Pages

Saturday, November 10, 2012

Saturday, September 8, 2012

ಬಟಾಣಿ ಬಾದಾಮಿ ಪಲ್ಯ ಬೇಕಾಗುವ  ಸಾಮಗ್ರಿಗಳು

ಹಸಿ ಬಟಾಣಿ : ೧ ಲೋಟ
ಬಾದಾಮಿ : ೧ ಲೋಟ
ಹಾಲು :ಅರ್ಧ ಲೋಟ
ನೀರುಳ್ಳಿ: ೧
ಹಸಿಮೆಣಸು :೩
ದಾಲ್ಚಿನ್ನಿ ಎಲೆ :ಸಣ್ಣ ಚೂರು
ಉಪ್ಪು:ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಸ್ವಲ್ಪ
ತುಪ್ಪ  : ೨ ಚಮಚ
ಜೀರಿಗೆ : ೧ ಚಮಚ

ವಿಧಾನ : 

೧.ಬಾದಾಮಿಯನ್ನು ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಸಿಪ್ಪೆ ತೆಗೆಯಿರಿ.
೨. ಸಿಪ್ಪೆ ತೆಗೆದ ಬಾದಾಮಿಯನ್ನು ಸ್ವಲ್ಪ ಹಾಲಿನ ಜತೆ ನುಣ್ಣಗೆ ರುಬ್ಬಿ.
೩. ಬಾಣಲೆಯಲ್ಲಿ ತುಪ್ಪ  ಬಿಸಿ ಮಾಡಿ, ಅದಕ್ಕೆ ಜೀರಿಗೆ, ಹಸಿ ಮೆಣಸು,ದಾಲ್ಚಿನ್ನಿ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
೪.ಇದಕ್ಕೆ ಹೆಚ್ಚಿದ ನೀರುಳ್ಳಿಯನ್ನು ಹಾಕಿ ಕಲಕಿ. ನೀರುಳ್ಳಿ ಹೊಂಬಣ್ಣ ಬರುವ ತನಕ ಕೈಯಾಡಿಸಿ.
೫.ಇದಕ್ಕೆ  ಹಸಿ ಬಟಾಣಿ ಸೇರಿಸಿ,ಸಣ್ಣ ಉರಿಯಲ್ಲಿ ಬೇಯಿಸಿ. ಉಪ್ಪು ಚಿಮುಕಿಸಿ.
೬.ಈಗ ರುಬ್ಬಿದ ಬಾದಾಮಿ ಮಿಶ್ರಣವನ್ನು ಇದಕ್ಕೆ ಸೇರಿಸಿ,ಚೆನ್ನಾಗಿ  ಮಂದ ಉರಿಯಲ್ಲಿ ಬೇಯಿಸಿ.
೭.ಮಿಶ್ರಣವು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ,ಒಲೆ ಆರಿಸಿ.
೮.ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿ.

ಚಪಾತಿಯ ಜತೆ ತಿನ್ನಲು ಇದು ಬಹಳ ರುಚಿ.
ವಿ.ಸೂ. : ಹಸಿ ಬಟಾಣಿಯ ಬದಲಿಗೆ ಒಣ ಬಟಾಣಿಯನ್ನು ನೀರಿನಲ್ಲಿ ೬-೭ ಗಂಟೆಗಳ ಕಾಲ ನೆನೆಸಿ, ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ ಬಳಸಬಹುದು.

 ಬೋಧಿವೃಕ್ಷದಲ್ಲಿ :

Thursday, May 10, 2012


ಸಮಾಜ ಸುಧಾರಣೆಗೆ ನೆರವಾದೀತೇ ಸತ್ಯಮೇವ ಜಯತೇ?

 


ಟಿ.ವಿ.ಯ ಸ್ವಿಚ್ಚು ಒತ್ತಿದೊಡನೆ ಸಾಕು ಪುಂಖಾನುಪುಂಖವಾಗಿ ಅತ್ತೆ - ಸೊಸೆ ಜಗಳದ ಸಾವಿರದ ಎಂಟನೆಯ ಕಂತು ಪ್ರಸಾರವಾಗುತ್ತಿರುತ್ತದೆ. ಸಾಸಿವೆ ಕಾಳಿನಷ್ಟು ಮಹತ್ವದ ಸುದ್ದಿ ಬೃಹದಾಕಾರವಾಗಿ ಹಿಗ್ಗಿ ಅಂತಾರಾಷ್ಟ್ರೀಯ ಮಹತ್ವದ್ದಾಗಿಬಿಡುತ್ತದೆ. ರಿಯಾಲಿಟಿ ಶೋಗಳಂತೂ ದುಃಖ ದಾರಿದ್ರ್ಯವನ್ನೇ ಹೈಲೈಟ್ ಮಾಡಿ, ಸ್ಪರ್ಧಾಳುಗಳು ಅಳುವ; ಜಗಳವಾಡುವ ಸಂಗತಿಗಳಿಗೇ ಒತ್ತು ಕೊಡುತ್ತವೆ. ಇಲ್ಲವೇ ಮನೆಯ ಅತ್ಯಂತ ಖಾಸಗಿ ಸಂಗತಿಗಳನ್ನು ಜಗಜ್ಹಾಹೀರು ಮಾಡುವಲ್ಲಿ ಸಫಲವಾಗುತ್ತವೆ. ಇಂತಹ ಸಮಯದಲ್ಲಿ ನಮಗೆ ಬೆಳಕು ತೋರುವ, ಸದಭಿರುಚಿಯ ಮತ್ತು ಉತ್ತಮ ಸಂದೇಶ ನೀಡುವ ಕಾರ್ಯಕ್ರಮಗಳು ಬೇಕು ಎಂದೆನಿಸಲು ಶುರುವಾಗುವ ಹೊತ್ತಿಗೆ 'ಸತ್ಯಮೇವ ಜಯತೇ'ಮೂಡಿಬರುತ್ತಿದೆ.

ರಾಷ್ಟ್ರದ ವಿವಿಧ ಭಾಷೆಗಳಲ್ಲಿ , ಖಾಸಗಿ ಹಾಗೂ ದೂರದರ್ಶನ ಚಾನೆಲ್‌ಗಳಲ್ಲಿ ಏಕ ಕಾಲಕ್ಕೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಖ್ಯಾತ ನಟ ಆಮೀರ್ ಖಾನ್ ಕಲ್ಪನೆಯ ಕೂಸು. ಸಾಮಾಜಿಕ ಸಮಸ್ಯೆಯೊಂದರ ಬೆನ್ನು ಹತ್ತಿ,ಆ ಸಮಸ್ಯೆಯ ಹಲವು ಆಯಾಮಗಳನ್ನು ತೆರೆದಿಡುವ ಪ್ರಯತ್ನವನ್ನು ಈ ಕಾರ್ಯಕ್ರಮ ಮಾಡಿದೆ. ಮೊದಲ ಕಂತಿನಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಚಾರದತ್ತ ಬೆಳಕು ಹರಿಸಿದ್ದಾರೆ. ಈ ಸಮಸ್ಯೆಗೆ ಬಲಿಯಾದವರ, ಈ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿರುವ ಮಹಿಳೆಯರ ಸಂದರ್ಶನವಂತೂ ಕಟು ವಾಸ್ತವತೆಗೆ ಕನ್ನಡಿ ಹಿಡಿದಂತಿದೆ. ಇಲ್ಲಿ ಅವರು ಖ್ಯಾತ ವೈದ್ಯರು, ವಕೀಲರು, ಸಮಾಜ ಸೇವಕರು, ಪತ್ರಕರ್ತರು ಹಾಗೂ ಜನಸಾಮಾನ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಇದು ಅವಿದ್ಯಾವಂತರಲ್ಲಿ, ಹಳ್ಳಿಯವರಲ್ಲಿ ಮಾತ್ರ ಇರುವುದೆಂಬ ಜನರ ಕಲ್ಪನೆಗೆ ವಿರೋಧವಾಗಿ , ಸಮಾಜದ ಎಲ್ಲ ಸ್ತರಗಳಲ್ಲೂ ಇದು ಯಾವ ಪರಿಯಾಗಿ ಹಾಸುಹೊಕ್ಕಾಗಿದೆ ಎಂಬ ವಿಚಾರ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಪ್ರಾಣವನ್ನು ರಕ್ಷಿಸಬೇಕಾದ ವೈದ್ಯರೇ ಇದನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಒಂದು ಸಮಸ್ಯೆಯ ಬಗೆಗೆ, ಅದರ ಪರಿಣಾಮಗಳು ಮತ್ತು ಅದರಿಂದ ಹೊರ ಬರುವ ಬಗೆಗೆ, ಆ ಸಮಸ್ಯೆಯನ್ನು ಎದುರಿಸುವವರ ಬಗೆಗೆ ಆಮೀರ್ ಖಾನ್ ಮತ್ತು ತಂಡ ಸಮಗ್ರವಾಗಿ ಅಧ್ಯಯನ ನಡೆಸಿದೆ. ಅವರು ನೀಡುವ ಅಂಕಿ ಅಂಶಗಳು ನಮ್ಮಲ್ಲಿ ಭೀತಿ ಹುಟ್ಟಿಸುವ ಹೊತ್ತಿಗೆ, ಅವರು ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿಸಿ, ಅದರಲ್ಲಿ ಯಶಸ್ವಿಯಾದ ಊರಿನ ಕಥೆಯನ್ನೂ ಹೇಳುತ್ತಾರೆ. ಸಕಾರಾತ್ಮಕ ಚಿಂತನೆಗೆ ಅನುವು ಮಾಡಿಕೊಡುತ್ತಾರೆ. ಅವರೇ ಅನ್ನುವಂತೆ ಒಂದು ಕಾರ್ಯಕ್ರಮ ಮಾಡಿದ ಕೂಡಲೇ ಸಮಸ್ಯೆ ಪರಿಹಾರವಾಯಿತೆಂದು ಅರ್ಥವಲ್ಲ. ನಮ್ಮ ನಿಮ್ಮೆಲ್ಲರ ದೃಷ್ಟಿಕೋನ ಬದಲಾದರೆ ಮಾತ್ರ ಇದು ಸಾಧ್ಯ ಎನ್ನುವ ಸಂದೇಶವನ್ನು ನೀಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ನಮಗೆ ಇಂತಹ ಒಂದು ಕಾರ್ಯಕ್ರಮದ ಅವಶ್ಯಕತೆ ಬಹಳವಿತ್ತು. ಆಮೀರ್ ಖಾನ್ ಇದನ್ನು ಪೂರೈಸಿದ್ದಾರೆ.

ಯಾವುದೇ ಸಿನಿಮಾ ಆಗಲೀ, ಧಾರಾವಾಹಿಯೇ ಆಗಲೀ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಸಂಗತಿಗಳ ಬಗ್ಗೆ ಮಾತನಾಡತೊಡಗಿದಾಗ ನಾವು ಅವುಗಳ ಜತೆಗೆ ಕೂಡಲೇ ಸ್ಪಂದಿಸತೊಡಗುತ್ತೇವೆ. ಒಂದೊಮ್ಮೆ ನಮ್ಮ ಜೀವನದಲ್ಲಿ ನಾವು 'ಅಸಾಧ್ಯ' ಎನ್ನುವ ಸಂಗತಿಗಳನ್ನು ಸಿನಿಮಾದ ನಾಯಕ ಮಾಡಿ ತೋರಿಸಿದಾಗ ನಾವು ಭ್ರಾಮಕ ಲೋಕಕ್ಕೆ ತೆರೆದುಕೊಳ್ಳುತ್ತೇವೆ. ಆಮೀರ್ ಖಾನ್‌ರ ಚಲನಚಿತ್ರಗಳು ನಮಗೆ ಮತ್ತಷ್ಟು ಇಷ್ಟವಾಗಲು ಕಾರಣ ಅವರು ಎತ್ತಿಕೊಳ್ಳುವ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಭಿನ್ನ ಚಿಂತನೆ. ಅವರ 'ತಾರೆ ಜಮೀನ್ ಪರ' ಬಂದಾಗ ನಾವು ನಮ್ಮ ನಡುವೆಯೇ ಇರುವ 'ವಿಶೇಷ' ಮಕ್ಕಳ ಬಗೆಗೆ ಯೋಚಿಸತೊಡಗಿ, ಆ ಸಿನಿಮಾವನ್ನು ಮತ್ತಷ್ಟು ಆಪ್ತವಾಗಿಸಿಕೊಂಡೆವು. ಅಂತೆಯೇ ಆತನ ಮುಂದಿನ ಚಿತ್ರ 'ತ್ರೀ ಈಡಿಯೆಟ್ಸ್' ಇಂದಿನ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಯಿತು. ಅವರ 'ಸತ್ಯಮೇವ ಜಯತೆ' ಕಾರ್ಯಕ್ರಮಕ್ಕೆ, ಡಬ್ಬಿಂಗ್ ಕುರಿತಾದ ಎಷ್ಟೇ ಅಪಸ್ವರಗಳು ಎದ್ದರೂ ನಾವು ಆ ಕಾರ್ಯಕ್ರಮವನ್ನು ಬಹಳಷ್ಟು ಖುಷಿಯಿಂದಲೇ ಸ್ವೀಕರಿಸಿದ್ದೇವೆ.

ಆದರೆ, ಒಂದು ಮಾತು. ಯಾವುದೇ ಟಿ.ವಿ. ವಾಹಿನಿಯ ಮುಖ್ಯ ಉದ್ದೇಶ ಟಿ.ಆರ್.ಪಿ. ಹೆಚ್ಚಿಸುವುದು ಮತ್ತು ತನ್ಮೂಲಕ ಹೆಚ್ಚು ಲಾಭ ಗಳಿಸುವುದು. ಇಂತಹುದರಲ್ಲಿ ಕಡಿಮೆ ಶ್ರಮದಲ್ಲಿ ಹೆಚ್ಚು ಹಣ ಗಳಿಸುವ ರಸಪ್ರಶ್ನೆಯಂತಹ ರಿಯಾಲಿಟಿ ಶೋಗಳು ಅಥವಾ ಜನರ ಖಾಸಗಿ ವಿಚಾರಗಳನ್ನು ಮತ್ತಷ್ಟು ಹಿರಿದಾಗಿಸಿ, ಜಗಜ್ಜಾಹೀರು ಮಾಡುವಂಥ ರಿಯಾಲಿಟಿ ಶೋಗಳು ಬರುತ್ತಿರುವ ಕಾಲಕ್ಕೆ 'ಸತ್ಯಮೇವ ಜಯತೆ'ಯ ನಿಜವಾದ ಉದ್ದೇಶ ಏನು ಎಂಬ ಪ್ರಶ್ನೆ ಏಳುತ್ತದೆ. ಮನೆಯೊಳಗೇ ಕುಳಿತು ಅಥವಾ ಕುಟುಂಬದ ಜತೆಯೇ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಾದ ವಿಚಾರಗಳನ್ನು ಟಿ.ವಿ. ವಾಹಿನಿಯ ಮೂಲಕ ಜಗತ್ತಿಗೆ ಬಿತ್ತರಿಸಿ, ಇರುವ ಅಸಮಾಧಾನಗಳನ್ನು, ಮನಸ್ಸಿನ ಗೋಜಲುಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆಯೇ? ಮೇಲ್ನೋಟಕ್ಕೆ ಇಂತಹ ಶೋಗಳು ಸಮಾಜಮುಖಿ ಅನಿಸಿದರೂ ಇವು ಕುಟುಂಬದ ಖಾಸಗಿತನವನ್ನು ಬಯಲುಗೊಳಿಸುತ್ತಿವೆಯೇ? ಭಾವನೆಗಳನ್ನು ಮಾರಾಟದ ಸರಕಾಗಿಸುವ ಹಿನ್ನೆಲೆಯಲ್ಲಿ ಇಂತಹ ದಿನನಿತ್ಯದ ಘಟನೆಗಳನ್ನು ಇನ್ನಷ್ಟು ಹಿಗ್ಗಿಸಿ ಅಪಾಯ ತಂದೊಡ್ಡುತ್ತಿದ್ದೇವೆಯೇ? ಇದು ಚಿಂತಿಸಬೇಕಾದ ವಿಚಾರ.

ಇಷ್ಟೆಲ್ಲ ಇದ್ದರೂ ನಮಗೆಲ್ಲ ಒಂದೇ ಆಸೆ. ಈ ಕಾರ್ಯಕ್ರಮದ ಸಂದೇಶ ಹುಸಿಯಾಗದಿರಲಿ. ಸಮಾಜದಲ್ಲಿ ನೊಂದವರಿಗೆ ದೀವಿಗೆಯಾಗಿ, ಅವರ ಬಾಳು ಹಸನಾಗಲಿ. 

(ಇವತ್ತಿನ ವಿಜಯಕರ್ನಾಟಕ ದಲ್ಲಿ ಪ್ರಕಟಿತ

Image courtesy : http://www.satyamevjayate.in/issue01/images/images/Watch-Full-Episode.jpg

Sunday, April 22, 2012

ಕಾಶಿ ಯಾತ್ರೆಕಾಶಿ ಯಾತ್ರೆ


ಕಾಶಿಯು ಭಾರತದ ಅತಿ ಪ್ರಾಚೀನವಾದ ಸಾಂಸ್ಕೃತಿಕ ನಗರಿ. ನಮ್ಮ ತೀರ್ಥಕ್ಷೇತ್ರಗಳ ಪೈಕಿ ಕಾಶಿಗಿರುವ ಪಾವಿತ್ರ್ಯ ಬೇರಾವುದಕ್ಕೂ ಇಲ್ಲ. ಗಂಗಾ ನದಿಯ ತಟದಲ್ಲಿರುವ ಈ ಊರು ಭಕ್ತಿ ಭಾವಗಳ ತೊಟ್ಟಿಲು. ಗಂಗೆಯು ಅನಾದಿ ಕಾಲದಿಂದಲೂ ಭಕ್ತರ ಪಾಪಗಳನ್ನು ತೊಳೆಯುತ್ತಾ ಬಂದಿದ್ದಾಳೆ. ಭಕ್ತರು, ಪಾಂಡಾಗಳು, ಪೂಜಾರಿಗಳು, ಸಾಧುಗಳು, ದೇಶ-ವಿದೇಶಗಳ ಪ್ರವಾಸಿಗಳು ಕಾಶಿಯ ಓಣಿಗಳ ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ.

ಸಾಮಾನ್ಯವಾಗಿ ಹಿಂದೂಗಳೆಲ್ಲ ಜೀವನದಲ್ಲಿ ಒಂದು ಸಲವಾದರೂ ಕಾಶಿಯನ್ನು ನೋಡಿದರೇನೇ ಜನ್ಮ ಸಾರ್ಥಕ. ಪಿತೃಗಳಿಗೆ ಮೋಕ್ಷ ಕರುಣಿಸುವುದಕ್ಕಂತೂ ಇದು ಹೇಳಿಮಾಡಿಸಿದಂಥ ಸ್ಥಳ. ಸಾವಿರಾರು ವರ್ಷಗಳ ಹಿಂದೆ ಶ್ರವಣಕುಮಾರನು ತನ್ನ ತಾಯ್ತಂದೆಗಳನ್ನು ಅಡ್ಡೆಯಲ್ಲಿ ಹೊತ್ತುಕೊಂಡು ಹೋಗಿ ಕಾಶಿ ಯಾತ್ರೆ ಮಾಡಿಸಿದ್ದು ಪುರಾಣ ಪ್ರಸಿದ್ಧ. ಮದುವೆಯ ಸಂದರ್ಭದಲ್ಲಿ ವರನು ಕಾಶಿಯಾತ್ರೆಗೆ ಹೋಗುತ್ತೇನೆ ಎನ್ನುವುದು, ಅವನ ಮಾವನು ಆತನನ್ನು ತಡೆದು, 'ಅಯ್ಯಯ್ಯೋ, ಸದ್ಯಕ್ಕೆ ಕಾಶಿಗೆ ಹೋಗಬೇಡ. ಮದುವೆ ಮಾಡಿಸ್ತೀನಿ' ಎನ್ನುವುದು ಹಿಂದೂಗಳಲ್ಲಿ ಒಂದು ವಿನೋದಮಯ ಸಂಪ್ರದಾಯ.

ಎಸ್.ಎಲ್. ಭೈರಪ್ಪನವರ ಐತಿಹಾಸಿಕ ಕಾದಂಬರಿಗಳಲ್ಲಿ ಒಂದಾದ 'ಸಾರ್ಥ'ವನ್ನು ಓದಿದ್ದೀರ? ಅದರಲ್ಲಿ ಎಂಟನೇ ಶತಮಾನದಲ್ಲಿ ಕಾಶಿಗೆ ಅಧ್ಯಯನ ಮಾಡುತ್ತೇನೆಂದು ಹೇಳಿ, ಸಾರ್ಥದ ಜತೆ ನಾಗಭಟ್ಟನೆಂಬ ಪಂಡಿತನು ಮಾಡುವ ಪಯಣದ ಚಿತ್ರಣಅತ್ಯದ್ಭುತವಾಗಿದೆ. ಅವರ ಇನ್ನೊಂದು ಐತಿಹಾಸಿಕ ಕಾದಂಬರಿ 'ಆವರಣ'ದಲ್ಲೂ ಕಾಶಿಯ ಇತಿಹಾಸ ಎಳೆಎಳೆಯಾಗಿದೆ.

***

ನಾನು ಕಾಶಿಗೆ ಹೋಗಿದ್ದು ಬೆಂಗಳೂರು-ವಾರಣಾಸಿ  ವಿಮಾನ
ಲ್ಲಿ. ಬೆಂಗಳೂರಿನಿಂದ ದೆಹಲಿಗೆ ಹೋಗಿ, ಅಲ್ಲಿಂದ ವಾರಣಾಸಿಗೆ ಇನ್ನೊಂದು ವಿಮಾನ ಹಿಡಿಯಬೇಕು.

ನಾವು ಮೊದಲ ದಿನ ಹೊರಟಿದ್ದು ಕಾಶಿ ವಿಶ್ವನಾಥನ ದರ್ಶನಕ್ಕೆ. ದೇಗುಲದ ಹೊರಗಿನ ಪುಟ್ಟ ಗಲ್ಲಿಯುದ್ದಕ್ಕೂ ಹೂವು, ಹಾಲಿನ ಪುಟ್ಟ ಕುಡಿಕೆಗಳ ಅಂಗಡಿಗಳ ಸಾಲು. ಮಂದಿರದ ಒಳಗೆ ಮೊಬೈಲ್, ಕ್ಯಾಮರಾ ನಿಷಿದ್ಧ. ಪ್ರತಿಯೊಬ್ಬರನ್ನೂ ತಪಾಸಣೆಗೊಳಪಡಿಸಿದ ಮೇಲೆಯೇ ದೇಗುಲದ ಒಳಗೆ ಹೋಗುವ ಅವಕಾಶ. ನಾವು ಬೆಳಗಿನ ಜಾವ ನಾಲ್ಕೂವರೆಗೆ ಹೋದ ಕಾರಣ ದರ್ಶನವು ಅತಿ ಸುಲಭವಾಗಿ ಆಯಿತು.

ಕಾಶಿ ವಿಶ್ವನಾಥನ ಯಾರಿಗೆ ಗೊತ್ತಿಲ್ಲ? ಆದರೆ ಅದೊಂದು ಬೃಹದ್ಭವ್ಯ ದೇವಾಲಯವೆಂದುಕೊಂಡು ಹೋಗಬೇಡಿ. ಅದೊಂದು ಪುಟ್ಟ ಮಂದಿರ. ಇದಕ್ಕೆ ನಾಲ್ಕು ಕಡೆಗೂ ಬಾಗಿಲುಗಳಿವೆ.ಇಲ್ಲಿ ನಾವು ಈಶ್ವರನ ಲಿಂಗವನ್ನು ಕೈಯಿಂದ ಸ್ಪರ್ಶಿಸಿ ಪೂಜಿಸಬಹುದು. ಹಾಲಿನ ಅಭಿಷೇಕ ಮಾಡಬಹುದು. ಪಕ್ಕದಲ್ಲೇ ಜ್ಞಾನವ್ಯಾಪಿ ಮಸೀದಿ ಇದೆ. ಹೆಚ್ಚಿನ ಕಡೆಗಳಲ್ಲೆಲ್ಲಾ ಪೋಲೀಸರ ಸರ್ಪಗಾವಲು ಇದ್ದೇಇದೆ.

ಬಳಿಕ ನಾವು ಹೊರಟದ್ದು ಸಂಕಟಮೋಚನ ಹನುಮಾನ್ ಮಂದಿರಕ್ಕೆ.ಅಲ್ಲಿ ಹನುಮಾನ್ ಚಾಲೀಸಾದ ಪುಸ್ತಕಗಳನ್ನು ಇಟ್ಟಿರುತ್ತಾರೆ. ನಾವು ಅದನ್ನು ಪಠಿಸಿ ವಾಪಸು ಅಲ್ಲಿಯೇ ಇಡಬಹುದು.ಉತ್ತರ ಭಾರತದಲ್ಲಿ ಹನುಮಂತನ ಆರಾಧನೆ ವಿಶೇಷ. ನಮ್ಮನ್ನು ಅಲ್ಲಿಗೆ ಕರೆದೊಯ್ದ ಟ್ಯಾಕ್ಸಿಯ ಚಾಲಕ ಕೆಲವು ವರ್ಷಗಳ ಹಿಂದೆ ಅಲ್ಲಿ ನಡೆದ ಬಾಂಬ್ ಸ್ಫೋಟದ ಪ್ರತ್ಯಕ್ಷದರ್ಶಿಯಾಗಿದ್ದ. ಅದರ ಕತೆಯನ್ನು ಕೇಳಿದಾಗ ಮನಸ್ಸು ವ್ಯಾಕುಲಗೊಂಡಿತು.

ಕಾಶಿಯಲ್ಲಿರುವ ಮಂದಿರಗಳು ಅಸಂಖ್ಯ. ನಾವು ಅಲ್ಲಿಗೆ ಹೋಗಿದ್ದು ನವರಾತ್ರಿಯ ಹೊತ್ತಿನಲ್ಲಿ. ಆಗ ಅಲ್ಲಿ ಸಂಜೆ 'ಗಂಗಾ ಆರತಿ'ಯ ಕಾರ್ಯಕ್ರಮವಿತ್ತು. ಐದು ಜನರು ವಿಶಿಷ್ಟವಾದ ಸಾಂಪ್ರದಾಯಿಕ ಉಡುಪು ಧರಿಸಿ, ಗಂಗಾ ಮಾತೆಗೆ ಆರತಿ, ನೃತ್ಯ, ಭಜನೆ ಮಾಡುತ್ತಾರೆ. ಸಂಜೆಯ ಮಬ್ಬು ಬೆಳಕಿನಲ್ಲಿ ಸುಮಾರು ಎರಡು ಅಡಿ ಎತ್ತರದ ದೀಪದ ಆರತಿ, ಧೂಪದ ಹೊಗೆ, ಬೆಳಕಿನ ನೃತ್ಯದ ಹಿನ್ನೆಲೆಯಲ್ಲಿ ಗಂಗಾ ಮಾತೆಯ ಭಜನೆ ಸುಶ್ರಾವ್ಯವಾಗಿರುತ್ತದೆ. ಇವೆಲ್ಲಕ್ಕೂ ಹಿನ್ನೆಲೆಯಾಗಿ ಗಂಭೀರವಾಗಿ ಹರಿಯುತ್ತಿರುತ್ತಾಳೆ ಗಂಗೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅದೊಂದು ಅಲೌಕಿಕ ಅನುಭವ.

ಕಾಶಿಯಲ್ಲಿ ಗಂಗಾ ನದಿಯ ಉದ್ದಕ್ಕೂ 70ಕ್ಕೂ ಹೆಚ್ಚು ಘಾಟ್‌ಗಳಿವೆ. ದಶಾಶ್ವಮೇಧ ಘಾಟ್, ಪ್ರಯಾಗ್ ಘಾಟ್, ಮಣಿಕರ್ಣಿಕಾ ಘಾಟ್ ಹೀಗೆ ಅವುಗಳ ಹೆಸರೇ ಒಂದೊಂದು ಪೌರಾಣಿಕತೆಯನ್ನು ಹೊತ್ತುಕೊಂಡಿವೆ. ಜನರ ಸ್ನಾನ, ಜಪ-ತಪ, ಧಾರ್ಮಿಕ ವಿಧಿವಿಧಾನಗಳೆಲ್ಲ ಜರುಗುವುದು ಇಲ್ಲೇ. ಇಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಬಿಡುವಿಲ್ಲದೆ ಶವ ಸಂಸ್ಕಾರ ನಡೆಯುತ್ತಿರುತ್ತದೆ. ಪ್ರಯಾಗ್ ಘಾಟ್‌ನಲ್ಲಿ ಮಿಂದರೆ ಗಂಗಾ-ಯುಮನಾ-ಸರಸ್ವತಿ ನದಿಗಳ ಸಂಗಮ ಸ್ಥಳವಾದ ಪ್ರಯಾಗದಲ್ಲೇ ಮಿಂದಷ್ಟು ಪುಣ್ಯವಂತೆ. ನಾರದ ಘಾಟ್ ನಲ್ಲಿ ಪತಿ-ಪತ್ನಿ ಒಟ್ಟಿಗೆ ಗಂಗಾ ಸ್ನಾನ ಮಾಡಿದರೆ ಅವರಿಬ್ಬರ ನಡುವೆ ಡಿಶುಂ ಡಿಶುಂ ಗ್ಯಾರಂಟಿಯಂತೆ! ಅಲ್ಲಿ ಒಂದೆರಡು ದೋಣಿಗಳನ್ನು ಬಿಟ್ಟರೆ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ದೋಣಿಯಲ್ಲಿ ಎಲ್ಲಾ ಘಾಟ್‌ಗಳಿಗೂ ಒಂದು ಸುತ್ತು ಹಾಕಿ ಬರಬಹುದು. ನಮ್ಮನ್ನು ಕರೆದೊಯ್ದ ಅಂಬಿಗ ನಮ್ಮ ಪಯಣದ ಉದ್ದಕ್ಕೂ ಗಂಗೆಯ ಬಗ್ಗೆ ಮಾತಾಡುತ್ತಿದ್ದ. ಇವರ ಜೀವನ ಗಂಗಾ ನದಿಯ ಜತೆ ಎಷ್ಟು ಮಿಳಿತವಾಗಿದೆಯೆಂದರೆ ಗಂಗೆಯೇ ಇವರ ಜೀವನವಾಗಿದೆ.

ಕಾಶಿಯು ಹಿಂದೂಗಳಿಗಷ್ಟೇ ಅಲ್ಲ ಬೌದ್ಧರಿಗೂ ಪವಿತ್ರ ಸ್ಥಳ. ಕಾಶಿಯಿಂದ 13 ಕಿ.ಮೀ. ದೂರದಲ್ಲಿರುವ ಸಾರನಾಥದಲ್ಲಿ ಧಮೇಕ ಸ್ತೂಪವಿದೆ. ಇದರ ಎತ್ತರ 128 ಅಡಿ , ವ್ಯಾಸ 93 ಅಡಿ. ಬೌದ್ಧ ವಿಹಾರಗಳ ಅವಶೇಷಗಳೂ ಇಲ್ಲಿ ಉತ್ಖನನದ ನಂತರ ಸಿಕ್ಕಿವೆ. ಗೌತಮ ಬುದ್ಧನು ಮೊದಲ ಬಾರಿಗೆ ಧರ್ಮೋಪದೇಶ ಮಾಡಿದ ಊರು ಇದೇ. ಇದು ಇಡಿಯಾಗಿ ಪುರಾತತ್ವ ಇಲಾಖೆಗೆ ಸೇರಿದ ಸ್ಥಳವಾಗಿದೆ. ಮೂಲಗಂಧ ಕುಟಿ ಎಂಬ ಬೌದ್ಧ ದೇವಾಲಯವೂ ಸಾರನಾಥದಲ್ಲಿದೆ. ಇಲ್ಲಿ ಸಾರನಾಥ ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ. ನಮ್ಮ ರಾಷ್ಟ್ರಚಿಹ್ನೆಯಾದ ಅಶೋಕ ಸ್ತಂಭದ ಮೂಲ ರೂಪ ಇಲ್ಲಿದೆ. ಪಕ್ಕದಲ್ಲೇ ಜೈನ ಮಂದಿರವಿದೆ. ಇದು ಅವರ 13ನೇ ತೀರ್ಥಂಕರನ ಊರು.

ಕಾಶಿಯಲ್ಲಿ ಹಾಲು, ಹಾಲಿನ ಉತ್ಪನ್ನಗಳು ಹೇರಳ. ಇಲ್ಲಿಯ ಮೊಸರಂತೂ ನಮ್ಮ ಕಡೆ ಸಿಗುವ ಬೆಣ್ಣೆಯಷ್ಟು ಗಟ್ಟಿ! 
Add caption


ಇಷ್ಟೆಲ್ಲ ದೊಡ್ಡ ಹೆಸರಿರುವ ಕಾಶಿಯ ರಸ್ತೆಗಳು ಮಾತ್ರ ಆ ವಿಶ್ವವಾಥನಿಗೇ ಪ್ರೀತಿ! ಕಾಶಿಯಲ್ಲಿ ಎಲ್ಲೇ ದೇವಸ್ಥಾನಕ್ಕೆ ಹೋದರೂ ಪಾಂಡಾಗಳು ನಮ್ಮ ಬೆನ್ನ ಹಿಂದೆಯೇ ಬರುತ್ತಿರುತ್ತಾರೆ.ಹಾಗಾಗಿ ನಾವು ಕೆಲವೊಮ್ಮೆ ನಮ್ಮ ಬೆನ್ನ ಹಿಂದೆ ಬರಬೇಡಿ ಎಂದು ಗದರಿಸಿಯೇ ಹೇಳಬೇಕಾಗುತ್ತದೆ! ಕಾಶಿ ಯಾತ್ರೆ ಮುಗಿಸಿಕೊಂಡು ಮರಳಿ ಬೆಂಗಳೂರಿಗೆ ಬಂದಾಗ ಮನಸ್ಸಲ್ಲೇನೋ ಒಂದು ರೀತಿಯ ಸಮ್ಮಿಶ್ರ ಭಾವನೆ. ಆಗ ಹಳೆಯ ಕಾಶಿ ಹೇಗಿದ್ದಿರಬಹುದು ಎಂದು ತಿಳಿಯಲು ಮತ್ತೊಮ್ಮೆ 'ಆವರಣ'ವನ್ನು ತಿರುವಿ ಹಾಕಿದೆ.

(ಇವತ್ತಿನ ವಿಜಯಕರ್ನಾಟಕ ದಲ್ಲಿ ಪ್ರಕಟಿತ )

Tuesday, February 21, 2012

ವರ್ಲಿ

ನನಗೆ ವರ್ಲಿ ಚಿತ್ರದ ಹುಚ್ಚು ಮತ್ತಷ್ಟು ಹೆಚ್ಚಾಗಿದೆ !! ಇಲ್ಲಿ ನೋಡಿ ನನ್ನ ಕೆಲವು ಪ್ರಯೋಗಗಳು!!


ನಮ್ಮ ಮನೆಯ ಗೋಡೆಯ ಮೇಲೆ ಗೀಚಿದ್ದು ಹೀಗೆ
Wednesday, February 8, 2012

ಪಂಜಾಬಿ ಅಡುಗೆ

ಪಂಜಾಬಿ ಅಡುಗೆ
------------------------------

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’೧.ಪಂಜಾಬಿ ಆಲೂ ಅಮ್ರಿತ ಸರಿ

ಬೇಕಾಗುವ ಸಾಮಗ್ರಿಗಳು

ಆಲೂ ಗೆಡ್ಡೆ : ೨೫೦ ಗ್ರಾಂ
ನೀರುಳ್ಳಿ : ೨
ಶು೦ಠಿ ಬೆಳ್ಳುಳ್ಳಿ ಪೇಸ್ಟ್ : 2 ಚಮಚ
ಓಮ ಕಾಳು : ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕಡ್ಲೆ ಹಿಟ್ಟು : ಅರ್ಧ ಲೋಟ
ಕೊತ್ತಂಬರಿ ಪುಡಿ : ೧ ಚಮಚ
ಕೆಂಪು ಮೆಣಸಿನ ಪುಡಿ  ೧ ಚಮಚ
ಗರಂ ಮಸಾಲ ಪುಡಿ  : ಅರ್ಧ ಚಮಚ
ಅರಸಿನ :ಚಿಟಿಕೆ
ಎಣ್ಣೆ : ಸ್ವಲ್ಪ
ಕೊತ್ತಂಬರಿ ಸೊಪ್ಪು : ಒಂದು ಹಿಡಿ

ವಿಧಾನ
೧.ಅಲೂಗೆದ್ದೆಯನ್ನು ಉದ್ದನೆಯ ತುಂಡುಗಳಾಗಿ ಹೆಚ್ಚಿಕೊಳ್ಳಿ
೨.ಕಡ್ಲೆಹಿಟ್ಟಿಗೆ   ಉಪ್ಪು  ,ಶು೦ಠಿ ಬೆಳ್ಳುಳ್ಳಿ ಪೇಸ್ಟ್,ಓಮ ಕಾಳು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ
೩. ಅಲೂ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ.
೪. ಒಂದು ಬಾಣಲೆಯಲ್ಲಿ  ಚಮಚ ಎಣ್ಣೆ ಹಾಕಿ ,ಬಿಸಿ ಮಾಡಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಇದರಲ್ಲಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಉಪ್ಪು, ಅರಸಿನ, ಕೆಂಪು ಮೆಣಸಿನ ಪುಡಿ,ಗರಂ ಮಸಾಲ ಪುಡಿ ಹಾಕಿ ಕಲಕಿ.
೫.ಇದರಲ್ಲಿ ಕರಿದು ಇಟ್ಟಿರುವ ಅಲೂಗೆದ್ದೆಯ ಚೂರುಗಳನ್ನು ಹಾಕಿ ಕಲಕಿ, ೩-೪ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
೬.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಒಲೆ ಆರಿಸಿ.
ಇದು ಚಪಾತಿ ,ಪರಾಠ  ಗಳ ಜತೆ ಬಹಳ ರುಚಿ.

೨.ಖೋಯ ಮಟರ್

ಬೇಕಾಗುವ ಸಾಮಗ್ರಿಗಳು
ಬಟಾಣಿ : ಒಂದು ಲೋಟ
ಖೋವ : ೫೦೦ ಗ್ರಾಂ
ಪುಡಿ ಮಾಡಿದೆ ಗೇರುಬೀಜ (ಗೋಡಂಬಿ )  : ೩ ಚಮಚ
ಕೆಂಪು ಮೆಣಸು : ೧
ಕೆಂಪು ಮೆಣಸಿನ ಪುಡಿ  ೧ ಚಮಚ
ದ್ರಾಕ್ಷಿ : ೨ ಚಮಚ
ಅರಸಿನ :ಚಿಟಿಕೆ
ಎಣ್ಣೆ : ಸ್ವಲ್ಪ
ಶು೦ಠಿ ಬೆಳ್ಳುಳ್ಳಿ ಪೇಸ್ಟ್ : ಅರ್ಧ  ಚಮಚ
ಹುರಿದ ಎಳ್ಳು : ಒಂದು ಚಮಚ
ಕೊತ್ತಂಬರಿ ಪುಡಿ : ೧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಒಂದು ಹಿಡಿ
ನೀರುಳ್ಳಿ ಪೇಸ್ಟ್ : ಅರ್ಧ ಲೋಟ
ಟೊಮೇಟೊ ರಸ : ಅರ್ಧ ಲೋಟ
(೨-೩  ಟೊಮೇಟೊಗಳನ್ನೂ ನೀರು ಹಾಕದೆ ರುಬ್ಬಿದರೆ ಸಾಕು )

ವಿಧಾನ :
  1. ಕ್ಹೊವ ವನ್ನು ಸ್ವಲ್ಪ ಹುರಿದು ಇಟ್ಟುಕೊಳ್ಳಿ
  2. ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ
  3. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ನೀರುಳ್ಳಿ ಪೇಸ್ಟನ್ನು ಹುರಿಯಿರಿ  .
  4. ಇದಕ್ಕೆ ಶು೦ಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ.
  5. ಬಳಿಕ ಇದಕ್ಕೆ ಟೊಮೇಟೊ ರಸ, ಅರಸಿನ, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ.
  6. ಮಿಶ್ರಣ ಎಣ್ಣೆ ಬಿಡುತ್ತಿದ್ದಂತೆ ಇದಕ್ಕೆ ಬೇಯಿಸಿದ ಬಟಾಣಿ ಸೇರಿಸಿ.
  7. ಬಳಿಕ ಹುರಿದ ಖೋವ,ಉಪ್ಪು ಸೇರಿಸಿ. ಚೆನ್ನಾಗಿ ಕಲಕುತ್ತ ಇರಿ.
  8. ಮಿಶ್ರಣವು ಚೆನ್ನಾಗಿ ಬೇಯುತ್ತಿದ್ದಂತೆ ಇದಕ್ಕೆ ದ್ರಾಕ್ಷೆ ಮತ್ತು  ಗೋಡಂಬಿ ಚೂರುಗಳನ್ನು ಹಾಕಿ.
  9. ಕೊತ್ತಂಬರಿ ಪುಡಿ ಸೇರಿಸಿ  ಮತ್ತಷ್ಟು ಕಲಸ್ಕಿ, ಒಲೆ ಆರಿಸಿ.
  10. ಇದಕ್ಕೆ ಕೊತ್ತಂಬರಿ ಸೊಪ್ಪು, ಹುರಿದ ಎಳ್ಳು, ಕೆಂಪು ಮೆಣಸಿನ ಚೂರು, ಹಸಿ ಮೆಣಸಿನ ಚೂರುಗಳನ್ನು ಹಾಕಿ ಅಲಂಕರಿಸಿ.  

3.ದಾಲ್  ಮಖನಿ   

ಬೇಕಾಗುವ ಸಾಮಗ್ರಿಗಳು

ರಾಜ್ಮ :ಅರ್ಧ ಲೋಟ
ಕಪ್ಪು ಉದ್ದಿನ ಬೇಳೆ:ಅರ್ಧ ಲೋಟ
ಕಡ್ಲೆ ಬೇಳೆ :ಕಾಲು ಲೋಟ
ಎಣ್ಣೆ :ಸ್ವಲ್ಪ
ಜೀರಿಗೆ :ಒಂದು ಚಮಚ
ಇಂಗು
ಮೆಂತೆ ಕಾಳು:10
ಶು೦ಠಿ ಬೆಳ್ಳುಳ್ಳಿ ಪೇಸ್ಟ್: ಒಂದು ಚಮಚ
ಟೊಮೇಟೊ ರಸ ; ಎರಡು ಲೋಟ
ಕೆಂಪು ಮೆಣಸಿನ ಪುಡಿ  ೧ ಚಮಚ
ಹಾಲಿನ ಕೆನೆ : ಅರ್ಧ ಲೋಟ
ಬೆಣ್ಣೆ : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
೧.ರಾಜ್ಮ ವನ್ನು ೧೬ ಗ೦ಟೆಗ ಕಾಲ  ನೆನೆ ಹಾಕಬೇಕು.ಕಪ್ಪು ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆಯನ್ನು ೮ ಗಂಟೆಗಳ ಕಾಲ ನೆನೆ ಹಾಕಬೇಕು.
೨.ನೆನೆದ ಕಾಳು/ಬೇಳೆಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ,ಮೆಂತೆ ಹಾಕಿ. ಬಳಿಕ ಇದಕ್ಕೆ ಶು೦ಠಿ ಬೆಳ್ಳುಳ್ಳಿ ಪೇಸ್ಟ್,ಟೊಮೇಟೊ ರಸ ಹಾಕಿ ಕಲಕಿ. ಇದು ಸರಿಯಾಗಿ ಬೇಯುತ್ತಿದ್ದಂತೆ
ಮೊದಲೇ ಬೇಯಿಸಿದ ಕಾಳು/ಬೆಳೆಗಳನ್ನು ಇದಕ್ಕೆ ಸೇರಿಸಿ, ಉಪ್ಪು ಹಾಕಿ, ಮತ್ತಷ್ಟು ಬೇಯಲು ಬಿಡಿ .
೪.ಕೆಂಪು ಮೆಣಸಿನ ಪುಡಿ ,ಹಾಲಿನ ಕೆನೆ,ಬೆಣ್ಣೆ ಹಾಕಿ ಮತ್ತಷ್ಟು ಕಲಕಿ.
೫.ಇದಕ್ಕೆ ಗರಂ ಮಸಾಲ ಪುಡಿ ಹಾಕಿ, ಸಣ್ಣ ಉರಿಯಲ್ಲಿ ೫-೧೦ ನಿಮಿಷ ಹಾಗೇ ಬಿಡಿ.
೬.ಕೊನೆಗೆ ಇದಕ್ಕೆ ಬೆಣ್ಣೆ ಹಾಕಿ, ಒಲೆ ಆರಿಸಿ.

೪.ಮೂಲಿ
ಪರಾಠ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು  ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಹೆಚ್ಚಿದ ಮೂಲಂಗಿ :೨ ಲೋಟ
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಓಮ (ಅಜವಾನ ):ಅರ್ಧ ಚಮಚ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಮೂಲಂಗಿ,ಜೀರಿಗೆ,ಹಸಿ ಮೆಣಸು,ಕೊತ್ತಂಬರಿ ಸೊಪ್ಪು,ಓಮ ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಮೂಲಂಗಿ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ  ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಮೂಲಿ ಪರಾಠ ತಯಾರಾಯಿತು .ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.


5.ಜೀರಾ ರೈಸ್
ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.ಇದಕ್ಕೆ  ದಾಲ್   ಮಖನಿ   ಅತ್ಯುತ್ತಮ  ಜತೆ .