ಪ್ರಕೃತಿಯ ಸಾಂಗತ್ಯವು ಎಂದೆoದಿಗೂ ಆಪ್ಯಾಯಮಾನ.ನಾವು ಹೆಚ್ಚು ಹೆಚ್ಚು ಆಧುನಿಕ ಜೀವನಕ್ಕೆ ತೆರೆದುಕೊಳ್ಳುತ್ತಾ ಹೋದಂತೆ , ಸಹಜ ಪರಿಸರದಿಂದ ದೂರವಾಗುತ್ತಾ ಸಾಗುತ್ತಿರುವುದು ವಿಪರ್ಯಾಸವೇ ಸರಿ.ಅಲ್ಲೊಮ್ಮೆ ಇಲ್ಲೊಮ್ಮೆ ಬಿಡುವು ಮಾಡಿಕೊಂಡು , ಬೆಟ್ಟ ಗುಡ್ಡಗಳನ್ನು ಏರುವುದು, ಕಾಡು ಮೇಡುಗಳಲ್ಲಿ ಅಲೆಯುವುದು ನಮ್ಮ ದೈನಂದಿನ ಒತ್ತಡಭರಿತ ಜೀವನ ಶೈಲಿಗೆ ಬ್ರೇಕ್ ನೀಡಿ ,ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ನಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಬೀಚ್ ಟ್ರೆಕ್ ಅಥವಾ ಕಡಲ ತಡಿಯ ನಡಿಗೆ ಇತ್ತೀಚೆಗಿನ ಟ್ರೆಂಡ್ ಗಳಲ್ಲಿ ಒಂದು. ಸಮುದ್ರದ ಗಾಳಿಗೆ ಮೈಯೊಡ್ಡಿ ,ಸಮುದ್ರ ತೀರದ ಉದ್ದಕ್ಕೂ ನಡೆಯುವುದು ಒಂದು ಸುಂದರ ಅನುಭವ.
ಇತ್ತೀಚಿಗೆ ನಮ್ಮ ಮಿತ್ರ ವೃ೦ದದವರೆಲ್ಲ ಇಂತಹ ಒಂದು ನಡಿಗೆಯನ್ನು ಮಾಡುವುದೆಂದು ತೀರ್ಮಾನಿಸಿದೆವು. ಈ ಟ್ರೆಕ್ ಗೆ ಹೆಚ್ಚಿನ ತಯಾರಿಯೇನೂ ಅಗತ್ಯವಿಲ್ಲ. ೨ -೩ ಲೀಟರ್ ನೀರು ಮತ್ತು ಒಂದಿಷ್ಟು ಲಘು ಆಹಾರ ನಿಮ್ಮ ಕೈಯಲ್ಲಿ ಇದ್ದರೆ ಸಾಕು.ಕುಮಟಾದಿಂದ ಗೋಕರ್ಣಕ್ಕೆ ಸುಮಾರು ೧೮ ಕಿ.ಮೀ ಉದ್ದಕ್ಕೂ ನಡೆಯುವ ಯೋಜನೆ ತಯಾರಾಯಿತು.
ಕುಮಟೆಯ ದರ್ಶನ ನನಗೆ ಮೊದಲ ಬಾರಿ ಆದದ್ದು ಶಿವರಾಮ ಕಾರಂತರ 'ಅಳಿದ ಮೇಲೆ 'ಕಾದಂಬರಿಯಲ್ಲಿ . ಅದರಲ್ಲಿ ಬರುವ ಯಶವಂತ ರಾಯರು ಹುಟ್ಟಿ ಬೆಳೆದ ಊರು ಕುಮಟೆಯೇ. ಅದರ ಬಳಿಕ ಕುಮಟೆಯನ್ನು ನಾನು ಕಂಡದ್ದು ಚಿತ್ತಾಲರ ಕಥೆಗಳಲ್ಲಿ. ಕುಮಟೆ ಪೇಟೆಯಲ್ಲಿ ಅಲೆದಾಡುವಾಗ ಧಾರೇಶ್ವರದ ಶೀನ ಮುಂತಾದ ಪಾತ್ರಗಳು ನನ್ನ ಮನದಲ್ಲಿ ಸುಳಿದಾಡಿದವು.
ಸ್ನೇಹಿತರಾದ ಮಂಜು ಹಾಗೂ ವಾದಿರಾಜರ ಮಾರ್ಗದರ್ಶನದಲ್ಲಿ ನಮ್ಮ ಬೀಚ್ ಟ್ರೆಕ್ ಪ್ರಾರಂಭವಾಯಿತು. ಬೆಳಗಿನ ಜಾವವೇ ಎದ್ದು ತಯಾರಾದೆವು. ಕುಮಟೆಯ ಸಮುದ್ರ ತೀರದಿಂದ ಬೆಳಗ್ಗೆ ಆರು ಗಂಟೆಗೆ ನಮ್ಮ ನಡಿಗೆ ಶುರುವಾಯಿತು. ಕೆಲವೊಂದು ಕಡೆ ಸಮುದ್ರ ತೀರ ಮತ್ತೆ ಕೆಲವೆಡೆ ಸಣ್ಣ ಪುಟ್ಟ ಗುಡ್ಡ ಹತ್ತಿ ಮತ್ತೆ ಇಳಿದು ,ಸಮುದ್ರ ತೀರವನ್ನು ಸೇರಿಕೊಳ್ಳಬೇಕು. ಬೆಳಗಿನ ತಿಳಿ ಬಿಸಿಲು ಮತ್ತು ಆರಂಭದ ಉತ್ಸಾಹವು ನಮಗೆ ಬಹಳಷ್ಟು ಖುಷಿ ಕೊಟ್ಟಿತು.
ಕಡಲು ಅನಂತ . ಅದರ ವಿಶಾಲತೆ, ಆಳವನ್ನು ಅರಿಯಲು ನಮಗೆ ಕಷ್ಟವೇ ಸರಿ. ಕಡಲಿನ ತೆರೆಗಳ ಉದ್ದಕ್ಕೂ ಅಲೆಗಳ ಶಬ್ದಗಳ ಜತೆ ಹೆಜ್ಜೆ ಹಾಕುತ್ತ ಮೌನವಾಗಿ ಸಾಗುವುದು ಒಂದು ರೀತಿಯ ಧ್ಯಾನದಂತೆ. ಕಡಲ ಬಣ್ಣವು ನೀಲಿ ಮಿಶ್ರಿತ ಬೂದು ಬಣ್ಣವಾದರೂ ಕಡಲತೀರದ ಜೀವನಕ್ಕೆ ಅದೆಷ್ಟು ಬಣ್ಣಗಳು! ಕಡಲಿನ ಉದ್ದಕ್ಕೂ ಹಲವು ವರ್ಣದ ಚಿತ್ರಗಳು. ದೋಣಿಯನ್ನು ಸಮುದ್ರದೆಡೆಗೆ ಸಾಗಿಸುವವರು, ಕಡಲಿನ ಅಲೆಗಳ ಏರಿಳಿತಕ್ಕೆ ಅಂಜದೆ ದೋಣಿಯನ್ನು ಮುನ್ನುಗ್ಗಿಸಿ ,ಮೀನು ಹಿಡಿಯುವ ಧೀರರು ,ದಡದಲ್ಲಿ ಬಲೆಯಿಂದ ಮೀನುಗಳನ್ನು ಪ್ರತ್ಯೇಕಿಸಿ ,ಬುಟ್ಟಿಗೆ ತುಂಬಿ ಮಾರಾಟಕ್ಕೆ ಒಯ್ಯುವ ಮಹಿಳೆಯರು ,ಮರಳಿನ ಅಡಿಯಲ್ಲಿ ತೆರೆಗಳ ಜತೆಯಲ್ಲಿ ಆಟವಾಡುವ ಮಕ್ಕಳು -ಒಂದೇ ಎರಡೇ .ಕಡಲ ತೀರ ಹಲವರಿಗೆ ಜೀವನವನ್ನು ಕೊಟ್ಟಿದೆ . ಕೆಲವರ ಜೀವನವನ್ನು ಕಸಿದುಕೊಂಡಿದೆ ಕೂಡ.
ನಮ್ಮ ನಡಿ ಗೆ ಸಾಗುತ್ತಿದ್ದಂತೆ ಅಘನಾಶಿನಿ ನದಿಯು ಸಮುದ್ರವನ್ನು ಸೇರುವ ಸ್ಥಳ ಎದುರಾಯಿತು. ಅದನ್ನು ದಾಟಬೇಕಾದರೆ ದೋಣಿಯಲ್ಲಿ ಸಾಗಬೇಕು. ದೋಣಿ ಇರುವ ತನಕ ಬಸ್ ನಲ್ಲಿ ಹೋಗಿ, ದೋಣಿ ಹತ್ತಿ ,ನದಿ ದಾಟಿದೆವು. ಬಳಿಕ ಮರಳಿ ಕಡಲ ತೀರ.
ನಡಿಗೆಯ ಉದ್ದಕ್ಕೂ ಕಂಡ ಬೀಚ್ ಗಳು ಎಷ್ಟೊಂದು ಸುಂದರ ಮತ್ತು ಸ್ವಚ್ಛ. ಜನ ಸಂದಣಿ ಇಲ್ಲದ ಕಾರಣ ಅವು ಬಹಳ ಶುಚಿಯಾಗಿಯೇ ಉಳಿದಿವೆ. ಹಾಗಾಗಿ ಈ ನಡಿಗೆ ಮತ್ತಷ್ಟು ಹರ್ಷ ನೀಡಿತು. . ಸುಮಾರು ೧೮ ಕಿ.ಮೀ. ನಾವು ಕ್ರಮಿಸಿದೆವು. ಮುಂದೆ ನಡೆಯುತ್ತಿದ್ದಂತೆ ಗೋಕರ್ಣ ಸಮೀಪಿಸಿತು . ಮಧ್ಯಾಹ್ನ ೨ ಗಂಟೆ.ಹೊಟ್ಟೆ ತಾಳ ಹಾಕಲಾರಂಭಿಸಿತ್ತು. ಗೋಕರ್ಣದಲ್ಲಿ ಇರುವ zostel ನಲ್ಲಿ ಊಟ ಮುಗಿಸಿದೆವು. ಅರ್ಧ ದಿನವನ್ನು ಹೀಗೆ ಸ್ನೇಹಿತರ ಜತೆ ,ಪ್ರಕೃ ತಿಯ ಮಡಿಲಲ್ಲಿ ಕಳೆದದ್ದು ಒಂದು ಸುಂದರ ನೆನಪು.
ಛಾಯಾ ಚಿತ್ರಗಳು : ಶ್ರೀಕಂಠ