Pages

Thursday, May 28, 2009

ಜಿ ಟಾಕ್ ಸ್ಟೇಟಸ್ ಮೆಸೇಜು

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ||
ಬೆಂಗಳೂರು ರಸ್ತೆಲೆಲ್ಲಾ ದೊಡ್ಡ್ ದೊಡ್ಡ್ ಗುಂಡಿ ||
ಟ್ರಾಫಿಕ್ ಜಾಮ್ ನಲ್ಲಿ ನರಳಾಡ್ತಿದೆ ಎಲ್ಲಾರ್ ಬಂಡಿ ||

--------ಅರ್ಚನಾ

Tuesday, May 19, 2009

ನೀವೂ ಮೋಸ ಹೋದೀರಿ ಎಚ್ಚರಿಕೆ!

ಈ ಶನಿವಾರ, ಬಹುದಿನದಿಂದ ಕೆಟ್ಟು ಹೋಗಿದ್ದ ನಮ್ಮ ಲ್ಯಾಪ್ ಟಾಪನ್ನು ಸರಿಪಡಿಸುವ ಮುಹೂರ್ತ ಬಂದೊದಗಿತ್ತು. ಅದನ್ನು ಸರಿಪಡಿಸಲೋಸುಗ ಜಯನಗರದ ಒಂದು ಅಂಗಡಿ ನುಗ್ಗಿದ್ದಾಯಿತು. ಕೆಲವು ಪರೀಕ್ಷೆಗಳ ನಂತರ ಹಾರ್ಡ್ ಡಿಸ್ಕ್ ಬದಲಿಸಬೇಕೆಂಬ ಸೂಚನೆ ಗಟ್ಟಿಯಾಗತೊಡಗಿತು. ನಮಗೆ ಬೇಕಾದ ಹಾರ್ಡ್ ಡಿಸ್ಕ್ ಆ ಅಂಗಡಿಯಲ್ಲಿ ಇಲ್ಲದ ಕಾರಣ ಫೋನಾಯಿಸಿ, ಬೇರೊಂದು ಕಡೆಯಿಂದ ಅದನ್ನು ಅಂಗಡಿ ಮಾಲೀಕರು ತರಿಸಿದರು. ಹೊಚ್ಚ ಹೊಸ ಹಾರ್ಡ್ ಡಿಸ್ಕನ್ನು ನಮ್ಮ ಕಣ್ಣೆದುರಿಗೇ ಪಾಕೆಟ್ ನ ಸೀಲು ಒಡೆದು ತೆಗೆದು ತೋರಿಸಿ, ಜೋಡಿಸಿ, ಪರೀಕ್ಷಿಸಿ, ಎಲ್ಲವೂ ಸಮರ್ಪಕವಾಗಿದೆಯೆಂದು ಭಾವಿಸಿ, ಅಲ್ಲೇ ಆಪರೇಟಿಂಗ್ ಸಿಸ್ಟಮನ್ನು ಇನ್ ಸ್ಟಾಲ್ ಮಾಡಿ ನೋಡಿದೆವು. ಎಲ್ಲ ಓಕೆ.. ಚಿಂತೆ ಯಾಕೆ ಎಂದು ಭಾವಿಸಿ ಮನೆಗೆ ಬಂದೆವು. ಕಥೆ ಇಲ್ಲಿಗೇ ಮುಗಿಯಲಿಲ್ಲ. ಮುಗಿಯುತ್ತಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೂ ಇರಲಿಲ್ಲ.

ಮನೆಗೆ ಬಂದು ಸರಿಯಾದ ಲಾಪ್ ಟಾಪ್ ನಲ್ಲಿ ಮತ್ತೊಂದಷ್ಟು ಸಾಫ್ಟ್ ವೇರ್ ಗಳನ್ನು ಇನ್ ಸ್ಟಾಲ್ ಮಾಡುವ ಉತ್ಸಾಹದಲ್ಲಿ, ಮತ್ತೆ ಅದನ್ನು ಪರಿಶೀಲಿಸತೊಡಗಿದೆ. ಲಾಪ್ ಟಾಪ್ ನ ಡಿ ಡ್ರೈವ್ ಅನ್ನು ತೆರೆದು ನೋಡಿದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ಯಾಕೆ ಅಂತೀರಾ? ಯಾರೋ ಒಬ್ಬರ ಹಲವಾರು ಕಡತಗಳು ಅದರಲ್ಲಿದ್ದವು. ಹೊಸ ಹಾರ್ಡ್ ಡಿಸ್ಕ್ ಖಾಲಿಯಾಗಿರಬೇಕಷ್ಟೆ? ಈ ಥರದ ಕಡತಗಳು ಅದರಲ್ಲಿ ಮುಂಚಿನಿಂದಲೂ ಇದೆ ಅಂದ ಮೇಲೆ ಇದು ಹೊಸದಾಗಿರಲು ಹೇಗೆ ಸಾಧ್ಯ? ಮತ್ತೊಮ್ಮೆ ಆ ಕಂಪ್ಯೂಟರ್ ಅಂಗಡಿಗೆ ಫೋನಾಯಿಸಿ, ಬದಲಿಸಿದ ಹಾರ್ಡ್ ಡಿಸ್ಕ್ ಹೊಸತೇ ಅಲ್ಲವೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿದೆವು. "ಅದು ಹೊಚ್ಚ ಹೊಸದೇ" ಎಂಬ ಉತ್ತರ ದೊರಕಿತು.

ಡಿ ಡ್ರೈವ್ ನ ಕಡತಗಳಲ್ಲಿ ಏನೇನಿದೆ ಎನ್ನುತ್ತೀರಾ? 1. ಬ್ಯಾಂಕ್ ಸ್ಟೇಟ್ ಮೆಂಟ್ ಗಳು 2. ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು 3. ಷೇರು ವ್ಯವಹಾರದ ಅಂಕಿ ಅಂಶ 4. ಗೃಹಸಾಲದ ವಿವರಗಳು 5. ಕುಟುಂಬದ ಛಾಯಾಚಿತ್ರಗಳು 6. ಆಫೀಸಿನ ವಿವರಗಳು.

ಇತ್ತೀಚೆಗೆ 'Identity theft' , ಅಂತರ್ಜಾಲದಲ್ಲಿ ಆಗುವ ಮೋಸ ಹೆಚ್ಚಾಗಿವೆಯಷ್ಟೆ. ನನ್ನೆದುರು ಒಂದು ಪ್ರತ್ಯಕ್ಷ ನಿದರ್ಶನವಿತ್ತು.

ಆ ಕಡತಗಳಲ್ಲಿ ಆ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ಪಡೆದು ಅವರಿಗೆ ಫೋನಾಯಿಸಿ, ಎಲ್ಲ ವಿಷಯಗಳನ್ನು ತಿಳಿಸಿ, ಅವರ ಅಂತರ್ಜಾಲದ ಪಾಸ್ ವರ್ಡ್ಗಳನ್ನು ತಕ್ಷಣವೇ ಬದಲಾಯಿಸಲು ಆಗ್ರಹಿಸಿದೆವು. ಈ ವಿಷಯ ತಿಳಿದು ಅವರಿಗೂ ಗಾಬರಿಯಾಯಿತೆಂದು ಹೊಸದಾಗಿ ಹೇಳಬೇಕೆ?

ಇಲ್ಲಿ ಇಬ್ಬರಿಗೆ ಮೋಸವಾಗಿದೆ. 1. ಹೊಸ ಹಾರ್ಡ್ ಡಿಸ್ಕ್ ನ ಬೆಲೆ ತೆತ್ತು ಹಳೆಯದನ್ನು ಪಡೆದ ನನಗೆ 2. ಈ ಪರಿಯ ವೈಯಕ್ತಿಕ ದಾಖಲೆಗಳು ಯಾರದಾಗಿದ್ದವೋ ಅವರಿಗೆ. ಹಾಗೆ ನೋಡಹೋದರೆ ಮೊದಲನೆಯದ್ದಕ್ಕಿಂತ ಎರಡನೆಯದು ಅತ್ಯಂತ ಗಂಭೀರ ವಿಷಯ. ಎಲ್ಲಾ ತರಹದ ವಿಷಯಗಳೂ ಒಂದು ಚಿಕ್ಕ ಡಿಸ್ಕ್ ನಲ್ಲಿ ಅಡಕವಾಗಿಸಬಹುದಾದ ಈ ಕಾಲದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಕಂಪ್ಯೂಟರ್ ನಲ್ಲಿ ತಕ್ಕಮಟ್ಟಿನ ಸಾಕ್ಷರರಾಗಿದ್ದರೂ ಮೋಸ ಹೋಗುವ ಭಯ ಬೆಂಗಳೂರಿನಲ್ಲಿ ಇಲ್ಲದಿಲ್ಲ. ಈ ಥರದ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಜನರಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸುವುದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ವೈಯಕ್ತಿಕ ವಿವರಗಳನ್ನು ಒಂದೆಡೆ ಕಲೆ ಹಾಕಿದಾಗ ಅದಕ್ಕೆ ತಕ್ಕ ಭದ್ರತೆಯನ್ನು ಕಲ್ಪಿಸುವುದು ಇವತ್ತಿನ ಅಗತ್ಯ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದರಲ್ಲಿ ತುಂಬಾ ಸಮಯ ಹಿಡಿಯುವುದಿಲ್ಲ!
ದಟ್ಸ್ ಕನ್ನಡದಲ್ಲಿ

Tuesday, March 31, 2009

ಮೆಂತೆ ತಂಬುಳಿ


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ತಯಾರಿಸುವ ಒಂದು ಬಗೆಯ ಮೇಲೋಗರಕ್ಕೆ ’ತಂಬುಳಿ’ ಎಂದು ಹೆಸರು.ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ತಂಬುಳಿಯ ಮೂಲವಸ್ತು :ತೆಂಗಿನಕಾಯಿ ತುರಿ ಮತ್ತು ಮಜ್ಜಿಗೆ. ಮತ್ತೆ ಒಗ್ಗರಣೆ. ಮೆಂತೆ ತಂಬುಳಿ,ಒಂದೆಲಗದ ತಂಬುಳಿ,ಶುಂಠಿ ತಂಬುಳಿ,ದೊಡ್ಡ ಪತ್ರೆ ತಂಬುಳಿ,ಮಾವಿನ ಮಿಡಿ ತಂಬುಳಿ..ಒಂದೇ ಎರಡೇ..ಹಲವಾರು ವಿಧದ ತಂಬುಳಿಗಳು ಜನಪ್ರಿಯವಾಗಿವೆ.

ಇಲ್ಲಿ ಮೆಂತೆ ತಂಬುಳಿ ಮಾಡುವ ವಿಧಾನವನ್ನು ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಜೀರಿಗೆ:ಒಂದು ಚಮಚ
ಕಾಳು ಮೆಣಸು :೬
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ

ವಿಧಾನ :
೧.ಮೆಂತೆ,ಜೀರಿಗೆ,ಕಾಳು ಮೆಣಸು ಇವುಗಳನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

Monday, February 16, 2009

ರಿಯಾಲಿಟಿ ಶೋ...

ದಿನ ಬೆಳಗಾದರೆ ಸಾಕು,ಯಾವುದೇ ಚ್ಯಾನಲನ್ನು ಒತ್ತಿದರೂ ಸಾಮಾನ್ಯವಾಗಿ ಕಾಣಿಸುವ ಕಾರ್ಯಕ್ರಮ ’ರಿಯಾಲಿಟಿ ಶೋ’.ಸಂಗೀತ ಕ್ಷೇತ್ರಕ್ಕೆ ಇದು ಪ್ರೋತ್ಸಾಹವನ್ನು ನೀಡುತ್ತಿರುವಂತೆ ಮೇಲ್ನೊಟಕ್ಕೆ ಅನಿಸಿದರೂ, ಕೆಳಕಂಡ ಅಂಶಗಳು ಅದಕ್ಕೆ ವಿರುದ್ಧವಾದ ವಾದವನ್ನು ಪುಷ್ಟೀಕರಿಸುತ್ತವೆ.

೧.ಸಂಗೀತ ಸ್ಪರ್ಧೆಯನ್ನು ಒಂದು ರೀತಿಯ ಯುದ್ಧದಂತೆ ಬಿಂಬಿಸಲಾಗುತ್ತದೆ.ವೇದಿಕೆಯು ಸಮರಾಂಗಣ.ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಅಬ್ಬರ.ಭಯಭೀತರಾಗಿರುವ ಸ್ಪರ್ಧಿಗಳು!!

೨.ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ,ಮನೆಯ ಆರ್ಥಿಕ ಪರಿಸ್ಥಿತಿ,ಅವರ ಹೆತ್ತವರ/ಸಂಬಧಿಕರ ಆತಂಕ,ಹಾರೈಕೆ,ಸ್ಪರ್ಧಿಗಳ ಮಾನಸಿಕ ತುಮುಲಗಳ ಬಗ್ಗೆ ಕಾಮೆರ ಹಾಯಿಸಲಾಗುತ್ತದೆ.ಕ್ಯಾಮರಾದ ಕಣ್ಣ ಮುಂದೆಯೇ ತೀರ್ಪುಗಾರರ ವಾಗ್ವಿವಾದವೂ ನಡೆಯುತ್ತದೆ.ಕೆಲವೊಮ್ಮೆ ಸ್ಪರ್ಧಿಯ ಧಾರ್ಮಿಕ ನಂಬಿಕೆಗಳ ಚಿತ್ರೀಕರಣವನ್ನೂ ಪ್ರೇಕ್ಷಕರಿಗೆ ತೋರಿಸಲಾಗುತ್ತದೆ.ಇವೆಲ್ಲವೂ ಚ್ಯಾನಲ್ ನ ಟಿ.ಆರ್.ಪಿ.ಹೆಚ್ಚಿಸುವ ತಂತ್ರಗಳೆಂದು ಬೇರೆ ಹೇಳಬೇಕಾಗಿಲ್ಲ.

೩.ಸ್ಪರ್ಧೆಯಲ್ಲಿ ಖ್ಯಾತ ಹಾಡುಗಾರರು ತೀರ್ಪುಗಾರರಾಗಿ ಬಂದರೂ, ಫಲಿತಾಂಶ ತೀರ್ಮಾನವಾಗುವುದು ಎಸ್.ಎಮ್.ಎಸ್.ಮೂಲಕ.ಹೀಗಾಗಿ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರೂ ಮುಂದಿನ ಹಂತಗಳಿಗೆ ಹೋಗುವ ಅವಕಾಶದಿಂದ ವಂಚಿತರಾಗುತ್ತಾರೆ.

೪.ಹೊಸ ಚಲನಚಿತ್ರ ತೆರೆ ಕಾಣುವುದಿದ್ದಲ್ಲಿ,ಅದರ ನಟ/ನಟಿ/ನಿರ್ದೇಶಕರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ.ಹೊಸ ಚಿತ್ರಗಳು ಹಿಟ್ ಆಗುವಲ್ಲಿ ಇಂತಹ ಜಾಹೀರಾತು ತಂತ್ರಗಳು ಚಿತ್ರತಂಡಕ್ಕೆ ಅಗತ್ಯವೆನಿಸಿವೆ.


೫.ಸತತ ಸಾಧನೆ,ಸ್ವರ,ಲಯ,ತಾಳಗಳ ನಿರಂತರ ಅಭ್ಯಾಸದಿಂದ ಕರಗತವಾಗುವ ವಿದ್ಯೆ -ಸಂಗೀತ.ಇಂತಹ ರಿಯಾಲಿಟಿ ಶೊಗಳು ಜನರಲ್ಲಿ ಹಾಡಬೇಕೆಂಬ ಆಸೆ ಹುಟ್ಟಿಸುವುದು ನಿಜ.ಟಿ.ವಿ.ಯಲ್ಲಿ ತಮ್ಮ ಮಗ/ಮಗಳು ಹಾಡುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಡಿ.ವಿ.ಜಿ.ಯವರು ಹೇಳಿದಂತೆ ’ಮನ್ನಣೆಯ ದಾಹವೀ ಎಲ್ಲಕ್ಕಿಂತ ತೀಕ್ಷ್ಣತಮ!! ’. ಆದರೂ ಇಂತಹ ಸ್ಪರ್ಧೆಗಳು ಜನರಲ್ಲಿ ಕ್ಷಿಪ್ರ ಕಲಿಕೆಯ ಭ್ರಾಂತಿಯನ್ನು ಹುಟ್ಟಿಸುತ್ತವೆ.ನನ್ನ ಸಂಗೀತ ಟೀಚರು ಮೊನ್ನೆ ಹೀಗೇ ಮಾತಾಡುವಾಗ ಅಂದರು "ನನ್ನಲ್ಲಿ ಸಂಗೀತ ಕಲಿಯಲು ಬರುವ ಕೆಲವರದ್ದು ಈ ಪರಿಯ ಪ್ರಶ್ನೆ "ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" ಟೀಚರಂದರಂತೆ "ಸಂಗೀತವೇನೂ ಕ್ರೇಶ್ ಕೋರ್ಸ್ ಅಲ್ಲ..ಇಂತಿಷ್ಟು ದಿನದಲ್ಲಿ ಕಲಿಯಲು."

ಕೆಲವೆಡೆ ಇಂತಹ ಸ್ಪರ್ಧೆಗಳಿಗಾಗಿಯೇ ತರಬೇತಿ ನೀಡಲಾಗುತ್ತದೆ.ಸಂಗೀತದ ಕಲಿಕೆಗಿಂತಲೂ ಕೆಲವು ಹಾಡುಗಳನ್ನು ಹಾಡಲು ಅಭ್ಯಾಸ ಮಾಡಿಸಲಾಗುತ್ತದೆ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಗಮನಾಹ್ರವಾಗಿ ಮುಂದೆ ಬರುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಹೀಗೆಂದು ಬರುವ ಎಲ್ಲರೂ ಇದೇ ರೀತಿ ಎಂದು ನಾನು ಹೇಳುವುದಿಲ್ಲ.ಬಲು ಸೊಗಸಾಗಿ ಹಾಡುವವರೂ ಇದ್ದಾರೆ. ಆದರೆ ರಿಯಾಲಿಟಿ ಶೊದ ಆಯ್ಕೆ ಪ್ರಕ್ರಿಯೆಯು ಎಸ್.ಎಮ್.ಎಸ್.ಮತ್ತು ಪ್ರಚಾರತಂತ್ರಗಳ ಮೇಲೆ ಅವಲಂಬಿತವಾಗಿರುವುದು ವಿಶಾದನೀಯ!!