Pages

Monday, June 20, 2011

ಬೆಟ್ಟದ ಜೀವ





ಕಾರಂತರ ’ಬೆಟ್ಟದ ಜೀವ’ ಕಾದಂಬರಿ ನನ್ನ ಅತೀ ಪ್ರಿಯವಾದ ಕಾದಂಬರಿಗಳ ಪೈಕಿ ಒಂದು. ನಾನು ಅದನ್ನು ’ನೋಡಿದ್ದು ’ ಮೂರನೇ ತರಗತಿಯಲ್ಲಿರುವಾಗ ನನ್ನ ಗುರುಗಳ ಬಳಿ. ’ಓದಿದ್ದು ’ ಕಾಲೇಜಿಗೆ ಬಂದ ಮೇಲೆ. ನನ್ನ ಆಪ್ತ ಗೆಳತಿಯೋರ್ವಳು ಅದರ ಬಗ್ಗೆ ವಿಮರ್ಶೆ ಬರೆದು, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದಾಗ ನಾನು ಕಾದಂಬರಿಯನ್ನೂ ಆಕೆ ಬರೆದ ವಿಮರ್ಶೆಯನ್ನೂ ಜತೆ ಜತೆಯಾಗಿಯೇ ಓದಿದೆ.


’ಬೆಟ್ಟದ ಜೀವ ’ ಕಾಡಿನ ಮಧ್ಯೆ ಗೂಡು ಕಟ್ಟಿಕೊಂಡು ಪ್ರಕೃತಿಯ ಜತೆ ಜತೆಗೆ ಸಾಗಿಸುವ ಗೋಪಾಲಯ್ಯನವರು ಮತ್ತು ಅವರ ಪತ್ನಿ ಶಂಕರಿಯ ಕಥೆ.ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಚಿತ್ರಿತವಾಗಿದೆ. ಕಾದಂಬರಿ ನಡೆಯುವ ಸ್ಥಳ ನನ್ನ ಹುಟ್ಟೂರಾದ ಹೊಸಮಠದ ಆಸುಪಾಸು-ಪಂಜ ಮತ್ತು ಸುಬ್ರಹ್ಮಣ್ಯ. ಮತ್ತು ಅದರಲ್ಲಿ ಕಾಣಸಿಗುವ ಪ್ರಕೃತಿಯ ವರ್ಣನೆಗಳನ್ನು ನಾನು ಪ್ರತ್ಯಕ್ಷವಾಗಿ ಕಾಣುತ್ತಾ ಬೆಳೆದವಳಾದ ಕಾರಣ ಈ ಕಾದಂಬರಿ ನನ್ನ ಮನಸ್ಸಿಗೆ ಮತ್ತಷ್ಟು ಆಪ್ತವಾದದ್ದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೆ ಮುಗಿಯಲಿಲ್ಲ. ಸಮಾನ ಮನಸ್ಕ ಸ್ನೇಹಿತರು ಭೇಟಿಯಾದಾಗ ’ಬೆಟ್ಟದ ಜೀವ’ ನುಸುಳುವುದುಂಟು.ಹೇಗೆ ಅಂತೀರಾ ? " ಬೆಟ್ಟದ ಜೀವದಲ್ಲಿ ಬರುವ ಥರ ದೊಡ್ಡ ಗಿಂಡಿಯಲ್ಲಿ ಕಾಫಿ ಕುಡಿಯಬೇಕು ಎಂತಲೋ ಅಥವಾ ’ಬೆಟ್ಟದ ಜೀವದಲ್ಲಿ ಬರುವ ಥರ ಎಣ್ಣೆ ಸ್ನಾನ ಮಾಡಬೇಕು’ಎಂತಲೋ ಮಾತು ’ಪರಮ ಸುಖದ ’ ಕಲ್ಪನೆಗಳಲ್ಲಿ ಒಂದಾಗಿ ಹೋಗುತ್ತದೆ!!

ಬೆಟ್ಟದ ಜೀವ ಇಷ್ಟೆಲ್ಲಾ ಆಗಿರುವಾಗ ಈ ಸಿನೆಮಾ ಬಂದಾಗ ನನಗೆ ಇದನ್ನು ನೋಡಲೇಬೇಕೆಂದು ಅನಿಸಿದುದರಲ್ಲಿ ಅಚ್ಚರಿಯೇನೂ ಇಲ್ಲ. ಕಾದಂಬರಿ ಮತ್ತು ಚಲನಚಿತ್ರ ಎರಡೂ ವಿಭಿನ್ನ ಮಾಧ್ಯಮಗಳು. ಕಾದಂಬರಿಯು ಕೆಲವೊಂದು ಸಂಗತಿಗಳನ್ನು ಅತ್ಯುತ್ಕೃಷ್ಟವಾಗಿ ಅಭಿವ್ಯಕ್ತಿಗೊಳಿಸಿದರೆ ಮತ್ತೆ ಕೆಲವು ವಿಚಾರಗಳನ್ನು ಚಲನಚಿತ್ರ ಸೊಗಸಾಗಿ ಧ್ವನಿಸೀತು. ’ಬೆಟ್ಟದ ಜೀವ’ ದ ನಿರೂಪಣೆ ಮತ್ತು ಕಥಾನಾಯಕನ ಆಲೋಚನೆಗಳನ್ನು ಚಲನಚಿತ್ರದಲ್ಲಿ ಯಾವ ರೀತಿ ತೋರಿಸಿಯಾರೆಂದು ನನಗೆ ಕುತೂಹಲವಿತ್ತು.

ಸಿನೆಮಾದಲ್ಲಿ ಕೆಲವು ಕಡೆ ಮೂಲ ಕಥೆಗಿಂತ ಕೊಂಚ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಚಳುವಳಿಯು ಕಥೆಯ ಜತೆ ಜತೆಗೆ ಸಾಗುತ್ತದೆ. ಚಳುವಳಿಯಲ್ಲಿ ಭಾಗವಹಿಸಿದ ಶಿವರಾಮು ಓಡುತ್ತಾ ಓಡುತ್ತಾ ದೇರಣ್ಣ ಮತ್ತು ಬಟ್ಯನನ್ನು ಭೇಟಿಯಾಗುವುದು ಮತ್ತು ಅವರ ಮೂಲಕ ಭಟ್ಟರ ಮನೆ ತಲುಪುವುದರಿಂದ ಕಥೆ ಶುರುವಾಗುತ್ತದೆ. ಮಗನ ಅಗಲಿಕೆಯಿಂದ ಕಂಗಾಲಾಗಿರುವ ದಂಪತಿಗಳು ಶಿವರಾಮುವಿನಲ್ಲಿ ಮಗನನ್ನು ಕಾಣುತ್ತಾರೆ. ಊಟ,ತಿಂಡಿ ನೀಡಿ ಉಪಚರಿಸುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಅವರ ಮಗನು ಮದುವೆಯಾಗಿ ಅವರಿಂದ ದೂರವಾಗಿರುತ್ತಾನೆ. ಆದರೆ ಇಲ್ಲಿ ಎರಡು-ಮೂರು ಬೇರೆ ಕಾರಣಗಳು ಹೆಣೆದುಕೊಳ್ಳುತ್ತವೆ. ಭಟ್ಟರು ತಮ್ಮ ಸ್ವಂತ ಮಗಳು-ಅಳಿಯನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದ ಲಕ್ಷ್ಮಿ, ನಾರಾಯಣರ ಮನೆಗೆ ಹೋದಾಗ ಲಕ್ಷ್ಮಿಯು "ಶಂಭು ( ಭಟ್ಟರ ಮಗ) ,ತನ್ನ ಜತೆ ಸಲುಗೆ ಮೀರಿ ವರ್ತಿಸಿದ ವಿಚಾರವನ್ನು ಅರುಹುತ್ತಾಳೆ. ಆದರೆ ತಾನು ಅದಕ್ಕೆ ಯಾವ ಪ್ರೋತ್ಸಾಹವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟುಹೋದ ’ ಎಂದು ಹೇಳುತ್ತಾಳೆ.

ಭಟ್ಟರ ಪತ್ನಿ- "ತಾನು ಮಗನಿಗೆ ಚಿನ್ನವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟು ಹೋದನೆಂದು ಹಲುಬಿ,ಚಿನ್ನವನ್ನು ಶಿವರಾಮುವಿನ ಕೈಗೊಪ್ಪಿಸುವ ದೃಶ್ಯವಂತೂ ಮನಕಲಕುತ್ತದೆ. ಹೊನ್ನಿನ ಮೋಹಕ್ಕಿಂತಲೂ ಸಂತಾನದ ಮೋಹವೇ ಮಿಗಿಲೆಂದು ಆಕೆ ಹೇಳುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಭಟ್ಟರು ಚಳುವಳಿಗೆಂದು ಮನೆ ಬಿಟ್ಟು ಹೋದ ಮಗನ ಸಂಗತಿಯನ್ನು ತಿಳಿಸುತ್ತಾರೆ. "ಪ್ರಕೃತಿಯನ್ನು ಮಣಿಸಿರುವ ತನಗೆ ಮಗನನ್ನು ಮಣಿಸಲು ಅಸಾಧ್ಯವಾಯಿತು ಎಂಬುವುದು ಬಲು ದೊಡ್ಡ ಕೊರಗಾಗುತ್ತದೆ. ಮಗನ ಛಾಯಾಚಿತ್ರವನ್ನು ನೋಡುವಾಗ ಅವರಾಡುವ ಮಾತು " ವಾಸ್ತವದಲ್ಲಿ ಕಾಣಲಾಗದ್ದನ್ನು ನೆರಳಿನಾಟದಲ್ಲಿ ಕಾಣುವುದು ಹೇಗೆ" ಎನ್ನುವುದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.


ಮೂಲ ಕಥೆಯಲ್ಲಿ ಶಿವರಾಮು ಅವರಿಗೆ ಜ್ವರ ಬರುವ ವಿಚಾರವಿದ್ದರೆ ಇಲ್ಲಿ ಅವರಿಗೆ ಕಾಲು ಉಳುಕುವುದು, ’ಮಾಂಕು’ ಬಂದು ಔಷಧಿ ನೀಡುವುದು, ನಾರಾಯಣ,ಲಕ್ಷ್ಮಿಯರು ಅವರನ್ನು ನೋಡಿಕೊಳ್ಳುವುದು ಇತ್ಯಾದಿ ಮಾರ್ಪಾಡು ಮಾಡಿದ್ದಾರೆ. ಹುಲಿಯನ್ನು ಕೊಲ್ಲಬೇಡಿರೆಂದು ಹೇಳುವುದು ’ಅಹಿಂಸಾತ್ಮಕ ಚಳುವಳಿಯ ’ ಒಂದು ರೂಪ ಎನ್ನಬಹುದು. ಅಂತೆಯೇ ’ಯಾವ ಜೀವಿಗೂ-ಮನುಷ್ಯನಿಗೂ,ಪ್ರಾಣಿಗೂ ತನ್ನ ಇಚ್ಛೆಯ ಪ್ರಕಾರ ಜೀವಿಸಲು ಬಿಡುವುದು, ಸ್ವಾತಂತ್ರ್ಯ ನೀಡುವುದು ಎಂಬ ಅರ್ಥವನ್ನೂ ಬಿಂಬಿಸುತ್ತದೆ. ಮಗನ ಅಗಲುವಿಕೆಯ ನೋವನ್ನು ಕಂಡ ಶಿವರಾಮು ತನ್ನ ಹೆತ್ತವರಲ್ಲಿ ಇಂಥ ನೋವನ್ನು ಉಂಟುಮಾಡಲಾರೆ ಎನ್ನುತ್ತಾ ತನ್ನ ಹೆತ್ತವರನ್ನು ನೋಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಭಟ್ಟ್ರು ಮಗನನ್ನು ಹುಡುಕಲು ಪುಣೆಗೆ ಹೊರಡುವಲ್ಲಿ ಕಥೆ ಕೊನೆಗೊಳ್ಳುತ್ತದೆ. ಚಲನಚಿತ್ರದಲ್ಲಿ ಆಧುನಿಕ ಕಾಲದಲ್ಲಿ ಮಧ್ಯ ವಯಸ್ಕ ಶಿವರಾಮು ಅವರು ಮಗನ ಜತೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು,ಅಲ್ಲಿಯ ಪ್ರಕೃತಿಯನ್ನು ಆರಾಧಿಸುವುದು, ಮತ್ತು ವೃದ್ಧ ದಂಪತಿಗಳ ಮಾತನ್ನು ಮೆಲುಕು ಹಾಕುವಲ್ಲಿ ಚಲನಚಿತ್ರಕ್ಕೆ ತೆರೆ ಬೀಳುತ್ತದೆ.


ಇಡೀ ಚಿತ್ರದ ಚಿತ್ರೀಕರಣ ಬಹಳ ಸೊಗಸಾಗಿದೆ. ಕಾಡು,ಬೆಟ್ಟ,ಗುಡ್ಡ,ನದಿ ಇವುಗಳ ಅನನ್ಯ ಸೌಂದರ್ಯವನ್ನು ಅತ್ಯಂತ ಸೊಗಸಾಗಿ ಚಿತ್ರೀಕರಣ ಮಾಡಿದ್ದಾರೆ. ಭೂತದ ಕೋಲ, ತೋಟ ಇವೆಲ್ಲ ತುಳುನಾಡಿನಲ್ಲಿ ಹುಟ್ಟಿ ಬೆಳೆದವರನ್ನೆಲ್ಲಾ ’ನಾಸ್ತಾಲ್ಜಿಯಾಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.ಭಟ್ಟರು, ಅವರ ಪತ್ನಿಯ ಅಭಿನಯವಂತೂ ಮನೋಜ್ನವಾಗಿದೆ. ದೇರಣ್ಣ,ಬಟ್ಯ ಅವರು ಹಾಡುವ ಹಾಡುಗಳು, ಅವರ ಮುಗ್ಧತೆಯಂತೂ ಕಣ್ಣಿಗೆ ಕಟ್ಟುತ್ತದೆ. ಸಂಭಾಷಣೆಯಲ್ಲಿ ತುಳು,ದಕ್ಷಿಣ ಕನ್ನಡ ಮತ್ತು ಹವ್ಯಕ ಶೈಲಿಯ ಕನ್ನಡ ಕಂಡುಬರುತ್ತದೆ. ದಕ್ಷಿಣ ಕನ್ನಡ ಶೈಲಿಯ ಕನ್ನಡವನ್ನು ಇನ್ನಷ್ಟು ಆಡುಮಾತಿನ ಶೈಲಿಯಲ್ಲಿ ಮಾತನಾಡುತ್ತಿದ್ದರೆ ಇನ್ನೂ ಸೊಗಸಾಗಿರುತ್ತಿತ್ತೇನೊ!


ಇಷ್ಟೆಲ್ಲಾ ಆದ ಮೇಲೆ ಇನ್ನೊಂದು ವಿಚಾರ ಹೇಳಬೇಕು. ಹಳ್ಳಿಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಪೇಟೆ ಸೇರುತ್ತಿದ್ದಾರೆ. ಹಳ್ಳಿಗಳಲ್ಲಿ ಕಾಣುವುದು ವೃದ್ಧ ತಂದೆ ತಾಯಿಯರು ಮಾತ್ರ. ನಮ್ಮೊರಿಗೆ ಬಂದರೆ ನಿಮಗೆ ಪ್ರತಿ ಮನೆಯಲ್ಲೂ ’ಬೆಟ್ಟದ ಜೀವ’ಗಳು ಕಾಣಸಿಕ್ಕೇ ಸಿಗುತ್ತಾರೆ!!




ಚಿತ್ರ ಕೃಪೆ : http://cdn2.supergoodmovies.com/FilesTwo/b3a1e2cf74074353baf7c06002387664.jpg

Thursday, June 9, 2011

ಮಳೆಗಾಲದ ತಿಂಡಿಗಳು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಬಾಳೆ ಕಾಯಿ ಕಾಪು, ದಹಿ maTar ಚಾಟ್ ,ಪೆಪ್ಪರ್ ಗಾರ್ಲಿಕ್ ಸೂಪ್ ಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)

ಮಳೆಗಾಲ ಎಂದರೆ ಮೊದಲೇ ಮಳೆ..ಥಂಡಿ . ಏನಾದರೂ ಬಿಸಿ ಬಿಸಿ,ಖಾರ ಖಾರ ತಿಂಡಿಗಳನ್ನು ಚಪ್ಪರಿಸಲು ಮನ ಹಾತೊರೆಯುತ್ತದೆ. ನಿಮಗಿದೋ ಕೆಲವೊಂದು ಐಡಿಯಾ ಗಳು.

1.ಬಾಳೆ ಕಾಯಿ ಕಾಪು

ಬೇಕಾಗುವ ಸಾಮಗ್ರಿಗಳು

ಬಾಳೆಕಾಯಿ :1
ಅಕ್ಕಿ ಹಿಟ್ಟು : ಒಂದು ಲೋಟ
ಕೊತ್ತಂಬರಿ : ಎರಡು ಚಮಚ
ಒಣ ಮೆಣಸು : ೫
ಉದ್ದು : ಒಂದು ಚಮಚ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ಹುಣಸೆ ಹುಳಿ : ಸಣ್ಣ ಗೋಲಿ ಗಾತ್ರದ್ದು
ಬೆಲ್ಲ : ಸಣ್ಣ ಚೂರು

ವಿಧಾನ.
೧.ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ಕೊತ್ತಂಬರಿ,ಒಣ ಮೆಣಸು, ಉದ್ದು,ತೆಂಗಿನ ತುರಿ,ಉಪ್ಪು,ಹುಣಸೆ, ಬೆಲ್ಲ ಮತ್ತು ಹುರಿದ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರನ್ನು ಮಿಶ್ರ ಮಾಡಿ ರುಬ್ಬಿ. ಈ ಮಿಶ್ರಣವು ಬೋಂಡ ಹಿಟ್ಟಿನ ಹದದಲ್ಲಿ ಇರಬೇಕು.
೩.ಬಾಳೆ ಕಾಯಿಯನ್ನು ಬಿಲ್ಲೆಗಳಾಗಿ ಹೆಚ್ಚಿ ಈ ಮಿಶ್ರಣದಲ್ಲಿ ಹಾಕಿ.
೪.ಕಾವಲಿಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ. ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಬಾಲೆಕಾಯಿಯ ಬಿಲ್ಲೆಗಳನ್ನು ಕಾವಲಿಯಲ್ಲಿ ಹಾಕಿ ಬೇಯಿಸಿ. ೨-೩ ನಿಮಿಷ ಕಳೆದ ಮೇಲೆ ಬಾಳೆ ಕಾಯಿ ಬಿಲ್ಲೆಗಳನ್ನು ಮಗುಚಿ ಹಾಕಿ ಬೇಯಿಸಬೇಕು.

೨.ಭೇಲ್ ಪುರಿ.



ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ : ನಾಲ್ಕು ಲೋಟ
ನೀರುಳ್ಳಿ : ಒಂದು
ಟೊಮೇಟೊ :ಒಂದು,
ನಿಂಬೆ ರಸ : ಒಂದು ಚಮಚ
ಖಾರದ ಪುಡಿ : ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಎರಡು ಚಮಚ
ನೆಲಕಡಲೆ : ಒಂದು ಹಿಡಿ

ವಿಧಾನ :
೧.ನೀರುಳ್ಳಿ, ಟೊಮೇಟೊ ,ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ.
೨.ನೆಲಕಡಲೆಯನ್ನು ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
೩.ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ (೧) ಮತ್ತು (೨) ರಲ್ಲಿ ಸೂಚಿಸಿದ ವಸ್ತುಗಳನ್ನು ಹಾಕಿ ಕಲಕಿ. ಇದಕ್ಕೆ ನಿಂಬೆ ರಸ, ಉಪ್ಪು, ಖಾರದ ಪುಡಿ,ಎಣ್ಣೆ ಹಾಕಿ ಚೆನ್ನಾಗಿ ಕಲಕಿ ಕೂಡಲೇ ತಿನ್ನಿ.

ವಿ.ಸೂ. ಬೇಕಿದ್ದರೆ ತೆಳ್ಳಗಿನ ಸೇವು ( ಖಾರದ ಖಡ್ಡಿ ) ಸೇರಿಸ ಬಹುದು.


೩.ಪೆಪ್ಪರ್ ಗಾರ್ಲಿಕ್ ಸೂಪ್


ಬೇಕಾಗುವ ಸಾಮಗ್ರಿಗಳು

ಕಾಳು ಮೆಣಸು : ಒಂದು ಚಮಚ
ಬೆಳ್ಳುಳ್ಳಿ ಎಸಳು :ಹತ್ತು
ತೆಂಗಿನ ತುರಿ : ಕಾಲು ಲೋಟ
ಉದ್ದು : ಒಂದು ಚಮಚ
ನೀರು :ಎರಡು ಲೋಟ
ರುಚಿಗೆ ತಕ್ಕಷ್ಟು ಉಪ್ಪು

ತುಪ್ಪ :ಒಂದು ಚಮಚ
ನಿಂಬೆ ರಸ :ಒಂದು chamcha

ವಿಧಾನ :
೧.ಕಾಳು ಮೆಣಸು ಮತ್ತು ಉದ್ದನ್ನು ಚೆನ್ನಾಗಿ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ತೆಂಗಿನ ತುರಿ, ಕಾಳು ಮೆಣಸು ಮತ್ತು ಉದ್ದನ್ನು ಹಾಕಿ ರುಬ್ಬಿ.
೩. ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ , ಬೆಳ್ಳುಳ್ಳಿಯನ್ನು ಕರಿಯಿರಿ.
೪.ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸುರಿದು, ಅದಕ್ಕೆ ಕರಿದ ಬೆಳ್ಳುಳ್ಳಿಯನ್ನು ಸೇರಿಸಿ.
೫.ಈ ಮಿಶ್ರಣವನ್ನು ಕುದಿಯಲು ಬಿಡಿ,
೬.ಉಪ್ಪು ಮತ್ತು ನಿಂಬೆ ರಸ ಹಾಕಿ ಕೆಳಗಿಳಿಸಿ.

ಸೂಚನೆ : ಇದನ್ನು ಸೂಪ್ ನಂತೆ ಅಥವಾ ಸಾರಿನಂತೆ ಸವಿಯಬಹುದು. ಉದ್ದಿನ ಬದಲು ಜೀರಿಗೆ ಹಾಕಿದರೆ ವಿಭಿನ್ನ ರುಚಿ ಬರುತ್ತದೆ.


೪. ಕಷಾಯ

ಮಲೆನಾಡಿನಲ್ಲಿ ಕಷಾಯ ಎನ್ನುವುದು ಜನಪ್ರಿಯ ಪೇಯ.

ಬೇಕಾಗುವ ಸಾಮಗ್ರಿಗಳು

ಕಷಾಯದ ಪುಡಿ ಮಾಡಲು :
ಕಾಳು ಮೆಣಸು : ಎರಡು ಚಮಚ
ಜೀರಿಗೆ: ನಾಲ್ಕು ಚಮಚ
ಕೊತ್ತಂಬರಿ : ಒಂದು ಹಿಡಿ.
ಏಲಕ್ಕಿ : ಒಂದು
ಲವಂಗ: ೨
ಹಿಪ್ಪಲಿ : ಒಂದು ಚಮಚ
ಒಣ ಶುಂಥಿ : ಸಣ್ಣ ಚೂರು
ಅರಸಿನ : ಕಾಲು ಚಮಚ

ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಕಷಾಯದ ಪುಡಿ.

ಕಷಾಯ ಮಾಡಲು

೧ ಚಮಚ ಕಷಾಯದ ಪುಡಿ
ಬೆಲ್ಲ : ಸಣ್ಣ ಚೂರು
ನೀರು :ಎರಡು ಲೋಟ

ನೀರಿಗೆ ಬೆಲ್ಲ, ಕಷಾಯದ ಪುಡಿ ಹಾಕಿ ಕುದಿಸಿ.
ಬಳಿಕ ಇದನ್ನು ಸೋಸಿ , ಕುಡಿಯಬೇಕು. ಬೇಕಿದ್ದರೆ ಹಾಲು ಸೇರಿಸಬಹುದು.

೫. ದಹಿ maTar ಚಾಟ್

ಬೇಕಾಗುವ ಸಾಮಗ್ರಿಗಳು

ಬಟಾಣಿ : ಎರಡು ಲೋಟ
ಮೊಸರು : ಕಾಲು ಲೋಟ
ಗರಂ ಮಸಾಲೆ ಅರ್ಧ ಚಮಚ
ಚಾಟ್ ಮಸಾಲೆ ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಕಾಲು ಲೋಟ
ಬೆಲ್ಲ : ಸಣ್ಣ ಚೂರು
ಖಾರದ ಪುಡಿ : ಕಾಲು ಚಮಚ
ಕೊತ್ತಂಬರಿ ಸೊಪ್ಪು :swalpa
ನೀರುಳ್ಳಿ :೧

ವಿಧಾನ
೧.ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ.
೨.ಒಂದು ಪಾತ್ರೆಯಲ್ಲಿ ಹುಣಸೆ ರಸ ಹಾಕಿ ಕುದಿಸಿ.
೩.ಕುದಿ ಬರುತ್ತಿದ್ದಂತೆ ಅದಕ್ಕೆ ಬೆಲ್ಲ, ಉಪ್ಪು, ಖಾರದ ಪುಡಿ,ಚಾಟ್ ಮಸಾಲ, ಗರಂ ಮಸಾಲ ಹಾಕಿ ಕಲಕಿ.
೪.ಇದಕ್ಕೆ ಬೇಯಿಸಿದ ಬಟಾಣಿಯನ್ನು ಸೇರಿಸಿ ಮಂದ ಉರಿಯಲ್ಲಿ ಬೇಯಿಸಿ.
೫.ಇದನ್ನು ಬಡಿಸುವಗಾ ಒಂದು ತಟ್ಟೆಗೆ ಬೇಯಿಸಿದ ಬಟಾಣಿಮಿಶ್ರಣ ಹಾಕಿ, ಅದಕ್ಕೆ ಮೊಸರು, ಕೊತ್ತಂಬರಿ ಸೊಪ್ಪು ಮತ್ತು ಹೆಚ್ಚಿದ ನೀರುಳ್ಳಿ ಹಾಕಿ ತಿನ್ನಲು ಕೊಡಿ.ಲು

Thursday, June 2, 2011

ಪಾಯಸ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’



ಪಾಯಸ

ಪಾಯಸ ಎನ್ನುವುದು ಪೀಯುಶ ಎಂಬ ಶಬ್ದದಿಂದ ಬಂದಿದೆ.ಪೀಯೂಶ ಎಂದರೆ ಮಕರಂದ. ಸವಿಯಾದದ್ದು. ಪಾಯಸವೂ ಸಿಹಿ ವಸ್ತು.ಹಾಗಾಗಿ ಈ ಹೆಸರಿನಿಂದ ಕರೆದಿರಬೇಕು.
ಹಿಂದಿಯ ಖೀರ್ ಎನ್ನುವುದು ಸಂಸ್ಕೃತದ ಕ್ಷೀರದಿಂದ ಬಂದದ್ದು. ಕ್ಷೀರವೆಂದರೆ ಹಾಲು.ಪಾಯಸದ ಮೂಲವಸ್ತು ಹಾಲು.ಉತ್ತರ ಭಾರತದ ಕಡೆ ದನ/ಎಮ್ಮೆಯ ಹಾಲನ್ನು ಬಳಸಿದರೆ,ದಕ್ಷಿಣ ಭಾರತದಲ್ಲಿ ತೆಂಗಿನ ಹಾಲಿನ ಬಳಕೆ ಹೆಚ್ಚು.

(I have got the above information from wiki pedia)


--------------------------
೧.ಗೋಧಿ ಕಡಿ ಪಾಯಸ

--------------------------



ಬೇಕಾಗುವ ವಸ್ತುಗಳು

ಗೋಧಿ ಕಡಿ :ಒಂದು ಲೋಟ
ಬೆಲ್ಲ:೧ ಲೋಟ
ತೆಂಗಿನಕಾಯಿ ತುರಿ:ಒಂದು ಲೋಟ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು
ತುಪ್ಪ :ಒಂದು ಚಮಚ
ಏಲಕ್ಕಿ ಪುಡಿ:ಚಿಟಿಕೆ
ನೀರು:ಎರಡು ಲೋಟ
ಬೆಲ್ಲದ ಪುಡಿ:ಒಂದು ಲೋಟ


ವಿಧಾನ.

೧.ಗೋಧಿ ಕಡಿಗೆ ನೀರು ಹಾಕಿ,ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೨.ತೆಂಗಿನ ತುರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿ, ರಸ ಹಿಂಡಿ ಇಟ್ಟು ಕೊಳ್ಳಿ.
೩.ಬೆಂದ ಗೋಧಿ ಕಡಿ, ತೆಂಗಿನಕಾಯಿ ಹಾಲು, ಬೆಲ್ಲ ಹಾಕಿ ಕುದಿಸಿ.
೪.ಇದು ಕುದಿಯುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.


ಇದೇ ಥರ ಕಡ್ಲೆ ಬೇಳೆ, ಹೆಸರು ಬೇಳೆ,ಅಕ್ಕಿಯ ಪಾಯಸವನ್ನೂ ಮಾಡಬಹುದು.

----------------------------------------------------------------------


೨.ಕ್ಯಾರೇಟ್ ಪಾಯಸ

-----------------------------------------------------------------------

ಕ್ಯಾರ್‍ಏಟ್ :ನಾಲ್ಕು
ತೆಂಗಿನ ಕಾಯಿ ಹಾಲು:ಎರಡು ಲೋಟ
ಸಕ್ಕರೆ:ಎರದು ಲೋಟ
ಏಲಕ್ಕಿ ಪುಡಿ:ಚಿಟಿಕೆ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು
ತುಪ್ಪ :ಒಂದು ಚಮಚ


೧.ಕ್ಯಾರ್‍ಏಟನ್ನು ಹೆಚ್ಚಿ ರುಬ್ಬಿ,ಕಾಯಿ ಹಾಲಿನಲ್ಲಿ ಬೇಯಿಸಿ.
೨.ಇದಕ್ಕೆ ಸಕ್ಕರೆ ಹಾಕಿ ಒಂದು ಕುದಿ ಬರಿಸಿ.
೩.ತುಪ್ಪದಲ್ಲಿ ಹುರಿದ ದ್ರಾಕ್ಷಿ,ಗೋಡಂಬಿಗಳನ್ನು ಸೇರಿಸಿ ಕಲಕಿ.
೪.ಏಲಕ್ಕಿ ಪುಡಿ ಉದುರಿಸಿ.

---------------------------------------------------



೩.ಖರ್ಜೂರದ ಪಾಯಸ

---------------------

ಬೇಕಾಗುವ ವಸ್ತುಗಳು

ಸಣ್ಣಗೆ ಹೆಚ್ಚಿದಖರ್ಜೂರ :ಒಂದು ಲೋಟ
ಬೆಲ್ಲದ ಪುಡಿ :೨ ಚಮಚ
ಏಲಕ್ಕಿ ಪುಡಿ:ಚಿಟಿಕೆ
ಗೋಡಂಬಿ:ನಾಲ್ಕು
ತೆಂಗಿನಕಾಯಿ ಹಾಲು:ಎರಡು ಲೋಟ
ತುಪ್ಪ:ಒಂದು ಚಮಚ

ವಿಧಾನ

೧.ಖರ್ಜೂರದ ಹತ್ತು ಸಣ್ಣ ಚೂರುಗಳನ್ನು ಪಕ್ಕಕ್ಕಿರಿಸಿ,ಉಳಿದ ಚೂರುಗಳನ್ನು ಕಾಲು ಲೋಟ ತೆಂಗಿನಹಾಲಿನ ಜತೆ ರುಬ್ಬಿ.
೨.ರುಬ್ಬಿದ ಮಿಶ್ರಣವನ್ನು ಕುದಿಸಿ.ಇದಕ್ಕೆ ಉಳಿದ ತೆಂಗಿನಹಾಲು,ಬೆಲ್ಲ,ಏಲಕ್ಕಿ ಪುಡಿ ಹಾಕಿ ಕುದಿಸಿ.
೩.ಕುದಿಯುತ್ತಿದ್ದಂತೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ಉಳಿದ ಖರ್ಜೂರದ ಚೂರುಗಳಿಂದ ಅಲಂಕರಿಸಿ.


----------------------------------------------------------------
೪.ಗೋಡಂಬಿ ಪಾಯಸ
--------------------------------------------------------------

ಬೇಕಾಗುವ ವಸ್ತುಗಳು

ಗೋಡಂಬಿ:ಎರಡು ಲೋಟ
ಹಾಲು :ಎರಡು ಲೋಟ
ಸಕ್ಕರೆ:ಎರಡು ಲೋಟ
ಬಾದಾಮಿ:೪
ಕೇಸರಿ ದಳ:ನಾಲ್ಕು


ವಿಧಾನ

೧.ಗೋಡಂಬಿಯನ್ನು ಸ್ವಲ್ಪ ನೀರಿನಲ್ಲಿ ರಾತ್ರಿ ಇಡೀ ನೆನೆಸಿಡಿ.ನೆನೆದ ಗೋಡಂಬಿಯನ್ನು ಸ್ವಲ್ಪ ಹಾಲಿನ ಜತೆ ರುಬ್ಬಿ .
೨.ಕೇಸರಿ ದಳಗಳನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ.
೩.ಹಾಲು,ರುಬ್ಬಿದ ಗೋಡಂಬಿ ಇವುಗಳನ್ನು ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.ಮಿಶ್ರಣವು ಅರ್ಧದಷ್ಟಾಗುವ ತನಕ ಕಲಕುತ್ತಾ ಇರಿ.
೪.ಸಕ್ಕರೆಯನ್ನು ಸೇರಿಸಿ,ನಿಧಾನವಾಗಿ ಕಲಕಿ.
೫.ಇದಕ್ಕೆ ಹೆಚ್ಚಿದ ಬಾದಾಮಿ ಮತ್ತು ನೆನೆಸಿದ ಕೇಸರಿ ದಳಗಳಿಂದ ಅಲಂಕರಿಸಿ.
೬.ಸ್ವಲ್ಪ ತಣಿಸಿ, ತಿನ್ನಲು ಕೊಡಿ

ಇದೇ ರೀತಿ ಬಾದಾಮಿಯ ಪಾಯಸವನ್ನು ಮಾಡಬಹುದು. ಬಾದಾಮಿಯ ಸಿಪ್ಪೆಯನ್ನು ತೆಗೆದ ಬಳಿಕ ಹಾಲಿನ ಜತೆ ರುಬ್ಬಬೇಕು.

--------------------------------------------------------------------------
೫.ಪರಡಿ ಪಾಯಸ
--------------------------------------------------------------------------


ಬೇಕಾಗುವ ವಸ್ತುಗಳು

ಅಕ್ಕಿ :ಒಂದು ಲೋಟ
ತೆಂಗಿನ ಹಾಲು:ಎರಡು ಲೋಟ
ಬೆಲ್ಲದ ಪುಡಿ:ಒಂದು ಲೋಟ
ಏಲಕ್ಕಿ ಪುಡಿ:ಚಿಟಿಕೆ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು
ತುಪ್ಪ :ಒಂದು ಚಮಚ

ವಿಧಾನ

೧.ಅಕ್ಕಿಯನ್ನು ನೀರಿನಲ್ಲಿ ಸುಮಾರು ೩ ಗಂಟೆಗಳ ಕಾಲ ನೆನೆಸಿ,ಸ್ವಲ್ಪ ನೀರಿನ ಜತೆ ರುಬ್ಬಿ.
೨.ಬೆಲ್ಲ,ಕಾಯಿಹಾಲು ಕುದಿಯಲು ಇಡಿ.
೩.ಅದು ಕುದಿಯುತ್ತಿದ್ದಂತೆ ತೂತಿರುವ ಸೌಟಿನ ಮೂಲಕ ರುಬ್ಬಿದ ಅಕ್ಕಿ ಹಿಟ್ಟನ್ನು ಬೀಳಿಸಿ.
೪.ಇನ್ನೂ ಸ್ವಲ್ಪ ಹೊತ್ತು ಕುದಿಯಲು ಬಿಡಿ.
೫.ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.


--------------------------------------

೬.ಸಜ್ಜಿಗೆ ಪಾಯಸ
-------------------------------------

ರವೆ:ಒಂದು ಲೋಟ
ತೆಂಗಿನ ಹಾಲು:ಎರಡು ಲೋಟ
ಸಕ್ಕರೆ:ಒಂದು ಲೋಟ
ತುಪ್ಪ :ಕಾಲು ಲೋಟ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು

ವಿಧಾನ

ರವೆಯನ್ನು ತುಪ್ಪದಲ್ಲಿ ಹುರಿದು, ತೆಂಗಿನ ಹಾಲು,ಸಕ್ಕರೆಯ ಜತೆ ಕುದಿಸಿ.
ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.


------------------------------------------
೭.ಸೇಮಿಗೆ ಪಾಯಸ
-----------------------------------------

ಸೇಮಿಗೆ (ವರ್ಮಿಸೆಲ್ಲಿ) : ಒಂದು ಲೋಟ
ತೆಂಗಿನ ಹಾಲು:ಎರಡು ಲೋಟ
ಸಕ್ಕರೆ:ಒಂದು ಲೋಟ
ತುಪ್ಪ :ಕಾಲು ಲೋಟ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು


ವಿಧಾನ:
೧.ಒಂದು ಲೋಟ ನೀರು ಕುದಿಯಲು ಬಿಡಿ.
೨.ಸೇಮಿಗೆಯನ್ನು ತುಪ್ಪದಲ್ಲಿ ಹುರಿದು, ಕುದಿಯುತ್ತಿರುವ ನೀರಿಗೆ ಹಾಕಿ.
೩.ತೆಂಗಿನ ಹಾಲು,ಸಕ್ಕರೆ ಸೇರಿಸಿ, ಇನ್ನಷ್ಟು ಕುದಿಸಿ.
೪.ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.

-----------------------------------------------
೮.ರಬ್ಡೀ
-----------------------------------------------

ಹಾಲು:ನಾಲ್ಕು ಲೋಟ
ಸಕ್ಕರೆ:ಎರಡು ಲೋಟ
ಕೇಸರಿ ಎಸಳು:ನಾಲ್ಕು

ಹಾಲನ್ನು ಕುದಿಸಿ,ಅರ್ಧಕ್ಕೆ ಇಳಿಸಿ. ಸಕ್ಕರೆ ಹಾಕಿ ಕಲಕಿ.
ಹಾಲಿನಲ್ಲಿ ನೆನೆದ ಕೇಸರಿ ಎಸಳುಗಳನ್ನು ಹಾಕಿ.
ಕತ್ತರಿಸಿದ ಬಾದಾಮಿ ಚೂರುಗಳಿಂದ ಅಲಂಕರಿಸಿ.


ಬೇಕಿದ್ದರೆ ಇದಕ್ಕೆ ಸ್ವಲ್ಪ ರೋಸ್ ಎಸೆನ್ಸನ್ನು ಹಾಕಬಹುದು.


--------------------------------------------------------
೯.ಬೀಟ್ರೂಟ್ ಪಾಯಸ
-------------------------------------
ಬೀಟ್ರೂಟನ್ನು ಸಣ್ಣಗೆ ತುರಿದು,ಹಾಲಿನಲ್ಲಿ ಬೇಯಿಸಿ, ಸಕ್ಕರೆ ಹಾಕಿ ಕಲಕಿ.


----------------
೧೦.ತಂಬಿಟ್ಟು
-----------------


ಅಕ್ಕಿ,ಬೆಲ್ಲ,ತೆಂಗಿನ ತುರಿ:ತಲಾ ಒಂದು ಲೋಟ
ಅಕ್ಕಿಯನ್ನು ಸುಮಾರು ಒಂದು ಗಂಟೆಕಾಲ ನೀರಿನಲ್ಲಿ ನೆನೆಸಿ,ಬಳಿಕ ಬೆಲ್ಲ,ತೆಂಗಿನ ತುರಿಯ ಜತೆ ರುಬ್ಬಿ.ತಂಬಿಟ್ಟು ತಯಾರು.ಇದನ್ನು ನಾಗರಪಂಚಮಿಗೆ ಮಾಡುತ್ತಾರೆ.