Pages

Showing posts with label ಕಸ್ತೂರಿ ಟಿ.ವಿ. 'ನಳ ಪಾಕ '. Show all posts
Showing posts with label ಕಸ್ತೂರಿ ಟಿ.ವಿ. 'ನಳ ಪಾಕ '. Show all posts

Thursday, June 9, 2011

ಮಳೆಗಾಲದ ತಿಂಡಿಗಳು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಬಾಳೆ ಕಾಯಿ ಕಾಪು, ದಹಿ maTar ಚಾಟ್ ,ಪೆಪ್ಪರ್ ಗಾರ್ಲಿಕ್ ಸೂಪ್ ಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)

ಮಳೆಗಾಲ ಎಂದರೆ ಮೊದಲೇ ಮಳೆ..ಥಂಡಿ . ಏನಾದರೂ ಬಿಸಿ ಬಿಸಿ,ಖಾರ ಖಾರ ತಿಂಡಿಗಳನ್ನು ಚಪ್ಪರಿಸಲು ಮನ ಹಾತೊರೆಯುತ್ತದೆ. ನಿಮಗಿದೋ ಕೆಲವೊಂದು ಐಡಿಯಾ ಗಳು.

1.ಬಾಳೆ ಕಾಯಿ ಕಾಪು

ಬೇಕಾಗುವ ಸಾಮಗ್ರಿಗಳು

ಬಾಳೆಕಾಯಿ :1
ಅಕ್ಕಿ ಹಿಟ್ಟು : ಒಂದು ಲೋಟ
ಕೊತ್ತಂಬರಿ : ಎರಡು ಚಮಚ
ಒಣ ಮೆಣಸು : ೫
ಉದ್ದು : ಒಂದು ಚಮಚ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ಹುಣಸೆ ಹುಳಿ : ಸಣ್ಣ ಗೋಲಿ ಗಾತ್ರದ್ದು
ಬೆಲ್ಲ : ಸಣ್ಣ ಚೂರು

ವಿಧಾನ.
೧.ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ಕೊತ್ತಂಬರಿ,ಒಣ ಮೆಣಸು, ಉದ್ದು,ತೆಂಗಿನ ತುರಿ,ಉಪ್ಪು,ಹುಣಸೆ, ಬೆಲ್ಲ ಮತ್ತು ಹುರಿದ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರನ್ನು ಮಿಶ್ರ ಮಾಡಿ ರುಬ್ಬಿ. ಈ ಮಿಶ್ರಣವು ಬೋಂಡ ಹಿಟ್ಟಿನ ಹದದಲ್ಲಿ ಇರಬೇಕು.
೩.ಬಾಳೆ ಕಾಯಿಯನ್ನು ಬಿಲ್ಲೆಗಳಾಗಿ ಹೆಚ್ಚಿ ಈ ಮಿಶ್ರಣದಲ್ಲಿ ಹಾಕಿ.
೪.ಕಾವಲಿಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ. ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಬಾಲೆಕಾಯಿಯ ಬಿಲ್ಲೆಗಳನ್ನು ಕಾವಲಿಯಲ್ಲಿ ಹಾಕಿ ಬೇಯಿಸಿ. ೨-೩ ನಿಮಿಷ ಕಳೆದ ಮೇಲೆ ಬಾಳೆ ಕಾಯಿ ಬಿಲ್ಲೆಗಳನ್ನು ಮಗುಚಿ ಹಾಕಿ ಬೇಯಿಸಬೇಕು.

೨.ಭೇಲ್ ಪುರಿ.



ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ : ನಾಲ್ಕು ಲೋಟ
ನೀರುಳ್ಳಿ : ಒಂದು
ಟೊಮೇಟೊ :ಒಂದು,
ನಿಂಬೆ ರಸ : ಒಂದು ಚಮಚ
ಖಾರದ ಪುಡಿ : ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಎರಡು ಚಮಚ
ನೆಲಕಡಲೆ : ಒಂದು ಹಿಡಿ

ವಿಧಾನ :
೧.ನೀರುಳ್ಳಿ, ಟೊಮೇಟೊ ,ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ.
೨.ನೆಲಕಡಲೆಯನ್ನು ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
೩.ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ (೧) ಮತ್ತು (೨) ರಲ್ಲಿ ಸೂಚಿಸಿದ ವಸ್ತುಗಳನ್ನು ಹಾಕಿ ಕಲಕಿ. ಇದಕ್ಕೆ ನಿಂಬೆ ರಸ, ಉಪ್ಪು, ಖಾರದ ಪುಡಿ,ಎಣ್ಣೆ ಹಾಕಿ ಚೆನ್ನಾಗಿ ಕಲಕಿ ಕೂಡಲೇ ತಿನ್ನಿ.

ವಿ.ಸೂ. ಬೇಕಿದ್ದರೆ ತೆಳ್ಳಗಿನ ಸೇವು ( ಖಾರದ ಖಡ್ಡಿ ) ಸೇರಿಸ ಬಹುದು.


೩.ಪೆಪ್ಪರ್ ಗಾರ್ಲಿಕ್ ಸೂಪ್


ಬೇಕಾಗುವ ಸಾಮಗ್ರಿಗಳು

ಕಾಳು ಮೆಣಸು : ಒಂದು ಚಮಚ
ಬೆಳ್ಳುಳ್ಳಿ ಎಸಳು :ಹತ್ತು
ತೆಂಗಿನ ತುರಿ : ಕಾಲು ಲೋಟ
ಉದ್ದು : ಒಂದು ಚಮಚ
ನೀರು :ಎರಡು ಲೋಟ
ರುಚಿಗೆ ತಕ್ಕಷ್ಟು ಉಪ್ಪು

ತುಪ್ಪ :ಒಂದು ಚಮಚ
ನಿಂಬೆ ರಸ :ಒಂದು chamcha

ವಿಧಾನ :
೧.ಕಾಳು ಮೆಣಸು ಮತ್ತು ಉದ್ದನ್ನು ಚೆನ್ನಾಗಿ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ತೆಂಗಿನ ತುರಿ, ಕಾಳು ಮೆಣಸು ಮತ್ತು ಉದ್ದನ್ನು ಹಾಕಿ ರುಬ್ಬಿ.
೩. ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ , ಬೆಳ್ಳುಳ್ಳಿಯನ್ನು ಕರಿಯಿರಿ.
೪.ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸುರಿದು, ಅದಕ್ಕೆ ಕರಿದ ಬೆಳ್ಳುಳ್ಳಿಯನ್ನು ಸೇರಿಸಿ.
೫.ಈ ಮಿಶ್ರಣವನ್ನು ಕುದಿಯಲು ಬಿಡಿ,
೬.ಉಪ್ಪು ಮತ್ತು ನಿಂಬೆ ರಸ ಹಾಕಿ ಕೆಳಗಿಳಿಸಿ.

ಸೂಚನೆ : ಇದನ್ನು ಸೂಪ್ ನಂತೆ ಅಥವಾ ಸಾರಿನಂತೆ ಸವಿಯಬಹುದು. ಉದ್ದಿನ ಬದಲು ಜೀರಿಗೆ ಹಾಕಿದರೆ ವಿಭಿನ್ನ ರುಚಿ ಬರುತ್ತದೆ.


೪. ಕಷಾಯ

ಮಲೆನಾಡಿನಲ್ಲಿ ಕಷಾಯ ಎನ್ನುವುದು ಜನಪ್ರಿಯ ಪೇಯ.

ಬೇಕಾಗುವ ಸಾಮಗ್ರಿಗಳು

ಕಷಾಯದ ಪುಡಿ ಮಾಡಲು :
ಕಾಳು ಮೆಣಸು : ಎರಡು ಚಮಚ
ಜೀರಿಗೆ: ನಾಲ್ಕು ಚಮಚ
ಕೊತ್ತಂಬರಿ : ಒಂದು ಹಿಡಿ.
ಏಲಕ್ಕಿ : ಒಂದು
ಲವಂಗ: ೨
ಹಿಪ್ಪಲಿ : ಒಂದು ಚಮಚ
ಒಣ ಶುಂಥಿ : ಸಣ್ಣ ಚೂರು
ಅರಸಿನ : ಕಾಲು ಚಮಚ

ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಕಷಾಯದ ಪುಡಿ.

ಕಷಾಯ ಮಾಡಲು

೧ ಚಮಚ ಕಷಾಯದ ಪುಡಿ
ಬೆಲ್ಲ : ಸಣ್ಣ ಚೂರು
ನೀರು :ಎರಡು ಲೋಟ

ನೀರಿಗೆ ಬೆಲ್ಲ, ಕಷಾಯದ ಪುಡಿ ಹಾಕಿ ಕುದಿಸಿ.
ಬಳಿಕ ಇದನ್ನು ಸೋಸಿ , ಕುಡಿಯಬೇಕು. ಬೇಕಿದ್ದರೆ ಹಾಲು ಸೇರಿಸಬಹುದು.

೫. ದಹಿ maTar ಚಾಟ್

ಬೇಕಾಗುವ ಸಾಮಗ್ರಿಗಳು

ಬಟಾಣಿ : ಎರಡು ಲೋಟ
ಮೊಸರು : ಕಾಲು ಲೋಟ
ಗರಂ ಮಸಾಲೆ ಅರ್ಧ ಚಮಚ
ಚಾಟ್ ಮಸಾಲೆ ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಕಾಲು ಲೋಟ
ಬೆಲ್ಲ : ಸಣ್ಣ ಚೂರು
ಖಾರದ ಪುಡಿ : ಕಾಲು ಚಮಚ
ಕೊತ್ತಂಬರಿ ಸೊಪ್ಪು :swalpa
ನೀರುಳ್ಳಿ :೧

ವಿಧಾನ
೧.ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ.
೨.ಒಂದು ಪಾತ್ರೆಯಲ್ಲಿ ಹುಣಸೆ ರಸ ಹಾಕಿ ಕುದಿಸಿ.
೩.ಕುದಿ ಬರುತ್ತಿದ್ದಂತೆ ಅದಕ್ಕೆ ಬೆಲ್ಲ, ಉಪ್ಪು, ಖಾರದ ಪುಡಿ,ಚಾಟ್ ಮಸಾಲ, ಗರಂ ಮಸಾಲ ಹಾಕಿ ಕಲಕಿ.
೪.ಇದಕ್ಕೆ ಬೇಯಿಸಿದ ಬಟಾಣಿಯನ್ನು ಸೇರಿಸಿ ಮಂದ ಉರಿಯಲ್ಲಿ ಬೇಯಿಸಿ.
೫.ಇದನ್ನು ಬಡಿಸುವಗಾ ಒಂದು ತಟ್ಟೆಗೆ ಬೇಯಿಸಿದ ಬಟಾಣಿಮಿಶ್ರಣ ಹಾಕಿ, ಅದಕ್ಕೆ ಮೊಸರು, ಕೊತ್ತಂಬರಿ ಸೊಪ್ಪು ಮತ್ತು ಹೆಚ್ಚಿದ ನೀರುಳ್ಳಿ ಹಾಕಿ ತಿನ್ನಲು ಕೊಡಿ.ಲು

Thursday, March 3, 2011

ಪಲ್ಯ..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಆಲೂಗೆಡ್ಡೆ-ಹುಣಸೆ ರಸ ಪಲ್ಯಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)


೧.ತೊಂಡೆಕಾಯಿ ,ಗೋಡಂಬಿ ಪಲ್ಯ




ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.

ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.

ಸೂಚನೆ :
೧.ಗೋಡಂಬಿಯ ಬದಲು ನೆನೆದ ಕಡಲೆಯನ್ನು ಬಳಸಬಹುದು.
೨.ಭಿನ್ನವಾದ ರುಚಿಗೊಸ್ಕರ ತೆಂಗಿನ ಕಾಯಿಯ ಜತೆ ಸಾಸಿವೆಯ ಬದಲು ಜೀರಿಗೆ ರುಬ್ಬಿ ಪಲ್ಯ ಮಾಡಬಹುದು.
------------------------------------------------------------------------------------------------------------------------------------------

೨.ಸುಟ್ಟ ಬದನೇಕಾಯಿ ಪಲ್ಯ
--------------------------------------------------------------


ಬೇಕಾಗುವ ಸಾಮಗ್ರಿಗಳು:

ಬದನೇಕಾಯಿ :ದೊಡ್ಡದು (ನೇರಳೆ ಬಣ್ಣದ್ದು ) : ೨
ನೀರುಳ್ಳಿ : ಒಂದು

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ
ಹಸಿ ಮೆಣಸು : ನಾಲ್ಕು
ಬೆಳ್ಳುಳ್ಳಿ : ೧೦ ಎಸಳು

ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಬದನೆ ಕಾಯಿಯನ್ನು ತೊಳೆದು ಗ್ಯಾಸ್ ನ ಒಲೆಯ ಮೇಲೆ ನೇರವಾಗಿ ಇಟ್ಟು, ಒಲೆ ಉರಿಸಿ.
೨.ಬದನೆ ಕಾಯಿಯು ಬೆಂಕಿಯಲ್ಲಿ ಚೆನ್ನಾಗಿ ಸುಡುವ ತನಕ ಒಲೆಯಲ್ಲಿ ಇರಿಸಿ. ಆಗಾಗ್ಗೆ ಅದನ್ನು ಮಗುಚಿ ಇಟ್ಟು,ಎಲ್ಲಾ ಭಾಗಗಳೂ ಸಮಾನವಾಗಿ ಸುಡುವಂತೆ ಮಾಡಿ. ಅದರ ಮೇಲ್ಗಡೆಯ ಸಿಪ್ಪೆ ಏಳುವಷ್ಟರ ತನಕ ಇದನ್ನು ಸುಡಬೇಕು.
೩.ಈಗ ಒಲೆ ಆರಿಸಿ, ಬದನೆಕಾಯಿಯ ಸಿಪ್ಪೆಯನ್ನು ಸುಲಿಯಿರಿ.
೪.ಸಿಪ್ಪೆ ರಹಿತ ಭಾಗವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಈ ಹಂತದಲ್ಲಿ ಅದನ್ನು ಚೆನ್ನಾಗಿ ಪರಿಶೀಲನೆ ಮಾಡಿ. (ಕೆಲವೊಮ್ಮೆ ಬದನೆಕಾಯಿಯ ಒಳಗೆ ಹುಳ ಇರುತ್ತದೆ. ಹಾಗಾಗೆ ಪರಿಶೀಲನೆ ಅತೀ ಅಗತ್ಯ!! )
೫. ಬೆಂದಿರುವ ಬದನೆಕಾಯಿಯನ್ನು ಚೆನ್ನಾಗಿ ಕಿವುಚಿ.
೬.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ಹಸಿಮೆಣಸಿನ ಚೂರು,ಬೆಳ್ಳುಳ್ಳಿಚೂರು , ಸಣ್ಣಗೆ ಹೆಚ್ಚಿದ ನೀರುಲ್ಲಿಯನ್ನು ಹಾಕಿ ,ಚೆನ್ನಾಗಿ ಹುರಿಯಿರಿ.
೭.ಬಳಿಕ ಕಿವುಚಿದ ಬದನೆ ,ಉಪ್ಪು,ನಿಂಬೆ ರಸ ಹಾಕಿ ಚೆನ್ನಾಗಿ ಕಲಕಿ. ಈಗ ಸುಟ್ಟ ಬದನೆ ಕಾಯಿ ಪಲ್ಯ ತಯಾರು!

ಸೂಚನೆ : ಇದನ್ನೇ ಉತ್ತರ ಭಾರತದ ಕಡೆ 'ಬೆಂಗನ್ ಭರ್ತ' ಎನ್ನುತ್ತಾರೆ.
ಈ ಪಲ್ಯ ಆರಿದ ಬಳಿಕ ಬೇಕಿದ್ದರೆ ಮೊಸರು ಹಾಕಿ ಕಲಕಬಹುದು. ಬದನೆಕಾಯಿಯ ಮೊಸರುಗೊಜ್ಜು ತಯಾರಾಗುತ್ತದೆ.

-------------------------------------------------------------------------------------------------------------------------------------
೩.ಆಲೂಗೆಡ್ಡೆ-ಹುಣಸೆ ರಸ ಪಲ್ಯ
--------------------------------------------------------------------------------------------------------------------------------------

ಬೇಕಾಗುವ ಸಾಮಗ್ರಿಗಳು:
ಸಣ್ಣ ಗಾತ್ರದ ಆಲೂಗಡ್ಡೆ : ೬

ಹುಣಸೆ ರಸ : ಕಾಲು ಲೋಟ
ಸಾರಿನ ಪುಡಿ:ಒಂದು ಚಮಚ
ಬೆಲ್ಲ :ಸಣ್ಣ ಚೂರು
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ

ಅಲಂಕಾರಕ್ಕೆ :
ನೀರುಳ್ಳಿ ಚೂರು :ಸ್ವಲ್ಪ
ಕೊತ್ತಂಬರಿ ಚೂರು :ಸ್ವಲ್ಪ

ವಿಧಾನ :
೧.ಸಣ್ಣ ಅಲೂಗದ್ದೆಗಳನ್ನು ಬೇಯಿಸಿ, ಸಿಪ್ಪೆ ಬೇರ್ಪಡಿಸಿ ಇಟ್ಟುಕೊಳ್ಳಿ.
೨.ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ.
೩.ಇದಕ್ಕೆ ಬೆಂದ ಆಲೂಗಡ್ಡೆಗಳನ್ನೂ ಸೇರಿಸಿ.
೪.ಬಳಿಕ ಹುಣಸೆ ರಸ,ಸಾರಿನ ಪುಡಿ,ಬೆಲ್ಲ,ಉಪ್ಪು ಹಾಕಿ ನಿಧಾನವಾಗಿ ಕಲಕಿ . ಅಲೂಗಡ್ಡೆಯ ಮೇಲೆ ಈ ಮಸಾಲೆಗಳೆಲ್ಲ ಸರಿಯಾಗಿ ತಗಲುವಂತೆ ಕಲಕಬೇಕು.
೫.ಸುಮಾರು ಹತ್ತು ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
೬.ಸಣ್ಣಗೆ ಹೆಚ್ಚಿದ ನೀರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

-------------------------------------------------------------------------------------------------------------------------

4.ತುರಿದ ಬೀಟ್ರೂಟ್ ಪಲ್ಯ
-------------------------------------------------------------------------------------------------------


ಬೀಟ್ರೂಟ್ : ಒಂದು
ತೆಂಗಿನ ತುರಿ :ಕಾಲು ಲೋಟ
ಬೆಲ್ಲ :ಸಣ್ಣ ಚೂರು
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಅರ್ಧ ಚಮಚ

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ
ಕೆಂಪು ಮೆಣಸು : ನಾಲ್ಕು
ಇಂಗು : ಚಿಟಿಕೆ

ವಿಧಾನ
೧.ಬೀಟ್ರೂಟ್ ಸಿಪ್ಪೆ ತೆಗೆದು, ಅದನ್ನು ತುರಿಯಿರಿ.
೨,ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ,ಕೆಂಪು ಮೆಣಸು ,ಇಂಗು ಹಾಕಿ ಒಗ್ಗರಣೆ ತಯಾರಿಸಿ.
೩.ಇದರಲ್ಲಿ ತುರಿದ ಬೀಟ್ರೂಟ್ ಹಾಕಿ ಬಾಡಿಸಿ.
೪.ಬಳಿಕ ಇದಕ್ಕೆ ತೆಂಗಿನ ತುರಿ,ಬೆಲ್ಲ,ಹುಣಸೆ ರಸ,ಉಪ್ಪು ಹಾಕಿ ಚೆನ್ನಾಗಿ ಕಲಕಿ.

----------------------------------------------------------------------------------------------------------------------------------------------------

5.ಟೊಮೇಟೊ ಮಸಾಲ
--------------------------------------------------------------------------------------------------------------------------


ಬೇಕಾಗುವ ಸಾಮಗ್ರಿಗಳು:
ಟೊಮೇಟೊ:೪
ನೀರುಳ್ಳಿ : ೨
ಎಣ್ಣೆ :ನಾಲ್ಕು ಚಮಚ

ದಾಲ್ಚಿನ್ನಿ :ಸಣ್ಣ ಚೂರು
ಲವಂಗ : 3
ಬೆಳ್ಳುಳ್ಳಿ : ೬ ಎಸಳು
ಕರಿಬೇವು : ೧೦ ಎಸಳು
ಹಸಿ ಮೆಣಸು : ೫
ಜೀರಿಗೆ: ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಜೀರಿಗೆ,ಕರಿಬೇವು, ಹಸಿ ಮೆಣಸು ಹಾಕಿ ಬಾಡಿಸಿಕೊಳ್ಳಿ.
೨.ಇದರಲ್ಲಿ ಹೆಚ್ಚಿದ ಟೊಮೇಟೊ,ನೀರುಳ್ಳಿ,ಬೆಳ್ಳುಳ್ಳಿ ಹಾಕಿ ಕಲಕಿ.
೩.ಟೊಮೇಟೊ ಸರಿಯಾಗಿ ಬೇಯುವ ತನಕ ಹಾಗೇ ಬಿಡಿ.ಈಗ ದಾಲ್ಚಿನ್ನಿ ಮತ್ತು ಲವಂಗ ಹಾಕಿ. ಮಧ್ಯ ಮಧ್ಯ sauTininda ತಿರುವುತ್ತಿರಿ.
೪.ಇದಕ್ಕೆ ಉಪ್ಪು ಹಾಕಿ, ಮತ್ತೆ ಮೂರು-ನಾಲ್ಕು ನಿಮಿಷ ಬೇಯಲು ಬಿಡಿ.

ಇದೀಗ ಟೊಮೇಟೊ ಮಸಾಲ ತಯಾರಾಯಿತು. ಚಪಾತಿಗೆ ಹೇಳಿ ಮಾಡಿಸಿದ ಜತೆ ಇದು