Pages

Friday, March 9, 2007

ಕೇಪ್ ಟೌನ್..ಪ್ರವಾಸಾನುಭವ




ಚಿಕ್ಕಂದಿನಿಂದಲೂ ನನಗೆ ಆಫ್ರಿಕಾದ ಬಗೆಗೆ ಅವ್ಯಕ್ತ ಕುತೂಹಲ. 'ಕಗ್ಗತ್ತಲೆಯ ಖಂಡ'ವೆಂದು ಸಮಾಜ ಅಧ್ಯಾಪಕರು ವಿವರಿಸುವಾಗ "ಅಯ್ಯೋ ಪಾಪ, ಅಲ್ಲಿ ಕರೆಂಟು ಇಲ್ಲವೇನೋ!! " ಎಂದು ಅನಿಸುತ್ತಿತ್ತು. ಭಾರತವನ್ನು ಹುಡುಕ ಹೊರಟ ಸಾಹಸ ಯಾತ್ರಿಗಳು ಅದಕ್ಕೆ ಮುನ್ನ ತಲುಪಿದ 'ಕೇಪ್ ಆಫ್ ಗುಡ್ ಹೋಪ್'ಬಗ್ಗೆ ಓದುವಾಗ ರೋಮಾಂಚನಗೊಳ್ಳುತ್ತಿದ್ದೆ.ಆಫ್ರಿಕಾ ನನ್ನ ಪಾಲಿಗೆ ಒಂದು ರೀತಿಯ























ನಿಗೂಢ ವಿಸ್ಮಯವಾಗಿತ್ತು.

ಕಂಪೆನಿ ಕೆಲಸದ ನಿಮಿತ್ತ ನನಗೆ ದಕ್ಷಿಣ ಆಫ್ರಿಕಾವನ್ನು ಸಂದರ್ಶಿಸುವ ಅವಕಾಶ ಒದಗಿ ಬಂದಿತು."ಅಲ್ಲಿ ಹೋದರೆ ಅಲ್ಲಿಯವರಂತೆ ಕರ್ರಗಾಗಿ ಹೋಗುತ್ತೀಯಾ" ಎಂದ ಮಿತ್ರರ ಮಾತುಗಳಿಗೆ ನಕ್ಕು ತಲೆಯಾಡಿಸಿದೆ. "ಹೋದೆಡೆಯಲ್ಲೆಲ್ಲಾ ಜಾಗ್ರತೆ "ಎಂದು ಎಚ್ಚರಿಸಿದವರು ಹಲವರು.ಅಂತೂ ಕಡೆಗೆ ವಿಮಾನವೇರಿದೆ.ಬೆಂಗಳೂರು-ಮುಂಬೈ, ಮುಂಬೈ-ಜೊಹಾನ್ಸ್ ಬರ್ಗ್, ಜೊಹಾನ್ಸ್ ಬರ್ಗ್ - ಕೇಪ್ ಟೌನ್- ಹೀಗೆ ಮೂರು ವಿಮಾನಗಳ ಮೂಲಕ ಸುಮಾರು ಹದಿಮೂರು ಗಂಟೆಗಳ ಕಾಲ ಪಯಣಿಸಿ, ಕೇಪ್ ಟೌನ್ ತಲುಪಿದೆ.ಕಟ್ಟಾ ಸಸ್ಯಾಹಾರಿಯಾದ ನನ್ನ ಬ್ಯಾಗಿನಲ್ಲಿ ಅಕ್ಕಿ, ಬೇಳೆ,ಜೀರಿಗೆ, ಎಂ.ಟಿ. ಆರ್. ಪುಡಿಗಳು ತುಂಬಿದ್ದವು.

ದಕ್ಷಿಣ ಆಫ್ರಿಕಾ, ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿ ಇರುವ ದೇಶ.ಭಾರತಕ್ಕೂ ಅಲ್ಲಿಗೂ ಮೂ ರುವರೆ ಗಂಟೆಗಳ ಕಾಲ ವ್ಯತ್ಯಾಸ.ಅಲ್ಲಿಗೆ ತೆರಳಿದ ಮೊದಲ ವಾರದಲ್ಲಿ ಬೆಳಗ್ಗೆ ಐದು ಗಂಟೆಗೇ ವಿಪರೀತ ಹಸಿವಾಗುತ್ತಿತ್ತು.ನನ್ನ ಶರೀರದ ಗಡಿಯಾರ ದಕ್ಷಿಣ ಆಫ್ರಿಕಾದ ಕಾಲಮಾನಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಯಿತು.

ಭಾರತಕ್ಕೆ ಜಲಮಾರ್ಗ ಕಂಡುಹಿಡಿಯುವ ಪ್ರಯತ್ನದಲ್ಲಿ ಬಾರ್ತಾಲೋಮ್ಯು ಡಯಾಸನು ೧೪೮೮ರಲ್ಲಿ ದಕ್ಷಿಣ ಆಫ್ರಿಕಾದ ತುದಿಯನ್ನು ತಲುಪಿದನು.ಅಲ್ಲಿಯ ಸಮುದ್ರ ಕಿನಾರೆಯಲ್ಲಿ ಬಡಿಯುವ ಅಬ್ಬರದ ಅಲೆಗಳನ್ನು ಕಂಡು, ಅದನ್ನು 'ಕೇಪ್ ಆಫ್ ಸ್ಟೊರ್ಮ್ಸ್' ಎಂದು ಕರೆದನು. ಮುಂದೆ ೧೬೫೨ ರಲ್ಲಿ ಡಚ್ಚರು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಎರಡನೇ ಜಾನ್ ಇದನ್ನು ಕೇಪ್ ಆಫ್ ಗುಡ್ ಹೋಪ್ ಎಂದು ಕರೆದನು.ಇಲ್ಲಿ ವ್ಯಾಪಾರ ವ್ಯವಹಾರಗಳಿಗೆ ಸರಬರಾಜು ಕೇಂದ್ರವೂ ಸ್ಥಾಪಿತವಾಯಿತು.ಇಲ್ಲಿ ಬೆಳೆದ ಪಟ್ಟಣವೇ ಕ್ರಮೇಣ 'ಕೇಪ್ ಟೌನ್' ಎಂಬ ಹೆಸರನ್ನು ಪಡೆಯಿತು.


ಅಟ್ಲಾಂಟಿಕ್ ಸಾಗರದ ಅಬ್ಬರ, ಹಿಂದೂ ಮಹಾಸಾಗರದ ಶಾಂತ ಸ್ವಭಾವ ,ಪರ್ವತ ಶ್ರೇಣಿಯ ದಿಟ್ಟತನ, ಗಿಡಮರ ಬಳ್ಳಿಗಳ ತುಂಟತನ ಇವುಗಳೆಡೆಯಲ್ಲಿ ತಲೆಯೆತ್ತಿ ನಿಂತಿರುವ ಪಟ್ಟಣವೇ ಕೇಪ್ ಟೌನ್. ಇದು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿದ್ದು, ವಿಶ್ವದ ಹತ್ತು ಪ್ರಮುಖ ಪ್ರೇಕ್ಷಣೀಯ ಸ್ಠಳಗಳಲ್ಲಿ ಒಂದೆಂದು ಖ್ಯಾತವಾಗಿದೆ. ಇಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ(ಇದು ಮೆಡಿಟರೇನಿಯನ್ ವಾಯುಗುಣದ ಲಕ್ಷಣ), ಗಿಡಮರಗಳು ಬೋಳಾಗುತ್ತವೆ. ವಸಂತನ ಆಗಮನವಾಗುತ್ತಿದ್ದಂತೆ ಅವುಗಳಿಗೆ ನವಚೈತನ್ಯ ಬಂದು ಚಿಗುರತೊಡಗುತ್ತವೆ.


ಕೇಪ್ ಟೌನ್ ನ ಪ್ರತಿಯೊಂದು ಪ್ರದೇಶವೂ ಸೌಂದರ್ಯದಲ್ಲಿ ಒಂದಕ್ಕಿಂತ ಇನ್ನೊಂದು ಮಿಗಿಲು.ಸಮುದ್ರ ಕಿನಾರೆಗಳು ,ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಕುಲ, ಗಿರಿ ಶಿಖರಗಳ ಸಾಲು ,ಮುಗಿಲಿನ ಸರಮಾಲೆ , ಶಿಸ್ತುಬದ್ಧ ಜನ ಜೀವನ ಇವೆಲ್ಲವೂ ನಮ್ಮ ಕಣ್ಣ ಮುಂದೆ ಹೊಸದೊಂದು ಲೋಕವನ್ನು ಸೃಷ್ಟಿಸುತ್ತವೆ.























ಟೇಬಲ್ ಮೌಂಟೇನ್
: ಇದು ಕೇಪ್ ಟೌನ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಇದು ಸುಮಾರು ೪೪೩ ಮಿಲಿಯನ್ ವರ್ಷಗಳ ಹಿಂದೆ ರಚಿತವಾದ ಶಿಲೆಯೆಂದು ಪರಿಗಣಿಸಲಾಗಿದೆ.ಇದು ೧೦೮೬ ಮೀಟರ್ ಎತ್ತರವಾಗಿದ್ದು, ಚಪ್ಪಟೆಯಾದ ತುದಿಯನ್ನು ಹೊಂದಿದೆ. ಆದ ಕಾರಣವೇ ಇದರ ಹೆಸರು ಟೇಬಲ್ ಮೌಂಟೇನ್ ಎಂದಾಗಿದೆ. ಮೋಡಗಳ ಸಾಲು ಇದನ್ನು ಸುತ್ತುವರಿದಾಗ ಮೇಜಿನ ಮೇಲೆ ಶ್ವೇತವರ್ಣದ ವಸ್ತ್ರವನ್ನು ಹಾಸಿದಂತೆ ಭಾಸವಾಗುತ್ತದೆ.ಇಲ್ಲಿ ೧೪೭೦ ಕ್ಕೂ ಹೆಚ್ಚಿನ ಸಸ್ಯಪ್ರಭೇದಗಳನ್ನು ಗುರುತಿಸಲಾಗಿದ್ದು,ಇವುಗಳಲ್ಲಿ ಹೆಚ್ಚಿನವು ಪ್ರಪಂಚದ ಇನ್ನಿತರ ಭಾಗಗಳಲ್ಲಿ ಕಂಡು ಬರುವುದಿಲ್ಲ.























ಇದನ್ನು ಏರಲು 'ಕೇಬಲ್ ಕಾರು'ಗಳ ವ್ಯವಸ್ಥೆ ಮಾಡಿದ್ದಾರೆ.ಹಗ್ಗದ ಹಾದಿಯಲ್ಲಿ ನಿಧಾನವಾಗಿ ಏರುವ ಕೇಬಲ್ ಕಾರಿನೊಳಗೆ ಕುಳಿತು ,ಸುತ್ತಮುತ್ತಲಿನ ಗಿರಿ, ಕಾನನ, ಸಾಗರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗುವುದು ಒಂದು ರಮ್ಯ ಅನುಭವ. ಸುತ್ತಮುತ್ತಲಿನ ಪ್ರಕೃತಿಮಾತೆಯ ಸಿರಿಯನ್ನು ನೋಡಲು ಕಂಗಳೆರಡು ಸಾಲವು. ಪರ್ವತದ ತುದಿಯಲ್ಲಿ ಹೋಟೆಲ್ ಮತ್ತು ಅಂಗಡಿಗಳಿವೆ . ಅಲ್ಲಿ ಕುಳಿತು,ಸುತ್ತಲಿನ ಪ್ರಕೃತಿಯನ್ನು ಸವಿಯುವುದು ಒಂದು ಅವಿಸ್ಮರಣೀಯ ಅನುಭವ.





















ಕೇಪ್ ಪಾಯಿಂಟ್:
ಇದು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಸಂಗಮ ತಾಣ.ಭೂಮಿ ತಾಯಿಯ ರುದ್ರ ರಮಣೀಯ ದೃಶ್ಯವನ್ನು ಇಲ್ಲಿ ಕಾಣಬಹುದು. ಎತ್ತರದ ಶಿಖರದ ಮೇಲಿಂದ ಕೆಳಗೆ ಬಗ್ಗಿ ನೋಡಿದಾಗ ಸಾಗರಗಳ ಸಂಗಮ ಅತ್ಯದ್ಭುತವಾಗಿ ಗೋಚರವಾಗುತ್ತದೆ.ನಾನು ಇದನ್ನು ಸಂದರ್ಶಿದ ದಿನ ಒಂದೆಡೆ ಸಂಪೂರ್ಣವಾಗಿ ಮೋಡ ಆವರಿಸಿತ್ತು. ಅದು ನನಗೆ ಪೌರಾಣಿಕ ಚಲನಚಿತ್ರಗಳ ಸ್ವರ್ಗದ ಸೆಟ್ಟಿಂಗ್ ನಂತೆ ಅನಿಸಿತು. ಚಲಿಸುವ ಮೋಡಗಳು ತಮ್ಮ ಸೌಂದರ್ಯದಿಂದ ನನ್ನನ್ನು ಮೂಕ ವಿಸ್ಮಿತಳನ್ನಾಗಿ ಮಾಡಿದ್ದವು.


ರೋಬಿನ್ ಐಲಾಂಡ್ : ಕೇಪ್ ಟೌನ್ ನಿಂದ ೧೨ ಕಿ.ಮೀ. ಇರುವ ದ್ವೀಪ 'ರೊಬಿನ್ ಐಲಾಂಡ್'.೧೮೩೬ ರಿಂದ ೧೯೩೧ ರವರೆಗೆ ಇದನ್ನು ಕುಷ್ಟ ರೋಗಿಗಳ ನೆಲೆಯಾಗಿ ಬಳಸಲಾಯಿತು. ಇಪ್ಪತ್ತನೇ ಶತಮಾನದಲ್ಲಿ ಇಲ್ಲಿ ವರ್ಣಭೇದ ವಿರೋಧಿ ಚಳುವಳಿಯ ನಾಯಕರನ್ನು ಸೆರೆಯಲ್ಲಿಟ್ಟಿದ್ದರು.


ನೆಲ್ಸನ್ ಮಂಡೇಲಾ ತಮ್ಮ ಸುದೀರ್ಘ ೨೭ ವರ್ಷಗಳ ಜೈಲುವಾಸವನ್ನು ಅನುಭವಿಸಿದ್ದು ಇಲ್ಲಿಯೇ. ಮೂಲಭೂತ ಸೌಕರ್ಯಗಳೂ ಇಲ್ಲದ ಆ ಸೆರೆಮನೆಯಲ್ಲಿ ಅವರು ಹೇಗೆ ಕಾಲ ಕಳೆದಿರಬಹುದೆಂಬ ಪ್ರಶ್ನೆ ಮನವನ್ನು ಕಾಡಿತು.ನಮ್ಮನ್ನು ಅಲ್ಲಿಗೆ ಕರೆದೊಯ್ದ ದೋಣಿ ವಾಪಾಸು ಬರುವಾಗ ,ಎಲ್ಲರ ಮನದಾಳದಲ್ಲಿ ವಿಷಾದದ ಅಲೆಗಳು ಅಪ್ಪಳಿಸುತ್ತಿದ್ದವು.ಶರೀರದ ಬಾಹ್ಯವರ್ಣ ಮನುಕುಲದಲ್ಲಿ ಎಂತೆಂತಹ ಸಮಸ್ಯೆಗಳನ್ನು ಹುಟ್ಟು ಹಾಕಿತು ಎಂದು ಯೋಚಿಸಿದೆ.






















ಕಾನ್ಸ್ಟನ್ಶಿಯಾ :
ಕೇಪ್ ಟೌನ್ ಉತ್ಕೃಷ್ಟ ಗುಣಮಟ್ಟದ ವೈನ್ ತಯಾರಿಕೆಗೆ ಬಹಳ ಖ್ಯಾತಿ ಪಡೆದಿದೆ.ಎಕರೆಗಟ್ಟಲೆ ಹರಡಿರುವ ದ್ರಾಕ್ಷಿ ತೋಟಗಳು ಪ್ರವಾಸೋದ್ಯಮದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿವೆ. 'ವೈನ್ ಟೂರ್' ವೈನ್ ತಯಾರಿಸುವ ,ಶೇಖರಿಸುವ ಮತ್ತು ಅದನ್ನು ಸವಿಯುವ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ನೀಡುತ್ತದೆ.ಬಗೆಬಗೆಯ ವೈನ್ ಗಳು ಖರೀದಿಗೆ ಲಭ್ಯವಿವೆ.ಕಾನ್ಸ್ಟನ್ಶಿಯಾ ಇಂತಹ ಒಂದು ವೈನ್ ಉದ್ಯಮದ ಹೆಸರು.






















ಕ್ರಿಶ್ಟನ್ ಬೊಷ್:
ಇದು ದಕ್ಷಿಣ ಆಫ್ರಿಕಾದ ಒಂದು ಪ್ರಮುಖ ಸಸ್ಯೋದ್ಯಾನ(ಬೊಟಾನಿಕಲ್ ಗಾರ್ಡನ್). ದಕ್ಷಿಣ ಆಫ್ರಿಕಾದ ವಿವಿಧ ಸಸ್ಯರಾಶಿಯನ್ನು ಇಲ್ಲಿ ಕಲೆ ಹಾಕಿದ್ದಾರೆ.ಸುಮಾರು ೫೨೮ ಎಕರೆ ಪ್ರದೇಶದಲ್ಲಿ ಹರಡಿರುವ ಅಪೂರ್ವ ಸಸ್ಯ ಸಂಪತ್ತು ಕಣ್ಣಿಗೆ ಹಬ್ಬ.


ಕೇಪ್ ಟೌನ್ ನಲ್ಲಿ ಪ್ರವಾಸೋದ್ಯಮವನ್ನು ಎಷ್ಟು ವ್ಯವಸ್ಥಿತವಾಗಿ ಇರಿಸಿದ್ದಾರೆಂದರೆ ಅದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ.ಸಹಸ್ರಾರು ಪ್ರವಾಸಿಗಳು ಸೇರುವ ಪ್ರದೇಶ ಕೂಡ ಅತ್ಯಂತ ಸ್ವಚ್ಛವಾಗಿರುತ್ತದೆ.ಯಾವುದೇ ಸಮುದ್ರ ಕಿನಾರೆಯಲ್ಲಾಗಲೀ ರಸ್ತೆಯಲ್ಲಾಗಲೀ ಒಂದಿನಿತೂ ಕಸ,ಪ್ಲಾಸ್ಟಿಕ್ ಬಿದ್ದಿರುವುದಿಲ್ಲ. ಅವೆಲ್ಲವನ್ನೂ ಕಸದ ಬುಟ್ಟಿಯಲ್ಲೇ ಹಾಕುತ್ತಾರೆ.ಹೆಚ್ಚೇಕೆ ತಮ್ಮ ಜತೆ ನಾಯಿಯನ್ನು ಕರೆದೊಯ್ದರೆ ಅದರ ತ್ಯಾಜ್ಯವನ್ನು ಕೂಡ ಸಂಗ್ರಹಿಸಿ,ಕಸದ ಬುಟ್ಟಿಯಲ್ಲಿ ಹಾಕುತ್ತಾರೆ.ಎಲ್ಲೇ ಹೊದರೂ ಪ್ರವಾಸೀ ಸ್ಥಳದ ನಕ್ಷೆ ಲಭ್ಯವಿರುತ್ತದೆ. ಉಚಿತ ಮಾರ್ಗದರ್ಶಿ ಪುಸ್ತಿಕೆಗಳು ಹೇರಳವಾಗಿ ದೊರಕುತ್ತವೆ.ರಸ್ತೆಗಳಂತೂ ತೀರಾ ಅಚ್ಚುಕಟ್ಟು. ಟ್ರಾಫಿಕ್ ನಿಯಮಗಳೆಲ್ಲವನ್ನೂ ಎಲ್ಲರೂ ಸರಿಯಾಗಿ ಪಾಲಿಸುತ್ತಾರೆ.


ಒಟ್ಟಿನಲ್ಲಿ ಕೇಪ್ ಟೌನ್ ಪ್ರವಾಸ ನನ್ನ ಜೀವನದ ಅತ್ಯಂತ ಸವಿಯಾದ ಸಮಯ.ಬಲು ಸುಂದರ ಪ್ರದೇಶವೊಂದನ್ನು ಭೇಟಿ ಮಾಡಿದ ತೃಪ್ತಿ ನನ್ನದಾಗಿತ್ತು.ಪ್ರಕೃತಿ ದೇವಿಯ ಸಿರಿ ಸೊಬಗು ನನ್ನ ಮನವನ್ನು ಸೂರೆಗೊಂಡಿತ್ತು.

* ಜನರು ಸ್ನೇಹಪರರು. ಇಂಗ್ಲಿಷ್ ಮತ್ತು ಆಫ್ರಿಕನ್ ಮುಖ್ಯ ಭಾಷೆಗಳು. ಇಲ್ಲಿ ಯುರೋಪಿಯನ್ನರೇ ಬಹಳ ಸಂಖ್ಯೆಯಲ್ಲಿದ್ದಾರೆ.
























* ರಸ್ತೆಯ ಬದಿಯಲ್ಲಿ ಆಸ್ಟ್ರಿಚ್ ,ಬಬೂನ್ ಮುಂತಾದ ಪ್ರಾಣಿಗಳನ್ನು ಕಾಣಬಹುದು.























* ಆಫ್ರಿಕನ್ ಮಹಿಳೆಯರ ಕೇಶ ಶೃಂಗಾರ: ಅವರ ನೈಜ ತಲೆಕೂದಲಿಗೆ ಕೃತಕ ಕೇಶವನ್ನು ಸೇರಿಸಿ ಸಣ್ಣ ಸಣ್ಣ ಜಡೆಯಾಗಿ ಹೆಣೆಯುತ್ತಾರೆ.


*ಟ್ರಾಫಿಕ್ ಸಿಗ್ನಲ್ ಗೆ ಅಲ್ಲಿ 'ರೊಬೊಟ್' ಎಂದು ಕರೆಯುತ್ತಾರೆ.




*ಶಿಸ್ತು, ಸ್ವಚ್ಛತೆಗೆ ಬಹಳ ಆದ್ಯತೆ.



























*ಹಿಂದಿ ಚಲನಚಿತ್ರ 'ಐತ್ ರಾಜ್' ಇಲ್ಲಿ ಚಿತ್ರೀಕೃತವಾಗಿದೆ.




*ಅಲ್ಲಿಯ ಕರೆನ್ಸಿ ರಾಂಡ್. ಒಂದು ರಾಂಡ್ ಎಂದರೆ ಸುಮಾರು ಏಳು ರೂಪಾಯಿ.
* ಸೌತ್ ಆಫ್ರಿಕಾಕ್ಕೆ ಮೂರು ರಾಜಧಾನಿಗಳು.ಕೇಪ್ ಟೌನ್ ಶಾಸನ ಸಭೆಯ ಕಾರ್ಯಾಲಯ , ಪ್ರಿಟೋರಿಯಾ ಆಡಳಿತಾತ್ಮಕ ಕಾರ್ಯಾಲಯ ಹಾಗೂ ಬ್ಲೊಮ್ ಫ್ಲೊಂಟೈನ್ ನಾಯಾಲಯ ಸಂಬಂಧಿ ಕಾರ್ಯಾಲಯವನ್ನು ಹೊಂದಿದೆ.






12 comments:

Kuldeep Dongre said...

Photos are excellent..!

Anonymous said...

AfrucAdalli UTa tinDi EnU iralillavA? orkuTnalli ashTondu tinDi baDiso nIvu AfricAdinda EnAdrU uNbaDistIrA andkonDidde.
Adre Itare chitra nOdida mEle hasivU mart hOgiddu nija!
santasa.

Archu said...

ಸಂತಸ,
ಒರ್ಕುಟ್ನಲ್ಲಿರುವ ಒಂದು ಫೊಟೊದಲ್ಲಿ 'made in south africa ' ಅಂತ ಇದೆ..ನೋಡಿ

KumudaShankar said...

ಅರ್ಚನರವರಿಗೆ ತುಂಬಾ ಧನ್ಯವಾದಗಳು. ಕೇಪ್ ಟೌನ್ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಓದಿ ಬಹಳ ಸಂತೋಷವಾಯಿತು. ಅಲ್ಲಿಯ ಬಗ್ಗೆ ತಿಳಿದು ಕೊಂಡೆವು. ಎಲ್ಲಾ ವಿಷಯಗಳನ್ನು ಸೊಗಸಾಗಿ ಬರೆದಿರುವಿರಿ ಅರ್ಚನರವರೆ. Thank you very much, photo also very beautiful. ಫೋಟೊಗಳನ್ನು ನೋಡುತ್ತಾ, ನೋಡುತ್ತಾ ಅಲ್ಲೇ ಇದಿವೇನೊ ಎನ್ನಿಸಿತು. ನಮಗೆಲ್ಲಾ ಈ ರೀತಿಯ ಒಂದು ಅವೀಸ್ಮರಣೀಯ ಜಾಗದ ಬಗ್ಗೆ ತಿಳಿಸಿರುವುದಕ್ಕೆ ತುಂಬಾ THANKS.

KumudaShankar said...

Thmba chennagide ella photos mattu kapetown saha bahala chennagide, namagu nodabeku enisuttide. Kape town manoharavada sthala endenisitu. nijakku punyavantaru adannu nodibandiruviri, haagu namagu idannella tilisi barediruvudakke, adarallu kannadadalli oodi thumba santhoshavaitu. haageye neevu barediruva ankeka kavitegalannu oodide, manassige thumba hidisitu Archanaravare, nimmalli sogasagi moodibaruva akshara jnanavide, santasavaitu. Dhanyavadagalu.

ರಾಜೇಶ್ ನಾಯ್ಕ said...

ಅರ್ಚನಾ,
ಪುಕ್ಕಟೆ ಕೇಪ್ ಟೌನ್ ಪ್ರವಾಸ ಮಾಡಿಸಿದ್ದಕ್ಕೆ ಧನ್ಯವಾದಗಳು. ಚೆನ್ನಾಗಿ ವಿವರಿಸಿದ್ದೀರಿ. ಚಿತ್ರಗಳಂತೂ ಬಹಳ ಚೆನ್ನಾಗಿವೆ. ಮೊದಲ ಫೋಟೊವಂತೂ ಆ ಬೆಟ್ಟವನ್ನು ಈಗಲೇ ಹೋಗಿ ಹತ್ತೇಬಿಡುವಷ್ಟು ಆಸಕ್ತಿ ಕೆರಳಿಸಿತು.

Anonymous said...

thanks kittylathu, rajesh naayka
:-)

Anonymous said...

Good post. I have a few south african friends currently living in US. Just wondering - Did you see/hear/experience high crime rates in South Africa these days? I hear a lot about it from my SA friends.

Archu said...

hi vittal,
thanks for your comments.

capetown is a safe place..Didnt get any problem there.Though I never went out in the late evening, night. just as precautionary measure.

but i heard from capetown ppl, that crime rate is more in johansberg and other few cities..

Sarvani said...

Hi Archana.
Ur webpage is tooo good.


Sarvani.

Archu said...

thanks sarvani..

Unknown said...

Channagide articles....