`ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುವುದು ಬಸವಣ್ಣನವರ ವಚನ. ನಮ್ಮ ಮಾತು ಹೇಗಿರಬೇಕು ಎಂದು ಅದೆಷ್ಟು ಸರಳವಾಗಿ ಈ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ! ಹಾಗೆಯೇ `ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕಿಡಿಯು ಮಾತೇ ಮಾಣಿಕ್ಯ...' - ಇದು ಸರ್ವಜ್ಞನ ಉವಾಚ.
ಮಾತು ನಮಗೆ ಭಗವಂತ ನೀಡಿರುವ ಒಂದು ವರದಾನ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅತ್ಯುತ್ತಮ ಸಾಧನ. ಮಾತನಾಡುವಾಗ ಇದ್ದರೆ ಕೊಂಚ ಇದ್ದರೆ ವ್ಯವಧಾನ, ಮುದಗೊಂಡೀತು ಕೇಳುಗರ ಮನ; ಇಲ್ಲವಾದರೆ ಕಳೆದುಹೋದೀತು ಮಾನ!
ನೊಂದ ಮನಸ್ಸಿನ ಮಾತನ್ನು ಕೇಳಲು ಒಂದು ಜತೆ ಕಿವಿ ದೊರೆತರೆ ಸಾಕು, ಅವರಿಗಾಗುವ ಸಮಾಧಾನ ಅಪಾರ. ಬೇಸರಗೊಂಡ ಮನಸ್ಸಿಗೆ ಭರವಸೆಯ ನುಡಿಗಳು ಆಸರೆಯಾಗುತ್ತವೆ.
ಯಾರಾದರೂ ಚಿಕ್ಕ ಮಗು ನಡೆಯಲು ಪ್ರಯತ್ನಿಸುತ್ತಿರುವಾಗ `ಭೇಷ್!' ಅನ್ನಿ, ಅದನ್ನು ಪ್ರೋತ್ಸಾಹಿಸಿ... ಅದು ಬಹಳ ಖುಷಿಯಿಂದ ಮುನ್ನಡೆಯಲು ಪ್ರಯತ್ನಿಸುತ್ತದೆ! ಹೊಗಳಿಕೆ, ಉತ್ತೇಜನಕ್ಕೆ ಮಾರುಹೋಗದವರುಂಟೇ ಸ್ವಾಮಿ!?
ಬಹಳಷ್ಟು ಕಂಪೆನಿಗಳು ನಡೆಸುವ ಸಂದರ್ಶನದಲ್ಲಿ ಅಭ್ಯರ್ಥಿ ಯಾವ ರೀತಿಯಲ್ಲಿ ವಿಷಯ ಮಂಡನೆ ಮಾಡುತ್ತಾನೆ ಎಂಬುವುದು ಆತನ ಆಯ್ಕೆಗೆ ಬಲು ಮುಖ್ಯವಾದ ಅಂಶ. ನಮಗೆ ತಿಳಿದಿರುವುದನ್ನು, ಇತರರಿಗೆ ತಿಳಿಯಪಡಿಸುವಂತೆ ಮಾಡುವುದೂ ಒಂದು ಕಲೆಯೇ! ಎಷ್ಟೋ ಅಧ್ಯಾಪಕರು ವಿಷಯಗಳನ್ನು ತಿಳಿದಿದ್ದರೂ ಅದನ್ನು ವ್ಯಕ್ತಪಡಿಸಲು ಬಾರದೆ, `ಅವರಿಗೇನೂ ಗೊತ್ತಿಲ್ಲ' ಎಂಬ ತೆಗಳಿಕೆಗೆ ತುತ್ತಾಗಬೇಕಾಗುತ್ತದೆ!
ಮಾತಿನ ವಿಷಯ ಬರೆಯುವಾಗ ರಾಜಕಾರಣಿಗಳ ಬಗ್ಗೆ ಬರೆಯದಿದ್ದರೆ ಹೇಗೆ? ಅವರಿಗೆಲ್ಲ ಮಾತೇ ಬಂಡವಾಳ. ಜನತೆಗೆ ಆಶ್ವಾಸನೆಗಳ ಮೂಟೆ ಹೊರಿಸಿ, ಅವರನ್ನು ನಂಬಿಸಿ, ಕುರ್ಚಿ ಏರಿ ಕುಳಿತರೆ ಸಾಕು, ಅವರ ಕೆಲಸ ಮುಗಿದಂತೆ!
ಕೆಲವರಿರುತ್ತಾರೆ, ವಾಚಾಳಿಗಳು, ಕಲ್ಲು ಬಂಡೆಯನ್ನೂ ಮಾತನಾಡಿಸುವ ಚತುರರು. ಮತ್ತೆ ಕೆಲವರು `ಮಾತಾಡಿದರೆ ಮುತ್ತು ಉದುರುತ್ತದೆಯೋ' ಅನ್ನುವಂತೆ ಮೌನಪ್ರಿಯರು. `ಮೌನಿನ: ಕಲಹೋ ನಾಸ್ತಿ' ಎಂಬುದನ್ನು ದೃಢವಾಗಿ ನಂಬಿದವರು!
ಕೆಲವರ ಮಾತು ಬೆಣ್ಣೆಯಲ್ಲಿ ಕೂದಲು ತೆಗೆದಂತೆ. ಕೆಲವರ ಮಾತಿಗೆ ನಯವಿನಯದ ಮುಖವಾಡ. ಮನದಲ್ಲೊಂದು, ಆಡುವುದು ಮತ್ತೊಂದು. ಮತ್ತೆ ಕೆಲವರದು `ಪುರಾಣ ಹೇಳಿ ಬದನೆಕಾಯಿ ತಿನ್ನುವ' ಸ್ವಭಾವ. ಇನ್ನು ಕೆಲವರದ್ದು, ಕಂಡದ್ದು ಕಂಡ ಹಾಗೆ ಹೇಳಿ ಕೆಂಡದಂಥಾ ಕೋಪ ತರಿಸುವ ಪರಿ. ಇನ್ನು ಕೆಲವರಿಗೆ ತಾವಂದಂತೆ ನಡೆಯದಿದ್ದರೆ ನಖಶಿಖಾಂತ ಸಿಟ್ಟು.
ಕೆಲವರಿಗೆ ಸಿಟ್ಟಿನ ಭರದಲ್ಲಿ ಏನೇನು ಮಾತನಾಡುತ್ತಿದ್ದಾರೆ ಅನ್ನುವ ವಿವೇಚನೆಯೇ ಇರದು! ಕಡಿಮೆ ಅಂಕ ಬಂತೆಂದು ಮಕ್ಕಳನ್ನು ಕೆಂಡಾಮಂಡಲವಾಗಿ ಬಯ್ಯುವ ಹೆತ್ತವರಿಗೇನೂ ಕೊರತೆಯಿಲ್ಲ. ಮಗನೇನಾದರೂ ಕೊಂಚ ಸೊಸೆಯ ಪರವಾಗಿದ್ದಾಗ ಶುರುವಾಗುವ ಅತ್ತೆಯ ತೂಕ ತಪ್ಪುವ ಮಾತು, ಸಂಬಂಧಗಳಲ್ಲಿ ಬಿರುಕು ಮೂಡಿಸಿದರೆ ಆಶ್ಚರ್ಯವೇನೂ ಇಲ್ಲ!
`ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು' - ಇದು ಮಾತು ಅರ್ಥೈಸಿಕೊಳ್ಳಲು ಸಾಧ್ಯವಾದರನ್ನು ಮಾತಿನ ಮೂಲಕ ತಿಳಿಹೇಳಬಹುದು ಎನ್ನುವುದಕ್ಕೊಂದು ಪಡೆನುಡಿ.
ಕೆಲವರಿಗೆ ಮಾತಿನಿಂದಲೇ ಜೀವನ. ಬದುಕುವ ಸಾಧನ. ಸಂವಹನದ ಪ್ರಮುಖ ಸಾಧನ ಮಾತು. ಪ್ರಭಾವೀ ವ್ಯಕ್ತಿಗಳು ಆಡುವ ಮಾತು ಹಲವಾರು ಚರ್ಚೆಗಳಿಗೆ ಕಾರಣವಾಗುತ್ತದೆ!
ಇದೆಲ್ಲ ಮಾತು ಬಲ್ಲವರ ಪ್ರಪಂಚವಾದರೆ, ಮಾತಾಡುವ ಸಮಸ್ಯೆ ಇರುವವರ ಕಥೆಯೇ ಬೇರೆ. ಕೆಲವರಿಗೆ ಉಗ್ಗು, ಕೆಲವರಿಗೆ ಅಸ್ಪಷ್ಟ ಮಾತು, ಕೆಲವರಿಗೆ ಮಾತೇ ಬರದು... (ಇಂಥವರ ಮಾತನ್ನು `ಸರಿಪಡಿಸಲು' ಈಗೀಗ ವಾಕ್ಚಿಕಿತ್ಸಾ ಕೇಂದ್ರಗಳು ತಲೆಯೆತ್ತಿವೆಯೆನ್ನಿ).
ರವಿಶಂಕರ ಅವರ `ಆರ್‍ಟ್ ಆಫ್ ಲಿವಿಂಗ್ ' ಕೊರ್ಸ್‌ನಲ್ಲಿ ಪಾಲ್ಗೊಂಡ ನನ್ನ ಸ್ನೇಹಿತೆ ಹೇಳಿದ ಒಂದು ಅನುಭವವಿದು: `ಒಂದು ದಿನವಿಡೀ ಮೌನವಾಗಿ ಇರಬೇಕಿತ್ತು. ಆ ಒಂದು ದಿನ ಕಳೆದಾಗ ಮತ್ತೆ ಮಾತನಾಡುವ ಅನಿಸಲೇ ಇಲ್ಲ... ಮೌನದ ಆನಂದ ಆಗಲೇ ನನಗೆ ಗೊತ್ತಾದದ್ದು!'
ಮುಗಿಸುವ ಮುನ್ನ,
ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:
ತಸ್ಮಾತ್ ತದೇವ ವಕ್ತವ್ಯಮ್ ವಚನೇ ಕಾ ದರಿದ್ರತಾ
(ಪ್ರಿಯವಾದ ಮಾತು ಎಂಥವರಿಗೂ ಇಷ್ಟವೇ ಆಗುತ್ತದೆ; ಆದ್ದರಿಂದ ಅದನ್ನೇ, ಅಂದರೆ ಒಳ್ಳೆಯ ಮಾತನ್ನೇ, ಆಡಬೇಕು. ಮಾತಿನಲ್ಲೂ ಯಾಕೆ ಬಡತನ?)
6 comments:
Hey archana....
tumba chennagide...
kavana galu chennagi bandide...
dhanyavaadagaLu :-)
ಮಾತಾಡೋದ್ ಸುಲಭವೋ , ಮೌನವಾಗಿರೋದೋ ;-) ?
ಮಾತಾಡಿದ್ರೆ ಎಲ್ಲಿ, ಎಷ್ಟು ಮಾತಾಡ್ಬೇಕು ಅಂತ ಹೇಗೆ ಒಂದು ಗೆರೆ ಎಳೆಯೋದು?
ಮಾತು ಎರಡೂ ಕಡೆ ಚೂಪಾಗಿರುವ ಕತ್ತಿ!
good one.. :-)
ಮಾತು ಮುತ್ತು.......
----------------------------
ಮಾತು ಬರುವುದು ಎಂದು ಮಾತಾಡುವುದು ಬೇಡ;
ಒಂದು ಮಾತಿಗೆ ಎರಡು ಅರ್ಥವುಂಟು.
ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;
ಬರಿದೆ ಆಡುವ ಮಾತಿಗರ್ಥವಿಲ್ಲ.
ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;
ಮೀನು ಬೇಳುವ ತನಕ ಕಾಯ ಬೇಕು.
ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ;
ಹುಡುಕುತ್ತಲಿಹನವನು ಮುತ್ತಿಗಾಗಿ.
ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.
ಮೀನಿನಿಂದಲು ನಮಗೆ ಲಾಭವುಂಉ.
ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.
ಅವನ ದುಡಿಮೆಗೆ ಕೂಡ ಅರ್ಥವುಂಟು.
ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು
ಮುತ್ತಕೊಟ್ಟಳು ಅವನ ಹಸಿದ ತುಟಿಗೆ.
ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.
ಮುತ್ತು ಸಿಕ್ಕಿತು ಎಂದು ನಕ್ಕವನು.
----------------------------- ಕೆ.ಎಸ್.ನ.
Adre Archna,
kelavondu sala,
matu belli mauna bangara agodu untalva?
Post a Comment