Pages

Sunday, September 25, 2011

ಪರಾಠ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’


೧. ಆಲೂ ಪರಾಠ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಆಲೂಗಡ್ಡೆ :೨
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಗರಂ ಮಸಾಲ : ಅರ್ಧ ಚಮಚ
ಆಮ್ಚೂರ್ ಹುಡಿ :ಅರ್ಧ ಚಮಚ

ಎಣ್ಣೆ :ಸ್ವಲ್ಪ




ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಆಲೂಗಡ್ಡೆ ಯನ್ನು ಕುಕ್ಕರ್ ನಲ್ಲಿ ಬೇಯಿಸಿ, ಸಿಪ್ಪೆ ತೆಗೆಯಿರಿ.
೩.ಬಳಿಕ ಅಲೂಗದ್ದೆಯನ್ನು ನುಣ್ಣಗೆ ಪುಡಿ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸು,ಜೀರಿಗೆ,ಗರಂ ಮಸಾಲ,ಅಮ್ಚೂರ್ ಹುಡಿ, ಕೊತ್ತಂಬರಿ ಸೊಪ್ಪು ,ಉಪ್ಪು ಇವುಗಳನ್ನು ಹಾಕಿ ಒಟ್ಟಿಗೆ ಕಲಸಿರಿ.
೪.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ. ಆಲೂಗಡ್ಡೆ ಮಿಶ್ರಣದಿಂದಲೂ ಉಮ್ದೆಗಳನ್ನು ಮಾಡಿ. ಇವು ಗೋಧಿ ಹಿಟ್ಟಿನ ಉ೦ಡೆಗಳಿಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿರಬೇಕು.
೫.ಗೋಧಿ ಹಿಟ್ಟಿನ ಉಂಡೆಗಳನ್ನು ೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು. ಇದರಲ್ಲಿ ಅಲೂಗಡ್ಡೆಯ ಉಂಡೆಯನ್ನು ಇಟ್ಟು ನಿಧಾನವಾಗಿ ಚಪಾತಿಯನ್ನು ಮದಚಬೇಕು.
ಅಲೂಗಡ್ಡೆಯ ಉಂಡೆ ಸರಿಯಾಗಿ ಮುಚ್ಚುವಂತೆ ಚಪಾತಿಯನ್ನು ಮದಚಬೇಕು.ಬಳಿಕ ಇದನ್ನು ನಿಧಾನವಾಗಿ ಲಟ್ಟಿಸಬೇಕು.
೬.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
೭ಆಲೂ ಪರಾಠ ತಯಾರಾಯಿತು . ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.


೨.ಗೋಬಿ ಪರಾಠ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಹೆಚ್ಚಿದ ಕೋಲಿ ಫ್ಲವರ್ :೨ ಲೋಟ
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಓಮ (ಅಜವಾನ ):ಅರ್ಧ ಚಮಚ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಕೋಲಿ ಫ್ಲವರ್,ಜೀರಿಗೆ,ಹಸಿ ಮೆಣಸು,ಕೊತ್ತಂಬರಿ ಸೊಪ್ಪು,ಓಮ ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಕೋಲಿ ಫ್ಲವರ್ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಗೋಬಿ ಪರಾಠ ತಯಾರಾಯಿತು .ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.

ವಿ.ಸೂ. ಕೋಲಿ ಫ್ಲವರ್ ಬದಲು ಹೆಚ್ಚಿದ ಮೂಲಂಗಿಯನ್ನು ಬಳಸಿದರೆ, ಮೂಲಿ ಪರಾಠ ವಾಗುತ್ತದೆ .


೩.ಪಾಲಕ್ ಪರಾಠ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು


ಹೆಚ್ಚಿದ ಪಾಲಕ್ :೨ ಲೋಟ
ಜೀರಿಗೆ :ಅರ್ಧ ಚಮಚ
ಕೆಂಪು ಮೆಣಸಿನ ಚೂರು: ಸ್ವಲ್ಪ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಇಂಗು :ಸ್ವಲ್ಪ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಪಾಲಕ್ ,ಜೀರಿಗೆ,ಕೆಂಪು ಮೆಣಸಿನ ಚೂರು,ಕೊತ್ತಂಬರಿ ಸೊಪ್ಪು,ಇಂಗು ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಪಾಲಕ್ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಪಾಲಕ್ ಪರಾಠ ತಯಾರಾಯಿತು .


೪.ಮೇಥಿ ಪರಾಠ
ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು


ಮೆಂತೆ ಸೊಪ್ಪು :1 ಲೋಟ
ನೀರುಳ್ಳಿ : ಒಂದು
ಬಟಾಟೆ :ಒಂದು
ಕ್ಯಾರೆಟ್ :ಅರ್ಧ
ಜೀರಿಗೆ ಹುಡಿ :ಅರ್ಧ ಚಮಚ
ಕೆಂಪು ಮೆಣಸಿನ ಚೂರು: ಸ್ವಲ್ಪ
ಕೊತ್ತಂಬರಿ ಪುಡಿ :ಸ್ವಲ್ಪ

ಬೆಣ್ಣೆ :ಸ್ವಲ್ಪ
ಎಣ್ಣೆ :ಸ್ವಲ್ಪ




ವಿಧಾನ :
೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಬೆಣ್ಣೆ ಬಿಸಿ ಮಾಡಿ ಅದರಲ್ಲಿ ಮೆಂತೆ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಚೆನ್ನಾಗಿ ಹುರಿಯಿರಿ.
೩.ಬಟಾಟೆಯನ್ನು ಬೇಯಿಸಿ,ಸಿಪ್ಪೆ ತೆಗೆದು ಪುಡಿ ಮಾಡಿ.
೪.ಈಗ ಹುರಿದ ಮೆಂತೆ ಸೊಪ್ಪು,ಈರುಳ್ಳಿ ,ಪುಡಿ ಮಾಡಿದ ಆಲೂಗಡ್ಡೆ ,ಕ್ಯಾರೆಟ್ ತುರಿ,ಜೀರಿಗೆ ಹುಡಿ,ಕೆಂಪು ಮೆಣಸಿನ ಚೂರು,ಕೊತ್ತಂಬರಿ ಪುಡಿ ,ಉಪ್ಪು ಹಾಕಿ ಕಲಸಿ,ಉಂಡೆಗಳನ್ನಾಗಿ ಮಾಡಿ.
೫.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಮೆಂತೆ ಸೊಪ್ಪಿನ ಮಿಶ್ರಣದ ಉಂಡೆ ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.

೫. ಈರುಳ್ಳಿ ಪರಾಠ

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ನೀರುಳ್ಳಿ : ೨
ಓಮ (ಅಜವಾನ ):2 ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಸ್ವಲ್ಪ


ವಿಧಾನ :
೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು,ಸಣ್ಣಗೆ ಹೆಚ್ಚಿದ ಈರುಳ್ಳಿ, ಅಜವಾನ ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು.
೩.ಇದಕ್ಕೆ ಎಣ್ಣೆ ಹಾಕಿ ಮಡಚಿ ಮತ್ತೆ ಲಟ್ಟಿಸಿ. ಈ ರೀತಿ ಎರಡು ಸಲ ಮಾಡಬೇಕು.
೪.ಬಳಿಕ ಕಾದ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಿ.

Friday, August 5, 2011

ಫೇಸ್ ಬುಕ್ ಫ್ರೆಂಡ್ ಶಿಪ್

ವಿಜಯ next -ಆಗಸ್ಟ್ ೫ ೨೦೧೧ ರಲ್ಲಿ ಪ್ರಕಟಿತ .ಓದಲು ಈ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

Monday, June 20, 2011

ಬೆಟ್ಟದ ಜೀವ





ಕಾರಂತರ ’ಬೆಟ್ಟದ ಜೀವ’ ಕಾದಂಬರಿ ನನ್ನ ಅತೀ ಪ್ರಿಯವಾದ ಕಾದಂಬರಿಗಳ ಪೈಕಿ ಒಂದು. ನಾನು ಅದನ್ನು ’ನೋಡಿದ್ದು ’ ಮೂರನೇ ತರಗತಿಯಲ್ಲಿರುವಾಗ ನನ್ನ ಗುರುಗಳ ಬಳಿ. ’ಓದಿದ್ದು ’ ಕಾಲೇಜಿಗೆ ಬಂದ ಮೇಲೆ. ನನ್ನ ಆಪ್ತ ಗೆಳತಿಯೋರ್ವಳು ಅದರ ಬಗ್ಗೆ ವಿಮರ್ಶೆ ಬರೆದು, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದಾಗ ನಾನು ಕಾದಂಬರಿಯನ್ನೂ ಆಕೆ ಬರೆದ ವಿಮರ್ಶೆಯನ್ನೂ ಜತೆ ಜತೆಯಾಗಿಯೇ ಓದಿದೆ.


’ಬೆಟ್ಟದ ಜೀವ ’ ಕಾಡಿನ ಮಧ್ಯೆ ಗೂಡು ಕಟ್ಟಿಕೊಂಡು ಪ್ರಕೃತಿಯ ಜತೆ ಜತೆಗೆ ಸಾಗಿಸುವ ಗೋಪಾಲಯ್ಯನವರು ಮತ್ತು ಅವರ ಪತ್ನಿ ಶಂಕರಿಯ ಕಥೆ.ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಚಿತ್ರಿತವಾಗಿದೆ. ಕಾದಂಬರಿ ನಡೆಯುವ ಸ್ಥಳ ನನ್ನ ಹುಟ್ಟೂರಾದ ಹೊಸಮಠದ ಆಸುಪಾಸು-ಪಂಜ ಮತ್ತು ಸುಬ್ರಹ್ಮಣ್ಯ. ಮತ್ತು ಅದರಲ್ಲಿ ಕಾಣಸಿಗುವ ಪ್ರಕೃತಿಯ ವರ್ಣನೆಗಳನ್ನು ನಾನು ಪ್ರತ್ಯಕ್ಷವಾಗಿ ಕಾಣುತ್ತಾ ಬೆಳೆದವಳಾದ ಕಾರಣ ಈ ಕಾದಂಬರಿ ನನ್ನ ಮನಸ್ಸಿಗೆ ಮತ್ತಷ್ಟು ಆಪ್ತವಾದದ್ದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೆ ಮುಗಿಯಲಿಲ್ಲ. ಸಮಾನ ಮನಸ್ಕ ಸ್ನೇಹಿತರು ಭೇಟಿಯಾದಾಗ ’ಬೆಟ್ಟದ ಜೀವ’ ನುಸುಳುವುದುಂಟು.ಹೇಗೆ ಅಂತೀರಾ ? " ಬೆಟ್ಟದ ಜೀವದಲ್ಲಿ ಬರುವ ಥರ ದೊಡ್ಡ ಗಿಂಡಿಯಲ್ಲಿ ಕಾಫಿ ಕುಡಿಯಬೇಕು ಎಂತಲೋ ಅಥವಾ ’ಬೆಟ್ಟದ ಜೀವದಲ್ಲಿ ಬರುವ ಥರ ಎಣ್ಣೆ ಸ್ನಾನ ಮಾಡಬೇಕು’ಎಂತಲೋ ಮಾತು ’ಪರಮ ಸುಖದ ’ ಕಲ್ಪನೆಗಳಲ್ಲಿ ಒಂದಾಗಿ ಹೋಗುತ್ತದೆ!!

ಬೆಟ್ಟದ ಜೀವ ಇಷ್ಟೆಲ್ಲಾ ಆಗಿರುವಾಗ ಈ ಸಿನೆಮಾ ಬಂದಾಗ ನನಗೆ ಇದನ್ನು ನೋಡಲೇಬೇಕೆಂದು ಅನಿಸಿದುದರಲ್ಲಿ ಅಚ್ಚರಿಯೇನೂ ಇಲ್ಲ. ಕಾದಂಬರಿ ಮತ್ತು ಚಲನಚಿತ್ರ ಎರಡೂ ವಿಭಿನ್ನ ಮಾಧ್ಯಮಗಳು. ಕಾದಂಬರಿಯು ಕೆಲವೊಂದು ಸಂಗತಿಗಳನ್ನು ಅತ್ಯುತ್ಕೃಷ್ಟವಾಗಿ ಅಭಿವ್ಯಕ್ತಿಗೊಳಿಸಿದರೆ ಮತ್ತೆ ಕೆಲವು ವಿಚಾರಗಳನ್ನು ಚಲನಚಿತ್ರ ಸೊಗಸಾಗಿ ಧ್ವನಿಸೀತು. ’ಬೆಟ್ಟದ ಜೀವ’ ದ ನಿರೂಪಣೆ ಮತ್ತು ಕಥಾನಾಯಕನ ಆಲೋಚನೆಗಳನ್ನು ಚಲನಚಿತ್ರದಲ್ಲಿ ಯಾವ ರೀತಿ ತೋರಿಸಿಯಾರೆಂದು ನನಗೆ ಕುತೂಹಲವಿತ್ತು.

ಸಿನೆಮಾದಲ್ಲಿ ಕೆಲವು ಕಡೆ ಮೂಲ ಕಥೆಗಿಂತ ಕೊಂಚ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಚಳುವಳಿಯು ಕಥೆಯ ಜತೆ ಜತೆಗೆ ಸಾಗುತ್ತದೆ. ಚಳುವಳಿಯಲ್ಲಿ ಭಾಗವಹಿಸಿದ ಶಿವರಾಮು ಓಡುತ್ತಾ ಓಡುತ್ತಾ ದೇರಣ್ಣ ಮತ್ತು ಬಟ್ಯನನ್ನು ಭೇಟಿಯಾಗುವುದು ಮತ್ತು ಅವರ ಮೂಲಕ ಭಟ್ಟರ ಮನೆ ತಲುಪುವುದರಿಂದ ಕಥೆ ಶುರುವಾಗುತ್ತದೆ. ಮಗನ ಅಗಲಿಕೆಯಿಂದ ಕಂಗಾಲಾಗಿರುವ ದಂಪತಿಗಳು ಶಿವರಾಮುವಿನಲ್ಲಿ ಮಗನನ್ನು ಕಾಣುತ್ತಾರೆ. ಊಟ,ತಿಂಡಿ ನೀಡಿ ಉಪಚರಿಸುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಅವರ ಮಗನು ಮದುವೆಯಾಗಿ ಅವರಿಂದ ದೂರವಾಗಿರುತ್ತಾನೆ. ಆದರೆ ಇಲ್ಲಿ ಎರಡು-ಮೂರು ಬೇರೆ ಕಾರಣಗಳು ಹೆಣೆದುಕೊಳ್ಳುತ್ತವೆ. ಭಟ್ಟರು ತಮ್ಮ ಸ್ವಂತ ಮಗಳು-ಅಳಿಯನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದ ಲಕ್ಷ್ಮಿ, ನಾರಾಯಣರ ಮನೆಗೆ ಹೋದಾಗ ಲಕ್ಷ್ಮಿಯು "ಶಂಭು ( ಭಟ್ಟರ ಮಗ) ,ತನ್ನ ಜತೆ ಸಲುಗೆ ಮೀರಿ ವರ್ತಿಸಿದ ವಿಚಾರವನ್ನು ಅರುಹುತ್ತಾಳೆ. ಆದರೆ ತಾನು ಅದಕ್ಕೆ ಯಾವ ಪ್ರೋತ್ಸಾಹವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟುಹೋದ ’ ಎಂದು ಹೇಳುತ್ತಾಳೆ.

ಭಟ್ಟರ ಪತ್ನಿ- "ತಾನು ಮಗನಿಗೆ ಚಿನ್ನವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟು ಹೋದನೆಂದು ಹಲುಬಿ,ಚಿನ್ನವನ್ನು ಶಿವರಾಮುವಿನ ಕೈಗೊಪ್ಪಿಸುವ ದೃಶ್ಯವಂತೂ ಮನಕಲಕುತ್ತದೆ. ಹೊನ್ನಿನ ಮೋಹಕ್ಕಿಂತಲೂ ಸಂತಾನದ ಮೋಹವೇ ಮಿಗಿಲೆಂದು ಆಕೆ ಹೇಳುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಭಟ್ಟರು ಚಳುವಳಿಗೆಂದು ಮನೆ ಬಿಟ್ಟು ಹೋದ ಮಗನ ಸಂಗತಿಯನ್ನು ತಿಳಿಸುತ್ತಾರೆ. "ಪ್ರಕೃತಿಯನ್ನು ಮಣಿಸಿರುವ ತನಗೆ ಮಗನನ್ನು ಮಣಿಸಲು ಅಸಾಧ್ಯವಾಯಿತು ಎಂಬುವುದು ಬಲು ದೊಡ್ಡ ಕೊರಗಾಗುತ್ತದೆ. ಮಗನ ಛಾಯಾಚಿತ್ರವನ್ನು ನೋಡುವಾಗ ಅವರಾಡುವ ಮಾತು " ವಾಸ್ತವದಲ್ಲಿ ಕಾಣಲಾಗದ್ದನ್ನು ನೆರಳಿನಾಟದಲ್ಲಿ ಕಾಣುವುದು ಹೇಗೆ" ಎನ್ನುವುದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.


ಮೂಲ ಕಥೆಯಲ್ಲಿ ಶಿವರಾಮು ಅವರಿಗೆ ಜ್ವರ ಬರುವ ವಿಚಾರವಿದ್ದರೆ ಇಲ್ಲಿ ಅವರಿಗೆ ಕಾಲು ಉಳುಕುವುದು, ’ಮಾಂಕು’ ಬಂದು ಔಷಧಿ ನೀಡುವುದು, ನಾರಾಯಣ,ಲಕ್ಷ್ಮಿಯರು ಅವರನ್ನು ನೋಡಿಕೊಳ್ಳುವುದು ಇತ್ಯಾದಿ ಮಾರ್ಪಾಡು ಮಾಡಿದ್ದಾರೆ. ಹುಲಿಯನ್ನು ಕೊಲ್ಲಬೇಡಿರೆಂದು ಹೇಳುವುದು ’ಅಹಿಂಸಾತ್ಮಕ ಚಳುವಳಿಯ ’ ಒಂದು ರೂಪ ಎನ್ನಬಹುದು. ಅಂತೆಯೇ ’ಯಾವ ಜೀವಿಗೂ-ಮನುಷ್ಯನಿಗೂ,ಪ್ರಾಣಿಗೂ ತನ್ನ ಇಚ್ಛೆಯ ಪ್ರಕಾರ ಜೀವಿಸಲು ಬಿಡುವುದು, ಸ್ವಾತಂತ್ರ್ಯ ನೀಡುವುದು ಎಂಬ ಅರ್ಥವನ್ನೂ ಬಿಂಬಿಸುತ್ತದೆ. ಮಗನ ಅಗಲುವಿಕೆಯ ನೋವನ್ನು ಕಂಡ ಶಿವರಾಮು ತನ್ನ ಹೆತ್ತವರಲ್ಲಿ ಇಂಥ ನೋವನ್ನು ಉಂಟುಮಾಡಲಾರೆ ಎನ್ನುತ್ತಾ ತನ್ನ ಹೆತ್ತವರನ್ನು ನೋಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಭಟ್ಟ್ರು ಮಗನನ್ನು ಹುಡುಕಲು ಪುಣೆಗೆ ಹೊರಡುವಲ್ಲಿ ಕಥೆ ಕೊನೆಗೊಳ್ಳುತ್ತದೆ. ಚಲನಚಿತ್ರದಲ್ಲಿ ಆಧುನಿಕ ಕಾಲದಲ್ಲಿ ಮಧ್ಯ ವಯಸ್ಕ ಶಿವರಾಮು ಅವರು ಮಗನ ಜತೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು,ಅಲ್ಲಿಯ ಪ್ರಕೃತಿಯನ್ನು ಆರಾಧಿಸುವುದು, ಮತ್ತು ವೃದ್ಧ ದಂಪತಿಗಳ ಮಾತನ್ನು ಮೆಲುಕು ಹಾಕುವಲ್ಲಿ ಚಲನಚಿತ್ರಕ್ಕೆ ತೆರೆ ಬೀಳುತ್ತದೆ.


ಇಡೀ ಚಿತ್ರದ ಚಿತ್ರೀಕರಣ ಬಹಳ ಸೊಗಸಾಗಿದೆ. ಕಾಡು,ಬೆಟ್ಟ,ಗುಡ್ಡ,ನದಿ ಇವುಗಳ ಅನನ್ಯ ಸೌಂದರ್ಯವನ್ನು ಅತ್ಯಂತ ಸೊಗಸಾಗಿ ಚಿತ್ರೀಕರಣ ಮಾಡಿದ್ದಾರೆ. ಭೂತದ ಕೋಲ, ತೋಟ ಇವೆಲ್ಲ ತುಳುನಾಡಿನಲ್ಲಿ ಹುಟ್ಟಿ ಬೆಳೆದವರನ್ನೆಲ್ಲಾ ’ನಾಸ್ತಾಲ್ಜಿಯಾಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.ಭಟ್ಟರು, ಅವರ ಪತ್ನಿಯ ಅಭಿನಯವಂತೂ ಮನೋಜ್ನವಾಗಿದೆ. ದೇರಣ್ಣ,ಬಟ್ಯ ಅವರು ಹಾಡುವ ಹಾಡುಗಳು, ಅವರ ಮುಗ್ಧತೆಯಂತೂ ಕಣ್ಣಿಗೆ ಕಟ್ಟುತ್ತದೆ. ಸಂಭಾಷಣೆಯಲ್ಲಿ ತುಳು,ದಕ್ಷಿಣ ಕನ್ನಡ ಮತ್ತು ಹವ್ಯಕ ಶೈಲಿಯ ಕನ್ನಡ ಕಂಡುಬರುತ್ತದೆ. ದಕ್ಷಿಣ ಕನ್ನಡ ಶೈಲಿಯ ಕನ್ನಡವನ್ನು ಇನ್ನಷ್ಟು ಆಡುಮಾತಿನ ಶೈಲಿಯಲ್ಲಿ ಮಾತನಾಡುತ್ತಿದ್ದರೆ ಇನ್ನೂ ಸೊಗಸಾಗಿರುತ್ತಿತ್ತೇನೊ!


ಇಷ್ಟೆಲ್ಲಾ ಆದ ಮೇಲೆ ಇನ್ನೊಂದು ವಿಚಾರ ಹೇಳಬೇಕು. ಹಳ್ಳಿಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಪೇಟೆ ಸೇರುತ್ತಿದ್ದಾರೆ. ಹಳ್ಳಿಗಳಲ್ಲಿ ಕಾಣುವುದು ವೃದ್ಧ ತಂದೆ ತಾಯಿಯರು ಮಾತ್ರ. ನಮ್ಮೊರಿಗೆ ಬಂದರೆ ನಿಮಗೆ ಪ್ರತಿ ಮನೆಯಲ್ಲೂ ’ಬೆಟ್ಟದ ಜೀವ’ಗಳು ಕಾಣಸಿಕ್ಕೇ ಸಿಗುತ್ತಾರೆ!!




ಚಿತ್ರ ಕೃಪೆ : http://cdn2.supergoodmovies.com/FilesTwo/b3a1e2cf74074353baf7c06002387664.jpg