮಾಡಬಹುದು.

-------------------------------------------
ಜೀರಾ ರೈಸ್
---------------------------------------------
ಅತ್ಯಂತ ಸುಲಭವಾದ ಅಡುಗೆ ವಿಧಾನ ಇದು.



ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.

ವಿ.ಸೂ:ಇಡೀ ಲವಂಗದ ಬದಲು ಲವಂಗದ ಪುಡಿಯನ್ನೂ ಹಾಕಬಹುದು.

-----------------------------------------------------
ವಾಂಗಿ ಭಾತ್

ಬೇಕಾಗುವ ಪದಾರ್ಥಗಳು

ಅಕ್ಕಿ: ಒಂದು ಲೋಟ

ಬದನೆ ಪಲ್ಯಕ್ಕೆ:

ಬದನೆಕಾಯಿ: ೪
ಎಣ್ಣೆ: ೪ ಚಮಚ
ಸಾಸಿವೆ: ಒಂದು ಚಮಚ
ಜೀರಿಗೆ: ಒಂದು ಚಮಚ
ಉದ್ದು:ಒಂದು ಚಮಚ
ಅರಸಿನ: ಕಾಲು ಚಮಚ
ಇಂಗು: ಚಿಟಿಕೆ
ಕೆಂಪು ಮೆಣಸು: ೩
ಉಪ್ಪು:ರುಚಿಗೆ ತಕ್ಕಷ್ಟು
ಬೇವಿನ ಎಲೆ: ೧೦
ಲಿಂಬೆ ರಸ: ಒಂದು ಚಮಚ

ಮಸಾಲೆಗೆ:

ಕಡಲೆ ಬೇಳೆ, ಉದ್ದಿನ ಬೇಳೆ, ದಾಲ್ಚಿನ್ನಿ, ಲವಂಗ, ಗಸಗಸೆ, ಕಾಳು ಮೆಣಸು, ಕೊತ್ತಂಬರಿ ಕಾಳು: ತಲಾ ಒಂದು ಚಮಚ
ಕೊಬ್ಬರಿ ತುರಿ: ಅರ್ಧ ಲೋಟ





ವಿಧಾನ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಮಸಾಲೆಗೆ ಎಂದು ಸೂಚಿಸಿದ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು, ಕೊಬ್ಬರಿ ತುರಿ ಜತೆ ನೀರು ಹಾಕದೆ ರುಬ್ಬಿ ಇಟ್ಟುಕೊಳ್ಳಿ.
೩.ಬಾಣಲೆಯಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಉದ್ದು, ಅರಸಿನ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬೇವಿನ ಎಲೆ ಸೇರಿಸಿ.
೪.ಇದಕ್ಕೆ ಹೆಚ್ಚಿದ ಬದನೆ ಹೋಳುಗಳನ್ನು ಸೇರಿಸಿ, ಕಲಕಿ. ಸ್ವಲ್ಪ ಹೊತ್ತು ಬೇಯಿಸಿ.
೫.ಈಗ ಇದಕ್ಕೆ ಉಪ್ಪು ಮತ್ತು (೨) ಹಂತದಲ್ಲಿ ತಯಾರಾದ ಮಸಾಲೆಯನ್ನು ಸೇರಿಸಿ, ಕಲಕಿ.
೬.ಈಗ ಬದನೆಕಾಯಿಯ ಮಸಾಲೆ ಪಲ್ಯ ತಯಾರಾಯಿತು.
೭.ಇದಕ್ಕೆ ಅನ್ನ ಸೇರಿಸಿ ಕಲಸಿ. ಸ್ವಲ್ಪ ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ.
೮.ಆಹಾ..ರುಚಿರುಚಿಯಾದ ಈ ವಾಂಗಿ ಭಾತ್ ಗೆ ವಾಂಗಿ ಭಾತೇ ಸಾಟಿ.

--------------------------------------
ಪೀಸ್ ಪುಲಾವ್ (ಬಟಾಣಿ ಪುಲಾವು)
-----------------------------------------


ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬಟಾಣಿ: ಅರ್ಧ ಲೋಟ

ಎಣ್ಣೆ: ನಾಲ್ಕು ಚಮಚ
ಜೀರಿಗೆ, ಸಾಸಿವೆ, ಉದ್ದು ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ನೀರುಳ್ಳಿ: ಒಂದು
ಕಾಳು ಮೆಣಸು: ೧ ಚಮಚ
ಜಾಯಿಕಾಯಿ ಹೂವು: ೧ ಸಣ್ಣ ಚೂರು
ದಾಲ್ಚಿನ್ನಿ: ೧ ಸಣ್ಣ ಚೂರು
ಲವಂಗ: ೪
ಬೆಳ್ಳುಳ್ಳಿ: ೪ ಎಸಳು
ಹಸಿಮೆಣಸು: ೧
ನಿಂಬೆ ರಸ: ಒಂದು ಚಮಚ
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ:

೧.ನೀರುಳ್ಳಿ, ಕಾಳು ಮೆಣಸು, ಜಾಯಿಕಾಯಿ ಹೂವು, ದಾಲ್ಚಿನ್ನಿ, ಲವಂಗ, ಬೆಳ್ಳುಳ್ಳಿ, ಹಸಿಮೆಣಸು ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ.
೨.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೩.ಬಟಾಣಿಯನ್ನು ನೀರಿನಲ್ಲಿ ೧೦ ನಿಮಿಷ ಬೇಯಿಸಿ.
೪.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಹಾಕಿ, ಒಗ್ಗರಣೆ ಮಾಡಿ.
೫.ಇದಕ್ಕೆ ರುಬ್ಬಿದ ಮಸಾಲೆ ಮತ್ತು ಬೇಯಿಸಿದ ಬಟಾಣಿಯನ್ನು ಹಾಕಿ ಕಲಕಿ. ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ.
೬.ಮಂದ ಉರಿಯಲ್ಲಿ ೩-೪ ನಿಮಿಷ ಕಲಕಿ.
೭.ಇದಕ್ಕೆ ಅನ್ನವನ್ನು ಸೇರಿಸಿ, ಕಲಸಿ.ಉಪ್ಪು, ನಿಂಬೆ ರಸ ಸೇರಿಸಿ. ಇನ್ನೊಮ್ಮೆ ಕಲಕಿ.
೮.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೯.ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಅಥವಾ ಟೊಮಾಟೊ ನೀರುಳ್ಳಿ ರಾಯಿತದೊಂದಿಗೆ ಸವಿಯಿರಿ.

------------------------------
ಕಾಶ್ಮೀರಿ ಪುಲಾವು
---------------------------------
ಬೇಕಾಗುವ ಸಾಮಗ್ರಿಗಳು
ಅಕ್ಕಿ: ಒಂದು ಲೋಟ
ಹಾಲು: ಒಂದು ಲೋಟ
ಹಾಲಿನ ಕೆನೆ: ೫ ಚಮಚ
ಹೆಚ್ಚಿದ ಹಣ್ಣುಗಳು: ೧ ಲೋಟ
ಸಕ್ಕರೆ: ಒಂದು ಚಮಚ
ತುಪ್ಪ: ಎರಡು ಚಮಚ
ಲವಂಗ: ೪
ಪಲಾವು ಎಲೆ: ೧
ದಾಲ್ಚಿನ್ನಿ: ಸಣ್ಣ ಚೂರು
ಏಲಕ್ಕಿ: ೪
ಜೀರಿಗೆ: ಎರಡು ಚಮಚ
ಗುಲಾಬಿ ನೀರು (ರೋಸ್ ವಾಟರ್): ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು ೧೫-೨೦ ನಿಮಿಷ ನೆನೆಸಿಡಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ, ಜೀರಿಗೆ, ಪಲಾವು ಎಲೆ ಇವುಗಳನ್ನು ಜಜ್ಜಿ ಹಾಕಿ.
೩.ನೆನೆಸಿದ ಅಕ್ಕಿಯಿಂದ ನೀರು ಬೇರ್ಪಡಿಸಿ, ಬಾಣಲೆಗೆ ಹಾಕಿ. ೨-೩ ನಿಮಿಷ ಕಲಕಿ.
೪.ಈಗ ಇದಕ್ಕೆ ಹಾಲು, ಕೆನೆ, ಸಕ್ಕರೆ ಇವುಗಳನ್ನು ಸೇರಿಸಿ. ಅರ್ಧ ಲೋಟ ನೀರು ಸೇರಿಸಿ, ಮುಚ್ಚಳ ಹಾಕಿ, ೧೫-೨೦ ನಿಮಿಷಗಳ ಕಾಲ ಬೇಯಿಸಿ.
೫.ಈಗ ಅನ್ನ ಬೆಂದಿದೆಯೋ ಇಲ್ಲವೊ ಎಂದು ಪರೀಕ್ಷಿಸಿ. ಇಲ್ಲವೆಂದಾದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಬೇಯಲು ಬಿಡಿ.
೬.ಅನ್ನ ಸರಿಯಾಗಿ ಬೆಂದ ಮೇಲೆ ಇದಕ್ಕೆ ಉಪ್ಪು, ಕತ್ತರಿಸಿಟ್ಟ ಹಣ್ಣುಗಳನ್ನು ಹಾಕಿ ಕಲಕಿ.
೭.ಕಾಶ್ಮೀರಿ ಪಲಾವು ತಯಾರು. ಬಡಿಸುವ ಮುನ್ನ, ರೋಸ್ ವಾಟರ್ ಚಿಮುಕಿಸಿ, ತುಪ್ಪದಲ್ಲಿ ಹುರಿದ ಒಣ ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ ಬಡಿಸಿ.


---------------------------------------------
ಫ಼್ರೈಡ್ ರೈಸ್
--------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಸಣ್ಣಗೆ ಹೆಚ್ಚಿದ ನೀರುಳ್ಳಿ ಕಡ್ಡಿ (ಫ಼್ರೆಂಚ್ ಓನಿಯನ್ ): ೫
ಸೊಯಾ ಸಾಸ್: ೨ ಚಮಚ
ವಿನೆಗರ್: ೧ ಚಮಚ
ತುಪ್ಪ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಗೋಬಿ: ಸಣ್ಣಗೆ ಹೆಚ್ಚಿದ್ದು :ಕಾಲು ಲೋಟ
ಬಟಾಣಿ: ಅರ್ಧ ಲೋಟ


ವಿಧಾನ:

೧.ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ನೀರುಳ್ಳಿ ಕಡ್ಡಿಯನ್ನು ಸೇರಿಸಿ ೩-೪ ನಿಮಿಷ ಹುರಿಯಿರಿ.
೨.ಕುಕ್ಕರ್ ನಲ್ಲಿ ಗೋಬಿ ಮತ್ತು ಬಟಾಣಿಯನ್ನು ಬೇಯಿಸಿ.
೩. (೧) ರ ಮಿಶ್ರಣಕ್ಕೆ ಬೇಯಿಸಿದ ಗೋಬಿ ಮತ್ತು ಬಟಾಣಿಯನ್ನು ಸೇರಿಸಿ.
೪.ಇದಕ್ಕೆ ವಿನೆಗರ್, ಸೊಯ ಸಾಸ್, ಉಪ್ಪು ಹಾಕಿ ಕಲಕಿ.
೫.ಈ ಮಿಶ್ರಣಕ್ಕೆ ಅನ್ನ ಸೇರಿಸಿ, ಕಲಸಿ.
೬.೩-೪ ನಿಮಿಷ ಮಂದ ಉರಿಯಲ್ಲಿ ಕಲಕಿ.
೭.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.


-------------------------------------------
ಆಲೂ ಭಾತ್
-------------------------------------------
ಇದು ಮಹಾರಾಷ್ಟ್ರ ಪ್ರಾಂತ್ಯದ ಅಡುಗೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ತುಪ್ಪ: ೮ ಚಮಚ
ಅಲೂಗಡ್ಡೆ: ೨
ಮೊಸರು: ಅರ್ಧ ಲೋಟ
ಶುಂಠಿ: ಒಂದು ಸಣ್ಣ ಚೂರು
ಅರಸಿನ: ಕಾಲು ಚಮಚ
ದಾಲ್ಚಿನ್ನಿ, ಲವಂಗ ಪುಡಿ, ಕೊತ್ತಂಬರಿ ಪುಡಿ: ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಕಾಲು ಲೋಟ
ಕೊಬ್ಬರಿ ತುರಿ: ಕಾಲು ಲೋಟ
ಹಸಿ ಮೆಣಸು: ೩
ಉಪ್ಪು: ರುಚಿಗೆ ತಕ್ಕಷ್ಟು
ಗೋಡಂಬಿ: ೧೦

ವಿಧಾನ:
೧.ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿದ ಆಲೂಗಡ್ಡೆಯನ್ನು ತುಪ್ಪದಲ್ಲಿ ಹುರಿಯಿರಿ.
೨.ಇದಕ್ಕೆ ದಾಲ್ಚಿನ್ನಿ, ಕೊತ್ತಂಬರಿ, ಲವಂಗ ಪುಡಿ, ಮೊಸರು ಮತ್ತು ಜಜ್ಜಿದ ಶುಂಠಿಯನ್ನು ಹಾಕಿ ಕಲಕಿ.
೩.ಸಣ್ಣ ಉರಿಯಲ್ಲಿ ಅದನ್ನು ಬೇಯಿಸಿ. ಸ್ವಲ್ಪ ನೀರು ಚಿಮುಕಿಸಿ.
೪.ಆಲೂಗಡ್ಡೆ ಸರಿಯಾಗಿ ಬೆಂದ ಮೇಲೆ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಲಸಿ.
೫.ಈಗ ಇದಕ್ಕೆ ಅನ್ನವನ್ನು ಸೇರಿಸಿ. ೨-೩ ನಿಮಿಷ ಕಲಕಿ.
೬.ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

----------------------------------------------------------------------------------


ವಿ.ಸೂ:
೧.ಸಾಧಾರಣ ಅಕ್ಕಿಯ ಬದಲಿಗೆ ಬಾಸ್ಮತಿ ಅಕ್ಕಿಯನ್ನು ಬಳಸಿದರೆ ಅದರ ಸೊಗಸೇ ಬೇರೆ.
೨.ಅನ್ನ ಮಾಡುವಾಗ ಸ್ವಲ್ಪ ಎಣ್ಣೆ ಅಥವಾ ನಿಂಬೆ ರಸ ವನ್ನು ಅಕ್ಕಿಯ ಜತೆ ಹಾಕಿದರೆ ಅನ್ನ ಉದುರುದುರಾಗಿರುತ್ತದೆ.
೩.ಸಿಹಿ ಅಡುಗೆಗೆ ತುಪ್ಪ, ಖಾರದ ಅಡುಗೆಗೆ ಎಣ್ಣೆ ಬಳಸುವುದು ವಾಡಿಕೆ. ಆದರೂ ಖಾರದ ಅಡುಗೆಗೂ ತುಪ್ಪ ಬಳಸಿದರೆ ವಿಷೇಷ ರುಚಿ ಬರುತ್ತದೆ.
೪.ಮೇಲೆ ಸೂಚಿಸಿದ ಎಲ್ಲಾ ಪ್ರಮಾಣಗಳು ಇಬ್ಬರಿಗೆ ಸಾಕಾಗುವಷ್ಟು.

ಸುಧಾದಲ್ಲಿ ಪ್ರಕಟಿತ

Thursday, June 25, 2009

ಅವಸರದ ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ ,ಸಂಗೀತ

ವಿಜಯಕರ್ನಾಟಕದಲ್ಲಿ ಪ್ರಕಟಿತ.
---------------------------------

ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫ಼ೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .

ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ’ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ,ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.
ಐತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ )...ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.
ಐತಲಕಡಿ ಬಾರೆ
ಲಕ್ಕ ಆಗುಮ
ಪಾಠ ಓದ್ಕುಮ
ಊಟ ಹಾಕುಮ
ಕಟ್ಟಿಕೊ
ಯಮ ಯಮ ಮುದ ಚುಮ
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ.ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು.

ಅಂತೂ ಸುಮಾರು ಐದು ನಿಮಿಷಗಳತನಕ ಈ ಹಾಡನ್ನು ಸಹಿಸಿಕೊಂಡೆ.
ಯಾಕೆ ಹೊಗಳ್ತೀಯ
ಹೈಟು ಜಾಸ್ತಿ ಮಾಡ್ತೀಯ
ಅಂತ ಏನೇನೋ ಅದ್ಭುತ ಸಂಗೀತದೊಂದಿಗೆ ಈ ಹಾಡು ಮುಗಿಯಿತು.

ನಾನು ಚಿಂತಿಸತೊಡಗಿದೆ.ವರ್ಷದಲ್ಲಿ ಬರುವ ಸುಮಾರು ೫೦೦- ೬೦೦ ಕನ್ನಡ ಚಲನಚಿತ್ರಗೀತೆಗಳಲ್ಲಿ ಸುಂದರ, ಮಧುರ, ಮತ್ತೆ ಕೇಳಬಲ್ಲ ಹಾಡುಗಳ ಸಂಖ್ಯೆ ಎಷ್ಟು ಬೇಗನೆ ಕ್ಷೀಣವಾಗುತ್ತಿವೆ ? ಯಾಕೆ?
ಇದೀಗ ಮುಂದಿನ ಹಾಡಿನ ಸರದಿ.

ಕಮ್ ಓನ್ ಐ ಸೇ ...ಕಮ್ ಓನ್ ಐ ಸೇ ..
ಅಂತ ಶುರುವಾಯಿತು. ಕೆಹರವಾ ತಾಳ ಡೋಲಿನ ಮೇಲೆ ಬೊಬ್ಬಿಡುತ್ತಿತ್ತು.ಹಾಡಿನ ಮುಂದಿನ ಸಾಲುಗಳನ್ನು ಏನೆಂದು ಬರೆಯಲಿ? ನನಗೆ ಅರ್ಥವಾದದ್ದಿಷ್ಟು.

ಸೇಜ ಸೇಜ ಬಾರೆ
ಮವ್ವೆ ಮವ್ವೆ ಬಾರೆ
ಅಲೆ ಕೆಂಚಿ ತಾರೆ ಅರದೋ..

ಬಾರೆ ಎನ್ನುವ ಪದಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವ ಪದಗಳು ಅರ್ಥವಾಗಿಲ್ಲ. ಬಲ್ಲವರು ವಿವರಿಸಬೇಕು.
ಎಫ಼್.ಎಮ್. ಆರಿಸಲು ಕಾರಿನ ಚಾಲಕನಿಗೆ ವಿನಂತಿಸಿಕೊಂಡೆ. ಆದರೆ ಕೆಲವರು ಇಂತಹ ಸಂಗೀತವನ್ನು ಆಸ್ವಾದಿಸಿ ಆನಂದಿಸುತ್ತಿದ್ದುದರಿಂದ ನನ್ನ ವಿನಂತಿ ಈಡೇರಲಿಲ್ಲ.

ಆರ್. ಜೆ. ಮತ್ತೆ ತನ್ನ ಆಂಗ್ಲ ಮಿಶ್ರಿತ ಸುಸಂಸ್ಕೃತ ಕನ್ನಡದಲ್ಲಿ ಚಮ್ಕಾಯಿಸಿ, ಚಿಂದಿ ಉಡಾಯಿಸಿ ಎಂದು ಅರಚಿದ.
ಪಾರೋ ಪಾರೋ ಅಂತ ಇನ್ನೊಂದು ಹಾಡು ಶುರುವಾಯಿತು.ಅದರ ಸಾಲುಗಳು ಹೀಗಿದ್ದವು.
ಲೇಟಾಗಿ ಬರುವುದಿಲ್ಲ..
ಸೋರಿ ಕೇಳುವುದಿಲ್ಲ..
ಆಸಿಡ್ ಹಾಕುವುದಿಲ್ಲ.

ಇನ್ನೇನೋ ಬರೆಯಬೇಕಾದ ನೆನಪಿಸಿ ಇಟ್ಟುಕೊಳ್ಳಬೇಕಾದ ಸಾಹಿತ್ಯವೇನೂ ಅಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಸಂದಿರುವ ಕನ್ನಡ ಭಾಷೆ ಇದೇನಾ ಎನ್ನುವ ಸಂದೇಹ ಒಂದು ಕ್ಷಣ ಮನಸ್ಸಿನಲ್ಲಿ ಸುಳಿಯಿತು.
ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆತಂಕದ ವಿಚಾರವೆಂದರೆ ಈಗಿನ ಚಿತ್ರ ಸಂಗೀತದ ಹಾಡುಗಳಲ್ಲಿ ಅರ್ಥವಿಲ್ಲ. ಅರ್ಥವಿದ್ದರೂ ಆಳವಿಲ್ಲ. ಆದರೂ ಇಂತಹ ಹಾಡುಗಳೇ ಬಹುಜನರಿಗೆ ಮೆಚ್ಚುಗೆಯಾಗುತ್ತಿವೆ.
ಹೊಡಿ ಮಗ, ಹಳೆ ಪಾತ್ರೆ,ಚಿತ್ರಾನ್ನ, ಜಿಂಕೆ ಮರಿ ಮುಂತಾದ ಕಳಪೆ ಗುಣಮಟ್ಟದ ಹಾಡುಗಳನ್ನು ನಾವಿಂದು ತುಂಬು ಹೃದಯದಿಂದ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಮಕ್ಕಳಲ್ಲೂ ಈ ನಾಲ್ಕೂ ಹಾಡುಗಳು ಅತ್ಯಂತ ಪ್ರಿಯವಾಗಿವೆ ಎಂಬುದು ಖೇದದ ವಿಷಯ. ಈ ಅವನತಿಗೆ ಚಿಂತನೆಯಾಗಬೇಕಾಗಿದೆ.

ಇದರ ಸಂಭಾವ್ಯ ಕಾರಣಗಳನ್ನು ಅವಲೋಕಿಸಿದಾಗ ಕೆಳಗೆ ಸೂಚಿಸಿದ ಕೆಲವು ಅಂಶಗಳು ಸ್ವಷ್ಟವಾಗುತ್ತವೆ.
೧) ಕನ್ನಡ ಭಾಷೆಯ ಪಾಶ್ಚಾತ್ಯೀಕರಣ :ಇಂದು ಕನ್ನಡ ಹಾಡುಗಳನ್ನು ಆಂಗ್ಲ ಭಾಷೆಯ ಶೈಲಿಯಲ್ಲಿ ಹಾಡುವುದು ರೂಢಿಯಾಗುತ್ತಿದೆ.ಹೀಗೆ ಆಂಗ್ಲದನಿಯ ಕನ್ನಡ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಉದ್ವೇಗವನ್ನು ಮೂಡಿಸುತ್ತದೆ.
ಉದಾ: ’ನಮ್ದೇ ಈ ಲೋಕ’ ಎಂಬ ಹಾಡಿನ ವಿಚಿತ್ರವಾದ ಆಂಗ್ಲ ರೀತಿಯ ಉಚ್ಚಾರಣೆ ಮನಸ್ಸಿನಲ್ಲಿ ರೋಷ ಉಕ್ಕಿಸುತ್ತದೆ.

೨)ಹಾಡುಬರೆಯುವವರನ್ನು ಕಾಡುವ ಕನ್ನಡ ಶಬ್ದಗಳ ಕೊರತೆ:ಅನ್ಯ ಭಾಷೆಯ ಶಬ್ದಗಳ ಬಾಹುಳ್ಯ ಇತ್ತೀಚಿನ ಚಲನ ಚಿತ್ರ ಹಾಡುಗಳಲ್ಲಿ ಗೋಚರಿಸುತ್ತಿದೆ.ವಿಚಿತ್ರ ಕನ್ನಡ ಪದಗಳ ಬಳಕೆಯೂ ಹೆಚ್ಚುತ್ತಿದೆ. ಕಿಚಾಯಿಸು, ಚಮಕಾಯಿಸು ಮುಂತಾದ ಅಧಿಕವಾಗಿ ಪ್ರಯೋಗಗೊಂಡು ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಗಲಾಟೆಯ ವಾತಾವರಣವನ್ನು ಸೃಷ್ಟಿಸುತ್ತವೆ.
ಮಿಶ್ರ ಭಾಷಾ ಹಾಡಿಗೆ ಒಂದು ಉದಾಹರಣೆ :
ಸ್ಟ್ರಾಬೆರಿ ಕೆನ್ನೆಯವಳೇ
ಕ್ಯಾಡ್ಬರೀ ಹುಡುಗನೇ...
ಇತ್ತೀಚಿನ ಸಂದರ್ಶನವೊಂದರಲ್ಲಿ ಜಯಂತ ಕಾಯ್ಕಿಣಿಯವರು ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ.."ಅಸು ನೀಗಿತು" ಎಂಬ ಪದದ ಬಳಕೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದು ವಿವರಿಸಿದರು. ’ಅಸು ನೀಗಿತು’ ಎಂಬ ಸರಳ ಕನ್ನಡ ಪದವು ಇತ್ತೀಚೆಗಿನ ಜನಾಂಗದಲ್ಲಿ ಆಶ್ಚರ್ಯವನ್ನು ಉಂಟು ಮಾಡಬೇಕಾದರೆ ಕನ್ನಡದ ತಿಳುವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳದ ಅಂಶವು ಬೆಳಕಿಗೆ ಬರುತ್ತದೆ.

೩)ಕಥಾವಸ್ತುವಿನ ಕೊರತೆ :ಇತ್ತೀಚೆಗೆ ಹೊರಬರುತ್ತಿರುವ ೯೯% ಕನ್ನಡ ಚಲನಚಿತ್ರಗಳು ಕುಟುಂಬ ಸಮೇತರಾಗಿ ನೋಡಲು ಅರ್ಹವಲ್ಲ.ಕಾರಣಗಳು ಹಲವಾರು.
೧)ಮುಖ್ಯವಾಗಿ ಚಿತ್ರದ ಹೆಸರು ಲೂಸ್ ಮಾದ , ಮೆಂಟಲ್ ಮಂಜ, ಸ್ಲಮ್ ಬಾಲ ಮುಂತಾದ ವಿಚಿತ್ರ ಹೆಸರುಗಳು
೨)ಮುಜುಗರವಾಗುವ ದೃಶ್ಯಗಳ ಭರಾಟೆ.
೩)ಅಸಹಜತೆ :ಸನ್ನಿವೇಶಗಳ ಅಸಹಜತೆ ,ಪಾತ್ರಗಳ ಅಸಹಜತೆ ,ಕಥಾ ಹಂದರದ ಅಸಹಜತೆ,ನಟನೆಯ ಅಸಹಜತೆ
ಎರಡು ಪ್ರಮುಖ ವಿಷಯಗಳು ಇಂದಿನ ಕನ್ನಡ ಚಲನ ಚಿತ್ರಗಳ ಮೂಲ ಕಥಾವಸ್ತುವಾಗಿ ವಿಜ್ರಂಭಿಸುತ್ತವೆ.
೧)ರಾಜಕೀಯ ಪುಢಾರಿಗಳ ದೌರ್ಜನ್ಯದ ವಿರುದ್ಧ ನಾಯಕನ ಬಂಡಾಯ
೨)ಪರಿಸ್ಥಿತಿಯಿಂದ ಬೇಸತ್ತ ಹತಾಶೆಗೊಳಗಾದ ನಾಯಕ ತಪ್ಪು ದಾರಿ ಹಿಡಿದು ರೌಡಿಯಾಗುವ ಕಥೆ.
ಈ ಎರಡು ಕಥಾ ಸುರುಳಿಗಳಲ್ಲಿ ಅವಕಾಶವಿರುವುದು ಹೊಡಿಮಗ , ಬಾರೆ ಮವ್ವೆ ಬಾರೆ ಮುಂತಾದ ಹಾಡುಗಳಿಗೇ ವಿನಹ ಮಾನಸ ಸರೋವರ,’ಸಾಗಲಿ ತೇಲು ತರಂಗದೊಳು..’ ದಂತಹ ಹಾಡುಗಳಿಗಲ್ಲ ಎಂಬುದು ಹಲವು ಚಿತ್ರರಂಗದವರ ಅಂಬೋಣ.ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ.
ಮೇಲೆ ವ್ಯಕ್ತಪಡಿಸಿರುವ ಅಭಿಪ್ರಾಯವೇ ಇವತ್ತಿನ ಕಳಪೆ ಸಂಗೀತ,ಸಾಹಿತ್ಯದ ಬುನಾದಿ.

೪)ಚಿತ್ರರಂಗವು ಕಲಾಮಾಧ್ಯಮದ ಬದಲಾಗಿ ಮಾರುಕಟ್ಟೆಯ ಸರಕಾಗಿ ಮಾರ್ಪಾಡಾಗಿದೆ.ಕಥಾ ವಸ್ತುವಿನ ಕೊರತೆ ಕನ್ನಡ ಸಾಹಿತ್ಯಲೋಕದಲ್ಲಂತೂ ಎಳ್ಳಷ್ಟೂ ಇಲ್ಲ .ಇತ್ತೀಚೆಗಿನ ಯುವ ಲೇಖಕರೂ,ಕವಿಗಳೂ ಬರೆದಿರುವ ಕಥೆ ಮತ್ತು ಕವನ ಸಂಕಲನಗಳೇ ಇವಕ್ಕೆ ಸಾಕ್ಷಿ. ಆದರೆ ಚಿತ್ರರಂಗವು ಅವುಗಳ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಮೂಲ ಕಥಾ ವಸ್ತುವಿನ ಚಿಂತನೆ ನಡೆಸುವ ಸೈರಣೆ ಚಿತ್ರರಂಗದ ಹೆಚ್ಚಿನವರಲ್ಲಿ ಉಳಿದಿಲ್ಲ.

ಯಾವತ್ತಿನ ವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ ,ಯಾವತ್ತಿನ ವರೆಗೆ ಕನ್ನಡ ಚಲನ ಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ,ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.
ಜೈ ಕನ್ನಡಾಂಬೆ!!

Thursday, May 28, 2009

ಜಿ ಟಾಕ್ ಸ್ಟೇಟಸ್ ಮೆಸೇಜು

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ||
ಬೆಂಗಳೂರು ರಸ್ತೆಲೆಲ್ಲಾ ದೊಡ್ಡ್ ದೊಡ್ಡ್ ಗುಂಡಿ ||
ಟ್ರಾಫಿಕ್ ಜಾಮ್ ನಲ್ಲಿ ನರಳಾಡ್ತಿದೆ ಎಲ್ಲಾರ್ ಬಂಡಿ ||

--------ಅರ್ಚನಾ

Tuesday, May 19, 2009

ನೀವೂ ಮೋಸ ಹೋದೀರಿ ಎಚ್ಚರಿಕೆ!

ಈ ಶನಿವಾರ, ಬಹುದಿನದಿಂದ ಕೆಟ್ಟು ಹೋಗಿದ್ದ ನಮ್ಮ ಲ್ಯಾಪ್ ಟಾಪನ್ನು ಸರಿಪಡಿಸುವ ಮುಹೂರ್ತ ಬಂದೊದಗಿತ್ತು. ಅದನ್ನು ಸರಿಪಡಿಸಲೋಸುಗ ಜಯನಗರದ ಒಂದು ಅಂಗಡಿ ನುಗ್ಗಿದ್ದಾಯಿತು. ಕೆಲವು ಪರೀಕ್ಷೆಗಳ ನಂತರ ಹಾರ್ಡ್ ಡಿಸ್ಕ್ ಬದಲಿಸಬೇಕೆಂಬ ಸೂಚನೆ ಗಟ್ಟಿಯಾಗತೊಡಗಿತು. ನಮಗೆ ಬೇಕಾದ ಹಾರ್ಡ್ ಡಿಸ್ಕ್ ಆ ಅಂಗಡಿಯಲ್ಲಿ ಇಲ್ಲದ ಕಾರಣ ಫೋನಾಯಿಸಿ, ಬೇರೊಂದು ಕಡೆಯಿಂದ ಅದನ್ನು ಅಂಗಡಿ ಮಾಲೀಕರು ತರಿಸಿದರು. ಹೊಚ್ಚ ಹೊಸ ಹಾರ್ಡ್ ಡಿಸ್ಕನ್ನು ನಮ್ಮ ಕಣ್ಣೆದುರಿಗೇ ಪಾಕೆಟ್ ನ ಸೀಲು ಒಡೆದು ತೆಗೆದು ತೋರಿಸಿ, ಜೋಡಿಸಿ, ಪರೀಕ್ಷಿಸಿ, ಎಲ್ಲವೂ ಸಮರ್ಪಕವಾಗಿದೆಯೆಂದು ಭಾವಿಸಿ, ಅಲ್ಲೇ ಆಪರೇಟಿಂಗ್ ಸಿಸ್ಟಮನ್ನು ಇನ್ ಸ್ಟಾಲ್ ಮಾಡಿ ನೋಡಿದೆವು. ಎಲ್ಲ ಓಕೆ.. ಚಿಂತೆ ಯಾಕೆ ಎಂದು ಭಾವಿಸಿ ಮನೆಗೆ ಬಂದೆವು. ಕಥೆ ಇಲ್ಲಿಗೇ ಮುಗಿಯಲಿಲ್ಲ. ಮುಗಿಯುತ್ತಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೂ ಇರಲಿಲ್ಲ.

ಮನೆಗೆ ಬಂದು ಸರಿಯಾದ ಲಾಪ್ ಟಾಪ್ ನಲ್ಲಿ ಮತ್ತೊಂದಷ್ಟು ಸಾಫ್ಟ್ ವೇರ್ ಗಳನ್ನು ಇನ್ ಸ್ಟಾಲ್ ಮಾಡುವ ಉತ್ಸಾಹದಲ್ಲಿ, ಮತ್ತೆ ಅದನ್ನು ಪರಿಶೀಲಿಸತೊಡಗಿದೆ. ಲಾಪ್ ಟಾಪ್ ನ ಡಿ ಡ್ರೈವ್ ಅನ್ನು ತೆರೆದು ನೋಡಿದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ಯಾಕೆ ಅಂತೀರಾ? ಯಾರೋ ಒಬ್ಬರ ಹಲವಾರು ಕಡತಗಳು ಅದರಲ್ಲಿದ್ದವು. ಹೊಸ ಹಾರ್ಡ್ ಡಿಸ್ಕ್ ಖಾಲಿಯಾಗಿರಬೇಕಷ್ಟೆ? ಈ ಥರದ ಕಡತಗಳು ಅದರಲ್ಲಿ ಮುಂಚಿನಿಂದಲೂ ಇದೆ ಅಂದ ಮೇಲೆ ಇದು ಹೊಸದಾಗಿರಲು ಹೇಗೆ ಸಾಧ್ಯ? ಮತ್ತೊಮ್ಮೆ ಆ ಕಂಪ್ಯೂಟರ್ ಅಂಗಡಿಗೆ ಫೋನಾಯಿಸಿ, ಬದಲಿಸಿದ ಹಾರ್ಡ್ ಡಿಸ್ಕ್ ಹೊಸತೇ ಅಲ್ಲವೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿದೆವು. "ಅದು ಹೊಚ್ಚ ಹೊಸದೇ" ಎಂಬ ಉತ್ತರ ದೊರಕಿತು.

ಡಿ ಡ್ರೈವ್ ನ ಕಡತಗಳಲ್ಲಿ ಏನೇನಿದೆ ಎನ್ನುತ್ತೀರಾ? 1. ಬ್ಯಾಂಕ್ ಸ್ಟೇಟ್ ಮೆಂಟ್ ಗಳು 2. ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು 3. ಷೇರು ವ್ಯವಹಾರದ ಅಂಕಿ ಅಂಶ 4. ಗೃಹಸಾಲದ ವಿವರಗಳು 5. ಕುಟುಂಬದ ಛಾಯಾಚಿತ್ರಗಳು 6. ಆಫೀಸಿನ ವಿವರಗಳು.

ಇತ್ತೀಚೆಗೆ 'Identity theft' , ಅಂತರ್ಜಾಲದಲ್ಲಿ ಆಗುವ ಮೋಸ ಹೆಚ್ಚಾಗಿವೆಯಷ್ಟೆ. ನನ್ನೆದುರು ಒಂದು ಪ್ರತ್ಯಕ್ಷ ನಿದರ್ಶನವಿತ್ತು.

ಆ ಕಡತಗಳಲ್ಲಿ ಆ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ಪಡೆದು ಅವರಿಗೆ ಫೋನಾಯಿಸಿ, ಎಲ್ಲ ವಿಷಯಗಳನ್ನು ತಿಳಿಸಿ, ಅವರ ಅಂತರ್ಜಾಲದ ಪಾಸ್ ವರ್ಡ್ಗಳನ್ನು ತಕ್ಷಣವೇ ಬದಲಾಯಿಸಲು ಆಗ್ರಹಿಸಿದೆವು. ಈ ವಿಷಯ ತಿಳಿದು ಅವರಿಗೂ ಗಾಬರಿಯಾಯಿತೆಂದು ಹೊಸದಾಗಿ ಹೇಳಬೇಕೆ?

ಇಲ್ಲಿ ಇಬ್ಬರಿಗೆ ಮೋಸವಾಗಿದೆ. 1. ಹೊಸ ಹಾರ್ಡ್ ಡಿಸ್ಕ್ ನ ಬೆಲೆ ತೆತ್ತು ಹಳೆಯದನ್ನು ಪಡೆದ ನನಗೆ 2. ಈ ಪರಿಯ ವೈಯಕ್ತಿಕ ದಾಖಲೆಗಳು ಯಾರದಾಗಿದ್ದವೋ ಅವರಿಗೆ. ಹಾಗೆ ನೋಡಹೋದರೆ ಮೊದಲನೆಯದ್ದಕ್ಕಿಂತ ಎರಡನೆಯದು ಅತ್ಯಂತ ಗಂಭೀರ ವಿಷಯ. ಎಲ್ಲಾ ತರಹದ ವಿಷಯಗಳೂ ಒಂದು ಚಿಕ್ಕ ಡಿಸ್ಕ್ ನಲ್ಲಿ ಅಡಕವಾಗಿಸಬಹುದಾದ ಈ ಕಾಲದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಕಂಪ್ಯೂಟರ್ ನಲ್ಲಿ ತಕ್ಕಮಟ್ಟಿನ ಸಾಕ್ಷರರಾಗಿದ್ದರೂ ಮೋಸ ಹೋಗುವ ಭಯ ಬೆಂಗಳೂರಿನಲ್ಲಿ ಇಲ್ಲದಿಲ್ಲ. ಈ ಥರದ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಜನರಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸುವುದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ವೈಯಕ್ತಿಕ ವಿವರಗಳನ್ನು ಒಂದೆಡೆ ಕಲೆ ಹಾಕಿದಾಗ ಅದಕ್ಕೆ ತಕ್ಕ ಭದ್ರತೆಯನ್ನು ಕಲ್ಪಿಸುವುದು ಇವತ್ತಿನ ಅಗತ್ಯ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದರಲ್ಲಿ ತುಂಬಾ ಸಮಯ ಹಿಡಿಯುವುದಿಲ್ಲ!
ದಟ್ಸ್ ಕನ್ನಡದಲ್ಲಿ