Pages

Tuesday, March 1, 2016

ಭೀಮಕಾಯ

ನನ್ನ ಅಚ್ಚುಮೆಚ್ಚಿನ   ಕನ್ನಡದ  ಪ್ರಖ್ಯಾತ ಲೇಖಕ  ಎಸ್. ಎಲ್. ಭೈರಪ್ಪ ಕಾದಂಬರಿಗಳ  ಬಗೆಗಿನ ನನ್ನ ಅನಿಸಿಕೆಗಳನ್ನು ಇಲ್ಲಿ ಬರೆಯಬೇಕೆಂದಿದ್ದೇನೆ. ಮೊದಲಿಗೆ ಅವರ ಆರಂಭದ ದಿನಗಳ ಕಾದಂಬರಿ 'ಭೀಮಕಾಯ' ದ ಬಗ್ಗೆ ಶುರುಮಾಡುತ್ತೆನೆ.

ಈ ಕಾದಂಬರಿಯನ್ನು ಅವರು ಬರೆದದ್ದು ತಮ್ಮ ೧೮ ನೆಯ ವಯಸ್ಸಿನಲ್ಲಿ. ಆ ವಯಸ್ಸಿಗೇ ಅವರ   ಪ್ರಭುದ್ಧತೆ ಎಷ್ಟರ ಮಟ್ಟಿಗೆ ಇತ್ತು ಎನ್ನುವುದು ಕಾದಂಬರಿ ಓದಿದಾಗಲೇ ಅರಿವಾಗುತ್ತದೆ.ಭೈರಪ್ಪನವರು ಯಾವುದೇ ಕಾದಂಬರಿಯನ್ನು ಬರೆಯುವಾಗಲೂ ಆ ಸ್ಥಳ ಮತ್ತು ಪಾತ್ರಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿ ಬರೆಯುತ್ತಾರೆ. ಇಲ್ಲಿ ಜಟ್ಟಿಗಳ ಜೀವನ ಶೈಲಿ, ಅವರ ಆಹಾರ ಕ್ರಮ, ಅವರ ಮನೋಭಾವ ಇತ್ಯಾದಿಗಳು ಸುಂದರವಾಗಿ ಚಿತ್ರಿತವಾಗಿವೆ. ಸುಬ್ಬು ಎಂಬ ಕುಸ್ತಿಪಟುವು ಕುಸ್ತಿಯ ಅಭ್ಯಾಸ ಮಾಡಿ, ಅದರಲ್ಲಿ ಗೆಲ್ಲುವುದು ಮತ್ತೆ ಓರ್ವ ಸ್ತ್ರೀಯ ಆಕರ್ಷಣೆಗೆ ಒಳಗಾಗಿ ಅಭ್ಯಾಸವನ್ನು ಬಿಟ್ಟು ಕುಸ್ತಿಯಲ್ಲಿ ಸೋಲುತ್ತಾ ಸಾಗುವುದು, ಮತ್ತೆ ಆತನು ಮರಳಿ ಕುಸ್ತಿಯಾಡಲು ಪಡಬೇಕಾದ ಶ್ರಮ ಇವೆಲ್ಲವೂ ಕಥೆಯ ಮುಖ್ಯ ವಸ್ತು. ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಬೇಕಾದರೆ ಸತತವಾಗಿ ,ಯಾವುದೇ ಆಕರ್ಷಣೆಗೆ ಒಳಗಾಗದೆ ಕಠಿಣ  ಪರಿಶ್ರಮದಿಂದ ನಮ್ಮ ಗುರಿಯತ್ತ ಸಾಗಬೇಕೆನ್ನುವುದು ಇದರ ಮುಖ್ಯ ಸಂದೇಶ.

ಯೌವ್ವನ  ಬಂದಾಗ ಮನಸ್ಸು ಪ್ರೀತಿ ಪ್ರೇಮಗಳ ಆಕರ್ಷಣೆಗೆ ಒಳಗಾಗುವುದು ಸಹಜ. ಸುಬ್ಬುವಿನ ಗೆಳೆಯ ಚಂದ್ರು ಆತನಿಗೆ ಓದಿನ ಸಮಯದಲ್ಲಿ ಮಾತ್ರವಲ್ಲ ಜೀವನದ ಹಲವು ಹಂತಗಳಲ್ಲಿ ಆತನಿಗೆ ಸರಿಯಾದ ಹಾದಿಯನ್ನು ತೋರಿಸಿಕೊಡುತ್ತಾನೆ. ಆತನ ನಿರ್ಮಲ ಸ್ನೇಹವನ್ನು ಅರಿತಾಗ ಮನಸ್ಸು ತುಂಬಿ ಬರುತ್ತದೆ.