Pages

Sunday, December 27, 2009

ಕನಸಿನ ಉದ್ಯೋಗ..

ಈ ಲೇಖನ ೨೭-ಡಿಸೆಂಬರ್-೨೦೦೯ ರ ವಿಜಯಕರ್ನಾಟಕ-ಲವಲವಿಕೆಯಲ್ಲಿ ಪ್ರಕಟವಾಗಿದೆ. ಓದಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ..

Thursday, November 5, 2009

ಬಗೆ ಬಗೆ ಸಲಾಡ್

’ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಮೊಳೆತ ಕಾಳು, ಹಸಿ ತರಕಾರಿ ಇವುಗಳು ಆರೋಗ್ಯಕ್ಕೆ ಅತೀ ಉತ್ತಮ. ಬಗೆ ಬಗೆಯ ವಿಟಮಿನ್ ಗಳಿಂದ ಸಮೃದ್ಧವಾಗಿರುವ ಇವುಗಳನ್ನು ಸಲಾಡ್ ರೂಪದಲ್ಲಿ ಬಳಸಿಕೊಳ್ಳಬಹುದು. ನಾಲಗೆಗೂ ರುಚಿ, ಶರೀರಕ್ಕೂ ಹಿತವೆನಿಸುವ ಬಗೆ ಬಗೆಯ ಸಲಾಡ್ ಗಳನ್ನೂ ಮಾಡುವ ವಿಧಾನವನ್ನು ಅರಿತುಕೊಳ್ಳೋಣ..

---------------------------------
೧.ಹೆಸರು, ದಾಳಿಂಬೆ , ಕಡಲೆ ಬೇಳೆ ಸಲಾಡ್
----------------------------------




ಬೇಕಾಗುವ ಪದಾರ್ಥಗಳು
ದಾಳಿಂಬೆ ಬೀಜಗಳು :ಒಂದು ಹಿಡಿ
ಮೊಳೆತ ಹೆಸರು ಕಾಳು :ಎರಡು ಹಿಡಿ
ಕಡಲೆ ಬೇಳೆ :ಒಂದು ಹಿಡಿ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಹಸಿ ಮೆಣಸು :ಎರಡು
ನಿಂಬೆ ರಸ :ಒಂದು ಚಮಚ
ಗೇರು ಬೀಜ : ನಾಲ್ಕು

ವಿಧಾನ :
೧.ಹೆಸರು ಕಾಳನ್ನು ಸುಮಾರು ಎಂಟು ಗಂಟೆಗಳ ಕಾಲ ನೆನೆಸಿ,ಮೊಳಕೆ ಬರಿಸಿ.
೨.ಕಡಲೆ ಬೇಳೆಯನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿ .
೩.ಮೊಳೆತ ಹೆಸರು ಕಾಳು, ನೆನೆದ ಕಡಲೆ ಬೇಳೆ, ದಾಳಿಂಬೆ ಬೀಜಗಳು,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ,ಉದ್ದಕ್ಕೆ ಹೆಚ್ಚಿದ ಹಸಿ ಮೆಣಸು ಇವುಗಳನ್ನು ಮಿಶ್ರ ಮಾಡಿ.
೪.ಇದಕ್ಕೆ ನಿಂಬೆ ರಸ,ಉಪ್ಪು, ಗೇರು ಬೀಜ ಹಾಕಿ ಕಲಸಿ .

ವಿ.ಸೂ. ಹಸಿ ಮೆಣಸು ಹೆಚ್ಚುವಾಗ ಉದ್ದಕ್ಕೆ ಹೆಚ್ಚಿದರೆ ಒಳ್ಳೆಯದು. ಏಕೆಂದರೆ ಸಣ್ಣಗೆ ಹೆಚ್ಚಿದರೆ ಮೆಣಸಿನ ಚೂರು ಎಂದು ಗೊತ್ತಾಗದೆ ಕಚ್ಚಿ ಖಾರ ನೆತ್ತಿಗೇರುತ್ತದೆ.


------------------------------------------------------------
2.ಕೇಸರಿ , ಬಿಳಿ, ಹಸಿರು ಸಲಾಡ್
------------------------------------------------------------

ಬೇಕಾಗುವ ಪದಾರ್ಥಗಳು
ಕೇಸರಿ ಬಣ್ಣಕ್ಕೆ : ಕ್ಯಾರೆಟ್ ತುರಿ : ಎರಡು ಲೋಟ
ಬಿಳಿ : ತೆಂಗಿನ ತುರಿ : ಕಾಲು ಲೋಟ,ಉಪ್ಪು :ರುಚಿಗೆ ತಕ್ಕಷ್ಟು , ಮೊಸರು :ಸ್ವಲ್ಪ
ಹಸಿರು :ಮೊಳೆತ ಹೆಸರು ಕಾಳು :ಅರ್ಧ ಲೋಟ, ಕೊತ್ತಂಬರಿ ಸೊಪ್ಪು :ಸ್ವಲ್ಪ , ಹಸಿ ಮೆಣಸು :ಎರಡು

ವಿಧಾನ

ಕೇಸರಿ,ಬಿಳಿ, ಹಸಿರು ವಸ್ತುಗಳನ್ನು ಸೇರಿಸಿ, ಕಲಸಿ. ಮೊಸರಿನ ಬದಲು ನಿಂಬೆ ರಸವನ್ನು ಕೂಡ ಬಳಸಬಹುದು.


----------------------------------------------
೩. ಸೌತೆ -ಹೆಸರು ಬೇಳೆ ಕೋಸಂಬರಿ
-----------------------------------------------

ಕಾಲು ಲೋಟ :ಹೆಸರು ಬೇಳೆ
ಸಣ್ಣಗೆ ಹೆಚ್ಚಿದ ಮುಳ್ಳು ಸೌತೆ :ಅರ್ಧ ಲೋಟ
ತೆಂಗಿನ ತುರಿ :೩ ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಸಣ್ಣಗೆ ಹೆಚ್ಚಿದ ಶು೦ಠಿ :ಎರಡು ಚಮಚ
ನಿಂಬೆ ರಸ :ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ
ಎಣ್ಣೆ :ಎರಡು ಚಮಚ
ಸಾಸಿವೆ:ಒಂದು ಚಮಚ
ಜೀರಿಗೆ:ಒಂದು ಚಮಚ
ಕೆಂಪು ಮೆಣಸು:ಮೂರು
ಬೇವಿನೆಲೆ: ಹತ್ತು ಎಸಳು



ವಿಧಾನ :
ಹೆಸರು ಬೇಳೆಯನ್ನು ನೀರಿನಲ್ಲಿ ಸುಮಾರು ೩ ಗಂಟೆಗಳ ಕಾಲ ನೆನೆಸಿ.
ನೆನೆದ ಹೆಸರು ಬೇಳೆ ,ಸಣ್ಣಗೆ ಹೆಚ್ಚಿದ ಮುಳ್ಳು ಸೌತೆ,ತೆಂಗಿನ ತುರಿ,ಕೊತ್ತಂಬರಿ ಸೊಪ್ಪು ,ಸಣ್ಣಗೆ ಹೆಚ್ಚಿದ ಶು೦ಠಿ ,ನಿಂಬೆ ರಸ ,ರುಚಿಗೆ ತಕ್ಕಷ್ಟು ಉಪ್ಪು ಇವುಗಳನ್ನು ಚೆನ್ನಾಗಿ ಕಲಸಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ ,ಕತ್ತರಿಸಿದ ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಬೇವಿನೆಲೆ ಹಾಕಿ. ಇದನ್ನು ಕಲಸಿಟ್ಟ ಬೆಳೆಯ ಮಿಶ್ರಣಕ್ಕೆ ಹಾಕಿ.
ಸಮಾರಂಭಗಳಿಗೆ ಈ ಥರದ ಕೋಸಂಬರಿಯನ್ನು ಹೆಚ್ಚಾಗಿ ಮಾಡುತ್ತಾರೆ. ಹೆಸರು ಬೆಳೆಯ ಬದಲು ಕಡಲೆ ಬೇಳೆಯನ್ನು ಬಳಸಬಹುದು.

-------------------------------------
೪.ಟೋಮಾಟೊ -ನೀರುಳ್ಳಿ ಸಲಾಡ್
-------------------------------------
ಟೊಮ್ಯಾಟೋ :ಒಂದು
ನೀರುಳ್ಳಿ :ಒಂದು
ಹಸಿ ಮೆಣಸು :ಒಂದು
ನಿಂಬೆ ರಸ :ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ವಿಧಾನ
ಟೋಮಾಟೊ ,ನೀರುಳ್ಳಿ ,ಕೊತ್ತಂಬರಿ ಸೊಪ್ಪು,ಹಸಿ ಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿ ಕಲಸಿ. ಉಪ್ಪು, ನಿಂಬೆ ರಸ ಬೆರೆಸಿ ಮಿಶ್ರ ಮಾಡಿ .ಟೋಮಾಟೊ ನೀರುಳ್ಳಿ ಸಲಾಡ್ ತಯಾರು.
--------------------------------------

೫.ಫ್ರುಟ್ ಸಲಾಡ್

-------------------------------------
ಬಾಳೆ ಹಣ್ಣು, ಸೇಬು, ಕಿತ್ತಳೆ ತೊಳೆ,ಅನಾನಸು ಇವುಗಳನ್ನು ಸಣ್ಣಗೆ ಹೆಚ್ಚಿ ,ಮಿಶ್ರ ಮಾಡಿ.
ಇದಕ್ಕೆ ಸ್ವಲ್ಪ ದಾಳಿಂಬೆ ಬೀಜ, ದ್ರಾಕ್ಷಿ,ಚೆರ್ರಿ ಇವುಗಳನ್ನು ಹಾಕಿ ಕಲಕಿ. ಇದಕ್ಕೆ
ಸ್ವಲ್ಪ ಸಕ್ಕರೆ ಹಾಕಿ. ಸವಿಯಿರಿ. ಬೇಕಿದ್ದರೆ ನಿಮ್ಮ ಇಷ್ಟದ ಐಸ ಕ್ರೀಮ್ ಬೆರೆಸಿ ಸವಿಯಿರಿ.

-----------------------------------
೬.ಕಾರ್ನ್ ,ಅವಕಾಡೋ(ಬೆಣ್ಣೆ ಹಣ್ಣು ) ಸಲಾಡ್
-------------------------------------

ಬೇಕಾಗುವ ವಸ್ತುಗಳು
ಕಾರ್ನ್ (ಜೋಳ ) :ಎರಡು ಲೋಟ
ಅವಕಾಡೋ :ಒಂದು
ಟೋಮಾಟೊ :ಒಂದು
ನೀರುಳ್ಳಿ :ಒಂದು
ಆಲಿವ್ ಎಣ್ಣೆ :ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕಾಳುಮೆಣಸು ಪುಡಿ :ಸ್ವಲ್ಪ
ನಿಂಬೆ ರಸ :ಸ್ವಲ್ಪ
ಕೊತ್ತಂಬರಿ ಸೊಪ್ಪು :ಸ್ವಲ್ಪ

ವಿಧಾನ :
ಜೋಳವನ್ನು ನೀರಿನಲ್ಲಿ ಬೇಯಿಸಿ.
ಬೆಂದ ಜೋಳವನ್ನು ಹೋರತೆಗೆದು ,ಅದಕ್ಕೆ ಸಣ್ಣಗೆ ಹೆಚ್ಚಿದ ಅವಕಾಡೋ, ನೀರುಳ್ಳಿ,ಟೋಮಾಟೊ,ಕಾಳು ಮೆಣಸಿನ ಪುಡಿ,ಉಪ್ಪು, ನಿಂಬೆ ರಸ ,ಕೊತ್ತಂಬರಿ ಸೊಪ್ಪು ,ಆಲಿವ್ ಎಣ್ಣೆ ಇವುಗಳನ್ನು ಒಟ್ಟಿಗೆ ಬೆರೆಸಿ.

----------------------------------------

೭. ಸೀಬೆಹಣ್ಣು ಮತ್ತು ಮೊಳೆತ ಕಾಳುಗಳ ಸಲಾಡ್

--------------------------------------
ಹೆಸರು ಕಾಳು ,ಕಾಬುಲ್ ಕಡಲೆ ತಲಾ ಒಂದು ಹಿಡಿ
ಸೀಬೆ ಹಣ್ಣು :ಒಂದು
ಚಾಟ್ ಮಸಾಲ : ಚಿಟಿಕೆ
ಉಪ್ಪು ,ನಿಂಬೆ ರಸ :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು :ಸ್ವಲ್ಪ

ವಿಧಾನ : ಹೆಸರು ಕಾಳು ಮತ್ತು ಕಡಲೆ ಕಾಳುಗಳನ್ನು ಸುಮಾರು ಎಂಟು ಗಂಟೆಗಳ ಕಾಲ ನೆನೆಸಿ, ಮೊಳಕೆ ಬರಿಸಬೇಕು.
ಇದಕ್ಕೆ ಸಣ್ಣಗೆ ಹೆಚ್ಚಿದ ಸೀಬೆ ಹಣ್ಣು, ಚಾಟ್ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು,ನಿಂಬೆ ರಸ ಇವುಗಳನ್ನು ಹಾಕಿ ಕಲಕಿ.


-------------------------------------

೮. ನೆಲ ಕಡಲೆ ಸಲಾಡ್

-------------------------------------
ಬೇಕಾಗುವ ಪದಾರ್ಥಗಳು
ನೆಲಕಡಲೆ (ಶೇಂಗಾ) :ಎರಡು ಹಿಡಿ
ನೀರುಳ್ಳಿ : ಒಂದು
ಹಸಿ ಮೆಣಸು :ಎರಡು
ಟೊಮೇಟೊ :ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ನಿಂಬೆ ರಸ :ಒಂದು ಚಮಚ
ತೆಂಗಿನ ತುರಿ :ಎರಡು ಚಮಚ
ವಿಧಾನ :
ಎರಡು ಹಿಡಿ ನೆಲಕಡಲೆಯನ್ನು ನೀರಿನಲ್ಲಿ ಸುಮಾರು ಎರಡು ಗಂಟೆಗಳ ನೆನೆಸಿಡಿ.
ನೆನೆದ ನೆಲಕಡಲೆಗೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ .
ಇದಕ್ಕೆ ಹೆಚ್ಚಿದ ಹಸಿ ಮೆಣಸು,
ತೆಂಗಿನ ತುರಿ,ಟೊಮೇಟೊ ಮತ್ತು ನಿಂಬೆರಸ ,ಉಪ್ಪು ಹಾಕಿ ಕಲಸಿ. ಸ್ವಾದಿಷ್ಟಕರ ನೆಲ ಕಡಲೆ ಸಲಾಡ್ ತಯಾರು !
-----------------------------------------------------------
೯.ಲೇಟಯೂಸ್ ಸಲಾಡ್
----------------------------------------------------------

ಇದು ಇಟಾಲಿಯನ್ ಸಲಾಡ್ .
ಬೇಕಾಗುವ ವಸ್ತುಗಳು

ಲೆಟ್ ಯೂಸ್ ಎಲೆ :ಒಂದು
ಬೆಳ್ಳುಳ್ಳಿ :ಎರಡು ಎಸಳು
ಒರೆಗಾನೋ : ಚಿಟಿಕೆ (ಇದು ಒಂದು ರೀತಿಯ ಸಾಂಬಾರ ಪದಾರ್ಥ )
ಕಾಳು ಮೆಣಸು:ಚಿಟಿಕೆ
ಆಲಿವ್ ಎಣ್ಣೆ :ಎರಡು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ವಿನೆಗರ್ :ಒಂದು ಚಮಚ
ವಿಧಾನ :
ಲೆಟ್ ಯೂಸ್ ಎಲೆ ಮತ್ತು ಬೆಳ್ಳುಳ್ಳಿಯನ್ನು
ಸಣ್ಣಗೆ ಹೆಚ್ಚಿ. ಉಳಿದ ವಸ್ತುಗಳನ್ನೆಲ್ಲ ಹಾಕಿ ಕಲಕಿ. ಸಲಾಡ್ ತಯಾರು.

-------------------------
೧೦.ವೆಜಿಟೇಬಲ ಸಲಾಡ್
-------------------------
ಬೇಕಾಗುವ ವಸ್ತುಗಳು
ಸಣ್ಣಗೆ ಹೆಚ್ಚಿದ ಕ್ಯಾಬೇಜ್ , ನೀರುಳ್ಳಿ,ಟೋಮಾಟೊ, ಸೌತೆ, ಕ್ಯಾರೆಟ್ :ತಲಾ ಅರ್ಧ ಲೋಟ
ಚಾಟ್ ಮಸಾಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ನಿಂಬೆ ರಸ :ಒಂದು ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಕಾಳು ಮೆಣಸು ಪುಡಿ :ಸ್ವಲ್ಪ

ವಿಧಾನ
ಮೇಲೆ ಸೂಚಿಸಿದ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಹಾಕಿ ಕಲಕಿ.

Friday, October 16, 2009

ತಂಬುಳಿ


'ಸಖಿ ' ಪಾಕ್ಷಿಕ (october 1-15 ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ


ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಬಹುವಾಗಿ ಬಳಕೆಯಲ್ಲಿರುವ ಒಂದು ಬಗೆಯ ಮೇಲೋಗರಕ್ಕೆ ತಂಬುಳಿ ಎಂದು ಹೆಸರು.
ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ಹಲವು ವಿಧದ ಸೊಪ್ಪು, ಚಿಗುರುಗಳನ್ನು ಬಳಸಿ ತಂಬುಳಿ ಮಾಡುವಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದವರು ಸಿದ್ಧ ಹಸ್ತರು. "ತಂಬುಳಿ ಅಂಥ ಊಟವಿಲ್ಲ. ಕಂಬಳಿ ಅಂಥ ಹೊದಿಕೆಯಿಲ್ಲ " ಎಂಬ ಗಾದೆ ಜನಪ್ರಿಯವಾಗಿದೆ.
ನನ್ನ ಸಹೋದ್ಯೋಗಿ ಮಿತ್ರರಾದ ಶ್ರೀ ರವಿರಾಜ ಭಟ್ಟರು ತಂಬುಳಿ ಬಗ್ಗೆ ಈ ರೀತಿ ಬರೆದಿದ್ದಾರೆ :

ತಾರಕ್ಕ ತಂಬುಳಿ
ನಾ ಊಟಕ್ಕೆ ಬರುವೆನು
ತಾರೆ ತಂಬುಳಿಯಾ

ತಂಬುಳಿ ಹೀರಿದರೆ
ತಲೆಯೆ ತಂಪು
ತಾರೆ ತಂಬುಳಿಯಾ

ಬೇಸಿಗೆಯ ಬಿಸಿಲಿಗೆ
ತಂಪಾದ ತಂಬುಳಿ
ತಾರೆ ತಂಬುಳಿಯಾ

ನಾಲಗೆಗೆ ರುಚಿ ಆರೋಗ್ಯಕ್ಕೆ ಹಿತಕರವಾಗಿರುವ ತಂಬುಳಿಯನ್ನು ತಯಾರಿಸುವುದು ಅತ್ಯಂತ ಸುಲಭ. ಇದರ ಮೂಲವಸ್ತು ತೆಂಗಿನ ತುರಿ, ಜೀರಿಗೆ , ಮಜ್ಜಿಗೆ ಮತ್ತು ಒಗ್ಗರಣೆ. ವಿಧಾನ ಒಂದೇ ರೀತಿಯಾಗಿದ್ದರೂ , ಕೆಲವನ್ನು ಹುರಿದು, ಕೆಲವನ್ನು ಬೇಯಿಸಿ, ಕೆಲವನ್ನು ಸುಟ್ಟು ಹೀಗೆ ಕೊಂಚ ವ್ಯತ್ಯಾಸಗಳಿವೆ.
ಬನ್ನಿ, ವಿಧ ವಿಧ ರೀತಿಯ ತಂಬುಳಿಗಳನ್ನು ಮಾಡಿ ಸವಿಯೋಣ.

-----------------------------------
೧. ಮೆಂತೆ ತಂಬುಳಿ
-----------------------------------





ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲ :ಒಂದು ಸಣ್ಣ ಚೂರು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಕೆಂಪು ಮೆಣಸು :2

ವಿಧಾನ :
೧.ಮೆಂತೆಯನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಬೆಲ್ಲವನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಕಲಕಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

ಮೆಂತೆ ಕಹಿಯಿರುವ ಕಾರಣ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ. ಸ್ವಲ್ಪ ಜಾಸ್ತಿ ಹಾಕಿದರೂ ತಂಬುಳಿ ಕಹಿಯಾಗುತ್ತದೆ. ಬೇಕಿದ್ದರೆ ಕಾಲು ಚಮಚ ಜೀರಿಗೆ, ಕಾಲು ಚಮಚ ಕಾಳು ಮೆಣಸನ್ನು ಕೂಡ ಮೆಂತೆ ಜತೆ ಹುರಿದು ಒಟ್ಟಿಗೆ ರುಬ್ಬಬಹುದು.

-----------------------------------
೨.ಶುಂಠಿ ತಂಬುಳಿ
----------------------------------


ಬೇಕಾಗುವ ಸಾಮಗ್ರಿಗಳು
ಶುಂಠಿ :ಒಂದು ಇಂಚು
ಜೀರಿಗೆ:ಒಂದು ಚಮಚ
ಹಸಿ ಮೆಣಸು :ಒಂದು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ


ವಿಧಾನ :
೧. ಶುಂಠಿ,ಜೀರಿಗೆ,ಹಸಿ ಮೆಣಸು,ತೆಂಗಿನ ಕಾಯಿ ತುರಿ ಇವುಗಳನ್ನು ನುಣ್ಣಗೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.

ಅಜೀರ್ಣವಾಗಿದ್ದರೆ,ಬಾಯಿ ರುಚಿ ಕೆಟ್ಟಿದ್ದರೆ ಈ ತಂಬುಳಿ ಅತ್ಯುತ್ತಮ ಔಷಧಿ.ಮಜ್ಜಿಗೆ ಹಾಕದೆ ಗಟ್ಟಿಯಾಗಿ ಮಾಡಿದರೆ ಇದು ಶುಂಠಿ ಚಟ್ನಿ ಯಾಗುತ್ತದೆ.

--------------------------------
೩.ನೆಲ್ಲಿಕಾಯಿ ತಂಬುಳಿ
-------------------------------


ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ :ಹತ್ತು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಹಸಿ ಮೆಣಸು :ಒಂದು



ವಿಧಾನ :
೧.ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ.
೨.ಬೀಜರಹಿತ ನೆಲ್ಲಿಕಾಯಿ,ತೆಂಗಿನ ತುರಿ , ಹಸಿ ಮೆಣಸು, ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ.
೩.ಇದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ.


ವಿ.ಸೂ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ತಂಬುಳಿ ಸಹಕಾರಿ.
ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಿ, ಬಳಿಕ ತೆಂಗಿನ ತುರಿ ಜತೆ ರುಬ್ಬಬೇಕು. ಹಸಿ ನೆಲ್ಲಿಕಾಯಿಯನ್ನು ಬೇಯಿಸಿ ಬಳಸಿದರೆ ತಂಬುಳಿಗೆ ವಿಭಿನ್ನ ರೀತಿಯ ರುಚಿ ಬರುತ್ತದೆ. ಹಸಿ ಮೆಣಸಿನ ಬದಲು ಕಾಳು ಮೆಣಸನ್ನು ಬಳಸಬಹುದು.

೪.ಸಾಂಬ್ರಾಣಿ ತಂಬುಳಿ /ಸೀಬೇಕಾಯಿ ಚಿಗುರಿನ ತಂಬುಳಿ /ಮೆಂತೆ ಸೊಪ್ಪಿನ ತಂಬುಳಿ/ ಪಾಲಕ್ ತಂಬುಳಿ

ಯಾವುದೇ ಸೊಪ್ಪಿನ ತಂಬುಳಿ ಮಾಡಬೇಕಾದಲ್ಲಿ ಒಂದು ಹಿಡಿ ಎಲೆಗಳನ್ನು ಬೆಣ್ಣೆ ಅಥವಾ ತುಪ್ಪದಲ್ಲಿ ಹುರಿದು, ತೆಂಗಿನಕಾಯಿ, ಜೀರಿಗೆ,ಹಸಿ ಮೆಣಸಿನ ಜತೆ ರುಬ್ಬಿ. ಉಪ್ಪು ಹಾಕಿ. ಒಗ್ಗರಣೆಗೆ ತುಪ್ಪ ಬಳಸಬೇಕು .


5.ಬ್ರಾಹ್ಮಿ ತಂಬುಳಿ





ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

ಸ್ಮರಣ ಶಕ್ತಿಯ ವೃದ್ಧಿಗೆ ಈ ತಂಬುಳಿ ಅತ್ಯುತ್ತಮ. ಬ್ರಾಹ್ಮಿ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಎಲೆಗಳನ್ನು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅತೀ ಉತ್ತಮ.

6.ಮಾವಿನ ಮಿಡಿ ತಂಬುಳಿ


ಬೇಕಾಗುವ ಸಾಮಗ್ರಿಗಳು
ಉಪ್ಪಿನಕಾಯಿಯಲ್ಲಿರುವ ಮಾವಿನ ಮಿಡಿ :೧
ತೆಂಗಿನ ತುರಿ :ಅರ್ಧ ಲೋಟ
ಮಜ್ಜಿಗೆ:ಎರಡು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ
ಕೆಂಪು ಮೆಣಸು :2

ವಿಧಾನ :
೧.ಮಾವಿನ ಮಿಡಿಯನ್ನು ಉಪ್ಪಿನ ಕಾಯಿಯಿಂದ ಹೊರತೆಗೆದು, ಸಣ್ಣದಾಗಿ ಹೆಚ್ಚಿ. ಅದರಲ್ಲಿ ಗೊರಟೆನಾದರೂ ಬಲಿತಿದ್ದರೆ, ಹೆಚ್ಚುವಾಗ ಜಾಗ್ರತೆವಹಿಸಿ, ಗೊರಟನ್ನು ನಿಧಾನವಾಗಿ ಹೊರತೆಗೆದು ಉಳಿದ ಮಾವಿನ ಕಾಯಿಯನ್ನು ಬಳಸಿ.
೨. ಇದನ್ನು ತೆಂಗಿನ ತುರಿಯ ಜತೆ ರುಬ್ಬಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ.
೪.ಸಿದ್ಧಪಡಿಸಿದ ಒಗ್ಗರಣೆಯನ್ನು ರುಬ್ಬಿದ ತೆಂಗಿನ ತುರಿ,ಮಾವಿನ ಮಿಶ್ರಣಕ್ಕೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಕಲಸಿ.
೫.ಇನ್ನೇಕೆ ತಡ , ತಂಬುಳಿ ಸವಿಯಿರಿ !

ವಿ.ಸೂ : ಮಾವಿನ ಮಿಡಿ ಇರುವ ಕಾಲದಲ್ಲಿ ಹಸಿ ಮಾವಿನ ಮಿಡಿಯನ್ನು ಬಳಸಬಹುದು.



7.ದಾಳಿಂಬೆ ಸಿಪ್ಪೆ ತಂಬುಳಿ /ಕಿತ್ತಳೆ ಸಿಪ್ಪೆ ತಂಬುಳಿ

ಒಣಗಿದ ದಾಳಿಂಬೆ ಸಿಪ್ಪೆಯನ್ನು ತುಪ್ಪದಲ್ಲಿ ಹುರಿಯಿರಿ. ಇದನ್ನು ತೆಂಗಿನ ತುರಿಯ ಜತೆ ರುಬ್ಬಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ತುಪ್ಪದ ಒಗ್ಗರಣೆ ಕೊಡಿ. ಇದೇ ಥರ ಕಿತ್ತಳೆ ಸಿಪ್ಪೆಯ ತಂಬುಳಿಯನ್ನು ಮಾಡಬಹುದು. ಎಚ್ಚಿರಿಕೆ ವಹಿಸಬೇಕಾದ ವಿಚಾರವೆಂದರೆ ದಾಳಿಂಬೆಯ ಸಿಪ್ಪೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಸಬೇಕು . ಇಲ್ಲವೆಂದಾದಲ್ಲಿ ತಂಬುಳಿ ಒಗರಾಗುತ್ತದೆ.

೮. ಬಾಳೆ ಹೂವಿನ ತಂಬುಳಿ

ಬಾಳೆ ಹೂವನ್ನು ಬಿಡಿಸಿ, ಅದರ ಒಳ ತಿರುಳನ್ನು ಕೆಂಡದ ಮೇಲೆ /ಗ್ಯಾಸ್ ಮೇಲೆ ನೀರವಾಗಿ / ಮೈಕ್ರೋ ವೇವ್ ಓವನ್ ನಲ್ಲಿ ಸುಟ್ಟು ಬಳಿಕ ತೆಂಗಿನಕಾಯಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

೯.ಕೇಪುಳ ಹೂವಿನ ತಂಬುಳಿ


ಒಂದು ಹಿಡಿ ಕೇಪುಳ ಹೂವನ್ನು ನೀರಿನಲ್ಲಿ ಬೇಯಿಸಬೇಕು. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

೧೦. ಪುನರ್ಪುಳಿ ತಂಬುಳಿ

೫-೬ ಪುನರ್ಪುಳಿ (ಕೋಕಂ ) ಅನ್ನು ನೀರಿನಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

ಬಿಸಿಲಿಂದಾಗಿ ತೀರಾ ದಣಿವಾಗಿದ್ದರೆ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟಿದ್ದರೆ ಈ ತಂಬುಳಿ ಅತ್ಯತ್ತಮ auShadhi .

Saturday, September 12, 2009

ಚಹಾ ಬಗೆ ಬಗೆ..

'ಹೊಟ್ಟೆಗೆ ಹಿಟ್ಟು' ಅಂಕಣ...
'ಸಖಿ ' ಪಾಕ್ಷಿಕ (ಸಪ್ಟಂಬರ್ ೧-೧೫ ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ

ಚಹಾ ಬಗೆ ಬಗೆ..

ಕಲ್ಪಿಸಿಕೊಳ್ಳಿ ..ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಿಮ್ಮ ಕೈಯಲ್ಲೊಂದು ಲೋಟ ಹಬೆಯಾಡುವ ಚಹಾ..ಆಹಾ..ಮಳೆಯ ಚಳಿಗೆ ಬೆಚ್ಚನೆಯ ಚಹಾ !! ಎಷ್ಟೊಂದು ಹಿತ!

ಚೈನಾದ ದಂತ ಕಥೆಯ ಪ್ರಕಾರ ಅಲ್ಲಿಯ ಚಕ್ರವರ್ತಿಯಾಗಿದ್ದ ಶೆನಂಗ್ ಬಿಸಿ ನೀರು ಕುಡಿಯುತ್ತಿದ್ದಾಗ ಗಾಳಿಗೆ ಹಾರಿ ಬಂದ ಸಸ್ಯವೊಂದರ ಎಲೆಗಳು ಬಿಸಿ ನೀರಿಗೆ ಬಿದ್ದು ,ನೀರಿನ ಬಣ್ಣ ಬದಲಾಗುವುದನ್ನು ಕಂಡನಂತೆ. ಆತನೇ ಟೀ ಯನ್ನು ಕಂಡು ಹುಡುಕಿದ ಎನ್ನುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಝೆನ್ ಗುರು ಬೋಧಿಧರ್ಮ ಎಂಬಾತನ ಕಣ್ಣ ರೆಪ್ಪೆಗಳೇ ಚಹಾ ಗಿಡಗಳು ಆದವು ಎಂಬ ಪ್ರತೀತಿ. ಬ್ರಿಟಿಷರು ಜಾರಿಗೆ ತಂದ ಟೀ ಶಾಸನದ ವಿರುದ್ದ ಸಿಡಿದೆದ್ದ ಬೋಸ್ಟನ್ ನಿವಾಸಿಗಳ ಪ್ರತಿಭಟನೆಯ ಪರಿ 'ಬೋಸ್ಟನ್ ನ ಟೀ ಪಾರ್ಟಿ' ಎಂದು ಚರಿತ್ರೆಯಲ್ಲಿ
ದಾ ಖಲಾಗಿದೆ.
ಅತ್ಯುತ್ತಮ ಜೋಡಿಗೆ ಉತ್ತರ ಕರ್ನಾಟಕದ ಮಂದಿ 'ಚಹಾ ದ ಜೋಡಿ ಚೂಡಾದ ಹಂ~ಗ ' ಅನ್ನುವ ಉಪಮೆಯನ್ನು ನೀಡಿಯಾರು!!

ಕಥೆ ಏನೇ ಇರಲಿ, ಹಿತ ಮಿತವಾದ ಚಹಾ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ಸಂಶೋಧನೆಗಳಿಂದ ಸಾಬೀತಾಗಿದೆ. ಇದು ನಮ್ಮ ನಿಮ್ಮೆಲ್ಲರ ದಿನ ನಿತ್ಯದ ಪೇಯವಾಗಿ ಮಹತ್ತರ ಸ್ಥಾನ ಪಡೆದಿದೆ.

ನವೀನತೆಯ ಅನ್ವೇಷಣೆಯಲ್ಲಿ ಮನುಷ್ಯ ಈ ವರೆಗೆ ಅನೇಕ ಪ್ರಕಾರಗಳಲ್ಲಿ ತನ್ನ ಚಾತುರ್ಯವನ್ನು ಪ್ರಚುರಪಡಿಸಿದ್ದಾನೆ. ಇದಕ್ಕೆ ಚಹಾವೂ ಹೊರತಲ್ಲ.
ನಿತ್ಯವೂ ಮಾಡುವ ಚಹಾ ಕ್ಕೆ ಕೊಂಚ ಹೊಸತನವನ್ನು ಸೇರಿಸಿ, ಮತ್ತಷ್ಟು ಉಲ್ಲಾಸದಾಯಕ ಅನುಭವ ವನ್ನು ಉಂಟು ಮಾಡಬೇಕೆ ? ಕೆಳಗಿನ ಪ್ರಯೋಗಗಳನ್ನು ಮಾಡಿ ನೋಡಿ.


-------------------------------------------------------------
ನಿಂಬೆ ಚಹಾ
-------------------------------------------------------------
ಬೇಕಾಗುವ ಸಾಮಗ್ರಿಗಳು

ನೀರು :ಅರ್ಧ ಲೋಟ
ಟೀ ಪುಡಿ :ಒಂದು ಚಮಚ
ಸಕ್ಕರೆ :ರುಚಿಗೆ ತಕ್ಕಷ್ಟು
ಲಿಂಬೆ ರಸ :ನಾಲ್ಕು ಚಮಚ

೧.ನೀರಿನೊಂದಿಗೆ ಚಹಾ ಪುಡಿ ಹಾಕಿ ಕುದಿಸಿ.
೨.ಬಳಿಕ ಅದನ್ನು ತಣಿಸಿ ಸೋಸಿ ಇಟ್ಟುಕೊಳ್ಳಿ
೩.ಇದಕ್ಕೆ ಲಿಂಬೆ ರಸ ಮತ್ತು ಸಕ್ಕರೆ ಬೆರೆಸಿ ಕಲಕಿ. ಬೇಕಿದ್ದರೆ ಮಂಜುಗಡ್ಡೆಯ ತುಂಡುಗಳನ್ನು ಸೇರಿಸಿ. ಸವಿಯಿರಿ.

ಬಿಸಿ ನಿಂಬೆ ಚಹಾ ಬೇಕೆಂದಿದ್ದರೆ (೨) ರಲ್ಲಿ ಕುದಿಸಿದ ಚಹವನ್ನು ತಣಿಸುವ ಅವಶ್ಯಕತೆ ಇಲ್ಲ.


--------------------------------------------------------------------
ಮಸಾಲೆ ಚಹಾ
----------------------------------------------------------------
ಮಸಾಲೆ ಪುಡಿಗೆ
ಲವಂಗ : 2
ಏಲಕ್ಕಿ :ಸ್ವಲ್ಪ
ದಾಲ್ಚಿನ್ನಿ :ಒಂದು ಸಣ್ಣ ಚೂರು

ಈ ಮೇಲೆ ಸೂಚಿಸಿದ ಸಾಮಗ್ರಿಗಳನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ.

ಹಾಲು :ಒಂದು ಲೋಟ
ಸಕ್ಕರೆ :ಒಂದು ಚಮಚ
ಚಹಾ ಪುಡಿ: ಒಂದು ಚಮಚ

ವಿಧಾನ
೧.ಹಾಲು, ಸಕ್ಕರೆ, ಚಹಾ ಪುಡಿ ಮತ್ತು ಮಸಾಲೆ ಪುಡಿಗಳನ್ನು ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಕುದಿಸಿ.
೨.ಬಳಿಕ ಸೋಸಿ, ಬಿಸಿ ಬಿಸಿಯಾಗಿ ಕುಡಿಯಿರಿ.

--------------------------------
ಶುಂಠಿ ಚಹಾ
--------------------------------
ಮೇಲೆ ಸೂಚಿಸಿರುವ ವಿಧಾನದಲ್ಲಿ , ಮಸಾಲೆ ಪುಡಿಗೆ ಬದಲಾಗಿ ಹಸಿ ಶುಂಠಿಯ ೩-೪ ಸಣ್ಣ ತುಂಡುಗಳನ್ನು ಸೇರಿಸಿ ಹಾಲು,ಸಕ್ಕರೆ,ಚಹಾ ಪುಡಿ ಯ ಜತೆ ಕುಡಿಸಿದರೆ ಶುಂಠಿ ಚಹಾ ಸಿದ್ಧ.ಉತ್ತರ ಭಾರತದಲ್ಲಿ ಬಹುವಾಗಿ ಬಳಕೆಯಲ್ಲಿರುವ ' ಅಧ್ರಕ್ ವಾಲೀ ಚಾಯಿ ' ಅಂದರೆ ಇದೇ.


-----------------------------------
ಏಲಕ್ಕಿ ಚಹಾ
--------------------------------------------
ಮಸಾಲೆ ಪುಡಿಗೆ ಬದಲಾಗಿ ಏಲಕ್ಕಿ ಯ ಪುಡಿಯನ್ನು ಸೇರಿಸಿದರೆ ಸುವಾಸನಾ ಭರಿತ ಇಲಾಇಚಿ ಟೀ ಅರ್ಥಾತ್ ಏಲಕ್ಕಿ ಚಹಾ ತಯಾರು !


-------------------------------
ತುಳಸಿ ಚಹಾ
-------------------------------
ಅರ್ಧ ಹಿಡಿ ತುಳಸಿಯ ಎಲೆಗಳನ್ನು ಚಹಾ ಪುಡಿ, ಹಾಲು, ಸಕ್ಕರೆಯ ಜತೆ ಕುದಿಸಿ, ಸೋಸಿ , ಕುಡಿಯಿರಿ. ಇದು ವಿಶಿಷ್ಟ ಪರಿಮಳದಿಂದ ಕೂಡಿದ ಚಹಾ. ಪರ್ವತ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಬಳಕೆಯಲ್ಲಿದೆ.

----------------------
ಬ್ಲಾಕ್ ಟೀ
---------------------
ಒಂದು ಲೋಟ ನೀರಿಗೆ ಒಂದು ಚಮಚ ಚಹಾ ಪುಡಿಯನ್ನು ಹಾಕಿ .ಕುದಿಸಿ, ಸೋಸಿ ಕುಡಿಯಿರಿ.

--------------------
ಗ್ರೀನ್ ಟೀ
-------------------
ಗ್ರೀನ್ ಟೀಯು ಇತ್ತೀಚೆಗಿನ ದಿನಗಳಲ್ಲಿ ಬಹುವಾಗಿ ಉಪಯೋಗಿಸಲ್ಪಡುವ ಆರೋಗ್ಯಕರ ಪೇಯಗಳಲ್ಲಿ ಒಂದೆಂದು ಖ್ಯಾತವಾಗಿದೆ. ಚಹಾ ಎಲೆಗಳನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಗ್ರೀನ್ ಟೀ ಪುಡಿಯನ್ನು ತಯಾರಿಸಲಾಗುತ್ತದೆ.

ಒಂದು ಲೋಟ ಕುದಿಯುವ ಬಿಸಿ ನೀರಿಗೆ ಒಂದು ಟೀ ಬ್ಯಾಗ್ ಗ್ರೀನ್ ಟೀ ಯನ್ನು ಸುಮಾರು ಐದು ನಿಮಿಷಗಳ ಕಾಲ ಮುಳುಗಿಸಿಡಬೇಕು. ಆ ಬಳಿಕ ಟೀ ಬ್ಯಾಗನ್ನು ಹೊರ ತೆಗೆಯಿರಿ. ಹಸಿರು ಚಹಾ ಪುಡಿಯ ಸ್ವಾದವನ್ನು, ಬಣ್ಣವನ್ನು ಹೀರಿಕೊಂಡ ಬಿಸಿ ನೀರನ್ನು ಹಾಗೇ ಅಥವಾ ಜೇನು ತುಪ್ಪ ಬೆರೆಸಿ ಕುಡಿಯಬಹುದು.

----------------------------------------------------------------------------------------------------------------------------------------------------------------------

Monday, August 24, 2009

'ಹೊಟ್ಟೆಗೆ ಹಿಟ್ಟು' ಅಂಕಣ...

'ಸಖಿ ' ಪಾಕ್ಷಿಕ (ಆಗಸ್ಟ್ ೧೬- ೩೧ ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ


ಅಕ್ಕಿ ವಿಶ್ವದಾದ್ಯಂತ ಬಹು ಜನರ ಪ್ರಮುಖ ಆಹಾರವಾಗಿದ್ದು, ಲ್ಯಾಟಿನ್ ಅಮೇರಿಕ , ವೆಸ್ಟ್ ಇಂಡೀಸ್ ಮತ್ತು ಏಶಿಯಾ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. 'ಅಕ್ಕಿ ತಿಂದವನು ಹಕ್ಕಿಯಂತಾಗುವನು ' ಎಂಬ ಗಾದೆ ಬಹಳ ಪ್ರಚಲಿತವಾಗಿದೆ. 'ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ,ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ' ಇಲ್ಲಿ ಅನ್ನ ಎನ್ನುವುದು ಆಹಾರ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಅನ್ನವನ್ನು ಪರಬ್ರಹ್ಮ ಸ್ವರೂಪಿ ಎಂತಲೂ , ಅನ್ನದಾನವನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ.

ಅಕ್ಕಿಯಲ್ಲಿ ಕಾರ್ಬೊಹೈಡ್ರೇಟ ಅಂಶ ಹೇರಳವಾಗಿದೆ. (ಪ್ರತಿ ನೂರು ಗ್ರಾಮಿಗೆ ೭೯ ಗ್ರಾಮಿನಷ್ಟು ). ವಿಟಮಿನ್ ಬಿ ೬,ವಿಟಮಿನ್ ಬಿ ೯,ಕ್ಯಾಲ್ಸಿಯಂ, ಕಬ್ಬಿಣ ಮುಂತಾದ ಪೋಷಕಾಂಶಗಳನ್ನು ಹೊಂದಿದೆ.

ಸಾಮಾನ್ಯವಾಗಿ ಅಕ್ಕಿಯನ್ನು ಅನ್ನ ಮಾಡಿ, ಸಾರು ಸಾಂಬಾರುಗಲ ಜತೆ ಸವಿಯುವುದು ಒಂದು ವಿಧವಾದರೆ, ಇನ್ನೊಂದು ಪ್ರಕಾರದಲ್ಲಿ ಅಕ್ಕಿಯ ಜತೆ ವಿವಿಧ ಪದಾರ್ಥಗಳನ್ನು ಮಿಶ್ರ ಮಾಡಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.

--------------------------------------------------------
1.ಪುಳಿಯೋಗರೆ
---------------------------------------------------------





ಬೇಕಾಗುವ ಸಾಮಗ್ರಿಗಳು:

ಗೊಜ್ಜು ತಯಾರಿಸಲು:
ಹುಣಸೇ ಹಣ್ಣು: ಎರಡು ಹಿಡಿ
ಜೀರಿಗೆ,ಕಾಳು ಮೆಣಸು: ತಲಾ ಒಂದು ಚಮಚ
ಮೆಂತ್ಯ: ಕಾಲು ಚಮಚ
ಕೊತ್ತಂಬರಿ ಕಾಳು: ಆರ್ಧ ಹಿಡಿ
ಎಳ್ಳು:ಒಂದು ಚಮಚ
ನೆಲಕಡಲೆ: ಒಂದು ಹಿಡಿ
ಇಂಗು: ಒಂದು ಚಿಟಿಕೆ
ಕೆಂಪು ಮೆಣಸು: ೬
ಉಪ್ಪು: ರುಚಿಗೆ ತಕ್ಕಷ್ಟು
ಬೆಲ್ಲ: ಒಂದು ತುಂಡು

ಒಗ್ಗರಣೆಗೆ:
ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ: ತಲಾ ಒಂದು ಚಮಚ
ಗೋಡಂಬಿ: ಒಂದು ಹಿಡಿ
ಅರಿಶಿಣ: ಕಾಲು ಚಮಚ
ಬೇವಿನ ಎಲೆ: ೧೦ ಎಸಳು
ಕೊಬ್ಬರಿ ತುರಿ: ಅರ್ಧ ಲೋಟ


ವಿಧಾನ :

ಗೊಜ್ಜು ತಯಾರಿ:

೧.ಗೊಜ್ಜು ತಯಾರಿಸಲು ಸೂಚಿಸಿರುವ ಪದಾರ್ಥಗಳಲ್ಲಿ ನೆಲಕಡಲೆ, ಹುಣಸೇಹುಳಿ ಹೊರತು ಪಡಿಸಿ, ಉಳಿದವುಗಳನ್ನು ಎಣ್ಣೆ ಹಾಕದೆ ಹುರಿದು, ನೀರು ಹಾಕದೆ ರುಬ್ಬಿ.
೨.ಹುಣಸೇ ಹಣ್ಣನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ, ರಸ ಹಿಂಡಿ ಇಟ್ಟುಕೊಳ್ಳಿ.
೩.ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಅರಸಿನ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ ಇಟ್ಟುಕೊಳ್ಳಿ. ಇದಕ್ಕೆ ನೆಲಕಡಲೆ ಸೇರಿಸಿ ಹುರಿಯಿರಿ.
೪.ಈಗ ಹುಣಸೇ ರಸ,ರುಬ್ಬಿದ ಮಸಾಲೆಯನ್ನು ಇದರ ಜತೆ ಹಾಕಿ ಕಲಸಿ.
೫.ಮಿಶ್ರಣವು ಕುದಿಯುತ್ತಿದ್ದಂತೆ ಇದಕ್ಕೆ ಸ್ವಲ್ಪ ಉಪ್ಪು, ಬೆಲ್ಲ ಸೇರಿಸಿ ಕಲಕಿ.
೬.ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಒಲೆ ಆರಿಸಿ.
೭.ಈ ಗೊಜ್ಜು ಆರಿದ ಮೇಲೆ ಬಾಟಲಿನಲ್ಲಿ ತುಂಬಿಸಿ ಇಟ್ಟುಕೊಳ್ಳಬಹುದು. ಬೇಕೆಂದಾಗ ಪುಳಿಯೋಗರೆ ಮಾಡಿಕೊಳ್ಳಲು ಉಪಯೋಗಿಸಬಹುದು.


ಪುಳಿಯೋಗರೆ ತಯಾರಿಗೆ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೩.ಇದಕ್ಕೆ ಗೋಡಂಬಿ, ನೆಲಕಡಲೆ ಸೇರಿಸಿ,ಕಲಕಿ.
೪.ಗೋಡಂಬಿ, ನೆಲಕಡಲೆ ಕೆಂಪಗಾಗುತ್ತಿದ್ದಂತೆ ಇದಕ್ಕೆ ಕೊಬ್ಬರಿ ತುರಿ ಸೇರಿಸಿ.
೫.ಈಗಾಗಲೇ ತಯಾರಿಸಿರುವ ಗೊಜ್ಜನ್ನು ಹಾಕಿ, ಕಲಸಿ.
೬.ಈಗ ಅನ್ನ, ಉಪ್ಪು ಸೇರಿಸಿ, ಕಲಸಿ.
೭.ಇನ್ನೇಕೆ ತಡ, ಪುಳಿಯೋಗರೆ ತಿನ್ನಿ!




-------------------------------------------------------------------------------
2.ಬಿಸಿ ಬೇಳೆ ಭಾತ್
--------------------------------------------------------------------------------




ಬೇಕಾಗುವ ಪದಾರ್ಥಗಳು


ಮಸಾಲೆಗೆ:
ಕೊತ್ತಂಬರಿ ಕಾಳು: ೪ ಚಮಚ
ಲವಂಗ: ೪
ದಾಲ್ಚಿನ್ನಿ: ೨ ಚೂರು
ಸಾಸಿವೆ, ಜೀರಿಗೆ, ಉದ್ದು, ಅರಸಿನ, ಎಣ್ಣೆ: ತಲಾ ಒಂದು ಚಮಚ
ಇಂಗು: ಚಿಟಿಕೆ
ಕಾಳು ಮೆಣಸು: ಅರ್ಧ ಚಮಚ
ಕೆಂಪು ಮೆಣಸು: ೩
ಬೇವಿನ ಎಲೆ: ೧೦ ಎಸಳು
ಎಣ್ಣೆ: ಒಂದು ಚಮಚ

ಹೆಚ್ಚಿದ ತರಕಾರಿ:

ಬೀನ್ಸು, ಕ್ಯಾರೆಟ್, ನೀರುಳ್ಳಿ, ಬಟಾಣಿ: ತಲಾ ಕಾಲು ಲೋಟ
ಬಟಾಟೆ: ಒಂದು
ತೆಂಗಿನ ತುರಿ: ಒಂದು ಲೋಟ

ಅಕ್ಕಿ: ಒಂದು ಲೋಟ
ತುಪ್ಪ: ೨ ಚಮಚ
ತೊಗರಿ ಬೇಳೆ: ಅರ್ಧ ಲೋಟ

ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ರಸ: ಎರಡು ಚಮಚ

ವಿಧಾನ

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಬೇಳೆ ಮತ್ತು ತರಕಾರಿಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ಮಸಾಲೆಗೆ ಹೇಳಿದ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು, ತೆಂಗಿನ ತುರಿಯ ಜತೆ ರುಬ್ಬಿ. ಸ್ವಲ್ಪ ನೀರು ಹಾಕಬೇಕು.
೪.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ ಕರಿದು ಇಟ್ಟುಕೊಳ್ಳಿ.ಇದಕ್ಕೆ ಬೇಯಿಸಿದ ತರಕಾರಿ, ಬೇಳೆ ಮತ್ತು ರುಬ್ಬಿಟ್ಟ ಮಿಶ್ರಣವನ್ನು ಸೇರಿಸಿ ಕಲಕಿ.
೫.ಸ್ವಲ್ಪ ಉಪ್ಪು ಹಾಕಿ ಕಲಕಿ.
೬.ದಪ್ಪನೆಯ ಹದಕ್ಕೆ ಬರುತ್ತಿದ್ದಂತೆ ಅನ್ನವನ್ನು ಸೇರಿಸಿ. ಇನ್ನೂ ಸ್ವಲ್ಪ ಉಪ್ಪು ಹಾಕಿ ಕಲಕಿ. ಇದಕ್ಕೆ ಹುಣಸೆ ರಸ ಸೇರಿಸಿ. ಬೇಕಿದ್ದರೆ ಸಣ್ಣ ತುಂಡು ಬೆಲ್ಲ ಹಾಕಬಹುದು.
೭.ಈಗ ಬಿಸಿ ಬೇಳೆ ಭಾತ್ ತಯಾರು.
೮.ಚಿಪ್ಸ್ ಅಥವಾ ಖಾರ ಬೂಂದಿ ಕಾಳು / ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಸವಿಯಿರಿ.


-----------------------------------------------
3.ಕಾಪ್ಸಿಕಮ್ ರೈಸ್ (ದೊಣ್ಣೆ ಮೆಣಸಿನ ಕಾಯಿ ಅನ್ನ)
--------------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬೇವಿನೆಲೆ: ೧೦ ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಕೊತ್ತಂಬರಿ ಕಾಳು: ಎರಡು ಚಮಚ
ನೆಲಕಡಲೆ: ಒಂದು ಹಿಡಿ
ಕೆಂಪು ಮೆಣಸು: ೩
ಜೀರಿಗೆ, ಸಾಸಿವೆ, ಉದ್ದು: ತಲಾ ಒಂದು ಚಮಚ

ದೊಣ್ಣೆ ಮೆಣಸು ಸಣ್ಣಗೆ ಹೆಚ್ಚಿದ್ದು: ೧ ಲೋಟ
ತುಪ್ಪ: ೨ ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ

ವಿಧಾನ:

೧.ಕೊತ್ತಂಬರಿ ಕಾಳು, ನೆಲಕಡಲೆ, ಕೆಂಪು ಮೆಣಸು, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಎಣ್ಣೆ ಹಾಕದೆ ಹುರಿಯಿರಿ. ಪರಿಮಳ ಬರುತ್ತಿದ್ದಂತೆ ಬೇವಿನ ಎಲೆ ಹಾಕಿ.
೨.ಹುರಿದ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ. ಈ ಪುಡಿಯನ್ನು ಡಬ್ಬದಲ್ಲಿ ಇಟ್ಟುಕೊಂಡರೆ, ದೊಣ್ಣೆ ಮೆಣಸಿನ ಅನ್ನಕ್ಕೆ ಬೇಕೆಂದಾಗ ಬಳಸಬಹುದು.
೩.ತುಪ್ಪವನ್ನು ಬಾಣಲೆಗೆ ಹಾಕಿ, ಸ್ವಲ್ಪ ಬಿಸಿಯಾಗುತ್ತಿದ್ದಂತೆ ಹೆಚ್ಚಿದ ದೊಣ್ಣೆ ಮೆಣಸಿನ ತುಂಡುಗಳನ್ನು ಹಾಕಿ, ಬಾಡಿಸಿ. ಬೇಕೆಂದರೆ ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳದಿಂದ ಮುಚ್ಚಿ.
೪.ದೊಣ್ಣೆ ಮೆಣಸು ಸರಿಯಾಗಿ ಬಾಡುತ್ತಿದ್ದಂತೆ, ಇದಕ್ಕೆ ರುಬ್ಬಿಟ್ಟ ಪುಡಿಯನ್ನು ಹಾಕಿ ಕಲಕಿ. ಉಪ್ಪು ಸೇರಿಸಿ. ೨-೩ ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
೫.ದೊಣ್ಣೆ ಮೆಣಸಿನ ಮಸಾಲೆಯ ಜತೆ ಅನ್ನ ಕಲಸಿ. ಸ್ವಲ್ಪ ಉಪ್ಪು, ನಿಂಬೆ ರಸ ಹಾಕಿ. ಕಲಕಿ.
೬.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೭.ದೊಣ್ಣೆ ಮೆಣಸಿನ ಅನ್ನ ತಯಾರು. ಇದನ್ನು ಸೌತೆಕಾಯಿ ಮೊಸರು ಗೊಜ್ಜಿನ ಜತೆ ಸವಿಯಿರಿ.


---------------------------------
4. ಸಬ್ಜಿಯೋಂಕಿ ತೆಹ್ರಿ
------------------------------------

ಇದು ಉತ್ತರ ಪ್ರದೇಶದ ಖಾದ್ಯ.

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೨ ಚಮಚ
ಜಜ್ಜಿದ ಬೆಳ್ಳುಳ್ಳಿ: ೬ ಎಸಳು
ಜಾಯಿಕಾಯಿ ಪುಡಿ, ಏಲಕ್ಕಿ ಪುಡಿ: ತಲಾ ಒಂದು ಚಮಚ
ಕಸೂರಿ ಮೇಥಿ: ೧ ಲೋಟ
ಹಸಿ ಮೆಣಸು: ೪
ತೆಳ್ಳನೆ ಹೆಚ್ಚಿದ ಶುಂಠಿ: ೨ ಚಮಚ
ಕ್ಯಾರ್‍ಎಟ್: ೨
ಬೀನ್ಸ್ : ೧೦
ಬಟಾಟೆ: ೨
ಹಸಿ ಬಟಾಣಿ: ಒಂದು ಹಿಡಿ
ತುಪ್ಪ: ೫ ಚಮಚ
ಮೊಸರು: ಅರ್ಧ ಲೋಟ
ಮೆಣಸಿನ ಹುಡಿ: ಒಂದು ಚಮಚ
ಅರಸಿನ: ಕಾಲು ಚಮಚ
ಹಾಲಿನ ಕೆನೆ: ಅರ್ಧ ಲೋಟ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಬಟಾಟೆ, ಕ್ಯಾರೆಟ್, ಬೀನ್ಸ್ ಇವುಗಳನ್ನು ೧ ಇಂಚು ಉದ್ದನೆಯ ಹೋಳುಗಳಾಗಿ ಹೆಚ್ಚಿಕೊಳ್ಳಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಕಸೂರಿ ಮೇಥಿ ಎಲೆಗಳನ್ನು ಹಾಕಿ ಕಲಕಿ.
೩.ಹೆಚ್ಚಿದ ತರಕಾರಿ, ಬಟಾಣಿ, ಉಪ್ಪು ಹಾಕಿ ಮಂದ ಉರಿಯಲ್ಲಿ ಸುಮಾರು ಐದು ನಿಮಿಷ ಕಲಕಿ.
೪.ಇದಕ್ಕೆ ಮೊಸರು, ಮೆಣಸಿನ ಹುಡಿ, ಅರಸಿನ ಹುಡಿ ಸೇರಿಸಿ. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು.
೫.ಸ್ವಲ್ಪ ಹೊತ್ತು ಹಾಗೇ ಕುದಿಸಿ.
೬.ಇದಕ್ಕೆ ಹೆಚ್ಚಿದ ಹಸಿ ಮೆಣಸು, ಏಲಕ್ಕಿ, ಜಾಯಿಕಾಯಿ ಹುಡಿ, ಸ್ವಲ್ಪ ನೀರು ಮತ್ತು ಅಕ್ಕಿಯನ್ನು ಸೇರಿಸಿ.
೭.ಪಾತ್ರೆಗೆ ಮುಚ್ಚಳ ಇಟ್ಟು ಸುಮಾರು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ.
೮.ಅನ್ನ ಬೆಂದಿದೆಯೆ ಇಲ್ಲವೇ ಪರೀಕ್ಷಿಸಿ. ಇಲ್ಲವೆಂದಾದಲ್ಲಿ ಇನ್ನೂ ಸ್ವಲ್ಪ ನೀರು ಚಿಮುಕಿಸಿ,ಬೇಯಿಸಿ.
೯.ಅನ್ನ ಸರಿಯಾಗಿ ಬೆಂದ ಮೇಲೆ, ಇದಕ್ಕೆ ಸ್ವಲ್ಪ ಉಪ್ಪು, ಹಾಲಿನ ಕೆನೆ ಹಾಕಿ ಕಲಕಿ.
೧೦.ಇದೀಗ ’ಸಬ್ಜಿಯೋಂಕಿ ತೆಹ್ರಿ’ ತಯಾರು. ಬಿಸಿ ಬಿಸಿ ಇರುವಾಗಲೇ ತಿನ್ನಿ.

Friday, July 24, 2009

ಅನ್ನದಲ್ಲಿ ಬಗೆ ಬಗೆ...
------------------------------


ಪುದೀನಾ ಪಲಾವು
------------------------------



ಪುದೀನಾ ಎಲೆ: ೧ ಲೋಟ
ಅಕ್ಕಿ: ೧ ಲೋಟ
ನೀರುಳ್ಳಿ: ೧
ಬೆಳ್ಳುಳ್ಳಿ: ೪ ಎಸಳು
ಶುಂಠಿ: ಒಂದು ಸಣ್ಣ ಚೂರು
ಲವಂಗ: ೪
ಕಾಳು ಮೆಣಸು: ೫
ಜಾಯಿಕಾಯಿ ಹೂವು: ಒಂದು ಸಣ್ಣ ಚೂರು
ಚಕ್ರ ಮೊಗ್ಗು: ೧ ಸಣ್ಣ ಚೂರು
ಎಣ್ಣೆ: ಎರಡು ಚಮಚ
ಹಸಿ ಮೆಣಸು: ೧
ಜೀರಿಗೆ: ೧ ಚಮಚ
ಲಿಂಬೆ ರಸ: ೧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು, ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಲವಂಗ, ಕಾಳು ಮೆಣಸು, ಜಾಯಿಕಾಯಿ ಹೂವು, ಚಕ್ರ ಮೊಗ್ಗು ಇವುಗಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
೩.ಮಿಕ್ಸಿಯಲ್ಲಿ ಪುದೀನಾ, ಬಾಣಲೆಯಲ್ಲಿ ಹುರಿದಿಟ್ಟ ಸಾಮಗ್ರಿಗಳು, ಶುಂಠಿ, ಬೆಳ್ಳುಳ್ಳಿ ಇವುಗಳನ್ನು ಒಟ್ಟಿಗೆ ರುಬ್ಬಿ.
೪.ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ.
೫.ಬಳಿಕ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಕಂದು ಬಣ್ಣ ಬರುವ ತನಕ ಹುರಿಯಿರಿ. ಒಂದು ಹಸಿ ಮೆಣಸನ್ನು ಚೂರು ಮಾಡಿ ಹಾಕಿ.
೬.ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣವನ್ನು ಹಾಕಿ, ಕಲಕಿ.
೭.ಇದು ಕುದಿಯುತ್ತಿದ್ದಂತೆ, ಅನ್ನವನ್ನು ಸೇರಿಸಿ. ನಿಂಬೆ ರಸ, ಉಪ್ಪು ಹಾಕಿ ಕಲಕಿ.
೮.ಎರಡು ನಿಮಿಷ ಮಂದ ಉರಿಯಲ್ಲಿ ಕಲಕಿ. ಇದೀಗ ಪುದೀನಾ ಪಲಾವು ತಯಾರು. ಇದೇ ಥರ ಮೆಂತೆ ಸೊಪ್ಪಿನ ಪಲಾವನ್ನು ಮಾಡಬಹುದು.

-------------------------------------------
ಜೀರಾ ರೈಸ್
---------------------------------------------
ಅತ್ಯಂತ ಸುಲಭವಾದ ಅಡುಗೆ ವಿಧಾನ ಇದು.



ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.

ವಿ.ಸೂ:ಇಡೀ ಲವಂಗದ ಬದಲು ಲವಂಗದ ಪುಡಿಯನ್ನೂ ಹಾಕಬಹುದು.

-----------------------------------------------------
ವಾಂಗಿ ಭಾತ್

ಬೇಕಾಗುವ ಪದಾರ್ಥಗಳು

ಅಕ್ಕಿ: ಒಂದು ಲೋಟ

ಬದನೆ ಪಲ್ಯಕ್ಕೆ:

ಬದನೆಕಾಯಿ: ೪
ಎಣ್ಣೆ: ೪ ಚಮಚ
ಸಾಸಿವೆ: ಒಂದು ಚಮಚ
ಜೀರಿಗೆ: ಒಂದು ಚಮಚ
ಉದ್ದು:ಒಂದು ಚಮಚ
ಅರಸಿನ: ಕಾಲು ಚಮಚ
ಇಂಗು: ಚಿಟಿಕೆ
ಕೆಂಪು ಮೆಣಸು: ೩
ಉಪ್ಪು:ರುಚಿಗೆ ತಕ್ಕಷ್ಟು
ಬೇವಿನ ಎಲೆ: ೧೦
ಲಿಂಬೆ ರಸ: ಒಂದು ಚಮಚ

ಮಸಾಲೆಗೆ:

ಕಡಲೆ ಬೇಳೆ, ಉದ್ದಿನ ಬೇಳೆ, ದಾಲ್ಚಿನ್ನಿ, ಲವಂಗ, ಗಸಗಸೆ, ಕಾಳು ಮೆಣಸು, ಕೊತ್ತಂಬರಿ ಕಾಳು: ತಲಾ ಒಂದು ಚಮಚ
ಕೊಬ್ಬರಿ ತುರಿ: ಅರ್ಧ ಲೋಟ





ವಿಧಾನ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಮಸಾಲೆಗೆ ಎಂದು ಸೂಚಿಸಿದ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು, ಕೊಬ್ಬರಿ ತುರಿ ಜತೆ ನೀರು ಹಾಕದೆ ರುಬ್ಬಿ ಇಟ್ಟುಕೊಳ್ಳಿ.
೩.ಬಾಣಲೆಯಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಉದ್ದು, ಅರಸಿನ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬೇವಿನ ಎಲೆ ಸೇರಿಸಿ.
೪.ಇದಕ್ಕೆ ಹೆಚ್ಚಿದ ಬದನೆ ಹೋಳುಗಳನ್ನು ಸೇರಿಸಿ, ಕಲಕಿ. ಸ್ವಲ್ಪ ಹೊತ್ತು ಬೇಯಿಸಿ.
೫.ಈಗ ಇದಕ್ಕೆ ಉಪ್ಪು ಮತ್ತು (೨) ಹಂತದಲ್ಲಿ ತಯಾರಾದ ಮಸಾಲೆಯನ್ನು ಸೇರಿಸಿ, ಕಲಕಿ.
೬.ಈಗ ಬದನೆಕಾಯಿಯ ಮಸಾಲೆ ಪಲ್ಯ ತಯಾರಾಯಿತು.
೭.ಇದಕ್ಕೆ ಅನ್ನ ಸೇರಿಸಿ ಕಲಸಿ. ಸ್ವಲ್ಪ ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ.
೮.ಆಹಾ..ರುಚಿರುಚಿಯಾದ ಈ ವಾಂಗಿ ಭಾತ್ ಗೆ ವಾಂಗಿ ಭಾತೇ ಸಾಟಿ.

--------------------------------------
ಪೀಸ್ ಪುಲಾವ್ (ಬಟಾಣಿ ಪುಲಾವು)
-----------------------------------------


ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬಟಾಣಿ: ಅರ್ಧ ಲೋಟ

ಎಣ್ಣೆ: ನಾಲ್ಕು ಚಮಚ
ಜೀರಿಗೆ, ಸಾಸಿವೆ, ಉದ್ದು ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ನೀರುಳ್ಳಿ: ಒಂದು
ಕಾಳು ಮೆಣಸು: ೧ ಚಮಚ
ಜಾಯಿಕಾಯಿ ಹೂವು: ೧ ಸಣ್ಣ ಚೂರು
ದಾಲ್ಚಿನ್ನಿ: ೧ ಸಣ್ಣ ಚೂರು
ಲವಂಗ: ೪
ಬೆಳ್ಳುಳ್ಳಿ: ೪ ಎಸಳು
ಹಸಿಮೆಣಸು: ೧
ನಿಂಬೆ ರಸ: ಒಂದು ಚಮಚ
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ:

೧.ನೀರುಳ್ಳಿ, ಕಾಳು ಮೆಣಸು, ಜಾಯಿಕಾಯಿ ಹೂವು, ದಾಲ್ಚಿನ್ನಿ, ಲವಂಗ, ಬೆಳ್ಳುಳ್ಳಿ, ಹಸಿಮೆಣಸು ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ.
೨.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೩.ಬಟಾಣಿಯನ್ನು ನೀರಿನಲ್ಲಿ ೧೦ ನಿಮಿಷ ಬೇಯಿಸಿ.
೪.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಹಾಕಿ, ಒಗ್ಗರಣೆ ಮಾಡಿ.
೫.ಇದಕ್ಕೆ ರುಬ್ಬಿದ ಮಸಾಲೆ ಮತ್ತು ಬೇಯಿಸಿದ ಬಟಾಣಿಯನ್ನು ಹಾಕಿ ಕಲಕಿ. ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ.
೬.ಮಂದ ಉರಿಯಲ್ಲಿ ೩-೪ ನಿಮಿಷ ಕಲಕಿ.
೭.ಇದಕ್ಕೆ ಅನ್ನವನ್ನು ಸೇರಿಸಿ, ಕಲಸಿ.ಉಪ್ಪು, ನಿಂಬೆ ರಸ ಸೇರಿಸಿ. ಇನ್ನೊಮ್ಮೆ ಕಲಕಿ.
೮.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೯.ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಅಥವಾ ಟೊಮಾಟೊ ನೀರುಳ್ಳಿ ರಾಯಿತದೊಂದಿಗೆ ಸವಿಯಿರಿ.

------------------------------
ಕಾಶ್ಮೀರಿ ಪುಲಾವು
---------------------------------
ಬೇಕಾಗುವ ಸಾಮಗ್ರಿಗಳು
ಅಕ್ಕಿ: ಒಂದು ಲೋಟ
ಹಾಲು: ಒಂದು ಲೋಟ
ಹಾಲಿನ ಕೆನೆ: ೫ ಚಮಚ
ಹೆಚ್ಚಿದ ಹಣ್ಣುಗಳು: ೧ ಲೋಟ
ಸಕ್ಕರೆ: ಒಂದು ಚಮಚ
ತುಪ್ಪ: ಎರಡು ಚಮಚ
ಲವಂಗ: ೪
ಪಲಾವು ಎಲೆ: ೧
ದಾಲ್ಚಿನ್ನಿ: ಸಣ್ಣ ಚೂರು
ಏಲಕ್ಕಿ: ೪
ಜೀರಿಗೆ: ಎರಡು ಚಮಚ
ಗುಲಾಬಿ ನೀರು (ರೋಸ್ ವಾಟರ್): ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು ೧೫-೨೦ ನಿಮಿಷ ನೆನೆಸಿಡಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ, ಜೀರಿಗೆ, ಪಲಾವು ಎಲೆ ಇವುಗಳನ್ನು ಜಜ್ಜಿ ಹಾಕಿ.
೩.ನೆನೆಸಿದ ಅಕ್ಕಿಯಿಂದ ನೀರು ಬೇರ್ಪಡಿಸಿ, ಬಾಣಲೆಗೆ ಹಾಕಿ. ೨-೩ ನಿಮಿಷ ಕಲಕಿ.
೪.ಈಗ ಇದಕ್ಕೆ ಹಾಲು, ಕೆನೆ, ಸಕ್ಕರೆ ಇವುಗಳನ್ನು ಸೇರಿಸಿ. ಅರ್ಧ ಲೋಟ ನೀರು ಸೇರಿಸಿ, ಮುಚ್ಚಳ ಹಾಕಿ, ೧೫-೨೦ ನಿಮಿಷಗಳ ಕಾಲ ಬೇಯಿಸಿ.
೫.ಈಗ ಅನ್ನ ಬೆಂದಿದೆಯೋ ಇಲ್ಲವೊ ಎಂದು ಪರೀಕ್ಷಿಸಿ. ಇಲ್ಲವೆಂದಾದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಬೇಯಲು ಬಿಡಿ.
೬.ಅನ್ನ ಸರಿಯಾಗಿ ಬೆಂದ ಮೇಲೆ ಇದಕ್ಕೆ ಉಪ್ಪು, ಕತ್ತರಿಸಿಟ್ಟ ಹಣ್ಣುಗಳನ್ನು ಹಾಕಿ ಕಲಕಿ.
೭.ಕಾಶ್ಮೀರಿ ಪಲಾವು ತಯಾರು. ಬಡಿಸುವ ಮುನ್ನ, ರೋಸ್ ವಾಟರ್ ಚಿಮುಕಿಸಿ, ತುಪ್ಪದಲ್ಲಿ ಹುರಿದ ಒಣ ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ ಬಡಿಸಿ.


---------------------------------------------
ಫ಼್ರೈಡ್ ರೈಸ್
--------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಸಣ್ಣಗೆ ಹೆಚ್ಚಿದ ನೀರುಳ್ಳಿ ಕಡ್ಡಿ (ಫ಼್ರೆಂಚ್ ಓನಿಯನ್ ): ೫
ಸೊಯಾ ಸಾಸ್: ೨ ಚಮಚ
ವಿನೆಗರ್: ೧ ಚಮಚ
ತುಪ್ಪ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಗೋಬಿ: ಸಣ್ಣಗೆ ಹೆಚ್ಚಿದ್ದು :ಕಾಲು ಲೋಟ
ಬಟಾಣಿ: ಅರ್ಧ ಲೋಟ


ವಿಧಾನ:

೧.ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ನೀರುಳ್ಳಿ ಕಡ್ಡಿಯನ್ನು ಸೇರಿಸಿ ೩-೪ ನಿಮಿಷ ಹುರಿಯಿರಿ.
೨.ಕುಕ್ಕರ್ ನಲ್ಲಿ ಗೋಬಿ ಮತ್ತು ಬಟಾಣಿಯನ್ನು ಬೇಯಿಸಿ.
೩. (೧) ರ ಮಿಶ್ರಣಕ್ಕೆ ಬೇಯಿಸಿದ ಗೋಬಿ ಮತ್ತು ಬಟಾಣಿಯನ್ನು ಸೇರಿಸಿ.
೪.ಇದಕ್ಕೆ ವಿನೆಗರ್, ಸೊಯ ಸಾಸ್, ಉಪ್ಪು ಹಾಕಿ ಕಲಕಿ.
೫.ಈ ಮಿಶ್ರಣಕ್ಕೆ ಅನ್ನ ಸೇರಿಸಿ, ಕಲಸಿ.
೬.೩-೪ ನಿಮಿಷ ಮಂದ ಉರಿಯಲ್ಲಿ ಕಲಕಿ.
೭.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.


-------------------------------------------
ಆಲೂ ಭಾತ್
-------------------------------------------
ಇದು ಮಹಾರಾಷ್ಟ್ರ ಪ್ರಾಂತ್ಯದ ಅಡುಗೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ತುಪ್ಪ: ೮ ಚಮಚ
ಅಲೂಗಡ್ಡೆ: ೨
ಮೊಸರು: ಅರ್ಧ ಲೋಟ
ಶುಂಠಿ: ಒಂದು ಸಣ್ಣ ಚೂರು
ಅರಸಿನ: ಕಾಲು ಚಮಚ
ದಾಲ್ಚಿನ್ನಿ, ಲವಂಗ ಪುಡಿ, ಕೊತ್ತಂಬರಿ ಪುಡಿ: ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಕಾಲು ಲೋಟ
ಕೊಬ್ಬರಿ ತುರಿ: ಕಾಲು ಲೋಟ
ಹಸಿ ಮೆಣಸು: ೩
ಉಪ್ಪು: ರುಚಿಗೆ ತಕ್ಕಷ್ಟು
ಗೋಡಂಬಿ: ೧೦

ವಿಧಾನ:
೧.ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿದ ಆಲೂಗಡ್ಡೆಯನ್ನು ತುಪ್ಪದಲ್ಲಿ ಹುರಿಯಿರಿ.
೨.ಇದಕ್ಕೆ ದಾಲ್ಚಿನ್ನಿ, ಕೊತ್ತಂಬರಿ, ಲವಂಗ ಪುಡಿ, ಮೊಸರು ಮತ್ತು ಜಜ್ಜಿದ ಶುಂಠಿಯನ್ನು ಹಾಕಿ ಕಲಕಿ.
೩.ಸಣ್ಣ ಉರಿಯಲ್ಲಿ ಅದನ್ನು ಬೇಯಿಸಿ. ಸ್ವಲ್ಪ ನೀರು ಚಿಮುಕಿಸಿ.
೪.ಆಲೂಗಡ್ಡೆ ಸರಿಯಾಗಿ ಬೆಂದ ಮೇಲೆ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಲಸಿ.
೫.ಈಗ ಇದಕ್ಕೆ ಅನ್ನವನ್ನು ಸೇರಿಸಿ. ೨-೩ ನಿಮಿಷ ಕಲಕಿ.
೬.ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

----------------------------------------------------------------------------------


ವಿ.ಸೂ:
೧.ಸಾಧಾರಣ ಅಕ್ಕಿಯ ಬದಲಿಗೆ ಬಾಸ್ಮತಿ ಅಕ್ಕಿಯನ್ನು ಬಳಸಿದರೆ ಅದರ ಸೊಗಸೇ ಬೇರೆ.
೨.ಅನ್ನ ಮಾಡುವಾಗ ಸ್ವಲ್ಪ ಎಣ್ಣೆ ಅಥವಾ ನಿಂಬೆ ರಸ ವನ್ನು ಅಕ್ಕಿಯ ಜತೆ ಹಾಕಿದರೆ ಅನ್ನ ಉದುರುದುರಾಗಿರುತ್ತದೆ.
೩.ಸಿಹಿ ಅಡುಗೆಗೆ ತುಪ್ಪ, ಖಾರದ ಅಡುಗೆಗೆ ಎಣ್ಣೆ ಬಳಸುವುದು ವಾಡಿಕೆ. ಆದರೂ ಖಾರದ ಅಡುಗೆಗೂ ತುಪ್ಪ ಬಳಸಿದರೆ ವಿಷೇಷ ರುಚಿ ಬರುತ್ತದೆ.
೪.ಮೇಲೆ ಸೂಚಿಸಿದ ಎಲ್ಲಾ ಪ್ರಮಾಣಗಳು ಇಬ್ಬರಿಗೆ ಸಾಕಾಗುವಷ್ಟು.

ಸುಧಾದಲ್ಲಿ ಪ್ರಕಟಿತ

Thursday, June 25, 2009

ಅವಸರದ ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ ,ಸಂಗೀತ

ವಿಜಯಕರ್ನಾಟಕದಲ್ಲಿ ಪ್ರಕಟಿತ.
---------------------------------

ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫ಼ೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .

ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ’ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ,ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.
ಐತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ )...ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.
ಐತಲಕಡಿ ಬಾರೆ
ಲಕ್ಕ ಆಗುಮ
ಪಾಠ ಓದ್ಕುಮ
ಊಟ ಹಾಕುಮ
ಕಟ್ಟಿಕೊ
ಯಮ ಯಮ ಮುದ ಚುಮ
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ.ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು.

ಅಂತೂ ಸುಮಾರು ಐದು ನಿಮಿಷಗಳತನಕ ಈ ಹಾಡನ್ನು ಸಹಿಸಿಕೊಂಡೆ.
ಯಾಕೆ ಹೊಗಳ್ತೀಯ
ಹೈಟು ಜಾಸ್ತಿ ಮಾಡ್ತೀಯ
ಅಂತ ಏನೇನೋ ಅದ್ಭುತ ಸಂಗೀತದೊಂದಿಗೆ ಈ ಹಾಡು ಮುಗಿಯಿತು.

ನಾನು ಚಿಂತಿಸತೊಡಗಿದೆ.ವರ್ಷದಲ್ಲಿ ಬರುವ ಸುಮಾರು ೫೦೦- ೬೦೦ ಕನ್ನಡ ಚಲನಚಿತ್ರಗೀತೆಗಳಲ್ಲಿ ಸುಂದರ, ಮಧುರ, ಮತ್ತೆ ಕೇಳಬಲ್ಲ ಹಾಡುಗಳ ಸಂಖ್ಯೆ ಎಷ್ಟು ಬೇಗನೆ ಕ್ಷೀಣವಾಗುತ್ತಿವೆ ? ಯಾಕೆ?
ಇದೀಗ ಮುಂದಿನ ಹಾಡಿನ ಸರದಿ.

ಕಮ್ ಓನ್ ಐ ಸೇ ...ಕಮ್ ಓನ್ ಐ ಸೇ ..
ಅಂತ ಶುರುವಾಯಿತು. ಕೆಹರವಾ ತಾಳ ಡೋಲಿನ ಮೇಲೆ ಬೊಬ್ಬಿಡುತ್ತಿತ್ತು.ಹಾಡಿನ ಮುಂದಿನ ಸಾಲುಗಳನ್ನು ಏನೆಂದು ಬರೆಯಲಿ? ನನಗೆ ಅರ್ಥವಾದದ್ದಿಷ್ಟು.

ಸೇಜ ಸೇಜ ಬಾರೆ
ಮವ್ವೆ ಮವ್ವೆ ಬಾರೆ
ಅಲೆ ಕೆಂಚಿ ತಾರೆ ಅರದೋ..

ಬಾರೆ ಎನ್ನುವ ಪದಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವ ಪದಗಳು ಅರ್ಥವಾಗಿಲ್ಲ. ಬಲ್ಲವರು ವಿವರಿಸಬೇಕು.
ಎಫ಼್.ಎಮ್. ಆರಿಸಲು ಕಾರಿನ ಚಾಲಕನಿಗೆ ವಿನಂತಿಸಿಕೊಂಡೆ. ಆದರೆ ಕೆಲವರು ಇಂತಹ ಸಂಗೀತವನ್ನು ಆಸ್ವಾದಿಸಿ ಆನಂದಿಸುತ್ತಿದ್ದುದರಿಂದ ನನ್ನ ವಿನಂತಿ ಈಡೇರಲಿಲ್ಲ.

ಆರ್. ಜೆ. ಮತ್ತೆ ತನ್ನ ಆಂಗ್ಲ ಮಿಶ್ರಿತ ಸುಸಂಸ್ಕೃತ ಕನ್ನಡದಲ್ಲಿ ಚಮ್ಕಾಯಿಸಿ, ಚಿಂದಿ ಉಡಾಯಿಸಿ ಎಂದು ಅರಚಿದ.
ಪಾರೋ ಪಾರೋ ಅಂತ ಇನ್ನೊಂದು ಹಾಡು ಶುರುವಾಯಿತು.ಅದರ ಸಾಲುಗಳು ಹೀಗಿದ್ದವು.
ಲೇಟಾಗಿ ಬರುವುದಿಲ್ಲ..
ಸೋರಿ ಕೇಳುವುದಿಲ್ಲ..
ಆಸಿಡ್ ಹಾಕುವುದಿಲ್ಲ.

ಇನ್ನೇನೋ ಬರೆಯಬೇಕಾದ ನೆನಪಿಸಿ ಇಟ್ಟುಕೊಳ್ಳಬೇಕಾದ ಸಾಹಿತ್ಯವೇನೂ ಅಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಸಂದಿರುವ ಕನ್ನಡ ಭಾಷೆ ಇದೇನಾ ಎನ್ನುವ ಸಂದೇಹ ಒಂದು ಕ್ಷಣ ಮನಸ್ಸಿನಲ್ಲಿ ಸುಳಿಯಿತು.
ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆತಂಕದ ವಿಚಾರವೆಂದರೆ ಈಗಿನ ಚಿತ್ರ ಸಂಗೀತದ ಹಾಡುಗಳಲ್ಲಿ ಅರ್ಥವಿಲ್ಲ. ಅರ್ಥವಿದ್ದರೂ ಆಳವಿಲ್ಲ. ಆದರೂ ಇಂತಹ ಹಾಡುಗಳೇ ಬಹುಜನರಿಗೆ ಮೆಚ್ಚುಗೆಯಾಗುತ್ತಿವೆ.
ಹೊಡಿ ಮಗ, ಹಳೆ ಪಾತ್ರೆ,ಚಿತ್ರಾನ್ನ, ಜಿಂಕೆ ಮರಿ ಮುಂತಾದ ಕಳಪೆ ಗುಣಮಟ್ಟದ ಹಾಡುಗಳನ್ನು ನಾವಿಂದು ತುಂಬು ಹೃದಯದಿಂದ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಮಕ್ಕಳಲ್ಲೂ ಈ ನಾಲ್ಕೂ ಹಾಡುಗಳು ಅತ್ಯಂತ ಪ್ರಿಯವಾಗಿವೆ ಎಂಬುದು ಖೇದದ ವಿಷಯ. ಈ ಅವನತಿಗೆ ಚಿಂತನೆಯಾಗಬೇಕಾಗಿದೆ.

ಇದರ ಸಂಭಾವ್ಯ ಕಾರಣಗಳನ್ನು ಅವಲೋಕಿಸಿದಾಗ ಕೆಳಗೆ ಸೂಚಿಸಿದ ಕೆಲವು ಅಂಶಗಳು ಸ್ವಷ್ಟವಾಗುತ್ತವೆ.
೧) ಕನ್ನಡ ಭಾಷೆಯ ಪಾಶ್ಚಾತ್ಯೀಕರಣ :ಇಂದು ಕನ್ನಡ ಹಾಡುಗಳನ್ನು ಆಂಗ್ಲ ಭಾಷೆಯ ಶೈಲಿಯಲ್ಲಿ ಹಾಡುವುದು ರೂಢಿಯಾಗುತ್ತಿದೆ.ಹೀಗೆ ಆಂಗ್ಲದನಿಯ ಕನ್ನಡ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಉದ್ವೇಗವನ್ನು ಮೂಡಿಸುತ್ತದೆ.
ಉದಾ: ’ನಮ್ದೇ ಈ ಲೋಕ’ ಎಂಬ ಹಾಡಿನ ವಿಚಿತ್ರವಾದ ಆಂಗ್ಲ ರೀತಿಯ ಉಚ್ಚಾರಣೆ ಮನಸ್ಸಿನಲ್ಲಿ ರೋಷ ಉಕ್ಕಿಸುತ್ತದೆ.

೨)ಹಾಡುಬರೆಯುವವರನ್ನು ಕಾಡುವ ಕನ್ನಡ ಶಬ್ದಗಳ ಕೊರತೆ:ಅನ್ಯ ಭಾಷೆಯ ಶಬ್ದಗಳ ಬಾಹುಳ್ಯ ಇತ್ತೀಚಿನ ಚಲನ ಚಿತ್ರ ಹಾಡುಗಳಲ್ಲಿ ಗೋಚರಿಸುತ್ತಿದೆ.ವಿಚಿತ್ರ ಕನ್ನಡ ಪದಗಳ ಬಳಕೆಯೂ ಹೆಚ್ಚುತ್ತಿದೆ. ಕಿಚಾಯಿಸು, ಚಮಕಾಯಿಸು ಮುಂತಾದ ಅಧಿಕವಾಗಿ ಪ್ರಯೋಗಗೊಂಡು ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಗಲಾಟೆಯ ವಾತಾವರಣವನ್ನು ಸೃಷ್ಟಿಸುತ್ತವೆ.
ಮಿಶ್ರ ಭಾಷಾ ಹಾಡಿಗೆ ಒಂದು ಉದಾಹರಣೆ :
ಸ್ಟ್ರಾಬೆರಿ ಕೆನ್ನೆಯವಳೇ
ಕ್ಯಾಡ್ಬರೀ ಹುಡುಗನೇ...
ಇತ್ತೀಚಿನ ಸಂದರ್ಶನವೊಂದರಲ್ಲಿ ಜಯಂತ ಕಾಯ್ಕಿಣಿಯವರು ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ.."ಅಸು ನೀಗಿತು" ಎಂಬ ಪದದ ಬಳಕೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದು ವಿವರಿಸಿದರು. ’ಅಸು ನೀಗಿತು’ ಎಂಬ ಸರಳ ಕನ್ನಡ ಪದವು ಇತ್ತೀಚೆಗಿನ ಜನಾಂಗದಲ್ಲಿ ಆಶ್ಚರ್ಯವನ್ನು ಉಂಟು ಮಾಡಬೇಕಾದರೆ ಕನ್ನಡದ ತಿಳುವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳದ ಅಂಶವು ಬೆಳಕಿಗೆ ಬರುತ್ತದೆ.

೩)ಕಥಾವಸ್ತುವಿನ ಕೊರತೆ :ಇತ್ತೀಚೆಗೆ ಹೊರಬರುತ್ತಿರುವ ೯೯% ಕನ್ನಡ ಚಲನಚಿತ್ರಗಳು ಕುಟುಂಬ ಸಮೇತರಾಗಿ ನೋಡಲು ಅರ್ಹವಲ್ಲ.ಕಾರಣಗಳು ಹಲವಾರು.
೧)ಮುಖ್ಯವಾಗಿ ಚಿತ್ರದ ಹೆಸರು ಲೂಸ್ ಮಾದ , ಮೆಂಟಲ್ ಮಂಜ, ಸ್ಲಮ್ ಬಾಲ ಮುಂತಾದ ವಿಚಿತ್ರ ಹೆಸರುಗಳು
೨)ಮುಜುಗರವಾಗುವ ದೃಶ್ಯಗಳ ಭರಾಟೆ.
೩)ಅಸಹಜತೆ :ಸನ್ನಿವೇಶಗಳ ಅಸಹಜತೆ ,ಪಾತ್ರಗಳ ಅಸಹಜತೆ ,ಕಥಾ ಹಂದರದ ಅಸಹಜತೆ,ನಟನೆಯ ಅಸಹಜತೆ
ಎರಡು ಪ್ರಮುಖ ವಿಷಯಗಳು ಇಂದಿನ ಕನ್ನಡ ಚಲನ ಚಿತ್ರಗಳ ಮೂಲ ಕಥಾವಸ್ತುವಾಗಿ ವಿಜ್ರಂಭಿಸುತ್ತವೆ.
೧)ರಾಜಕೀಯ ಪುಢಾರಿಗಳ ದೌರ್ಜನ್ಯದ ವಿರುದ್ಧ ನಾಯಕನ ಬಂಡಾಯ
೨)ಪರಿಸ್ಥಿತಿಯಿಂದ ಬೇಸತ್ತ ಹತಾಶೆಗೊಳಗಾದ ನಾಯಕ ತಪ್ಪು ದಾರಿ ಹಿಡಿದು ರೌಡಿಯಾಗುವ ಕಥೆ.
ಈ ಎರಡು ಕಥಾ ಸುರುಳಿಗಳಲ್ಲಿ ಅವಕಾಶವಿರುವುದು ಹೊಡಿಮಗ , ಬಾರೆ ಮವ್ವೆ ಬಾರೆ ಮುಂತಾದ ಹಾಡುಗಳಿಗೇ ವಿನಹ ಮಾನಸ ಸರೋವರ,’ಸಾಗಲಿ ತೇಲು ತರಂಗದೊಳು..’ ದಂತಹ ಹಾಡುಗಳಿಗಲ್ಲ ಎಂಬುದು ಹಲವು ಚಿತ್ರರಂಗದವರ ಅಂಬೋಣ.ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ.
ಮೇಲೆ ವ್ಯಕ್ತಪಡಿಸಿರುವ ಅಭಿಪ್ರಾಯವೇ ಇವತ್ತಿನ ಕಳಪೆ ಸಂಗೀತ,ಸಾಹಿತ್ಯದ ಬುನಾದಿ.

೪)ಚಿತ್ರರಂಗವು ಕಲಾಮಾಧ್ಯಮದ ಬದಲಾಗಿ ಮಾರುಕಟ್ಟೆಯ ಸರಕಾಗಿ ಮಾರ್ಪಾಡಾಗಿದೆ.ಕಥಾ ವಸ್ತುವಿನ ಕೊರತೆ ಕನ್ನಡ ಸಾಹಿತ್ಯಲೋಕದಲ್ಲಂತೂ ಎಳ್ಳಷ್ಟೂ ಇಲ್ಲ .ಇತ್ತೀಚೆಗಿನ ಯುವ ಲೇಖಕರೂ,ಕವಿಗಳೂ ಬರೆದಿರುವ ಕಥೆ ಮತ್ತು ಕವನ ಸಂಕಲನಗಳೇ ಇವಕ್ಕೆ ಸಾಕ್ಷಿ. ಆದರೆ ಚಿತ್ರರಂಗವು ಅವುಗಳ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಮೂಲ ಕಥಾ ವಸ್ತುವಿನ ಚಿಂತನೆ ನಡೆಸುವ ಸೈರಣೆ ಚಿತ್ರರಂಗದ ಹೆಚ್ಚಿನವರಲ್ಲಿ ಉಳಿದಿಲ್ಲ.

ಯಾವತ್ತಿನ ವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ ,ಯಾವತ್ತಿನ ವರೆಗೆ ಕನ್ನಡ ಚಲನ ಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ,ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.
ಜೈ ಕನ್ನಡಾಂಬೆ!!

Thursday, May 28, 2009

ಜಿ ಟಾಕ್ ಸ್ಟೇಟಸ್ ಮೆಸೇಜು

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ||
ಬೆಂಗಳೂರು ರಸ್ತೆಲೆಲ್ಲಾ ದೊಡ್ಡ್ ದೊಡ್ಡ್ ಗುಂಡಿ ||
ಟ್ರಾಫಿಕ್ ಜಾಮ್ ನಲ್ಲಿ ನರಳಾಡ್ತಿದೆ ಎಲ್ಲಾರ್ ಬಂಡಿ ||

--------ಅರ್ಚನಾ

Tuesday, May 19, 2009

ನೀವೂ ಮೋಸ ಹೋದೀರಿ ಎಚ್ಚರಿಕೆ!

ಈ ಶನಿವಾರ, ಬಹುದಿನದಿಂದ ಕೆಟ್ಟು ಹೋಗಿದ್ದ ನಮ್ಮ ಲ್ಯಾಪ್ ಟಾಪನ್ನು ಸರಿಪಡಿಸುವ ಮುಹೂರ್ತ ಬಂದೊದಗಿತ್ತು. ಅದನ್ನು ಸರಿಪಡಿಸಲೋಸುಗ ಜಯನಗರದ ಒಂದು ಅಂಗಡಿ ನುಗ್ಗಿದ್ದಾಯಿತು. ಕೆಲವು ಪರೀಕ್ಷೆಗಳ ನಂತರ ಹಾರ್ಡ್ ಡಿಸ್ಕ್ ಬದಲಿಸಬೇಕೆಂಬ ಸೂಚನೆ ಗಟ್ಟಿಯಾಗತೊಡಗಿತು. ನಮಗೆ ಬೇಕಾದ ಹಾರ್ಡ್ ಡಿಸ್ಕ್ ಆ ಅಂಗಡಿಯಲ್ಲಿ ಇಲ್ಲದ ಕಾರಣ ಫೋನಾಯಿಸಿ, ಬೇರೊಂದು ಕಡೆಯಿಂದ ಅದನ್ನು ಅಂಗಡಿ ಮಾಲೀಕರು ತರಿಸಿದರು. ಹೊಚ್ಚ ಹೊಸ ಹಾರ್ಡ್ ಡಿಸ್ಕನ್ನು ನಮ್ಮ ಕಣ್ಣೆದುರಿಗೇ ಪಾಕೆಟ್ ನ ಸೀಲು ಒಡೆದು ತೆಗೆದು ತೋರಿಸಿ, ಜೋಡಿಸಿ, ಪರೀಕ್ಷಿಸಿ, ಎಲ್ಲವೂ ಸಮರ್ಪಕವಾಗಿದೆಯೆಂದು ಭಾವಿಸಿ, ಅಲ್ಲೇ ಆಪರೇಟಿಂಗ್ ಸಿಸ್ಟಮನ್ನು ಇನ್ ಸ್ಟಾಲ್ ಮಾಡಿ ನೋಡಿದೆವು. ಎಲ್ಲ ಓಕೆ.. ಚಿಂತೆ ಯಾಕೆ ಎಂದು ಭಾವಿಸಿ ಮನೆಗೆ ಬಂದೆವು. ಕಥೆ ಇಲ್ಲಿಗೇ ಮುಗಿಯಲಿಲ್ಲ. ಮುಗಿಯುತ್ತಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೂ ಇರಲಿಲ್ಲ.

ಮನೆಗೆ ಬಂದು ಸರಿಯಾದ ಲಾಪ್ ಟಾಪ್ ನಲ್ಲಿ ಮತ್ತೊಂದಷ್ಟು ಸಾಫ್ಟ್ ವೇರ್ ಗಳನ್ನು ಇನ್ ಸ್ಟಾಲ್ ಮಾಡುವ ಉತ್ಸಾಹದಲ್ಲಿ, ಮತ್ತೆ ಅದನ್ನು ಪರಿಶೀಲಿಸತೊಡಗಿದೆ. ಲಾಪ್ ಟಾಪ್ ನ ಡಿ ಡ್ರೈವ್ ಅನ್ನು ತೆರೆದು ನೋಡಿದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ಯಾಕೆ ಅಂತೀರಾ? ಯಾರೋ ಒಬ್ಬರ ಹಲವಾರು ಕಡತಗಳು ಅದರಲ್ಲಿದ್ದವು. ಹೊಸ ಹಾರ್ಡ್ ಡಿಸ್ಕ್ ಖಾಲಿಯಾಗಿರಬೇಕಷ್ಟೆ? ಈ ಥರದ ಕಡತಗಳು ಅದರಲ್ಲಿ ಮುಂಚಿನಿಂದಲೂ ಇದೆ ಅಂದ ಮೇಲೆ ಇದು ಹೊಸದಾಗಿರಲು ಹೇಗೆ ಸಾಧ್ಯ? ಮತ್ತೊಮ್ಮೆ ಆ ಕಂಪ್ಯೂಟರ್ ಅಂಗಡಿಗೆ ಫೋನಾಯಿಸಿ, ಬದಲಿಸಿದ ಹಾರ್ಡ್ ಡಿಸ್ಕ್ ಹೊಸತೇ ಅಲ್ಲವೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿದೆವು. "ಅದು ಹೊಚ್ಚ ಹೊಸದೇ" ಎಂಬ ಉತ್ತರ ದೊರಕಿತು.

ಡಿ ಡ್ರೈವ್ ನ ಕಡತಗಳಲ್ಲಿ ಏನೇನಿದೆ ಎನ್ನುತ್ತೀರಾ? 1. ಬ್ಯಾಂಕ್ ಸ್ಟೇಟ್ ಮೆಂಟ್ ಗಳು 2. ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು 3. ಷೇರು ವ್ಯವಹಾರದ ಅಂಕಿ ಅಂಶ 4. ಗೃಹಸಾಲದ ವಿವರಗಳು 5. ಕುಟುಂಬದ ಛಾಯಾಚಿತ್ರಗಳು 6. ಆಫೀಸಿನ ವಿವರಗಳು.

ಇತ್ತೀಚೆಗೆ 'Identity theft' , ಅಂತರ್ಜಾಲದಲ್ಲಿ ಆಗುವ ಮೋಸ ಹೆಚ್ಚಾಗಿವೆಯಷ್ಟೆ. ನನ್ನೆದುರು ಒಂದು ಪ್ರತ್ಯಕ್ಷ ನಿದರ್ಶನವಿತ್ತು.

ಆ ಕಡತಗಳಲ್ಲಿ ಆ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ಪಡೆದು ಅವರಿಗೆ ಫೋನಾಯಿಸಿ, ಎಲ್ಲ ವಿಷಯಗಳನ್ನು ತಿಳಿಸಿ, ಅವರ ಅಂತರ್ಜಾಲದ ಪಾಸ್ ವರ್ಡ್ಗಳನ್ನು ತಕ್ಷಣವೇ ಬದಲಾಯಿಸಲು ಆಗ್ರಹಿಸಿದೆವು. ಈ ವಿಷಯ ತಿಳಿದು ಅವರಿಗೂ ಗಾಬರಿಯಾಯಿತೆಂದು ಹೊಸದಾಗಿ ಹೇಳಬೇಕೆ?

ಇಲ್ಲಿ ಇಬ್ಬರಿಗೆ ಮೋಸವಾಗಿದೆ. 1. ಹೊಸ ಹಾರ್ಡ್ ಡಿಸ್ಕ್ ನ ಬೆಲೆ ತೆತ್ತು ಹಳೆಯದನ್ನು ಪಡೆದ ನನಗೆ 2. ಈ ಪರಿಯ ವೈಯಕ್ತಿಕ ದಾಖಲೆಗಳು ಯಾರದಾಗಿದ್ದವೋ ಅವರಿಗೆ. ಹಾಗೆ ನೋಡಹೋದರೆ ಮೊದಲನೆಯದ್ದಕ್ಕಿಂತ ಎರಡನೆಯದು ಅತ್ಯಂತ ಗಂಭೀರ ವಿಷಯ. ಎಲ್ಲಾ ತರಹದ ವಿಷಯಗಳೂ ಒಂದು ಚಿಕ್ಕ ಡಿಸ್ಕ್ ನಲ್ಲಿ ಅಡಕವಾಗಿಸಬಹುದಾದ ಈ ಕಾಲದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಕಂಪ್ಯೂಟರ್ ನಲ್ಲಿ ತಕ್ಕಮಟ್ಟಿನ ಸಾಕ್ಷರರಾಗಿದ್ದರೂ ಮೋಸ ಹೋಗುವ ಭಯ ಬೆಂಗಳೂರಿನಲ್ಲಿ ಇಲ್ಲದಿಲ್ಲ. ಈ ಥರದ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಜನರಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸುವುದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ವೈಯಕ್ತಿಕ ವಿವರಗಳನ್ನು ಒಂದೆಡೆ ಕಲೆ ಹಾಕಿದಾಗ ಅದಕ್ಕೆ ತಕ್ಕ ಭದ್ರತೆಯನ್ನು ಕಲ್ಪಿಸುವುದು ಇವತ್ತಿನ ಅಗತ್ಯ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದರಲ್ಲಿ ತುಂಬಾ ಸಮಯ ಹಿಡಿಯುವುದಿಲ್ಲ!
ದಟ್ಸ್ ಕನ್ನಡದಲ್ಲಿ

Tuesday, March 31, 2009

ಮೆಂತೆ ತಂಬುಳಿ


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ತಯಾರಿಸುವ ಒಂದು ಬಗೆಯ ಮೇಲೋಗರಕ್ಕೆ ’ತಂಬುಳಿ’ ಎಂದು ಹೆಸರು.ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ತಂಬುಳಿಯ ಮೂಲವಸ್ತು :ತೆಂಗಿನಕಾಯಿ ತುರಿ ಮತ್ತು ಮಜ್ಜಿಗೆ. ಮತ್ತೆ ಒಗ್ಗರಣೆ. ಮೆಂತೆ ತಂಬುಳಿ,ಒಂದೆಲಗದ ತಂಬುಳಿ,ಶುಂಠಿ ತಂಬುಳಿ,ದೊಡ್ಡ ಪತ್ರೆ ತಂಬುಳಿ,ಮಾವಿನ ಮಿಡಿ ತಂಬುಳಿ..ಒಂದೇ ಎರಡೇ..ಹಲವಾರು ವಿಧದ ತಂಬುಳಿಗಳು ಜನಪ್ರಿಯವಾಗಿವೆ.

ಇಲ್ಲಿ ಮೆಂತೆ ತಂಬುಳಿ ಮಾಡುವ ವಿಧಾನವನ್ನು ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಜೀರಿಗೆ:ಒಂದು ಚಮಚ
ಕಾಳು ಮೆಣಸು :೬
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ

ವಿಧಾನ :
೧.ಮೆಂತೆ,ಜೀರಿಗೆ,ಕಾಳು ಮೆಣಸು ಇವುಗಳನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

Monday, February 16, 2009

ರಿಯಾಲಿಟಿ ಶೋ...

ದಿನ ಬೆಳಗಾದರೆ ಸಾಕು,ಯಾವುದೇ ಚ್ಯಾನಲನ್ನು ಒತ್ತಿದರೂ ಸಾಮಾನ್ಯವಾಗಿ ಕಾಣಿಸುವ ಕಾರ್ಯಕ್ರಮ ’ರಿಯಾಲಿಟಿ ಶೋ’.ಸಂಗೀತ ಕ್ಷೇತ್ರಕ್ಕೆ ಇದು ಪ್ರೋತ್ಸಾಹವನ್ನು ನೀಡುತ್ತಿರುವಂತೆ ಮೇಲ್ನೊಟಕ್ಕೆ ಅನಿಸಿದರೂ, ಕೆಳಕಂಡ ಅಂಶಗಳು ಅದಕ್ಕೆ ವಿರುದ್ಧವಾದ ವಾದವನ್ನು ಪುಷ್ಟೀಕರಿಸುತ್ತವೆ.

೧.ಸಂಗೀತ ಸ್ಪರ್ಧೆಯನ್ನು ಒಂದು ರೀತಿಯ ಯುದ್ಧದಂತೆ ಬಿಂಬಿಸಲಾಗುತ್ತದೆ.ವೇದಿಕೆಯು ಸಮರಾಂಗಣ.ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಅಬ್ಬರ.ಭಯಭೀತರಾಗಿರುವ ಸ್ಪರ್ಧಿಗಳು!!

೨.ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ,ಮನೆಯ ಆರ್ಥಿಕ ಪರಿಸ್ಥಿತಿ,ಅವರ ಹೆತ್ತವರ/ಸಂಬಧಿಕರ ಆತಂಕ,ಹಾರೈಕೆ,ಸ್ಪರ್ಧಿಗಳ ಮಾನಸಿಕ ತುಮುಲಗಳ ಬಗ್ಗೆ ಕಾಮೆರ ಹಾಯಿಸಲಾಗುತ್ತದೆ.ಕ್ಯಾಮರಾದ ಕಣ್ಣ ಮುಂದೆಯೇ ತೀರ್ಪುಗಾರರ ವಾಗ್ವಿವಾದವೂ ನಡೆಯುತ್ತದೆ.ಕೆಲವೊಮ್ಮೆ ಸ್ಪರ್ಧಿಯ ಧಾರ್ಮಿಕ ನಂಬಿಕೆಗಳ ಚಿತ್ರೀಕರಣವನ್ನೂ ಪ್ರೇಕ್ಷಕರಿಗೆ ತೋರಿಸಲಾಗುತ್ತದೆ.ಇವೆಲ್ಲವೂ ಚ್ಯಾನಲ್ ನ ಟಿ.ಆರ್.ಪಿ.ಹೆಚ್ಚಿಸುವ ತಂತ್ರಗಳೆಂದು ಬೇರೆ ಹೇಳಬೇಕಾಗಿಲ್ಲ.

೩.ಸ್ಪರ್ಧೆಯಲ್ಲಿ ಖ್ಯಾತ ಹಾಡುಗಾರರು ತೀರ್ಪುಗಾರರಾಗಿ ಬಂದರೂ, ಫಲಿತಾಂಶ ತೀರ್ಮಾನವಾಗುವುದು ಎಸ್.ಎಮ್.ಎಸ್.ಮೂಲಕ.ಹೀಗಾಗಿ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರೂ ಮುಂದಿನ ಹಂತಗಳಿಗೆ ಹೋಗುವ ಅವಕಾಶದಿಂದ ವಂಚಿತರಾಗುತ್ತಾರೆ.

೪.ಹೊಸ ಚಲನಚಿತ್ರ ತೆರೆ ಕಾಣುವುದಿದ್ದಲ್ಲಿ,ಅದರ ನಟ/ನಟಿ/ನಿರ್ದೇಶಕರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ.ಹೊಸ ಚಿತ್ರಗಳು ಹಿಟ್ ಆಗುವಲ್ಲಿ ಇಂತಹ ಜಾಹೀರಾತು ತಂತ್ರಗಳು ಚಿತ್ರತಂಡಕ್ಕೆ ಅಗತ್ಯವೆನಿಸಿವೆ.


೫.ಸತತ ಸಾಧನೆ,ಸ್ವರ,ಲಯ,ತಾಳಗಳ ನಿರಂತರ ಅಭ್ಯಾಸದಿಂದ ಕರಗತವಾಗುವ ವಿದ್ಯೆ -ಸಂಗೀತ.ಇಂತಹ ರಿಯಾಲಿಟಿ ಶೊಗಳು ಜನರಲ್ಲಿ ಹಾಡಬೇಕೆಂಬ ಆಸೆ ಹುಟ್ಟಿಸುವುದು ನಿಜ.ಟಿ.ವಿ.ಯಲ್ಲಿ ತಮ್ಮ ಮಗ/ಮಗಳು ಹಾಡುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಡಿ.ವಿ.ಜಿ.ಯವರು ಹೇಳಿದಂತೆ ’ಮನ್ನಣೆಯ ದಾಹವೀ ಎಲ್ಲಕ್ಕಿಂತ ತೀಕ್ಷ್ಣತಮ!! ’. ಆದರೂ ಇಂತಹ ಸ್ಪರ್ಧೆಗಳು ಜನರಲ್ಲಿ ಕ್ಷಿಪ್ರ ಕಲಿಕೆಯ ಭ್ರಾಂತಿಯನ್ನು ಹುಟ್ಟಿಸುತ್ತವೆ.ನನ್ನ ಸಂಗೀತ ಟೀಚರು ಮೊನ್ನೆ ಹೀಗೇ ಮಾತಾಡುವಾಗ ಅಂದರು "ನನ್ನಲ್ಲಿ ಸಂಗೀತ ಕಲಿಯಲು ಬರುವ ಕೆಲವರದ್ದು ಈ ಪರಿಯ ಪ್ರಶ್ನೆ "ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" ಟೀಚರಂದರಂತೆ "ಸಂಗೀತವೇನೂ ಕ್ರೇಶ್ ಕೋರ್ಸ್ ಅಲ್ಲ..ಇಂತಿಷ್ಟು ದಿನದಲ್ಲಿ ಕಲಿಯಲು."

ಕೆಲವೆಡೆ ಇಂತಹ ಸ್ಪರ್ಧೆಗಳಿಗಾಗಿಯೇ ತರಬೇತಿ ನೀಡಲಾಗುತ್ತದೆ.ಸಂಗೀತದ ಕಲಿಕೆಗಿಂತಲೂ ಕೆಲವು ಹಾಡುಗಳನ್ನು ಹಾಡಲು ಅಭ್ಯಾಸ ಮಾಡಿಸಲಾಗುತ್ತದೆ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಗಮನಾಹ್ರವಾಗಿ ಮುಂದೆ ಬರುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಹೀಗೆಂದು ಬರುವ ಎಲ್ಲರೂ ಇದೇ ರೀತಿ ಎಂದು ನಾನು ಹೇಳುವುದಿಲ್ಲ.ಬಲು ಸೊಗಸಾಗಿ ಹಾಡುವವರೂ ಇದ್ದಾರೆ. ಆದರೆ ರಿಯಾಲಿಟಿ ಶೊದ ಆಯ್ಕೆ ಪ್ರಕ್ರಿಯೆಯು ಎಸ್.ಎಮ್.ಎಸ್.ಮತ್ತು ಪ್ರಚಾರತಂತ್ರಗಳ ಮೇಲೆ ಅವಲಂಬಿತವಾಗಿರುವುದು ವಿಶಾದನೀಯ!!