Pages

Tuesday, March 27, 2007

ಹೋಳಿಯ ರಂಗು ...

ಮುಸುಕು ಕವಿದ ಬಾಳಿನಲಿ
ಬಣ್ಣ ಬಣ್ಣದ ಓಕುಳಿ
ರಂಗು ರಂಗಿನ ಹೊಸ ಲೋಕ
ಸೃಷ್ಟಿಸುತಿದೆ ಈ ಹೋಳಿ||

ಹೋಲಿಕಾಳ ದಹನವಾಯ್ತು
ಪಾರಾದ ಪ್ರಹ್ಲಾದ ಮೃತ್ಯುವಿನಿಂದ
ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ನೆನಪಿನ
ಜತೆ ಹೋಳಿ ತರುತಿದೆ ಆನಂದ||

ಕೆಲವೆಡೆ ಸಂಭ್ರಮದ ಹೋಳಿ
ಕಾಮದಹನದ ಸಂಕೇತ
ಮನದೊಳಗಾಗಲಿ ದುರಾಸೆಯ ಭಸ್ಮ
ಇರಲಿ ಆಸೆ ಪರಿಮಿತ||

ಒಂದೆಡೆ ಉಗ್ರರ ದಾಳಿ
ಮತ್ತೊಂದೆಡೆ ಗಲಭೆ ಗೊಂದಲ
ಏತಕೆ ಇವೆಲ್ಲ? ಕೊಂಚ ತಾಳಿ..
ವಿಶ್ವ ಮೈತ್ರಿಯೆ ಹೊಳಿಯ ಹಂಬಲ||

ದ್ವೇಷ ಅಸೂಯೆಯ ಬಣ್ಣಗಳು
ಬೇಕೆ ನಮ್ಮ ಬಾಳಿಗೆ?
ಪ್ರೀತಿ, ಮಮತೆಯ ರಂಗು ಇದ್ದರೆ
ಸಾಕು, ಪ್ರತಿ ಗಳಿಗೆ||

Monday, March 26, 2007

ಬಾಹುಬಲಿಗೆ ಪ್ರಶ್ನೆ


ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಬರೆದ ಕವನ..


ಗೊಮ್ಮಟ ದೇವಾ
ಗೊಮ್ಮಟ ದೇವಾ
ಏತಕೆ ನಿಂತಿದ್ದಿ?
ಅಷ್ಟು ಹೊತ್ತಿಂದ ನಿಂತಿದ್ರೂನೂ
ಮೌನ ವಹಿಸಿದ್ದಿ


ಅಲ್ಲಿ ಇಲ್ಲಿ ಗಲಭೆ ಗೊಂದಲ
ನೋಡ್ತಾ ಇದ್ದೀಯಲ್ವಾ?
ಮನಸ್ಸಿಗೆ ತುಂಬಾ ಬೇಜಾರಾಗಿ
ಮಾತಾಡ್ತಾ ಇಲ್ವಾ?


ಉರಿಬಿಸಿಲಿಗೆ ನಿಂಗೆ
ಸೆಕೆ ಆಗಲ್ವಾ?
ಥಂಡಿ ಹವೆಗೆ ನೀ
ನಡುಗಿ ಹೋಗಲ್ವಾ?

ಅಂಜದೆ ಅಳುಕದೆ ಬದುಕ್ಬೇಕಂತ
ಸಾರ್‍ತಾ ಇದ್ದೀಯಾ?
ತ್ಯಾಗದ ಮಹಿಮೆಯ ಜಗಕೆ
ನೀನು ತೋರಿಸ್ತಿದ್ದೀಯ?


ಇಲ್ಲಿ ಎಲ್ಲಾ ಕಡೆನೂ ಇದೆ
ಭಾರೀ ಕಾಂಪಿಟಿಶನ್ನು
ನಾನೇ ಗೆದ್ದೇ ಗೆಲ್ಬೇಕಂತ
ಕಾಡ್ತಾ ಇರತ್ತೆ ಮನವನ್ನು||

ರಾಜ್ಯ ಸಿಕ್ರೂ ಬೇಡ ಅಂತ
ನೀನೇ ಅಂದ್ಯಂತೆ
ಗೆದ್ರೂ ಕೂಡ ನಿಂಗೆ
ಏನೂ ಬೇಡ್ವಂತೆ||

ಮಾಡ್ತಿದ್ದಾರಂತೆ ನಿಂಗೆ
ಮಸ್ತಕಾಭಿಷೇಕ
ಬರ್ತೀನಿ ನಿನ್ನ ನೋಡಕೆ
ನಂಗಿದೆ ಭಾರೀ ತವಕ||

ನೀ ಎಲ್ಲಾದ್ರೂ ಮೌನ ಬಿಟ್ರೆ
ಕೇಳ್ಬೇಕು ನಿಂಗೆ ಕ್ವೊಶ್ಚನ್ನು
ನಗ್ ನಗ್ತಾ ನೀ ಇರ್ತಿ ಹೇಗೆ
ಎಲ್ಲೆಡೆ ತುಂಬಿದ್ರೂ ಟೆನ್ಶಶನ್ನು||

Sunday, March 11, 2007

ಸುಧಾಳ ಸುಧೆ

ಬಗೆ ಬಗೆ ಲೇಖನಗಳ
ಸರಮಾಲೆ ಧರಿಸುತ್ತ
ವರ್ಣಮಯ ಚಿತ್ರಗಳ
ವಸ್ತ್ರ ಹೊದೆಯುತ್ತ
ಈ ಚೆಲುವೆ 'ಜ್ಞಾನಸುಧೆ' ಹರಿಸುವಳು||

ಟೀಕೆ ಟಿಪ್ಪಣಿಗಳಿಗಾಗಿ
'ಸಮುದ್ರಮಥನ'ಗೈಯ್ಯುತ್ತ
ನಕ್ಕು ಹಗುರಾಗಲು
'ನಗೆ ಹೊನಲು'ಸೂಸುತ್ತ
ಈ ಚೆಲುವೆ ಮಿನುಗುತಿಹಳು||

ಪುಟಾಣಿಗಳ ಕುಣಿದಾಟಕ್ಕೆ
'ಎಳೆಯರ ಅಂಗಳ' ತೋರಿಸುತ್ತ
ಮುಂದೇನಾದೀತೆಂಬ ಕಾತರಕೆ
'ಭವಿಷ್ಯವಾಣಿ' ನುಡಿಯುತ್ತ
ಈ ಚೆಲುವೆ ನಲಿಯುತಿಹಳು||

ಸರ್ವರ ಸುಖವನು ಬಯಸಿ
'ಸುಖೀಭವ' ಎಂದು ಪಿಸುಗುಟ್ಟುತ್ತ
ಕೊಂಚ ವಯ್ಯಾರದ ಮಾತುಗಳ
'ಲಘುಬಿಗು'ವಿನಲಿ ಉಲಿಯುತ್ತ
ಈ ಚೆಲುವೆ ಬೆಳಗುತಿಹಳು||

ನೊಂದ ಮನದ ಸಾಂತ್ವನಕೆ
'ಆಪ್ತ ಸಲಹೆ'ನೀಡುತ್ತ
ತರ್ಲೆ ಪ್ರಶ್ನೆಗಳಿಗೆ ಉತ್ತರಿಸುವಳು
'ನೀವು ಕೇಳಿದಿರಿ'ಅನ್ನುತ್ತ
ಈ ಚೆಲುವೆ ನಗುತಿಹಳು||


ಟಿ ವಿ ಧಾರಾವಾಹಿಗಳ ವಿಮರ್ಶೆ
'ಜಾಣ ಪೆಟ್ಟಿಗೆ'ಯಿಂದ ನೀಡುತ್ತ
ಹತ್ತು ಹಲವು ಸಮಾಚಾರ
'ಸುದ್ದಿ ಸ್ವಾರಸ್ಯ' ಹೇಳುತ್ತ
ಈ ಚೆಲುವೆ ಓಡಾಡುತಿಹಳು||

ಇದೆಯೆ ನಿಮಗೆ 'ಪುಸ್ತಕ ಪ್ರೀತಿ'
ಎಂದು ಪ್ರಶ್ನಿಸುತ್ತ
ಬಣ್ಣಬಣ್ಣದ 'ಚಿತ್ರಲೋಕ'ದ
ರಂಗು ಚೆಲ್ಲುತ್ತ
ಈ ಚೆಲುವೆ ಬಣ್ಣದ ಓಕುಳಿಯಾಡುತಿಹಳು||


ಪುಟ ಸಂಖ್ಯೆ ೨೪, ಸುಧಾ ವಾರ ಪತ್ರಿಕೆ ,೧೩,ಎಪ್ರಿಲ್ ,೨೦೦೬
'ನಿಮ್ಮ ಪುಟ' ದಲ್ಲಿ ಪ್ರಕಟವಾಗಿದೆ.

Saturday, March 10, 2007

ಆವರಣ


ಸುಳ್ಳು ಕಂತೆಗಳ ಮಟ್ಟ ಹಾಕುತಿದೆ
ಈ ಹೊತ್ತಗೆಯ ಪ್ರತಿ ಕಣ
ದೂರ ಸರಿಸಿದೆ ನಮ್ಮ ಚಿತ್ತಭಿತ್ತಿಗೆ
ಕವಿದಂತಹ ಗ್ರಹಣ ||

ಇತಿಹಾಸದ ನೈಜ ಚಿತ್ರಣ
ನೀಡಿಹುದು ಆವರಣ
ಧರ್ಮಾಂಧತೆಯ ಪರಿಮಾಣ
ತಿಳಿಸಲಿಲ್ಲ ಶಾಲಾ ಶಿಕ್ಷಣ||

ಒಂದೇ ತಿಂಗಳಲಿ ಕಂಡಿಹುದು
ನಾಲ್ಕನೇ ಮುದ್ರಣ
ಸಾಹಿತ್ಯ ಲೋಕದ ಭೀಮಕಾಯನ
ಪರಿಶ್ರಮ ಇದಕೆ ಕಾರಣ||

ಒಳಗಡೆ ತುಂಬಿಹುದು
ಸತ್ವಭರಿತ ಹೂರಣ
ಓದುಗರಿಗೆ ನೀಡುತಿಹುದು
ಭರ್ಜರಿ ರಸದೌತಣ||

ಕೃತಿಯ ಅಂಚು ಅಂಚಿಗೂ ಇಹುದು
ಸತ್ಯ ಮತ್ತು ಸೌಂದರ್ಯದ ತೋರಣ
ಅದಕಾಗಿಯೇ ಕರ್ತೃ ಗೈದಿಹರು
ಸತತ ಅನ್ವೇಶಣ||

Friday, March 9, 2007

ಕೇಪ್ ಟೌನ್..ಪ್ರವಾಸಾನುಭವ
ಚಿಕ್ಕಂದಿನಿಂದಲೂ ನನಗೆ ಆಫ್ರಿಕಾದ ಬಗೆಗೆ ಅವ್ಯಕ್ತ ಕುತೂಹಲ. 'ಕಗ್ಗತ್ತಲೆಯ ಖಂಡ'ವೆಂದು ಸಮಾಜ ಅಧ್ಯಾಪಕರು ವಿವರಿಸುವಾಗ "ಅಯ್ಯೋ ಪಾಪ, ಅಲ್ಲಿ ಕರೆಂಟು ಇಲ್ಲವೇನೋ!! " ಎಂದು ಅನಿಸುತ್ತಿತ್ತು. ಭಾರತವನ್ನು ಹುಡುಕ ಹೊರಟ ಸಾಹಸ ಯಾತ್ರಿಗಳು ಅದಕ್ಕೆ ಮುನ್ನ ತಲುಪಿದ 'ಕೇಪ್ ಆಫ್ ಗುಡ್ ಹೋಪ್'ಬಗ್ಗೆ ಓದುವಾಗ ರೋಮಾಂಚನಗೊಳ್ಳುತ್ತಿದ್ದೆ.ಆಫ್ರಿಕಾ ನನ್ನ ಪಾಲಿಗೆ ಒಂದು ರೀತಿಯನಿಗೂಢ ವಿಸ್ಮಯವಾಗಿತ್ತು.

ಕಂಪೆನಿ ಕೆಲಸದ ನಿಮಿತ್ತ ನನಗೆ ದಕ್ಷಿಣ ಆಫ್ರಿಕಾವನ್ನು ಸಂದರ್ಶಿಸುವ ಅವಕಾಶ ಒದಗಿ ಬಂದಿತು."ಅಲ್ಲಿ ಹೋದರೆ ಅಲ್ಲಿಯವರಂತೆ ಕರ್ರಗಾಗಿ ಹೋಗುತ್ತೀಯಾ" ಎಂದ ಮಿತ್ರರ ಮಾತುಗಳಿಗೆ ನಕ್ಕು ತಲೆಯಾಡಿಸಿದೆ. "ಹೋದೆಡೆಯಲ್ಲೆಲ್ಲಾ ಜಾಗ್ರತೆ "ಎಂದು ಎಚ್ಚರಿಸಿದವರು ಹಲವರು.ಅಂತೂ ಕಡೆಗೆ ವಿಮಾನವೇರಿದೆ.ಬೆಂಗಳೂರು-ಮುಂಬೈ, ಮುಂಬೈ-ಜೊಹಾನ್ಸ್ ಬರ್ಗ್, ಜೊಹಾನ್ಸ್ ಬರ್ಗ್ - ಕೇಪ್ ಟೌನ್- ಹೀಗೆ ಮೂರು ವಿಮಾನಗಳ ಮೂಲಕ ಸುಮಾರು ಹದಿಮೂರು ಗಂಟೆಗಳ ಕಾಲ ಪಯಣಿಸಿ, ಕೇಪ್ ಟೌನ್ ತಲುಪಿದೆ.ಕಟ್ಟಾ ಸಸ್ಯಾಹಾರಿಯಾದ ನನ್ನ ಬ್ಯಾಗಿನಲ್ಲಿ ಅಕ್ಕಿ, ಬೇಳೆ,ಜೀರಿಗೆ, ಎಂ.ಟಿ. ಆರ್. ಪುಡಿಗಳು ತುಂಬಿದ್ದವು.

ದಕ್ಷಿಣ ಆಫ್ರಿಕಾ, ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿ ಇರುವ ದೇಶ.ಭಾರತಕ್ಕೂ ಅಲ್ಲಿಗೂ ಮೂ ರುವರೆ ಗಂಟೆಗಳ ಕಾಲ ವ್ಯತ್ಯಾಸ.ಅಲ್ಲಿಗೆ ತೆರಳಿದ ಮೊದಲ ವಾರದಲ್ಲಿ ಬೆಳಗ್ಗೆ ಐದು ಗಂಟೆಗೇ ವಿಪರೀತ ಹಸಿವಾಗುತ್ತಿತ್ತು.ನನ್ನ ಶರೀರದ ಗಡಿಯಾರ ದಕ್ಷಿಣ ಆಫ್ರಿಕಾದ ಕಾಲಮಾನಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಯಿತು.

ಭಾರತಕ್ಕೆ ಜಲಮಾರ್ಗ ಕಂಡುಹಿಡಿಯುವ ಪ್ರಯತ್ನದಲ್ಲಿ ಬಾರ್ತಾಲೋಮ್ಯು ಡಯಾಸನು ೧೪೮೮ರಲ್ಲಿ ದಕ್ಷಿಣ ಆಫ್ರಿಕಾದ ತುದಿಯನ್ನು ತಲುಪಿದನು.ಅಲ್ಲಿಯ ಸಮುದ್ರ ಕಿನಾರೆಯಲ್ಲಿ ಬಡಿಯುವ ಅಬ್ಬರದ ಅಲೆಗಳನ್ನು ಕಂಡು, ಅದನ್ನು 'ಕೇಪ್ ಆಫ್ ಸ್ಟೊರ್ಮ್ಸ್' ಎಂದು ಕರೆದನು. ಮುಂದೆ ೧೬೫೨ ರಲ್ಲಿ ಡಚ್ಚರು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಎರಡನೇ ಜಾನ್ ಇದನ್ನು ಕೇಪ್ ಆಫ್ ಗುಡ್ ಹೋಪ್ ಎಂದು ಕರೆದನು.ಇಲ್ಲಿ ವ್ಯಾಪಾರ ವ್ಯವಹಾರಗಳಿಗೆ ಸರಬರಾಜು ಕೇಂದ್ರವೂ ಸ್ಥಾಪಿತವಾಯಿತು.ಇಲ್ಲಿ ಬೆಳೆದ ಪಟ್ಟಣವೇ ಕ್ರಮೇಣ 'ಕೇಪ್ ಟೌನ್' ಎಂಬ ಹೆಸರನ್ನು ಪಡೆಯಿತು.


ಅಟ್ಲಾಂಟಿಕ್ ಸಾಗರದ ಅಬ್ಬರ, ಹಿಂದೂ ಮಹಾಸಾಗರದ ಶಾಂತ ಸ್ವಭಾವ ,ಪರ್ವತ ಶ್ರೇಣಿಯ ದಿಟ್ಟತನ, ಗಿಡಮರ ಬಳ್ಳಿಗಳ ತುಂಟತನ ಇವುಗಳೆಡೆಯಲ್ಲಿ ತಲೆಯೆತ್ತಿ ನಿಂತಿರುವ ಪಟ್ಟಣವೇ ಕೇಪ್ ಟೌನ್. ಇದು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದ್ದು, ವಿಶ್ವದ ಹತ್ತು ಪ್ರಮುಖ ಪ್ರೇಕ್ಷಣೀಯ ಸ್ಠಳಗಳಲ್ಲಿ ಒಂದೆಂದು ಖ್ಯಾತವಾಗಿದೆ. ಇಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ(ಇದು ಮೆಡಿಟರೇನಿಯನ್ ವಾಯುಗುಣದ ಲಕ್ಷಣ), ಗಿಡಮರಗಳು ಬೋಳಾಗುತ್ತವೆ. ವಸಂತನ ಆಗಮನವಾಗುತ್ತಿದ್ದಂತೆ ಅವುಗಳಿಗೆ ನವಚೈತನ್ಯ ಬಂದು ಚಿಗುರತೊಡಗುತ್ತವೆ.


ಕೇಪ್ ಟೌನ್ ನ ಪ್ರತಿಯೊಂದು ಪ್ರದೇಶವೂ ಸೌಂದರ್ಯದಲ್ಲಿ ಒಂದಕ್ಕಿಂತ ಇನ್ನೊಂದು ಮಿಗಿಲು.ಸಮುದ್ರ ಕಿನಾರೆಗಳು ,ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಕುಲ, ಗಿರಿ ಶಿಖರಗಳ ಸಾಲು ,ಮುಗಿಲಿನ ಸರಮಾಲೆ , ಶಿಸ್ತುಬದ್ಧ ಜನ ಜೀವನ ಇವೆಲ್ಲವೂ ನಮ್ಮ ಕಣ್ಣ ಮುಂದೆ ಹೊಸದೊಂದು ಲೋಕವನ್ನು ಸೃಷ್ಟಿಸುತ್ತವೆ.ಟೇಬಲ್ ಮೌಂಟೇನ್
: ಇದು ಕೇಪ್ ಟೌನ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಇದು ಸುಮಾರು ೪೪೩ ಮಿಲಿಯನ್ ವರ್ಷಗಳ ಹಿಂದೆ ರಚಿತವಾದ ಶಿಲೆಯೆಂದು ಪರಿಗಣಿಸಲಾಗಿದೆ.ಇದು ೧೦೮೬ ಮೀಟರ್ ಎತ್ತರವಾಗಿದ್ದು, ಚಪ್ಪಟೆಯಾದ ತುದಿಯನ್ನು ಹೊಂದಿದೆ. ಆದ ಕಾರಣವೇ ಇದರ ಹೆಸರು ಟೇಬಲ್ ಮೌಂಟೇನ್ ಎಂದಾಗಿದೆ. ಮೋಡಗಳ ಸಾಲು ಇದನ್ನು ಸುತ್ತುವರಿದಾಗ ಮೇಜಿನ ಮೇಲೆ ಶ್ವೇತವರ್ಣದ ವಸ್ತ್ರವನ್ನು ಹಾಸಿದಂತೆ ಭಾಸವಾಗುತ್ತದೆ.ಇಲ್ಲಿ ೧೪೭೦ ಕ್ಕೂ ಹೆಚ್ಚಿನ ಸಸ್ಯಪ್ರಭೇದಗಳನ್ನು ಗುರುತಿಸಲಾಗಿದ್ದು,ಇವುಗಳಲ್ಲಿ ಹೆಚ್ಚಿನವು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಕಂಡು ಬರುವುದಿಲ್ಲ.ಇದನ್ನು ಏರಲು 'ಕೇಬಲ್ ಕಾರು'ಗಳ ವ್ಯವಸ್ಥೆ ಮಾಡಿದ್ದಾರೆ.ಹಗ್ಗದ ಹಾದಿಯಲ್ಲಿ ನಿಧಾನವಾಗಿ ಏರುವ ಕೇಬಲ್ ಕಾರಿನೊಳಗೆ ಕುಳಿತು ,ಸುತ್ತಮುತ್ತಲಿನ ಗಿರಿ, ಕಾನನ, ಸಾಗರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗುವುದು ಒಂದು ರಮ್ಯ ಅನುಭವ. ಸುತ್ತಮುತ್ತಲಿನ ಪ್ರಕೃತಿಮಾತೆಯ ಸಿರಿಯನ್ನು ನೋಡಲು ಕಂಗಳೆರಡು ಸಾಲವು. ಪರ್ವತದ ತುದಿಯಲ್ಲಿ ಹೋಟೆಲ್ ಮತ್ತು ಅಂಗಡಿಗಳಿವೆ . ಅಲ್ಲಿ ಕುಳಿತು,ಸುತ್ತಲಿನ ಪ್ರಕೃತಿಯನ್ನು ಸವಿಯುವುದು ಒಂದು ಅವಿಸ್ಮರಣೀಯ ಅನುಭವ.

ಕೇಪ್ ಪಾಯಿಂಟ್:
ಇದು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಸಂಗಮ ತಾಣ.ಭೂಮಿ ತಾಯಿಯ ರುದ್ರ ರಮಣೀಯ ದೃಶ್ಯವನ್ನು ಇಲ್ಲಿ ಕಾಣಬಹುದು. ಎತ್ತರದ ಶಿಖರದ ಮೇಲಿಂದ ಕೆಳಗೆ ಬಗ್ಗಿ ನೋಡಿದಾಗ ಸಾಗರಗಳ ಸಂಗಮ ಅತ್ಯದ್ಭುತವಾಗಿ ಗೋಚರವಾಗುತ್ತದೆ.ನಾನು ಇದನ್ನು ಸಂದರ್ಶಿದ ದಿನ ಒಂದೆಡೆ ಸಂಪೂರ್ಣವಾಗಿ ಮೋಡ ಆವರಿಸಿತ್ತು. ಅದು ನನಗೆ ಪೌರಾಣಿಕ ಚಲನಚಿತ್ರಗಳ ಸ್ವರ್ಗದ ಸೆಟ್ಟಿಂಗ್ ನಂತೆ ಅನಿಸಿತು. ಚಲಿಸುವ ಮೋಡಗಳು ತಮ್ಮ ಸೌಂದರ್ಯದಿಂದ ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿದ್ದವು.


ರೋಬಿನ್ ಐಲಾಂಡ್ : ಕೇಪ್ ಟೌನ್ ನಿಂದ ೧೨ ಕಿ.ಮೀ. ಇರುವ ದ್ವೀಪ 'ರೊಬಿನ್ ಐಲಾಂಡ್'.೧೮೩೬ ರಿಂದ ೧೯೩೧ ರವರೆಗೆ ಇದನ್ನು ಕುಷ್ಟ ರೋಗಿಗಳ ನೆಲೆಯಾಗಿ ಬಳಸಲಾಯಿತು. ಇಪ್ಪತ್ತನೇ ಶತಮಾನದಲ್ಲಿ ಇಲ್ಲಿ ವರ್ಣಭೇದ ವಿರೋಧಿ ಚಳುವಳಿಯ ನಾಯಕರನ್ನು ಸೆರೆಯಲ್ಲಿಟ್ಟಿದ್ದರು.


ನೆಲ್ಸನ್ ಮಂಡೇಲಾ ತಮ್ಮ ಸುದೀರ್ಘ ೨೭ ವರ್ಷಗಳ ಜೈಲುವಾಸವನ್ನು ಅನುಭವಿಸಿದ್ದು ಇಲ್ಲಿಯೇ. ಮೂಲಭೂತ ಸೌಕರ್ಯಗಳೂ ಇಲ್ಲದ ಆ ಸೆರೆಮನೆಯಲ್ಲಿ ಅವರು ಹೇಗೆ ಕಾಲ ಕಳೆದಿರಬಹುದೆಂಬ ಪ್ರಶ್ನೆ ಮನವನ್ನು ಕಾಡಿತು.ನಮ್ಮನ್ನು ಅಲ್ಲಿಗೆ ಕರೆದೊಯ್ದ ದೋಣಿ ವಾಪಾಸು ಬರುವಾಗ ,ಎಲ್ಲರ ಮನದಾಳದಲ್ಲಿ ವಿಷಾದದ ಅಲೆಗಳು ಅಪ್ಪಳಿಸುತ್ತಿದ್ದವು.ಶರೀರದ ಬಾಹ್ಯವರ್ಣ ಮನುಕುಲದಲ್ಲಿ ಎಂತೆಂತಹ ಸಮಸ್ಯೆಗಳನ್ನು ಹುಟ್ಟು ಹಾಕಿತು ಎಂದು ಯೋಚಿಸಿದೆ.


ಕಾನ್ಸ್ಟನ್ಶಿಯಾ :
ಕೇಪ್ ಟೌನ್ ಉತ್ಕೃಷ್ಟ ಗುಣಮಟ್ಟದ ವೈನ್ ತಯಾರಿಕೆಗೆ ಬಹಳ ಖ್ಯಾತಿ ಪಡೆದಿದೆ.ಎಕರೆಗಟ್ಟಲೆ ಹರಡಿರುವ ದ್ರಾಕ್ಷಿ ತೋಟಗಳು ಪ್ರವಾಸೋದ್ಯಮದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. 'ವೈನ್ ಟೂರ್' ವೈನ್ ತಯಾರಿಸುವ ,ಶೇಖರಿಸುವ ಮತ್ತು ಅದನ್ನು ಸವಿಯುವ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ನೀಡುತ್ತದೆ.ಬಗೆಬಗೆಯ ವೈನ್ ಗಳು ಖರೀದಿಗೆ ಲಭ್ಯವಿವೆ.ಕಾನ್ಸ್ಟನ್ಶಿಯಾ ಇಂತಹ ಒಂದು ವೈನ್ ಉದ್ಯಮದ ಹೆಸರು.


ಕ್ರಿಶ್ಟನ್ ಬೊಷ್:
ಇದು ದಕ್ಷಿಣ ಆಫ್ರಿಕಾದ ಒಂದು ಪ್ರಮುಖ ಸಸ್ಯೋದ್ಯಾನ(ಬೊಟಾನಿಕಲ್ ಗಾರ್ಡನ್). ದಕ್ಷಿಣ ಆಫ್ರಿಕಾದ ವಿವಿಧ ಸಸ್ಯರಾಶಿಯನ್ನು ಇಲ್ಲಿ ಕಲೆ ಹಾಕಿದ್ದಾರೆ.ಸುಮಾರು ೫೨೮ ಎಕರೆ ಪ್ರದೇಶದಲ್ಲಿ ಹರಡಿರುವ ಅಪೂರ್ವ ಸಸ್ಯ ಸಂಪತ್ತು ಕಣ್ಣಿಗೆ ಹಬ್ಬ.


ಕೇಪ್ ಟೌನ್ ನಲ್ಲಿ ಪ್ರವಾಸೋದ್ಯಮವನ್ನು ಎಷ್ಟು ವ್ಯವಸ್ಥಿತವಾಗಿ ಇರಿಸಿದ್ದಾರೆಂದರೆ ಅದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ.ಸಹಸ್ರಾರು ಪ್ರವಾಸಿಗಳು ಸೇರುವ ಪ್ರದೇಶ ಕೂಡ ಅತ್ಯಂತ ಸ್ವಚ್ಛವಾಗಿರುತ್ತದೆ.ಯಾವುದೇ ಸಮುದ್ರ ಕಿನಾರೆಯಲ್ಲಾಗಲೀ ರಸ್ತೆಯಲ್ಲಾಗಲೀ ಒಂದಿನಿತೂ ಕಸ,ಪ್ಲಾಸ್ಟಿಕ್ ಬಿದ್ದಿರುವುದಿಲ್ಲ. ಅವೆಲ್ಲವನ್ನೂ ಕಸದ ಬುಟ್ಟಿಯಲ್ಲೇ ಹಾಕುತ್ತಾರೆ.ಹೆಚ್ಚೇಕೆ ತಮ್ಮ ಜತೆ ನಾಯಿಯನ್ನು ಕರೆದೊಯ್ದರೆ ಅದರ ತ್ಯಾಜ್ಯವನ್ನು ಕೂಡ ಸಂಗ್ರಹಿಸಿ,ಕಸದ ಬುಟ್ಟಿಯಲ್ಲಿ ಹಾಕುತ್ತಾರೆ.ಎಲ್ಲೇ ಹೊದರೂ ಪ್ರವಾಸೀ ಸ್ಥಳದ ನಕ್ಷೆ ಲಭ್ಯವಿರುತ್ತದೆ. ಉಚಿತ ಮಾರ್ಗದರ್ಶಿ ಪುಸ್ತಿಕೆಗಳು ಹೇರಳವಾಗಿ ದೊರಕುತ್ತವೆ.ರಸ್ತೆಗಳಂತೂ ತೀರಾ ಅಚ್ಚುಕಟ್ಟು. ಟ್ರಾಫಿಕ್ ನಿಯಮಗಳೆಲ್ಲವನ್ನೂ ಎಲ್ಲರೂ ಸರಿಯಾಗಿ ಪಾಲಿಸುತ್ತಾರೆ.


ಒಟ್ಟಿನಲ್ಲಿ ಕೇಪ್ ಟೌನ್ ಪ್ರವಾಸ ನನ್ನ ಜೀವನದ ಅತ್ಯಂತ ಸವಿಯಾದ ಸಮಯ.ಬಲು ಸುಂದರ ಪ್ರದೇಶವೊಂದನ್ನು ಭೇಟಿ ಮಾಡಿದ ತೃಪ್ತಿ ನನ್ನದಾಗಿತ್ತು.ಪ್ರಕೃತಿ ದೇವಿಯ ಸಿರಿ ಸೊಬಗು ನನ್ನ ಮನವನ್ನು ಸೂರೆಗೊಂಡಿತ್ತು.

* ಜನರು ಸ್ನೇಹಪರರು. ಇಂಗ್ಲಿಷ್ ಮತ್ತು ಆಫ್ರಿಕನ್ ಮುಖ್ಯ ಭಾಷೆಗಳು. ಇಲ್ಲಿ ಯುರೋಪಿಯನ್ನರೇ ಬಹಳ ಸಂಖ್ಯೆಯಲ್ಲಿದ್ದಾರೆ.
* ರಸ್ತೆಯ ಬದಿಯಲ್ಲಿ ಆಸ್ಟ್ರಿಚ್ ,ಬಬೂನ್ ಮುಂತಾದ ಪ್ರಾಣಿಗಳನ್ನು ಕಾಣಬಹುದು.* ಆಫ್ರಿಕನ್ ಮಹಿಳೆಯರ ಕೇಶ ಶೃಂಗಾರ: ಅವರ ನೈಜ ತಲೆಕೂದಲಿಗೆ ಕೃತಕ ಕೇಶವನ್ನು ಸೇರಿಸಿ ಸಣ್ಣ ಸಣ್ಣ ಜಡೆಯಾಗಿ ಹೆಣೆಯುತ್ತಾರೆ.


*ಟ್ರಾಫಿಕ್ ಸಿಗ್ನಲ್ ಗೆ ಅಲ್ಲಿ 'ರೊಬೊಟ್' ಎಂದು ಕರೆಯುತ್ತಾರೆ.
*ಶಿಸ್ತು, ಸ್ವಚ್ಛತೆಗೆ ಬಹಳ ಆದ್ಯತೆ.*ಹಿಂದಿ ಚಲನಚಿತ್ರ 'ಐತ್ ರಾಜ್' ಇಲ್ಲಿ ಚಿತ್ರೀಕೃತವಾಗಿದೆ.
*ಅಲ್ಲಿಯ ಕರೆನ್ಸಿ ರಾಂಡ್. ಒಂದು ರಾಂಡ್ ಎಂದರೆ ಸುಮಾರು ಏಳು ರೂಪಾಯಿ.
* ಸೌತ್ ಆಫ್ರಿಕಾಕ್ಕೆ ಮೂರು ರಾಜಧಾನಿಗಳು.ಕೇಪ್ ಟೌನ್ ಶಾಸನ ಸಭೆಯ ಕಾರ್ಯಾಲಯ , ಪ್ರಿಟೋರಿಯಾ ಆಡಳಿತಾತ್ಮಕ ಕಾರ್ಯಾಲಯ ಹಾಗೂ ಬ್ಲೊಮ್ ಫ್ಲೊಂಟೈನ್ ನಾಯಾಲಯ ಸಂಬಂಧಿ ಕಾರ್ಯಾಲಯವನ್ನು ಹೊಂದಿದೆ.


ಮಾತಿನ ಬಗ್ಗೆ ಒಂದಿಷ್ಟು ಮಾತು...

`ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುವುದು ಬಸವಣ್ಣನವರ ವಚನ. ನಮ್ಮ ಮಾತು ಹೇಗಿರಬೇಕು ಎಂದು ಅದೆಷ್ಟು ಸರಳವಾಗಿ ಈ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ! ಹಾಗೆಯೇ `ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕಿಡಿಯು ಮಾತೇ ಮಾಣಿಕ್ಯ...' - ಇದು ಸರ್ವಜ್ಞನ ಉವಾಚ.

ಮಾತು ನಮಗೆ ಭಗವಂತ ನೀಡಿರುವ ಒಂದು ವರದಾನ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅತ್ಯುತ್ತಮ ಸಾಧನ. ಮಾತನಾಡುವಾಗ ಇದ್ದರೆ ಕೊಂಚ ಇದ್ದರೆ ವ್ಯವಧಾನ, ಮುದಗೊಂಡೀತು ಕೇಳುಗರ ಮನ; ಇಲ್ಲವಾದರೆ ಕಳೆದುಹೋದೀತು ಮಾನ!

ನೊಂದ ಮನಸ್ಸಿನ ಮಾತನ್ನು ಕೇಳಲು ಒಂದು ಜತೆ ಕಿವಿ ದೊರೆತರೆ ಸಾಕು, ಅವರಿಗಾಗುವ ಸಮಾಧಾನ ಅಪಾರ. ಬೇಸರಗೊಂಡ ಮನಸ್ಸಿಗೆ ಭರವಸೆಯ ನುಡಿಗಳು ಆಸರೆಯಾಗುತ್ತವೆ.


ಯಾರಾದರೂ ಚಿಕ್ಕ ಮಗು ನಡೆಯಲು ಪ್ರಯತ್ನಿಸುತ್ತಿರುವಾಗ `ಭೇಷ್!' ಅನ್ನಿ, ಅದನ್ನು ಪ್ರೋತ್ಸಾಹಿಸಿ... ಅದು ಬಹಳ ಖುಷಿಯಿಂದ ಮುನ್ನಡೆಯಲು ಪ್ರಯತ್ನಿಸುತ್ತದೆ! ಹೊಗಳಿಕೆ, ಉತ್ತೇಜನಕ್ಕೆ ಮಾರುಹೋಗದವರುಂಟೇ ಸ್ವಾಮಿ!?

ಬಹಳಷ್ಟು ಕಂಪೆನಿಗಳು ನಡೆಸುವ ಸಂದರ್ಶನದಲ್ಲಿ ಅಭ್ಯರ್ಥಿ ಯಾವ ರೀತಿಯಲ್ಲಿ ವಿಷಯ ಮಂಡನೆ ಮಾಡುತ್ತಾನೆ ಎಂಬುವುದು ಆತನ ಆಯ್ಕೆಗೆ ಬಲು ಮುಖ್ಯವಾದ ಅಂಶ. ನಮಗೆ ತಿಳಿದಿರುವುದನ್ನು, ಇತರರಿಗೆ ತಿಳಿಯಪಡಿಸುವಂತೆ ಮಾಡುವುದೂ ಒಂದು ಕಲೆಯೇ! ಎಷ್ಟೋ ಅಧ್ಯಾಪಕರು ವಿಷಯಗಳನ್ನು ತಿಳಿದಿದ್ದರೂ ಅದನ್ನು ವ್ಯಕ್ತಪಡಿಸಲು ಬಾರದೆ, `ಅವರಿಗೇನೂ ಗೊತ್ತಿಲ್ಲ' ಎಂಬ ತೆಗಳಿಕೆಗೆ ತುತ್ತಾಗಬೇಕಾಗುತ್ತದೆ!

ಮಾತಿನ ವಿಷಯ ಬರೆಯುವಾಗ ರಾಜಕಾರಣಿಗಳ ಬಗ್ಗೆ ಬರೆಯದಿದ್ದರೆ ಹೇಗೆ? ಅವರಿಗೆಲ್ಲ ಮಾತೇ ಬಂಡವಾಳ. ಜನತೆಗೆ ಆಶ್ವಾಸನೆಗಳ ಮೂಟೆ ಹೊರಿಸಿ, ಅವರನ್ನು ನಂಬಿಸಿ, ಕುರ್ಚಿ ಏರಿ ಕುಳಿತರೆ ಸಾಕು, ಅವರ ಕೆಲಸ ಮುಗಿದಂತೆ!

ಕೆಲವರಿರುತ್ತಾರೆ, ವಾಚಾಳಿಗಳು, ಕಲ್ಲು ಬಂಡೆಯನ್ನೂ ಮಾತನಾಡಿಸುವ ಚತುರರು. ಮತ್ತೆ ಕೆಲವರು `ಮಾತಾಡಿದರೆ ಮುತ್ತು ಉದುರುತ್ತದೆಯೋ' ಅನ್ನುವಂತೆ ಮೌನಪ್ರಿಯರು. `ಮೌನಿನ: ಕಲಹೋ ನಾಸ್ತಿ' ಎಂಬುದನ್ನು ದೃಢವಾಗಿ ನಂಬಿದವರು!

ಕೆಲವರ ಮಾತು ಬೆಣ್ಣೆಯಲ್ಲಿ ಕೂದಲು ತೆಗೆದಂತೆ. ಕೆಲವರ ಮಾತಿಗೆ ನಯವಿನಯದ ಮುಖವಾಡ. ಮನದಲ್ಲೊಂದು, ಆಡುವುದು ಮತ್ತೊಂದು. ಮತ್ತೆ ಕೆಲವರದು `ಪುರಾಣ ಹೇಳಿ ಬದನೆಕಾಯಿ ತಿನ್ನುವ' ಸ್ವಭಾವ. ಇನ್ನು ಕೆಲವರದ್ದು, ಕಂಡದ್ದು ಕಂಡ ಹಾಗೆ ಹೇಳಿ ಕೆಂಡದಂಥಾ ಕೋಪ ತರಿಸುವ ಪರಿ. ಇನ್ನು ಕೆಲವರಿಗೆ ತಾವಂದಂತೆ ನಡೆಯದಿದ್ದರೆ ನಖಶಿಖಾಂತ ಸಿಟ್ಟು.

ಕೆಲವರಿಗೆ ಸಿಟ್ಟಿನ ಭರದಲ್ಲಿ ಏನೇನು ಮಾತನಾಡುತ್ತಿದ್ದಾರೆ ಅನ್ನುವ ವಿವೇಚನೆಯೇ ಇರದು! ಕಡಿಮೆ ಅಂಕ ಬಂತೆಂದು ಮಕ್ಕಳನ್ನು ಕೆಂಡಾಮಂಡಲವಾಗಿ ಬಯ್ಯುವ ಹೆತ್ತವರಿಗೇನೂ ಕೊರತೆಯಿಲ್ಲ. ಮಗನೇನಾದರೂ ಕೊಂಚ ಸೊಸೆಯ ಪರವಾಗಿದ್ದಾಗ ಶುರುವಾಗುವ ಅತ್ತೆಯ ತೂಕ ತಪ್ಪುವ ಮಾತು, ಸಂಬಂಧಗಳಲ್ಲಿ ಬಿರುಕು ಮೂಡಿಸಿದರೆ ಆಶ್ಚರ್ಯವೇನೂ ಇಲ್ಲ!

`ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು' - ಇದು ಮಾತು ಅರ್ಥೈಸಿಕೊಳ್ಳಲು ಸಾಧ್ಯವಾದರನ್ನು ಮಾತಿನ ಮೂಲಕ ತಿಳಿಹೇಳಬಹುದು ಎನ್ನುವುದಕ್ಕೊಂದು ಪಡೆನುಡಿ.

ಕೆಲವರಿಗೆ ಮಾತಿನಿಂದಲೇ ಜೀವನ. ಬದುಕುವ ಸಾಧನ. ಸಂವಹನದ ಪ್ರಮುಖ ಸಾಧನ ಮಾತು. ಪ್ರಭಾವೀ ವ್ಯಕ್ತಿಗಳು ಆಡುವ ಮಾತು ಹಲವಾರು ಚರ್ಚೆಗಳಿಗೆ ಕಾರಣವಾಗುತ್ತದೆ!

ಇದೆಲ್ಲ ಮಾತು ಬಲ್ಲವರ ಪ್ರಪಂಚವಾದರೆ, ಮಾತಾಡುವ ಸಮಸ್ಯೆ ಇರುವವರ ಕಥೆಯೇ ಬೇರೆ. ಕೆಲವರಿಗೆ ಉಗ್ಗು, ಕೆಲವರಿಗೆ ಅಸ್ಪಷ್ಟ ಮಾತು, ಕೆಲವರಿಗೆ ಮಾತೇ ಬರದು... (ಇಂಥವರ ಮಾತನ್ನು `ಸರಿಪಡಿಸಲು' ಈಗೀಗ ವಾಕ್ಚಿಕಿತ್ಸಾ ಕೇಂದ್ರಗಳು ತಲೆಯೆತ್ತಿವೆಯೆನ್ನಿ).

ರವಿಶಂಕರ ಅವರ `ಆರ್‍ಟ್ ಆಫ್ ಲಿವಿಂಗ್ ' ಕೊರ್ಸ್‌ನಲ್ಲಿ ಪಾಲ್ಗೊಂಡ ನನ್ನ ಸ್ನೇಹಿತೆ ಹೇಳಿದ ಒಂದು ಅನುಭವವಿದು: `ಒಂದು ದಿನವಿಡೀ ಮೌನವಾಗಿ ಇರಬೇಕಿತ್ತು. ಆ ಒಂದು ದಿನ ಕಳೆದಾಗ ಮತ್ತೆ ಮಾತನಾಡುವ ಅನಿಸಲೇ ಇಲ್ಲ... ಮೌನದ ಆನಂದ ಆಗಲೇ ನನಗೆ ಗೊತ್ತಾದದ್ದು!'

ಮುಗಿಸುವ ಮುನ್ನ,

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:
ತಸ್ಮಾತ್ ತದೇವ ವಕ್ತವ್ಯಮ್ ವಚನೇ ಕಾ ದರಿದ್ರತಾ

(ಪ್ರಿಯವಾದ ಮಾತು ಎಂಥವರಿಗೂ ಇಷ್ಟವೇ ಆಗುತ್ತದೆ; ಆದ್ದರಿಂದ ಅದನ್ನೇ, ಅಂದರೆ ಒಳ್ಳೆಯ ಮಾತನ್ನೇ, ಆಡಬೇಕು. ಮಾತಿನಲ್ಲೂ ಯಾಕೆ ಬಡತನ?)

ನಗೆ ಬಗೆ ಬಗೆ..

ನಗುವು ಸಹಜ ಧರ್ಮ..
ನಗಿಸುವುದು ಪರಧರ್ಮ..
ನಗುವ, ನಗಿಸುವ
ನಗಿಸಿ ನಗುತ ಬಾಳುವ
ವರವ ಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ

ಈ ಪರಿಯಾಗಿ ಡಿ.ವಿ.ಜಿ.ಯವರು ನಗುವಿನ ಕುರಿತು ಸೊಗಸಾಗಿ ವಿವರಿಸಿದ್ದಾರೆ.

ನಗೆ ಕೇವಲ ತುಟಿ ಮಾತ್ರ ಬಿರಿಯುವಂತಹ ``ಮುಗುಳುನಗೆ" ಆಗಿರಬಹುದು ಅಥವಾ ಗಹಗಹಿಸಿ ನಗುವ ಅಟ್ಟಹಾಸವೇ ಆಗಿರಬಹುದು. ಆದರೆ ಅದು ದೇಹದ ಸ್ನಾಯುಗಳನ್ನು ಸಡಿಲಗೊಳಿಸಿ, ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುವುದಂತೂ ನಿಜ. ದುಗುಡದ ಬೇಗೆಯ ನಡುವೆ ಬೀಸುವ ನಗುವಿನ ತಂಗಾಳಿ, ವಾತಾವರಣವನ್ನು ತಿಳಿಯಾಗಿಸುವ ಶಕ್ತಿ ಹೊಂದಿದೆ!

ನಗು ಎನ್ನುವುದು ಹಾಸ್ಯಕ್ಕೆ, ಸಂತಸಕ್ಕೆ, ಕೆಲವೊಮ್ಮೆ ವ್ಯಂಗ್ಯಕ್ಕೆ ಮೆದುಳು ನೀದುವ ಪ್ರತಿಕ್ರಿಯೆ. ನಗುವಾಗ ದೇಹದ ಭಂಗಿಯಲ್ಲಿ ಬದಲಾವಣೆಯಾಗುತ್ತದೆ.. ನಗುವಿನ ಶಬ್ದ ಉತ್ಪತ್ತಿಯಾಗುತ್ತದೆ.. ಹೆಚ್ಚೇಕೆ ಕೆಲವೊಮ್ಮೆ ಕಣ್ಣೀರು ಕೂಡಾ ಉಕ್ಕುತ್ತದೆ!

ನಗೆಯಲ್ಲಿ ಬಗೆ ಬಗೆ.ಮಗುವಿನ ಮುಗ್ಧ ನಗೆ, ಕಾದು ಕಾದು ಕೊನೆಗೂ ಮಗಳಿಗೆ ಒಳ್ಳೆಯ ವರ ದೊರೆತಾಗ ,ಅಪ್ಪನ ಸಂತೃಪ್ತಿಯ ನಗೆ, ನೌಕರಿ ಸಿಗುವಾಗಿನ ಹೆಮ್ಮೆಯ ನಗೆ, ಹಾಸ್ಯದ ತುಣುಕನ್ನು ಆಸ್ವಾದಿಸುವಾಗಿನ ನಗೆ, ಪ್ರಿಯತಮನ ಮೊಗ ಕಂಡಾಗ ಅರಳುವ ಪ್ರಿಯತಮೆಯ ನಗೆ, ಸಿನೆಮಾ ನಟಿಯ ಮಾದಕ ನಗೆ ಇತ್ಯಾದಿ.. ನಗುವಿನಲ್ಲಿ ಬಗೆ ಬಗೆ.

ಒಂದೊಂದು ನಗೆಯೂ ಒಂದೊಂದು ಚೆಲುವು..

``ಆಕೆ ನಕ್ಕರೆ ಬೆಳದಿಂಗಳು ಚೆಲ್ಲಿದಂತೆ.." ಇದು ನಗುವಿನ ಸೌಂದರ್ಯವನ್ನೂ,ಅದರ ಪರಿಣಾಮವನ್ನೂ ಹೇಳಲು ಬಳಸುವ ನುಡಿಕಟ್ಟು. ``ಅಳು ನುಂಗಿ ನಗು ನಕ್ಕ" ಎನ್ನುವುದು ಕಷ್ಟದಲ್ಲೂ ಸಂತೋಷದಲ್ಲಿ ಇರುವ ಅರ್ಥದಲ್ಲಿ ಬಳಸಲಾಗುತ್ತದೆ. ನೀ ನಗುವ ಹಾದಿಯಲಿ ನಗೆಹೂವು ಬಾಡದಿರಲಿ ಎಂಬುವುದು ``ಚೆನ್ನಾಗಿರು..ಸಂತೋಷದಲ್ಲಿರು" ಎಂಬ ಹಾರೈಕೆ.

ಸದುದ್ದೇಶದ ನಗು ಮನವನ್ನು ಅರಳಿಸಿದರೆ, ಅಪಹಾಸ್ಯದ ನಗು ಮನ ಮುದುಡಿಸಬಲ್ಲದು!

ಹಾಸ್ಯಪ್ರಜ್ಞೆಯ ಜತೆಗೂಡಿದ ನಗು ಹೃದಯಾಘಾತವನ್ನು ದೂರಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ನಗು ಮಾನಸಿಕ ಒತ್ತಡವನ್ನು ನಿವಾರಿಸುವ ಶಕ್ತಿ ಹೊಂದಿದೆ. ಆದ ಕಾರಣವೇ ``ನಗೆ ಒಂದು ಸಿದ್ಧೌಷಧ " ಎಂಬ ಮಾತು ಚಾಲ್ತಿಯಲ್ಲಿದೆ.

ನೀವು ಉದ್ಯಾನವನಗಳಲ್ಲಿ ಜನ ಗುಂಪುಕಟ್ಟಿಕೊಂಡು ನಗುವುದನ್ನು ಕಂಡಿರಬಹುದು..ಅದು `ನಗು ಸಂಘ'. ನಕ್ಕು ರೋಗಮುಕ್ತರಾಗಿ ಎನ್ನುವುದು ಅದರ ಧ್ಯೇಯ!

ಆದಷ್ಟು ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. (ಕಾರಣವಿಲ್ಲದೆ ನಗಬೇಡಿ. ಹಾಗೆ ನಗುವವರಿಗೆ ಬೇರೆಯೇ ಹೆಸರಿದೆ!)

*ಹಾಸ್ಯಪ್ರಜ್ನೆಯನ್ನು ಬೆಳೆಸಿಕೊಳ್ಳಿ. ದಿನ ನಿತ್ಯದ ಜೀವನದಲ್ಲಿ ಹಾಸ್ಯವನ್ನು ಕಾಣಿ.

*ಮಾತಿನಲ್ಲಿ ತಿಳಿಹಾಸ್ಯದ ಲೇಪವಿರಲಿ.

*ಗಂಟು ಮುಖ ಹಾಕಿಕೊಂಡಿದ್ದರೆ ಯಾರೂ ಅದನ್ನು ಇಷ್ಟಪಡುವುದಿಲ್ಲ ಎಂದು ನೆನಪಿರಲಿ.

*ಕುಟುಂಬದವರೆಲ್ಲಾ ಒಟ್ಟಾಗಿ ಸೇರಿ ಹಾಸ್ಯದ ಆನಂದವನ್ನು ಸವಿಯಿರಿ.

*ಹಾಸ್ಯ ಕತೆ, ಲೇಖನ,ಜೋಕುಗಳನ್ನು ಆನಂದಿಸಿ.

*ಸದುದ್ದೇಶದ ಹಾಸ್ಯ ಮಾತ್ರ ಸಾಕು..

*ಒಟ್ಟಿನಲ್ಲಿ ನಗುತ್ತಾ, ನಗಿಸುತ್ತಾ ಆನಂದವಾಗಿರಿ!

ನಮನ

ಉನ್ನತ ಚಿಂತನೆಯ
ಸ್ಫೂರ್ತಿಯ ಸೆಲೆಯೆ
ಸಾಧನೆಯ ಛಲ ಹೊತ್ತ
ಕಾಂತಿಯ ನೆಲೆಯೆ

ಏರಿದೆಯಲ್ಲ ನೀನು
ಅಷ್ತೊಂದು ಎತ್ತರಕೆ
ಕಾಯುತ್ತಿದ್ದೆವು ನಾವು
ನಿನ್ನ ಉತ್ತರಕೆ

ಆಗಿಯೇ ಬಿಟ್ಟಿತು
ಕೊಲಂಬಿಯಾ ದುರಂತ
ಭಸ್ಮವಾದಿರಿ ನೀವೆಲ್ಲ
ಹೀಗಾದದ್ದು ಯಾಕಂತ

ಅಷ್ಟು ಬೇಗನೆ ನಿನಗೇಕೆ ಬಂತು
ಭಗವಂತನ ಕರೆ
ಇನ್ನಷ್ಟು ಸುರಿಸಬಹುದಿತ್ತಲ್ಲ
ಸಂಶೊಧನಾ ಧಾರೆ

ನೀಲ ನಭದಲಿ ಮಿಂಚಿ
ಮರೆಯಾದ ಉಜ್ವಲ ತಾರೆ
ಮತ್ತೊಮ್ಮೆ ನೀ ಬುವಿಯಲಿ
ಜನ್ಮ ತಳೆದು ಬಾರೆ

ಜನಮನದಲ್ಲಿ ನಿನ್ನ
ನೆನಪು ಶಾಶ್ವತ
ಅತ್ಮವಿಶ್ವಾಸದ ಮೊಗ
ಮತ್ತು ನಿನ್ನ ಮಂದಸ್ಮಿತ

ಪ್ರೇಮ ಸೌರಭ

ಹಿಂದಿ ಚಲನಚಿತ್ರ `ರೆಹೆನಾ ಹೆ ತೆರೆ ದಿಲ್ ಮೆ' ಯ `ಜರಾ ಜರಾ ' ಗೀತೆಯ ಭಾವಾನುವಾದ ನಿಮಗಾಗಿ...


ಪ್ರೇಮ ಸೌರಭದಲಿ
ತೇಲುತಿರಲು ತನುಮನ
ಬಯಸುತಿಹೆ ನಾನೀಗ
ನಿನ್ನ ಬಾಹುಬಂಧನ

ನನ್ನಾಣೆ ನಲ್ಲ ನಿನಗೆ
ಹೋಗದಿರು ನೀ ದೂರ
ಶೂನ್ಯ ಅಂತರ ಒಳಿತು
ಬೇಗ ಸನಿಹಕೆ ಬಾರ

ಕರಿಮೋಡ ಕರಗಿದ
ಮಳೆಯಂತೆ ಅಬ್ಬರ
ಪ್ರೀತಿಯಲಿ ನೆನೆಯೋಣ
ಒಲವಿನ ಪ್ರಿಯಕರ

ನೋಡುತಿರು ನಲಿಯುವ
ಎನ್ನ ಮುಂಗುರುಳು
ನೇವರಿಸುತಿರು ಆಗಾಗ
ಅತ್ತಿತ್ತ ನಿನ್ನ ಬೆರಳು

ಸುಮಧುರ ಏಕಾಂತ
ಶರತ್ಕಾಲದ ಇರುಳು
ನುಸುಳಿರಲು ನಾವೀರ್ವರೂ
ಒಂದೇ ಚಾದರದೊಳು

ಮತ್ತೇರಿಸುವ ಆ ನಿನ್ನ
ಸವಿ ಪಿಸುಮಾತು
ನಮ್ಮೀರ್ವರ ನಡುವಿನ
ಪ್ರೀತಿ ಹೆಚ್ಚಿಸಿತು

ಮರೆಯಲಾಗದ ಆ
ಸಿಹಿಯಾದ ಮಿಲನ
ಹಾಡುತಿರಲು ಕಂಗಳು
ಮೃದುವಾಗಿ ಕವನ

ಅರಳ ಬಿಡಿ...

ಮೊಗ್ಗು ಅರಳುವ ಮುನ್ನ
ಹಿಸುಕುವಿರೇಕೆ?
ಮಾಡಲಾಗದೇ ಒಂದು
ಕುಸುಮದ ಆರೈಕೆ?

ಈ ಹೂವು ಅಂತಿಂಥದ್ದಲ್ಲ
ನಾಡ ತುಂಬೆಲ್ಲ ಪರಿಮಳ ಬೀರೀತು
ನಿಮಗೂ ನಿಮ್ಮ ಮನೆಯವರೆಲ್ಲರಿಗೂ
ನೆಮ್ಮದಿ ನೀಡೀತು

ಅಸಾಧ್ಯವಾದದ್ದು ಅಂತ ಅನಿಸಿದ್ದನ್ನೂ
ಸಾಧಿಸಿ ತೋರಿಸೀತು
ಮತ್ತೊಂದು ಹೂವಿನ ಸೃಷ್ಟಿಗೆ
ಇದೇ ಕಾರಣವಾದೀತು

ಏತಕೆ ಹಿಚುಕುವಿರಿ ಈ ಮೊಗ್ಗನ್ನು
ಅರಳ ಬಿಡಿ
ಆ ಪುಷ್ಪ ಅರಳಿದ್ದನ್ನು ಕಂಡು
ಸಂತೋಷ ಪಡಿ

ಕಾಲಾಯ ತಸ್ಮೈ ನಮಃ

ಉರುಳಿತು ಮತ್ತೊಮ್ಮೆ ಕಾಲಚಕ್ರ
ಮರಳಿ ಬಂದಿದೆ ಯುಗಾದಿ
ಕಳೆದ ಸಮಯ ನೇರ ಯಾ ವಕ್ರ
ಕಾಲನದ್ದು ತಪ್ಪದ ಹಾದಿ

ಸುನಾಮಿ ಏಳಲಿ, ಕತ್ರೀನಾ ಬೀಸಲಿ,
ಕಾಲಕ್ಕಿಲ್ಲ ಯಾವುದೇ ಚಿಂತೆ
ಭೂಮಾತೆಯೇ ಕಂಪಿಸಲಿ
ಸಮಯ ಎಂದಾದರೂ ನಿಂತೀತೆ?

ಬಿದ್ದುಹೋಗುತಿಹ ಸರ್ಕಾರಗಳು
ಹೊಯ್ದಾಡುವ ಷೇರು ಸೂಚ್ಯಂಕ
ರೈತರ ಆತ್ಮಹತ್ಯೆ ಪ್ರಕರಣಗಳು
ಕಾಲನಿಗಿದೆಯೇ ಆತಂಕ?

ಕಾಲ್ ಸೆಂಟರ್ ಹುಡುಗಿಯ ಕೊಲೆ
ಕಾಲನಿಗೆ ಯಾವ ಲೆಕ್ಕ ಆ ಗಳಿಗೆ?
ಗಲಭೆ,ಗೊಂದಲಗಳ ಸರಮಾಲೆ
ಕೊಂಚವೂ ಬಿಸಿ ತಟ್ಟದು ಕಾಲನಿಗೆ!

ಒಂದೆಡೆ ಹನಿ ನೀರಿಗೆ ತತ್ವಾರ
ಮತ್ತೊಂದೆಡೆ ಮಳೆರಾಯನ ಆರ್ಭಟ
ಶಾಂತಿಭಂಗಕ್ಕೆ ಉಗ್ರರ ಹುನ್ನಾರ
ಕಾಲನದ್ದು ಮಾತ್ರ ನಾಗಾಲೋಟ