Pages

Sunday, May 8, 2011

ಮಾವು ಬಗೆ ಬಗೆ..


ಇವತ್ತಿನ ವಿಜಯಕರ್ನಾಟಕ-ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಲೇಖನ.
೧.ಆಮ್ರ :ಸಂಸ್ಕೃತದಲ್ಲಿ ಆಮ್ರ ಎಂದರೆ ಮಾವು. ಹಸಿ ಆಮ್ರ ಎಂದರೆ ಬೇಯಿಸದೆ ಮಾಡಿದ ಮಾವಿನ ಗೊಜ್ಜು. ಮಾವಿನಲ್ಲಿ ಮಾಡಿದ ಎಲ್ಲಾ ಅಡಿಗೆಯೂ ರುಚಿಕರವಾದುದೇ. ಆಮ್ರಕ್ಕೆ ಗಿರಿಜಾ ಕಲ್ಯಾಣದಲ್ಲಿ ಬರುವ ಉಪವನದ ವರ್ಣನೆಯ ಭಾಗವಿದೆ. "ಸಿರಿತ೦ದಿಕ್ಕಿದಶೋಕೆ , ವಾಗ್ವನಿತೆಯಿಟ್ಟಾಮ್ರಂ  " (೧-೩೧ ) ಆ ವನದಲ್ಲಿ ಲಕ್ಷ್ಮಿಯೇ ಅಶೋಕದ ಗಿಡವನ್ನೂ ಸರಸ್ವತಿಯೇ ಮಾವನ್ನೂ ನೆಟ್ಟು ಬೆಳೆಸಿದ್ದರ೦ತೆ.

--ಇಗೋ ಕನ್ನಡ ನಿಘಂಟು ಪುಟ ಸಂಖ್ಯೆ ೬೬ -ಪ್ರೊ.ಜಿ. ವೆಂಕಟ ಸುಬ್ಬಯ್ಯ

. ೨.  ರಸಾಯನ : ರಾಮಾಯಣದಲ್ಲೂ ಮಾವಿನ ಹಣ್ಣಿನ ಉಲ್ಲೇಖ ಬರುತ್ತದೆ. ಸೀತೆಯನ್ನು ಮರಳಿ ಅಯೋಧ್ಯೆಗೆ ಕರೆತರಲು ಸಹಕರಿಸಿದ ವಾನರ ಸೈನ್ಯಕ್ಕೆ ಶ್ರೀ ರಾಮಚಂದ್ರನು ಔತಣ ಹಾಕಿಸಿದ್ದು, ಅಲ್ಲಿ ಮಾವಿನ ಹಣ್ಣಿನ ರಸಾಯನ ಮಾಡಿದ್ದು, ವಾನರ ಸೇನೆಯ೦ತು ಒಬ್ಬರಿಗಿಂತ ಇನ್ನೊಬ್ಬರು ಮೇಲೆ ಎನ್ನುವಂತೆ ಮಾವಿನ   ಗೊರಟನ್ನು  ಎತ್ತರಕ್ಕೆ ಚಿಮ್ಮಿಸಿದ್ದು -ಔತಣ ಕೂಟ ಕ್ರೀಡಾ ಕೂಟ ವಾದದ್ದು ಈ ಕಥೆಯನ್ನು  ನೀವು ಕೇಳಿಯೇ ಇದ್ದೀರಿ.

೩. "ವಸಂತಕಾಲ ಬಂದಾಗ... ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇ ಬೇಕು." ಎಂಬ ಜನಪ್ರಿಯ ಚಲನಚಿತ್ರ ಗೀತೆಯನ್ನು ನೀವು ಕೇಳಿರಬಹುದು. ಅಷ್ಟೇ ಏಕೆ ’ಎತ್ತಣ ಮಾಮರ ಎತ್ತಣ ಕೋಗಿಲೆ , ಎತ್ತನಿಂದೆತ್ತಣ ಸ೦ಬ೦ಧವಯ್ಯ ? ಎಂಬ ಪ್ರಸಿದ್ದವಾದ ವಚನವಿದೆ. ಇದಕ್ಕೆ ಹಿನ್ನೆಲೆಯಾಗಿ ಒಂದು ಪುರಾಣ ಕಥೆಯಿದೆ.   ವಿಷ್ಣುವಿಗೆ ಒಮ್ಮೆ ಅಮೃತ ಕುಡಿಯುವ ಆಸೆ ಆಯಿತಂತೆ. ಗರುಡನನ್ನು ಅಮೃತ ತರಲು ಕಳಿಸಿದ. ಗರುಡ ಅಮೃತವನ್ನು ತೆಗೆದುಕೊಂಡು ಬರುವಾಗ ಗಂಧರ್ವ ಕನ್ಯೆಯೋರ್ವಳು ಹೇಗಾದರೂ ಮಾಡಿ ಅಮೃತವನ್ನು ಪಡೆಯಬೇಕೆ೦ದು ಆಸೆ ಪಟ್ಟಳಂತೆ. ಆಕೆ  ಸುಮಧುರ ಕಂಠವನ್ನು ಹೊ೦ದಿದ್ದಾಕೆ. ಆಕೆ ಗರುಡ ನನ್ನು ಹಿಮ್ಬಾಲಿಸುವಾಗ ಒಂದು ಹನಿ ಅಮೃತ ಬಿದ್ದು ಹೋಯಿತು. ಆಕೆ ಅದನ್ನು ಪಡೆಯ ಹೊರಟಾಗ ಅದು ಭೂಮಿ ತಲುಪಿ, ಮಾವಿನ ಮರವಾಯಿತಂತೆ. ಇಷ್ಟೆಲ್ಲಾ ಆಗುವಾಗ ಅಮೃತವನ್ನು ವಿಷ್ಣುವಿಗೆ ತಲುಪಿಸಲು ಗರುಡನಿಗೆ ತಡವಾಯಿತು.  ಇದಕ್ಕೆ ಕಾರಣ ತಿಳಿದ ವಿಷ್ಣು ಆ ಗಂಧರ್ವ ಕನ್ಯೆಗೆ ಆಕೆಯ ಸುಮಧುರ ಸ್ವರ ಹೊರಟು ಹೋಗಲಿ ಮತ್ತು ಆಕೆ ಕಪ್ಪು ಹಕ್ಕಿಯಾಗಿ  ಹುಟ್ಟಲಿ ಎಂದು ಶಾಪ ಕೊಟ್ಟನಂತೆ. ಕಡೆಗೆ ಆಕೆ ಬೇಡಿಕೊಂಡಾಗ ವಸಂತ ಕಾಲದಲ್ಲಿ ಮಾವಿನ ಚಿಗುರನ್ನು ತಿಂದರೆ ನಿನ್ನ ಸ್ವರ ಇ೦ಪಾಗುತ್ತದೆ. ಜಗತ್ತು ನಿನ್ನ ಸ್ವರವನ್ನು ಹೊಗಳುತ್ತದೆ ಎಂದು ಹೇಳಿದನಂತೆ. ಆಕೆ ಹುಟ್ಟಿದ್ದು ಕೋಗಿಲೆಯಾಗಿ.  ಈಗ ಗೊತ್ತಾಯಿತೆ ಮಾವಿಗೂ ಕೋಗಿಲೆಗೂ ಇರುವ ಸಂಬಂಧ !!


4. ಮಾವಿನ ಕಾಯಿ ಎಂದೊಡನೆ ನನ್ನ ಮನಸ್ಸು ಬಾಲ್ಯದತ್ತ ಓಡುತ್ತದೆ. ತೋಟದಲ್ಲಿ ,ಗುಡ್ಡೆಯಲ್ಲಿ ಬೆಳೆದ ಮಾವಿನ ಮಿಡಿಗಳನ್ನು ಕಲ್ಲು ಉದುರಿಸಿಯೋ , ಉದ್ದನೆಯ ಕೋಲಿಗೆ ಕಟ್ಟಿದ ಕತ್ತಿಯಿಂದಲೋ ಬೀಳಿಸಿ, ಅದನ್ನು ಕತ್ತರಿಸಿ , ಹದವಾಗಿ ಉಪ್ಪು ಖಾರ ಸವರಿ ತಿನ್ನುವ ಪರಿ ಇದೆಯಲ್ಲ ಅದಕ್ಕೆ ಅದುವೇ ಸಾಟಿ. ಅದೊಂದು ರೀತಿಯ ಪರಮ ಸುಖ. ಹಾಗೇ ತಿನ್ನುವಾಗ ಖಾರ ನೆತ್ತಿಗೇರಿ, ಕಣ್ಣು ಮೂಗೆಲ್ಲ ಕೆಂಪಾದರೂ ನಮ್ಮ ಬಾಯಿಚಪಲ ಬಿಡಬೇಕಲ್ಲ !!  ಮಾವಿನ ಕಾಯಿ ತಿಂದು ನೀರು ಕುಡಿದರೆ ಜ್ವರ ಬರುತ್ತದೆ ಅಂತ ಒಂದು ಮಾತಿತ್ತು. ಅದು ಎಷ್ಟರ ಮಟ್ಟಿಗೆ ನಿಜವೆಂದು ಈಗಲೂ ನನಗೆ ಗೊತ್ತಿಲ್ಲ.  ಈಗ ಇದನ್ನು ಓದಿ ನಿಮಗೆ ಬಾಯಿಯಲ್ಲಿ ನೀರೂರಿದರೆ ನಾನು ಜವಾಬ್ದಾರಳಲ್ಲ!!


5. ಹಸಿದು ಹಲಸು , ಉಂಡು ಮಾವು ಎಂಬ ಗಾದೆ ಮಾತಿದೆ.  ’ಮಂತ್ರಕ್ಕೆ ಮಾವಿನಕಾಯಿ ಉದುರದು " ಎಂಬಲ್ಲಿಯೂ ಮಾವು ಪ್ರಸ್ತಾಪವಾಗಿದೆ. ಮಾವಿನ ಕಾಯಿ ಸರ (ಚಿನ್ನದ ಸರ ಕಣ್ರೀ !! ),ಮಾವಿನ ಕಾಯಿ ಬಾರ್ಡರ್ ನ ಸೀರೆಗೆ ಮನಸೋಲದ ಹೆ೦ಗಳೆ ಯರು೦ಟೇ? ತೋರಣ ಕಟ್ಟಲು ಮಾವಿನ ಎಲೆಯ ಬಳಕೆಯಾಗುತ್ತದೆ. ಬೇವಿನ ಕಡ್ಡಿ,ಮಾವಿನ ಎಲೆಗಳಿಂದ ಹಲ್ಲುಜ್ಜುವ ಪರಿಪಾಠವಿದೆ.



೬. ತಳಿರೊಳ್ ನೀನೆ ಬೆಡ೦ಗನೈ ನನೆಗಳೊಳ್
ನೀ೦ ನೀಳನೈ ಪುಷ್ಪ ಸಂ
ಕುಳದೊಳ್ ನೀನೆ ವಿಳಾಸಿಯೈ ಮಿಡಿಗಳೊ
ಳ್ನೀ೦ ಚೆಲ್ವನೈ ಪಣ್ತ ಪ
ಣ್ಗಳಿನೋವೋ ಪೆರತೇನೋ ನೀನೆ ಭುವನ
ಕ್ಕಾಧಾರನೈ ಭಂಗ ಕೋ
ಕಿಳ ಕೀರ ಪ್ರಿಯ ಚೂತ ರಾಜ ತರುಗಳ್
ನಿನ್ನಂತೆ ಚೆನ್ನ೦ಗಳೇ
---ಪಂಪ

೭.ಮಾವಿನ ಕೊನೆ ಮಾವಿನ ನನೆ
ಮಾವಿನ ಪೂ ಮಾವಿನೆಳೆಯ ಮಿಡಿ
ಮಾವಿನ ಕಾಯ್
ಮಾವಿನ ಪಣ್ಣಿಂದೆ ಜನಂ
ಭಾವಿಸೆ ಸರ್ವಾಂಗಸೌಂದರಂ ಮಾವೆಲ್ಲಂ ||

--ಕಾವ್ಯಾವಲೋಕನ

೮. ಮಾವಿನ ಜೀವನ ಚರಿತ್ರೆ :


ಪುದಿದೆಳೆಗಾಯ್ ವಸಂತದ ಮೊದಲ್
ನೆರೆದೊಪ್ಪುವ ದೋರೆಗಾಯ್ ವಸಂತದ
ನಡು ಪಣ್ ವಸಂತದ ಸೆರಗಿಂಗೆ

--ಶಾಂತಿ ಪುರಾಣ

೯. ಎಳೆ ಗಿಳಿವಿಂಡಿನೋದುವ ಮರಂ ಭ್ರಮರಂಗಳ
ಗೀತಶಾಲೆ ಕೆಂ
ದಳಿರ್ಗಳ ಜನ್ಮಭೂಮಿ ವನಲಕ್ಷ್ಮಿಯ
ಪೆರ್ಮಗನೋತಗಲ್ದ ಕೋ
ಮಳೆಯರ ಜೂಜ ಭೂತಳದ ಕಲ್ಪಕುಜಂ
ಸಕಲಾವನೀರುಹಂ
ಗಳ ತಲೆನಾಯಕಂ  ತುರುಗಿ ಬಂದುದು
ಚೂತಕುಜಂ ವಸಂತದೊಳ್
--ಸೂಕ್ತಿ ಸುಧಾರ್ಣವಂ


೧೦. " ಹಸುರುಗಾಯನ್ನು ಉಕ್ಕಿನ ಅಲಗಿನಿಂದ ಉದ್ದುದ್ದವಾಗಿ ಎರಡು ಸಮ ಭಾಗವಾಗುವಂತೆ ಕತ್ತರಿಸಿದಾಗ ಬೀಜವೂ ಇಬ್ಭಾಗವಾಗಿ ,ಬಿಳಿಯದಾಗಿದ್ದ ಬೀಜ ಮಾತ್ರ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹೀಗಾದ ಹೋಳುಗಳು ಕಣ್ಣುಗಳನ್ನು ಹೋಲುತ್ತವೆ."
--ತಮಿಳು ಕಾವ್ಯ ಅಹನಾನೂರು


೧೧.ಮಾವಿನ ಕಾಯಿಯ ಉಪ್ಪಿನಕಾಯಿ ಎಂದರೆ ಅದೊಂದು ವಿಶಿಷ್ಟ ಬಗೆಯ ಸಂಭ್ರಮ. ಇಡೀ ವರ್ಷಕ್ಕಾಗುವಷ್ಟು ಉಪ್ಪಿನಕಾಯಿ ಮಾಡುವುದೆಂದರೆ ಸಣ್ಣ ವಿಷಯವೇ ? ಹಿಂದೆಲ್ಲಾ ಈಗಿನ ಥರ ಬಣ್ಣ ಬಣ್ಣದ ಬಾಟಲ್ಗಳಲ್ಲಿ ಉಪ್ಪಿನಕಾಯಿಗಳು ಸಿಗುತ್ತಿರಲಿಲ್ಲವೋ ಅಥವಾ ಆಗ ಉಪ್ಪಿನಕಾಯಿ ಎನ್ನುವುದು ಖರೀದಿ ಮಾಡಿ ತರುವ ವಸ್ತುವಾಗಿರಲಿಲ್ಲವೋ ಏನೋ ,ಪ್ರತಿ ಮನೆಯಲ್ಲಿ ಉಪ್ಪಿನಕಾಯಿ ಮಾಡುವುದು ಕಡ್ಡಾಯವಾಗಿತ್ತು. ಮಾವಿನ ಕಾಯಿ ಬಿಡುವ ಕಾಲದಲ್ಲಿ ಹೆಂಗಳೆಯರು ಭೇಟಿಯಾದಾಗಲೆಲ್ಲ " ನಿಮಗೆ ಸಿಕ್ಕಿತಾ ಮಾವಿನ ಮಿಡಿ " ಎಂತಲೋ ಅಥವಾ  " ನಿಮ್ಮಲ್ಲಿ ಉಪ್ಪಿನಕಾಯಿ ಆಯ್ತಾ " ಎಂತಲೋ ಪರಸ್ಪರ ಕುಶಲ ಸಮಾಚಾರ ವಿನಿಮಯವಾಗುತ್ತಿತ್ತು.

ಉಪ್ಪಿನಕಾಯಿ ತಯಾರಿ ಎಂದರೆ ಒಂಥರ ವ್ರತದ ಹಾಗೇ. ಪೂಜೆಗೆ ಮಡಿ ಎಂದು ಜಾಗ್ರತೆ ವಹಿಸುತ್ತಾರಲ್ಲ. ಅದಕ್ಕಿಂತಲೂ ಒಂದು ಕೈ ಮೇಲೆಯೇ. ತಯಾರಿಯ ಯಾವುದೇ ಹಂತದಲ್ಲಿಯೂ ಅದಕ್ಕೆ ನೀರು ಸೋಕುವಂತಿಲ್ಲ. ನಮಗೆಲ್ಲ ಉಪ್ಪಿನಕಾಯಿಯ ಭರಣಿಯ ಹತ್ತಿರ ಹೋಗಲೂ ಅವಕಾಶವಿರಲಿಲ್ಲ. ಕಡೆಗೊಂದು ದಿನ ಉಪ್ಪಿನಕಾಯಿ ತಯಾರಾದಾಗ ಅನ್ನದ ಜತೆ ತುಪ್ಪ ಹಾಕಿ  ,ಹೊಸ ಉಪ್ಪಿನಕಾಯಿಯ ಜತೆ ಕಲಸಿ ಉಣ್ಣು ವುದಿದೆಯಲ್ಲ ,ಅದು ಸ್ವರ್ಗಕ್ಕೆ ಮೂರೇ ಗೇಣು!


ಬಿ.ಜಿ.ಎಲ್ ಸ್ವಾಮಿಯವರು ತಮ್ಮ ಹಸಿರು ಹೊನ್ನು ಕೃತಿಯಲ್ಲಿ ಇದರ ಬಗ್ಗೆ ಒಂದು ಪ್ರಸಂಗವನ್ನು ವಿವರಿಸುತ್ತಾರೆ " ಗಂಟೆ ಒಂದೂವರೆಯಾಗಿತ್ತು. ಹುಡುಗರ ಮನಸ್ಸೆಲ್ಲ ಬುತ್ತಿಯ ಮೇಲೆ ಕೇಂದ್ರೀಕರಿಸಿತು. ತಿಳಿನೀರಿನ ಝರಿಯೊಂದರ ತಡಿಯಲ್ಲಿ ಕುಳಿತು ಊಟದ ಪೊಟ್ಟಣಗಳನ್ನು ಬಿಚ್ಚಿದೆವು. ಸೊಗಸಾದ ಮೊಸರನ್ನದ ಜತೆ ಷಡ್ರಸೋಪೇತವಾದ ’ಮಾವಡು!! ಹಳೆ ಕಾಲದಿಂದ ಬಂದಿರುವ ಸಂಪ್ರದಾಯದ ಜೋಡಿಯೇ! ಆದರೂ ಅದೇನು ಸೃಷ್ಟಿಯೋ , ನಮ್ಮ ನಾಲಗೆ ದಿನದಿನವೂ ಹೊಸ ಹೊಸ ರುಚಿಯಿಂದ ಕೂಡಿರುವಂಥ ಜೋಡಿ! ಮಾವಿನ ಉಪ್ಪಿನಕಾಯಿ ಉಷೆಯಂತೆ ಹಳೆಯದು. ದಿನ ದಿನವೂ ಹೊಸ ಹೊಸ ರುಚಿ ಕೊಡುವಂಥದು.  ಭಾಮೆಗೆ ಪಂಚ ಪ್ರಾಣವಾಗಿದ್ದ ಮಾವಡು ಅವಳ ಪ್ರಾಣಕ್ಕೆ ಊನ ತರುವಂಥ ಸ್ಥಿತಿಯನ್ನು ತಂದಿತು.  ಆಕೆ ಮೊಸರನ್ನದ ತುತ್ತಿನೊಂದಿಗೆ ಮಾವಡುವನ್ನು ನುಂಗಿದಳು.  ಮಾವಡು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು. ಕೂಗಿಕೊಳ್ಳಲು ಸಾಧ್ಯವಾಗದೆ ತೇಲುಗಣ್ಣು ಮಾಡಿಕೊಂಡು ಕೈಕಾಲುಗಳನ್ನು ಝಾಡಿಸಿದಳು. ಗಂಟಲಲ್ಲಿ ಸಿಕ್ಕಿಕೊಂಡಾಗ ಬೆನ್ನಿನ ಮೇಲೆ ಗುದ್ದು ಕೊಡುವ ಸಿದ್ಧೌಷಧ ಎಲ್ಲಿ ಹುಟ್ಟಿಕೊಂಡಿತೋ ?  ಅವರಲ್ಲಿ ಯಾರೋ ಆ ಪ್ರಯೋಗ ಮಾಡಿದರು. ಮಾವಡು ಅನ್ನನಾಳಕ್ಕೆ ಇಳಿಯಿತು"



ಮಾವು ಬಗೆ ಬಗೆ

ಹಣ್ಣುಗಳ ರಾಜ ಮಾವು. ಈಗ ಮಾವಿನ ಹಣ್ಣಿನ ಕಾಲ. ಚಟ್ನಿ,ಗೊಜ್ಜು,ಉಪ್ಪಿನ ಕಾಯಿ,  ರಸಾಯನ, ತಂಬುಳಿ, ಸಾಸಿವೆ,ಮೆಣಸುಕಾಯಿ ಒಂದೇ ಎರಡೇ, ಮಾವಿನಿಂದ ಮಾಡಬಹುದಾದ ಖಾದ್ಯಗಳು ಹಲವಾರು. ಬನ್ನಿ ಮಾವಿನ ಬಗೆ ಬಗೆಯ ಖಾದ್ಯಗಳನ್ನು ಮಾಡುವ ವಿಧಾನವನ್ನು ಅರಿಯೋಣ.


---------------------------------
೧.ಮಾವಿನ ಹಣ್ಣಿನ ಸೀಕರಣೆ
--------------------------------

ಬೇಕಾಗುವ ಸಾಮಗ್ರಿಗಳು

ಮಾವಿನ ಹಣ್ಣು (ಕಸಿ ಮಾವು ) : ೩
ಸಕ್ಕರೆ : ೩ ಚಮಚ
ಏಲಕ್ಕಿ ಕಾಳು : ೪
ಬಾದಾಮಿ : ೫
ಹಾಲು: ಅರ್ಧ ಲೋಟ

ವಿಧಾನ :
೧.ಮಾವಿನ ಹಣ್ಣಿನ ಸಿಪ್ಪೆ ಮತ್ತು ಗೊರಟನ್ನು  ಹಿಂಡಿ,ರಸ ತೆಗೆಯಿರಿ.
೨.ಸಕ್ಕರೆ,ಏಲಕ್ಕಿ,ಬಾದಾಮಿ,ಹಾಲು ಮತ್ತು ಮಾವಿನ ಹಣ್ಣಿನ ರಸವನ್ನು ಚೆನ್ನಾಗಿ ರುಬ್ಬಿ. ಮಾವಿನ ಸೀಕರಣೆ ತಯಾರಾಯಿತು. ಇದು ಚಪಾತಿ, ಪೂರಿಯ ಜತೆ  ತುಂಬಾ ಚೆನ್ನಾಗಿರುತ್ತದೆ.

---------------------------------
೨.ಮಾವಿನ ಹಣ್ಣಿನ ಸಾಸಿವೆ
---------------------------------
ಕಾಡು ಮಾವಿನ ಹಣ್ಣು : ೧೦
ತೆಂಗಿನ ಕಾಯಿ ತುರಿ :ಕಾಲು ಲೋಟ
ಸಾಸಿವೆ: ಒಂದು ಚಮಚ
ಕೆಂಪು ಮೆಣಸು: ೧

ಬೆಲ್ಲ :ಸ್ವಲ್ಪ ( ಮಾವಿನ ಹಣ್ಣು ಹುಳಿಯನ್ನು ಅವಲಂಬಿಸಿ ಇದರ ಪ್ರಮಾಣವನ್ನು ಸರಿ ಹೊಂದಿಸಿಕೊಳ್ಳಿ)
ಉಪ್ಪು:ರುಚಿಗೆ ತಕ್ಕಷ್ಟು


ವಿಧಾನ :

೧.ಮಾವಿನ ಹಣ್ಣುಗಳನ್ನು ಹಿಂಡಿ ರಸ ತೆಗೆಯಿರಿ.
೨.ತೆಂಗಿನ ತುರಿ, ಸಾಸಿವೆ,ಕೆಂಪು ಮೆಣಸು,ಬೆಲ್ಲ,ಉಪ್ಪು ಇವುಗಳನ್ನು ಸ್ವಲ್ಪ ನೀರು ಹಾಕಿ ರುಬ್ಬಿ.
೩.ರುಬ್ಬಿದ ಮಿಶ್ರಣವನ್ನು ಮಾವಿನ ರಸದ ಜತೆ ಮಿಶ್ರ ಮಾಡಿ.ಇದಕ್ಕೆ ನಾಲ್ಕು ಐದು ಗೊರಟುಗಳನ್ನು ಹಾಕಬೇಕು.ಮಾವಿನ ಸಾಸಿವೆ ತಯಾರು.ಮಾವಿನ ಹಣ್ಣಿನ ಸಮಯದಲ್ಲಿ ಸಮಾರಂಭಗಳಿಗೂ ಇದನ್ನು ಮಾಡುತ್ತಾರೆ. ಮಾವಿನ ಸಾಸಿವೆ ಮಾಡಿದಾಗ ಹೆಚ್ಚು ಅನ್ನ ಹೊಟ್ಟೆಗೆ ಹೋಗುತ್ತದೆ! ಅಷ್ಟು ರುಚಿ ಅದು!!


---------------------------------
೩.ಮಾವಿನ ಹಣ್ಣಿನ ಸಿಹಿ ಗೊಜ್ಜು
--------------------------------

ಕಾಡು ಮಾವಿನ ಹಣ್ಣು : ೧೦
ತೆಂಗಿನ ಕಾಯಿ ತುರಿ :ಕಾಲು ಲೋಟ
ಅಕ್ಕಿ ಹಿಟ್ಟು : ಒಂದು ಚಮಚ
ಬೆಲ್ಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ

೧.ಮಾವಿನ ಹಣ್ಣುಗಳನ್ನು ಹಿಂಡಿ ರಸ ತೆಗೆಯಿರಿ.
೨.ತೆಂಗಿನ ತುರಿ,ಅಕ್ಕಿ ಹಿಟ್ಟು ,ಬೆಲ್ಲ ಮತ್ತು ಉಪ್ಪು ಇವುಗಳನ್ನು ನುಣ್ಣಗೆ ರುಬ್ಬಿ.
೩.ಮಾವಿನ ರಸ ಮತ್ತು ಮಾವಿನ ಗೊರಟುಗಳನ್ನು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಇದು ಬೇಯುತ್ತಿದ್ದಂತೆ ಇದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಂದ ಉರಿಯಲ್ಲಿ ಬೇಯಿಸಿ.ಮಾವಿನ ಸಿಹಿ ಗೊಜ್ಜು ತಯಾರಾಯಿತು.


----------------------------------
೪.ಮಾವಿನ ಹಣ್ಣಿನ ಮೆಣಸು ಕಾಯಿ
----------------------------------
ಕಾಡು ಮಾವಿನ ಹಣ್ಣು : ೧೦
ಬೆಲ್ಲ: ಎರಡು ಲಿಂಬೆ ಹಣ್ಣಿನ ಗಾತ್ರ ( ಮಾವಿನ ಹಣ್ಣು ಹುಳಿ ಜಾಸ್ತಿ ಇದ್ದರೆ, ಬೆಲ್ಲ ಜಾಸ್ತಿ ಹಾಕಬೇಕು. )
ಹಸಿ ಮೆಣಸು ; ೨
ತೆಂಗಿನ ತುರಿ: ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಮಸಾಲೆಗೆ:
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಎಳ್ಳು: ೩ ಚಮಚ
ಮೆಂತೆ: ೧೦ ಕಾಳು
ಕೊತ್ತಂಬರಿ ಕಾಳು :೧ ಚಮಚ
ಇಂಗು: ಚಿಟಿಕೆ
ಕರಿಬೇವಿನೆಲೆ ಎಸಳು : ೧೦
ಎಣ್ಣೆ :ಒಂದು ಚಮಚ


ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕೆಂಪು ಮೆಣಸು :೧
ಕರಿಬೇವಿನೆಲೆ ಎಸಳು : ೧೦


ವಿಧಾನ :
೧.ಎಳ್ಳನ್ನು ಎಣ್ಣೆ ಹಾಕದೆ  ಚೆನ್ನಾಗಿ ಹುರಿಯಿರಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು,ಕಡ್ಲೆ ಬೇಳೆ,ಉದ್ದು,ಮೆಂತೆ,ಕೊತ್ತಂಬರಿ ಕಾಳು ಇವುಗಳನ್ನು ಹುರಿಯಿರಿ.ಇದಕ್ಕೆ ಇಂಗು,ಅರಸಿನ,ಕರಿಬೇವಿನೆಲೆ ಸೇರಿಸಿ ಮತ್ತೊಂದು ನಿಮಿಷ ಹುರಿಯಿರಿ.
೩. ಹಂತ (೧) ಮತ್ತು (೨) ರಲ್ಲಿ ಸೂಚಿಸಿದ ಹುರಿದ ಸಾಮಗ್ರಿಗಳನ್ನು ತೆಂಗಿನ ತುರಿಯ ಜತೆ ನೀರು ಹಾಕಿ ಚೆನ್ನಾಗಿ ರುಬ್ಬಿ. ಮಸಾಲೆ ತಯಾರಾಯಿತು.
೪.ಕಾಡು ಮಾವಿನ ಹಣ್ಣಿನ ಸಿಪ್ಪೆ ತೆಗೆಯಿರಿ.ಸಿಪ್ಪೆಯನ್ನು ಹಿಂಡಿ ರಸ ತೆಗೆಯಿರಿ.
೫.ಗೊರಟು ಮತ್ತು ಸಿಪ್ಪೆಯ ರಸ ಇದಕ್ಕೆ ಅರ್ಧ ಲೋಟ ನೀರು ಹಾಕಿ ಬೇಯಿಸಿ. ಇದಕ್ಕೆ ಹಸಿ ಮೆಣಸು,ಬೆಲ್ಲ, ಉಪ್ಪು ಸೇರಿಸಿ ಮತ್ತಷ್ಟು ಹೊತ್ತು ಬೇಯಿಸಿ.ಇದಕ್ಕೆ ರುಬ್ಬಿಟ್ಟ ಮಸಾಲೆಯನ್ನು  ಸೇರಿಸಿ. ಮಂದ ಉರಿಯಲ್ಲಿ ೫ ನಿಮಿಷಗಳ ಕಾಲ ಬೇಯಿಸಿ.
೬.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನ ಎಸಳು ಹಾಕಿ,ಒಗ್ಗರಣೆ ತಯಾರಿಸಿ. ಇದನ್ನು ಬೇಯುತ್ತಿರುವ ಮಾವಿನ ಮಿಶ್ರಣಕ್ಕೆ ಹಾಕಿ.

ಈಗ ರುಚಿ ರುಚಿಯಾದ ಮಾವಿನ ಹಣ್ಣಿನ ಮೆಣಸುಕಾಯಿ ತಯಾರು.



--------------------------------------------------
೫.ಮಾವಿನ ಹಣ್ಣಿನ ತೊಕ್ಕು
-------------------------------------------------

ಬೇಕಾಗುವ ಸಾಮಗ್ರಿಗಳು


ಕಾಡು ಮಾವಿನ ಹಣ್ಣು : ೧೦
ಉಪ್ಪು :ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಪುಡಿ : ೨ ಚಮಚ

ವಿಧಾನ:

೧.ಕಾಡು ಮಾವಿನ ಹಣ್ಣಿನ ರಸ ತೆಗೆಯಿರಿ.
೨.ಇದಕ್ಕೆ ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ,ಸಣ್ಣ ಉರಿಯಲ್ಲಿ ಬೇಯಿಸಿ. ಇದು ಬೇಯುತ್ತಿದ್ದಂತೆ ಗಟ್ಟಿಯಾಗುತ್ತಾ ಬರುತ್ತದೆ. ಆಗಾಗ್ಗೆ ಸೌಟಿನಿಂದ ಕೈಯಾಡಿಸಿ. ಮಿಶ್ರಣವು ಗಟ್ಟಿಯಾಗುತ್ತಾ ಬಂದಂತೆ ಒಲೆ ಆರಿಸಿ.

ಇದು ೨-೩ ತಿಂಗಳುಗಳ ಕಾಲ ಕೆಡುವುದಿಲ್ಲ. ಅನ್ನದ ಜತೆ ಹೆಚ್ಚಿದ ನೀರುಳ್ಳಿ,ಎಣ್ಣೆ ಹಾಕಿ ತಿಂದರೆ ಬಲು ಸೊಗಸು.


-------------------------------------
೬.ಮಾವಿನ ಹಣ್ಣಿನ ರಸಾಯನ
-----------------------------------

ಕಶಿ ಮಾವಿನ ಹಣ್ಣು : ೨
ಬೆಲ್ಲದ ಪುಡಿ : ಒಂದು ಲೋಟ
ಸಕ್ಕರೆ : ಕಾಲು ಲೋಟ
ಏಲಕ್ಕಿ ಪುಡಿ:ಚಿಟಿಕೆ
ತೆಂಗಿನ ಹಾಲು : ಒಂದು ವರೆ  ಲೋಟ
ಗೋಡಂಬಿ : ೧೦
ಬಾದಾಮಿ :೧೦

ವಿಧಾನ

೧.ಕಶಿ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು , ಹಣ್ಣನ್ನು ಸಣ್ಣ ಸಣ್ಣ  ಹೋಳುಗಳಾಗಿ ಕತ್ತರಿಸಿ.
೨. ಪುಡಿ ಮಾಡಿದ ಬೆಲ್ಲ ,ಸಕ್ಕರೆ,ಏಲಕ್ಕಿ ಪುಡಿ ಇವುಗಳನ್ನು ತೆಂಗಿನಹಾಲಿನಲ್ಲಿ ಚೆನ್ನಾಗಿ ಕಲಕಿ,ಕರಗಿಸಿ.
೩.ಇದಕ್ಕೆ ಹೆಚ್ಚಿದ ಮಾವಿನ ಹಣ್ಣಿನ ಹೋಳುಗಳನ್ನು ಸೇರಿಸಿ.
೪. ಗೋಡಂಬಿ ಮತ್ತು ಬಾದಾಮಿಯನ್ನು ಸ್ವಲ್ಪ ಪುಡಿ ಮಾಡಿ ಇದಕ್ಕೆ ಸೇರಿಸಿ.

ಮಾವಿನ ಹಣ್ಣಿನ ರಸಾಯನ ತಯಾರಾಯಿತು.


----------------------------------------
೭.ಮಾವಿನ ಹಣ್ಣಿನ ಬೋಳು ಹುಳಿ
---------------------------------------
ಕಾಡು ಮಾವಿನ ಹಣ್ಣು : ೧೦
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸ್ವಲ್ಪ

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ
ಅರಸಿನ :ಚಿಟಿಕೆ
ಜೀರಿಗೆ: ಒಂದು ಚಮಚ

ವಿಧಾನ

೧.ಕಾಡು ಮಾವಿನ ಹಣ್ಣನ್ನು ಹೆಚ್ಚಿ.
೨.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ ಕೆಂಪು ಮೆಣಸು,ಉದ್ದು,ಕಡ್ಲೆ ಬೇಳೆ, ಅರಸಿನ ,ಕರಿಬೇವಿನೆಲೆ ಇವುಗಳನ್ನು ಹಾಕಿ ಒಗ್ಗರಣೆ ತಯಾರಿಸಿ .
೩.ಇದಕ್ಕೆ ಕತ್ತರಿಸಿದ ಮಾವಿನ ಹಣ್ಣುಗಳನ್ನು  ಹಾಕಿ. ಸ್ವಲ್ಪ ನೀರು ಹಾಕಿ ಬೇಯಿಸಿ. ಇದು ಬೇಯುತ್ತಿದ್ದಂತೆ ಬೆಲ್ಲ ಮತ್ತು ಉಪ್ಪು ಹಾಕಿ ಮತ್ತಷ್ಟು ಕುದಿಸಿ.


--------------------------------------------
೮.ಮಾವಿನ ಹಣ್ಣಿನ ಮಾಂಬಳ
---------------------------------------------
ಇದು ಮಾವಿನ ಹಣ್ಣಿನ ರಸವನ್ನು ಶೇಖರಿಸಿಡುವ ಒಂದು ವಿಧಾನ.


 ಮಾವಿನ ಹಣ್ಣುಗಳ ರಸ ತೆಗೆದು ಒಂದು ವಸ್ತ್ರದ ಮೇಲೆ ತೆಳುವಾಗಿ ಹರಡಿ ಬಿಸಿಲಲ್ಲಿ ಒಣಗಿಸಬೇಕು. ಮರುದಿನ ಇನ್ನಷ್ಟು ಮಾವಿನ ಹಣ್ಣುಗಳ ರಸವನ್ನು ಈ ಪದರದ ಮೇಲೇ ಹರಡಿ, ಒಣಗಿಸಬೇಕು. ಈ ರೀತಿ ೬-೭ ದಿನಗಳ ಕಾಲ ನಿತ್ಯವೂ ಮಾವಿನ ಹಣ್ಣುಗಳ ರಸವನ್ನು ಒಣಗಿಸುತ್ತಾ ಬರಬೇಕು. ಬಳಿಕ ಇದನ್ನು ನಿತ್ಯವೂ ಸುಮಾರು ಹತ್ತು ದಿನಗಳ ಕಾಲ ಬಿಸಿಲಲ್ಲಿ ಒಣಗಿಸಬೇಕು. ಈಗ ಇದನ್ನು ವಸ್ತ್ರದಿಂದ ಮಾವಿನ ಪದರವಾಗಿ ಎಬ್ಬಿಸಬಹುದು. ಇದಕ್ಕೆ ಮಾಂಬಳ ಎಂದು ಹೆಸರು.ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ,ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿದರೆ, ಮಳೆಗಾಲದಲ್ಲಿ ಮಾವು ಇರದ ಕಾಲದಲ್ಲಿ ಹಾಗೇ  ತಿನ್ನಲು ಬಲು ರುಚಿ.

ಇದರಿಂದ ಗೊಜ್ಜು ಕೂಡ ತಯಾರಿಸಬಹುದು. ತೆಂಗಿನ ತುರಿಯ ಜತೆ ಕೆಂಪು ಮೆಣಸು ,ಸಾಸಿವೆ ಮತ್ತು ಮಾಂಬಳ ಹಾಕಿ ರುಬ್ಬಿದರೆ ಮಾಂಬಳ ಗೊಜ್ಜು ತಯಾರು.

---------------------------------
೯. ಮಾಂಗೋ ಲಸ್ಸಿ
----------------------------------

ಮಾವಿನ ಹಣ್ಣು : ೨
ಮೊಸರು : ಒಂದು ಲೋಟ
ಸಕ್ಕರೆ :೧ ಲೋಟ
ಚಿಟಿಕೆ ಏಲಕ್ಕಿ ಪುಡಿ



ವಿಧಾನ :
ಮಾವಿನ ಹಣ್ಣಿನ ತಿರುಳು, ಮೊಸರು, ಸಕ್ಕರೆ, ಏಲಕ್ಕಿ ಪುಡಿ ಇವುಗಳನ್ನು ಸೇರಿಸಿ ನುಣ್ಣಗೆ ರುಬ್ಬಿ, ಕುಡಿಯಿರಿ.



-------------------------------------------
೧೦.ಮಾಂಗೋ ಮಿಲ್ಕ್ ಶೇಕ್
----------------------------------------
ಮಾವಿನ ಹಣ್ಣು : ೧
ಹಾಲು : ಒಂದು ಲೋಟ
ವೆನಿಲ್ಲಾ ಐಸ್ ಕ್ರೀಂ: ಅರ್ಧ ಲೋಟ
ಸಕ್ಕರೆ :೩ ಚಮಚ

ವಿಧಾನ
ಮಾವಿನ ಹಣ್ಣಿನ ತಿರುಳು, ಸಕ್ಕರೆ, ಹಾಲು, ವೆನಿಲ್ಲ ಐಸ್ ಕ್ರೀಂ ಇವುಗಳನ್ನು ನುಣ್ಣಗೆ ರುಬ್ಬಿ.

ಇದನ್ನು ವೆನಿಲ್ಲಾ ಐಸ್ ಕ್ರೀಮ್ ಹಾಕದೆಯೂ ಮಾಡಬಹುದು.


------------------------------------------
೧೧.ಮಾವಿನ ಹಣ್ಣಿನ ಹಲ್ವಾ
-----------------------------------------

ಮಾವಿನ ಹಣ್ಣು : ೩
ರವೆ: ಒಂದು ಲೋಟ
ಸಕ್ಕರೆ : ಒಂದು ಲೋಟ
ತುಪ್ಪ : : ಒಂದು ಲೋಟ
ಏಲಕ್ಕಿ ಪುಡಿ :ಚಿಟಿಕೆ
ಗೋಡಂಬಿ : ಸ್ವಲ್ಪ


೧.ರವೆಯನ್ನು ಚೆನ್ನಾಗಿ ಹುರಿಯಿರಿ.
೨.ಮಾವಿನ ಹಣ್ಣಿನ ತಿರುಳನ್ನು ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.
೩.ದಪ್ಪ ತಳದ ಪಾತ್ರೆಯಲ್ಲಿ ಅರ್ಧ ಲೋಟ ನೀರಿಗೆ ಸಕ್ಕರೆ ಹಾಕಿ ಕುದಿಯಲು ಬಿಡಿ.
೪.ಸಕ್ಕರೆ ಕರಗುತ್ತಿದ್ದಂತೆ ಅದಕ್ಕೆ ಮಾವಿನ ತಿರುಳು ಹುರಿದ ರವೆ ಮತ್ತು ತುಪ್ಪ ಸೇರಿಸಿ.ಮಧ್ಯೆ ಮಧ್ಯೆ ಸೌಟಿನಿಂದ ಕೈಯಾಡಿಸುತ್ತಿರಿ.
೫.ಮಿಶ್ರಣವು ಕುದಿಯುತ್ತಿದ್ದಂತೆ ಪಾತ್ರೆಯ ತಳ ಬಿಡಲು ಶುರುವಾಗುತ್ತದೆ  ಈಗ ಒಲೆ ಆರಿಸಿ.
೬.ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳಿಂದ ಅಲಂಕರಿಸಿ ,ಬಡಿಸಿ.


----------------------------------------------
೧೨.ಮಾವಿನ ಹಣ್ಣಿನ ಬರ್ಫಿ
----------------------------------------------
ಮಾವಿನ ಹಣ್ಣು : ೪
ಖೊವ : ೨೦೦ ಗ್ರಾಮ್
ರವೆ : ೧ ಚಮಚ
ಕೊಬ್ಬರಿ ತುರಿ : ಅರ್ಧ ಲೋಟ
ಸಕ್ಕರೆ : ಅರ್ಧ ಲೋಟ
ತುಪ್ಪ : ೪ ಚಮಚ
ಏಲಕ್ಕಿ ಪುಡಿ :ಚಿಟಿಕೆ
ಗೋಡಂಬಿ :ಸ್ವಲ್ಪ



ವಿಧಾನ

೧.ಮಾವಿನ ಹಣ್ಣಿನ ತಿರುಳನ್ನು ನುಣ್ಣಗೆ ರುಬ್ಬಿ
೨.ರವೆಯನ್ನ್ನು ಚೆನ್ನಾಗಿ ಹುರಿಯಿರಿ.
೩.ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಇಟ್ಟುಕೊಳ್ಳಿ.
೪. ಮಾವಿನ ತಿರುಳು, ಸಕ್ಕರೆ ಯನ್ನು ಒಂದು ಪಾತ್ರೆಗೆ ಹಾಕಿ ಬೇಯಲು ಬಿಡಿ. ಮಿಶ್ರಣವು ಅರ್ಧದಷ್ಟಾಗಬೇಕು. ಆಗಾಗೆ ಸೌಟಿನಿಂದ ಕೈಯಾಡಿಸಿ.
೫.ಈಗ ಇದಕ್ಕೆ ೨ ಚಮಚ ತುಪ್ಪ, ಖೋವಾ, ಹುರಿದ ರವೆ ಸೇರಿಸಿ ಕಲಕುತ್ತಾ ಇರಿ.ಮಿಶ್ರಣ ತಳ ಬಿಡುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ.  ಒಲೆ ಆರಿಸಿ.
೬.ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಸುರಿದು,ಬಿಲ್ಲೆಗಳಾಗಿ ಕತ್ತರಿಸಿ.ಹುರಿದ ಗೋಡಂಬಿಯಿಂದ ಅಲಂಕರಿಸಿ.




---------------------------------------
೧೩.ಮಾವಿನ ಹಣ್ಣಿನ ಶ್ರೀಖಂಡ
---------------------------------------

ದಪ್ಪ ಮೊಸರು: ೩ ಲೋಟ
ಮಾವಿನ ಹಣ್ಣಿನ ತಿರುಳು : ೧ ವರೆ ಲೋಟ
ಸಕ್ಕರೆ : ಒಂದು ಲೋಟ
ಕೇಸರಿ ದಳ :ಸ್ವಲ್ಪ
ಏಲಕ್ಕಿ ಪುಡಿ :ಚಿಟಿಕೆ
ಬಾದಾಮಿ ಚೂರು :ಸ್ವಲ್ಪ
ಮಾವಿನ ಹಣ್ಣಿನ ಚೂರುಗಳು : ಎರಡು ಚಮಚ

ವಿಧಾನ

೧.ದಪ್ಪ ಮೊಸರನ್ನು ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ನೇತು ಹಾಕಿ, ನೀರೆಲ್ಲಾ ಚೆಲ್ಲಿ ಹೋಗುವಂತೆ ಮಾಡಿ.
೨.ಇದಕ್ಕೆ ರುಬ್ಬಿದ ಮಾವಿನ ತಿರುಳು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಮಿಶ್ರಣವು ನುಣ್ಣಗೆ ಐಸ್ ಕ್ರೀಮ್ ಥರ ಆಗಬೇಕು.
೩.ಇದಕ್ಕೆ ಕೇಸರಿ ದಳ, ಏಲಕ್ಕಿ ಪುಡಿ,ಬಾದಾಮಿ ಚೂರು , ಮಾವಿನ ಹಣ್ಣಿನ ಚೂರು ಹಾಕಿ ಅಲಂಕರಿಸಿ.



---------------------------------
೧೪.ಮಾವಿನ ಹಣ್ಣಿನ ಶರಬತ್ತು
-----------------------------------

ಕಾಡು ಮಾವಿನ ಹಣ್ಣು : ೨
ಸಕ್ಕರೆ : ೨ ಚಮಚ
ನೀರು : ಒನ್ದು ಲೋಟ


ಕಾಡು ಮಾವಿನ ಹಣ್ಣನ್ನು ಚೆನ್ನಾಗಿ ಹಿಚುಕಿ ರಸ ತೆಗೆದು ಇದಕ್ಕೆ ಸಕ್ಕರೆ,ನೀರು ಸೇರಿಸಿ ಕಲಕಿದರೆ ಮಾವಿನ ಹಣ್ಣಿನ ಶರಬತ್ತು ತಯಾರು.


------------------------------------
೧೫.ಮಾವಿನ ಹಣ್ಣಿನ ಐಸ್ ಕ್ರೀಮ್
---------------------------------

ಮಾವಿನ ಹಣ್ಣು: ೩
ಹಾಲು : ಒಂದು ಲೀಟರ್
ಮಿಲ್ಕ್ ಮೆಯಿಡ್ : ಒಂದು ಲೋಟ
ವೆನಿಲ್ಲಾ ಎಸೆನ್ಸ್ : ಅರ್ಧ ಚಮಚ
ಸಕ್ಕರೆ : ೫ ಚಮಚ

ಮಾವಿನ ಹಣ್ಣಿನ ತಿರುಳನ್ನು ರುಬ್ಬಿ, ಇದಕ್ಕೆ ಹಾಲು, ಮಿಲ್ಕ್ ಮೆ ಯಿಡ್, ವೆನಿಲ್ಲಾ ಎಸೆನ್ಸ್, ಸಕ್ಕರೆ ಹಾಕಿ ಕಲಕಿ.ಇದನ್ನು ಫ಼್ರೀಜ಼ರ್ ನಲ್ಲಿ ಸುಮಾರು ೩೦ ನಿಮಿಷಗಳ ಕಾಲ ಇಟ್ಟು ಹೊರತೆಗೆದು,ಮಿಕ್ಸಿಯಲ್ಲಿ ರುಬ್ಬಿ.
ಈ ರೀತಿ ಮೂರು ನಾಲ್ಕು ಸಲ ಫ಼್ರೀಜರ್ ನಿಂದ ಪ್ರತಿ ಮೂವತ್ತು ನಿಮಿಷಗಳಿಗೊಮ್ಮೆ ತೆಗೆದು ರುಬ್ಬಬೇಕು.ಈ ರೀತಿ ಮಾಡುವುದರಿಂದ ಐಸ್ ಕ್ರೀಮ್ ನಯವಾಗುತ್ತದೆ.
ಬಳಿಕ ಇದನ್ನು ಸುಮಾರು ೭-೮ ಗಂಟೆಗಳ ಕಾಲ ಪ್ರೀಜರ್ ನಲ್ಲಿ ಇಡಿ.

ಇದನ್ನು ಫ್ರೀಜರ್ ನಿಂದ ಹೊರತೆಗೆದು  ಮಾವಿನ ಚೂರುಗಳಿಂದ ಅಲಂಕರಿಸಿ.
ಮಾಂಗೋ ಐಸ್ ಕ್ರೀಮ್ ತಯಾರು.


--------------------------------------------------------------------------------------------------------------------------------------------------
೧೬.ಮಾವಿನ ಕಾಯಿ ಆಪ್ಪೆ ಹುಳಿ.
---------------------------------------------------

ಮಾವಿನ ಕಾಯಿ : ೨

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ

ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ
ಮಾವಿನ ಕಾಯಿಯನ್ನು ಬೇಯಿಸಿ, ಸಿಪ್ಪೆ ತೆಗೆದು, ತಿರುಳನ್ನು ತೆಗೆಯಿರಿ.
ಇದನ್ನು ನುಣ್ಣಗೆ ರುಬ್ಬಿ, ನೀರು ಸೇರಿಸಿ. ಇದು ಸಾರಿನ ಹದಕ್ಕಿನ್ತಲೂ ತೆಳುವಾಗಿರಬೇಕು.

ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆಗೆ ಸೂಚಿಸಿರುವ ಸಾಮಗ್ರಿಗಳಿಂದ ಒಗ್ಗರಣೆ ತಯಾರಿಸಿ ಇದಕ್ಕೆ ಹಾಕಿ, ಕುದಿಸಿ.
ಉಪ್ಪು ಸೇರಿಸಿ, ಮತ್ತಷ್ಟು ಕುದಿಯಲು ಬಿಡಿ.

ಈಗ ಅಪ್ಪೆ ಹುಳಿ ತಯಾರಾಯಿತು. ಇದನ್ನು ಅನ್ನಕ್ಕೆ ಕಲಸಿ ಉಣ್ಣಬಹುದು ಅಥವಾ ಹಾಗೇ ಕುಡಿಯಬಹುದು.
ಇದನ್ನು ಕುಡಿದರೆ ಗಟ್ಟಿ ನಿದ್ದೆ! ಮಲೆನಾಡಿನ ಕಡೆ ಇದನ್ನು ಹೆಚ್ಚಾಗಿ ಮಾಡುತ್ತಾರೆ.



--------------------------------------
೧೭.ಮಾವಿನ ಕಾಯಿ ಚಟ್ನಿ-ವಿಧಾನ ೧
-------------------------------------


ಮಾವಿನ ಕಾಯಿ : ೧
ಮೆಂತೆ : ೧೦ ಕಾಳು
ಕೆಂಪು ಮೆಣಸು: ೬
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸ್ವಲ್ಪ
ತೆಂಗಿನ ತುರಿ :ಕಾಲು ಲೋಟ


ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ
ನೆಲಕಡಲೆ :ಅರ್ಧ ಹಿಡಿ
ಜೀರಿಗೆ : ಅರ್ಧ ಚಮಚ

ವಿಧಾನ

೧.ಕೆಂಪು ಮೆಣಸು ಮತ್ತು ಮೆಂತೆಯನ್ನು ಎಣ್ಣೆ ಹಾಕದೆ ಹುರಿಯಿರಿ. ಇದನ್ನು ನಯವಾಗಿ ರುಬ್ಬಿ.
೨.ಇದಕ್ಕೆ ಹೆಚ್ಚಿದ ಮಾವಿನ ಕಾಯಿ ಚೂರು ,ತೆಂಗಿನ ತುರಿ,ನೀರು ಸೇರಿಸಿ ರುಬ್ಬಿ.
೩.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ,ಸಾಸಿವೆ,ಕರಿಬೇವಿನೆಲೆ ಎಸಳು,ಉದ್ದು,ಕಡ್ಲೆ ಬೇಳೆ,ಇಂಗು,ಜೀರಿಗೆ ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ನೆಲಕಡಲೆ ಸೇರಿಸಿ .
೪.ನೆಲಕಡಲೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ರುಬ್ಬಿದ ಮಾವಿನ ಕಾಯಿಮಿಶ್ರಣ ಸೇರಿಸಿ. ಇದಕ್ಕೆ ಉಪ್ಪು, ಬೆಲ್ಲ ಹಾಕಿ ಕಲಕಿ.
೫.ಇದು ಚೆನ್ನಾಗಿ ಬೇಯಬೇಕು. ಮಿಶ್ರಣವು ಗಟ್ಟಿಯಾಗುತ್ತಾ ಬಂದಂತೆ ಒಲೆ ಆರಿಸಿ.


--------------------------------------------------------------------------
೧೮.ಮಾವಿನ ಕಾಯಿ ಚಟ್ನಿ-ವಿಧಾನ ೨
----------------------------------------------------------------------
ಮಾವಿನ ಕಾಯಿ : ಅರ್ಧ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಹಸಿ ಮೆಣಸು : ೩

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ
ನೆಲಕಡಲೆ :ಅರ್ಧ ಹಿಡಿ
ಜೀರಿಗೆ : ಅರ್ಧ ಚಮಚ

ವಿಧಾನ

ಮಾವಿನ ಕಾಯಿಯನ್ನು ಹೊಳುಗಳಾಗಿ ಕತ್ತರಿಸಿ, ತೆಂಗಿನ ತುರಿ,ಉಪ್ಪು ಮತ್ತು ಹಸಿ ಮೆಣಸಿನ ಜತೆ ನೀರು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಸೂಚಿಸಿರುವ ಸಾಮಗ್ರಿಗಳಿಂದ ಒಗ್ಗರಣೆ ತಯಾರಿಸಿ ಇದಕ್ಕೆ ಹಾಕಿ.

ದೋಸೆ,ಇಡ್ಲಿ ಜತೆ ಈ ಚಟ್ನಿ ಬಹಳ ಚೆನ್ನಾಗಿರುತ್ತದೆ.


------------------------------------------------------------
೧೯.ಮಾವಿನ ಮಿಡಿ ತಂಬುಳಿ
-------------------------------------------------------

ಮಾವಿನ ಕಾಯಿ,ತೆಂಗಿನ ತುರಿ,ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ. ಸ್ವಲ್ಪ ಮೊಸರು ,ಉಪ್ಪು ಸೇರಿಸಿ.ಒಗ್ಗರಣೆ ಕೊಡಿ.


---------------------------------------------------------
೨೦.ಮಾವಿನ ಕಾಯಿ ಚಿತ್ರಾನ್ನ
--------------------------------------------------------
ಅಕ್ಕಿ : ೧ ಲೋಟ

ಅರಿಶಿನ ಪುಡಿ: ಕಾಲು  ಚಮಚ
ಸಾಸಿವೆ: ೨ ಚಮಚ
ನೆಲಕಡಲೆ : ಒಂದು ಹಿಡಿ
ತೆಂಗಿನ ತುರಿ: ಅರ್ಧ ಲೋಟ
ಒಣ ಮೆಣಸಿನಕಾಯಿ: ೩
ಕೊತ್ತಂಬರಿ ಸೊಪ್ಪು: ಸ್ವಲ್ಪ
ಮಾವಿನ ಕಾಯಿ :೧
ತೆಂಗಿನ ಎಣ್ಣೆ: ೫ ಚಮಚ
ರುಚಿಗೆ ತಕ್ಕಷ್ಟು ಇಂಗು, ಉಪ್ಪು

ತಯಾರಿಸುವ ವಿಧಾನ:

೧.ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರುದುರಾಗಿ ಅನ್ನ ಮಾಡಿ .
೨.ಒಣ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಅರಿಶಿನ, ೧ ಚಮಚ ಸಾಸಿವೆ, ಉಪ್ಪು, ಮಾವಿನ ಕಾಯಿ, ಕಾಯಿತುರಿ ಎಲ್ಲವನ್ನು ಮಿಕ್ಸಿಗೆ ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ..

೩. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ ಹಾಕಿ. ಅದಕ್ಕೆ ಕಡ್ಲೇಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ. ಅದು ಕೆಂಪಗಾದಾಗ ನೆಲಕಡಲೆ ಹಾಕಿ ಹುರಿಯಿರಿ ನಂತರ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿರಿ.
೪ ರುಬ್ಬಿದ ಮಿಶ್ರಣವನ್ನು ಇದಕ್ಕೆ ಬೆರೆಸಿ.
೫.ಇದಕ್ಕೆ ಅನ್ನವನ್ನು ಕಲಸಿ.


---------------------------------------------------------
೨೧.ಮಾವಿನ ಕಾಯಿ ಉಪ್ಪಿನಕಾಯಿ ವಿಧಾನ ೧
--------------------------------------------------------
ಮಾವಿನ ಮಿಡಿ :೧೦
ಉಪ್ಪು :ಎರಡು ಹಿಡಿ
ಕೆಂಪು ಮೆಣಸು : ೨೫
ಸಾಸಿವೆ :ಒಂದು ಹಿಡಿ
ಅರಸಿನ :ಚಿಟಿಕೆ


ಹೋಳುಗಾಯಿ:

ಮಾವಿನ ಮಿಡಿಯನ್ನು ಸಣ್ಣಗೆ ಹೆಚ್ಚಿ , ಉಪ್ಪು ಬೆರೆಸಿ ಮುಚ್ಚಿಡಿ.ಯಾವುದೇ ಕಾರಣಕ್ಕಾಗಿ ಇದಕ್ಕೆ ನೀರು ತಾಗದಂತೆ ಎಚ್ಚರಿಕೆ ವಹಿಸಿ.
೨-೩ ದಿನಗಳಲ್ಲಿ ಇದು ಉಪ್ಪು ನೀರು ಬಿಡುತ್ತದೆ.

ಆಗ ಅರಸಿನ, ಕೆಂಪು ಮೆಣಸು ಮತ್ತು ಸಾಸಿವೆ ಯನ್ನು ರುಬ್ಬಿ ಇದಕ್ಕೆ ಸೇರಿಸಬೇಕು. ಸುಮಾರು ಎರಡು ದಿನಗಳ ಕಾಲ ಹಾಗೇ ಬಿಡಿ. ಮಾವಿನ ಕಾಯಿಯು ಎಲ್ಲಾ ಮಸಾಲೆಗಳನ್ನು ಹೀರಿಕೊಳ್ಳುತ್ತದೆ. ಬಳಿಕ ಇದನ್ನು ಬಳಸಿ.


ಇಡಿ ಮಾವಿನ ಕಾಯಿ :
ಇಡೀ ಮಾವಿನ ಮಿಡಿಯನ್ನು ಬಳಸುವುದಾದರೆ ೫- ೬ ದಿನಗಳ ಕಾಲ ಉಪ್ಪಿನಲ್ಲಿ ಇಡಬೇಕಾಗುತ್ತದೆ.ಮತ್ತೆಲ್ಲ ವಿಧಾನ ಮೇಲಿನಂತೆಯೇ.




------------------------------------------------------------
೨೨.ಮಾವಿನಕಾಯಿ ಉಪ್ಪಿನಕಾಯಿ ವಿಧಾನ ೨
-----------------------------------------------------------

ಇದು ದಿಢೀರ್ ಉಪ್ಪಿನಕಾಯಿ ಮಾಡುವ ವಿಧಾನ.


ಎರಡು ಲೋಟ ನೀರು
ಉಪ್ಪು :ಎರಡು ಹಿಡಿ
ಕೆಂಪು ಮೆಣಸು : ೨೫
ಸಾಸಿವೆ :ಒಂದು ಹಿಡಿ
ಅರಸಿನ :ಚಿಟಿಕೆ



ನೀರಿಗೆ ಉಪ್ಪು ಹಾಕಿ,ಕುದಿಸಿ.
ಇದು ಕುದಿಯುತ್ತಿದ್ದಂತೆ ಮಾವಿನ ಹೋಳು ಹಾಕಿ ಎರಡು ನಿಮಿಷ ಬೇಯಿಸಿ.
ಬಳಿಕ ಇದಕ್ಕೆ ಉಪ್ಪಿನಕಾಯಿ ಮಸಾಲೆ(ರುಬ್ಬಿದ ಸಾಸಿವೆ, ಕೆಂಪು ಮೆಣಸು, ಅರಸಿನ ) ಇದನ್ನು  ಬೆರೆಸಿ.





------------------------------------------------
೨೩.ಆಮ್ ಕಾ ಪನ್ನಾ
-------------------------------------------------

ಇದು ಉತ್ತರ ಭಾರತದ ಕಡೆ ಜನಪ್ರಿಯವಾಗಿರುವ ಪೇಯ.

ಮಾವಿನ ಕಾಯಿ : ೨

ಜೀರಿಗೆ ಪುಡಿ : ಒಂದು ಚಮಚ
ಕರಿ ಮೆಣಸಿನ ಪುಡಿ :ಒಂದು ಚಮಚ
ಇಂಗು :ಚಿಟಿಕೆ
ಸಕ್ಕರೆ :ಅರ್ಧ ಲೋಟ
ಬ್ಲಾಕ್ ಸಾಲ್ಟ್ (ಕಾಲಾ ನಮಕ್ ) :ಚಿಟಿಕೆ


ವಿಧಾನ :
ಮಾವಿನ ಕಾಯಿಯನ್ನು ಬೇಯಿಸಿ, ಸಿಪ್ಪೆ ತೆಗೆದು ತಿರುಳನ್ನು ತೆಗೆಯಿರಿ.
ಇದು ತಣಿದ ಬಳಿಕ ತಿರುಳನ್ನು ರುಬ್ಬಿ, ಇದಕ್ಕೆ ಜೀರಿಗೆ ಪುಡಿ, ಕರಿ ಮೆಣಸಿನ ಪುಡಿ,ಕಾಲಾ ನಮಕ್ ,  ಇಂಗು,ಸಕ್ಕರೆ ಹಾಕಿ ಕಲಕಿ.
೩ ಲೋಟ  ನೀರು ಸೇರಿಸಿ, ಕಲಕಿ.
ಆಮ್ ಕಾ ಪನ್ನಾ ತಯಾರು.



------------------------------------------
೨೪.ಭೂತ ಗೊಜ್ಜು
------------------------------------------

ಮಾವಿನ ಕಾಯಿ : ೧
ಬೆಳ್ಳುಳ್ಳಿ ಎಸಳು : ೫
ಹಸಿ ಮೆಣಸು : ೩
ಬೆಲ್ಲ :ಸ್ವಲ್ಪ
ಎಣ್ಣೆ :ಎರಡು ಚಮಚ
ಸಾಸಿವೆ : ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು


ವಿಧಾನ

ಮಾವಿನ ಕಾಯಿಯ ಸಿಪ್ಪೆ ತೆಗೆದು, ತಿರುಳನ್ನು ಬೇಯಿಸಿ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ,ಬೆಳ್ಳುಳ್ಳಿ ಎಸಳು,ಸಾಸಿವೆ ,ಹಸಿ ಮೆಣಸಿನ ಚೂರು ಮತ್ತು ಬೆಂದ ಮಾವಿನ ಕಾಯಿ ತಿರುಳನ್ನು  ಹಾಕಿ.
ಇದು ಬೇಯುತ್ತಿದ್ದಂತೆ ಇದಕ್ಕೆ ಸ್ವಲ್ಪ ಬೆಲ್ಲ ಹಾಕಿ. ಸುಮಾರು ೨೦ ನಿಮಿಷ ಮಂದ ಉರಿಯಲ್ಲಿ ಬೇಯಿಸಿ.


--------------------------------------------
೨೫.ಮಾವಿನ ಕಾಯಿ ಸಾಸಿವೆ
-----------------------------------------------
ಮಾವಿನ ಕಾಯಿ : ೧
ತೆಂಗಿನ ತುರಿ : ಕಾಲು ಲೋಟ
ಮೊಸರು : ಒಂದು ಲೋಟ

ಸಾಸಿವೆ : ಒಂದು ಚಮಚ
ಕೊತ್ತಂಬರಿ ಕಾಳು : ಅರ್ಧ ಚಮಚ
ಕೆಂಪು ಮೆಣಸು : ೩
ಹಸಿ ಮೆಣಸು : ೧
ಅರಸಿನ :ಚಿಟಿಕೆ
ನೀರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸ್ವಲ್ಪ


ವಿಧಾನ
೧.ಮಾವಿನ ಕಾಯಿಯ ಸಿಪ್ಪೆ ತೆಗೆದು, ಒಂದು ಲೊಟ ನೀರು ಮತ್ತು ಬೆಲ್ಲ ಸೇರಿಸಿ ಮಾವಿನ ಕಾಯಿಯನ್ನು ಬೇಯಿಸಿ.
೨.ಮಿಕ್ಸಿಯಲ್ಲಿ ಕೊತ್ತಂಬರಿ ಕಾಳು,ತೆಂಗಿನ ತುರಿ,ಕೆಂಪು ಮೆಣಸು,ಹಸಿ ಮೆಣಸು ,ಅರಸಿನ ಇವುಗಳನ್ನು ರುಬ್ಬಿ.
೩.ಮಾವಿನ ತಿರುಳನ್ನು ಚೆನ್ನಾಗಿ ಜಜ್ಜಿ. ಇದಕ್ಕೆ ರುಬ್ಬಿದ ಮಿಶ್ರಣ, ಮೊಸರು, ಉಪ್ಪು ಸೇರಿಸಿ ಕಲಕಿ. ಅನ್ನದ ಜತೆ ಸವಿಯಿರಿ.



----ಅರ್ಚನಾ ಹೆಬ್ಬಾರ್, ಬೆಂಗಳೂರು

ಓದಲು ಈ ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ.




2 comments: