Pages

Sunday, September 16, 2007

ಗಣೇಶ ಚತುರ್ಥಿ....

ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು..

ಚಿಕ್ಕಂದಿನಿಂದಲೂ ಗಣಪ ನನ್ನ ನಿತ್ಯ ಜೀವನದಲ್ಲಿ ಹಾಸುಹೊಕ್ಕಿಬಿಟ್ಟಿದ್ದಾನೆ.ಆತನ ಬಗ್ಗೆ ನಾನು ಕೇಳಿದ ಕಥೆಗಳು ನೂರಾರು..
ಮೊಡುತ್ತಿದ್ದ ಕಲ್ಪನೆಗಳು ಹಲವಾರು.
ತಲೆ ಕಡಿದ ಮೇಲೆ ಆನೆಯ ತಲೆಯನ್ನು ಹೇಗೆ ಜೋಡಿಸಿರಬಹುದು?ಪಾರ್ವತಿಯ ಮೈಯ ನೊರೆಯಿಂದ ಗಣಪ ಜೀವ ತಳೆದದ್ದು ಹೇಗೆ?
ಅಷ್ಟೆಲ್ಲಾ ತಿಂಡಿ ಒಟ್ಟಿಗೆ ತಿಂದರೆ ಅವನಿಗೆ ಭೇದಿಯಾಗುವುದಿಲ್ಲವೆ?ಹಾವನ್ನು ಹೊಟ್ಟೆಗೆ ಕಟ್ಟಿಕೊಂಡರೆ ಹೆದರಿಕೆಯಾಗುವುದಿಲ್ಲವೆ?
ಅವನ ಅಪ್ಪ ಅಮ್ಮ ಅಷ್ಟು ದೊಡ್ಡ ಪ್ರಾಣಿಗಳನ್ನು ವಾಹನವಾಗಿಸಿರುವಾಗ ಈತನೇಕೆ ಇಲಿಯಂತಹ ಸಣ್ಣ ಪ್ರಾಣಿಯನ್ನು ವಾಹನವಾಗಿಸಿದ?
ಹೀಗೆ ನನ್ನಲ್ಲಿ ಗರಿಗೆದರುತ್ತಿದ್ದ ಪ್ರಶ್ನೆಗಳಿಗೆಲ್ಲಾ ಅಪ್ಪ ಅಮ್ಮ ಹೇಳುತ್ತಿದ್ದ ಉತ್ತರ ಒಂದೇ"
ಗಣಪತಿ ದೇವರು..ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ’..ಆಗೆಲ್ಲಾ ನನಗೆ ನಾನು ದೇವರಾಗಬೇಕು ಅನ್ನುವ ಆಸೆ ಮೂಡುತ್ತಿತ್ತು.
.ನಾನೇ ದೇವರಾದರೆ home work ಯೆಲ್ಲಾ ಕೂಡಲೇ ಮಾಡಿ ಮುಗಿಸಬಹುದು.
ಶಾಲೆಗೆ ಅಷ್ಟೆಲ್ಲಾ ಪುಸ್ತಕ ಹೊತ್ತು ಹೋಗುವ ಅಗತ್ಯವಿಲ್ಲಾ..
ಹೆಚ್ಚೇಕೆ ಶಾಲೆಗೆ ಹೋಗಬೇಕಂತಲೇ ಇಲ್ಲ..ದೇವರಿಗೆ ವಿದ್ಯೆ ಎಲ್ಲಾ ಬರುತ್ತದೆ ಅಲ್ಲವೆ ?ಹಕ್ಕಿಯಂತೆ ಹಾರಬಹುದು ಇತ್ಯಾದಿ
ನನ್ನ ಕಲ್ಪನೆಗಳಿಗೆ ಮಿತಿಯೇ ಇರಲಿಲ್ಲ..
ಈಗೆಲ್ಲಾ ಅವುಗಳನ್ನು ನೆನೆದರೆ ನಗು ಬರುತ್ತದೆ!!
’ಗಣೇಶ ಬಂದ
ಕಾಯಿ ಕಡುಬು ತಿಂದ..
ಹೊಟ್ಟೆ ಬಿರಿಯೆ ತಿಂದ.

ಹೊಟ್ಟೆ ಭಾರ ಆಗ್ ಹೋಯ್ತು
ನಡೆಯಕ್ಕಾಗ್ದೆ ಹೋಯ್ತು
ಅಲ್ಲೇ ಒಂದು ಇಲಿ ಮರಿ ಸಂತೆಗೆ ಹೋಗ್ತಾ ಇತ್ತು..


ಡೊಳ್ಳು ಹೊಟ್ಟೆ ಗಣಪ
ಇಲಿಯ ಮೇಲೆ ಕೂತ
ಸುಮೆನ್ ಇರದೆ ಇಲಿಗೆ
ಕೊಟ್ಟ ಎರಡು ಲಾತ

ಇಲಿಗೆ ಕೋಪ ಬಂತು
ಕೆಳಕ್ಕೆಡವಿ ಹೋಯ್ತು
ಗಣಪನ ಹೊಟ್ಟೆ ಒಡೆದು ಕಡುಬು ಚೆಲ್ಲಿ ಹೋಯ್ತು

ಚೆಲ್ಲಿದ ಕಡುಬನು ಎತ್ತಿ ಹೊಟ್ಟೆಯೊಳಗೆ ಹಾಕ್ದ
ಅಲ್ಲೇ ಮಲಗಿದ ಹಾವನ್ನ ಹೊಟ್ಚೆ ಸುತ್ತ ಬಿಗಿದ

ಭಲೇ ಭಲೇ ಗಣಪ
ತಿಂಡಿ ಪೋತ ಠೊಣಪ
ತಿಂಡಿ ಕೊಡ್ತೀನಿ ನಿಂಗೆ
ಮನೆ ಹತ್ರ ಬಾಪ್ಪಾ"

ಇದು ನಾವು ಚಿಕ್ಕದಿರುವಾಗ ಶಾಲೆಯಲ್ಲಿ ಸುಮಧುರವಾಗಿ ( ? ) ಹಾಡುತ್ತಿದ್ದ ಹಾಡು.

ಅದಕ್ಕೆ ತಕ್ಕಂತೆ ನೃತ್ಯ್ವವಾಡುತ್ತಿದ್ದೆವು ಕೂಡಾ.
ಭಜನೆ ಕಾರ್ಯಕ್ರಮವಂತೂ ’ಗಜಮುಖನೆ ಗಣಪತಿಯೆ ನಿನಗೆ ವಂದನೆ ’ ಹಾಡಿನಿಂದಲೇ ಶುರುವಾಗುತ್ತಿತ್ತು.
ಅದನ್ನೇ ’ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ ..ಬಾಕಿ ಉಳಿದ ನಾಕಾಣೆ ನಾಳೆ ಕೊಡ್ತೆನೆ’ ಅಂತ ಅಣಕವಾಡುತ್ತಿದ್ದದ್ದೂ ಉಂಟು.
ನಾನಿದ್ದ ಹಾಸ್ಟೆಲ್ ಒಂದರಲ್ಲಿ ’ಶರಣು ಶರಣಯ್ಯ ಶರಣು ಬೆನಕಾ.." ಅಂತ ಬೆಳಬೆಳಗ್ಗೆ ನಿದ್ದೆ ಗಣ್ಣಿನಲ್ಲಿರುವಾಗಲೇ ’
ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಡುತ್ತಿದ್ದದ್ದು ಒಂದು ನೆನಪು..


ನನ್ನ ಕಲ್ಪನೆಗಳಿಗೆ ಬಣ್ಣ ಹಚ್ಚುತ್ತಿದ್ದ ಗಣಪನ ಹಬ್ಬ ಚೌತಿಯಂತೂ ನನಗೆ ಬಲು ಪ್ರಿಯವಾದ ಹಬ್ಬ.
ಮನದಾಳದಲ್ಲಿ ಹುದುಗಿರುವ ಗಣಪ ಮೂರ್ತ ರೂಪ ಪಡೆದು ಬರುತ್ತಾನಲ್ಲವೆ ?
ಅದೂ ವರ್ಷಕ್ಕೆ ಒಂದು ಬಾರಿ ಮಾತ್ರ.ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳುವುದುಂಟೇ?
ಗಣಪನ ಹಬ್ಬದ ಆಚರಣೆಯಂತೂ ಸುಮಾರು ಒಂದು ತಿಂಗಳಿನಿಂದಲೇ ಆರಂಭವಾಗುತ್ತಿತ್ತು.
ಕುಂಬಾರನ ಮನೆಯಿಂದ ಜೇಡಿ ಮಣ್ಣನ್ನು ತರಲಾಗುತ್ತಿತ್ತು.ಅಪ್ಪ ಗಣಪನ ಮೂರ್ತಿ ರಚನೆಯನ್ನು ಶುರು ಮಾಡುತ್ತಿದ್ದರು.
ಚಿಕ್ಕಪ್ಪ ಅದನ್ನು ಮುಂದುವರಿಸುತ್ತಿದ್ದರು.
ನಾನಂತೂ ತದೇಕ ಚಿತ್ತಳಾಗಿ ದೇವರನ್ನು ಮಾಡುವ ಈ ಕಾರ್ಯವನ್ನು ವೀಕ್ಷಿಸುತ್ತಿದ್ದೆ.
ಮಣ್ಣಿನ ಮುದ್ದೆ ದೇವರಾಗುವುದೇನು ಸಣ್ಣ ವಿಷಯವೆ?
ದೇವರ ಕಿರೀಟ ತಯಾರಿಯಂತೂ ಅಬ್ಬಾ ಎಂಥಹ ಸೊಬಗು..
ಬಣ್ಣ ಬಣ್ಣದ ಟಿಕಳಿಗಳೆಲ್ಲವೂ ಮೇಣದ ಸಹಾಯದಿಂದ ದೇವರ ಕಿರೀಟದಲ್ಲಿ ಸ್ಠಾನ ಪಡೆಯುತ್ತಿದ್ದವು.
ಗಣಪನಷ್ಟೇ ಅವನ ಇಲಿಯ ಬಗ್ಗೆಯೂ ನನಗೆ ಅತೀವ ಕೌತುಕ.
ಗಣಪನ ಹಾವಿನ ಬಗ್ಗೆ ಒಂಥರಾ ಭಯ ಕೂಡ. ಆದರೆ ಗಣಪ ಅದನ್ನು ಗಟ್ಟಿ ಕಟ್ಟಿಕೊಂಡಿದ್ದಾನಲ್ಲವೆ ?
ಹಾಗಾಗಿ ಹಾವು ಏನೂ ಮಾಡದು ಎಂಬ ನಂಬಿಕೆ !!

ಗಣಪನ್ನು ಪೈಂಟು,ಟಿಕಳಿಗಳನ್ನೆಲ್ಲಾ ಅಂಟಿಸಿ, ಅಲಂಕರಿಸಿದ ಮೇಲೆ, ಅವನನ್ನು ಇಡುವ ಮಂಟಪವನ್ನು ಅಲಂಕರಿಸಬೇಡವೆ?
ಚೌತಿ ಮಂಟಪವನ್ನು ಅಟ್ಟದಿಂದ ಇಳಿಸಿ,ಅದಕ್ಕೆ ಬಣ್ಣಬಣ್ಣದ ಕಾಗದವನು ಅಂಟಿಸಿ,
ಬಗೆಬಗೆಯ ಹೂಮಾಲೆಗಳನ್ನು ಹಾಕಿದರೂ ಇನ್ನಷ್ಟು ಚಂದ ಮಾಡಬೇಕೆಂಬ ಹೆಬ್ಬಯಕೆ.
ವರ್ಷಕ್ಕೊಮ್ಮೆ ಭುವಿಗೆ ಬರುವ ಗಣಪನಿಗೆಂದೇ ಮೋದಕ, ಪಂಚಕಚ್ಚಾಯ, ಉಂಡೆಗಳು,ಹೋಳಿಗೆ,ಜಿಲೇಬಿ..
ಎಷ್ಟೊಂದು ಬಗೆಯ ಭಕ್ಷ್ಯ ಭೋಜ್ಯಗಳು!!
ನೈವೇದ್ಯವಾಗುವ ತನಕ ಅವುಗಳನ್ನು ಮುಟ್ಟಬಾರದೆಂದು ಹಿರಿಯರ ಕಟ್ಟಪ್ಪಣೆಯಿರುತ್ತಿದ್ದರಿಂದ ,
ಅಲ್ಲಿಯ ತನಕ ಆಸೆಯನ್ನು ಹಿಡಿದಿಟ್ಟುಕೊಳ್ಳುತ್ತಿದ್ದೆವು.

ಮನೆಯಲ್ಲ್ಲಿ ಪೂಜೆ ಬಳಿಕ ಊಟವಾದ ಮೇಲೆ , ಬೇರೆಯವರ ಮನೆಗಳಿಗೂ ತೆರಳಿ ಅಲ್ಲಿ ಕೂರಿಸಿರುವ
ಗಣಪನನ್ನು ನೋಡುವ ತವಕ.ಅಲ್ಲೂ ಪುನ: ಪ್ರಸಾದ ಭಕ್ಷಿಸುವ ಕಾರ್ಯಕ್ರಮವಿರುತ್ತ್ತಿದ್ದದ್ದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!!

ಎರಡು ದಿನ ಗಣಪನಿಗೆ ಭರ್ಜರಿ ಪೂಜೆ ನಡೆದ ಬಳಿಕ,
ಆತನನ್ನು ಪುನಹ ಆತನ ಮನೆಗೆ ಕಳುಹಿಸುವಾಗಲಂತೂ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದ್ದವ್ವು.
ಮನೆಯಿಂದ ನದಿಯ ತನಕ ಆತನನ್ನು ಕರೆದೊಯ್ಯುವಾಗ ಶಂಖ ,ಜಾಗಟೆಗಳ ಸದ್ದಿನೊಂದಿಗೆ ಎಲ್ಲರೂ ಬೀಳ್ಕೊಡಲು ಹೋಗುತ್ತಿದ್ದೆವು.
’ಗಣಪತಿ ಬಪ್ಪಾ ಮೋರಯಾ, ಪುಡ್ಚಾ ವರ್ಶಾ ಲೊಕರಿ ಯಾ ’
ಎಂದು ಹೇಳುತ್ತಾ ಆತನನ್ನು ನದಿಯಲ್ಲಿ ವಿಸರ್ಜಿಸಲಾಗುತ್ತಿತ್ತು.ನದಿಯ ನೀರನ್ನೆಲ್ಲಾ ತಲೆಯ ಮೇಲೆ ಪ್ರೋಕ್ಷಿಸಿ,
ಭಾರವಾದ ಹೃದಯಿಂದ ಮನೆಗೆ ವಾಪಸಾಗುತ್ತಿದ್ದೆವು.

ಸಾರ್ವಜನಿಕ ಗಣಪನ ಹಬ್ಬಕ್ಕೂ ಈ ನಡುವೆ ಹೋಗಿ ಬರುತ್ತಿದ್ದೆ.
ಅಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಾಗಲಂತೂ ಹಬ್ಬದ ಸಂಭ್ರಮದ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದಂತೆ!!

ಆಹಾ ಎಂತಹ ಸಂಭ್ರಮದ ದಿನಗಳವು..ಈ ಸಲವೂ ಚೌತಿ ಬಂದಿದೆ.
ಆಫೀಸಿಗೆ ರಜೆಯೂ ಇದೆ...ಆದರೆ project deadline ಮುಗಿಸಲು
ನಾನು ಅಫೀಸಿನ ಕೆಲಸದಲ್ಲಿ ತಲ್ಲೀನವಾಗಬೇಕಾದದ್ದು ಅನಿವಾರ್ಯವಾಗಿದೆ.
ಹಾಗಾಗಿ ಪ್ರಥಮ ಪೂಜಿತನಿಗೆ ಮನದಲ್ಲೇ ವಂದಿಸಿ,ಅಂಗಡಿಯಿಂದ ತಂದ ಬೇಸನ್ ಲಾಡು ಮೆಲ್ಲಬೇಕಾದದ್ದು ಮಾತ್ರ ವಿಪರ್ಯಾಸ!!