Pages

Sunday, July 23, 2017

ಡ್ರಯ್ ಫ್ರುಟ್ ಲಡ್ಡುಬೇಕಾಗುವ ಸಾಮಗ್ರಿಗಳು
ಬೀಜ ತೆಗೆದ ಖರ್ಜೂರ- ೧ ಲೋಟ
ಬಾದಾಮಿ - ೧/೨ ಲೋಟ
ಪಿಸ್ತಾ - ಕಾಲು ಲೋಟ
ಗೋಡಂಬಿ- ಕಾಲು ಲೋಟ
ಗಸಗಸೆ- ೨ ಚಮಚ
ತುಪ್ಪ-೫ ಚಮಚ
ಏಲಕ್ಕಿ ಪುಡಿ- ಚಿಟಿಕೆ 

ವಿಧಾನ:
೧.ಮೊದಲಿಗೆ ಖರ್ಜೂರವನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ, ಮಿಕ್ಸಿಯಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿ. 
೨.ಬಾದಾಮಿ,ಪಿಸ್ತಾ,ಗೋಡಂಬಿ ಇವುಗಳನ್ನು ಸಣ್ಣ ಚೂರುಗಳಾಗಿ ಕತ್ತರಿಸಿ. 
೩.ಬಾಣಲೆಯಲ್ಲಿ ೨ ಚಮಚ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ರುಬ್ಬಿದ ಖರ್ಜೂರವನ್ನು ಹಾಕಿ ೨ ನಿಮಿಷಗಳ ಕಾಲ ಹುರಿಯಿರಿ. ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ. 
೪.ಬಾಣಲೆಗೆ ೨ ಚಮಚೆ ತುಪ್ಪ ಹಾಕಿ, ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯ ಚೂರುಗಳನ್ನು ೨ ನಿಮಿಷಗಳ ಕಾಲ ಹುರಿಯಿರಿ. 
೫.ಗಸಗಸೆಯನ್ನು ಪ್ರತ್ಯೇಕವಾಗಿ ಸ್ವಲ್ಪ ಕೆಂಪಗಾಗುವಂತೆ ಹುರಿಯಿರಿ. 
೬.ಕೈಗಳಿಗೆ ತುಪ್ಪ ಸವರಿಕೊಂಡು ,ಖರ್ಜೂರ,ಬಾದಾಮಿ,ಪಿಸ್ತಾ ,ಗೋಡಂಬಿ ,ಏಲಕ್ಕಿ ಪುಡಿ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ,ಸಣ್ಣ ಉಂಡೆಗಳನ್ನಾಗಿ ಮಾಡಿ.
೭.ಹುರಿದ ಗಸಗಸೆಯ ಮೇಲೆ ಉಂಡೆಗಳನ್ನು ಹಾಕಿ,ಅದರ ಮೇಲೆ ಗಸಗಸೆ ಪುಡಿ ಅಂಟಿಕೊಳ್ಳುವಂತೆ ಉರುಳಿಸಿ. 

ಈಗ ಡ್ರಯ್ ಫ್ರುಟ್ ಲಡ್ಡು ತಯಾರಾಯಿತು.  ಮಾಡಲು ಸುಲಭ, ಆರೋಗ್ಯಕ್ಕೆ ಹಿತಕರ ಮತ್ತು ತಿನ್ನಲು ಬಹಳ ರುಚಿ.

Thursday, July 20, 2017

ಜುನಾಗಡದಲ್ಲೊಂದು ಸುತ್ತುಇತ್ತೀಚೆಗಷ್ಟೇ ನಾನು ಗುಜರಾತಿನ ಜುನಾಗಡ ಪ್ರಾಂತ್ಯದಲ್ಲೊಮ್ಮೆ ತಿರುಗಾಡಿ ಬಂದೆ. ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನೂ, ಜನಜೀವನವನ್ನೂ ಕಂಡುಬಂದೆ.ಜುನಾಗಡವು ಗುಜರಾತಿನ ನೈಋತ್ಯ ದಿಕ್ಕಿನಲ್ಲಿದೆ. ಇದು ಜಿಲ್ಲಾ ಕೆಂದ್ರವಾಗಿದ್ದು , ಅಹಮದಾಬಾದಿನಿಂದ ೩೫೫ ಕಿ.ಮಿ. ದೂರದಲ್ಲಿದೆ.  ಜುನಾಗಡ ಎಂದರೆ ಹಳೆಯ ಕೋಟೆ ಎಂದು ಅರ್ಥ. ಈ ಊರಿಡೀ ಹಳೆಯ ಕೋಟೆ ಕೊತ್ತಳಗಳಿಂದ ಆವರಿಸಲ್ಪಟ್ಟಿದೆ. ಹಳೆಯ ಬೇರು ಹೊಸ ಚಿಗುರು ಎಂಬಂತೆ ಭವ್ಯವಾದ ಪುರಾತನ ಮಹಲುಗಳ ನಡುವೆಯೇ ಆಧುನಿಕತೆ ಮೈವೆತ್ತುಕೊಂಡಂತೆ ಇರುವ ಈ ಊರು ನಾವು  ಹಳೆಯ ಕಾಲವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಮೌರ್ಯರು , ಕಳಿಂಗರು ,ಶಕರು, ಗುಪ್ತರು , ಮೊಘಲರು ಮತ್ತು ನವಾಬರುಗಳು ಈ ಪ್ರಾಂತ್ಯವನ್ನು ಆಳಿದ್ದಾರೆ. ಅದಕ್ಕೆ ಸಾಕ್ಷಿಯೋ ಎಂಬಂತೆ ಇಲ್ಲಿ ಹಳೆಯ ದೇಗುಲಗಳು, ಬುದ್ಧ ಗುಹೆಗಳು, ಅಶೋಕನ ಶಿಲಾಶಾಸನ, ಜೈನ ಮಂದಿರಗಳು,ಇಸ್ಲಾಂ ವಾಸ್ತು ಶೈಲಿಯ ಕಟ್ಟಡಗಳು ಕಂಡುಬರುತ್ತವೆ. 


ಜುನಾಗಡವು ಖ್ಯಾತಿ ಹೊಂದಿರುವುದು ಇಲ್ಲಿಯ ಗಿರ್ನಾರ್ ಪರ್ವತ ಶ್ರೇಣಿಗಳಿಂದ. ಇವು ಹಿಮಾಲಯಕ್ಕಿಂತಲೂ ಹಳೆಯದಾದ ಪರ್ವತಗಳು.ಆಧ್ಯಾತ್ಮಿಕ ಮತ್ತು ಭೌಗೋಳಿಕ ಹಿನ್ನೆಯಲ್ಲಿಯೂ ಇವು ಬಹಳಷ್ಟು ಮಹತ್ವವನ್ನು ಹೊಂದಿವೆ. ಶಿವರಾತ್ರಿಯ ಸಮಯದಲ್ಲಿ  ಇಲ್ಲಿ ಗಿರ್ನಾರ್ ಪರಿಕ್ರಮ ನಡೆಯುತ್ತದೆ. ಪರ್ವತದ ಸುತ್ತಲೂ ೩೬ ಕಿ,ಮೀ . ದೂರವನ್ನು ಕಾಲ್ನಡಿಗೆಯಲ್ಲಿ ದಟ್ಟ ಕಾಡಿನ ಮೂಲಕ ಕ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಸುಮಾರು ೭-೮ ಲಕ್ಷ ಜನರು ಪಾಲ್ಗೊಳ್ಳುತ್ತಾರೆ. ಪರಿಕ್ರಮದ  ದ್ವಾರದಲ್ಲಿ ಪರ್ವತವನ್ನು ಅವಲೋಕಿಸಿದಾಗ ಅದು ಶಿವನ ಮುಖವನ್ನು ಹೋಲುತ್ತದೆ.ಸಹಸ್ರಾರು ಸಾಧುಗಳು ಗಿರ್ನಾರ್ ಅರಣ್ಯ ಪ್ರದೇಶದಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ತಪಸ್ಸು ಮಾಡುತ್ತಿರುವ ಬಗ್ಗೆ ನಮ್ಮ ಚಾರಣದ ಮಾರ್ಗದರ್ಶಕರು ತಿಳಿಸಿದರು. ಅವರು ಜನಸಾಮಾನ್ಯರ ಕಣ್ಣಿಗೆ ಸಾಮಾನ್ಯವಾಗಿ ಗೋಚರವಾಗುವುದಿಲ್ಲ.  ಈ ಪರ್ವತವನ್ನು ಏರಲು ಕಡಿದಾದ ಮೆಟ್ಟಲುಗಳಿವೆ. ಇವುಗಳ ಸಂಖ್ಯೆ ಎಷ್ಟು ಗೊತ್ತೇ ?  -ಒಂದಲ್ಲ ಎರಡಲ್ಲ. ..ಹತ್ತು ಸಾವಿರ!!  ಮೆಟ್ಟಲುಗಳನ್ನು ಏರಲು ಸ್ವಲ್ಪ ಮಟ್ಟಿಗಾದರೂ ವ್ಯಾಯಾಮ ಮತ್ತು ಧೃಢ  ಸಂಕಲ್ಪ ಅತ್ಯಗತ್ಯವಾಗಿ ಬೇಕು . ಪರ್ವತವನ್ನು ಏರಲು ಕಷ್ಟ ವಾಗುವವರಿಗೆ ಡೋಲಿಯ ವ್ಯವಸ್ಥೆಯೂ  ಇದೆ.  

ನಾವು ನಮ್ಮ ಚಾರಣ ತಂಡದ ಮಿತ್ರರೊಡನೆ ಗಿರ್ನಾರ್ ಪರ್ವತವನ್ನು ಹತ್ತಲಾರಂಭಿಸಿದ್ದು ಸಂಜೆಯ ೪ ಗಂಟೆ ಹೊತ್ತಿಗೆ. ನಿಧಾನವಾಗಿ ಮೇಲಕ್ಕೆರುತ್ತಿದ್ದಂತೆ ಕಾಣಸಿಗುವ ಸೂರ್ಯಾಸ್ತದ ದೃಶ್ಯ ನಯನ ಮನೋಹರ. ಸುತ್ತಲಿನ ಗಿರ್ ಅರಣ್ಯದ ಸೊಬಗು, ಪರ್ವತದ ಭವ್ಯತೆ, ಸೂರ್ಯನ ಬೆಳಕಿಗೆ ಕೆಂಪಾದ ಆಕಾಶ, ಪ್ರಾಣಿ ಪಕ್ಷಿಗಳ ಸ್ವರ  ಮಾಧುರ್ಯ,ಪರ್ವತ ಪ್ರದೇಶದಲ್ಲಿರುವ ಅಲೌಕಿಕ ಶಕ್ತಿ ಇವೆಲ್ಲವನ್ನೂ ಅನುಭವಿಸಿಯೇ ಅರಿಯಬೇಕು . ಇವೆಲ್ಲದರ ನಡುವೆ ನಾವು  ತೃಣ  ಮಾತ್ರರು !! ಸುಮಾರು ನಾಲ್ಕೂವರೆ ಸಾವಿರ ಮೆಟ್ಟಲುಗಳನ್ನು ಏರಿದ ಬಳಿಕ ಅಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಆಶ್ರಮದಲ್ಲಿ ರಾತ್ರಿ ಕಳೆದೆವು. ದೇವ ಸನ್ನಿಧಿ, ಆಗಸದಲ್ಲಿ ನಕ್ಷತ್ರಗಳ ಚಿತ್ತಾರ -ಇವೆಲ್ಲವೂ ನಮಗೆ ಅವಿಸ್ಮರಣೀಯ ಅನುಭವ. ಇಡೀ ಗಿರ್ನಾರ್ ಒಮ್ಮೆ ಆಧ್ಯಾತ್ಮಿಕ ಶಿಖರದಂತೆ ಗೋಚರವಾದರೆ ಇನ್ನೊಮ್ಮೆ ಸಕಲ ಪ್ರಾಣಿ ಪಕ್ಷಿಗಳನ್ನೂ ತನ್ನಲ್ಲಿ ಬಚ್ಚಿಟ್ಟು ನಮ್ಮೆದುರು ಸವಾಲೆಸೆಯುವ ತುಂಟನಂತೆ ಕಾಣುತ್ತದೆ. ಅವರವರ ಭಾವಕ್ಕೆ  ಅವರವರ ಭಕುತಿಗೆ !! ಹಿಂದಿಯ ಖ್ಯಾತ ಚಲನಚಿತ್ರ 'ಸರಸ್ವತಿ ಚಂದ್ರ ' ದ   ಹಾಡು 'ಛೋ ಡ್ ದೇ ಸಾರಿ ದುನಿಯಾ ಕಿಸಿ ಕೇ ಲಿಯೇ '  ಚಿತ್ರೀಕ ರಣವಾದದ್ದು ಇಲ್ಲಿಯೆ. ಆ ಚಿತ್ರೀಕರಣದ ನೆನಪುಗಳನ್ನು ಅಲ್ಲಿಯ ಪೂಜಾರಿಯೋಬ್ಬರು ನಮ್ಮಲ್ಲಿ ಹಂ ಚಿ ಕೊಂಡರು 


ಮರುದಿನ ಬೆಳಗ್ಗೆ ೫ ಗಂಟೆಗೆ ನಾವು ಮತ್ತುಳಿದ ಐದುವರೆ ಸಾವಿರ ಮೆಟ್ಟಲುಗಳನ್ನು ಏರಿದೆವು. ಸೂರ್ಯೋದಯ ಮತ್ತೂ ಸುಂದರ. ಪ್ರಕೃತಿ ಮಾತೆಯ ಉಡುಗೆಗೆ ಅದೆಷ್ಟು ವರ್ಣಗಳು!!  ಪರ್ವತದ ಹಾದಿಯುದ್ದಕ್ಕೂ ಹಲವಾರು ಗುಡಿಗಳಿವೆ. ಜೈನ ಮಂದಿರಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಅಂಬಾಜಿ ಮಂದಿರ. ಇದು ಮಹಾಭಾರತ ಕಾಲದಿಂದಲೂ ಮಹತ್ವವನ್ನು ಪಡೆದಿದೆ. ಹೊಸದಾಗಿ ಮದುವೆಯಾದ ದಂಪತಿಗಳು ಇಲ್ಲಿ ದೇವಿಯ ದರ್ಶನವನ್ನು ಪಡೆಯಲು ಬರುವುದು ವಾಡಿಕೆ. ಗಿರ್ನಾರ್ ನ ತುತ್ತ ತುದಿಯಲ್ಲಿ ದತ್ತ ಪೀಠವಿದೆ. ಬೆಳಗ್ಗೆ ಸುಮಾರು ೮:೩೦ ಕ್ಕೆ ಪರ್ವತದ ತುದಿಯನ್ನು ತಲುಪಿದೆವು. ಅಲ್ಲಿ ದತ್ತಾತ್ರೆಯನ ದರ್ಶನ ಪಡೆದೆವು.  ಗುರು ದತ್ತಾತ್ರೇಯರು ಇಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿ ಪಡೆದ ಸ್ಥಳ ಇದು. ಇದರ ಸ್ವಲ್ಪ ಕೆಳಗೆ ದತ್ತ ಜ್ವಾಲೆಯಿರುವ ಮಂದಿರವಿದೆ. ಇಲ್ಲಿಯ ಜ್ವಾಲೆಯನ್ನು  ವಾರಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಅದು ಎಂದಿಗೂ ಆರುವುದೇ ಇಲ್ಲ. ದತ್ತನ   ಮಹಿಮೆ ಎಂದು ಜನ ನಂಬುತ್ತಾರೆ. ಹಲವಾರು ವಿಜ್ಞಾನಿಗಳು ಬಂದು ಈ ವಿಸ್ಮಯವನ್ನು ಅರಿಯಲಾರದೆ ಹೋಗಿದ್ದಾರೆ ಎಂದು ಮಂದಿರದ ಪೂಜಾರಿ ನಮಗೆ ತಿಳಿಸಿದರು. ಅಲ್ಲಿಯ ಆಹ್ಲಾದಕರ ಪರಿಸರ ನಮಗೆ   ಮುದವನ್ನು ನೀಡಿತು. ಅಲ್ಲಿ ಭಕ್ತರಿಗೆ ರೋಟಿ, ದಾಲ್, ಪಲ್ಯ ಮತ್ತು ಖಿಚಡಿಗಳ ಪ್ರಸಾದವನ್ನು ನೀಡುತ್ತಾರೆ.ಅಲ್ಲಿ ಪ್ರಸಾದ ಸೇವಿಸಿ ನಾವು ನಿಧಾನವಾಗಿ ಇಳಿಯಲಾರಂಭಿಸಿದೆವು. 

ಇಳಿಯುವುದು ಹತ್ತುವುದಕ್ಕಿಂತಲೂ ಬಹಳ ತ್ರಾಸದಾಯಕವಾಗಿತ್ತು. ಹಿಂದಿನ ದಿನದ ಸುಸ್ತೂ ಸೇರಿ ಕಾಲುಗಳು ನಿಧಾವಾಗುತ್ತಿದ್ದವು. ಪ್ರತಿ ಹೆಜ್ಜೆಯೂ ಭಾರವೆನಿಸತೊಡಗಿತು. ನಿಧಾನವಾಗಿ ಬಿಸಿಲೇರುತ್ತಿತ್ತು. ದಾರಿ ಮಧ್ಯ ಸಿಗುವ ಪುಟ್ಟ ಅಂಗಡಿಗಳಲ್ಲಿ ನಿಂಬೆ ರಸ, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸುತ್ತಾ, ವಿಶ್ರಾಂತಿ ಪಡೆಯುತ್ತಾ ಇಳಿಯುತ್ತಿದ್ದೆವು. ಬೇಸ್  ಕ್ಯಾಂಪ್ ಗೆ ತಲುಪುವುದು ಹೇಗೆ ಎಂದು ಚಿಂತೆ ಕಾಡ ತೊಡಗಿತು. ಕಡೆಗೆ ಹೇಗಾದರೂ ಮಾಡಿ ಇಳಿದೇ ಬಿಡುತ್ತೇವೆ ಎಂಬ ಸಂಕಲ್ಪದೊಂದಿಗೆ ನಮ್ಮ ಚಾರಣದ ಮಿತ್ರವರ್ಗ ಒಬರನ್ನೊಬ್ಬರು ಹುರಿದುಂಬಿಸುತ್ತಾ ಸುಮಾರು ೨:೩೦ ಮಧ್ಯಾಹ್ನದ ಹೊತ್ತಿಗೆ ನಮ್ಮ ಬೇಸ್  ಕ್ಯಾಂಪ್ ತಲುಪಿದ್ದಾಯ್ತು . ಆಹ.. ನಾವು ಗಿರ್ನಾರ್ ಹತ್ತಿ ಬಂದೆವು !! ನಮ್ಮ ಸಂತಸಕ್ಕೆ ಪಾರವೇ ಇಲ್ಲ. ಮತ್ತೆರಡು ದಿನ ಸ್ವಲ್ಪ ಕುಂಟುತ್ತ ನಡೆದದ್ದು ಬೇರೆ ವಿಷಯ !! 

 ಗಿರ್  ಬಗ್ಗೆ ಶಾಲೆಯಲ್ಲಿ ಸಮಾಜ ಪುಸ್ತಕದಲ್ಲಿ ಓದಿದ ನೆನಪು. ಗಿರ್  ಅರಣ್ಯಗಳು ಸಿಂಹಗಳಿಂದಾಗಿ ವಿಶ್ವ ವಿಖ್ಯಾತವಾಗಿವೆ.ಇಲ್ಲಿ ಅದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಒದಗಿ ಬಂದಿತು. ಸಿಂಹಗಳ  ರಕ್ಷಣೆಗಾಗಿ ಇರುವ ಈ ಅರಣ್ಯವನ್ನು ರಕ್ಷಿತಾರಣ್ಯವೆಂದು ಘೋಶಿಸಲಾಗಿದೆ. ಸಿಂಹಗಳ  ಬಗ್ಗೆ ಅಧ್ಯಯನ ಮತ್ತು ಸಂರಕ್ಷಣೆಗೆ ಒತ್ತು   ನೀ ಡಲಾಗುತ್ತದೆ. ಅರಣ್ಯದ ಸ್ವಲ್ಪ ಭಾಗದಲ್ಲಷ್ಟೇ ಪ್ರವಾಸಿಗರಿಗೆ ಪ್ರವೇಶ. ಅದೂ ಕೂಡ ಅವರ ಜೀಪ್ ನಲ್ಲಿ ಗೈಡ್  ಜತೆ.  ಕಾಡಿನ ಹಾದಿ ಉದ್ದಕ್ಕೂ  ಜಿಂಕೆ,ನೀಲ್ಗಾಯ್  ಮುಂತಾದ ಪ್ರಾಣಿಗಳನ್ನು ಕಾಣಬಹುದು. ಸಿಂಹ ಕಾಣ ಸಿಗುವುದರ ಬಗ್ಗೆ ನಮ್ಮ ಗೈಡ್ ಖಾತ್ರಿ ನೀಡಿರಲಿಲ್ಲ. ನಮ್ಮ ಅದೃಷ್ಟವೋ ಏನೋ ನಮ್ಮ ಜೀಪ್ ಮುಂದೆಯೆ ಸಿಂಹ ಮತ್ತು ಸಿಂಹಿಣಿ  ಹಾದು ಹೋಗಬೇಕೆ !! ಆ ಕ್ಷಣ ಅತ್ಯಂತ ರೋಮಾಂಚಕಾರಿ . ಕಾಡಿನ ರಾಜ ನಮ್ಮ ಎದುರಲ್ಲಿ.. ಅದರ ನಡಿಗೆಯ ಗಾಂಭೀರ್ಯವಂತೂ ಅಹಾ.. ರಾಜನಲ್ಲವೇ !! ನಾವೆಲ್ಲಾ ಉಸಿರು ಬಿಗಿ ಹಿಡಿದು ಅದನ್ನು ನೋಡುತ್ತ ಫೊಟೊ ತೆಗೆಯುತ್ತ ಇರುವಾಗಲೂ ಅದು  ನಮ್ಮನ್ನು ಕ್ಯಾರೆ ಮಾಡಲಿಲ್ಲ.  ಕಾಡಿನ ನಡುವೆ ಮಾಲ್ಧಾರಿ ಎಂಬ ಬುಡಕಟ್ಟು ಜನರು ವಾಸಿಸುತ್ತಾರೆ. ಸಿಂಹ ಮತ್ತು ಮನುಷ್ಯ ಜತೆ ಜತೆಯಾಗಿ ಜೀವನ ಸಾಗಿಸುವ ಪರಿ ನಮಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. 

ಗಿರ್ನಾರ್ ನಿಂದ ಸುಮಾರು ೭೫ ಕಿ.ಮಿ. ದೂರದಲ್ಲಿ ಸೋಮನಾಥ ದೇವಾಲಯವಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಮೊದಲನೆಯದು. ಸಮುದ್ರ ಘೋಷದ ಪಕ್ಕದಲ್ಲೇ ಇರುವ ಈ ದೇಗುಲ ಶತಶತಮಾನಗಳ ಕಾಲ ಪರಕೀಯರ ದಾಳಿಗೊಳಗಾಗಿ, ಸಂಪತ್ತೆಲ್ಲ ಸೂರೆ ಹೋದರೂ ಮತ್ತೆ ತಲೆ ಎತ್ತಿ ನಿಂತಿದೆ. ಭಕ್ತಿ ಭಾವಗಳ ಪರಾಕಾಷ್ಟೆ ,ಸಾಗರನ  ಸಾಮೀಪ್ಯ,ಸಮರ್ಪಕ ನಿರ್ವಹಣೆ ಮತ್ತು ಶುಚಿತ್ವ ಇವೆಲ್ಲವೂ ನನ್ನ ಮನ ಮುಟ್ಟಿದವು. ಇಲ್ಲಿ ಒಳಗೆ ಹೋಗಬೇಕಾದರೆ ಕ್ಯಾಮರ, ಫೋನ್ ಇವುಗಳನ್ನು ಯವುದನ್ನೂ ತೆಗೆದುಕೊಂಡು  ಹೋಗುವಂತಿಲ್ಲ. 

ಒಂದು ದಿನವಿಡೀ ನಾವು ಜುನಾಗಡ  ನಗರವನ್ನು ಸುತ್ತಾಡಿದೆವು. ಅಲ್ಲಿಯ ಉಪ್ಪರ್ ಕೋಟ್, ನವಾಬರ ವಸ್ತು  ಸಂಗ್ರಹಾಲಯ,ಸಕ್ಕರ್ ಬಾಗ್ ಪ್ರಾಣಿ ಸಂಗ್ರಹಾಲಯ ,ಮಹಬತ್ ಖಾನ್ ಗೋರಿ ಇವೆಲ್ಲವನ್ನೂ ವೀಕ್ಷಿಸಿದೆವು. ಪ್ರಾಚೀನ ಕಾಲದಲ್ಲಿ ಧಾನ್ಯಗಳನ್ನು ಸಂಗ್ರಹಿಸಿ ಇಡಲು ಕೋಟೆಯೊಳಗೆ ಮಾಡಿರುವ ನೆಲ  ಮಾಳಿಗೆಗಳು,ನೀರಿನ ಸಂರಕ್ಷಣೆಗಾಗಿ ಆಳವಾದ ಮೆಟ್ಟಿಲು ಮೆಟ್ಟಿಲಾಗಿ ಇರುವ ಬಾವಿಗಳು ಇತ್ಯಾದಿ ಆಗಿನ ಕಾಲದ ವಾಸ್ತು ಕೌಶಲ್ಯಕ್ಕೆ ದ್ಯೋತಕವಾಗಿವೆ. ಇತಿಹಾಸದ ಗುಹೆಯನ್ನು ಹೊಕ್ಕು ಬಂದoತಾಯಿತು. 

ಒಟ್ಟಿನಲ್ಲಿ ಹೇಳುವುದಾದರೆ  ಈ ಪ್ರವಾಸ ವಿಭಿನ್ನವಾಗಿತ್ತು.ಚಾರಣ, ವನ ವಿಹಾರ ,ಇತಿಹಾಸ ಮತ್ತು ಭಕ್ತಿಭಾವದಲ್ಲಿ ಮುಳುಗೆದ್ದು ಬಂದದ್ದು ಒಂದು ಸುಂದರ ಅನುಭವ. ಇದು  ಬಹಳಷ್ಟು ಹುರುಪು ಉತ್ಸಾಹ ನೀಡಿತು. ಅಲ್ಲಿಂದ ವಾಪಸು ಬಂದ ಮೇಲೂ  ನನ್ನ ಮನಸ್ಸು ಅಲ್ಲಿಯೇ ಇದೆ. 
(ಉದಯವಾಣಿಯಲ್ಲಿ ಪ್ರಕಟಿತ)

ಯುತ್ ಹಾಸ್ಟೆಲ್ ನವರು ಆಯೋಜಿಸಿದ್ದ ಪ್ರವಾಸ ಇದು. ಈ ವರುಷದ ಪ್ರವಾಸಕ್ಕೆ ನೀವು ಹೋಗಬೇಕೆಂದಿದ್ದರೆ ಈ ಲಿಂಕ್ 

ಒತ್ತಿ.