ಭೂತಾನ್ ಪ್ರವಾಸ ಕಥನ
---------------------------
-ಅರ್ಚನಾ ಹೆಬ್ಬಾರ್,ಬೆಂಗಳೂರು
"ಅಲ್ಲ ಮಹಾರಾಯ್ತೀ, ಹೋಗಿ ಹೋಗಿ ಭೂತಾನಕ್ಕೆ ಹೊರಟು ನಿಂತಿದ್ದೀಯಲ್ಲಾ. ನಿಂಗೆ ಬೇರೆ ಯಾವ ದೇಶವೂ ಸುತ್ತಲಿಕ್ಕೆ ಸಿಗಲಿಲ್ಲ್ವಾ?" ಅಂತ ಗೆಳತಿ ಛೇಡಿಸಿದಳು. ಹೌದು, ವಿಶ್ವದ ನಕಾಶೆಯಲ್ಲಿ ಅಷ್ಟೇನೂ ಗಮನಾರ್ಹವಾಗಿ ಗೋಚರಿಸದಿರುವ, ಬಾಲಿವುಡ್, ಸ್ಯಾಂಡಲ್ ವುಡ್ ಗಳ ಕಣ್ಣಿಗೆ ಅಷ್ಟಾಗಿ ಬೀಳದಿರುವ ಭೂತಾನದ ಬಗ್ಗೆ, ಅಲ್ಲಿಗೆ ಪ್ರವಾಸ ಹೊರಟಿದ್ದೇನೆ ಎಂದಾಗ ಜನರ ಪ್ರತಿಕ್ರಿಯೆ ಈ ಪರಿಯಾಗಿ ಇರುವುದು ಅಚ್ಚರಿಯೇನಲ್ಲ. ನಾನು ಹಾಗೇ ಸುಮ್ಮನೆ ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಭೂತಾನದ ಬಗ್ಗೆ ಓದಿದೆ. ನಮ್ಮ ನೆರೆಯ ದೇಶವೇ. ಹೆಚ್ಚೇನು ದೂರವಿಲ್ಲ. ಹಿಮಾಲಯ ಪರ್ವತ ಶ್ರೇಣಿಯಿಂದ ಆವೃತವಾದ, ರಮಣೀಯ ಪುಟ್ಟ ದೇಶದ ಬಗ್ಗೆ ಏಕೋ ಅವ್ಯಕ್ತ ಕುತೂಹಲ ಮೂಡಿತು. ಅಲ್ಲಿಯ ಸುಂದರ ಚಿತ್ರದಂತಿರುವ ಛಾಯಾಚಿತ್ರಗಳು, ಬೌದ್ಢ ಮಂದಿರಗಳು, ಅಲ್ಲಿನ ವಿಶಿಷ್ಟ ಉಡುಪು, ರಾಜನ ಆಳ್ವಿಕೆ, ನ್ಯಾಶನಲ್ ಹೆಪ್ಪಿನೆಸ್ಸ್ ಇಂಡೆಕ್ಸ್ ಇವುಗಳ ಬಗ್ಗೆ ತಿಳಿದಾಗ ಇದೊಂದು ಕನಸಿನ ಊರೇ ಸೈ, ಇಲ್ಲಿಗೆ ಭೇಟಿ ನೀಡಲೇಬೇಕೆಂಬ ಉತ್ಕಟ ಹಂಬಲವುಂಟಾಯಿತು. ಸರಿ ಇನ್ನೇಕೆ ತಡ ಎಂದು ಅಲ್ಲಿಯ ಮತ್ತಷ್ಟು ವಿವರಗಳನ್ನು ಸಂಗ್ರಹಿಸಲಾರಂಭಿಸಿದೆ.
ಭೂತಾನ ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶ. ಜನಸಂಖ್ಯೆ ಸುಮಾರು ೬ ಲಕ್ಷ. ಸುತ್ತಲೂ ಹಿಮಾಲಯ ಪರ್ವತ ಶ್ರೇಣಿ, ಹೆಜ್ಜೆ ಹೆಜ್ಜೆಗೂ ಕಾಣಸಿಗುವ ತೊರೆಗಳು, ಸ್ಫಟಿಕ ಶುಭ್ರ ನೀರಿನ ನದಿಗಳು, ಧುಮ್ಮಿಕ್ಕುವ ಜಲಧಾರೆಗಳು, ಎತ್ತ ನೋಡಿದರೂ ಪ್ರಕೃತಿ ಮಾತೆಯ ಅನನ್ಯ ಸೌಂದರ್ಯದ ಮಡಿಲು, ಝರಿಗಳ ನಿನಾದ ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಕಲ್ಪನೆಯಲ್ಲಿರುವ ಸ್ವರ್ಗ ಸದೃಶ ವಾತಾವರಣ.
ಹೋಗುವುದು ಹೇಗೆ?
ವಾಯುಮಾರ್ಗವಾಗಿ ಹೋಗುವುದಾದರೆ ಕೊಲ್ಕೊತ್ತ ದಿಂದ ಭೂತಾನದ ಪಾರೊ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಥವಾ ದೆಹಲಿ ಮೂಲಕ ಪಾರೊ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬಹುದು. ಪಶ್ಚಿಮ ಬಂಗಾಳದ ಶಿಲಿಗುರಿಯಿಂದ ಬಸ್ ಪ್ರಯಾಣದ ಮೂಲಕವೂ ಭೂತಾನದ ಗಡಿಯಲ್ಲಿರುವ ಫ್ಹುಎನ್ತ್ಶೊಲಿನ್ಗ್ ತಲುಪಬಹುದು.
ಪ್ರವಾಸಕ್ಕೆ ತಯಾರಿ
ಭೂತಾನ ಪ್ರವಾಸ, ವಸತಿ, ಊಟ ಇತ್ಯಾದಿಗಳ ಬಗ್ಗೆ ಮತ್ತಷ್ಟು ವಿವರಗಳನ್ನು ಸಂಗ್ರಹಿಸಿದೆ. ಅಲ್ಲಿಯ ಪ್ರವಾಸೋದ್ಯಮವು ರಾಜನ ಹತೋಟಿಯಲ್ಲಿದೆ. ರಾಜನಿಂದ ಅನುಮತಿ ಪಡೆದ ಟೂರ್ ಆಪರೇಟರಿಗೆ ಮುಂಗಡ ಹಣ ನೀಡಿ ಪ್ರವಾಸವನ್ನು ಆಯೋಜಿಸಬಹುದು. ಅಲ್ಲಿಯ ಹಲವಾರು ಬೌದ್ಧ ಧರ್ಮ ಕೇಂದ್ರಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದ ಕಚೇರಿಗಳಿಗೆ ಭೇಟಿನೀಡಲು ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಸ್ವ ಆಯೋಜಿತ ಪ್ರವಾಸದಲ್ಲಿ ಈ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಟೂರ್ ಆಪರೇಟರ್ ಮೂಲಕ ಪ್ರವಾಸ ಹೋದರೆ ಅವರೇ ಆ ಎಲ್ಲ ಪ್ರವಾಸ, ಊಟ, ವಸತಿ ವ್ಯವಸ್ಥೆಗಳನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿರುತ್ತಾರೆ.
ಭಾರತಕ್ಕೂ ಅಲ್ಲಿಗೂ ಅರ್ಧ ಗಂಟೆಯ ಕಾಲಮಾನ ವ್ಯತ್ಯಾಸ. ಇಲ್ಲಿನ ಬೆಳಗ್ಗಿನ ಒಂಭತ್ತು ಗಂಟೆ ಅಲ್ಲಿಯ ಬೆಳಗ್ಗಿನ ಒಂಭತ್ತುವರೆ ಗಂಟೆ. ಭೂತಾನದ ರಾಜಧಾನಿ: ತಿಂಪು. ಅಲ್ಲಿನ ಕರೆನ್ಸಿ: ನು (ನುಲ್ಡ್ರಮ್ ). ೧ ನು ಎಂದರೆ ೧ ರೂಪಾಯಿಗೆ ಸಮ. ಭಾರತೀಯ ಕರೆನ್ಸಿ ೧೦೦ ರೂ ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳನ್ನು ಆಲ್ಲಿ ಚಲಾಯಿಸಬಹುದು. ನೂರಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ನಾವು ಇಲ್ಲಿಂದ ಕೊಂಡೊಯ್ಯುವಂತಿಲ್ಲ. ಭಾರತೀಯರಿಗೆ ಅಲ್ಲಿಗೆ ಹೋಗಲು ಪಾಸ್ ಪೋರ್ಟ್ ಮಾತ್ರ ಇದ್ದರೆ ಸಾಕು. ವೀಸಾದ ಅಗತ್ಯವಿಲ್ಲ.
ಆಗಸ್ಟ್ ನಿಂದ ನವಂಬರ್, ಮಾರ್ಚ್ ನಿಂದ ಮೇ ಭೂತಾನನ್ನು ಸಂದರ್ಶಿಸಲು ಅತ್ಯುತ್ತಮ ಸಮಯ. ಕೊರೆಯುವ ಚಳಿ ಇರುವುದಿಲ್ಲವಾದರೂ ತಕ್ಕಷ್ಟು ಬೆಚ್ಚನೆಯ ವಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಒಳಿತು. ಪ್ರವಾಸದ ಬಗ್ಗೆ ಸಾಕಷ್ಟು ವಿವರಗಳನ್ನು ಕಲೆ ಹಾಕಿದ ಬಳಿಕ ನಾನು ಮತ್ತು ನನ್ನ ಪತಿ ಭೂತಾನ್ ಮೌಂಟೆನ್ ಹೊಲಿಡೇಸ್ ನಲ್ಲಿ ಪ್ರವಾಸವನ್ನು ಕಾದಿರಿಸಿದೆವು. http://www.bhutanmountainholiday.com/
ಬೆಂಗಳೂರು-ಕೊಲ್ಕೊತ-ಪಾರೋ ಮಾರ್ಗವಾಗಿ ಭೂತಾನ್ ತಲುಪಿದೆವು. ಭೂತಾನದಲ್ಲಿರುವುದು ಒಂದೇ ಒಂದು ವಿಮಾನದ ಕಂಪನಿ. ಡ್ರಕ್ ಏರ್ ವೇಸ್. ಭೂತಾನ್ ಹತ್ತಿರವಾಗುತ್ತಿದ್ದಂತೆ ವಿಮಾನದಿಂದ ಬಗ್ಗಿ ನೋಡಿದೆ. ಅಹಾ! ಏನಿದು ಅದ್ಭುತ ಪ್ರಪಂಚ! ಹಚ್ಚ ಹಸಿರಿನ ಹೊದಿಕೆ ಹೊದ್ದ ಭೂಮಿ ತಾಯಿ. ಮೇಲೆ ತೇಲಾಡುವ ಮೋಡಗಳು ಹಸಿರಿನ ಮೇಲೆ ಮತ್ತೊಂದು ಹೊದಿಕೆ ಹೊದಿಸಿದಂತೆ. ನಮ್ಮನ್ನು ಕರೆದೊಯ್ದ ವಿಮಾನ ಪಾರೋ ವಿಮಾನ ನಿಲ್ದಾಣದಲ್ಲಿ ಇಳಿದಾಗ ಬೇರೆಯೇ ಲೋಕಕ್ಕೆ ಬಂದ ಅನುಭವ. ನಮ್ಮ ಟೂರ್ ಗೈಡ್ ಚಿಮ್ಮಿ ರಿನ್ ಜ಼ಿನ್ ನಮಗೋಸ್ಕರ ಅಲ್ಲಿ ಕಾಯುತ್ತಿದ್ದ. ನಾವು ಪಾರೋ ನ ಹೋಟಲ್ ಒಂದನ್ನು ತಲುಪಿದೆವು.
ಪಾರೊ ಒಂದು ಸಣ್ಣ ಪಟ್ಟಣ. ಇದು ಪಾರೋ ಛು (ಪಾರೋ ನದಿ) ದಡದಲ್ಲಿದೆ. ಕಲಾವಿದನೋರ್ವ ಸೌಂದರ್ಯದ ಕಲ್ಪನೆಯನ್ನು ಅಚ್ಚಿನಲ್ಲಿ ಎರಕ ಹೊಯ್ದು ಮಾಡಿದಂತಿದೆ ಈ ಪುಟ್ಟ ನಗರ. ಪಾರೋ ನದಿಯ ದಡದ ಉದ್ದಕ್ಕೂ ಪ್ರಯಾಣ ಮಾಡುವುದೇ ಒಂದು ಸುಂದರ ಅನುಭವ. ಹೋಟೆಲ್ ತಲುಪಿ ಅಲ್ಲಿ ಸಾಂಪ್ರದಾಯಿಕ ಭೂತಾನಿ ಭೋಜನವನ್ನು ಮಾಡಿದೆವು. ಇಲ್ಲಿ ಅನ್ನ, ಚೀಸ್ ಮತ್ತು ಹಸಿ ಮೆಣಸು ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ಪಡೆದಿದೆ. ಎಮ್ಮ ದಾಸಿ (ಹಸಿ ಮೆಣಸು, ಚೀಸ್ ನ ಪಲ್ಯ), ಕಿವೊ ದಾಸಿ (ಬಟಾಟೆ-ಚೀಸ್) ಮುಂತಾದವು ಇಲ್ಲಿಯ ಪ್ರಮುಖ ಖಾದ್ಯಗಳು. ಬಳಿಕ ನಾವು ಪಾರೋ ನ್ಯಾಶನಲ್ ಮ್ಯೂಸಿಯಮ್ಮಿಗೆ ಭೇಟಿ ನೀಡಿದೆವು.
ಭೂತಾನಿನ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ವಸ್ತುಗಳನ್ನು ಈ ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ವಸ್ತ್ರಗಳು, ಪಾತ್ರೆ, ಒಡವೆ, ರಾಜರಿಗೆ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧ ಪಟ್ಟ ವಸ್ತುಗಳನ್ನು ಇಲ್ಲಿ ನೋಡಬಹುದು. ಮ್ಯೂಸಿಯಂ ಆರು ಮಹಡಿಗಳ ಕಟ್ಟಡ. ಭೂತಾನಿನ ವಿಶೇಷವೆಂದರೆ ಅಲ್ಲಿ ಆರು ಮಹಡಿಗಳಿಗಿಂತ ಹೆಚ್ಚು ಮಹಡಿಗಳ ಕಟ್ಟಡವನ್ನು ಕಟ್ಟುವಂತಿಲ್ಲ. ಭೂಕಂಪದ ಕೇಂದ್ರವಾಗಿರುವುದರಿಂದ ಈ ಪರಿಯ ನಿಯಮವೆಂದು ಗೈಡ್ ವಿವರಿಸಿದ. ಮ್ಯೂಸಿಯಂ ನೋಡಿದ ಬಳಿಕ ನಾವು ಪಾರೋ ತ್ಸಾಂಗ್ ಗೆ (Dzong) ಹೋದೆವು. ಇದು ಹದಿನಾರನೇ ಶತಮಾನದಲ್ಲಿ ಕಟ್ಟಲಾದ ಕೋಟೆ. ಇಲ್ಲಿ ಪಾರೋ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾ ಕಛೇರಿ ಇದೆ. ಭೂತಾನದ ಕಟ್ಟಡಗಳೆಲ್ಲ ಭೂತಾನಿ ಶೈಲಿಯನ್ನು ಹೊಂದಿವೆ. ಏರ್ ಪೋರ್ಟ್, ಅಂಗಡಿಗಳು, ಹೋಟೆಲ್ ಎಲ್ಲವೂ ಭೂತಾನಿ ಶೈಲಿಯಲ್ಲಿಯೇ ಕಟ್ಟಲ್ಪಟ್ಟಿವೆ. ಭೂತಾನದ ೭೦% ಕ್ಕೂ ಹೆಚ್ಚಿನ ಭಾಗ ಅರಣ್ಯದಿಂದ ಆವೃತವಾಗಿರುವುದರಿಂದಲೋ ಎನೋ ಇಲ್ಲಿಯ ಕಟ್ಟಡಗಳಲ್ಲಿ ಮರದ ಬಳಕೆ ಅತೀ ಹೇರಳ. ಆದರೆ ಮರಗಳು ಬೇಕಾದಷ್ಟಿವೆ ಎಂದು ಯದ್ವಾ ತದ್ವಾ ಮರ ಕಡಿಯುವಂತಿಲ್ಲ. ಮನೆಯ ನಕ್ಷೆ ಗೆ ಅನುಗುಣವಾಗಿ ಸರಕಾರದಿಂದ ಸೂಚಿಸಲ್ಪಟ್ಟ ಸಂಖ್ಯೆಯ ಮರಗಳನ್ನು ಕಡಿಯಲು ಮಾತ್ರ ಇಲ್ಲಿ ಅವಕಾಶ ಇರುವುದು!
ಪಾರೋವನ್ನು ಸುತ್ತಿ ಮರುದಿನ ನಾವು ಹೊರಟದ್ದು "ತಕ್ತ್ ಶಂಗ್" ಮೊನಾಸ್ಟರಿಗೆ. ಇದನ್ನು ಟೈಗರ್ ನೆಸ್ಟ್ ಎಂತಲೂ ಕರೆಯುತ್ತಾರೆ. ಇದು ರುದ್ರ ರಮಣೀಯ ತಾಣ. ಇದಕ್ಕೆ ಹಿನ್ನೆಲೆಯಾಗಿ ಬೌದ್ಧ ಮುನಿ ಗುರು ರೆಂಪೊಚೆಯ (ಪದ್ಮ ಸಂಭವ) ಕಥೆ ಇದೆ. ಈತನು ಹುಲಿಯ ಮೇಲೆ ಹತ್ತಿ ಬಂದು ಈ ಬೌದ್ಧ ಮಂದಿರವನ್ನು ಕಟ್ಟಿದ್ದಾನೆ ಎಂಬ ಪ್ರತೀತಿ. ಇನ್ನೊಂದು ಕಥೆಯ ಪ್ರಕಾರ ಯೆಶೆ ತ್ಯೊಗ್ಯಾಲ್ ಎಂಬ ರಾಣಿಯು ಗುರು ರೆಂಪೊಚೆಯ ಶಿಷ್ಯೆಯಾದಳು. ಬಳಿಕ ಹುಲಿಯ ರೂಪವನ್ನು ತಾಳಿ, ತನ್ನ ಗುರುವನ್ನು ಟಿಬೆಟ್ ನಿಂದ ಇಲ್ಲಿಗೆ ಕರೆದೊಯ್ದಳು ಎಂಬ ನಂಬಿಕೆಯಿದೆ. ಗುರು ರೆಂಪೊಚೆಯು ಇಲ್ಲಿಯ ಗುಹೆಯಲ್ಲಿ ತಪಸ್ಸು ಮಾಡಿ, ಎಂಟು ಅವತಾರಗಳನ್ನು ತಾಳಿದರೆಂದು ಬೌದ್ಧ ಧರ್ಮೀಯರು ನಂಬುತ್ತಾರೆ. ಅಂತೆಯೇ ಇದು ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ೧೬೯೨ ರಲ್ಲಿ ಇಲ್ಲಿ ತೆನ್ಜ಼ಿನ್ ರಬ್ಗ್ಯೆ (ಗುರು ರೆಂಪೊಚೆಯ ಅವತಾರ) ಇಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದ. ೧೯೯೮ ರಲ್ಲಿ ಒಮ್ಮೆ ಇದು ಬೆಂಕಿಗೆ ಭಾಗಶಹ ಆಹುತಿಯಾಗಿತ್ತು. ಇದನ್ನು ಪುನರ್ನಿರ್ಮಿಸಲಾಯಿತು.
ಇದು ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಇದು ಪರ್ವತದ ಮಧ್ಯದಲ್ಲಿ ಅಂಚಿನಲ್ಲಿದೆ. ಇದನ್ನು ತಲುಪಬೇಕಾದರೆ ಕಾಲ್ನಡಿಗೆ ಅಥವಾ ಕುದುರೆಯ ಮೂಲಕ ಸಾಗಬೇಕು. ಕುದುರೆ ಅರ್ಧ ದಾರಿ ಮಾತ್ರ ನಮ್ಮನ್ನು ಕರೆದೊಯ್ಯುತ್ತದೆ. ನಾವು ಕುದುರೆಯ ಮೇಲೆ ಕುಳಿತೆವು. ಇದು ಪರ್ವತದ ಅಂಚಿನಲ್ಲಿ ಸಾಗುತ್ತದೆ. ಕೆಳಗಡೆ ಯಂತೂ ಅತಿ ದೊಡ್ಡ ಪ್ರಪಾತ. ಹೇಗಾದರೂ ಸರಿ ಟೈಗರ್ ನೆಸ್ಟ್ ಸಸೂತ್ರವಾಗಿ ತಲುಪಿದರೆ ಸಾಕಪ್ಪಾ ಅಂದುಕೊಂಡೆ. ಕುದುರೆ ಸವಾರಿಯ ಬಳಿಕ ಕಾಲ್ನಡಿಗೆಯ ಪಯಣ.ಮೇಲಕ್ಕೆ ಹತ್ತುತ್ತಿದ್ದಂತೆ ಟೀ ಹೌಸ್ ಎಂಬ ವಿಶ್ರಾಂತಿ ಧಾಮವಿದೆ. ಅಲ್ಲಿ ಟೀ ಕುಡಿದು, ಕೆಲವು ಛಾಯಾಚಿತ್ರಗಳನ್ನು ತೆಗೆದೆವು. ಮೇಲಿನಿಂದ ಹರಿದು ಬರುವ ಝರಿಯ ಬಳಿ ಒಂದು ಗಂಟೆಯನ್ನು ಇಟ್ಟಿದ್ದಾರೆ. ಝರಿ ಅದರ ಮೂಲಕ ಹರಿದು ಬರುವಾಗ ಆ ಗಂಟೆ ಮೊಳಗಿ, ಅದ್ಭುತವಾಗಿ ಕೇಳಿಸುತ್ತದೆ. ಹಿಮಾಲಯ ಶ್ರೇಣಿಯನ್ನು ಕಂಡಾಗ ನಮ್ಮ ದೇವಾನುದೇವತೆಗಳು ಹಿಮಾಲಯವನ್ನು ವಾಸಸ್ಥಾನವಾಗಿ ಮಾಡಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ ಎನಿಸಿತು.
ಟೈಗರ್ಸ್ ನೆಸ್ಟ್ ಹತ್ತಿರವಾಗುತ್ತಿದ್ದಂತೆ ಕಾಣಸಿಗುವ ಜಲಪಾತದ ದೃಶ್ಯವಂತೂ ನಯನ ಮನೋಹರ. ಟೈಗರ್ ಮೊನಾಸ್ಟರಿ ತಲುಪಿದಾಗ ರೋಮಾಂಚಕ ಅನುಭವ. ದೇವಸನ್ನಿಧಿ, ಜಲಪಾತದ ಭೋರ್ಗರೆತ, ಹಿಮಾಲಯ ಪರ್ವತ ಶ್ರೇಣಿಯ ಪೈನ್ ಮರಗಳ ಸಾಲು ಸಾಲು, ಕೆಳಗಡೆ ಆಳವಾದ ಕಣಿವೆ! ಅಲ್ಲಿಯ ಸುಂದರ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡಲು ನನ್ನ ಲೇಖನಿ ಸೋಲುತ್ತಿದೆ!!
ಇಲ್ಲಿ ಈಗ ಬೌದ್ಧ ಸನ್ಯಾಸಿಗಳು ವಾಸವಾಗಿದ್ದಾರೆ. ಅವರಿಗೆ ಸರಕಾರವೇ ಆಹಾರ ಪದಾರ್ಥಗಳ ಸರಬರಾಜು ಮಾಡುತ್ತದೆ. ವಿಶೇಷವೇನೆಂದರೆ ಭೂತಾನದ ಎಲ್ಲ ಬೌದ್ಧ ಭಿಕ್ಷುಗಳಿಗೆ ಸರಕಾರವು ಪೂರ್ಣ ಸಹಕಾರ ನೀಡುತ್ತದೆ. ಅಲ್ಲಿಂದ ವಾಪಾಸು ಬರುವಾಗ ಕಾಲ್ನಡಿಗೆಯಲ್ಲಿಯೇ ಬರಬೇಕು. ಏಕೆಂದರೆ ಕುದುರೆಗಳು ನಾಗಾಲೋಟದಲ್ಲಿ ಕೆಳಗಿಳಿಯುವ ಕಾರಣ ಅದರ ಮೇಲೆ ಯಾರಾದರೂ ಕುಳಿತಿದ್ದರೆ ಹತೋಟಿ ತಪ್ಪುವ ಸಾಧ್ಯತೆಗಳು ಹೆಚ್ಚಿವೆ.
ಟೈಗರ್ಸ್ ನೆಸ್ಟ್ ನ ಎತ್ತರದ ಕಾರಣ ಕೆಲವರಿಗೆ ಅಲ್ಟಿಟ್ಯೂಡ್ ಸಿಕ್ ನೆಸ್ ಕಾಡುವುದಿದೆ. ಇದು ಮಿತಿ ಮೀರಿದರೆ ಪ್ರಾಣಾಪಾಯವಾಗುವ ಸಂಭವವೂ ಇದೆ. ಬಾಟಲುಗಟ್ಟಲೆ ನೀರು ಕುಡಿಯುವುದು ಅಲ್ಟಿಟ್ಯೂಡ್ ಸಿಕ್ ನೆಸ್ ಹತ್ತಿಕ್ಕಲು ಇರುವ ಅತ್ಯುತ್ತಮ ಉಪಾಯ. ಟೈಗರ್ ನೆಸ್ಟ್ ನಿಂದ ಇಳಿದು ಬರುತ್ತಿದ್ದಂತೆ ನನಗೆ ವಿಪರೀತ ಸುಸ್ತಾಗಿತ್ತು. ಕಾಲುಗಳು ನೋಯಲಾರಂಭಿಸಿದ್ದವು. ಆದರೆ ಟೈಗರ್ ನೆಸ್ಟ್ ನ ಅದ್ಭುತ ಸೌಂದರ್ಯವನ್ನು ನೋಡಿ ಬಂದದ್ದಕ್ಕೆ ಆ ಶ್ರಮವೆಲ್ಲ ಸಾರ್ಥಕವೆನಿಸಿತು.
ಬಳಿಕ ನಾವು ಡ್ರಕ್ಯೊಲಾ ತ್ಸೊಂಗ್ ಗೆ ಹೋದೆವು. ಈ ಕೋಟೆ ಹದಿನಾರನೆ ಶತಮಾನದಲ್ಲಿ ಕಟ್ಟಿದ್ದು. ಟಿಬೆಟಿನ ಮೇಲೆ ಭೂತಾನ್ ಜಯ ಗಳಿಸಿದ ನೆನಪಿನಲ್ಲಿ ಕಟ್ಟಿದ ಕೋಟೆ ಇದಾಗಿದೆ. ಇದು ೧೯೫೧ ರಲ್ಲಿ ಅಗ್ನಿ ದುರಂತಕ್ಕೀಡಾದ ಕಾರಣ ನಾವು ಅದರ ಅವಶೇಷಗಳನ್ನು ಮಾತ್ರ ಕಾಣಬಹುದು. ತದನಂತರ ನಾವು ೭ ನೇ ಶತಮಾನದಲ್ಲಿ ಕಟ್ಟಿದ ಕ್ಸಿಂಚು ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದೆವು. ಭೂತಾನದಲ್ಲಿ ಬೌದ್ಧ ಧರ್ಮವೇ ಪ್ರಧಾನ. ಮಗು ಹುಟ್ಟಿದಾಕ್ಷಣ ಆ ಪ್ರದೇಶದ ಬೌದ್ಧ ದೇವಾಲಯಕ್ಕೆ ಹೊಂದಿಕೊಂಡಂತೆ ಅದರ ಅಡ್ಡಹೆಸರು ಕೂಡಿಕೊಳ್ಳುತ್ತದೆ. ನಾಮಕರಣವು ಕೂಡ ಬೌದ್ಧ ದೇವಾಲಯದಲ್ಲಿಯೇ ನಡೆಯುತ್ತದೆ. ಅಲ್ಲಿ ಒಂದಿಷ್ಟು ಹೆಸರುಗಳ ಚೀಟಿಗಳಿರುತ್ತವೆ. ಬೌದ್ಧ ಗುರು ಯಾವುದಾದರೂ ಚೀಟಿ ಎತ್ತಿ, ಯಾವ ಹೆಸರು ಬರುತ್ತದೆಯೋ ಅದನ್ನು ಆ ಮಗುವಿಗೆ ಇಡಲಾಗುತ್ತದೆ!
ಪಾರೋ ಕಣಿವೆಯಿಂದ ಭೂತಾನದ ರಾಜಧಾನಿ ತಿಂಪುವಿಗೆ ಹೋದೆವು. ಇಲ್ಲಿ ರಾಜನ ಆಡಳಿತ ಕಛೇರಿಯನ್ನು ನೋಡಿದೆವು. ಅದರ ಒಳಗಿರುವ ಚಿತ್ರಕಲೆಯಂತೂ ಬಲು ಚಂದ. ರಾಜನಿಗೂ, ರಾಜ ಗುರುಗಳಿಗೂ, ಇತರ ಆಡಳಿತ ಮಂದಿಗೂ ಪ್ರತ್ಯೇಕ ಆಸನಗಳಿವೆ. ಅದರ ಒಳಗಣ ವಾಸ್ತುಸೌಂದರ್ಯ ಮುದ ನೀಡುತ್ತದೆ.
ತಿಂಪುವಿನಲ್ಲಿ ಪಾರೋ ಮತ್ತು ತಿಂಪು ನದಿಗಳ ಸಂಗಮವಾಗುತ್ತದೆ. ಆ ದೃಶ್ಯ ಚಿತ್ತಾಕರ್ಶಕವಾಗಿದೆ. ಅಲ್ಲಿರುವ ಮೆಮೊರಿಯಲ್ ಸ್ತೂಪ ಭೂತಾನದ ಮೂರನೇ ರಾಜನ ನೆನಪಿಗೆ ಕಟ್ಟಿಸಿರುವಂಥದ್ದು.
ತಿಂಪುವಿನಲ್ಲಿರುವ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಇಲ್ಲಿ ಅಲ್ಲಿನ ರಾಷ್ಟ್ರಪ್ರಾಣಿ ಟರ್ಕಿನ್ ಅನ್ನು ಕಾಣಬಹುದು. ಭೂತಾನದ ಕಥೆಗಳ ಪ್ರಕಾರ ಲಾಮಾ ಡ್ರಕ್ಪಾ ಕಿನ್ಲೇ ಎಂಬ ಮಹಾಮಹಿಮೆಯುಳ್ಳ ಸಂತನ ಮಹಿಮೆಯನ್ನು ವೀಕ್ಷಿಸಲು ಆತನ ಅನುಯಾಯಿಗಳು ಕಾತರರಾಗಿದ್ದರು. ಆಗ ಆತನು ನಿರ್ಜೀವ ಮೇಕೆಯ ತಲೆ ಮತ್ತು ದನದ ಶರೀರವನ್ನು ಜೋಡಿಸಿ, ಜೀವ ಬರಿಸಿದನು. ಈ ಪ್ರಾಣಿಯೇ ಟರ್ಕಿನ್. ಇದೊಂದು ವಿಶಿಷ್ಟ ಪ್ರಭೇದದ ಪ್ರಾಣಿಯಾಗಿದ್ದು, ಪ್ರಾಣಿ ಶಾಸ್ತ್ರಜ್ನರು ’ಬುಡೊ ಕ್ರಸ್ ಟಾಕ್ಸಿ ಕಲರ್’ ಎಂಬ ನಾಮಧೇಯವನ್ನು ನೀಡಿದ್ದಾರೆ. ಟರ್ಕಿನ್ ಅಲ್ಲದೇ ಈ ಪ್ರಾಣಿ ಸಂಗ್ರಹಾಲಯದಲ್ಲಿ ಬೊಗಳುವ ಜಿಂಕೆ ಗಳನ್ನೂ ಕಾಣಬಹುದು.
ತದ ನಂತರ ನಾವು ಬಿಲ್ಲುಗಾರಿಕೆಯ ಕ್ರೀಡೆಯನ್ನು ನೋಡಲು ಹೋಗಿದ್ದೆವು. ಇದು ಇಲ್ಲಿಯ ರಾಷ್ಟ್ರ ಕ್ರೀಡೆಯಾಗಿದೆ. ಸುಮಾರು ೨೦೦ ಮೀಟರ್ ಗಳಿಗಿಂತಲೂ ದೂರದಲ್ಲಿರುವ ಗುರಿಯತ್ತ ಬಾಣ ಹೂಡುವ ನುರಿತ ಬಿಲ್ಲುಗಾರರನ್ನು ಕಂಡೆವು.
ರಾಷ್ಟ್ರೀಯ ಸಂತಸ ಸೂಚ್ಯಂಕ (Gross National Happiness) :
೧೯೭೨ ರಲ್ಲಿ ಭೂತಾನದ ೩ ನೇ ರಾಜನಾದ ಜಿಗ್ಮೆ ಸಿ೦ಘೆ ವಾಂಚುಕ್ ಜಾರಿಗೆ ತಂದಿರುವ ವಿನೂತನ ಸೂಚ್ಯಂಕ ಪದ್ಧತಿ. ಇದರ ಪ್ರಕಾರ ಉತ್ತಮ ಗುಣಮಟ್ಟದ ನೆಮ್ಮದಿಯ ಜೀವನ ಮತ್ತು ಸಾಮಾಜಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದು ರಾಷ್ಟ್ರೀಯ ಉತ್ಪನ್ನ ಸೂಚ್ಯಂಕ (Gross Domestic Product (GDP)) ಕ್ಕಿಂತ ಹೆಚ್ಚಿನ ಮಹತ್ವವನ್ನು ಹೊಂದಿದೆ. ಭೂತಾನ್ ಏಶಿಯಾ ಖಂಡದಲ್ಲಿಯೇ ಅತ್ಯಂತ ಖುಷಿಯಿಂದ ಇರುವ ರಾಷ್ಟಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ. ವಿತ್ತೀಯ ಪರಿಗಣನೆಯಲ್ಲಿ ಇದು ಅಷ್ಟಾಗಿ ಎದ್ದು ಕಾಣದಿದ್ದರೂ ಖುಶಿ, ನೆಮ್ಮದಿ ಮತ್ತು ಸೌಖ್ಯ ಮುಂತಾದ ಸ್ತರಗಳಲ್ಲಿ ಮುಂಚೂಣಿಯಲ್ಲಿದ್ದು, ಪ್ರಪಂಚದಲ್ಲಿ ೮ನೇ ಸ್ಥಾನವನ್ನು ಪಡೆದಿದೆ.
ಭೂತಾನದ ರಾಷ್ಟ್ರೀಯ ಉಡುಪು:
ಭೂತಾನದಲ್ಲಿ ಕೆಲಸದ ಹೊತ್ತಿನಲ್ಲಿ ಎಲ್ಲರೂ ಕಡ್ಡಾಯವಾಗಿ ರಾಷ್ಟ್ರೀಯ ಉಡುಪನ್ನು ಧರಿಸಲೇಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ. ಪುರುಷರ ಉಡುಪಿನ ಹೆಸರು: ಘ್ಹೊ. ಇದು ಒಂದು ರೀತಿಯ ನಿಲುವಂಗಿ, ಉದ್ದನೆಯ ಸಾಕ್ಸ್ ಮತ್ತು ಶೂಗಳನ್ನು ಹೊಂದಿದೆ. ಮಹಿಳೆಯರ ಉಡುಪಿನ ಹೆಸರು: ಕೀರ. ಇದು ಒಂದು ರೀತಿಯ ಟಾಪ್ ಮತ್ತು ಉದ್ದ ಲಂಗದ ರೀತಿ ಇದೆ.
ತಿಂಪುವಿನಿಂದ ಪುನಖ ವ್ಯಾಲಿಗೆ ನಮ್ಮ ಮುಂದಿನ ಪಯಣ. ದಾರಿಯುದ್ದಕ್ಕೂ ಸೇಬಿನ ತೋಟಗಳು, ಬತ್ತದ ಗದ್ದೆಗಳು, ವನರಾಶಿ, ಸಣ್ಣ ತೊರೆಗಳು, ಅಲ್ಲೊಂದು ಇಲ್ಲೊಂದು ಬಳುಕುತ್ತಾ ಇಳಿಯುವ ಜಲಧಾರೆ, ಶ್ವೇತ ಶುಭ್ರ ನದಿ ಇವುಗಳೆಲ್ಲದರ ನಡುವೆ ಸಾಗುತ್ತಿದ್ದಂತೆ ನಾನು ಹಿರಿ ಹಿರಿ ಹಿಗ್ಗಿದೆ. ದಾರಿ ಬದಿಯಲ್ಲಿ ಹಲವೆಡೆ ಆಗ ತಾನೇ ಕೊಯ್ದ ತಾಜಾ ಸೇಬಿನ ಹಣ್ಣುಗಳನ್ನು ಮಾರುತ್ತಾರೆ. ಢೊಕುಲ ಪಾಸ್ (Dochkula Pass) ಮೂಲಕ ಮುಂದೆ ಸಾಗಿದಂತೆ ೧೦೮ ಡ್ರಕ್ ವಾಂಗ್ಲೆ ಸ್ತೂಪಗಳು ಎದುರಾದವು. ಅವುಗಳನ್ನು ಭೂತಾನದ ರಾಜ ಮಾತೆ ಕಟ್ಟಿಸಿದ್ದಾರೆ. ಪುನಖ ಮೊದಲು ಭೂತಾನದ ರಾಜಧಾನಿಯಾಗಿತ್ತು. ಇಲ್ಲಿ ವಿಶಾಲವಾದ ಪುನಖ ತ್ಸೊಂಗ್ ಇದೆ. ನದಿಯ ದಡದಲ್ಲಿ ಎದ್ದು ಕಾಣುವ ಭವ್ಯ ಸೌಧವು ವಿಶಾಲವಾಗಿದ್ದು, ಬುದ್ಧನ ಜೀವನ ಚರಿತ್ರೆಯ ಪ್ರಮುಖ ಚಿತ್ರಗಳನ್ನು ಹೊಂದಿದೆ. ಬುದ್ಧನ ವಿಗ್ರಹವಂತೂ ಬಹಳ ಆಕರ್ಷಕವಾಗಿದೆ. ಪುನಖ ವ್ಯಾಲಿಯನ್ನು ಸಂದರ್ಶಿಸಿದ ಬಳಿಕ ಮತ್ತೆ ಪಾರೊ ಗೆ. ’ತಶಿ ದಲೇಕ್’ (ಧನ್ಯವಾದ: ಭೂತಾನದ ಭಾಷೆ ಸೊನ್ಖ (Dsonkha) ದಲ್ಲಿ) ಎನ್ನುತ್ತಾ, ಅಲ್ಲಿಂದ ಕೊಲ್ಕತಾ ಮತ್ತೆ ಬೆಂಗಳೂರಿಗೆ! ನನ್ನ ಕನಸಿನ ಪಯಣ ಮುಗಿದಿತ್ತು.ಅದರ ನೆನಪುಗಳು ಮಾತ್ರ ಹಚ್ಚ ಹಸಿರು!
ತಾರೀಕು ೩೧-ಒಕ್ಟೋಬರ್-೨೦೧೦ ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ.ಓದಲು ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ.
-------------------------------------------------------------------------------------
ಮತ್ತಷ್ಟು ಫೊಟೊಗಳು ಇಲ್ಲಿವೆ :
ಪಾರೋ ನ ಹೋಟೆಲ್
ಸಾಂಪ್ರದಾಯಿಕ ಭೂತಾನಿ ಭೋಜನ :
ನ್ಯಾಶನಲ್ ಮ್ಯೂಸಿಯಂ
ಟೈಗರ್ಸ್ ನೆಸ್ಟ್
ಈ ಕೆಳಗಿನ ಫೋಟೊ ಇಂದಿನ ವಿಜಯಕರ್ನಾಟಕ, ’ಈ ಜಗ ಸೋಜಿಗ ’ವಿಭಾಗದಲ್ಲಿ ಪ್ರಕಟವಾಗಿದೆ.
೧೦೮ ಸ್ತೂಪಗಳು
ತಿಂಪು ಪಟ್ಟಣ
ತಿಂಪು-ಪಾರೊ ನದಿಗಳ ಸಂಗಮ
ತಿಂಪು ತ್ಸೊಂಗ್
ಮೆಮೊರಿಯಲ್ ಸ್ತೂಪ
ಪುನಖ ತ್ಸೊಂಗ್
5 comments:
ಮೇಡಮ್,
ಇವತ್ತು ಬೆಳಿಗ್ಗೆನೆ ಓದಿದೆ. ತುಂಬಾ ಚೆನ್ನಾಗಿದೆ. ಭೂತಾನ್ ಬಗ್ಗೆ ಮಾಹಿತಿ ಸಹಿತ ವಿವರಣೆ ಚೆನ್ನಾಗಿದೆ. ಫೋಟೊಗಳು ಕೂಡ ಚೆನ್ನಾಗಿದೆ..
ವಿಕದಲ್ಲಿ ಓದಿದ್ದೆ. ಚೆನ್ನಾಗಿದೆ ಲೇಖನ. ಬ್ಲಾಗ್ ನಲ್ಲಿ ಚಿತ್ರಗಳು ನೋಡಿ ಖುಷಿ ಆಯಿತು.
ಥಾಂಕ್ಯೂ ಶಿವೂ ಅವರೇ.
ಮಾಲಾ,
ಥ್ಯಾಂಕ್ಸ್ !
nimma lekhana tumba chennagi ide. Nimma blog bagge information sikkaddu Thats Kannada site ninda. Please keep it up uploading such valuable information
Very very good tour note and fantastic job. Thanks once again from Jayasimha.B. 09986553278, Banalore.
Post a Comment