Pages

Tuesday, May 19, 2009

ನೀವೂ ಮೋಸ ಹೋದೀರಿ ಎಚ್ಚರಿಕೆ!

ಈ ಶನಿವಾರ, ಬಹುದಿನದಿಂದ ಕೆಟ್ಟು ಹೋಗಿದ್ದ ನಮ್ಮ ಲ್ಯಾಪ್ ಟಾಪನ್ನು ಸರಿಪಡಿಸುವ ಮುಹೂರ್ತ ಬಂದೊದಗಿತ್ತು. ಅದನ್ನು ಸರಿಪಡಿಸಲೋಸುಗ ಜಯನಗರದ ಒಂದು ಅಂಗಡಿ ನುಗ್ಗಿದ್ದಾಯಿತು. ಕೆಲವು ಪರೀಕ್ಷೆಗಳ ನಂತರ ಹಾರ್ಡ್ ಡಿಸ್ಕ್ ಬದಲಿಸಬೇಕೆಂಬ ಸೂಚನೆ ಗಟ್ಟಿಯಾಗತೊಡಗಿತು. ನಮಗೆ ಬೇಕಾದ ಹಾರ್ಡ್ ಡಿಸ್ಕ್ ಆ ಅಂಗಡಿಯಲ್ಲಿ ಇಲ್ಲದ ಕಾರಣ ಫೋನಾಯಿಸಿ, ಬೇರೊಂದು ಕಡೆಯಿಂದ ಅದನ್ನು ಅಂಗಡಿ ಮಾಲೀಕರು ತರಿಸಿದರು. ಹೊಚ್ಚ ಹೊಸ ಹಾರ್ಡ್ ಡಿಸ್ಕನ್ನು ನಮ್ಮ ಕಣ್ಣೆದುರಿಗೇ ಪಾಕೆಟ್ ನ ಸೀಲು ಒಡೆದು ತೆಗೆದು ತೋರಿಸಿ, ಜೋಡಿಸಿ, ಪರೀಕ್ಷಿಸಿ, ಎಲ್ಲವೂ ಸಮರ್ಪಕವಾಗಿದೆಯೆಂದು ಭಾವಿಸಿ, ಅಲ್ಲೇ ಆಪರೇಟಿಂಗ್ ಸಿಸ್ಟಮನ್ನು ಇನ್ ಸ್ಟಾಲ್ ಮಾಡಿ ನೋಡಿದೆವು. ಎಲ್ಲ ಓಕೆ.. ಚಿಂತೆ ಯಾಕೆ ಎಂದು ಭಾವಿಸಿ ಮನೆಗೆ ಬಂದೆವು. ಕಥೆ ಇಲ್ಲಿಗೇ ಮುಗಿಯಲಿಲ್ಲ. ಮುಗಿಯುತ್ತಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೂ ಇರಲಿಲ್ಲ.

ಮನೆಗೆ ಬಂದು ಸರಿಯಾದ ಲಾಪ್ ಟಾಪ್ ನಲ್ಲಿ ಮತ್ತೊಂದಷ್ಟು ಸಾಫ್ಟ್ ವೇರ್ ಗಳನ್ನು ಇನ್ ಸ್ಟಾಲ್ ಮಾಡುವ ಉತ್ಸಾಹದಲ್ಲಿ, ಮತ್ತೆ ಅದನ್ನು ಪರಿಶೀಲಿಸತೊಡಗಿದೆ. ಲಾಪ್ ಟಾಪ್ ನ ಡಿ ಡ್ರೈವ್ ಅನ್ನು ತೆರೆದು ನೋಡಿದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ಯಾಕೆ ಅಂತೀರಾ? ಯಾರೋ ಒಬ್ಬರ ಹಲವಾರು ಕಡತಗಳು ಅದರಲ್ಲಿದ್ದವು. ಹೊಸ ಹಾರ್ಡ್ ಡಿಸ್ಕ್ ಖಾಲಿಯಾಗಿರಬೇಕಷ್ಟೆ? ಈ ಥರದ ಕಡತಗಳು ಅದರಲ್ಲಿ ಮುಂಚಿನಿಂದಲೂ ಇದೆ ಅಂದ ಮೇಲೆ ಇದು ಹೊಸದಾಗಿರಲು ಹೇಗೆ ಸಾಧ್ಯ? ಮತ್ತೊಮ್ಮೆ ಆ ಕಂಪ್ಯೂಟರ್ ಅಂಗಡಿಗೆ ಫೋನಾಯಿಸಿ, ಬದಲಿಸಿದ ಹಾರ್ಡ್ ಡಿಸ್ಕ್ ಹೊಸತೇ ಅಲ್ಲವೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿದೆವು. "ಅದು ಹೊಚ್ಚ ಹೊಸದೇ" ಎಂಬ ಉತ್ತರ ದೊರಕಿತು.

ಡಿ ಡ್ರೈವ್ ನ ಕಡತಗಳಲ್ಲಿ ಏನೇನಿದೆ ಎನ್ನುತ್ತೀರಾ? 1. ಬ್ಯಾಂಕ್ ಸ್ಟೇಟ್ ಮೆಂಟ್ ಗಳು 2. ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು 3. ಷೇರು ವ್ಯವಹಾರದ ಅಂಕಿ ಅಂಶ 4. ಗೃಹಸಾಲದ ವಿವರಗಳು 5. ಕುಟುಂಬದ ಛಾಯಾಚಿತ್ರಗಳು 6. ಆಫೀಸಿನ ವಿವರಗಳು.

ಇತ್ತೀಚೆಗೆ 'Identity theft' , ಅಂತರ್ಜಾಲದಲ್ಲಿ ಆಗುವ ಮೋಸ ಹೆಚ್ಚಾಗಿವೆಯಷ್ಟೆ. ನನ್ನೆದುರು ಒಂದು ಪ್ರತ್ಯಕ್ಷ ನಿದರ್ಶನವಿತ್ತು.

ಆ ಕಡತಗಳಲ್ಲಿ ಆ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ಪಡೆದು ಅವರಿಗೆ ಫೋನಾಯಿಸಿ, ಎಲ್ಲ ವಿಷಯಗಳನ್ನು ತಿಳಿಸಿ, ಅವರ ಅಂತರ್ಜಾಲದ ಪಾಸ್ ವರ್ಡ್ಗಳನ್ನು ತಕ್ಷಣವೇ ಬದಲಾಯಿಸಲು ಆಗ್ರಹಿಸಿದೆವು. ಈ ವಿಷಯ ತಿಳಿದು ಅವರಿಗೂ ಗಾಬರಿಯಾಯಿತೆಂದು ಹೊಸದಾಗಿ ಹೇಳಬೇಕೆ?

ಇಲ್ಲಿ ಇಬ್ಬರಿಗೆ ಮೋಸವಾಗಿದೆ. 1. ಹೊಸ ಹಾರ್ಡ್ ಡಿಸ್ಕ್ ನ ಬೆಲೆ ತೆತ್ತು ಹಳೆಯದನ್ನು ಪಡೆದ ನನಗೆ 2. ಈ ಪರಿಯ ವೈಯಕ್ತಿಕ ದಾಖಲೆಗಳು ಯಾರದಾಗಿದ್ದವೋ ಅವರಿಗೆ. ಹಾಗೆ ನೋಡಹೋದರೆ ಮೊದಲನೆಯದ್ದಕ್ಕಿಂತ ಎರಡನೆಯದು ಅತ್ಯಂತ ಗಂಭೀರ ವಿಷಯ. ಎಲ್ಲಾ ತರಹದ ವಿಷಯಗಳೂ ಒಂದು ಚಿಕ್ಕ ಡಿಸ್ಕ್ ನಲ್ಲಿ ಅಡಕವಾಗಿಸಬಹುದಾದ ಈ ಕಾಲದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಕಂಪ್ಯೂಟರ್ ನಲ್ಲಿ ತಕ್ಕಮಟ್ಟಿನ ಸಾಕ್ಷರರಾಗಿದ್ದರೂ ಮೋಸ ಹೋಗುವ ಭಯ ಬೆಂಗಳೂರಿನಲ್ಲಿ ಇಲ್ಲದಿಲ್ಲ. ಈ ಥರದ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಜನರಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸುವುದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ವೈಯಕ್ತಿಕ ವಿವರಗಳನ್ನು ಒಂದೆಡೆ ಕಲೆ ಹಾಕಿದಾಗ ಅದಕ್ಕೆ ತಕ್ಕ ಭದ್ರತೆಯನ್ನು ಕಲ್ಪಿಸುವುದು ಇವತ್ತಿನ ಅಗತ್ಯ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದರಲ್ಲಿ ತುಂಬಾ ಸಮಯ ಹಿಡಿಯುವುದಿಲ್ಲ!
ದಟ್ಸ್ ಕನ್ನಡದಲ್ಲಿ

7 comments:

shivu.k said...

ಅರ್ಚನ ಮೇಡಮ್,

ಓದಿದ ಮೇಲೆ ನನಗೂ ಭಯವಾಯಿತು....ನಮ್ಮ ಡಾಟಗಳನ್ನು ಕಾಪಾಡುವುದು ಹೇಗೆಂಬ ಭಯ ಶುರುವಾಗಿದೆ..ತುಂಬಾ ಉಪಯುಕ್ತ ಲೇಖನ ಬರೆದಿದ್ದೀರಿ...
ಧನ್ಯವಾದಗಳು

sunaath said...

ಅರ್ಚನಾ,
ಭಾರತದಲ್ಲಿ ಮೋಸದ ಜಾಲ ಹೇಗೆ ಹಬ್ಬಿರುತ್ತದೆ ಎಂದು ಹೇಳಲಾಗುವದಿಲ್ಲ.
ನನ್ನ ಪರಿಚಿತರೊಬ್ಬರು Excise Deppt.ನವರು sieze
ಮಾಡಿದ ಒಂದು ವಿದೇಶೀ transistorಅನ್ನು ಖರೀದಿ ಮಾಡಿಕೊಂಡು ಬಂದಿದ್ದರು. ಎರಡು ದಿನಗಳ ಬಳಿಕ ಅದು ರಿಪೇರಿಗೆ ಬಂದಿತು.
ರಿಪೇರಿಯವನು ತೆಗೆದು ನೋಡಿದರೆ ಅದೊಂದು ಡುಪ್ಲಿಕೇಟ್ ಮಾಲು ಆಗಿತ್ತು!

Unknown said...

ಇಂಥದ್ದಕ್ಕೆಲ್ಲ ಬಹುಶ ಕೊನೆಯಿಲ್ಲ... ಅಂತರ್ಜಾಲ ಮೋಸಕ್ಕೆ ಕಠಿಣ ಶಿಕ್ಷೆ ವಿಧಿಸುವ (ಮರಣ ದಂಡನೆ :೦) ಕಾನೂನು ಜಾರಿ ಯಾಗ್ಬೇಕಷ್ಟೇ... :-)

ವಿ.ರಾ.ಹೆ. said...

data vishya irli.. nimage aada mosa sari madikondaro ilvo? hege?

Guruprasad said...

ತುಂಬ ಉಪಯುಕ್ತ ವಾದ ಲೇಖನ... ಹೌದು....ಡಾಟಾ ಸೆಕ್ಯೂರಿಟಿ , data seafty ತುಂಬ improtent, ಕಂಪ್ಯೂಟರ್ನ ಅಥವಾ ಲ್ಯಾಪ್ಟಾಪ್ ನ ರೆಪರಿಗೆ ಕೊಡೋವಾಗ... ಮೊದಲು ನಮ್ಮ ಪರ್ಸನಲ್ datana ಬೇರೆ ಕಡೆ ಸೇವ್ ಮಾಡಿಕೊಂಡು ಆಮೇಲೆ ಕೊಡಬೇಕು.... HDD ಹಾಳಾಗಿದ್ದರೆ.. ಅಥವ ಸಿಸ್ಟಮ್ ವರ್ಕ್ ಆಗ್ತಾ ಇಲ್ಲದಿದ್ದರೆ ರೆಪೆರಿಗೆಂದು ಹೋದಾಗ....ನಮ್ಮ HDD ನ remove ಮಾಡಿಸಿ ನಮ್ಮ ಜೋತೆನಲ್ಲಿ ಇಟ್ಟುಕೊಳ್ಳಬೇಕು.....ಇದರಿಂದ ಸ್ವಲ್ಪನಾದ್ರು ಅನುಕೂಲ ಆಗುತ್ತೆ...
ಇನ್ನು ನೀವು ಮೋಸ ಹೋದ ಬಗ್ಗೆ ಅದಸ್ಟು... ಕಂಪನಿ ಸರ್ವಿಸ್ ಸೆಂಟರ್ ಮೂಲಕನೆ ರೆಪೇರಿ ಮಾಡಿಸುವುದು ಒಳ್ಳೆಯದು....ವಾರಂಟಿ ಇಲ್ಲ ಅಂದ್ರೆ ಕೂಡ ಕಂಪನಿ ಸರ್ವಿಸ್ ಸೆಂಟರ್ ಗೆ ಹೋಗೋದು ಒಳ್ಳೇದು, ಬೇರೆ ಕಡೆ ಹೋದರೆ ನಮಗೆ ಗೊತ್ತಿಲ್ಲ ಅಂತ ಸುಮ್ನೆ ಫೂಲ್ ಮಾಡುತ್ತಾರೆ...
ಇದೆ ರೀತಿ ನನ್ನ ಫ್ರೆಂಡ್ ಒಬ್ಬ ಕಂಪ್ಯೂಟರ್ ರಿಪೇರಿಗೆಂದು ಕೊಟಿದ್ದ ಆದರೆ ವಾಪಾಸ್ ಕೊಡಬೇಕಾದರೆ ಒಂದು ಮೆಮೊರಿ ಸ್ಟಿಕ್ (RAM) ಅನ್ನೇ ತೆಗೆದುಬಿಟ್ ಇದ್ದರು,, ಆ ಕಂಪ್ಯೂಟರ್ ನಾನೇ ಕೊಡಿಸಿದ್ದೆ ಅದ್ದರಿಂದ ಹೋಗಿ ಅವರ ಹತ್ರ argue ಮಾಡಿ ವಾಪಾಸ್ ತೆಗೆದುಕೊಂಡು ಬಂದೆ...

bhadra said...

ಗಣಕ ತಿಳುವಳಿಕೆಯುಳ್ಳ ನಿಮಗೇ ಹೀಗಾದ್ರೆ, ಇನ್ನು ನಮ್ಮಂತಹವರ ಗತಿ ಏನು?

ಜಾಗರೂಕರಾಗಿರುವಂತೆ ಮನದಟ್ಟು ಮಾಡಿಸಿದ್ದಕ್ಕೆ ವಂದನೆಗಳು

http://venkaresha.wordpress.com

Amit Hegde said...

quite strange that you got a used HD...! Never heard of it...! Depends on the kind of shop we enter also ;D. But you can safely wipe data completely form disk partitions. There are many freewares available which make data irrecoverable. Just google for "data shredder" you will get all you want.


http://onlyperceptions.co.cc
http://simplyperceptions.blogspot.com