Pages

Wednesday, May 23, 2007

ನಾಳೆಗಳ ನಿರೀಕ್ಷೆಯಲ್ಲಿ...


ಈ ಚಿತ್ರ ಕಿಶೋರ್ ಅವರು ಬರೆದದ್ದು.

ಅಕ್ಕ ತಮ್ಮನ ಜೋಡಿ ನಿಂತಿಹುದು
ಮೆಟ್ಟಿಲಿನ ಬಳಿಯಲ್ಲಿ
ಹುಸಿಮುನಿಸು -ತಮ್ಮನ ಜತೆಗೆ
ಮುಗುಳುನಗೆ -ಅಕ್ಕನ ಮೊಗದಲ್ಲಿ||

ನೋಡು ತಮ್ಮಾ ಏರಬೇಕಾದ ದಾರಿಯೆಡೆಗೆ
ಒಮ್ಮೆ ತಿರುಗಿ ನೋಡು..
ಮುಖತಿರುಗಿಸಿದರೆ ಹೇಗೆ ? ನಮ್ಮ ನಾಳೆಗಳು
ಇರುವುದಲ್ಲಿ! ಅತ್ತ ಓಡು..||

ಒಂದರ ನಂತರ ಇನ್ನೊಂದು
ಹತ್ತಬೇಕು ಮೆಟ್ಟಲು
ಸತತ ಪ್ರಯತ್ನ , ಛಲ ಬೇಕೇ
ಬೇಕು ಗುರಿ ಮುಟ್ಟಲು||

ನೋವೊ ನಲಿವೋ ಪಯಣಿಸುತಿರಬೇಕು
ಪಯಣಕೆ ಹೆದರಬೇಡ,ನೀ ಮುಂದೆ ಸಾಗು
ನ್ಯಾಯ ಮಾರ್ಗದಲಿಮುನ್ನಡೆದರೆ ಸಾಕು
ಧೈರ್ಯದಿಂದಲೆ ನೀ ಮುನ್ನಗ್ಗು||

ಬೇರೆಬೇರೆಯಾದರೂ ನಮ್ಮ ಪಯಣದ ಹಾದಿ
ಜತೆಗಿರುವೆ ನಾ , ನೆನಪಾದಾಗಲೆಲ್ಲ
ನಮ್ಮ ಒಡನಾಟ,ಪ್ರೀತಿ ಮರೆಯಾಗದು
ಮಮತೆ ಇಹುದು ಹೃದಯದದೊಳಗೆಲ್ಲ||

Thursday, May 3, 2007

ಪನೀರ್ ಮಟರ್


ಪನೀರ್: ೨೦೦ಗ್ರಾಂ
ಬಟಾಣಿ :೨೦೦ ಗ್ರಾಂ
ಈರುಳ್ಳಿ :೨
ಟೊಮಾಟೊ:೨
ಶುಂಠಿ:ಒಂದು ಸಣ್ಣ ತುಂಡು
ಹಾಲು: ೧/೨ ಲೋಟ
ಬೆಳ್ಳುಳ್ಳಿ ಎಸಳು:೬
ಉಪ್ಪು:ರುಚಿಗೆ ತಕ್ಕಷ್ಟು
ಮೆಣಸಿನ ಹುಡಿ: ೨ ಚಮಚ
ಸಕ್ಕರೆ :೧ ಚಮಚ
ಬೆಣ್ಣೆ :ಸ್ವಲ್ಪ



೧.ಪನೀರನ್ನು ಸಣ್ಣ ಘನಾಕೃತಿಯ ಹೋಳುಗಳಾಗಿ ಕತ್ತರಿಸಿ.ಒಂದು ಬಾಣಲೆಯಲ್ಲಿ ಸ್ವಲ್ಪ ಬೆಣ್ಣೆ ಹಾಕಿ, ಬಿಸಿ ಮಾಡಿ,ಅದರಲ್ಲಿ ಪನೀರ್ ತುಂಡುಗಳನ್ನು ಹಾಕಿ, ಹೊಂಬಣ್ಣ ಬರುವವರೆಗೆ ಹುರಿಯಿರಿ.ಪನೀರನ್ನು ಹೊರತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.
೨.ಟೊಮಾಟೊ,ಬೆಳ್ಳುಳ್ಳಿ ಎಸಳು,ಶುಂಠಿ ಇವನ್ನು ಒಟ್ಟಿಗೆ ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ .
೩.ಬಟಾಣಿಯನ್ನು ಕುಕ್ಕರ್ ನಲ್ಲಿ ಬೇಯಿಸಿ ತೆಗೆದಿಡಿ.
೪.ಬಾಣಲೆಯಲ್ಲಿ ಬೆಣ್ಣೆ ಹಾಕಿ,ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
೫.ಈಗ ಟೊಮಾಟೊ, ಬೆಳ್ಳುಳ್ಳಿ ಎಸಳು,ಶುಂಠಿ ಇವುಗಳ ಮಿಶ್ರಣವನ್ನು ಬಾಣಲೆಗೆ ಸುರಿಯಿರಿ.
೬.ಟೊಮೆಟೊ ಹಸಿವಾಸನೆ ಹೋಗುವ ತನಕ ಮಂದ ಉರಿಯಲ್ಲಿ ಬೇಯಿಸಿ.
೭.ಈ ಮಿಶ್ರಣಕ್ಕೆ ಪನೀರ್ ತುಂಡುಗಳು ಹಾಗೂ ಬೇಯಿಸಿದ ಬಟಾಣಿ ಸೇರಿಸಿ.
೮.ಇದಕ್ಕೆ ಸ್ವಲ್ಪ ಹಾಲು,೧ ಚಮಚ ಸಕ್ಕರೆ ಹಾಕಿ.
೯.ಈಗ ಉಪ್ಪು,ಮೆಣಸಿನ ಪುಡಿಯನ್ನು ಹಾಕಿ.ಸ್ವಲ್ಪ ಹೊತ್ತು ಕಲಕುತ್ತಿರಿ.
೧೦.ಈಗ ಪನೀರ್ ಮಟರ್ ತಯಾರಾಯ್ತು.
೧೧.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.ಚಪಾತಿ ಜತೆ ತಿನ್ನಲು ಬಹಳ ರುಚಿ!!

Tuesday, March 27, 2007

ಹೋಳಿಯ ರಂಗು ...

ಮುಸುಕು ಕವಿದ ಬಾಳಿನಲಿ
ಬಣ್ಣ ಬಣ್ಣದ ಓಕುಳಿ
ರಂಗು ರಂಗಿನ ಹೊಸ ಲೋಕ
ಸೃಷ್ಟಿಸುತಿದೆ ಈ ಹೋಳಿ||

ಹೋಲಿಕಾಳ ದಹನವಾಯ್ತು
ಪಾರಾದ ಪ್ರಹ್ಲಾದ ಮೃತ್ಯುವಿನಿಂದ
ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ನೆನಪಿನ
ಜತೆ ಹೋಳಿ ತರುತಿದೆ ಆನಂದ||

ಕೆಲವೆಡೆ ಸಂಭ್ರಮದ ಹೋಳಿ
ಕಾಮದಹನದ ಸಂಕೇತ
ಮನದೊಳಗಾಗಲಿ ದುರಾಸೆಯ ಭಸ್ಮ
ಇರಲಿ ಆಸೆ ಪರಿಮಿತ||

ಒಂದೆಡೆ ಉಗ್ರರ ದಾಳಿ
ಮತ್ತೊಂದೆಡೆ ಗಲಭೆ ಗೊಂದಲ
ಏತಕೆ ಇವೆಲ್ಲ? ಕೊಂಚ ತಾಳಿ..
ವಿಶ್ವ ಮೈತ್ರಿಯೆ ಹೊಳಿಯ ಹಂಬಲ||

ದ್ವೇಷ ಅಸೂಯೆಯ ಬಣ್ಣಗಳು
ಬೇಕೆ ನಮ್ಮ ಬಾಳಿಗೆ?
ಪ್ರೀತಿ, ಮಮತೆಯ ರಂಗು ಇದ್ದರೆ
ಸಾಕು, ಪ್ರತಿ ಗಳಿಗೆ||

Monday, March 26, 2007

ಬಾಹುಬಲಿಗೆ ಪ್ರಶ್ನೆ


ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಬರೆದ ಕವನ..


ಗೊಮ್ಮಟ ದೇವಾ
ಗೊಮ್ಮಟ ದೇವಾ
ಏತಕೆ ನಿಂತಿದ್ದಿ?
ಅಷ್ಟು ಹೊತ್ತಿಂದ ನಿಂತಿದ್ರೂನೂ
ಮೌನ ವಹಿಸಿದ್ದಿ


ಅಲ್ಲಿ ಇಲ್ಲಿ ಗಲಭೆ ಗೊಂದಲ
ನೋಡ್ತಾ ಇದ್ದೀಯಲ್ವಾ?
ಮನಸ್ಸಿಗೆ ತುಂಬಾ ಬೇಜಾರಾಗಿ
ಮಾತಾಡ್ತಾ ಇಲ್ವಾ?


ಉರಿಬಿಸಿಲಿಗೆ ನಿಂಗೆ
ಸೆಕೆ ಆಗಲ್ವಾ?
ಥಂಡಿ ಹವೆಗೆ ನೀ
ನಡುಗಿ ಹೋಗಲ್ವಾ?

ಅಂಜದೆ ಅಳುಕದೆ ಬದುಕ್ಬೇಕಂತ
ಸಾರ್‍ತಾ ಇದ್ದೀಯಾ?
ತ್ಯಾಗದ ಮಹಿಮೆಯ ಜಗಕೆ
ನೀನು ತೋರಿಸ್ತಿದ್ದೀಯ?


ಇಲ್ಲಿ ಎಲ್ಲಾ ಕಡೆನೂ ಇದೆ
ಭಾರೀ ಕಾಂಪಿಟಿಶನ್ನು
ನಾನೇ ಗೆದ್ದೇ ಗೆಲ್ಬೇಕಂತ
ಕಾಡ್ತಾ ಇರತ್ತೆ ಮನವನ್ನು||

ರಾಜ್ಯ ಸಿಕ್ರೂ ಬೇಡ ಅಂತ
ನೀನೇ ಅಂದ್ಯಂತೆ
ಗೆದ್ರೂ ಕೂಡ ನಿಂಗೆ
ಏನೂ ಬೇಡ್ವಂತೆ||

ಮಾಡ್ತಿದ್ದಾರಂತೆ ನಿಂಗೆ
ಮಸ್ತಕಾಭಿಷೇಕ
ಬರ್ತೀನಿ ನಿನ್ನ ನೋಡಕೆ
ನಂಗಿದೆ ಭಾರೀ ತವಕ||

ನೀ ಎಲ್ಲಾದ್ರೂ ಮೌನ ಬಿಟ್ರೆ
ಕೇಳ್ಬೇಕು ನಿಂಗೆ ಕ್ವೊಶ್ಚನ್ನು
ನಗ್ ನಗ್ತಾ ನೀ ಇರ್ತಿ ಹೇಗೆ
ಎಲ್ಲೆಡೆ ತುಂಬಿದ್ರೂ ಟೆನ್ಶಶನ್ನು||