Pages

Tuesday, September 28, 2010

ದೋಸೆ...

’ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’ದೋಸೆ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿ.ಢೊಸ, ದೊಸಯ್, ದೊಸೈ, ಧೊಸೈ, ತೊಸೈ ಇತ್ಯಾದಿ ನಾಮಧೇಯಗಳಿಂದ ಕರೆಯಲ್ಪಡುತ್ತದೆ.ಪ್ರೋಟೀನು ಮತ್ತು ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿರುವ ಇದು ಉಪಾಹಾರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ’ಎಲ್ಲರ ಮನೆ ದೋಸೆ ತೂತು..ಆದರೆ ಕೆಲವು ಮನೆಯ ಕಾವಲಿಯೇ ತೂತು’ ಎಂಬ ಗಾದೆ ಸಮಸ್ಯೆಗಳು ಎಲ್ಲ ಕಡೆಯೂ ಇರುತ್ತವೆ. ಆದರೆ ಅವುಗಳ ಪ್ರಮಾಣ ಮಾತ್ರ ಬೇರೆ ಬೇರೆ ಎಂಬ ಅರ್ಥವನ್ನು ನೀಡುತ್ತದೆ.’ಬಿಳಿ ಅಜ್ಜನಿಗೆ ಮೈ ಎಲ್ಲಾ ಕಣ್ಣು’ ಎಂಬ ಒಗಟಿಗೆ ದೋಸೆಯೇ ಉತ್ತರ. ಸಣ್ಣ ಮಗುವಿಗೆ ೨ ತಿಂಗಳಾಗುತ್ತಿದ್ದಂತೆ ಮನೆಯಲ್ಲಿ ನೀರು ದೋಸೆ ಮಾಡಿ, ದೋಸೆ ಬೇಯುವಾಗಿನ ಶಬ್ದ ಮಗುವಿಗೆ ಕೇಳಿಸುವಂತೆ ಮಾಡುವ ಸಂಪ್ರದಾಯವೂ ಕೆಲವೆಡೆ ಇದೆ. "ದೋಸೆ ಕಾವಲಿಗೆ ಹತ್ತು ದೊಸೆ , ಕಾವಲಿಯಲ್ಲಿ ಏಳು ದೊಸೆ.. ಬಾಳೆ ಎಲೆಯಲ್ಲಿ ಆರು ದೋಸೆ.. ಒಟ್ಟು ಎಷ್ಟು ದೋಸೆ..??" ಎಂದರೆ ಉತ್ತರ ’ಒಂದು ದೋಸೆ ’ . (ಪ್ರಶ್ನೆಯನ್ನು ಇನ್ನೊಮ್ಮೆ ಓದಿ ನೋಡಿ, ತಿಳಿಯುತ್ತದೆ ). ೩ ನೇ ಶತಮಾನದಲ್ಲಿ ದೋಸೆಯ ಬಳಕೆ ಇದ್ದ ಬಗ್ಗೆ ತಮಿಳು ಸಂಗಮ ಸಾಹಿತ್ಯದಲ್ಲಿ ಉಲ್ಲೇಖವಿದೆ.

ಬೆಳಗಿನ ಉಪಾಹಾರಕ್ಕೆ ಏನು ಮಾಡಬೇಕು ಎಂಬ ಯೋಚನೆ ಕಾಡುವುದು ಸಹಜ. ಕೆಳಗೆ ಸೂಚಿಸಿದ ಬಗೆ ಬಗೆ ದೋಸೆಗಳನ್ನು ನೀವು ಏಕೆ ಪ್ರಯತ್ನಿಸಬಾರದು ?
-------------------
1.ಮಸಾಲೆ ದೋಸೆ
---------------------

ದೋಸೆಗಳಲ್ಲೇ ಅತ್ಯಂತ ಖ್ಯಾತಿ ಗಳಿಸಿರುವ ದೋಸೆ ಯಾವುದು ಎಂಬ ಪ್ರಶ್ನೆ ಕೇಳಿದರೆ,ಸಿಗುವ ಉತ್ತರ "ಮಸಾಲೆ ದೋಸೆ". ಈ ದೋಸೆಯ ಮೂಲ ಉಡುಪಿ ಎಂದು ಹೇಳಲಾಗುತ್ತದೆ.
ಹೊಂಬಣ್ಣದ ಗರಿ ಗರಿಯಾದ ದೋಸೆಯನ್ನು ಸ್ವಲ್ಪ ಸ್ವಲ್ಪವೇ ಮುರಿದು, ಬಟಾಟೆ -ನೀರುಳ್ಳಿ ಪಲ್ಯದ ಜತೆ ಸೇರಿಸಿ, ಚಟ್ನಿಯಲ್ಲಿ ಅದ್ದಿ ತಿನ್ನುವುದೆಂದರೆ ಒಂದು ರೀತಿಯ ಸ್ವರ್ಗ ಸುಖ.ದೋಸೆಯ ಮೇಲೊಂದು ಕರಗುತ್ತಿರುವ ಬೆಣ್ಣೆ ಮುದ್ದೆಯಿದ್ದರೆ ಹೇಳುವುದೇ ಬೇಡ..ಮೆದ್ದವನೇ ಬಲ್ಲ ಇದರ ರುಚಿ!!ಬೇಕಾಗುವ ಸಾಮಗ್ರಿಗಳು:
ಅಕ್ಕಿ:ನಾಲ್ಕು ಲೋಟ
ಉದ್ದು: ಒಂದುವರೆ ಲೋಟ
ಕಡಲೆ ಬೇಳೆ :ಕಾಲು ಲೋಟ
ತೊಗರಿ ಬೇಳೆ :ಕಾಲು ಲೋಟ
ಮೆಂತೆ :ಎರಡು ಚಮಚ
ಅವಲಕ್ಕಿ:ಒಂದು ಹಿಡಿ
ಸಕ್ಕರೆ: ಒಂದು ಚಮಚ

ಉಪ್ಪು:ರುಚಿಗೆ ತಕ್ಕಷ್ಟು


ವಿಧಾನ :

ಹಂತ ೧ : ದೋಸೆ ಹಿಟ್ಟು :

೧.ಅಕ್ಕಿ,ಉದ್ದು, ಕಡಲೆ ಬೇಳೆ,ಮೆಂತೆ ,ತೊಗರಿ ಬೇಳೆ ಇವುಗಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
೨.ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, (೧) ರಲ್ಲಿ ಸೂಚಿಸಿರುವ ನೆನೆದ ಪದಾರ್ಥಗಳ ಜತೆ ರುಬ್ಬಿ.
೩.ರುಬ್ಬಿದ ಈ ಮಿಶ್ರಣವನ್ನು ಸುಮಾರು ೮ ಗಂಟೆಗಳ ಕಾಲ ಹಾಗೇ ಇಡಿ.
೪.ಇದಕ್ಕೆ ಸಕ್ಕರೆ ಮತ್ತು ಉಪ್ಪು ಬೆರೆಸಿ, ಕಲಕಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಇಡಿ. ಇದೀಗ ದೋಸೆ ಹಿಟ್ಟು ತಯಾರಾಯಿತು.

ಹಂತ ೨: ಪಲ್ಯ ತಯಾರಿ

ಬೇಕಾಗುವ ಪದಾರ್ಥಗಳು

ಬಟಾಟೆ: ಕಾಲು ಕೆ.ಜಿ.
ನೀರುಳ್ಳಿ :ಕಾಲು ಕೆ.ಜಿ.
ಹಸಿ ಮೆಣಸು:೪
ಸಾಸಿವೆ :ಒಂದು ಚಮಚ
ಉದ್ದು: ಒಂದು ಚಮಚ
ಬೇವಿನೆಲೆ:ಹತ್ತು ಎಸಳು
ಅರಸಿನ:ಚಿಟಿಕೆ
ಎಣ್ಣೆ:ಎರಡು ಚಮಚ

ಉಪ್ಪು:ರುಚಿಗೆ ತಕ್ಕಷ್ಟು

ವಿಧಾನ

೧.ಆಲೂಗಡ್ಡೆಯನ್ನು ಬೇಯಿಸಿ,ಸಿಪ್ಪೆ ತೆಗೆದು,ಜಜ್ಜಿ ಇಟ್ಟುಕೊಳ್ಳಿ.
೨.ನೀರುಳ್ಳಿ,ಹಸಿ ಮೆಣಸನ್ನು ಸಣ್ಣಗೆ ಹೆಚ್ಚಿ.
೩.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಉದ್ದು,ಅರಸಿನ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ,ಹಸಿಮೆಣಸು ಹಾಕಿ.
೪.ಇದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ,ಹೊಂಬಣ್ಣ ಬರುವ ತನಕ ಹುರಿಯಿರಿ.
೫.ಈಗ ಜಜ್ಜಿದ ಅಲೂಗಡ್ಡೆ,ಉಪ್ಪು ಸೇರಿಸಿ ಚೆನ್ನಾಗಿ ಕಲಕಿ.
೬.ಒಲೆ ಆರಿಸಿ, ಹತ್ತು ನಿಮಿಷ ಪಲ್ಯ ತಣಿಯಲು ಬಿಡಿ.


ಹಂತ ಮೂರು: ಕೆಂಪು ಚಟ್ನಿ

ಬೇಕಾಗುವ ಪದಾರ್ಥಗಳು

ಕೆಂಪು ಮೆಣಸು :ಹತ್ತು
ಹುಣಸೆ : ನಾಲ್ಕು ಬೀಜ
ಪುಟಾಣಿ:ಒಂದು ಹಿಡಿ
ಹೆಚ್ಚಿದ ನೀರುಳ್ಳಿ: ಒಂದು
ಬೆಳ್ಳುಳ್ಳಿ:ನಾಲ್ಕು ಎಸಳು

ಉಪ್ಪು:ರುಚಿಗೆ ತಕ್ಕಷ್ಟು
ಎಣ್ಣೆ:ಸ್ವಲ್ಪ

ವಿಧಾನ

೧.ಕೆಂಪು ಮೆಣಸನ್ನು ಎಣ್ಣೆ ಹಾಕಿ ಹುರಿಯಿರಿ.
೨.ಕೆಂಪು ಮೆಣಸು,ಹುಣಸೆ,ಪುಟಾಣಿ,ಹೆಚ್ಚಿದ ನೀರುಳ್ಳಿ,ಬೆಳ್ಳುಳ್ಳಿ,ಉಪ್ಪು ಇವುಗಳನ್ನು ರುಬ್ಬಿ.ನೀರು ಹೆಚ್ಚಿಗೆ ಹಾಕಬಾರದು.ಇದು ದಪ್ಪವಾಗಿರಬೇಕು.

ಸೂಚನೆ:ಇದನ್ನು ದೋಸೆಗೆ ಸವರುವ ಕಾರಣ ಇದಕ್ಕೆ ಉಪ್ಪು ಬೇಕೆಂದಿಲ್ಲ.


ಮಸಾಲೆ ದೋಸೆ ಮಾಡುವ ವಿಧಾನ

೧.ದೋಸೆ ಕಾವಲಿಯನ್ನು ಬಿಸಿ ಮಾಡಿ.
೨.ದೋಸೆ ಹಿಟ್ಟನ್ನು ನಿಧಾನವಾಗಿ ತೆಳುವಾಗಿ ಹರಡಿ.ಸ್ವಲ್ಪ ಎಣ್ಣೆ ಹಾಕಿ.
೩.ದೋಸೆ ಬೇಯುತ್ತಿದ್ದಂತೆ, ಅದರ ಮೇಲೆ ಕೆಂಪು ಚಟ್ನಿಯನ್ನು ಸಮವಾಗಿ ಸವರಿ.
೪.ಕೂಡಲೆ ಇದರ ಮೇಲೆ ಬಟಾಟೆ-ನೀರುಳ್ಳಿ ಪಲ್ಯವನ್ನು ಹರಡಿ,ದೋಸೆಯನ್ನು ಎರಡೂ ಬದಿಯಿಂದ ಮಡಚಿ.
೫.ಮಸಾಲೆ ದೋಸೆ ತಯಾರಾಯಿತು. ಮೇಲೆ ಒಂದಿಷ್ಟು ಬೆಣ್ಣೆ ಹಾಕಿ, ತಿನ್ನಿ.
೬. ತೆಂಗಿನಕಾಯಿಯ ಚಟ್ನಿಯ ಜತೆಯೂ ಇದನ್ನು ಮೆಲ್ಲಬಹುದು.--------------------

2.ನೀರು ದೋಸೆ.
---------------------

ಇದು ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ದೋಸೆ.
ಬಹಳ ಸರಳ ಮತ್ತು ರುಚಿಕರವಾದ ದೋಸೆ ಇದು.ಇದನ್ನು ತೆಳ್ಳವು ಎಂತಲೂ ಕರೆಯುತ್ತಾರೆ.
ಬೇಕಾಗುವ ಸಾಮಗ್ರಿಗಳು
೧. ಒಂದು ಲೋಟ ಅಕ್ಕಿ
ನೀರು : ಮೂರು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ/ ತುಪ್ಪ :ಸ್ವಲ್ಪ
ವಿಧಾನ : ಅಕ್ಕಿಯನ್ನು ನೀರಿನಲ್ಲಿ ಮೂರು ಗಂಟೆಗಳ ಕಾಲ ನೆನೆಸಿ ಇಡಿ.
ಆ ಬಳಿಕ ಅದನ್ನು ನುಣ್ಣಗೆ ರುಬ್ಬಿ.
ಬಳಿಕ ಉಪ್ಪು ಹಾಕಿ ಕಲಕಿ.
ಹಿಟ್ಟು ನೀರು ನೀರಾಗಿರಬೇಕು. ಈ ದೋಸೆಯನ್ನು ಬೇರೆ ದೋಸೆಗಳ ಥರ ಹೊಯ್ಯುವುದಿಲ್ಲ .ಕಾವಲಿಗೆ ತುಪ್ಪ ಅಥವಾ ಹೊಯ್ಯುವಾಗ ಸೌಟನ್ನು ಕಾವಲಿಗೆ ತಾಗಿಸದೆ ವೇಗವಾಗಿ ಕಾವಲಿಯ ಮೇಲೆ ಚೆಲ್ಲುವ ರೀತಿಯಲ್ಲಿ ಹೊಯ್ಯಬೇಕು.
ಸಾಮಾನ್ಯವಾಗಿ ಇದನ್ನು ಎರಡು ಮಡಿಕೆ ಮಡಚುವ ಕ್ರಮ ಇದೆ. ಬಾಳೆಹಣ್ಣಿನ ರಸಾಯನ ಅಥವಾ ತೆಂಗಿನಕಾಯಿ ಹೂರಣದ ಜತೆ ಇದು ಭಾರೀ ರುಚಿ.

ವಿ.ಸೂ. ಖಾರ ತೆಳ್ಳವು ಆಗಬೇಕಾದರೆ, ಅಕ್ಕಿಯ ಜತೆ ಕಾಲು ಲೋಟ ತೆಂಗಿನ ತುರಿ, ೩ ಒಣ ಮೆಣಸಿನಕಾಯಿ, ಒಂದು ಚಮಚ ಕೊತ್ತಂಬರಿ , ಒಂದು ನೀರುಳ್ಳಿಯನ್ನು ಸೇರಿಸಿ ರುಬ್ಬಬೇಕು .-----------------------------
3.ರವೆ ದೋಸೆ
--------------------------------
ಬೇಕಾಗುವ ವಸ್ತುಗಳು
ರವೆ :ಒಂದು ಲೋಟ
ತೆಂಗಿನ ತುರಿ:ಅರ್ಧ ಲೋಟ
ಹಸಿ ಮೆಣಸು : ೩
ಕೊತ್ತಂಬರಿ ಸೊಪ್ಪು : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ಶು೦ಠಿ :ಸಣ್ಣ ಚೂರು
ತುಪ್ಪ :ಸ್ವಲ್ಪ

ವಿಧಾನ :ಮೇಲೆ ತಿಳಿಸಿದ ಎಲ್ಲ ವಸ್ತುಗಳನ್ನು ನೀರು ಸೇರಿಸಿ ನುಣ್ಣಗೆ ರುಬ್ಬಿ.
ಕಾವಲಿಗೆ ತುಪ್ಪ ಸವರಿ ದೋಸೆ ಹೊಯ್ಯಿರಿ.
ಇದಕ್ಕೆ ಯಾವುದೇ ರೀತಿಯ ಚಟ್ನಿಯ ಅಗತ್ಯ ಇರುವುದಿಲ್ಲ.
-----------------------------------
4.ಸೌತೆಕಾಯಿ ದೋಸೆ
----------------------------------

ಅಕ್ಕಿ :ಒಂದು ಲೋಟ
ಸೌತೆಕಾಯಿ ತುರಿ :ಮುಕ್ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಎಣ್ಣೆ /ತುಪ್ಪ :ಸ್ವಲ್ಪ
ವಿಧಾನ : ಅಕ್ಕಿಯನ್ನು ೩ ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ.
ಬಳಿಕ ಅಕ್ಕಿ, ಸೌತೆಕಾಯಿ ತುರಿ ಮತ್ತು ಉಪ್ಪು ಇವುಗಳನ್ನು ಒಟ್ಟಿಗೆ ರುಬ್ಬಿ, ಕಾವಲಿಗೆ ಎಣ್ಣೆ/ ತುಪ್ಪ ಸವರಿ ,ದೋಸೆ ಹೊಯ್ಯಿರಿ.
-------------------------------
5.ಬಾಳೆ ಹಣ್ಣು ದೋಸೆ
------------------------------

ಬೇಕಾಗುವ ಪದಾರ್ಥಗಳು
ಅಕ್ಕಿ :ಒಂದು ಲೋಟ
ಏಲಕ್ಕಿ ಬಾಳೆಹಣ್ಣು :೨
ತೆಂಗಿನಕಾಯಿ ತುರಿ :ಕಾಲು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ತುಪ್ಪ :ಸ್ವಲ್ಪ

ವಿಧಾನ :ಅಕ್ಕಿಯನ್ನು ೩ ಗಂಟೆ ಕಾಲ ನೀರಿನಲ್ಲಿ ನೆನೆಸಿ ಇಡಬೇಕು. ಬಳಿಕ ನೆನೆದ ಅಕ್ಕಿ, ಬಾಳೆಹಣ್ಣು, ತೆಂಗಿನ ತುರಿ, ಉಪ್ಪು ಇವುಗಳನ್ನು ರುಬ್ಬಿ.
ಕಾವಲಿಗೆ ತುಪ್ಪ ಸವರಿ, ರುಬ್ಬಿದ ದೋಸೆ ಹಿಟ್ಟನ್ನು ಹೊಯ್ಯಿರಿ.

-------------
6.ಪೆಸರಟ್ಟು
--------------

ಬೇಕಾಗುವ ಪದಾರ್ಥಗಳು
ಹೆಸರು ಕಾಳು : ಮುಕ್ಕಾಲು ಲೋಟ
ಅಕ್ಕಿ :ಕಾಲು ಲೋಟ
ಈರುಳ್ಳಿ : ೧
ಹಸಿ ಮೆಣಸು: ೨
ಹಸಿ ಶು೦ಠಿ :ಸಣ್ಣ ಚೂರು
ಉಪ್ಪು:ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ತುಪ್ಪ : ೪ ಚಮಚ
ವಿಧಾನ :

೧.ಅಕ್ಕಿ ಮತ್ತು ಹೆಸರು ಕಾಳನ್ನು ತೊಳೆದು , ನೀರಿನಲ್ಲಿ ಸುಮಾರು ಎಂಟು ಗಂಟೆಗಳ ಕಾಲ ನೆನೆಸಬೇಕು.
೨. ಬಳಿಕ ನೆನೆದ ಹೆಸರು ಕಾಳು, ಅಕ್ಕಿ,ಹಸಿ ಶು೦ಠಿ ,ಈರುಳ್ಳಿ,ಹಸಿ ಮೆಣಸು ಇವುಗಳನ್ನು ನುಣ್ಣಗೆ ರುಬ್ಬಿ.ಉಪ್ಪು ಹಾಕಿ ಕಲಕಿ.
೩.ಕಾವಲಿಯ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ , ಇದರ ಮೇಲೆ ನಿಧಾನವಾಗಿ ದೋಸೆ ಹೊಯ್ಯಿರಿ.
೪.ಸಣ್ಣ ಉರಿಯಲ್ಲಿ ದೋಸೆಯನ್ನು ಎರಡೂ ಬದಿಗಳಲ್ಲಿ ಬೇಯಿಸಿ.
೫.ಪೆಸರಟ್ಟು ತಯಾರು !!.ಇನ್ನೇಕೆ ತಡ, ಬೆಣ್ಣೆ ಮತ್ತು ಚಟ್ನಿಯ ಜತೆ ಇದನ್ನು ಸವಿಯಿರಿ.

ವಿ.ಸೂ.
೧.ಅಕ್ಕಿಯನ್ನು ಬಳಸದೆಯೂ ಇದನ್ನು ಮಾಡುವುದಿದೆ. ಆದರೆ ಆಗ ದೋಸೆ ತುಂಬಾ ಮೃದುವಾಗುತ್ತದೆ ಮತ್ತು ದೋಸೆಯನ್ನು ಕಾವಲಿಯಿಂದ ಎಬ್ಬಿಸಲು ಸ್ವಲ್ಪ ಕಷ್ಟವಾಗುತ್ತದೆ.
೨.ಅಕ್ಕಿಯ ಬದಲು ರವೆಯನ್ನು ಕೂಡ ಬಳಸಬಹುದು.

------------------------------------------------------------
7.ಬಸಳೆ ದೋಸೆ
---------------------------------------------------------------
ಅಕ್ಕಿ :ಅರ್ಧ ಲೋಟ
ಬಸಳೆ: ಹತ್ತು ಎಲೆ
ತೆಂಗಿನ ತುರಿ :ಅರ್ಧ ಲೋಟ
ಕೊತ್ತಂಬರಿ: ಒಂದು ಚಮಚ
ಹುಣಸೆ ಹಣ್ಣು : ೪ ಬೀಜ
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸಣ್ಣ ಚೂರು
ಕೆಂಪು ಮೆಣಸು : ನಾಲ್ಕು
ಅರಸಿನ : ಒಂದು ಚಿಟಿಕೆ
ವಿಧಾನ
೧.ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಬೇಕು.
೨.ನೆನೆದ ಅಕ್ಕಿ ,ತೆಂಗಿನ ತುರಿ ,ಕೊತ್ತಂಬರಿ,ಹುಣಸೆ ಹಣ್ಣು ,ಉಪ್ಪು,ಬೆಲ್ಲ , ಕೆಂಪು ಮೆಣಸು ಮತ್ತು ಅರಸಿನವನ್ನು ರುಬ್ಬಿ.
3.ರುಬ್ಬಿದ ಮಿಶ್ರಣಕ್ಕೆ ಬಸಳೆಯನ್ನು ಸಣ್ಣಗೆ ಹೆಚ್ಚಿ ಸೇರಿಸಿ.
4 . ಈ ಮಿಶ್ರಣವು ತುಂಬಾ ನೀರು ನೀರಾಗಿರಬಾರದು . ನಿಧಾನವಾಗಿ ದೋಸೆ ಕಾವಲಿಯ ಮೇಲೆ ಹೊಯ್ಯಿರಿ.
ಇದೇ ಥರ ಕೆಸುವಿನ ಎಲೆಯ ದೋಸೆಯನ್ನು ಮಾಡಬಹುದು. ಆದರೆ ಹುಳಿ ಹೆಚ್ಚು ಹಾಕಬೇಕು.
---------------------------------------.
8.ಮೆಂತೆ ಸಿಹಿ ದೋಸೆ
---------------------------------------
ಬೇಕಾಗುವ ಪದಾರ್ಥಗಳು
ಅಕ್ಕಿ :ಅರ್ಧ ಲೋಟ
ಮೆಂತೆ : ಒಂದು ಸಣ್ಣ ಚಮಚ
ತೆಂಗಿನ ತುರಿ :ಅರ್ಧ ಲೋಟ
ಏಲಕ್ಕಿ : 2
ಬೆಲ್ಲ :ಅರ್ಧ ಲೋಟ

ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಅಕ್ಕಿ ಮತ್ತು ಮೆಂತೆಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿ.
೨.ನೆನೆದ ಅಕ್ಕಿ, ಮೆಂತೆಯನ್ನು ಮೇಲೆ ಸೂಚಿಸಿದ ಉಳಿದ ವಸ್ತುಗಳ ಜತೆ ರುಬ್ಬಿ
೩.ದೋಸೆ ಕಾವಲಿಯ ಮೇಲೆ ತುಪ್ಪ ಸವರಿ ದೋಸೆ ಹೊಯ್ಯಿರಿ. ಭಾರೀ ರುಚಿಕರವಾದ ದೋಸೆ ಇದು.
--------------------------------------
9.ಗೋಧಿ -ಮೊಸರು ದೋಸೆ

-------------------------------
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು :೨ ಲೋಟ
ಮೊಸರು :ಅರ್ಧ ಲೋಟ
ಮೆಣಸಿನ ಹುಡಿ : ೨ ಚಮಚ
ಮೆಣಸಿನ ಹುಡಿ :ರುಚಿಗೆ ತಕ್ಕಷ್ಟು
ತುಪ್ಪ :ಎರಡು ಚಮಚ
ವಿಧಾನ : ಗೋಧಿ ಹಿಟ್ಟು , ಮೊಸರು ,ಮೆಣಸಿನ ಹುಡಿ ಮತ್ತು ಉಪ್ಪು ಇವುಗಳನ್ನು ಸರಿಯಾಗಿ ಕಲಸಿ. ಸ್ವಲ್ಪ ನೀರು ಹಾಕಿ, ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ
ಕಾವಲಿಯ ಮೇಲೆ ತುಪ್ಪ ಸವರಿ, ದೋಸೆ ಹೊಯ್ಯಿರಿ.-----------
10.ರಾಗಿ ದೋಸೆ
-----------

ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು: ೩ ಲೋಟ
ಅಕ್ಕಿ ಹಿಟ್ಟು: ಒಂದು ಲೋಟ
ಉಪ್ಪು:ಒಂದು ಲೋಟ
ಮೆಂತೆ: ಒಂದು ಚಮಚ

ಉಪ್ಪು:ರುಚಿಗೆ ತಕ್ಕಷ್ಟು

ವಿಧಾನ

ಉದ್ದು,ಮೆಂತೆಯನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿ,ರುಬ್ಬಿ.
ಇದಕ್ಕೆ ರಾಗಿ ಹಿಟ್ಟು,ಅಕ್ಕಿ ಹಿಟ್ಟು ಇವುಗಳನ್ನು ಸೇರಿಸಿ,ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಈ ಮಿಶ್ರಣವನ್ನು ಸುಮಾರು ಎಂಟು ಗಂಟೆಗಳ ಕಾಲ ಮುಚ್ಚಿಡಿ.
ಬಳಿಕ ಇದಕ್ಕೆ ಉಪ್ಪು ಸೇರಿಸಿ ಕಲಕಿ.

ಕಾವಲಿಯನ್ನು ಬಿಸಿ ಮಾಡಿ,ಸ್ವಲ್ಪ ಎಣ್ಣೆ ಹಾಕಿ ದೋಸೆ ಹೊಯ್ಯಿರಿ.
ಕಾವಲಿಯ ಮೇಲೆ ಮುಚ್ಚಳ ಇಟ್ಟು,ದೋಸೆಯನ್ನು ಸಣ್ಣ ಉರಿಯಲ್ಲಿ ಬೇಯಿಸಿ.

ರಾಗಿ ದೋಸೆ ತಯಾರು. ನಿಮ್ಮ ಇಷ್ಟದ ಚಟ್ನಿಯ ಜತೆ ಸವಿಯಲು ಇನ್ನೇಕೆ ತಡ !