ಕಾಶಿ ಯಾತ್ರೆ
ಕಾಶಿಯು ಭಾರತದ ಅತಿ ಪ್ರಾಚೀನವಾದ ಸಾಂಸ್ಕೃತಿಕ ನಗರಿ. ನಮ್ಮ ತೀರ್ಥಕ್ಷೇತ್ರಗಳ ಪೈಕಿ ಕಾಶಿಗಿರುವ ಪಾವಿತ್ರ್ಯ ಬೇರಾವುದಕ್ಕೂ ಇಲ್ಲ. ಗಂಗಾ ನದಿಯ ತಟದಲ್ಲಿರುವ ಈ ಊರು ಭಕ್ತಿ ಭಾವಗಳ ತೊಟ್ಟಿಲು. ಗಂಗೆಯು ಅನಾದಿ ಕಾಲದಿಂದಲೂ ಭಕ್ತರ ಪಾಪಗಳನ್ನು ತೊಳೆಯುತ್ತಾ ಬಂದಿದ್ದಾಳೆ. ಭಕ್ತರು, ಪಾಂಡಾಗಳು, ಪೂಜಾರಿಗಳು, ಸಾಧುಗಳು, ದೇಶ-ವಿದೇಶಗಳ ಪ್ರವಾಸಿಗಳು ಕಾಶಿಯ ಓಣಿಗಳ ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ.
ಸಾಮಾನ್ಯವಾಗಿ ಹಿಂದೂಗಳೆಲ್ಲ ಜೀವನದಲ್ಲಿ ಒಂದು ಸಲವಾದರೂ ಕಾಶಿಯನ್ನು ನೋಡಿದರೇನೇ ಜನ್ಮ ಸಾರ್ಥಕ. ಪಿತೃಗಳಿಗೆ ಮೋಕ್ಷ ಕರುಣಿಸುವುದಕ್ಕಂತೂ ಇದು ಹೇಳಿಮಾಡಿಸಿದಂಥ ಸ್ಥಳ. ಸಾವಿರಾರು ವರ್ಷಗಳ ಹಿಂದೆ ಶ್ರವಣಕುಮಾರನು ತನ್ನ ತಾಯ್ತಂದೆಗಳನ್ನು ಅಡ್ಡೆಯಲ್ಲಿ ಹೊತ್ತುಕೊಂಡು ಹೋಗಿ ಕಾಶಿ ಯಾತ್ರೆ ಮಾಡಿಸಿದ್ದು ಪುರಾಣ ಪ್ರಸಿದ್ಧ. ಮದುವೆಯ ಸಂದರ್ಭದಲ್ಲಿ ವರನು ಕಾಶಿಯಾತ್ರೆಗೆ ಹೋಗುತ್ತೇನೆ ಎನ್ನುವುದು, ಅವನ ಮಾವನು ಆತನನ್ನು ತಡೆದು, 'ಅಯ್ಯಯ್ಯೋ, ಸದ್ಯಕ್ಕೆ ಕಾಶಿಗೆ ಹೋಗಬೇಡ. ಮದುವೆ ಮಾಡಿಸ್ತೀನಿ' ಎನ್ನುವುದು ಹಿಂದೂಗಳಲ್ಲಿ ಒಂದು ವಿನೋದಮಯ ಸಂಪ್ರದಾಯ.
ಎಸ್.ಎಲ್. ಭೈರಪ್ಪನವರ ಐತಿಹಾಸಿಕ ಕಾದಂಬರಿಗಳಲ್ಲಿ ಒಂದಾದ 'ಸಾರ್ಥ'ವನ್ನು ಓದಿದ್ದೀರ? ಅದರಲ್ಲಿ ಎಂಟನೇ ಶತಮಾನದಲ್ಲಿ ಕಾಶಿಗೆ ಅಧ್ಯಯನ ಮಾಡುತ್ತೇನೆಂದು ಹೇಳಿ, ಸಾರ್ಥದ ಜತೆ ನಾಗಭಟ್ಟನೆಂಬ ಪಂಡಿತನು ಮಾಡುವ ಪಯಣದ ಚಿತ್ರಣಅತ್ಯದ್ಭುತವಾಗಿದೆ. ಅವರ ಇನ್ನೊಂದು ಐತಿಹಾಸಿಕ ಕಾದಂಬರಿ 'ಆವರಣ'ದಲ್ಲೂ ಕಾಶಿಯ ಇತಿಹಾಸ ಎಳೆಎಳೆಯಾಗಿದೆ.
***
ನಾನು ಕಾಶಿಗೆ ಹೋಗಿದ್ದು ಬೆಂಗಳೂರು-ವಾರಣಾಸಿ ವಿಮಾನದಲ್ಲಿ. ಬೆಂಗಳೂರಿನಿಂದ ದೆಹಲಿಗೆ ಹೋಗಿ, ಅಲ್ಲಿಂದ ವಾರಣಾಸಿಗೆ ಇನ್ನೊಂದು ವಿಮಾನ ಹಿಡಿಯಬೇಕು.
ನಾವು ಮೊದಲ ದಿನ ಹೊರಟಿದ್ದು ಕಾಶಿ ವಿಶ್ವನಾಥನ ದರ್ಶನಕ್ಕೆ. ದೇಗುಲದ ಹೊರಗಿನ ಪುಟ್ಟ ಗಲ್ಲಿಯುದ್ದಕ್ಕೂ ಹೂವು, ಹಾಲಿನ ಪುಟ್ಟ ಕುಡಿಕೆಗಳ ಅಂಗಡಿಗಳ ಸಾಲು. ಮಂದಿರದ ಒಳಗೆ ಮೊಬೈಲ್, ಕ್ಯಾಮರಾ ನಿಷಿದ್ಧ. ಪ್ರತಿಯೊಬ್ಬರನ್ನೂ ತಪಾಸಣೆಗೊಳಪಡಿಸಿದ ಮೇಲೆಯೇ ದೇಗುಲದ ಒಳಗೆ ಹೋಗುವ ಅವಕಾಶ. ನಾವು ಬೆಳಗಿನ ಜಾವ ನಾಲ್ಕೂವರೆಗೆ ಹೋದ ಕಾರಣ ದರ್ಶನವು ಅತಿ ಸುಲಭವಾಗಿ ಆಯಿತು.
ಕಾಶಿ ವಿಶ್ವನಾಥನ ಯಾರಿಗೆ ಗೊತ್ತಿಲ್ಲ? ಆದರೆ ಅದೊಂದು ಬೃಹದ್ಭವ್ಯ ದೇವಾಲಯವೆಂದುಕೊಂಡು ಹೋಗಬೇಡಿ. ಅದೊಂದು ಪುಟ್ಟ ಮಂದಿರ. ಇದಕ್ಕೆ ನಾಲ್ಕು ಕಡೆಗೂ ಬಾಗಿಲುಗಳಿವೆ.ಇಲ್ಲಿ ನಾವು ಈಶ್ವರನ ಲಿಂಗವನ್ನು ಕೈಯಿಂದ ಸ್ಪರ್ಶಿಸಿ ಪೂಜಿಸಬಹುದು. ಹಾಲಿನ ಅಭಿಷೇಕ ಮಾಡಬಹುದು. ಪಕ್ಕದಲ್ಲೇ ಜ್ಞಾನವ್ಯಾಪಿ ಮಸೀದಿ ಇದೆ. ಹೆಚ್ಚಿನ ಕಡೆಗಳಲ್ಲೆಲ್ಲಾ ಪೋಲೀಸರ ಸರ್ಪಗಾವಲು ಇದ್ದೇಇದೆ.
ಬಳಿಕ ನಾವು ಹೊರಟದ್ದು ಸಂಕಟಮೋಚನ ಹನುಮಾನ್ ಮಂದಿರಕ್ಕೆ.ಅಲ್ಲಿ ಹನುಮಾನ್ ಚಾಲೀಸಾದ ಪುಸ್ತಕಗಳನ್ನು ಇಟ್ಟಿರುತ್ತಾರೆ. ನಾವು ಅದನ್ನು ಪಠಿಸಿ ವಾಪಸು ಅಲ್ಲಿಯೇ ಇಡಬಹುದು.ಉತ್ತರ ಭಾರತದಲ್ಲಿ ಹನುಮಂತನ ಆರಾಧನೆ ವಿಶೇಷ. ನಮ್ಮನ್ನು ಅಲ್ಲಿಗೆ ಕರೆದೊಯ್ದ ಟ್ಯಾಕ್ಸಿಯ ಚಾಲಕ ಕೆಲವು ವರ್ಷಗಳ ಹಿಂದೆ ಅಲ್ಲಿ ನಡೆದ ಬಾಂಬ್ ಸ್ಫೋಟದ ಪ್ರತ್ಯಕ್ಷದರ್ಶಿಯಾಗಿದ್ದ. ಅದರ ಕತೆಯನ್ನು ಕೇಳಿದಾಗ ಮನಸ್ಸು ವ್ಯಾಕುಲಗೊಂಡಿತು.
ಕಾಶಿಯಲ್ಲಿರುವ ಮಂದಿರಗಳು ಅಸಂಖ್ಯ. ನಾವು ಅಲ್ಲಿಗೆ ಹೋಗಿದ್ದು ನವರಾತ್ರಿಯ ಹೊತ್ತಿನಲ್ಲಿ. ಆಗ ಅಲ್ಲಿ ಸಂಜೆ 'ಗಂಗಾ ಆರತಿ'ಯ ಕಾರ್ಯಕ್ರಮವಿತ್ತು. ಐದು ಜನರು ವಿಶಿಷ್ಟವಾದ ಸಾಂಪ್ರದಾಯಿಕ ಉಡುಪು ಧರಿಸಿ, ಗಂಗಾ ಮಾತೆಗೆ ಆರತಿ, ನೃತ್ಯ, ಭಜನೆ ಮಾಡುತ್ತಾರೆ. ಸಂಜೆಯ ಮಬ್ಬು ಬೆಳಕಿನಲ್ಲಿ ಸುಮಾರು ಎರಡು ಅಡಿ ಎತ್ತರದ ದೀಪದ ಆರತಿ, ಧೂಪದ ಹೊಗೆ, ಬೆಳಕಿನ ನೃತ್ಯದ ಹಿನ್ನೆಲೆಯಲ್ಲಿ ಗಂಗಾ ಮಾತೆಯ ಭಜನೆ ಸುಶ್ರಾವ್ಯವಾಗಿರುತ್ತದೆ. ಇವೆಲ್ಲಕ್ಕೂ ಹಿನ್ನೆಲೆಯಾಗಿ ಗಂಭೀರವಾಗಿ ಹರಿಯುತ್ತಿರುತ್ತಾಳೆ ಗಂಗೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅದೊಂದು ಅಲೌಕಿಕ ಅನುಭವ.
ಕಾಶಿಯಲ್ಲಿ ಗಂಗಾ ನದಿಯ ಉದ್ದಕ್ಕೂ 70ಕ್ಕೂ ಹೆಚ್ಚು ಘಾಟ್ಗಳಿವೆ. ದಶಾಶ್ವಮೇಧ ಘಾಟ್, ಪ್ರಯಾಗ್ ಘಾಟ್, ಮಣಿಕರ್ಣಿಕಾ ಘಾಟ್ ಹೀಗೆ ಅವುಗಳ ಹೆಸರೇ ಒಂದೊಂದು ಪೌರಾಣಿಕತೆಯನ್ನು ಹೊತ್ತುಕೊಂಡಿವೆ. ಜನರ ಸ್ನಾನ, ಜಪ-ತಪ, ಧಾರ್ಮಿಕ ವಿಧಿವಿಧಾನಗಳೆಲ್ಲ ಜರುಗುವುದು ಇಲ್ಲೇ. ಇಲ್ಲಿರುವ ಹರಿಶ್ಚಂದ್ರ ಘಾಟ್ನಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಬಿಡುವಿಲ್ಲದೆ ಶವ ಸಂಸ್ಕಾರ ನಡೆಯುತ್ತಿರುತ್ತದೆ. ಪ್ರಯಾಗ್ ಘಾಟ್ನಲ್ಲಿ ಮಿಂದರೆ ಗಂಗಾ-ಯುಮನಾ-ಸರಸ್ವತಿ ನದಿಗಳ ಸಂಗಮ ಸ್ಥಳವಾದ ಪ್ರಯಾಗದಲ್ಲೇ ಮಿಂದಷ್ಟು ಪುಣ್ಯವಂತೆ. ನಾರದ ಘಾಟ್ ನಲ್ಲಿ ಪತಿ-ಪತ್ನಿ ಒಟ್ಟಿಗೆ ಗಂಗಾ ಸ್ನಾನ ಮಾಡಿದರೆ ಅವರಿಬ್ಬರ ನಡುವೆ ಡಿಶುಂ ಡಿಶುಂ ಗ್ಯಾರಂಟಿಯಂತೆ! ಅಲ್ಲಿ ಒಂದೆರಡು ದೋಣಿಗಳನ್ನು ಬಿಟ್ಟರೆ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ದೋಣಿಯಲ್ಲಿ ಎಲ್ಲಾ ಘಾಟ್ಗಳಿಗೂ ಒಂದು ಸುತ್ತು ಹಾಕಿ ಬರಬಹುದು. ನಮ್ಮನ್ನು ಕರೆದೊಯ್ದ ಅಂಬಿಗ ನಮ್ಮ ಪಯಣದ ಉದ್ದಕ್ಕೂ ಗಂಗೆಯ ಬಗ್ಗೆ ಮಾತಾಡುತ್ತಿದ್ದ. ಇವರ ಜೀವನ ಗಂಗಾ ನದಿಯ ಜತೆ ಎಷ್ಟು ಮಿಳಿತವಾಗಿದೆಯೆಂದರೆ ಗಂಗೆಯೇ ಇವರ ಜೀವನವಾಗಿದೆ.
ಕಾಶಿಯು ಹಿಂದೂಗಳಿಗಷ್ಟೇ ಅಲ್ಲ ಬೌದ್ಧರಿಗೂ ಪವಿತ್ರ ಸ್ಥಳ. ಕಾಶಿಯಿಂದ 13 ಕಿ.ಮೀ. ದೂರದಲ್ಲಿರುವ ಸಾರನಾಥದಲ್ಲಿ ಧಮೇಕ ಸ್ತೂಪವಿದೆ. ಇದರ ಎತ್ತರ 128 ಅಡಿ , ವ್ಯಾಸ 93 ಅಡಿ. ಬೌದ್ಧ ವಿಹಾರಗಳ ಅವಶೇಷಗಳೂ ಇಲ್ಲಿ ಉತ್ಖನನದ ನಂತರ ಸಿಕ್ಕಿವೆ. ಗೌತಮ ಬುದ್ಧನು ಮೊದಲ ಬಾರಿಗೆ ಧರ್ಮೋಪದೇಶ ಮಾಡಿದ ಊರು ಇದೇ. ಇದು ಇಡಿಯಾಗಿ ಪುರಾತತ್ವ ಇಲಾಖೆಗೆ ಸೇರಿದ ಸ್ಥಳವಾಗಿದೆ. ಮೂಲಗಂಧ ಕುಟಿ ಎಂಬ ಬೌದ್ಧ ದೇವಾಲಯವೂ ಸಾರನಾಥದಲ್ಲಿದೆ. ಇಲ್ಲಿ ಸಾರನಾಥ ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ. ನಮ್ಮ ರಾಷ್ಟ್ರಚಿಹ್ನೆಯಾದ ಅಶೋಕ ಸ್ತಂಭದ ಮೂಲ ರೂಪ ಇಲ್ಲಿದೆ. ಪಕ್ಕದಲ್ಲೇ ಜೈನ ಮಂದಿರವಿದೆ. ಇದು ಅವರ 13ನೇ ತೀರ್ಥಂಕರನ ಊರು.
ಕಾಶಿಯಲ್ಲಿ ಹಾಲು, ಹಾಲಿನ ಉತ್ಪನ್ನಗಳು ಹೇರಳ. ಇಲ್ಲಿಯ ಮೊಸರಂತೂ ನಮ್ಮ ಕಡೆ ಸಿಗುವ ಬೆಣ್ಣೆಯಷ್ಟು ಗಟ್ಟಿ!
Add caption |
ಇಷ್ಟೆಲ್ಲ ದೊಡ್ಡ ಹೆಸರಿರುವ ಕಾಶಿಯ ರಸ್ತೆಗಳು ಮಾತ್ರ ಆ ವಿಶ್ವವಾಥನಿಗೇ ಪ್ರೀತಿ! ಕಾಶಿಯಲ್ಲಿ ಎಲ್ಲೇ ದೇವಸ್ಥಾನಕ್ಕೆ ಹೋದರೂ ಪಾಂಡಾಗಳು ನಮ್ಮ ಬೆನ್ನ ಹಿಂದೆಯೇ ಬರುತ್ತಿರುತ್ತಾರೆ.ಹಾಗಾಗಿ ನಾವು ಕೆಲವೊಮ್ಮೆ ನಮ್ಮ ಬೆನ್ನ ಹಿಂದೆ ಬರಬೇಡಿ ಎಂದು ಗದರಿಸಿಯೇ ಹೇಳಬೇಕಾಗುತ್ತದೆ! ಕಾಶಿ ಯಾತ್ರೆ ಮುಗಿಸಿಕೊಂಡು ಮರಳಿ ಬೆಂಗಳೂರಿಗೆ ಬಂದಾಗ ಮನಸ್ಸಲ್ಲೇನೋ ಒಂದು ರೀತಿಯ ಸಮ್ಮಿಶ್ರ ಭಾವನೆ. ಆಗ ಹಳೆಯ ಕಾಶಿ ಹೇಗಿದ್ದಿರಬಹುದು ಎಂದು ತಿಳಿಯಲು ಮತ್ತೊಮ್ಮೆ 'ಆವರಣ'ವನ್ನು ತಿರುವಿ ಹಾಕಿದೆ.
(ಇವತ್ತಿನ ವಿಜಯಕರ್ನಾಟಕ ದಲ್ಲಿ ಪ್ರಕಟಿತ )
2 comments:
Thanks Archana,for a comprehensive narration. I have read `Sarth' by Bhairappa. It is my favourite novel.
Thank you very much Kaka
Post a Comment