Pages

Friday, February 15, 2013

ವರ್ಲಿ ಚಿತ್ರಕಲೆ

ಈ ವಾರದ  ವಿಜಯ ನೆಕ್ಷ್ಟ್ ನಲ್ಲಿ ಪ್ರಕಟಿತ 









ಒಂದಿಷ್ಟು ತ್ರಿಭುಜಗಳು, ಮತ್ತೆ ಕೆಲವು ವೃತ್ತಗಳು. ಹಾಗೆಯೇ ಕೆಲವು ರೇಖೆಗಳು..ಇವಿಷ್ಟನ್ನು ಒಂದು ಹದದಲ್ಲಿ ಜೋಡಿಸಿದರೆ ಕೆಲವು ಜನರು ನಿಮ್ಮ ಮುಂದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗುತ್ತಾರೆ.ರೈತ ನೆಲವನ್ನು ಉಳುತ್ತಾನೆ. ಮಕ್ಕಳು ಮರ ಕೋತಿ ಆಟವಾಡುತ್ತಿರುತ್ತಾರೆ. ಗುಡಿಸಲಿನಲ್ಲಿರುವ ಮುದುಕಿಯು ಗೂಡಿನಲ್ಲಿರುವ ಕೋಳಿಗಳಿಗೆ ಧಾನ್ಯಗಳನ್ನು ಚೆಲ್ಲುತ್ತಿರುತ್ತಾಳೆ. ಹಗಲಿಡೀ ದುಡಿದ ಜನ ಇರುಳಾಗುತ್ತಿದ್ದಂತೆ ಟರ್ಪಾ ನೃತ್ಯದ ಮೂಲಕ ಆಹ್ಲಾದವನ್ನೀಯುತ್ತಾರೆ. ಇಷ್ಟೆಲ್ಲ ಆಗುವ ಹೊತ್ತಿಗೆ  ನಿಮ್ಮ ಮುಂದೆ ಸುಂದರ ದೃಶ್ಯ ಕಾವ್ಯ ಪ್ರಕಟವಾಗುತ್ತದೆ. ಗ್ರಾಮೀಣ ಜೀವನ ಕಣ್ಣ ಮುಂದೆ ಮೂಡಿ ಬರುತ್ತದೆ. ಸರಳವೂ ಮನಮೋಹಕವೂ ಆದ ಈ ಚಿತ್ತಾರಗಳ ಹೆಸರು ವರ್ಲಿ ಚಿತ್ರಗಳು!!

ವರ್ಲಿ ಚಿತ್ರಗಳು ಹೆಸರೇ ಸೂಚಿಸುವಂತೆ  ಮಹಾರಾಷ್ಟ್ರದವರ್ಲಿ ಬುಡಕಟ್ಟು ಜನಾಂಗದವರು ತಮ್ಮ ಗುಡಿಸಲುಗಳ ಮೇಲೆ ಬಿಡಿಸುವ ಚಿತ್ರಗಳು. ಸಾಂಪ್ರದಾಯಿಕ ರೀತಿಯಲ್ಲಿ ಅವರು ಸೆಗಣಿ, ಕೆಮ್ಮಣ್ಣಿನ ಹಿನ್ನೆಲೆಗೆ ಅಕ್ಕಿಯ ಹಿಟ್ಟಿನಲ್ಲಿ ಅದ್ದಿದ ಕುಂಚದಿಂದ ಇವುಗಳನ್ನು ಬಿಡಿಸುತ್ತಾರೆ. ಈ ಜನರು ಬಹಳ ಸರಳವಾದ ಜೀವನವನ್ನು ನಡೆಸುತ್ತಾರೆ. ಇವರು ಪ್ರಕೃತಿಯ ಆರಾಧಕರು. ಇವರ ಚಿತ್ರಗಳಲ್ಲಿನ ತ್ರಿಕೋನಗಳಿಗೆ ಬೆಟ್ಟ ಗುಡ್ಡಗಳೇ ಪ್ರೇರಣೆ. ವೃತ್ತಗಳು ಸೂರ್ಯ ಚಂದ್ರನಿಂದ ಪ್ರಭಾವಿತವಾದ ಆಕೃತಿಗಳು. ಸಾಮಾನ್ಯವಾಗಿ ಕೃಷಿ ಇವರ ಪ್ರಮುಖ ಉದ್ಯೋಗ. ಇವರ ಚಿತ್ರಗಳಲ್ಲಿ ಕೃಷಿಯ ಹಲವು ಹಂತಗಳಾದ ಬಿತ್ತುವಿಕೆ, ಫಸಲಿನ ಕೊಯಿಲು ಇತ್ಯಾದಿಗಳನ್ನು ಹೇರಳವಾಗಿ ಕಾಣಬಹುದು. ಇಷ್ಟೇ ಅಲ್ಲದೆ ಬೇಟೆ,ಹಬ್ಬದ ಆಚರಣೆಗಳು, ಪ್ರಕೃತಿ, ನೃತ್ಯ, ವಿನೋದ ಇವುಗಳ ಚಿತ್ತಾರಗಳೂ ಕಾಣಬರುತ್ತವೆ. 


ಸಾಂಪ್ರದಾಯಿಕ ರೀತಿಯ ಈ ಚಿತ್ರಗಳು ಆಧುನಿಕ ರೂಪ ತಾಳುತ್ತಿವೆ. ಸೆಗಣಿ ಅಥವಾ ಕೆಮ್ಮಣ್ಣಿನ ಹಿನ್ನೆಲೆಗೆ ಬದಲಾಗಿ ಆ ಬಣ್ಣದ ಪೈಂಟುಗಳು ಬಳಕೆಯಾಗುತ್ತಿವೆ. ಅಕ್ಕಿಯ ಹಿಟ್ಟಿಗೆ ಬದಲಾಗಿ ಬಿಳಿಯ ಅಕ್ರಲಿಕ್ ವರ್ಣಗಳ ಬಳಕೆಯಾಗುತ್ತಿದೆ. ಮನೆಯ ಒಳಾಂಗಣ ಮತ್ತು ಹೊರಾಂಗಣ ಅಲಂಕಾರದಲ್ಲಿ, ವಸ್ತ್ರಗಳ ಮೇಲೆ,ಕಾಫಿ ಕಪ್ ಗಳ ಮೇಲೆ, ಪೆನ್ ಸ್ಟಾಂಡ್ ಗಳ ಮೇಲೆ ಹೀಗೆ ವರ್ಲಿ ಯ ವ್ಯಾಪ್ತಿ ವಿಸ್ತಾರವಾಗುತ್ತಾ ಸಾಗಿದೆ. ಎಷ್ಟೊ ರೆಶ್ಟೋರೆಂಟುಗಳು  ಹಳ್ಳಿಯ ಥೀಮ್ ನೀಡಲು ಈ ಚಿತ್ರಗಳನ್ನು ತಮ್ಮ ಒಳಾಂಗಣ ಅಲಂಕಾರಕ್ಕೆ ಬಳಸುವುದಿದೆ. ಹಾಗಾಗಿ ಈಗ  ವರ್ಲಿ ಚಿತ್ರಕಲೆ ಬಹಳ ಬೇಡಿಕೆಯಲ್ಲಿರುವ ಉದ್ಯೋಗವಾಗಿ ಪರಿವರ್ತಿತವಾಗುತ್ತದೆ. ಕೆಲವು ಸಮಯದ ಹಿಂದೆ ತಂಪು ಪಾನೀಯದ ಜಾಹೀರಾತೊಂದರಲ್ಲಿಯೂ ವರ್ಲಿ ಚಿತ್ತಾರಗಳು ಕಂಗೊಳಿಸಿದ್ದವು. ನೀವು ಲಾಲ್ ಬಾಗಿನ ಕಡೆಗೆ ಹೋದರೆ ಅಲ್ಲಿ ಹೊರಗೆ ರಸ್ತೆಯಲ್ಲಿ ಕಂಪೌಂಡು ಗೋಡೆಗಳನ್ನು ಅಲಂಕರಿಸಿದ ವರ್ಲಿ ಯನ್ನು ಕಾಣಬಹುದು.

ಕಲಿಯುವುದು ಹೇಗೆ ?

ವರ್ಲಿ ಚಿತ್ರವನ್ನು ಬಿಡಿಸುವುದು ಬಹಳ ಸುಲಭ. ಇಲ್ಲಿ ನಿಮಗೆ ತಿಳಿದಿರಬೇಕಾದದ್ದು ತ್ರಿಭುಜ ಮತ್ತು ವೃತ್ತದ ರಚನೆ. ಮುಖ್ಯವಾಗಿ ಗೆರೆಗಳು ಬಹಳ ಸ್ಪಷ್ಟವಾಗಿರಬೇಕು. ಹಾಗಾಗಿ ದಿನವೂ ನೇರ ಮತ್ತು ಅಡ್ಡ ಗೆರೆಗಳನ್ನು ಅಭ್ಯಾಸ ಮಾಡಬೇಕು. ಇದಲ್ಲದೇ ವೃತ್ತಗಳನ್ನು ಸರಿಯಾಗಿ ಬಿಡಿಸಲು ಅಭ್ಯಾಸ ಬೇಕಾಗುತ್ತದೆ. ಮೊದಲಿಗೆ ಯಾವುದಾದರೂ ಸಿದ್ಧವಿರುವ ಚಿತ್ರದ ನಕಲು ಮಾಡುವ ಮೂಲಕ ಅಭ್ಯಾಸ ನಡಿಸಿ ಬಳಿಕ ,ನಿಮ್ಮ ಕಲ್ಪನೆಗೆ ಅನುಗುಣವಾಗಿ ವಿಭಿನ್ನ ಚಿತ್ತಾರಗಳನ್ನು ವಿಸ್ತರಿಸುತ್ತ ಹೋಗಬಹುದು. ವರ್ಲಿ ಬಿಡಿಸಲು ಕಾನ್ವಾಸ್, ಉಡುಪು, ಟೆರ್ರಕೋಟಾ ವಸ್ತುಗಳು, ಪುಟ್ಟ ಮಡಿಕೆಗಳು ಹೀಗೆ ಹಲವು ಪರಿಕರಗಳನ್ನು ಬಳಸಬಹುದು.
ಕಿರು ಉದ್ಯೋಗವಾಗಿ ಹೇಗೆ ?

ಈಗ ಇದರ ಬೇಡಿಕೆ ಹೆಚ್ಚುತ್ತಿರುವುದರಿಂದ ಇದನ್ನು ಒಂದು ಕಿರು ಉದ್ಯೋಗವಾಗಿ ಮಾಡಿಕೊಳ್ಳಬಹುದು.ಗ್ರೀಟಿಂಗ್ ಕಾರ್ಡು, ವಾಲ್ ಹಾಂಗಿಂಗ್, ಹೂದಾನಿ,ಕ್ಲಾತ್ ಪೈಂಟಿಂಗ್ ಇವುಗಳ ಮೇಲೆ  ನಿಮ್ಮ ಕಲ್ಪನಾ ಲಹರಿಯನ್ನುವರ್ಲಿ ಜತೆ ಸೇರಿಸಿ ಮಾರಾಟ ಮಾಡಬಹುದು. ಯಾವುದಾದರೂ ಆರ್ಟ್ ಗ್ಯಾಲರಿಯ ಜತೆ  ಅಥವಾ ಒಳಾಂಗಣ ವಿನ್ಯಾಸಕಾರರ ಜತೆ ಟೈ ಅಪ್ ಮಾಡಿಕೊಂಡು ಆರ್ಡರ್ ಗಳನ್ನು ಪೂರೈಸಬಹುದು. ಇಂಟರ್ ನೆಟ್ ನಲ್ಲಿಯಂತೂ ಇದಕ್ಕೆ ವಿಪುಲ ಅವಕಾಶಗಳಿವೆ. ಇದರ ಮೂಲಕವೂ ನಿಮ್ಮವರ್ಲಿ ಚಿತ್ರಪಟಗಳು ಮತ್ತು ಹಲವು ವಾರ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಬೇಡಿಕೆಗೆ ತಕ್ಕಂತೆ ಆರ್ಡರುಗಳನ್ನು  ಸರಿಯಾಗಿ ಪೂರೈಸಿದರೆ ಖಂಡಿತವಾಗಿಯೂ ಇದರಲ್ಲಿ ನೀವು ಯಶಸ್ವಿಯಾಗಬಹುದು. 



Saturday, November 10, 2012

Saturday, September 8, 2012

ಬಟಾಣಿ ಬಾದಾಮಿ ಪಲ್ಯ



 ಬೇಕಾಗುವ  ಸಾಮಗ್ರಿಗಳು

ಹಸಿ ಬಟಾಣಿ : ೧ ಲೋಟ
ಬಾದಾಮಿ : ೧ ಲೋಟ
ಹಾಲು :ಅರ್ಧ ಲೋಟ
ನೀರುಳ್ಳಿ: ೧
ಹಸಿಮೆಣಸು :೩
ದಾಲ್ಚಿನ್ನಿ ಎಲೆ :ಸಣ್ಣ ಚೂರು
ಉಪ್ಪು:ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಸ್ವಲ್ಪ
ತುಪ್ಪ  : ೨ ಚಮಚ
ಜೀರಿಗೆ : ೧ ಚಮಚ

ವಿಧಾನ : 

೧.ಬಾದಾಮಿಯನ್ನು ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಸಿಪ್ಪೆ ತೆಗೆಯಿರಿ.
೨. ಸಿಪ್ಪೆ ತೆಗೆದ ಬಾದಾಮಿಯನ್ನು ಸ್ವಲ್ಪ ಹಾಲಿನ ಜತೆ ನುಣ್ಣಗೆ ರುಬ್ಬಿ.
೩. ಬಾಣಲೆಯಲ್ಲಿ ತುಪ್ಪ  ಬಿಸಿ ಮಾಡಿ, ಅದಕ್ಕೆ ಜೀರಿಗೆ, ಹಸಿ ಮೆಣಸು,ದಾಲ್ಚಿನ್ನಿ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
೪.ಇದಕ್ಕೆ ಹೆಚ್ಚಿದ ನೀರುಳ್ಳಿಯನ್ನು ಹಾಕಿ ಕಲಕಿ. ನೀರುಳ್ಳಿ ಹೊಂಬಣ್ಣ ಬರುವ ತನಕ ಕೈಯಾಡಿಸಿ.
೫.ಇದಕ್ಕೆ  ಹಸಿ ಬಟಾಣಿ ಸೇರಿಸಿ,ಸಣ್ಣ ಉರಿಯಲ್ಲಿ ಬೇಯಿಸಿ. ಉಪ್ಪು ಚಿಮುಕಿಸಿ.
೬.ಈಗ ರುಬ್ಬಿದ ಬಾದಾಮಿ ಮಿಶ್ರಣವನ್ನು ಇದಕ್ಕೆ ಸೇರಿಸಿ,ಚೆನ್ನಾಗಿ  ಮಂದ ಉರಿಯಲ್ಲಿ ಬೇಯಿಸಿ.
೭.ಮಿಶ್ರಣವು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ,ಒಲೆ ಆರಿಸಿ.
೮.ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿ.

ಚಪಾತಿಯ ಜತೆ ತಿನ್ನಲು ಇದು ಬಹಳ ರುಚಿ.
ವಿ.ಸೂ. : ಹಸಿ ಬಟಾಣಿಯ ಬದಲಿಗೆ ಒಣ ಬಟಾಣಿಯನ್ನು ನೀರಿನಲ್ಲಿ ೬-೭ ಗಂಟೆಗಳ ಕಾಲ ನೆನೆಸಿ, ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ ಬಳಸಬಹುದು.

 ಬೋಧಿವೃಕ್ಷದಲ್ಲಿ :

Thursday, May 10, 2012


ಸಮಾಜ ಸುಧಾರಣೆಗೆ ನೆರವಾದೀತೇ ಸತ್ಯಮೇವ ಜಯತೇ?

 


ಟಿ.ವಿ.ಯ ಸ್ವಿಚ್ಚು ಒತ್ತಿದೊಡನೆ ಸಾಕು ಪುಂಖಾನುಪುಂಖವಾಗಿ ಅತ್ತೆ - ಸೊಸೆ ಜಗಳದ ಸಾವಿರದ ಎಂಟನೆಯ ಕಂತು ಪ್ರಸಾರವಾಗುತ್ತಿರುತ್ತದೆ. ಸಾಸಿವೆ ಕಾಳಿನಷ್ಟು ಮಹತ್ವದ ಸುದ್ದಿ ಬೃಹದಾಕಾರವಾಗಿ ಹಿಗ್ಗಿ ಅಂತಾರಾಷ್ಟ್ರೀಯ ಮಹತ್ವದ್ದಾಗಿಬಿಡುತ್ತದೆ. ರಿಯಾಲಿಟಿ ಶೋಗಳಂತೂ ದುಃಖ ದಾರಿದ್ರ್ಯವನ್ನೇ ಹೈಲೈಟ್ ಮಾಡಿ, ಸ್ಪರ್ಧಾಳುಗಳು ಅಳುವ; ಜಗಳವಾಡುವ ಸಂಗತಿಗಳಿಗೇ ಒತ್ತು ಕೊಡುತ್ತವೆ. ಇಲ್ಲವೇ ಮನೆಯ ಅತ್ಯಂತ ಖಾಸಗಿ ಸಂಗತಿಗಳನ್ನು ಜಗಜ್ಹಾಹೀರು ಮಾಡುವಲ್ಲಿ ಸಫಲವಾಗುತ್ತವೆ. ಇಂತಹ ಸಮಯದಲ್ಲಿ ನಮಗೆ ಬೆಳಕು ತೋರುವ, ಸದಭಿರುಚಿಯ ಮತ್ತು ಉತ್ತಮ ಸಂದೇಶ ನೀಡುವ ಕಾರ್ಯಕ್ರಮಗಳು ಬೇಕು ಎಂದೆನಿಸಲು ಶುರುವಾಗುವ ಹೊತ್ತಿಗೆ 'ಸತ್ಯಮೇವ ಜಯತೇ'ಮೂಡಿಬರುತ್ತಿದೆ.

ರಾಷ್ಟ್ರದ ವಿವಿಧ ಭಾಷೆಗಳಲ್ಲಿ , ಖಾಸಗಿ ಹಾಗೂ ದೂರದರ್ಶನ ಚಾನೆಲ್‌ಗಳಲ್ಲಿ ಏಕ ಕಾಲಕ್ಕೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಖ್ಯಾತ ನಟ ಆಮೀರ್ ಖಾನ್ ಕಲ್ಪನೆಯ ಕೂಸು. ಸಾಮಾಜಿಕ ಸಮಸ್ಯೆಯೊಂದರ ಬೆನ್ನು ಹತ್ತಿ,ಆ ಸಮಸ್ಯೆಯ ಹಲವು ಆಯಾಮಗಳನ್ನು ತೆರೆದಿಡುವ ಪ್ರಯತ್ನವನ್ನು ಈ ಕಾರ್ಯಕ್ರಮ ಮಾಡಿದೆ. ಮೊದಲ ಕಂತಿನಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಚಾರದತ್ತ ಬೆಳಕು ಹರಿಸಿದ್ದಾರೆ. ಈ ಸಮಸ್ಯೆಗೆ ಬಲಿಯಾದವರ, ಈ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿರುವ ಮಹಿಳೆಯರ ಸಂದರ್ಶನವಂತೂ ಕಟು ವಾಸ್ತವತೆಗೆ ಕನ್ನಡಿ ಹಿಡಿದಂತಿದೆ. ಇಲ್ಲಿ ಅವರು ಖ್ಯಾತ ವೈದ್ಯರು, ವಕೀಲರು, ಸಮಾಜ ಸೇವಕರು, ಪತ್ರಕರ್ತರು ಹಾಗೂ ಜನಸಾಮಾನ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಇದು ಅವಿದ್ಯಾವಂತರಲ್ಲಿ, ಹಳ್ಳಿಯವರಲ್ಲಿ ಮಾತ್ರ ಇರುವುದೆಂಬ ಜನರ ಕಲ್ಪನೆಗೆ ವಿರೋಧವಾಗಿ , ಸಮಾಜದ ಎಲ್ಲ ಸ್ತರಗಳಲ್ಲೂ ಇದು ಯಾವ ಪರಿಯಾಗಿ ಹಾಸುಹೊಕ್ಕಾಗಿದೆ ಎಂಬ ವಿಚಾರ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಪ್ರಾಣವನ್ನು ರಕ್ಷಿಸಬೇಕಾದ ವೈದ್ಯರೇ ಇದನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಒಂದು ಸಮಸ್ಯೆಯ ಬಗೆಗೆ, ಅದರ ಪರಿಣಾಮಗಳು ಮತ್ತು ಅದರಿಂದ ಹೊರ ಬರುವ ಬಗೆಗೆ, ಆ ಸಮಸ್ಯೆಯನ್ನು ಎದುರಿಸುವವರ ಬಗೆಗೆ ಆಮೀರ್ ಖಾನ್ ಮತ್ತು ತಂಡ ಸಮಗ್ರವಾಗಿ ಅಧ್ಯಯನ ನಡೆಸಿದೆ. ಅವರು ನೀಡುವ ಅಂಕಿ ಅಂಶಗಳು ನಮ್ಮಲ್ಲಿ ಭೀತಿ ಹುಟ್ಟಿಸುವ ಹೊತ್ತಿಗೆ, ಅವರು ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿಸಿ, ಅದರಲ್ಲಿ ಯಶಸ್ವಿಯಾದ ಊರಿನ ಕಥೆಯನ್ನೂ ಹೇಳುತ್ತಾರೆ. ಸಕಾರಾತ್ಮಕ ಚಿಂತನೆಗೆ ಅನುವು ಮಾಡಿಕೊಡುತ್ತಾರೆ. ಅವರೇ ಅನ್ನುವಂತೆ ಒಂದು ಕಾರ್ಯಕ್ರಮ ಮಾಡಿದ ಕೂಡಲೇ ಸಮಸ್ಯೆ ಪರಿಹಾರವಾಯಿತೆಂದು ಅರ್ಥವಲ್ಲ. ನಮ್ಮ ನಿಮ್ಮೆಲ್ಲರ ದೃಷ್ಟಿಕೋನ ಬದಲಾದರೆ ಮಾತ್ರ ಇದು ಸಾಧ್ಯ ಎನ್ನುವ ಸಂದೇಶವನ್ನು ನೀಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ನಮಗೆ ಇಂತಹ ಒಂದು ಕಾರ್ಯಕ್ರಮದ ಅವಶ್ಯಕತೆ ಬಹಳವಿತ್ತು. ಆಮೀರ್ ಖಾನ್ ಇದನ್ನು ಪೂರೈಸಿದ್ದಾರೆ.

ಯಾವುದೇ ಸಿನಿಮಾ ಆಗಲೀ, ಧಾರಾವಾಹಿಯೇ ಆಗಲೀ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಸಂಗತಿಗಳ ಬಗ್ಗೆ ಮಾತನಾಡತೊಡಗಿದಾಗ ನಾವು ಅವುಗಳ ಜತೆಗೆ ಕೂಡಲೇ ಸ್ಪಂದಿಸತೊಡಗುತ್ತೇವೆ. ಒಂದೊಮ್ಮೆ ನಮ್ಮ ಜೀವನದಲ್ಲಿ ನಾವು 'ಅಸಾಧ್ಯ' ಎನ್ನುವ ಸಂಗತಿಗಳನ್ನು ಸಿನಿಮಾದ ನಾಯಕ ಮಾಡಿ ತೋರಿಸಿದಾಗ ನಾವು ಭ್ರಾಮಕ ಲೋಕಕ್ಕೆ ತೆರೆದುಕೊಳ್ಳುತ್ತೇವೆ. ಆಮೀರ್ ಖಾನ್‌ರ ಚಲನಚಿತ್ರಗಳು ನಮಗೆ ಮತ್ತಷ್ಟು ಇಷ್ಟವಾಗಲು ಕಾರಣ ಅವರು ಎತ್ತಿಕೊಳ್ಳುವ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಭಿನ್ನ ಚಿಂತನೆ. ಅವರ 'ತಾರೆ ಜಮೀನ್ ಪರ' ಬಂದಾಗ ನಾವು ನಮ್ಮ ನಡುವೆಯೇ ಇರುವ 'ವಿಶೇಷ' ಮಕ್ಕಳ ಬಗೆಗೆ ಯೋಚಿಸತೊಡಗಿ, ಆ ಸಿನಿಮಾವನ್ನು ಮತ್ತಷ್ಟು ಆಪ್ತವಾಗಿಸಿಕೊಂಡೆವು. ಅಂತೆಯೇ ಆತನ ಮುಂದಿನ ಚಿತ್ರ 'ತ್ರೀ ಈಡಿಯೆಟ್ಸ್' ಇಂದಿನ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಯಿತು. ಅವರ 'ಸತ್ಯಮೇವ ಜಯತೆ' ಕಾರ್ಯಕ್ರಮಕ್ಕೆ, ಡಬ್ಬಿಂಗ್ ಕುರಿತಾದ ಎಷ್ಟೇ ಅಪಸ್ವರಗಳು ಎದ್ದರೂ ನಾವು ಆ ಕಾರ್ಯಕ್ರಮವನ್ನು ಬಹಳಷ್ಟು ಖುಷಿಯಿಂದಲೇ ಸ್ವೀಕರಿಸಿದ್ದೇವೆ.

ಆದರೆ, ಒಂದು ಮಾತು. ಯಾವುದೇ ಟಿ.ವಿ. ವಾಹಿನಿಯ ಮುಖ್ಯ ಉದ್ದೇಶ ಟಿ.ಆರ್.ಪಿ. ಹೆಚ್ಚಿಸುವುದು ಮತ್ತು ತನ್ಮೂಲಕ ಹೆಚ್ಚು ಲಾಭ ಗಳಿಸುವುದು. ಇಂತಹುದರಲ್ಲಿ ಕಡಿಮೆ ಶ್ರಮದಲ್ಲಿ ಹೆಚ್ಚು ಹಣ ಗಳಿಸುವ ರಸಪ್ರಶ್ನೆಯಂತಹ ರಿಯಾಲಿಟಿ ಶೋಗಳು ಅಥವಾ ಜನರ ಖಾಸಗಿ ವಿಚಾರಗಳನ್ನು ಮತ್ತಷ್ಟು ಹಿರಿದಾಗಿಸಿ, ಜಗಜ್ಜಾಹೀರು ಮಾಡುವಂಥ ರಿಯಾಲಿಟಿ ಶೋಗಳು ಬರುತ್ತಿರುವ ಕಾಲಕ್ಕೆ 'ಸತ್ಯಮೇವ ಜಯತೆ'ಯ ನಿಜವಾದ ಉದ್ದೇಶ ಏನು ಎಂಬ ಪ್ರಶ್ನೆ ಏಳುತ್ತದೆ. ಮನೆಯೊಳಗೇ ಕುಳಿತು ಅಥವಾ ಕುಟುಂಬದ ಜತೆಯೇ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಾದ ವಿಚಾರಗಳನ್ನು ಟಿ.ವಿ. ವಾಹಿನಿಯ ಮೂಲಕ ಜಗತ್ತಿಗೆ ಬಿತ್ತರಿಸಿ, ಇರುವ ಅಸಮಾಧಾನಗಳನ್ನು, ಮನಸ್ಸಿನ ಗೋಜಲುಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆಯೇ? ಮೇಲ್ನೋಟಕ್ಕೆ ಇಂತಹ ಶೋಗಳು ಸಮಾಜಮುಖಿ ಅನಿಸಿದರೂ ಇವು ಕುಟುಂಬದ ಖಾಸಗಿತನವನ್ನು ಬಯಲುಗೊಳಿಸುತ್ತಿವೆಯೇ? ಭಾವನೆಗಳನ್ನು ಮಾರಾಟದ ಸರಕಾಗಿಸುವ ಹಿನ್ನೆಲೆಯಲ್ಲಿ ಇಂತಹ ದಿನನಿತ್ಯದ ಘಟನೆಗಳನ್ನು ಇನ್ನಷ್ಟು ಹಿಗ್ಗಿಸಿ ಅಪಾಯ ತಂದೊಡ್ಡುತ್ತಿದ್ದೇವೆಯೇ? ಇದು ಚಿಂತಿಸಬೇಕಾದ ವಿಚಾರ.

ಇಷ್ಟೆಲ್ಲ ಇದ್ದರೂ ನಮಗೆಲ್ಲ ಒಂದೇ ಆಸೆ. ಈ ಕಾರ್ಯಕ್ರಮದ ಸಂದೇಶ ಹುಸಿಯಾಗದಿರಲಿ. ಸಮಾಜದಲ್ಲಿ ನೊಂದವರಿಗೆ ದೀವಿಗೆಯಾಗಿ, ಅವರ ಬಾಳು ಹಸನಾಗಲಿ. 

(ಇವತ್ತಿನ ವಿಜಯಕರ್ನಾಟಕ ದಲ್ಲಿ ಪ್ರಕಟಿತ

Image courtesy : http://www.satyamevjayate.in/issue01/images/images/Watch-Full-Episode.jpg