Pages

Tuesday, August 12, 2008

ಹೀಗೊಂದು ಸ್ವಗತ...

ಸುಮಾರು ದಿನಗಳಿಂದ ಅಂದುಕೊಳ್ಳುತ್ತಿದ್ದೆ.ಕನ್ನಡ ಅಕ್ಷರ ಬರೆಯದೆ ಬಹಳ ದಿನಗಳಾದವು.ಏನಾದರೂ ಲೇಖನ ಬರೆಯಲೆ? ಉಹ್ಮ್ಮ್..ಕವನ..ಕಥೆ..ಅಂತೂ ಏನೋ ಒಂದು..ಮನಸ್ಸಿಗೆ ತೋಚಿದ್ದು..ಕಾಗದ,ಪೆನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಮನಸ್ಸೆಲ್ಲಾ ಖಾಲಿ ಖಾಲಿ..ಮನಸ್ಸು ಮೌನದ ಮೊರೆ ಹೊಕ್ಕಿಬಿಟ್ಟಿದೆ..ಯಾಕೆ ಹೀಗಾಯ್ತು? ನನ್ನ ಏಕತಾನದ ಜೀವನ ನನ್ನನ್ನು ಈ ಪರಿಯಾಗಿಸಿದೆಯೇ ? ನನಗೆ ಗೊತ್ತಿಲ್ಲ !! :(

ಇವತ್ತಿಗೆ ಆರು ತಿಂಗಳ ಹಿಂದೆ ನನ್ನ ಅಫೀಸು , ನನ್ನ ಮನೆಯಿಂದ ೧೬ ಕಿ.ಮೀ.ದೂರಕ್ಕೆ ಸ್ಥಳಾಂತರಗೊಂಡಿತು.ಗಡಿಯಾರದ ಟಿಕ್ ಟಿಕ್ ಸದ್ದಿಗೆ ಅನುಗುಣವಾಗಿ ನಡೆಯುವ ನನ್ನ ದಿನಚರಿ ಅಲ್ಲಿಂದ ಶುರುವಾಯಿತು..ಬೆಳಗ್ಗೆ ೬ ೩೦ ಗೆ ಅಲಾರ್ಮ್ ಸದ್ದಿಗೆ ಎದ್ದು, ಆಫೀಸಿಗೆ ಹೊರಡಲು ತಯಾರಾಗಿ,ತಿಂಡಿ ತಯಾರಿಸಿ,ತಿಂದು (ಮಾಡಿದ್ದುಣ್ಣೋ ಮಹಾರಾಯ !! ), ೭ ೪೫ ಕ್ಕೆ ಬಸ್ ಸ್ಟಾಪ್ ಗೆ ಬರುವ ಆಫೀಸ್ ಬಸ್ಸನ್ನು ಹಿಡಿಯುತ್ತೇನೆ.ಬಸ್ಸಲ್ಲಿ ಕುಳಿತಾಗ ಬೆಳಗ್ಗಿಂದ ಆ ಕ್ಷಣದವರೆಗಿನ ಗಡಿಬಿಡಿ ಕೊಂಚ ಹತೋಟಿಗೆ ಬಂದು,ಮನಸ್ಸು ನಿರಾಳವೆನಿಸುತ್ತದೆ.ಆಗೊಮ್ಮೆ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ, ಅಗೋ ನೋಡಿ ಶುರುವಾಯಿತು..ಬಸ್ಸಿನ ಯಾತ್ರೆ.ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ,ನೊಂದು,ಬೆಂದು,ಬಸವಳಿಯುವ ದುರವಸ್ಥೆಯನ್ನು ಅನುಭವಿಸಿದರೆ ಮಾತ್ರ ಅರಿಯಬಹುದೇ ವಿನಹ ನನ್ನ ಲೇಖನಿಯಿಂದ ಹೊರಬರುವ ಪದಗುಚ್ಛಗಳ ಸೆಣಸಾಟದಿಂದಲ್ಲ!!

ಜನಸಂಖ್ಯೆಯ ಹೆಚ್ಚಳ,ಕಿರಿದಾದ ರಸ್ತೆಗಳು,ಶಿಸ್ತು ಪಾಲಿಸದ (ಪಾಲಿಸುವ ಮಂದಿಯೂ ಇದ್ದಾರೆ ಕೆಲವರು ) ಜನ ಏನೆಲ್ಲ ಕಾರಣಗಳನ್ನು ಪಟ್ಟಿ ಮಾಡಲಿ?ಸಿಗ್ನಲ್ ಗಳಲ್ಲಿ ಒಂದಷ್ಟು ವಾಹನಗಳು ನಿಲ್ಲುತ್ತಿದ್ದಂತೆ ,ಕೆಂಪು ಸಿಗ್ನಲ್ ಕಾಣಿಸಿದರೂ ಸಕಲ ವಾಹನಗಳೂ ಏಕಕಾಲಕ್ಕೆ ಹಾರ್ನ್ ಬಳಸುವಾಗ ಉಂಟಾಗುವ ಶಬ್ದದ ಉತ್ಕಟತೆಗೆ,ಅದರ ನಾದ ತರಂಗಗಳ ವೈಭವಕ್ಕೆ ನಿಮ್ಮ ಕೋಮಲವಾದ ಕರ್ಣಗಳು ಎಷ್ಟೇ ಸಧೃಢವಾದ ಸ್ಥಿತಿಯಲ್ಲಿದ್ದರೂ ಹಾನಿಗೊಳಗಾಗವುವು ಎಂಬ ಮಾತು ಉತ್ಪ್ಪ್ರೇಕ್ಷೆಯಲ್ಲ!!

ರಾಶಿ ರಾಶಿ ವಾಹನಗಳು ಹೊರಹಾಕುವ ಧೂಮಸಾಗರದ ಲೀಲೆಯನ್ನು ಏನೆಂದು ಬರೆಯಲಿ?ಪುರಾಣ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳ ಆವರಣದಲ್ಲಿ ಹೋಮ ಹವನಾದಿಗಳ ಹೊಗೆಯೂ,ಮಂತ್ರಘೋಷವೂ , ಘಂಟಾ ನಾದವೂ ಕೇಳಿಬರುತ್ತಿತ್ತಂತೆ.ಈ ಕಾಲದಲ್ಲಿ ಬೆಂಗಳೂರಿನ ರಸ್ತೆಯಲ್ಲಿ ವಾಹನಗಳ ಹೊಗೆಯೂ,ಹಾರ್ನುಗಳ ಕರ್ಕಶ ಧ್ವನಿಯೂ ತುಂಬಿ ಹೋಗಿದೆ. ಮಧ್ಯ ಮಧ್ಯ ವಾಹನ ಚಾಲಕರಿಂದ ಹೊರಹೊಮ್ಮುವ ಆಣಿಮುತ್ತುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಇವೆಲ್ಲದರ ಮಧ್ಯೆ ವಾಹನಗಳು ಯಾವ ದಿಕ್ಕಿನಿಂದಲೂ ಬರಬಹುದು.ಯಾವುದೇ ಸೂಚನೆ ನೀಡದೆಯೂ ಅವು ಬೇಕಾದ ದಿಕ್ಕಿಗೆ ತಿರುಗಬಹುದು.ನಿಮ್ಮ ಹಣೆಯಲ್ಲಿ ಬ್ರಹ್ಮ ಆಯುಷ್ಯದ ರೇಖೆಯನ್ನು ಸ್ವಲ್ಪ ದೀರ್ಘವಾಗಿ ಎಳೆದಿದ್ದರೆ ನೀವು ಬಚಾವ್.ಇಲ್ಲದಿದ್ದರೆ ಯಮನ ದೂತರು ನಿಮ್ಮನ್ನು ಕರೆದೊಯ್ಯಲು ತಯಾರಾಗಿಯೇ ಇದ್ದಾರೆ.ರಸ್ತೆಗಳ ಮೇಲೆ ವಾಹನಗಳ ಜತೆ ಜತೆಯೇ ಸಾಗುವ ಎಮ್ಮೆಗಳು ಹಾಗೂ ಕೋಣಗಳ ಹಿಂಡು ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ!!

ವಾಹನಗಳ ಬಗ್ಗೆ ಇಶ್ಟೆಲ್ಲಾ ಬರೆದು,ರಸ್ತೆ ಬಗ್ಗೆ ಬರೆಯದಿದ್ದರೆ ಹೇಗೆ? ಕೆಲವೊಂದೆಡೆ ಡಾಮರು , ಕೆಲವೊಂದೆಡೆ ಬರೀ ನೆಲ,ಮತ್ತೆ ಕೆಲವೆಡೆ ತೇಪ ಹಾಕಿದ ರಸ್ತೆಗಳು, ಅನವಶ್ಯಕ ರಸ್ತೆ ಉಬ್ಬುಗಳು ಕೆಲವೆಡೆ..ಮಳೆ ಬಂದರಂತೂ ಬೆಂಗಳೂರಿನ ರಸ್ತೆಗಳು ದೇವರಿಗೇ ಪ್ರೀತಿ.ಒಳಚರಂಡಿಯ ಅಷ್ಟೂ ನೀರು ರಸ್ತೆ ಮೇಲೆ ಬಂದು ಬಿಡುತ್ತದೆ. ಪಾಪ ಅದಕ್ಕೂ ಮಳೆ ನೋಡುವ ಉತ್ಸಾಹ !! ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋದಿರೋ,ಚರಂಡಿ ನೀರು ಚೆಲುವಿನ ಚಿತ್ತಾರವನ್ನು ನಿಮ್ಮ ಮೇಲೆ ಮೂಡಿಸದೇ ಇರುವುದಿಲ್ಲ.
ಒಂದಂತೂ ನಿಜ, ನೀವು ನಾಲ್ಕು ಸಲ ಸ್ನಾನ ಮಾಡದ ಹೊರತು, ನಿಮ್ಮ ಹತ್ತಿರ ಬೇರೆ ಯಾರೂ ಬರಲಾರರು.
" ಹೇಮಾ ಮಾಲಿನಿಯ ಕೆನ್ನೆಗಿಂತಲೂ ನುಣುಪಾಗಿರುವ ರಸ್ತೆಗಳು" ಎಂಬ ವರ್ಣನೆ ನಿಮಗೆ ಕಡತದಲ್ಲಿ ಮಾತ್ರ ಸಿಕ್ಕೀತು.

ಹ್ಮ್ಮ್..ಮರಗಳು..ಮನೆಗೊಂದು ಮರ..ಊರಿಗೊಂದು ವನ..ಗಾದೆಯೇನೋ ಇದೆ. ರಸ್ತೆ ಅಗಲೀಕರಣದ ನೆಪದಲ್ಲಿ ಇರುವ ಮರಗಳು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ ಹಾಕುವವರ ಮಧ್ಯೆ "ಪರಿಸರ ಉಳಿಸಿ" ಘೋಷಣೆ ಮೆತ್ತಗಾಗಿ ಬಿಡುತ್ತದೆ. ಕಾಂಕ್ರೀಟ್ ಕಾಡಿನಲ್ಲಿ ಹಸಿರ ಹುಡುಕುವ ನಿಮ್ಮ ಕಣ್ಣುಗಳು ಸುಸ್ತಾಗಿ ಹೋಗುತ್ತವೆ.ಧೂಳಿನ ಕಣಗಳು ನಿಮ್ಮ ಕಣ್ಣಲ್ಲಿ ತುಂಬಿ ಕಣ್ಣು ಮಂಜಾಗುವಂತೆ ಮಾಡುತ್ತವೆ.

ನನ್ನ ಶಾಲಾ ದಿನಗಳಲ್ಲೂ ನಾನು ಬಸ್ನಲ್ಲಿ ಪಯಣಿಸುತ್ತಿದ್ದೆ.ಹೆಗಲಲ್ಲಿ ಪುಸ್ತಕದ ಹೊರೆ,ಕೈಯಲ್ಲಿ ಬುತ್ತಿ ಛತ್ರಿ.ದಾರಿಯುದ್ದಕ್ಕೂ ಕಾಡು ಅಥವಾ ಕಾಡಿನ ಮಧ್ಯದಲ್ಲೇ ದಾರಿ ಎನ್ನಲೆ? ಆಗ ಇದ್ದ ೨-೩ ಬಸ್ಸುಗಳು,೪-೫ ಜೀಪುಗಳು,ಮತ್ತೆ ಕೆಲವು ಮಿನಿ ವಾಹನಗಳು ಟ್ರಾಫಿಕ್ ಜಾಮ್ ಗೆ ಕಾಣಿಕೆ ನೀಡಲು ಸೋತಿದ್ದವು.ಮಳೆ,ಹಕ್ಕಿಗಳ ಚಿಲಿಪಿಲಿ,ತಲೆಯಲ್ಲಿ ಮುಡಿದ ಮಲ್ಲಿಗೆ,ಗುಲಾಬಿಯ ಪರಿಮಳ,ಸಹಪಯಣಿಗ ವಿದ್ಯಾರ್ಥಿಗಳ ಸ್ನೇಹದ ನುಡಿಗಳು ಆ ಬಸ್ ಪಯಣದ ಸಂತಸಕ್ಕೆ ಕಾರಣವಾಗಿದ್ದವು.ಆಗಲೂ ನಾನು ದಿನಕ್ಕೆ ೩೨ ಕಿ.ಮೀ ಪಯಣಿಸುತ್ತಿದ್ದೆ. ಈಗಲೂ ಅಷ್ಟೇ ದೂರ ..ಆದರೆ ಬಸ್ ಪಯಣದ ಅನುಭವಕ್ಕೆ ಅಜ ಗಜಾಂತರ!!

ಆದರೆ ಇದ್ದುದರಲ್ಲೇ ನೆಮ್ಮದಿಯ ವಿಷಯವೆಂದರೆ ನಾನು ಆಫೀಸ್ ಬಸ್ ನಲ್ಲಿ ಸಂಚರಿಸುವ ಕಾರಣ ಬಸ್ ನೊಳಗಿನ ನೂಕು ನುಗ್ಗಲು,ಸ್ಥಳಾವಕಾಶದ ಕೊರತೆ,ಪಿಕ್ ಪಾಕೆಟ್ ಭಯ ಇತ್ಯಾದಿಗಳ ಚಿಂತೆ ಇಲ್ಲ.ಕೆಲವು ಖಾಸಗಿ ಬಸ್ ಗಳಲ್ಲಿ ಕೇಳಿಸುವಂತಹ ಕರ್ಕಷ ಹಾಡುಗಳಿಲ್ಲ.



ಅಂತೂ ಇಂತೂ ಸುದೀರ್ಘ ಪಯಣ, ಆಫೀಸಿನ ಕೆಲಸ ಮುಗಿಸಿ ಮನೆಗೆ ಬಂದು ಮತ್ತೆ ಮನೆಕೆಲಸದಲ್ಲಿ ತೊಡಗುತ್ತೇನೆ.ಒಂದಷ್ಟು ಹೊತ್ತು ಮೌನವಾಗಿದ್ದು,ಧ್ಯಾನ ಮಾಡಿ,ದೇವರ ಸ್ತೋತ್ರ ಹೇಳಿ,ಪಿಟೀಲು ನುಡಿಸಿ, ಕೆಲವೊಮ್ಮೆ ಯಾವುದಾದರೂ ಪುಸ್ತಕ ತಿರುವಿ ಹಾಕಿ,ಅಡಿಗೆ ಮಾಡಿ,ಊಟ ಮಾಡಿ, ನಿದ್ದೆಗೆ ಜಾರುತ್ತೇನೆ. ಮರುದಿನ ಯಥಾಪ್ರಕಾರ...

19 comments:

Anil said...

ನಿಮ್ಮ ಲೇಖನ ಓದಿ ಒಮ್ಮೆ ಬೆಂಗಳೂರು ಸಿಟಿ ಬಸ್ ನಲ್ಲಿ ಒಂದು ಸುತ್ತು ಹಾಕಿ ಬಂದ ಹಾಗಾಯ್ತು. ಆ ಬೆವರಿನ ದುರ್ಗಂಧ, ಮತ್ತೊಬ್ಬರ shoes ಕೆಳಗೆ ಅಪ್ಪಚ್ಚಿ ಯಾಗುವ ನಮ್ಮ ಕಾಲುಗಳು, ಈ ನರಕ ಯಾತನೆ ಅನುಭವಿಸಿದವರಿಗೆ ಗೊತ್ತು. ಒಂದು ದಿನದ ಬೆಂಗಳೂರು ಪ್ರಯಾಣದ ನಂತರ ನಮ್ಮ ಬಟ್ಟೆಗಳ ತೂಕ ಕೆಲವು ಗ್ರಾಂ ಗಳು ಹೆಚ್ಚಾಗುವ ಮಟ್ಟಿಗೆ ಧೂಳಿನ ಒಂದು layer ನಮ್ಮನ್ನು ಆವರಿಸಿರುತ್ತೆ ! ಇವುಗಳ ಬಗ್ಗೆ ಆಳವಾಗಿ ಯೋಚಿಸಿದಾಗ ಬೆಂಗಳೂರಿನ ಈ ಅವಾನ್ತರಗಳಿಂದ ಕೆಲವರಿಗಾದರೂ ಉಪಯೋಗ ಇರಬಹುದೇನೋ ಎಂದು ಅನಿಸಿತು. ಉದಾಹರಣೆಗೆ ವಾಶಿಂಗ್ powder ಮತ್ತು machine ಮಾರಾಟಗಾರರು, ಚಪ್ಪಲಿ ಹೊಲೆಯುವವರು, pickpocket ಮಾಡುವವರು ಮತ್ತು ಸರ ಕಳ್ಳರು...

ಮಂಜು ಶಂಕರ್ said...

ಒಳ್ಳೆ ಲೇಖನ ಮಾರಾಯ್ತಿ !!

ಉಮಾಶಂಕರ್ ಯು. said...

Good one.... For me also same kiri kiri traffic naddu... few days I came in the bus.... amele bus bore aitu .. then started coming in my bike... amele adu bore aitu .... eega weekly 4days WFH ... 1 day maatra office ge bartene ... henge? :)

Kuldeep Dongre said...

awwal se !

Vinay said...

tumba valleya lekhana.. People at our natives say we are lucky seeing the money we earn. But the situation which we face every day is worth more than wat we are paid for :)

Dariyalli baruva sukshmagalannu tumba chenagi barididdira. keep it up..:)

Unknown said...

Hi archana,
ninna swagata oodi takshana nange yenu annistu anta hella?
'Papa Archana'
heegannisiddu khandita haudu.

Dkrbhat said...

Good. Soon you have to carry stove, utensils etc. in bus, so that you can cook on the way. :)-

Unknown said...

Great write-up,
Keep it up!


Govindu Kakka

marathe said...

good one... :)

sunaath said...

ಅರ್ಚನಾ,
ನಿಮ್ಮ ಆಪ್ತಶೈಲಿಯ ಬರವಣಿಗೆ ಮೆಚ್ಚುಗೆಯಾಯ್ತು. ನೀವು ತೆಗೆದ ಚಿತ್ರಗಳೂ ಸಹ ಸೊಗಸಾಗಿವೆ.

Anveshi said...

ಯಪ್ಪಾ... ನಮ್ಮ ಬೆಂಗಳೂರಿನ ಬಗ್ಗೆ ನೀವು ಇದ್ದದ್ದೆಲ್ಲವನ್ನು ಹೀಗೆ ಘಂಟಾಘೋಷವಾಗಿ ಬರೆದು, ಬೇರೆ ಭಾಷಿಕರ ಹಾವಳಿಯಿಂದಾಗಿ ಇಲ್ಲ ಎಂದೇ ಆಗಿಬಿಟ್ಟಿರುವ ಮಾನ ತೆಗೆಯುವುದೇ? ಛೆ... ಛೆ... ಸಲ್ಲದು... ಸಲ್ಲದು... ಸರ್ವಥಾ ಸಲ್ಲದು.

ಈ ರೀತಿ ಆಗುವುದನ್ನು ತಪ್ಪಿಸಬೇಕಿದ್ದರೆ, ಒಂದೇ ಉಪಾಯ. ಬೆಂಗಳೂರಿನಲ್ಲಿ ಜನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಬೇಕು.

ಸುಧೇಶ್ ಶೆಟ್ಟಿ said...

bengaloorina bharjari chithraNa kottithu nimma baraha.

ಗುರು [Guru] said...

ಚೆನ್ನಾಗಿತ್ತು...ಆದರೆ ನಿಮ್ಮ ಬ್ಲಾಗಿನಲ್ಲಿ ನನ್ನ ಬ್ಲಾಗಿನ ಲಿಂಕೇ ಕಾಣಿಸುತ್ತಿಲ್ಲವಲ್ಲ?. ಯಾಕ್ರೀ .....
ಬೆಂಗಳೂರಿನಲ್ಲಿ ಇದೆಲ್ಲಾ ಇದ್ದದ್ದೇ....ಅನ್ಯ ಭಾಷಿಕರ ಹಾವಳಿಯಿಂದಾಗಿ ಸಂಸ್ಕೃತಿ ತುಕ್ಕು ಹಿಡಿಯಿತು. ವಾಹನಗಳ ಹೊಗೆಯಿಂದಾಗಿ ವಾತಾವರಣ ಕೆಟ್ಟಿತು. ಆದರೆ ಇಲ್ಲಿ ಜನಜೀವನ ಮಾತ್ರ ದಿನೇ ದಿನೇ ಅಧಮ ಸಂಸ್ಕೃತಿಯತ್ತ ಹೊರಳುತ್ತಿರುವುದು ಕಳವಳಕಾರಿ ಸಂಗತಿ. ಇದೆಲ್ಲ ತಮಿಳು, ತೆಲುಗು ಜನರ ದರಿದ್ರ ಸಂಸ್ಕೃತಿಯಿಂದಾಗಿ.

Sujay said...

ತುಂಬಾ ಚೆನ್ನಾಗಿ ವಿವರಣೆ ನೀದಿದ್ದೀರ. ನಿಜಕ್ಕೂ ಬೆಂಗಳೂರು ಹೀಗಾಗುವುದೆಂದು ಯಾರ್ ನೆನೆಸಿದರು.
ಪ್ರತಿ ದಿನ ಆಫೀಸ್‌ಗೆ ಬರೋದೆ ಚಿಂತೆ.... ನಿಮಗೆ ಬಸ್ ಇದೆ ! ಬುಸ್ಸು ಇಲ್ದೇ ಬರೋರ ಗತಿ ಬಗ್ಗೆ ಯೋಚಿಸಿ !!!!
ಬೆಂಗಳೂರು ಬದಲಾಗಬೇಕು!!!!
-Sujay

ಹರೀಶ ಮಾಂಬಾಡಿ said...

Ive to Think 10 times to visit Blore..

Rahul said...

ಬರಹ ಚನ್ನಾಗಿದೆ. ಓದುತ್ತಿರುವಂತೆಯೇ ದಿನಾಲೂ ಸಂಜೆ ಆಫೀಸು ಮುಗಿದೊಡನೆ ಬಿಎಂಟಿಸಿ ಬಸ್ಸುಗಳಲ್ಲಿ ಸೀಟು ಹಿಡಿಯಲು ಪಡುಚ ಪಡಿಪಾಟಲು, ಸೀಟು ಸಿಗದೇ ಇದ್ದಾಗ ನೇತಾಡಿಕೊಂಡು ಹೋಗುವುದು ಹೀಗೆ ಎಲ್ಲ ನೆನಪಾಗುತ್ತವೆ. ನೀವು ಕಂಪನಿ ಬಸ್ನಲ್ಲಿ ಹೋಗಿ ಬರ್ತೀರಿ..ಸಧ್ಯ ಸ್ವಲ್ಪ ಮಟ್ಟಿಗಿನ ಜಂಜಾಟದಿಂದ ಮುಕ್ತ ಮುಕ್ತ ಮಕ್ತ!!

Unknown said...

ಖಾಲಿ ಬಸ್ಸಲ್ಲಿ ಕೂತೇ ಹೀಗಂದ್ರೆ ರಶ್ ಬಸ್ಸಲ್ಲಿ ಓಡಾಡೋರ್ ಏನ್ ಅನ್ನಬೇಕು?

shivu.k said...

ಲೇಖನ ಓದುತ್ತಿದ್ದಂತೆ ಅಪರೂಪಕ್ಕೆ ನಿನ್ನೆ ಬಸ್ಸಿನಲ್ಲಿ ಗೆಳೆಯನ ಮನೆಗೆ ಹೋಗಿ ಬರುವಾಗ, ಸೀಟಿರಲಿ, ನಿಲ್ಲಲು ಜಾಗವಿಲ್ಲದೆ ನೇತಾಡಿಕೊಂಡು ರಾತ್ರಿ ಲೇಟಾಗಿ ಮನೆ ತಲುಪಿದ್ದು ನೆನಪಾಯಿತು.
ಶಿವು.ಕೆ

mukundachiplunkar said...

after reading your blog I thought it
fit to reply my comment. i was also at sahakarnagar wheremy quarters was walkable distance from
my office. hence I need not travel
to the office from my residence daily.(luckliy) my daughter daily
travels from office to residence like you not through office cab but
through 2 ksrtcs.
from
mukunda chiplunkar@yaho.com