ಆಂಗ್ಲ ಭಾಷೆಯಲ್ಲಿ 'flying visit ' ಎಂಬ ಪದವಿದೆ. ಅತ್ಯಲ್ಪ ಅವಧಿಯ ಭೇಟಿಯನ್ನು ಹಾಗೆ ಕರೆಯುತ್ತೇವೆ. ನನ್ನ ಅಮೇರಿಕ ಪ್ರವಾಸವೂ ಈ ತರಹದ್ದು.ಕಳೆದ ಜನವರಿಯಲ್ಲಿ ನಾನು ಕೆಲಸ ಮಾಡುತ್ತಿರುವ ಕಂಪನಿಯ ಬೇರೊಂದು ವಿಭಾಗಕ್ಕೆ ವರ್ಗಾವಣೆ ಕೋರಿದ್ದೆ. ಅದರ interview ನಡೆದು ನನಗೆ ಹೊಸ ಹುದ್ದೆ ದೊರಕಿದ್ದೂ ಆಯಿತು. ಅದಾದ ತಕ್ಷಣ ನನ್ನ ಹೊಸ ಟೀಮ್ ಅನ್ನು ಭೇಟಿಯಾಗಲು ಒಂದು ವಾರದ ಅವಧಿಯ ಅಮೇರಿಕ ಪ್ರವಾಸ ನಿಗದಿಯಾಯಿತು. ಅಷ್ಟರ ತನಕ ನಾನು ಕ್ಯಾಲಿಫೊರ್ನಿಯಾ ವನ್ನು ನಕಾಶೆಯಲ್ಲಿ ಮಾತ್ರ ನೋಡಿದ್ದೆ!
ಅಮೇರಿಕಕ್ಕೆ ಹೋಗಲು ಮೊದಲ ಹಂತ ವೀಸಾ ಪ್ರಕ್ರಿಯೆ. ಇದಕ್ಕೆ ಬೇಕಾಗುವ ಕಾಗದ ಪತ್ರಗಳ ಪಟ್ಟಿಯ೦ತೂ ಸುದೀರ್ಘವಾಗಿತ್ತು. ಅವನ್ನೆಲ್ಲ ಹೊಂದಿಸಿಕೊಂಡು ಚೆನ್ನೈ ಗೆ ತೆರಳಿ ,ವೀಸಾ ಪಡೆದದ್ದೂ ಆಯಿತು. ವೀಸಾ ದೊರೆತ ಎರಡು ದಿನಗಳಲ್ಲಿಯೇ ನನ್ನ ಪ್ರಯಾಣ ನಿಗದಿಯಾಗಿತ್ತು. ಹಾಗಾಗಿ ಕೊಂಚ ತರಾತುರಿಯಲ್ಲಿಯೇ ಪ್ಯಾಕಿಂಗ್ ಇತ್ಯಾದಿಗಳನ್ನು ಮುಗಿಸಿದೆ. ಬೆಂಗಳೂರು- ದುಬೈ , ದುಬೈ- ಸಾನ್ ಫ್ರಾನ್ಸಿ ಸ್ಕೋ ಹೀಗೆ ಎರಡು ಹಂತಗಳಲ್ಲಿ ಸುಮಾರು ೨೨ ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಅಮೇರಿಕಾ ತಲುಪಿದೆ.
ನನ್ನ ಚಿಕ್ಕಪ್ಪನ ಮಗಳು ಮತ್ತು ಆಕೆಯ ಕುಟುಂಬ ಸಾನ್ ಫ್ರಾನ್ಸಿ ಸ್ಕೋದಲ್ಲಿ ಇದ್ದಾರೆ. ನಾನು ಅಮೇರಿಕಾ ದಲ್ಲಿ ಇಳಿದ ಮೊದಲ ದಿನ ಆಕೆ ನನ್ನನ್ನು ಅವರ ಮನೆಗೆ ಕರೆದೊಯ್ದಳು. ಅಲ್ಲಿ ಭರ್ಜರಿ ಮನೆ ಊಟವನ್ನು ಮಾಡಿದ್ದಾಯಿತು. ವಿಮಾನದ ಪ್ರಯಾಣದ ಅವಧಿಯಲ್ಲಿಡೀ ಕೊಡುತ್ತಿದ್ದ ಸಪ್ಪೆ ಸಪ್ಪೆ ಆಹಾರ ತಿಂದ ಬಳಿಕ ಮನೆ ಊಟ ಸಿಗುವಾಗಿನ ಆನಂದ ಅಪರಿಮಿತ. ಆಕೆಯನ್ನೂ ಆಕೆಯ ಸಂಸಾರವನ್ನೂ ಕಂಡು ನನಗೆ ಸಂತೋಷವಾಯಿತು. ಹೊಸಮಠವೆಂಬ ಪುಟ್ಟ ಹಳ್ಳಿಯ ಇಬ್ಬರು ಹುಡುಗಿಯರು ಈ ರೀತಿ ಅಮೇರಿಕಾದಲ್ಲಿ ಭೇಟಿಯಾಗುತ್ತೇವೆಂದು ನಾನು ಅಂದುಕೊಂಡಿರಲಿಲ್ಲ. ನಮ್ಮ ಊರಿನ ಪ್ರಥಮ ಮಹಿಳಾ ಇಂಜಿನಿಯರ್ ಆಕೆ !!
ಬಳಿಕ ನಾನು ನಮ್ಮ ಟೀಮ್ ಉಳಿದುಕೊಂಡಿದ್ದ ಹೋಟೆಲ್ ಗೆ ಬಂದೆ. ಹೋಟೆಲ್ ನ ಹಿಂಭಾಗದಲ್ಲಿಯ ಬ್ಯಾಕ್ ವಾಟರ್ ಒಂದು ದೊಡ್ಡ ಸರೋವರದ ಥರ ಕಾಣಿಸುತ್ತದೆ. ಅಲ್ಲಿ ಸೂರ್ಯೋದಯ ಬಹಳ ಸೊಗಸು.
ಸೂರ್ಯೋದಯ
|
ಪ್ರಶಾಂತವಾದ ಬ್ಯಾಕ್ ವಾಟರ್ |
ಮೊದಲೆರಡು ದಿನ ಪ್ರಯಾಣದ ಸುಸ್ತಿನಿಂದ ಬೆಳಗ್ಗೆ ಬೇಗ ಏಳಲಾಗಲಿಲ್ಲ. ಬಳಿಕ ಮೂರು-ನಾಲ್ಕು ದಿನ ನಾನು ದಿನಾ ಅಲ್ಲಿ ವಾಕಿಂಗ್ ಮಾಡಿ, ಸೂರ್ಯೋದಯವನ್ನು ಕಣ್ತುಂಬಿಕೊಂಡೆ.ಬೆಂಗಳೂರಿನ ಸದ್ದುಗದ್ದಲದ ವಾತಾವರಣದಿಂದ ನನ್ನನ್ನು ನಿಶ್ಯಬ್ದ ವಾತಾವರಣಕ್ಕೆ ವರ್ಗಾಯಿಸಿದಂತೆ ಇತ್ತು.
ಇಷ್ಟರ ತನಕ ಹಲವಾರು ದೇಶಗಳಿಗೆ ಭೇಟಿ ನೀಡಿದ್ದೆನಾದರೂ ಇಷ್ಟೊಂದು ದೀರ್ಘ ಪ್ರಯಾಣ , ೧೩.೫ ಗಂಟೆ ಗಳ ಕಾಲ ವ್ಯತ್ಯಾಸ ಇವೆಲ್ಲವೂ ನನಗೆ ಹೊಸದೇ. ಇವು ನನ್ನಲ್ಲಿ ತೀರ ಬಳಲಿಕೆ ಉಂಟು ಮಾಡಿದವು. ರಾತ್ರಿ ಇಡೀ ಸರಿಯಾಗಿ ನಿದ್ದೆಯಿಲ್ಲ. ಹಗಲಿಡೀ ತೂಕಡಿಕೆ . ಹಸಿವೆಯಂತೋ ಯಾವ್ಯಾವ ಹೊತ್ತಿಗೋ. ಒಂದು ಥರದ ವಿಚಿತ್ರವಾದ ಮನಸ್ಸು ಮತ್ತು ದೇಹಸ್ಥಿತಿ ಯಲ್ಲಿ ನಾನಿದ್ದೆ. ಅದರ ಮೇಲೆ ವಾರವಿಡೀ ಆಫೀಸ್ ಕೆಲಸಗಳು. ಅಂತೂ ಇಂತೂ ಬಹಳ ಸಲ ಕಾಫಿ ಕುಡಿದು, ನೀರು ಕುಡಿಯುತ್ತಾ ಹೇಗೋ ನಿಭಾಯಿಸಿದೆ.
ನನ್ನ ಜ್ಯೋತಿಷ್ಯ ತರಗತಿಯ ಸಹಪಾಠಿಯೋರ್ವರ ಮಗ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಒಂದು ಸಂಜೆ ಅವರ ಕುಟುಂಬದ ಜತೆ ಗೋಲ್ಡನ್ ಗೇಟ್ , Fisherman's Wharf ಇವುಗಳನ್ನು ಸುತ್ತಾಡಿ ಬಂದೆ. ಮತ್ತೊಂದು ಸಂಜೆ ನಮ್ಮ ಆಫೀಸ್ ಟೀಮ್ ಜತೆ ಕಂಪ್ಯೂಟರ್ ಹಿಸ್ಟರಿ ಮ್ಯೂಸಿಯಂಗೆ ಹೋಗಿದ್ದೆವು. ಕಂಪ್ಯೂಟರ್ ಆರಂಭವಾದಾಗಿನಿಂದ ಈಗಿನ ಅತ್ಯಾಧುನಿಕ ತಂತ್ರಜ್ಞಾನದವರೆಗೆ ಎಲ್ಲಾ ಯಂತ್ರಗಳನ್ನೂ ಅವುಗಳ ವಿವರಗಳನ್ನೂ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಲಾಪ್ ಟಾಪ್ ಸ್ವಲ್ಪ ಭಾರವಾಯಿತೆಂದು ಗೊಣಗುವ ನಾವು ಈ ಹಿಂದೆ ಕೊಠದಿಯಷ್ಟು ವಿಸ್ತಾರವಾಗಿದ್ದ ಕಂಪ್ಯೂಟರ್ ಗಳನ್ನು ಒಮ್ಮೆ ನೋಡಬೇಕು! ಈ ವಿಜ್ಞಾನ ಬೆಳೆದು ಬಂದ ಹಾದಿ ಅದ್ಭುತವಾಗಿದೆ. ಇಂತಹುದನ್ನೆಲ್ಲ ಆವಿಷ್ಕಾರ ಮಾಡಿದ ಮಾನವ ಮಿದುಳು ಎಂತಹ ಸೂಪರ್ ಕಂಪ್ಯೂಟರ್ ಎಂದು ಯೋಚನೆ ಮಾಡಿದೆ.
ಇಷ್ಟೆಲ್ಲಾ ಆದಾಗ ಒಂದು ವಾರ ಕಳೆದದ್ದೇ ತಿಳಿಯಲಿಲ್ಲ. ಆಫೀಸ್ ಕೆಲಸಗಳು ಮುಗಿದ ಬಳಿಕ ನಾನು ಚಿಕ್ಕಪ್ಪನ ಮಗನ ಮನೆಗೆ ಹೋಗಿದ್ದೆ. ಆ ದಿನ ನನಗೆ ಮತ್ತೊಮ್ಮೆ ಮನೆ ಊಟ ಸವಿಯುವ ಸದವಕಾಶ ದೊರೆಯಿತು. ಒಂದು ವಾರ ಇಡೀ ಬ್ರೆಡ್ , ಪಿಜ್ಜಾ ಗಳಲ್ಲಿ ದಿನ ಕಳೆದ ಮೇಲೆ ಮನೆ ಊಟ ನೀಡುವ ತೃಪ್ತಿ ಅವರ್ಣನೀಯ. ಬಹಳ ಕಾಲದ ನಂತರ ಅವರೆಲ್ಲರನ್ನೂ ಭೇಟಿ ಮಾಡಿದ್ದು , ಅವರ ಕುಟುಂಬದ ಜತೆಗಿನ ಒಡನಾಟವು ನನಗೆ ಖುಷಿ ನೀಡಿತು .ಅಲ್ಲಿಂದ ಮರಳಿ ಸ್ವಲ್ಪ ಶಾಪಿಂಗ್ ಮುಗಿಸಿ, ಮತ್ತೆ ವಿಮಾನ ಹತ್ತುವ ಸಮಯ. "ನನ್ನ ಊರಿಗೆ ಮರಳಿ ಬರುತ್ತಿದ್ದೇನೆ' ಎಂಬ ಸೌಖ್ಯ ಭಾವವಿದೆಯಲ್ಲ ಅದು ಎಷ್ಟೊಂದು ಸೊಗಸು !!
ಅಬಾಕಸ್ ಬಳಸಿ ಲೆಕ್ಕ ಮಾಡುವುದು |
ಪಂಚಿಂಗ್ ಕಾರ್ಡ್ ಬಳಸಿ Data Entry ಮಾಡುವುದು
|
2 comments:
ಇದು ನಿಜ. ನಮ್ಮ ಊರೇ ನಮಗೆ ಸ್ವರ್ಗ!
neatly presented.
Post a Comment