Pages

Sunday, December 14, 2008

ಇಂಗ್ಲೆಂಡ್ ಪ್ರವಾಸ ಕಥನ...

ಹೌದು..ಮತ್ತೊಮ್ಮೆ ಕಣ್ಣುಜ್ಜಿಕೊಂಡೆ..ನಾನು ನೋಡುತ್ತಿರುವುದು ಕನಸೋ ಅಥವಾ ನಿಜವೋ ಎಂದು ಅರಿಯಲು ಕೊಂಚ ಸಮಯವೇ ಬೇಕಾಯಿತು. ಹೌದು..ನಾನು ಇಂಗ್ಲೆಂಡಿನಲ್ಲೇ ಇದ್ದೇನೆ.’ಮೊನೊಪಲಿ’ ಎಂಬ ಆಟದಲ್ಲಿ ಬರುವ ಬೀದಿಗಳು,ರೈಲ್ವೇ ನಿಲ್ದಾಣಗಳು ಇವೆಲ್ಲಾ ನನ್ನ ಕಣ್ಣ ಮುಂದೆಯೇ ಇವೆ!! ಸೊನ್ನೆ ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಟೊಪ್ಪಿ,ಕೈಗವಸು,ಶೂ,ಕೋಟು ಹಾಕಿಯೇ ಜನ ಓಡಾಡುತ್ತಿದ್ದಾರೆ.

ಬಹುಷ: ಇಂಗ್ಲೆಂಡಿನ ಬಗ್ಗೆ ಕೇಳಿದಷ್ಟು ,ಛಾಯಾಚಿತ್ರಗಳನ್ನು ನೋಡಿದಷ್ಟು ನಾನು ಬೇರಾವ ದೇಶದ ಬಗ್ಗೆಯೂ ಮಾಡಿಲ್ಲ.ನನ್ನ ಆಪ್ತ ವರ್ಗದ ಹಲವರು ಅಲ್ಲಿ ನೆಲೆಸಿಬಂದವರೋ, ನೆಲೆಸಿರುವವರೋ ಆಗಿರುವ ಕಾರಣ ಮತ್ತು ಅವರೆಲ್ಲರೂ ಇಂಗ್ಲೆಂಡಿನ ಪ್ರ್‍ಏಕ್ಷಣೀಯ ಸ್ಥಳಗಳ ಬಗ್ಗೆ,ಅಲ್ಲಿಯ ಜನಜೀವನದ ಬಗ್ಗೆ ವರ್ಣಿಸಿದಾಗ ನನಗೂ ಅಲ್ಲಿ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಮೂಡುತ್ತಿದ್ದದ್ದು ಸುಳ್ಳಲ್ಲ.

ಕಡೆಗೂ ನನ್ನ ಆಸೆ ಈಡೇರುವ ದಿನ ಬಂದೇ ಬಿಟ್ಟಿತು.ಕಂಪನಿ ಕೆಲಸದ ನಿಮಿತ್ತ ನನ್ನ ಇಂಗ್ಲೆಂಡ್ ಪ್ರವಾಸ ನಿಶ್ಚಯವಾಯಿತು.ಸ್ವಾಮಿ ಕಾರ್ಯ,ಸ್ವಕಾರ್ಯ ಎರಡನ್ನೂ ಒಟ್ಟಿಗೇ ಮಾಡುವ ಹಂಬಲ ನನ್ನದು.ಹಾಗಾಗಿ ಕಿರುಅವಧಿಯ ಪ್ರವಾಸದಲ್ಲೇ ಆಫ಼ೀಸು ಕೆಲಸದ ಜತೆಗೆ ಸಾಕಷ್ಟು ಪ್ರ್‍ಏಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಮತ್ತು ನನ್ನ ಆತ್ಮೀಯ ಸ್ನೇಹಿತೆಯೋರ್ವಳನ್ನು ಭೇಟಿಯಾಗುವ ಕಾರ್ಯಕ್ರಮಗಳನ್ನು ಯೋಜಿಸಿದೆ.



ಎರಡು ದಿನಗಳ ಬಿಡುವು ಮಾಡಿಕೊಂಡು ಲಂಡನ್ ಸುತ್ತಿದೆ.ಬಿಗ್ ಬೆನ್,ಟವರ್ ಬ್ರಿಡ್ಜ್,ಬಂಕಿಂಗ್ ಹಾಮ್ ಅರಮನೆ,ಲಂಡನ್ ಐ ,ಮೇಡಮ್ ಟುಸಾಟ್ಸ್ ಇವುಗಳನ್ನು ಸಂದರ್ಶಿಸಿದೆ.ಹತ್ತು ಹಲವು ಚರ್ಚುಗಳೂ,ಸುಂದರ ವಾಸ್ತುವಿನ್ಯಾಸದ ಕಟ್ಟಡಗಳೂ ನನ್ನ ಮನಸ್ಸನ್ನು ಸೆಳೆದವು.ಕ್ರಿಸ್ಮಸ್ ಗೆ ಈಗಾಗಲೇ ನಗರವು ಸಜ್ಜುಗೊಂಡಿತ್ತು.ಎಲ್ಲಿ ನೋಡಿದರೂ ಕ್ರಿಸ್ಮಸ್ ಟ್ರೀ ಅಲಂಕಾರ !! ಅಂಗಡಿಗಳೆಲ್ಲವೂ ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ!!



ಇಂಗ್ಲೆಂಡ್ ಗೆ ಹೋಗುವ ಮುನ್ನ ನನ್ನ ಮನಸ್ಸಲ್ಲಿ ಇದ್ದ ಕೊಂಚ ಗೊಂದಲ ಮೂಡಿಸಿದ್ದ ವಿಷಯಗಳೆಂದರೆ ೧)ವಿಪರೀತ ಚಳಿ :ಬೆಂಗಳೂರಿನ ೧೮-೨೦ ಡಿಗ್ರಿಗಳಷ್ಟು ತಾಪಮಾನದಲ್ಲೇ ಚಳಿ ಎಂದು ಗಟ್ಟಿ ಹೊದಿಕೆ ಹೊದ್ದು ಮಲಗುವ ನಾನು ,೦ ಡಿಗ್ರಿಯ ತಾಪಮಾನದಲ್ಲಿ ವಾಸಮಾಡುವುದು ಹೇಗೆ ಎಂದು. ಸಾಕಷ್ಟು ಬೆಚ್ಚನೆಯ ವಸ್ತ್ರಗಳು ಚಳಿಯಿಂದ ನನ್ನನ್ನು ರಕ್ಷಿಸಿಕೊಳ್ಳಲು ನೆರವಾದವು.ಹೋಟೆಲ್,ಕಛೇರಿ ಗಳಲ್ಲಿ ಹೀಟರ್ ಇದ್ದ ಕಾರಣ ಏನೂ ತೊಂದರೆ ಆಗಲಿಲ್ಲ. ೨) ಇನ್ನೊಂದು ವಿಷಯವೆಂದರೆ ಲಂಡನ್ ನ ಸಂಚಾರಿ ವ್ಯವಸ್ಥೆ. ಇಲ್ಲಿ ಟ್ಯೂಬ್ (ಭೂಮಿಯೊಳಗೆ ಚಲಿಸುವ ವಾಹನ),ಟ್ರೈನ್, ಬಸ್ಸು ಇವೆಲ್ಲವೂ ನನಗೆ ಕೊಂಚ ಹೆದರಿಕೆ ಹುಟ್ಟಿಸಿದ್ದವು.ನಾನು ಟ್ರೈನ್ ನಿಂದ ಹೊರಗೆ ಬರುವ ಮುಂಚೆಯೇ ಬಾಗಿಲು ಮುಚ್ಚಿಕೊಂಡರೆ ಏನು ಮಾಡಲಿ ? ನಕಾಶೆ ಓದುವಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ನನಗೆ ಟ್ಯೂಬ್ ನ ನಕಾಶೆಯನ್ನು ಓದಿ ಅದರಲ್ಲಿ ಸಂಚರಿಸಲಾದೀತೆ ಇತ್ಯಾದಿ ನನಗಿದ್ದ ಸಂಶಯಗಳು.ಆದರೆ ಅಲ್ಲಿ ಹೋದ ಮೇಲೆ ನನಗೆ ಅತೀವ ಆತ್ಮವಿಶ್ವಾಸ ಮೂಡಿ,ಲಂಡನ್ ನ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಗಳಲ್ಲೂ ಸಂಚಾರ ಮಾಡಿದೆ!! ನನಗೆ ಈಗಲೂ ಅದು ಹೇಗೆ ಸಾಧ್ಯವಾಯಿತು ಎಂದು ನಂಬಲಾಗುತ್ತಿಲ್ಲ!!



ನನ್ನ ಮುಂದಿನ ಭೇಟಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ. ಆಕ್ಸ್ ಫರ್ಡ್ ಎನ್ನುವುದು ಒಂದು ಪುಟ್ಟ ಊರು. ಊರು ತುಂಬಾ ಕಾಲೇಜುಗಳು. ಎಲ್ಲಿ ನೋಡಿದರೂ ವಿದ್ಯಾರ್ಥಿಗಳು.ಕಾಲೇಜು ಕಟ್ಟಡಗಳೆಲ್ಲವೂ ಹಳೆಯ ಕಾಲದ ವಾಸ್ತುವಿನ್ಯಾಸವನ್ನು ಹೊಂದಿದ್ದವು. ನನಗ್ಯಾಕೋ ನಾನೊಂದು ಬೇರೆಯೇ ಪ್ರಪಂಚಕ್ಕೆ ಬಂದಂತೆ ಅನಿಸಿತು. ಚಿಕ್ಕದಾಗಿ,ಚೊಕ್ಕದಾಗಿ ಇರುವ ಈ ಸುಂದರ ಊರು ನನ್ನನ್ನು ಬಹಳಷ್ಟು ಆಕರ್ಷಿಸಿತು.

ಮತ್ತೆ ಸ್ವಲ್ಪ ದಿನಗಳ ಕಾಲ ನಾನು ಕಚೇರಿ ಕೆಲಸದಲ್ಲಿ ಮಗ್ನಳಾದೆ.ನಾನು ವಾಸಮಾಡಿದ್ದ ಊರಿನ ಹೆಸರು ’ರೆಡ್ಡಿಂಗ್ ’. ಒಂದು ಪುಟ್ಟ ಊರು. ಅದೂ ಸಹ ಬಹಳ ಸುಂದರವಾಗಿತ್ತು. ನನಗೆ ಅದು ಕಲಾವಿದ ಬಿಡಿಸಿದ ಒಂದು ಚಂದದ ಚಿತ್ರದಂತೆ ಭಾಸವಾಗುತ್ತಿತ್ತು.
ಕೆಲವೊಂದು ಆಂಗ್ಲ ಭಾಷಾ ಚಲನಚಿತ್ರಗಳಲ್ಲಿ ನೋಡಿದ್ದ ಊರುಗಳಂತೆ...ಎಲ್ಲವೂ ಅಚ್ಚುಕಟ್ಟು..ಎಲ್ಲೆಡೆಯೂ ಸ್ವಚ್ಛತೆ...ಶಿಸ್ತು..ನನಗೇಕೋ ನಾನೊಂದು ಕನಸಿನ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು.ರೆಡ್ಡಿಂಗ್ ನಲ್ಲಿ ಇರುವ ’ಥೇಮ್ಸ್ ವ್ಯಾಲಿ ಪಾರ್ಕ್’ :ಥೇಮ್ಸ್ ನದಿಯ ದಂಡೆಯ ಮೇಲೆ ಇರುವ ಹಲವಾರು ಸಾಫ಼್ಟ್ ವೇರ್ ಕಂಪನಿಗಳ ಸಮೂಹ. ನನಗೆ ವಿಶಿಷ್ಟ ಎನಿಸಿದ್ದು : ಅಲ್ಲಿಯ ಕಟ್ಟಡಗಳು ಹೆಚ್ಚೆಂದರೆ ೩ ಮಹಡಿಗಳಷ್ಟೇ ಎತ್ತರ!!




ಕಛೇರಿ ಕೆಲಸದ ನಂತರ ನನ್ನ ಮುಂದಿನ ಪಯಣ ಬ್ಲಾಕ್ ಪೂಲ್ ನಲ್ಲಿರುವ ನನ್ನ ಸ್ನೇಹಿತೆಯ ಮನೆಗೆ. ರೆಡ್ಡಿಂಗ್ ನಿಂದ ಲಂಡನ್ ಗೆ ನನ್ನ ಲಗ್ಗೇಜುಗಳ ಜತೆ ಸಾಗಿದೆ.ಲಂಡನ್ ಸ್ಟೇಶನ್ ನಲ್ಲಿ ನನ್ನ ಸ್ನೇಹಿತೆಯ ಪತಿ ಕಾಯುತ್ತಿದ್ದರು.ನನ್ನ ಸ್ಯೂಟ್ ಕೇಸ್ ಗಳನ್ನು ಅವರಿಗೆ ವರ್ಗಾಯಿಸಿದೆ.. ನಾನೊಬ್ಬಳೇ ಲಂಡನ್ ಸುತ್ತುವಾಗ ಇದ್ದ ಆತಂಕ,ನಕಾಶೆಗಳನ್ನು ಓದುವ ಕೆಲಸ ಯಾವುದೂ ನನ್ನ ಜತೆಗಿರಲಿಲ್ಲ.ಪುಟ್ಟ ಬ್ಯಾಗ್ ಗಳನ್ನು ನಾನು ಹಿಡಿದುಕೊಂಡು ಅವರನ್ನು ಹಿಂಬಾಲಿಸಿದೆ. ದಿಕ್ಕು ಸೂಚನಾ ಫಲಕಗಳನ್ನು ಓದುವ ಗೋಜಿಗೂ ಹೋಗಲಿಲ್ಲ!! ನನ್ನ ಲಂಡನ್ ಪ್ರವಾಸದಲ್ಲಿ ನಿರಾತಂಕದಿಂದ ಇದ್ದ ಕ್ಷಣಗಳವು!!:)

ಲಂಡನ್-->ಪ್ರೆಸ್ಟನ್-->ಬ್ಲಾಕ್ ಪೂಲ್ ಗೆ ತಲುಪಿದೆ. ನನ್ನ ಸ್ನೇಹಿತೆ ಬಿಸಿಬೇಳೆ ಭಾತ್,ಅನ್ನ,ತಂಬುಳಿ,ಪಾಯಸ ತಯಾರಿಸಿ ನನಗಾಗಿ ಕಾಯುತ್ತಿದ್ದಳು. ಇಷ್ಟು ದಿನಗಳ ಪ್ರವಾಸದ ಸಮಯದಲ್ಲಿ ಬರೀ ತರಕಾರಿ,ಬ್ರ್‍ಎಡ್,ಪಿಜ಼ಾಗಳನ್ನೇ ಕಂಡ ನನಗೆ ಆಕೆ ತಯಾರಿಸಿದ ಖಾದ್ಯಪದಾರ್ಥಗಳನ್ನು ಕಂಡು ಬಾಯಿಯಲ್ಲಿ ನೀರೂರಿತು :) ನನ್ನ ಗೆಳತಿಗೆ ನಾನು ’ಬೆಸ್ಟ್ ಕುಕ್ ’ ಎಂಬ ಬಿರುದನ್ನು ಘೋಷಿಸಿದೆ. ಅಷ್ಟೊಂದು ರುಚಿಕರವಾಗಿ ಅಡುಗೆ ತಯಾರಿಸಿದ್ದಳು!!ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು!!




ಮರುದಿನ ನಾವು ಮಾಂಚೆಸ್ಟರ್ ನ ಶೋಪಿಂಗ್ ಸೆಂಟರ್ ಗೆ ಹೋದೆವು. ಟ್ರಾಫರ್ಡ್ ಸ್ಕ್ವಾರ್ ಎನ್ನುವುದು ಅದರ ಹೆಸರು. ಇಡೀ ದಿನ ಅಲ್ಲಿ ಸುತ್ತಾಡಿ ಬಂದೆವು. ನನ್ನ ಪ್ರವಾಸದಲ್ಲಿ ನಾನು ಬಹಳಷ್ಟು ಖುಶಿ ಪಟ್ಟ ಸ್ಥಳ ’ಲೇಕ್ ಡಿಸ್ಟ್ರಿಕ್ಟ್. ನಾನು ಇಷ್ಟರವರೆಗೆ ಹಿಮ ಕವಿದ ಪ್ರದೇಶವನ್ನು ಕಂಡಿರಲಿಲ್ಲ. ಸುತ್ತಮುತ್ತಲೂ ಹಿಮದ ಚಾದರ ಹರಡಿದರೆ ಅದು ಹೇಗೆ ಕಂಡೀತೆಂದು ಛಾಯಾಚಿತ್ರಗಳಲ್ಲಿ ಮಾತ್ರ ಕಂಡಿದ್ದೆ. ಹಿಮವನ್ನು ನನ್ನ ಕಣ್ಣಾರೆ ಕಂಡಾಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟು ಚಳಿ ಕೊರೆಯುತ್ತಿದ್ದರೂ ಹಿಮವನ್ನು ಕೈಯಲ್ಲಿ ಹಿಡಿದುಕೊಂಡು ಛಾಯಾಚಿತ್ರ ತೆಗೆದುಕೊಳ್ಳಲು ಮರೆಯಲಿಲ್ಲ.ನಾನು ಅತೀವ ಹರ್ಷಿಸಿದ ಸಮಯ ಅದು!!

ಲೇಕ್ ಡಿಸ್ಟ್ರಿಕ್ಟ್ ಹೆಸರೇ ಸೂಚಿಸುವಂತೆ ಅನೇಕ ಸರೋವರಗಳನ್ನು ಹೊಂದಿರುವ ಊರು. ಹಿಮದ ಹೊದಿಕೆ ಹೊದ್ದಿರುವ ,ಚಂದದ ಚಿತ್ರ ಅದು.ಜನಸಂಖ್ಯೆಯಂತೂ ತೀರಾ ಕಡಿಮೆ.ಚಳಿಗೆ ಇಡೀ ಊರೇ ನಿದ್ದೆಯಲ್ಲಿರುವಂತೆ ಕಾಣುತ್ತದೆ.ಅಲ್ಲಿಯ ಸೌಂದರ್ಯವನ್ನು ಬಣ್ಣಿಸಲು ನನ್ನ ಲೇಖನಿಗೆ ಶಕ್ತಿ ಸಾಲದು ಎನಿಸುತ್ತಿದೆ. ಅಷ್ಟೊಂದು ಸೊಗಸು.



ಒಟ್ಟಿನಲ್ಲಿ ನನ್ನ ಇಂಗ್ಲೆಂಡ್ ಪ್ರವಾಸವು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "short,sweet and cold "!! :)

Friday, November 14, 2008

ಒಂದು ಸಂದೇಹ ...

ಎಷ್ಟೇ ಜನ ಓಡಾಡಿದರೂ
ಎಷ್ಟೇ ವಾಹನ ಗುದ್ದಾಡಿದರೂ
ಬೆಂಗಳೂರ ರಸ್ತೆ ಮೂಕ ||

ಹಾರ್ನುಗಳ ಕಿರಿಕಿರಿ
ಜನರ ಚರಿಪಿರಿ
ಬೆಂಗಳೂರ ರಸ್ತೆ ಕಿವುಡು ||

ಮರಗಳು ಉರುಳಿದರೂ
ಬುವಿ ಧಗೆಯೇರಿದರೂ
ಬೆಂಗಳೂರ ರಸ್ತೆ ಕುರುಡು ||


ಹೊಗೆಯುಗುಳುವ ವಾಹನ
ವಾಸನೆಯ ಒಳಚರಂಡಿ
ಮಾರ್ಗಕ್ಕೆ ಮೂಗಿದೆಯೇ ?


ರಸ್ತೆಯ ಡಾಮರು ಕಿತ್ತರೂ
ಕೆಸರು ಜತೆಗೂಡಿದರೂ
ರಸ್ತೆಗೆ ಸ್ಪರ್ಶ ಜ್ಞಾನವಿದೆಯೇ?

ಪ್ರತಿ ದಿನವೂ ಇದೇ ರಸ್ತೆಯಲ್ಲಿ ಸಾಗುವ
ಮುಂದೆಯೂ ಸಾಗಲಿರುವ
ಪ್ರತಿ ಸಲವೂ ಇದೇ ವಿಷಯ ಕೊರೆಯುವ
ನನಗೆ ತಲೆ ಇದೆಯೇ ?

Monday, September 29, 2008

ಮೊಸರನ್ನ


ನಮಸ್ಕಾರ.
ನಾನೀಗ ಬರೆಯಹೊರತಿರುವುದು ಅತ್ಯಂತ ಸುಲಭವಾದ ಅಡುಗೆ ವಿಧಾನ.
ಮೊಸರನ್ನ.ಸರಳವಾದ ಮತ್ತು ರುಚಿಕರವಾದ ಖಾದ್ಯ.ನಾನು ಮೊಸರನ್ನ ಮಾಡುವುದು ಮೂರು ಸಂದರ್ಭಗಳಲ್ಲಿ :೧. ನನಗೊಬ್ಬಳಿಗೆ ಮಾತ್ರ ಅಡಿಗೆ ಮಾಡಿಕೊಳ್ಳಬೇಕಾಗಿ ಬಂದಾಗ ೨)ಅಡಿಗೆ ಮಾಡಲು ಉದಾಸೀನ ಆದಾಗ ೩)ಹೊಸ ಶೈಲಿಯ ಅಡುಗೆ ಪ್ರಯೋಗ ಮಾಡಿದಾಗ.(ಅದು ಸರಿಯಾಗದಿದ್ದರೆ ಕಡೇ ಪಕ್ಷ ಮೊಸರನ್ನವಾದರೂ ಇರಲಿ ಅಂತ ) :)

ಸರಿ,ಮೊಸರನ್ನ ಮಾಡುವ ಪರಿ ಹೀಗಿದೆ.

ಬೇಕಾಗುವ ಸಾಮಗ್ರಿಗಳು :

ಅಕ್ಕಿ : ಎರಡು ಕಪ್
ನೀರು : ನಾಲ್ಕು ಕಪ್

ದಾಳಿಂಬೆ ಬೀಜ : ಅರ್ಧ ಹಿಡಿ
ಗೇರು ಬೀಜ :೧೦
ಎಣ್ಣೆ :ಎರಡು ಚಮಚ
ಮಜ್ಜಿಗೆ ಮೆಣಸು :೪
ಬೇವಿನ ಎಲೆ : ೧೦
ಸಾಸಿವೆ ,ಜೀರಿಗೆ,ಉದ್ದಿನ ಬೆಳೆ ತಲಾ ಒಂದು ಚಮಚ


೨ ಲೋಟ ಅಕ್ಕಿಯನ್ನು ತೊಳೆದು, ೪ ಲೋಟ ನೀರು ಹಾಕಿ, ಕುಕ್ಕರ್ ನಲ್ಲಿ ಇಟ್ಟು ಅನ್ನ ಮಾಡಿಕೊಳ್ಳಿ.( ಮೂರು ಸೀಟಿ ಬರುವ ತನಕ ಅಕ್ಕಿ ಬೇಯಬೇಕು.)


ಒಂದು ಸಣ್ಣ ಕಡಾಯಿಯಲ್ಲಿ, ಎಣ್ಣೆ,ಜೀರಿಗೆ,ಸಾಸಿವೆ,ಉದ್ದಿನ ಬೇಳೆ, ಸಾಸಿವೆ ಸಿಡಿಯುವ ತನಕ ಒಲೆಯ ಮೇಲೆ ಇಡಿ. ಬೇವಿನ ಎಲೆಯನ್ನು ಕೊನೆಗೆ ಹಾಕಿದರೆ ಒಳ್ಳೆಯದು. ಅದನ್ನು ಅನ್ನದ ಮೇಲೆ ಹಾಕಿ.ಈಗ ಮಜ್ಜಿಗೆ ಮೆಣಸನ್ನು ಕರಿದುಕೊಂಡು, ಅನ್ನಕ್ಕೆ ಹಾಕಿ. ಗೇರು ಬೀಜವನ್ನು ಕರಿದು, ಅನ್ನಕ್ಕೆ ಹಾಕಿ. ಗೇರು ಮತ್ತು ಮಜ್ಜಿಗೆ ಮೆಣಸನ್ನು ಪ್ರತ್ಯೇಕವಾಗಿ ಕರಿಯುವುದು ಒಳ್ಳೆಯದು. ಈಗ ಮೊಸರು , ದಾಳಿಂಬೆ ಬೀಜಗಳನ್ನು ಅನ್ನಕ್ಕೆ ಸೇರಿಸಿ.ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈಗ ನೊಡಿ, ಮೊಸರನ್ನ ತಯಾರು.ತಡ ಏಕೆ, ಕೂಡಲೇ ತಿನ್ನಿ. :)

Tuesday, August 12, 2008

ಹೀಗೊಂದು ಸ್ವಗತ...

ಸುಮಾರು ದಿನಗಳಿಂದ ಅಂದುಕೊಳ್ಳುತ್ತಿದ್ದೆ.ಕನ್ನಡ ಅಕ್ಷರ ಬರೆಯದೆ ಬಹಳ ದಿನಗಳಾದವು.ಏನಾದರೂ ಲೇಖನ ಬರೆಯಲೆ? ಉಹ್ಮ್ಮ್..ಕವನ..ಕಥೆ..ಅಂತೂ ಏನೋ ಒಂದು..ಮನಸ್ಸಿಗೆ ತೋಚಿದ್ದು..ಕಾಗದ,ಪೆನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಮನಸ್ಸೆಲ್ಲಾ ಖಾಲಿ ಖಾಲಿ..ಮನಸ್ಸು ಮೌನದ ಮೊರೆ ಹೊಕ್ಕಿಬಿಟ್ಟಿದೆ..ಯಾಕೆ ಹೀಗಾಯ್ತು? ನನ್ನ ಏಕತಾನದ ಜೀವನ ನನ್ನನ್ನು ಈ ಪರಿಯಾಗಿಸಿದೆಯೇ ? ನನಗೆ ಗೊತ್ತಿಲ್ಲ !! :(

ಇವತ್ತಿಗೆ ಆರು ತಿಂಗಳ ಹಿಂದೆ ನನ್ನ ಅಫೀಸು , ನನ್ನ ಮನೆಯಿಂದ ೧೬ ಕಿ.ಮೀ.ದೂರಕ್ಕೆ ಸ್ಥಳಾಂತರಗೊಂಡಿತು.ಗಡಿಯಾರದ ಟಿಕ್ ಟಿಕ್ ಸದ್ದಿಗೆ ಅನುಗುಣವಾಗಿ ನಡೆಯುವ ನನ್ನ ದಿನಚರಿ ಅಲ್ಲಿಂದ ಶುರುವಾಯಿತು..ಬೆಳಗ್ಗೆ ೬ ೩೦ ಗೆ ಅಲಾರ್ಮ್ ಸದ್ದಿಗೆ ಎದ್ದು, ಆಫೀಸಿಗೆ ಹೊರಡಲು ತಯಾರಾಗಿ,ತಿಂಡಿ ತಯಾರಿಸಿ,ತಿಂದು (ಮಾಡಿದ್ದುಣ್ಣೋ ಮಹಾರಾಯ !! ), ೭ ೪೫ ಕ್ಕೆ ಬಸ್ ಸ್ಟಾಪ್ ಗೆ ಬರುವ ಆಫೀಸ್ ಬಸ್ಸನ್ನು ಹಿಡಿಯುತ್ತೇನೆ.ಬಸ್ಸಲ್ಲಿ ಕುಳಿತಾಗ ಬೆಳಗ್ಗಿಂದ ಆ ಕ್ಷಣದವರೆಗಿನ ಗಡಿಬಿಡಿ ಕೊಂಚ ಹತೋಟಿಗೆ ಬಂದು,ಮನಸ್ಸು ನಿರಾಳವೆನಿಸುತ್ತದೆ.ಆಗೊಮ್ಮೆ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ, ಅಗೋ ನೋಡಿ ಶುರುವಾಯಿತು..ಬಸ್ಸಿನ ಯಾತ್ರೆ.ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ,ನೊಂದು,ಬೆಂದು,ಬಸವಳಿಯುವ ದುರವಸ್ಥೆಯನ್ನು ಅನುಭವಿಸಿದರೆ ಮಾತ್ರ ಅರಿಯಬಹುದೇ ವಿನಹ ನನ್ನ ಲೇಖನಿಯಿಂದ ಹೊರಬರುವ ಪದಗುಚ್ಛಗಳ ಸೆಣಸಾಟದಿಂದಲ್ಲ!!

ಜನಸಂಖ್ಯೆಯ ಹೆಚ್ಚಳ,ಕಿರಿದಾದ ರಸ್ತೆಗಳು,ಶಿಸ್ತು ಪಾಲಿಸದ (ಪಾಲಿಸುವ ಮಂದಿಯೂ ಇದ್ದಾರೆ ಕೆಲವರು ) ಜನ ಏನೆಲ್ಲ ಕಾರಣಗಳನ್ನು ಪಟ್ಟಿ ಮಾಡಲಿ?ಸಿಗ್ನಲ್ ಗಳಲ್ಲಿ ಒಂದಷ್ಟು ವಾಹನಗಳು ನಿಲ್ಲುತ್ತಿದ್ದಂತೆ ,ಕೆಂಪು ಸಿಗ್ನಲ್ ಕಾಣಿಸಿದರೂ ಸಕಲ ವಾಹನಗಳೂ ಏಕಕಾಲಕ್ಕೆ ಹಾರ್ನ್ ಬಳಸುವಾಗ ಉಂಟಾಗುವ ಶಬ್ದದ ಉತ್ಕಟತೆಗೆ,ಅದರ ನಾದ ತರಂಗಗಳ ವೈಭವಕ್ಕೆ ನಿಮ್ಮ ಕೋಮಲವಾದ ಕರ್ಣಗಳು ಎಷ್ಟೇ ಸಧೃಢವಾದ ಸ್ಥಿತಿಯಲ್ಲಿದ್ದರೂ ಹಾನಿಗೊಳಗಾಗವುವು ಎಂಬ ಮಾತು ಉತ್ಪ್ಪ್ರೇಕ್ಷೆಯಲ್ಲ!!

ರಾಶಿ ರಾಶಿ ವಾಹನಗಳು ಹೊರಹಾಕುವ ಧೂಮಸಾಗರದ ಲೀಲೆಯನ್ನು ಏನೆಂದು ಬರೆಯಲಿ?ಪುರಾಣ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳ ಆವರಣದಲ್ಲಿ ಹೋಮ ಹವನಾದಿಗಳ ಹೊಗೆಯೂ,ಮಂತ್ರಘೋಷವೂ , ಘಂಟಾ ನಾದವೂ ಕೇಳಿಬರುತ್ತಿತ್ತಂತೆ.ಈ ಕಾಲದಲ್ಲಿ ಬೆಂಗಳೂರಿನ ರಸ್ತೆಯಲ್ಲಿ ವಾಹನಗಳ ಹೊಗೆಯೂ,ಹಾರ್ನುಗಳ ಕರ್ಕಶ ಧ್ವನಿಯೂ ತುಂಬಿ ಹೋಗಿದೆ. ಮಧ್ಯ ಮಧ್ಯ ವಾಹನ ಚಾಲಕರಿಂದ ಹೊರಹೊಮ್ಮುವ ಆಣಿಮುತ್ತುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಇವೆಲ್ಲದರ ಮಧ್ಯೆ ವಾಹನಗಳು ಯಾವ ದಿಕ್ಕಿನಿಂದಲೂ ಬರಬಹುದು.ಯಾವುದೇ ಸೂಚನೆ ನೀಡದೆಯೂ ಅವು ಬೇಕಾದ ದಿಕ್ಕಿಗೆ ತಿರುಗಬಹುದು.ನಿಮ್ಮ ಹಣೆಯಲ್ಲಿ ಬ್ರಹ್ಮ ಆಯುಷ್ಯದ ರೇಖೆಯನ್ನು ಸ್ವಲ್ಪ ದೀರ್ಘವಾಗಿ ಎಳೆದಿದ್ದರೆ ನೀವು ಬಚಾವ್.ಇಲ್ಲದಿದ್ದರೆ ಯಮನ ದೂತರು ನಿಮ್ಮನ್ನು ಕರೆದೊಯ್ಯಲು ತಯಾರಾಗಿಯೇ ಇದ್ದಾರೆ.ರಸ್ತೆಗಳ ಮೇಲೆ ವಾಹನಗಳ ಜತೆ ಜತೆಯೇ ಸಾಗುವ ಎಮ್ಮೆಗಳು ಹಾಗೂ ಕೋಣಗಳ ಹಿಂಡು ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ!!

ವಾಹನಗಳ ಬಗ್ಗೆ ಇಶ್ಟೆಲ್ಲಾ ಬರೆದು,ರಸ್ತೆ ಬಗ್ಗೆ ಬರೆಯದಿದ್ದರೆ ಹೇಗೆ? ಕೆಲವೊಂದೆಡೆ ಡಾಮರು , ಕೆಲವೊಂದೆಡೆ ಬರೀ ನೆಲ,ಮತ್ತೆ ಕೆಲವೆಡೆ ತೇಪ ಹಾಕಿದ ರಸ್ತೆಗಳು, ಅನವಶ್ಯಕ ರಸ್ತೆ ಉಬ್ಬುಗಳು ಕೆಲವೆಡೆ..ಮಳೆ ಬಂದರಂತೂ ಬೆಂಗಳೂರಿನ ರಸ್ತೆಗಳು ದೇವರಿಗೇ ಪ್ರೀತಿ.ಒಳಚರಂಡಿಯ ಅಷ್ಟೂ ನೀರು ರಸ್ತೆ ಮೇಲೆ ಬಂದು ಬಿಡುತ್ತದೆ. ಪಾಪ ಅದಕ್ಕೂ ಮಳೆ ನೋಡುವ ಉತ್ಸಾಹ !! ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋದಿರೋ,ಚರಂಡಿ ನೀರು ಚೆಲುವಿನ ಚಿತ್ತಾರವನ್ನು ನಿಮ್ಮ ಮೇಲೆ ಮೂಡಿಸದೇ ಇರುವುದಿಲ್ಲ.
ಒಂದಂತೂ ನಿಜ, ನೀವು ನಾಲ್ಕು ಸಲ ಸ್ನಾನ ಮಾಡದ ಹೊರತು, ನಿಮ್ಮ ಹತ್ತಿರ ಬೇರೆ ಯಾರೂ ಬರಲಾರರು.
" ಹೇಮಾ ಮಾಲಿನಿಯ ಕೆನ್ನೆಗಿಂತಲೂ ನುಣುಪಾಗಿರುವ ರಸ್ತೆಗಳು" ಎಂಬ ವರ್ಣನೆ ನಿಮಗೆ ಕಡತದಲ್ಲಿ ಮಾತ್ರ ಸಿಕ್ಕೀತು.

ಹ್ಮ್ಮ್..ಮರಗಳು..ಮನೆಗೊಂದು ಮರ..ಊರಿಗೊಂದು ವನ..ಗಾದೆಯೇನೋ ಇದೆ. ರಸ್ತೆ ಅಗಲೀಕರಣದ ನೆಪದಲ್ಲಿ ಇರುವ ಮರಗಳು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ ಹಾಕುವವರ ಮಧ್ಯೆ "ಪರಿಸರ ಉಳಿಸಿ" ಘೋಷಣೆ ಮೆತ್ತಗಾಗಿ ಬಿಡುತ್ತದೆ. ಕಾಂಕ್ರೀಟ್ ಕಾಡಿನಲ್ಲಿ ಹಸಿರ ಹುಡುಕುವ ನಿಮ್ಮ ಕಣ್ಣುಗಳು ಸುಸ್ತಾಗಿ ಹೋಗುತ್ತವೆ.ಧೂಳಿನ ಕಣಗಳು ನಿಮ್ಮ ಕಣ್ಣಲ್ಲಿ ತುಂಬಿ ಕಣ್ಣು ಮಂಜಾಗುವಂತೆ ಮಾಡುತ್ತವೆ.

ನನ್ನ ಶಾಲಾ ದಿನಗಳಲ್ಲೂ ನಾನು ಬಸ್ನಲ್ಲಿ ಪಯಣಿಸುತ್ತಿದ್ದೆ.ಹೆಗಲಲ್ಲಿ ಪುಸ್ತಕದ ಹೊರೆ,ಕೈಯಲ್ಲಿ ಬುತ್ತಿ ಛತ್ರಿ.ದಾರಿಯುದ್ದಕ್ಕೂ ಕಾಡು ಅಥವಾ ಕಾಡಿನ ಮಧ್ಯದಲ್ಲೇ ದಾರಿ ಎನ್ನಲೆ? ಆಗ ಇದ್ದ ೨-೩ ಬಸ್ಸುಗಳು,೪-೫ ಜೀಪುಗಳು,ಮತ್ತೆ ಕೆಲವು ಮಿನಿ ವಾಹನಗಳು ಟ್ರಾಫಿಕ್ ಜಾಮ್ ಗೆ ಕಾಣಿಕೆ ನೀಡಲು ಸೋತಿದ್ದವು.ಮಳೆ,ಹಕ್ಕಿಗಳ ಚಿಲಿಪಿಲಿ,ತಲೆಯಲ್ಲಿ ಮುಡಿದ ಮಲ್ಲಿಗೆ,ಗುಲಾಬಿಯ ಪರಿಮಳ,ಸಹಪಯಣಿಗ ವಿದ್ಯಾರ್ಥಿಗಳ ಸ್ನೇಹದ ನುಡಿಗಳು ಆ ಬಸ್ ಪಯಣದ ಸಂತಸಕ್ಕೆ ಕಾರಣವಾಗಿದ್ದವು.ಆಗಲೂ ನಾನು ದಿನಕ್ಕೆ ೩೨ ಕಿ.ಮೀ ಪಯಣಿಸುತ್ತಿದ್ದೆ. ಈಗಲೂ ಅಷ್ಟೇ ದೂರ ..ಆದರೆ ಬಸ್ ಪಯಣದ ಅನುಭವಕ್ಕೆ ಅಜ ಗಜಾಂತರ!!

ಆದರೆ ಇದ್ದುದರಲ್ಲೇ ನೆಮ್ಮದಿಯ ವಿಷಯವೆಂದರೆ ನಾನು ಆಫೀಸ್ ಬಸ್ ನಲ್ಲಿ ಸಂಚರಿಸುವ ಕಾರಣ ಬಸ್ ನೊಳಗಿನ ನೂಕು ನುಗ್ಗಲು,ಸ್ಥಳಾವಕಾಶದ ಕೊರತೆ,ಪಿಕ್ ಪಾಕೆಟ್ ಭಯ ಇತ್ಯಾದಿಗಳ ಚಿಂತೆ ಇಲ್ಲ.ಕೆಲವು ಖಾಸಗಿ ಬಸ್ ಗಳಲ್ಲಿ ಕೇಳಿಸುವಂತಹ ಕರ್ಕಷ ಹಾಡುಗಳಿಲ್ಲ.



ಅಂತೂ ಇಂತೂ ಸುದೀರ್ಘ ಪಯಣ, ಆಫೀಸಿನ ಕೆಲಸ ಮುಗಿಸಿ ಮನೆಗೆ ಬಂದು ಮತ್ತೆ ಮನೆಕೆಲಸದಲ್ಲಿ ತೊಡಗುತ್ತೇನೆ.ಒಂದಷ್ಟು ಹೊತ್ತು ಮೌನವಾಗಿದ್ದು,ಧ್ಯಾನ ಮಾಡಿ,ದೇವರ ಸ್ತೋತ್ರ ಹೇಳಿ,ಪಿಟೀಲು ನುಡಿಸಿ, ಕೆಲವೊಮ್ಮೆ ಯಾವುದಾದರೂ ಪುಸ್ತಕ ತಿರುವಿ ಹಾಕಿ,ಅಡಿಗೆ ಮಾಡಿ,ಊಟ ಮಾಡಿ, ನಿದ್ದೆಗೆ ಜಾರುತ್ತೇನೆ. ಮರುದಿನ ಯಥಾಪ್ರಕಾರ...

Sunday, August 3, 2008

ಕಣಿಲೆ ಪಲ್ಯ




ಮಲೆನಾಡಿನಲ್ಲಿ ಮಳೆಗಾಲದ ಸಮಯ ಚಿಗುರುವ ಎಳೆ ಬಿದಿರು ವಿಧ ವಿಧದ ಖಾದ್ಯಗಳಾಗಿ ಪರಿವರ್ತನೆಯಾಗುತ್ತದೆ.
ಕಣಿಲೆಯ ಪಲ್ಯವನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸುತ್ತಿದ್ದೇನೆ.

ಹೆಚ್ಚಿದ ಕಣಿಲೆ :೩ ಕಪ್
ಎಣ್ಣೆ:ಸ್ವಲ್ಪ
ಸಾಸಿವೆ,ಜೀರಿಗೆ,ಅರಸಿನ,ಉದ್ದಿನ ಬೇಳೆ ತಲಾ ಒಂದು ಚಮಚ
ಕೆಂಪು ಮೆಣಸು : ೫
ಬೆಲ್ಲ : ಸ್ವಲ್ಪ (ಸಣ್ಣ ಅಡಿಕೆ ಗಾತ್ರದಷ್ಟು)
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ

ಕಣಿಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. (ಸುಮಾರು ೭-೮ ಸೀಟಿ ಬರುವ ತನಕ )
ಅಮೇಲೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ,ಮೆಣಸು,ಅರಸಿನ, ಉದ್ದು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಬೇಯಿಸಿದ ಕಣಿಲೆಯನ್ನು ಸೇರಿಸಿ. ಬೆಲ್ಲ,ಉಪ್ಪು ಹಾಕಿ, ಮಂದ ಉರಿಯಲ್ಲಿ ೧೦ ನಿಮಿಷ ಬೇಯಿಸಿ.

ಈಗ ಕಣಿಲೆಯ ಪಲ್ಯ ತಯಾರು.

ವಿ.ಸೂ. ಕಣಿಲೆಯನ್ನು ಕತ್ತರಿಸಿ ತಂದ ಕೂಡಲೇ ತಿನ್ನುವಂತಿಲ್ಲ. ಅದನ್ನು ಸಣ್ಣದಾಗಿ ಹೆಚ್ಚಿ, ನೀರಿನಲ್ಲಿ ಮೂರು-ನಾಲ್ಕು ದಿನ ನೆನೆ ಹಾಕಿದ ಬಳಿಕವಷ್ಟೇ ಬಳಕೆಗೆ ಯೋಗ್ಯವಾಗುತ್ತದೆ. ಕಣಿಲೆಯ ತೊಗಟೆಯನ್ನು ನಮ್ಮ ಕಡೆ ನೆಲದಲ್ಲಿ ಹೂತು ಹಾಕುತ್ತಾರೆ.ಕಾರ್‍ಅಣ ಜಾನುವಾರುಗಳು ತಿಂದು ಅವಕ್ಕೆ ಅಪಾಯವಾಗದಿರಲಿ ಎಂದು.

Wednesday, May 21, 2008

ನನ್ನೂರು ಹೊಸಮಠ ...



























































Note:School photo is by Sankeerth, dam photo is by raveesh and river in rainy season by Suhas. Rest all clicked by the author.

Sunday, April 20, 2008

ತೊಂಡೆಕಾಯಿ ,ಗೋಡಂಬಿ ಪಲ್ಯ



ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.

ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.

Sunday, April 13, 2008

ಉದರ ನಿಮಿತ್ತಂ ಬಹುಕೃತ ಪಾಕಂ


ಅದೊಂದು ಕಾಲವಿತ್ತು. ನನಗೆ ಅನ್ನ ಸಾರು ಮಾಡುವುದಿರಲಿ ನೀರು ಬಿಸಿ ಮಾಡಲು ಸಹ ಬರುತ್ತಿರಲಿಲ್ಲ! ವಿದ್ಯಾಭ್ಯಾಸದ ಹೆಚ್ಚಿನ ಸಮಯವನ್ನು ಹಾಸ್ಟೆಲ್ ವಾಸದಲ್ಲಿ ಕಳೆದುದರಿಂದಲೊ ಏನೊ, ಮನೆಗೆ ಹೋದಾಗಲೂ ಅಡುಗೆ ಮಾಡುವ ಅವಶ್ಯಕತೆ ಇಲ್ಲದಿದ್ದುದರಿಂದಲೊ ಏನೊ, ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ! ತಿನ್ನಲಿಕ್ಕಾದರೆ ರೆಡಿ ಇದ್ದೇನಲ್ಲ... ದೊಡ್ಡ ಬಟ್ಟಲಮ್ಮ ದೊಡ್ಡ ಬಟ್ಟಲು!

ನನ್ನ ಇಂಜನಿಯರಿಂಗ್ ಶಿಕ್ಷಣ ಮುಗಿದು, ಮದುವೆಯಾದ ಮೇಲೆ ಅಡುಗೆ ಕಲಿಯುವುದು ಅನಿವಾರ್ಯವಾಯಿತು. ಆಗ ಶುರುವಾಯಿತು ನೋಡಿ... "ಕೆಲವಂ ಬಲ್ಲವರಿಂದ ಕಲ್ತು... ಕೆಲವಂ ಶಾಸ್ತ್ರಗಳಮ್ ಓದುತಲಿ... ಕೆಲವಂ ದೂರದರ್ಶವಂ ನೋಡುತಲಿ..." ಅಡುಗೆಮನೆಯಲ್ಲಿ ನನ್ನ ನಿತ್ಯ ಪ್ರಯೋಗಗಳು!! ನನ್ನ ಬಡಪಾಯಿ ಗಂಡ (ತುಂಬ ಪ್ರೀತಿಸ್ತಾರೆ ಕಣ್ರೀ ನನ್ನನ್ನು!) ನನ್ನೀ ಪ್ರಯೋಗಗಳ ಗಿನ್ನಿ ಪಿಗ್ ಎಂದು ಬೇರೆ ಹೇಳಬೇಕಿಲ್ಲ ತಾನೆ?

ನನ್ನ ಪಾಕಪ್ರಾವೀಣ್ಯವನ್ನು ದಾಖಲೆಯಾಗಿರಿಸುವುದಕ್ಕಾಗಿ ನನ್ನ ಪಾಕಕಲಾ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಆ ಚಿತ್ರಗಳದೊಂದು "ಕೊಲಾಜ್" ಮಾಡಿದ್ದೇನೆ. ಅದಕ್ಕೆ "ಉದರ ನಿಮಿತ್ತಂ ಬಹುಕೃತ ಪಾಕಂ" ಎಂಬ ಟೈಟಲ್ ಕೊಟ್ಟು ನಿಮಗೀಗ ಆ ಚಿತ್ರಗಳನ್ನಿಲ್ಲಿ ತೋರಿಸುತ್ತಿದ್ದೇನೆ.

Thursday, April 10, 2008

ಬ್ರಾಹ್ಮಿ ಎಲೆಯ ತಂಬುಳಿ



ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

Saturday, March 29, 2008

ಬ್ರಾಹ್ಮಿ ಎಲೆಯ ಶರಬತ್ತು




ಬೇಕಾಗುವ ಸಾಮಗ್ರಿಗಳು :
ಎರಡು ಹಿಡಿ ಬ್ರಾಹ್ಮಿ ಎಲೆ
ಬೆಲ್ಲ :ಮಧ್ಯಮ ಗಾತ್ರದ ಚೂರು
ನೀರು ಸ್ವಲ್ಪ

ವಿಧಾನ:
ಬ್ರಾಹ್ಮಿ ಎಲೆಗಳನ್ನು ಚೆನ್ನಾಗಿ ತೊಳೆದು, ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಮತ್ತು ಬೆಲ್ಲ ಸೇರಿಸಿ.ನುಣ್ಣಗೆ ರುಬ್ಬಿ.
ಆಮೇಲೆ ಅದನ್ನು ಮಿಕ್ಸಿ ಯಿಂದ ತೆಗೆದು, ಸೋಸಿ.
ಬೇಕಿದ್ದರೆ ಮಂಜುಗಡ್ಡೆ ಸೇರಿಸಿ.
ಇನ್ನೇಕೆ ತಡ...ರುಚಿ ನೋಡಿ :)
ಬೇಸಗೆಯ ಧಗೆಗೆ ತಂಪಾದ ,ಆರೋಗ್ಯಕರವಾದ ಪಾನೀಯ ಇದು!!

Friday, March 21, 2008

ನಿನ್ನೆ ರಾತ್ರಿಯ ಊಟ....



ನಿನ್ನೆ ರಾತ್ರಿಯ ಊಟಕ್ಕೆ ಮಾಡಿದ ಅಡುಗೆ ಇದು..


ಸಾಂಬ್ರಾಣಿ ಎಲೆಯ ಸಾರು :

ಬೇಕಾಗುವ ಸಾಮಗ್ರಿಗಳು:

ಸಾಂಬ್ರಾಣಿ ಎಲೆ : ಎರಡು ಹಿಡಿ
ನೀರುಳ್ಳಿ :ಒಂದು
ತುಪ್ಪ :ಎರಡು ಚಮಚ

ಉದ್ದು,ಅರಿಸಿನ,ಸಾಸಿವೆ ,ಜೀರಿಗ,ಎಣ್ಣೆ, : ತಲಾ ಒಂದು ಚಮಚ
ಕೆಂಪು ಮೆಣಸು : 3

ಹುಣಸೆ ರಸ :4 ಚಮಚ
ಬೆಲ್ಲ :ಮಧ್ಯಮ ಗಾತ್ರದ ಚೂರು
ಉಪ್ಪು :ರುಚಿಗೆ ತಕ್ಕಷ್ಟು


ಮೊದಲಿಗೆ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ.
ನೀರಿಗೆ ಹುರಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ.
ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ.
ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ.
ಆಮೇಲೆ ಒಲೆಯಿಂದ ಇಳಿಸಿ.

ಈಗ ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.

ಸಾಸಿವೆ ಸಿದಿಯುತ್ತಿದ್ದಂತೆ ಒಲೆಯಿಂದ ಇಳಿಸಿ,ಕುದಿಸಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳ ಮಿಶ್ರಣಕ್ಕೆ ಹಾಕಿ.

ಈ ಸಾರು ಬಹಳ ರುಚಿ.ಅನ್ನಕ್ಕೆ ಬಹಳ ಒಳ್ಳೆಯ ಜತೆ!! :)

ಈ ಅಡುಗೆ ವಿಧಾನ ತಿಳಿಸಿದ ಶಶಾಂಕನಿಗೆ ಥ್ಯಾಂಕ್ಸ್.

Sunday, March 16, 2008

ನನ್ನ ಊರಿನ ಮಳೆ...

ನನ್ನ ಊರಿನ ಮಳೆಯನ್ನು ನನ್ನ ಕ್ಯಾಮರಾ ದಲ್ಲಿ ಈ ಪರಿಯಾಗಿ ಸೆರೆ ಹಿಡಿದಿದ್ದೇನೆ. ನೋಡಿ ನಿಮಗೆ ಹೇಗೆ ಅನ್ನಿಸಿತು ಅಂತ ತಿಳಿಸಿ.
click here

Friday, January 18, 2008

ಫುಲ್ಕಾ ...



ಬ್ಲಾಗ್ ಗೆ ಅಕ್ಷರ ಸೇರಿಸದೆ ಬಹಳ ದಿನಗಳಾದವು.ಕಾರಣಗಳು ಹಲವಾರು ಇದ್ದರೂ ಮುಖ್ಯ ಕಾರಣ "ಉದಾಸೀನ "..ಇವತ್ತು ಅದನ್ನು ಹೇಗಾದರೂ ಮೆಟ್ಟಿ ನಿಂತು, ಫುಲ್ಕಾ ಮಾಡುವ ವಿಧಾನ ವನ್ನು ಇಲ್ಲಿ ಬರೆಯುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು : ೨ ಲೋಟ
ಉಪ್ಪು : ರುಚಿಗೆ ತಕ್ಕಷ್ಟು
ನೀರು :ಒಂದು ಲೋಟ

ಮಾಡುವ ವಿಧಾನ
ಗೋಧಿ ಹಿಟ್ಟು , ಉಪ್ಪು, ನೀರು ಇವುಗಳನ್ನು ಚೆನ್ನಾಗಿ ಕಲಸಿ.ಹತ್ತು ನಿಮಿಷ ಹಾಗೇ ಬಿಡಿ.
ಆಮೇಲೆ ಗೋಧಿ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಚಪಾತಿ ಲಟ್ಟಿಸುವಂತೆ ಲಟ್ಟಿಸಿ.

ಕಾವಲಿಯನ್ನು ಬಿಸಿಮಾಡಿ, ಆ ಬಳಿಕ ಲಟ್ಟಿಸಿದ ಸಣ್ಣ ಚಪಾತಿಗಳನ್ನು ಕಾವಲಿಗೆ ಹಾಕಿ.ಸ್ವಲ್ಪ ಬೆಂದ ಕೂಡಲೇ,ಅವುಗಳನ್ನು ಚಿಮಟಿಯ ಸಹಾಯದಿಂದ ಕಾವಲಿಯಿಂದ ತೆಗೆದು,ನೇರವಾಗಿ ಬೆಂಕಿ ಮೇಲೆ ಸುಡಬೇಕು.ಎರಡೂ ಒಲೆಗಳನ್ನು ಉರಿಸಿದರೆ ಒಳ್ಳೆಯದು.ಒಂದರಲ್ಲಿ ಕಾವಲಿಯಲ್ಲಿ ಬೇಯಿಸುವುದು, ಇನ್ನೊಂದರಲ್ಲಿ ಚಪಾತಿಯನ್ನು ನೇರವಾಗಿ ಸುಡುವುದು ಒಟ್ಟಿಗೆ ಮಾಡಬಹುದು.

ಫುಲ್ಕಾ ತಯಾರು!!
ಪಲ್ಯ/ಸಾಂಬಾರಿನ ಜತೆ ಫುಲ್ಕಾವನ್ನು ಸವಿಯಬಹುದು!!

ಇನ್ನೇಕೆ ತಡ, ಫುಲ್ಕಾ ಮಾಡಿ, ಹೇಗಾಯಿತು ಹೇಳಿ!!
thatskannada