Pages

Thursday, June 25, 2009

ಅವಸರದ ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ ,ಸಂಗೀತ

ವಿಜಯಕರ್ನಾಟಕದಲ್ಲಿ ಪ್ರಕಟಿತ.
---------------------------------

ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫ಼ೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .

ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ’ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ,ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.
ಐತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ )...ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.
ಐತಲಕಡಿ ಬಾರೆ
ಲಕ್ಕ ಆಗುಮ
ಪಾಠ ಓದ್ಕುಮ
ಊಟ ಹಾಕುಮ
ಕಟ್ಟಿಕೊ
ಯಮ ಯಮ ಮುದ ಚುಮ
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ.ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು.

ಅಂತೂ ಸುಮಾರು ಐದು ನಿಮಿಷಗಳತನಕ ಈ ಹಾಡನ್ನು ಸಹಿಸಿಕೊಂಡೆ.
ಯಾಕೆ ಹೊಗಳ್ತೀಯ
ಹೈಟು ಜಾಸ್ತಿ ಮಾಡ್ತೀಯ
ಅಂತ ಏನೇನೋ ಅದ್ಭುತ ಸಂಗೀತದೊಂದಿಗೆ ಈ ಹಾಡು ಮುಗಿಯಿತು.

ನಾನು ಚಿಂತಿಸತೊಡಗಿದೆ.ವರ್ಷದಲ್ಲಿ ಬರುವ ಸುಮಾರು ೫೦೦- ೬೦೦ ಕನ್ನಡ ಚಲನಚಿತ್ರಗೀತೆಗಳಲ್ಲಿ ಸುಂದರ, ಮಧುರ, ಮತ್ತೆ ಕೇಳಬಲ್ಲ ಹಾಡುಗಳ ಸಂಖ್ಯೆ ಎಷ್ಟು ಬೇಗನೆ ಕ್ಷೀಣವಾಗುತ್ತಿವೆ ? ಯಾಕೆ?
ಇದೀಗ ಮುಂದಿನ ಹಾಡಿನ ಸರದಿ.

ಕಮ್ ಓನ್ ಐ ಸೇ ...ಕಮ್ ಓನ್ ಐ ಸೇ ..
ಅಂತ ಶುರುವಾಯಿತು. ಕೆಹರವಾ ತಾಳ ಡೋಲಿನ ಮೇಲೆ ಬೊಬ್ಬಿಡುತ್ತಿತ್ತು.ಹಾಡಿನ ಮುಂದಿನ ಸಾಲುಗಳನ್ನು ಏನೆಂದು ಬರೆಯಲಿ? ನನಗೆ ಅರ್ಥವಾದದ್ದಿಷ್ಟು.

ಸೇಜ ಸೇಜ ಬಾರೆ
ಮವ್ವೆ ಮವ್ವೆ ಬಾರೆ
ಅಲೆ ಕೆಂಚಿ ತಾರೆ ಅರದೋ..

ಬಾರೆ ಎನ್ನುವ ಪದಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವ ಪದಗಳು ಅರ್ಥವಾಗಿಲ್ಲ. ಬಲ್ಲವರು ವಿವರಿಸಬೇಕು.
ಎಫ಼್.ಎಮ್. ಆರಿಸಲು ಕಾರಿನ ಚಾಲಕನಿಗೆ ವಿನಂತಿಸಿಕೊಂಡೆ. ಆದರೆ ಕೆಲವರು ಇಂತಹ ಸಂಗೀತವನ್ನು ಆಸ್ವಾದಿಸಿ ಆನಂದಿಸುತ್ತಿದ್ದುದರಿಂದ ನನ್ನ ವಿನಂತಿ ಈಡೇರಲಿಲ್ಲ.

ಆರ್. ಜೆ. ಮತ್ತೆ ತನ್ನ ಆಂಗ್ಲ ಮಿಶ್ರಿತ ಸುಸಂಸ್ಕೃತ ಕನ್ನಡದಲ್ಲಿ ಚಮ್ಕಾಯಿಸಿ, ಚಿಂದಿ ಉಡಾಯಿಸಿ ಎಂದು ಅರಚಿದ.
ಪಾರೋ ಪಾರೋ ಅಂತ ಇನ್ನೊಂದು ಹಾಡು ಶುರುವಾಯಿತು.ಅದರ ಸಾಲುಗಳು ಹೀಗಿದ್ದವು.
ಲೇಟಾಗಿ ಬರುವುದಿಲ್ಲ..
ಸೋರಿ ಕೇಳುವುದಿಲ್ಲ..
ಆಸಿಡ್ ಹಾಕುವುದಿಲ್ಲ.

ಇನ್ನೇನೋ ಬರೆಯಬೇಕಾದ ನೆನಪಿಸಿ ಇಟ್ಟುಕೊಳ್ಳಬೇಕಾದ ಸಾಹಿತ್ಯವೇನೂ ಅಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಸಂದಿರುವ ಕನ್ನಡ ಭಾಷೆ ಇದೇನಾ ಎನ್ನುವ ಸಂದೇಹ ಒಂದು ಕ್ಷಣ ಮನಸ್ಸಿನಲ್ಲಿ ಸುಳಿಯಿತು.
ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆತಂಕದ ವಿಚಾರವೆಂದರೆ ಈಗಿನ ಚಿತ್ರ ಸಂಗೀತದ ಹಾಡುಗಳಲ್ಲಿ ಅರ್ಥವಿಲ್ಲ. ಅರ್ಥವಿದ್ದರೂ ಆಳವಿಲ್ಲ. ಆದರೂ ಇಂತಹ ಹಾಡುಗಳೇ ಬಹುಜನರಿಗೆ ಮೆಚ್ಚುಗೆಯಾಗುತ್ತಿವೆ.
ಹೊಡಿ ಮಗ, ಹಳೆ ಪಾತ್ರೆ,ಚಿತ್ರಾನ್ನ, ಜಿಂಕೆ ಮರಿ ಮುಂತಾದ ಕಳಪೆ ಗುಣಮಟ್ಟದ ಹಾಡುಗಳನ್ನು ನಾವಿಂದು ತುಂಬು ಹೃದಯದಿಂದ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಮಕ್ಕಳಲ್ಲೂ ಈ ನಾಲ್ಕೂ ಹಾಡುಗಳು ಅತ್ಯಂತ ಪ್ರಿಯವಾಗಿವೆ ಎಂಬುದು ಖೇದದ ವಿಷಯ. ಈ ಅವನತಿಗೆ ಚಿಂತನೆಯಾಗಬೇಕಾಗಿದೆ.

ಇದರ ಸಂಭಾವ್ಯ ಕಾರಣಗಳನ್ನು ಅವಲೋಕಿಸಿದಾಗ ಕೆಳಗೆ ಸೂಚಿಸಿದ ಕೆಲವು ಅಂಶಗಳು ಸ್ವಷ್ಟವಾಗುತ್ತವೆ.
೧) ಕನ್ನಡ ಭಾಷೆಯ ಪಾಶ್ಚಾತ್ಯೀಕರಣ :ಇಂದು ಕನ್ನಡ ಹಾಡುಗಳನ್ನು ಆಂಗ್ಲ ಭಾಷೆಯ ಶೈಲಿಯಲ್ಲಿ ಹಾಡುವುದು ರೂಢಿಯಾಗುತ್ತಿದೆ.ಹೀಗೆ ಆಂಗ್ಲದನಿಯ ಕನ್ನಡ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಉದ್ವೇಗವನ್ನು ಮೂಡಿಸುತ್ತದೆ.
ಉದಾ: ’ನಮ್ದೇ ಈ ಲೋಕ’ ಎಂಬ ಹಾಡಿನ ವಿಚಿತ್ರವಾದ ಆಂಗ್ಲ ರೀತಿಯ ಉಚ್ಚಾರಣೆ ಮನಸ್ಸಿನಲ್ಲಿ ರೋಷ ಉಕ್ಕಿಸುತ್ತದೆ.

೨)ಹಾಡುಬರೆಯುವವರನ್ನು ಕಾಡುವ ಕನ್ನಡ ಶಬ್ದಗಳ ಕೊರತೆ:ಅನ್ಯ ಭಾಷೆಯ ಶಬ್ದಗಳ ಬಾಹುಳ್ಯ ಇತ್ತೀಚಿನ ಚಲನ ಚಿತ್ರ ಹಾಡುಗಳಲ್ಲಿ ಗೋಚರಿಸುತ್ತಿದೆ.ವಿಚಿತ್ರ ಕನ್ನಡ ಪದಗಳ ಬಳಕೆಯೂ ಹೆಚ್ಚುತ್ತಿದೆ. ಕಿಚಾಯಿಸು, ಚಮಕಾಯಿಸು ಮುಂತಾದ ಅಧಿಕವಾಗಿ ಪ್ರಯೋಗಗೊಂಡು ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಗಲಾಟೆಯ ವಾತಾವರಣವನ್ನು ಸೃಷ್ಟಿಸುತ್ತವೆ.
ಮಿಶ್ರ ಭಾಷಾ ಹಾಡಿಗೆ ಒಂದು ಉದಾಹರಣೆ :
ಸ್ಟ್ರಾಬೆರಿ ಕೆನ್ನೆಯವಳೇ
ಕ್ಯಾಡ್ಬರೀ ಹುಡುಗನೇ...
ಇತ್ತೀಚಿನ ಸಂದರ್ಶನವೊಂದರಲ್ಲಿ ಜಯಂತ ಕಾಯ್ಕಿಣಿಯವರು ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ.."ಅಸು ನೀಗಿತು" ಎಂಬ ಪದದ ಬಳಕೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದು ವಿವರಿಸಿದರು. ’ಅಸು ನೀಗಿತು’ ಎಂಬ ಸರಳ ಕನ್ನಡ ಪದವು ಇತ್ತೀಚೆಗಿನ ಜನಾಂಗದಲ್ಲಿ ಆಶ್ಚರ್ಯವನ್ನು ಉಂಟು ಮಾಡಬೇಕಾದರೆ ಕನ್ನಡದ ತಿಳುವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳದ ಅಂಶವು ಬೆಳಕಿಗೆ ಬರುತ್ತದೆ.

೩)ಕಥಾವಸ್ತುವಿನ ಕೊರತೆ :ಇತ್ತೀಚೆಗೆ ಹೊರಬರುತ್ತಿರುವ ೯೯% ಕನ್ನಡ ಚಲನಚಿತ್ರಗಳು ಕುಟುಂಬ ಸಮೇತರಾಗಿ ನೋಡಲು ಅರ್ಹವಲ್ಲ.ಕಾರಣಗಳು ಹಲವಾರು.
೧)ಮುಖ್ಯವಾಗಿ ಚಿತ್ರದ ಹೆಸರು ಲೂಸ್ ಮಾದ , ಮೆಂಟಲ್ ಮಂಜ, ಸ್ಲಮ್ ಬಾಲ ಮುಂತಾದ ವಿಚಿತ್ರ ಹೆಸರುಗಳು
೨)ಮುಜುಗರವಾಗುವ ದೃಶ್ಯಗಳ ಭರಾಟೆ.
೩)ಅಸಹಜತೆ :ಸನ್ನಿವೇಶಗಳ ಅಸಹಜತೆ ,ಪಾತ್ರಗಳ ಅಸಹಜತೆ ,ಕಥಾ ಹಂದರದ ಅಸಹಜತೆ,ನಟನೆಯ ಅಸಹಜತೆ
ಎರಡು ಪ್ರಮುಖ ವಿಷಯಗಳು ಇಂದಿನ ಕನ್ನಡ ಚಲನ ಚಿತ್ರಗಳ ಮೂಲ ಕಥಾವಸ್ತುವಾಗಿ ವಿಜ್ರಂಭಿಸುತ್ತವೆ.
೧)ರಾಜಕೀಯ ಪುಢಾರಿಗಳ ದೌರ್ಜನ್ಯದ ವಿರುದ್ಧ ನಾಯಕನ ಬಂಡಾಯ
೨)ಪರಿಸ್ಥಿತಿಯಿಂದ ಬೇಸತ್ತ ಹತಾಶೆಗೊಳಗಾದ ನಾಯಕ ತಪ್ಪು ದಾರಿ ಹಿಡಿದು ರೌಡಿಯಾಗುವ ಕಥೆ.
ಈ ಎರಡು ಕಥಾ ಸುರುಳಿಗಳಲ್ಲಿ ಅವಕಾಶವಿರುವುದು ಹೊಡಿಮಗ , ಬಾರೆ ಮವ್ವೆ ಬಾರೆ ಮುಂತಾದ ಹಾಡುಗಳಿಗೇ ವಿನಹ ಮಾನಸ ಸರೋವರ,’ಸಾಗಲಿ ತೇಲು ತರಂಗದೊಳು..’ ದಂತಹ ಹಾಡುಗಳಿಗಲ್ಲ ಎಂಬುದು ಹಲವು ಚಿತ್ರರಂಗದವರ ಅಂಬೋಣ.ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ.
ಮೇಲೆ ವ್ಯಕ್ತಪಡಿಸಿರುವ ಅಭಿಪ್ರಾಯವೇ ಇವತ್ತಿನ ಕಳಪೆ ಸಂಗೀತ,ಸಾಹಿತ್ಯದ ಬುನಾದಿ.

೪)ಚಿತ್ರರಂಗವು ಕಲಾಮಾಧ್ಯಮದ ಬದಲಾಗಿ ಮಾರುಕಟ್ಟೆಯ ಸರಕಾಗಿ ಮಾರ್ಪಾಡಾಗಿದೆ.ಕಥಾ ವಸ್ತುವಿನ ಕೊರತೆ ಕನ್ನಡ ಸಾಹಿತ್ಯಲೋಕದಲ್ಲಂತೂ ಎಳ್ಳಷ್ಟೂ ಇಲ್ಲ .ಇತ್ತೀಚೆಗಿನ ಯುವ ಲೇಖಕರೂ,ಕವಿಗಳೂ ಬರೆದಿರುವ ಕಥೆ ಮತ್ತು ಕವನ ಸಂಕಲನಗಳೇ ಇವಕ್ಕೆ ಸಾಕ್ಷಿ. ಆದರೆ ಚಿತ್ರರಂಗವು ಅವುಗಳ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಮೂಲ ಕಥಾ ವಸ್ತುವಿನ ಚಿಂತನೆ ನಡೆಸುವ ಸೈರಣೆ ಚಿತ್ರರಂಗದ ಹೆಚ್ಚಿನವರಲ್ಲಿ ಉಳಿದಿಲ್ಲ.

ಯಾವತ್ತಿನ ವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ ,ಯಾವತ್ತಿನ ವರೆಗೆ ಕನ್ನಡ ಚಲನ ಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ,ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.
ಜೈ ಕನ್ನಡಾಂಬೆ!!

18 comments:

ತೋಚಿದ್ದು..ಗೀಚಿದ್ದು..ಕುಟ್ಟಿದ್ದು! said...

olleya chintane, adare idakkella ondalla ondu reetiyalli navu, neevu mattu indinana maakala matapitrugalu karanave annisuttide....elliyavarege ee reetiya avshyakategalu beleyuttaveyo...alliyavarege antaha utpannagalu tayaraguttiruttave.... :(

When you have demand, the supply will always be there one way / other !!!

Ramesh said...

hi,
good blog. first off all i am not really surprised about this because we being from DK have affection about linguistics. Be it kannada, be it Hindi, be it English for that matter. we are more into Textual language, which gives more importance to the grammer/meaning. But most of Karnataka talk/read something else. so it is not surprising.. of course it is worrying matter too. Some years back I was referring to a word "TEETOTALER" and most of my good friends(Who came from English medium schooling) did not know what it is ...This is just an example...
Anyway, hope there is some revolution about language will happen in Karnataka. Hope the use of "Tamil-Kannada" will stop.

Unknown said...

Well said Archana....
me curious to see 1st standard books...
will be there still Avanu Agasa...aavalau kamala....?

It must be in Kanglish....

ಅನಿಕೇತನ ಸುನಿಲ್ said...

Archanaji,
Nimma kalavala nammadoo haudu....:-(
Sunil.

Anil said...

ಹಲೋ ಅರ್ಚನ, ನಿಮ್ಮ ಮಾನಸಿಕ ವೇದನೆಗಳನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದೀರ. ನಿಮ್ಮ ಕಳವಳಗಳು ನಮ್ಮದೂ ಹೌದು. ಇದಕ್ಕೇನು ಕಾರಣ ಹಾಗೂ ಪರಿಹಾರ?? ಇದೊಂದು ಗಹನವಾದ ಪ್ರಶ್ನೆ.

ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ನಿಜ ಆದರೆ ಕನ್ನಡ ಚಿತ್ರ ಸಾಹಿತ್ಯ ಹಾಗು ಸಂಗೀತ ಅವನತಿಯತ್ತ ಸಾಗುತ್ತಿದೆ ಎನ್ನುವುದನ್ನು ನಾನು ಖಂಡಿತ ಅಲ್ಲಗೆಳೆಯುತ್ತೇನೆ. ಕಳೆದ ಹತ್ತು ವರ್ಷ ಕ್ಕೆ ಹೋಲಿಸಿದರೆ ಇತ್ತೀಚಿಗೆ ಕೆಲವು ಉತ್ತಮ ಕನ್ನಡ ಚಿತ್ರಗಳೂ, ಹಲವು ಮಧುರ ಕನ್ನಡ ಗೀತೆಗಳು ಹೊರಬಂದಿವೆ. ಕಾಳಿನ ಜೊತೆ ಜೊಳ್ಳು ಕೂಡ ಬೆರೆತಿರುವಂತೆ ನೀವು ಕೊಟ್ಟ ಉದಾಹರಣೆ ಗಳಂತಹ ಹಾಡುಗಳೂ ಬಂದಿವೆ. ಕಾಳಿಗಿಂತ ಜೊಳ್ಳೇ ಹೆಚ್ಚಾದಾಗ ಬೇಸರ ಮೂಡುವುದು ಸಹಜ. ಆದರೆ ಜೊಳ್ಳು ಹೆಚ್ಚೆಂದು ಕಾಳನ್ನು ಎಸೆದರೆ ಅರ್ಥ ಏನು?

ಆಂಗ್ಲ ಪ್ರೇಮದಲ್ಲಿ ಮೈಮರೆತಿರುವ ಅನೇಕ ಜನ ಕನ್ನಡದಲ್ಲಿ ಮಾತನಾಡುವುದು ಅಸಭ್ಯ, ಅಸಹ್ಯ ಎಂದು ಭಾವಿಸಿದ್ದಾರೆ. ಟೀವಿ ಯಲ್ಲಿನ ಕನ್ನಡ ಉಚ್ಚಾರಣೆ ಸರಿ ಇಲ್ಲ ಎಂದು ಕನ್ನಡ ಟೀವಿ ಸೀರಿಯಲ್ ನೋಡದ ಜನ, ಇಂಗ್ಲೀಷ್ ನಲ್ಲಿ ಮಾತನಾಡಿದರೆ ಮಾತ್ರ status ಎಂದು ಭಾವಿಸುವ ಜನ ಹೆಚ್ಚಾಗಿದ್ದಾರೆ.

karnataka ದಲ್ಲಿ ಕನ್ನಡ ವನ್ನು ವಿವಿಧ ಭಾಗಗಳ ಜನ ವಿವಿಧ ರೀತಿಯಲ್ಲಿ ಬಳಸುತ್ತಾರೆ. ಮೈಸೂರು, ಮಂಗಳೂರು, ಹುಬ್ಬಳ್ಳಿ , ಕೊಡಗು ಗಳಲ್ಲಿ ವಿಭಿನ್ನ ಶೈಲಿಯ ಕನ್ನಡ ಶಬ್ದಗಳು, ನುಡಿಗಳು ಪ್ರಚಲಿತಿಯಲ್ಲಿ ಇವೆ. ಗ್ರಾಮೀಣ್ಯ ಕನ್ನಡ ಮತ್ತೂ ವೈವಿಧ್ಯವಾಗಿದೆ. ಈ ವೈವಿಧ್ಯಮಯತೆಯನ್ನು ಬಿಟ್ಟು ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯೀಕರಣ ಗೊಳಿಸುತ್ತಿರುವುದು ನಿಜವಾಗಲೂ ಕಳವಳಕರಿಯಾದ ವಿಷಯವೇ?

ಬಹಿಷ್ಕಾರದ ಬದಲು ಆಗೊಮ್ಮೆ ಈಗೊಮ್ಮೆ ಬರುವ ಉತ್ತಮ ಕನ್ನಡ ಧಾರಾವಾಹಿಗಳನ್ನು ಹಾಗು ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ, ಮಧುರ ಕನ್ನಡ ಗೀತೆಗಳ ಧ್ವನಿಸುರಳಿ ಖರೀದಿಸುವ ಮೂಲಕ ಪ್ರೋತ್ಸಾಹಿಸುವರಾಗಬೇಕು. ಮುಂದಿನ ಪೀಳಿಗೆಯ ಜನರಲ್ಲಿ ಕನ್ನಡ ಸಾಹಿತ್ಯ ಜ್ಞಾನ, ಪ್ರೇಮ ಬೆಳಸಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಇದು ಮಗುವಾಗಿದ್ದಾಗಲಿಂದಲೇ ಪ್ರಾರಂಭವಾಗಬೇಕು (ಬಾಹ್ಯ ಲೊಕ ತನ್ನ ಪ್ರಭಾವ ಬೀರುವ ಮುನ್ನ ). ಇಲ್ಲದಿದ್ದರೆ ಕನ್ನಡ ಸಾಹಿತ್ಯ ಅವನತಿಯತ್ತ ಎನ್ನುವ ನಿಮ್ಮ ಮಾತು ನಿಜವಾಗುವ ದಿನಗಳು ದೂರ ಇಲ್ಲ.

sunaath said...

ಅರ್ಚನಾ,
ಕನ್ನಡ ಚಿತ್ರಗಳು ಹಾಗೂ ಚಿತ್ರಸಾಹಿತ್ಯ ತುಂಬಾ ಕೆಳಮಟ್ಟಕ್ಕೆ ಇಳಿದಿವೆ. ಇದು ಸುಧಾರಿಸೀತು ಎನ್ನುವ ಭರವಸೆ ಇಲ್ಲ.

shivu.k said...

ಅರ್ಚನ ಮೇಡಮ್,

ನಿಮ್ಮಂತೆ ನಾನು ಹೊರಗೆ ಓಡಾಡುವಾಗ ಸದಾ FM ಕೇಳುತ್ತಿರುತ್ತೇನೆ...ನೀವು ಹೇಳಿದ ಹಾಡುಗಳ ಹಾವಳಿ ತಾಳಿಕೊಳ್ಳಲು ಆಗುವುದಿಲ್ಲ...ಅದಕ್ಕಾಗಿ ಸರಿಯಾಗಿ ಮದ್ಯಾಹ್ನ ೧೧ ಗಂಟೆ ರೈನ್‌ಬೊ ಕೇಳಿದರೇ ಅದರಲ್ಲಿ ಒಂದು ಗಂಟೆ ಕಾಲ ಹಿಂದಿ ಹಳೆಯ ಹಾಡುಗಳನ್ನು ಹಾಕುತ್ತಾರೆ...ಮತ್ತು RJ ಕೂಡ ಸರಳವಾಗಿ ಮಾತಾಡುತ್ತೇನೆ...ಅದೇ ಎಷ್ಟೋ ಚೆನ್ನಾಗಿರುತ್ತದೆ...

ಸದ್ಯಕ್ಕಂತೂ ನಮ್ಮ ಕನ್ನಡ ಚಿತ್ರ ಗೀತೆಗಳ ಗುಣ ಮಟ್ಟವಂತೂ ಅದೋಗತಿಗಿಳಿದಿರುವುದು...ನಿಜ...

ನಿಮ್ಮ ಲೇಖನದಲ್ಲಿ ನಮ್ಮ ಭಾಷೆಯ ಬಗ್ಗೆ ಕಾಳಜಿ ಕಾಣುತ್ತದೆ...

Unknown said...

ಅರ್ಚನ ಅವರೇ,

ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ನಾನೂ ಕೂಡ ಬಹಳ ಆಕಾಶವಾಣಿ ಕೇಳುತ್ತಿದ್ದೆ. ಆದರೆ ಈ ನಡುವೆ FM ಚ್ಯಾನೆಲ್ ಗಳು ಬಂದ ಮೇಲಂತೂ ಮನಸ್ಸಿಗೆ ಮುದ ಸಿಗುವ ಬದಲು ಮನಸ್ಸು ಕದಡಿ ಕೆಸರಾಗುತ್ತದೆ. ಇದಕ್ಕೆ 2 ಕಾರಣ ಇರಬಹುದು 1. ನೀವೇ ಹೇಳಿದಂತೆ ಹಾಡುಗಳ ಗುಣಮಟ್ಟ 2. FM ಕನ್ನಡ (70% ಇಂಗ್ಲೀಶ್ ಮತ್ತು ಉಳಿದ 30% ಕನ್ನಡ).
FMನಲ್ಲಿ ಒಂದೇ ಒಂದು ಒಳ್ಳೆಯ ವಿಷಯ ಏನಂದರೆ .ಗಳು ಕೆಳುಗರನ್ನ ಬಡಿದು ಎಬ್ಬಿಸುತ್ತಾರೆ, ಅವರ ಪಟಾಪಟ್ ಮತುಗಳಿ0ದ.

ಅನಿಲ್ ಅವರು ಹೇಳಿದ ಹಾಗೆ ಎಲ್ಲಾ ಹಾಡುಗಳೂ ಕೆಟ್ಟದಾಗಿಲ್ಲ, ಬಹಳಷ್ಟು ಕೆಟ್ಟ ಹಾಡುಗಳು ಬರುತ್ತಿವೆ. ಎಸ್ಟು ಜನ ಸದಭಿರುಚಿಯ ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಾರೆ? ಎಸ್ಟು ಜನ ಕನ್ನಡ ಭಾಷೆಯ ವ್ರುತ್ತಪತ್ರಿಕೆಗಳನ್ನು ಕೊಂಡು ಓದುತ್ತಾರೆ? ಎಸ್ಟು ಜನ ಕನ್ನಡ ಭಾಷೆಯ ಪುಸ್ತಕಗಳನ್ನ ಕೊಂಡು ಓದುತ್ತಾರೆ?
ಎಸ್ಟು ಜನ ಕನ್ನಡ ಭಾಷೆಯಲ್ಲೇ ಮಾತಾಡುತ್ತಾರೆ(ಕನ್ನಡ ಬರುವವರ ಜೊತೆ)? ಎಸ್ಟು ಜನ ಕನ್ನಡ ಭಾಷೆಯ ಟೀವೀ ಸೀರಿಯಲ್ ಗಳನ್ನ ನೋಡುತ್ತಾರೆ ?

ಕನ್ನಡಿಗರಲ್ಲಿ ಭಾಷಾಭೀಮಾನ ಕಡಿಮೆ ಆಗುತ್ತಿದೆಯೇ?
ಇತ್ತೀಚೆಗೆ ನಾನು ಟೋಕಿಯೋ ನಲ್ಲಿ ಜಪಾನೀಸ್ ಭಾಷೆ ಬರೋದಿಲ್ಲ ಅಂದಿದ್ದಕ್ಕೆ ಯಾರೋ ನನಗೆ "ಅಯ್ಯೋ ಪಾಪ ಅವನಿಗೆ ಭಾಷೆ ಬರೋಲ್ಲ" ಆಂಥ ಅವರ ಭಾಷೆಯಲ್ಲೇ ಹೇಳಿದರು. ಅದೇ ಬೆಂಗಳೂರಿನಲ್ಲಿ ಆಗಿದ್ದಿದ್ದರೆ ನಮ್ಮವರು "ಇನ್ಗೆ ಪೋಯಿ ಲೆಫ್ಟ್ ತಿರುಗು ಅಂಗೆ ಇರ್ರಕ್ಕು" ಅಂತಾರೆ ವಿನಹ " ಹೀಗೆ ಹೋಗಿ ಎಡಕ್ಕೆ ತಿರುಗಿದರೆ ಅಲ್ಲೇ ಇದೆ" ಅನ್ನುವುದಿಲ್ಲ.

Keshav.Kulkarni said...

"ಇತಲಕಡಿ" ಅಂದರೆ "ಹಿತ್ತಲಕಡೆ". ಅದು ಆಡುಭಾಷೆ.

ಎಲ್ಲ ಕ್ಷೇತ್ರದಲ್ಲೂ ಅಷ್ಟೇ, ಒಳ್ಳೆಯದು ಅಥವಾ ತುಂಬ ದಿನ ಕಾಡುವ, ತುಂಬ ದಿನ ಉಪಯೋಗಕ್ಕೆ ಬರುವಂಥವುಗಳು ವಿರಳ. ವರ್ಷಕ್ಕೆ ಸಾವಿರಾರು ಹೊಸ ಮಾತ್ರೆಗಳು ಹೊರಬರುತ್ತವೆ, ಪೆನ್ಸಿಲಿನ್, ಆಸ್ಪಿರಿನ್ ಮಾತ್ರ ದಶಕಗಳ ಕಾಲ ಮಾಗಿದರೂ ಉಳಿಯುತ್ತವೆ. ವರ್ಷಕ್ಕೆ ಸಾವಿರಾರು ಹೊಸ ಯಂತ್ರೋಪಕರಣಗಳು ಬರುತ್ತವೆ, ಕೆಲವು ಮಾತ್ರ ಬಾಳಿಕೆಯಲ್ಲಿ ಉಳಿಯುತ್ತವೆ. ನೂರಾರು ಕವನಸಂಕಲನಗಳು ಹೊರಬರುತ್ತವೆ, ಕೆಲ ಕವನಗಳು ಮಾತ್ರ ಕಾಲನನ್ನು ಎದುರಿಸಿ ಬದುಕುತ್ತವೆ. ದಿನಕ್ಕೆ ನೂರಾರು ಕನ್ನಡ ಬ್ಲಾಗುಗಳು ಬರುತ್ತವೆ, ವರುಷ ಕಳೆದ ಮೇಲೆ ಕೆಲವೇ ಕೆಲವು ಮತ್ತೆ ಓದಿಸಿಕೊಳ್ಳುತ್ತವೆ. ಅದಕ್ಕೆ ಸಿನೆಮಾನೂ ಹೊರತಾಗಿಲ್ಲ, ಸಿನೆಮಾ ಸಂಗೀತವೂ ಹೊರತಾಗಿಲ್ಲ, ಕನ್ನಡವೂ ಹೊರತಾಗಿಲ್ಲ.

ನಿಮ್ಮ ಭಯ ಅರ್ಥವಾಗುತ್ತೆ. ಆದರೆ ಇಂಗ್ಲೀಷ್ ಪದಗಳ ಬಳಕೆ ಇಲ್ಲದೇ ಹೊಸ ಸಿನೆಮಾ ಹಾಡುಗಳನ್ನು ಬರೆಯುವುದು ಹೇಗೆ ಎಂದು ಒಂದು ಕ್ಷಣ ಯೋಚಿಸಿ. ಬೆಂಗಳೂರಿನ ಹುಡುಗನಿಗೆ ಕಾಡು ಎಂದರೇನು ಗೊತ್ತಿಲ್ಲ, ಬೆಳದಿಂಗಳನ್ನು ಕಂಡಿಲ್ಲ. ಅವನ ಪ್ರತಿಮೆಗಳು ಮೊಬೈಲು, ಎಸ್ಸೆಮ್ಮೆಸ್ಸು, ಎಂಜಿ ರೋಡು, ಪಬ್ಬು, ಇತ್ಯಾದಿಗಳು. ಅವುಗಳನ್ನು ಕನ್ನಡೀಕರಿಸಿ ಹಾಡು ಬರೆದರೆ ಅಧ್ವಾನ!

ನಾವು ದಿನಾ ಮಾತಾಡೂವಾಗ "ಲೇಟು" ಅನ್ನುವದೇ ಹೆಚ್ಚು "ತಡ" ಅನ್ನುವುದಿಲ್ಲ. ಅದನ್ನೇ ಸಿನೆಮಾ ಹಾಡಲ್ಲಿ ಬರೆದರೆ ತಪ್ಪೇನು? "ಸಾರಿ" ಅಂತೇವೆ, "ತಪ್ಪಾಯ್ತು, ಕ್ಷಮಿಸಿಬಿಡಿ" ಅಂತ ಹೇಳಲ್ವಲ್ಲ! ಇನ್ನು ಕಾಡು, ಹೂವು, ಬೆಳದಿಂಗಳು ಎಂದು ಬರೆದರೆ, ಆ ಸಂದರ್ಭಕ್ಕೆ ಹೊಂದುವುದಿಲ್ಲ.

ಹೊಸ ಜನಾಂಗ ಬಂದಾಗ, ಹೊಸ ಆರ್ಥಿಕ ವ್ಯವಸ್ಥೆ ಬಂದಾಗ ಭಾಷೆ ಬದಲಾಗುವುದು ಸಹಜ. ನಾವು ಹಳೆಗನ್ನಡದಿಂದ (ನಿಜ ಹೇಳಿ ನಿಮಗೆ ಹಳೆಗನ್ನಡದ ಒಂದಾದರೂ ಪದ್ಯ ಬರುತ್ತಾ, ಅರ್ಥವಾಗುತ್ತಾ?), ನಡುಗನ್ನಡ ಬಂತು. ಅಲ್ಲಿಂದ ನಾವು ನೀವೆಲ್ಲ ಮಾತಾಡುವ ಹೊಸಗನ್ನಡ ಬಂತು. ಇನ್ನು ಪಾಶ್ಚಾತ್ಯೀಕರಣದಿಂದ, ತಾಂತ್ರಿಕ-ಯಾಂತ್ರಿಕ ಜಗತ್ತಿನಿಂದ ಕನ್ನಡಕ್ಕೆ ಹೊಸ ಆಂಗ್ಲ ಪದಗಳು ಬಂದು ಬೀಳುತ್ತಲೇ ಇರುತ್ತವೆ. ಸವಾಲಿರುವುದು, ನಮ್ಮದನ್ನು ಬಿಡದೇ ಹೊಸ ಪದಗಳನ್ನು ಕನ್ನಡವೆಂದು ಸ್ವೀಕರಿಸಿ, ಕನ್ನಡವನ್ನು ಬೆಳೆಸುವುದು, ಅದು ನಮ್ಮೆಲ್ಲ ಕನ್ನಡಿಗರ ಸವಾಲು.

ಅಂದ ಹಾಗೆ, ಇತ್ತೀಚೆ ಬಂದ "ಪಿಸುಗುಡಲೇ.." ಹಾಡನ್ನು ಕೇಳಿದ್ದೀರಾ? ಇಂಥ ಸೊಗಸಾದ ಹಾಡು ಈಗಲೂ ಬರುತ್ತಲೇ ಇರುತ್ತವೆ, ಕಿವಿ ತೆರೆದಿರಬೇಕು ಅಷ್ಟೇ!

ನಿಮಗಿಂತ ಹೆಚ್ಚಿನ ದಿಗಿಲು ನನಗೂ ಇದೆ, ಬರೀ ಕನ್ನಡ ಸಿನೆಮಾ ಹಾಡಿನ ಬಗ್ಗೆಯಲ್ಲ (ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು).

ಸಿರಿಗನ್ನಡಂ ಬಾಳ್ಗೆ. ಕನ್ನಡ ನೂರ್ಕಾಲ ಬಾಳಲಿ. ಲಾಂಗ್ ಲಿವ್ ಕನ್ನಡ!

Raghavendra Udupa said...

Archana..

Take it easy ise (???)..

Like you, I used to like the old songs a lot for their richness in literature and the music too... I even had met my all time favorite music director Vijayabhaskar one day, just because I was so craze..

Now, lets come to the current trend.. Do you or me or anyone who has replied here.. would take up cinema as profession? No.. and all those who are in that field are good for nothing.. In fact, you should hear them speak.. For eg. Nagendra Prasad, the 'creator' of Ithalakadi song.. oh! man.. you feel that your child can write good songs..

Nowadays, I listen only to ARR songs, whether its tamil or hindi.. thats it..

Even Jayanth Kaikini seems to be boring.. not like the oldies Vijayanarasimha, KuRaSee, RNJ, etc. Kaikini's words are more poetic not cinema..

ರವಿರಾಜ್ ಆರ್.ಗಲಗಲಿ said...

archana nivu sariyada ansha grahisiddiri, uttama upayukta baravanige, kannadalli shabdgalige korateyilla, adare hucchu kudure bennu hattuva pravratti munduvradiruvudarinda intaha abhasagalu heccaguttive, kannada hadu bareyuvavaru hosa shbda, lalityavulla hadu bareyuv bagge chintisabekide, janaru aste inthaha hadugala bagga udasinate talabeku.

Dr Medha Dongre said...

hi archana,what you have written is really true.we,being in varanasi, want to be in touch with kannada language. we get 4-5 kannada channels and we find the quality of the programmes very poor.even the the pronunciation of news readers is weird. they say "baruttade,hoguttade"etc[the words that end with 'e' ] in a different way..it sounds like 'ae'.alpapraana and mahaprana are topics better not be discussed.coming to film songs..they are very silly to watch n hear not to mention that we dont understand them at all just like you said.since we have an option unlike in your cab, we invariably end up changing the channel and we never are forced to listen to the whole song!!film heroes look psychotic in their movements and appear like ones too due to their long hair, beard etc..i wonder what perceptions non kannadigas must be having about kannada films and language..i really really feel ashamed to watch kannada channels in tv except chandana and mukta mukta serial in etv..

ರಾಜೀವ said...

ಅರ್ಚನಾ ಮೇಡಂ,

ಬರಹ ಚೆನ್ನಾಗಿದೆ. ನೆನ್ನೆ ವಿಜಯಕರ್ನಾಟಕದಲ್ಲಿ ಈ ಲೇಖನ ಓದಿದೆ. ವಿಷಯ ಗಂಭೀರವಾಗಿದ್ದರೂ, ಹಾಸ್ಯದ ರೂಪದಲ್ಲಿ ತಿಳಿಸಿದ್ದೀರ.

ನನ್ನ ಕನ್ನಡ ಅಷ್ಟಕ್ಕಷ್ಟೇ. ಆದರೆ ಬಗ್ಗೆ ತರಾಟೆ ತೊಗೋಲೋದಿಲ್ಲ ತಾನೇ?

ಪವ್ವಿ said...

ನಿಮ್ಮ ಲೇಖನ ನೋಡಿ ಅದಕ್ಕೆ ಅಭಿಪ್ರಾಯವನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ...


http://chum-banavaasi.blogspot.com/2009/07/blog-post.html

jithendra hindumane said...

ನಿಮ್ಮ ಲೇಖನ ಕನ್ನಡಪ್ರಭದಲ್ಲಿ ಬಂದಿದೆ ಅಲ್ಲವ?
ತುಂಬಾ ಸಮಯೋಚಿತವಾಗಿದೆ. ಕನ್ನಡ ಹಾಡು ಕೇಳುವುದಲ್ಲ.. ಕನ್ನಡದ ಹುಚ್ಚೇಬಿದಿಸುವಂತಿದೆ ಇಂದಿನ ಸಿನಿಮಾ ಸಾಹಿತ್ಯ....

ಮನಸ್ವಿನಿ said...

Very much true.This has been a long going dscussion with my friend Circle where we have tried to highlight these points.But as they say ---------good to say in Kannada only.

As first step talented singers should stop singing to songs with such Foul language.

God knows when they will realise....

Anonymous said...

ನಿಮ್ಮ ಲೇಖನಗಳು ತುಂಬಾ ಚೆನ್ನಾಗಿವೆ. ವಿಜಯ ಕರ್ನಾಟಕ ಹಾಗೂ ಸುಧಾ ಪತ್ರಿಕೆಯೆಲ್ಲಿ ಬಂದಿರುವ ಲೇಖನಗಳನ್ನು ಓದಿ ಮೆಚ್ಚಿದ್ದೂ ಉಂಟು.ಆದರೆ ನಿಮಗೆ ತಿಳಿಸುವ ಯೋಗ ಇಂದು ದಕ್ಕಿತು.ನಾನು ನಿಮ್ಮಂತೆ ಕಾರ್ಪೊರೇಟ್ ಕಾಡಲ್ಲಿನ ಕನ್ನಡ ಜಿಂಕೆ.ನಿಮ್ಮಿಂದ ಇನ್ನೂ ಒಳ್ಳೆಯ ಲೇಖನಗಳು ಮೂಡಿ ಬರಲಿ.

-ಗೌತಮಿ. ಜಿ

Vinay said...

tumba valle thinking.. kananda halaktide aste.. Monne kannadave satya program nodide ( I even attended the program when C Ashwath was alive).. Yestu valle hadugalu.. Hinta pryatna innu agabeku.