Pages

Monday, August 14, 2017

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೃಷ್ಣ

ಶ್ರೀಕೃಷ್ಣಪರಮಾತ್ಮನ ಲೀಲೆಗಳು ಅಪಾರ. ಕಾವ್ಯ ಪ್ರಪಂಚದಲ್ಲಿ ,ನೃತ್ಯ ನಾಟಕಗಳಲ್ಲಿ ಕೃಷ್ಣನಷ್ಟು ವರ್ಣನೆಗೆ ಒಳಗಾದವರು ಬೇರಾರೂ ಇಲ್ಲವೆಂದೇ ಹೇಳಬೇಕು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿಯಂತೂ ಬಂದಿಶ್, ಠುಮ್ರಿ ,ಧಮಾರ್  ಮತ್ತು ಭಜನ್ ಗಳಲ್ಲಿ ಕೃಷ್ಣನ ಗುಣಗಾನವು  ಯಥೇಚ್ಛವಾಗಿ ಕಾಣಸಿಗುತ್ತದೆ. ಆತನ ಬಾಲಲೀಲೆ, ಗೋಪಿಯರೊಡನೆ ಸರಸ,ರಾಧೆಯ ಪ್ರೇಮ ಮತ್ತು ವಿರಹ, ಭಕ್ತನ ಪ್ರಾರ್ಥನೆ ಇವುಗಳೆಲ್ಲ ಅತ್ಯಂತ ಸೊಗಸಾಗಿ ಚಿತ್ರಿತವಾಗಿವೆ. ಧಮಾರ್  ಎನ್ನುವ ಪ್ರಕಾರವು  ಕೃಷ್ಣನ ಹೋಳಿ ಹಬ್ಬದ ವರ್ಣನೆಗೆಂದೇ  ಮೀಸಲಾಗಿದೆ. ಹಿಂದೂಸ್ತಾನೀ ಸಂಗೀತದಲ್ಲಿ ಕೃಷ್ಣನನ್ನು ವಿವಿಧ ಹೆಸರುಗಳಿಂದ ಸಂಬೋಧಿಸಲಾಗುತ್ತದೆ. ಶ್ಯಾಮ್, ಮನಮೋಹನ, ಮೋಹನ, ಕಾನ್ಹಾ, ಕೃಷ್ಣ, ಗೋಪಾಲ, ಮುರಳೀಧರ, ವಿಹಾರೀ, ಮುಕುಂದ, ನಂದನಂದನ, ಯದುನಂದನ, ಯಶೋದಾನಂದನ, ಗಿರಿಧರ, ಮುರಾರಿ ಮುಂತಾದ ಹೆಸರುಗಳೆಲ್ಲವೂ ಕೃಷ್ಣನದ್ದೇ. ಕೃಷ್ಣನದ್ದು ತುಂಬು ಜೀವನ. ಆತನ ಜೀವನದ ಪ್ರತಿಯೊಂದು ಘಟ್ಟವೂ ಸಂಭ್ರಮ ಸಡಗರದಿಂದ ಕೂಡಿದ್ದು. ಕವಿಗಳು, ಸಾಹಿತಿಗಳೆಲ್ಲ ತಮ್ಮ ಕಲ್ಪನೆಯ ಆಗಸದಲ್ಲಿ ಕೃಷ್ಣನನ್ನು ವಿಧ ವಿಧ ರೀತಿಗಳಲ್ಲಿ ಕಂಡು ಆ ಸೃಷ್ಟಿಯ ಸಂತಸವನ್ನು ತಮ್ಮ ಅಸಂಖ್ಯಾತ ರಚನೆಗಳ ಮೂಲಕ ನಮ್ಮೊಂದಿಗೆಲ್ಲ ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ ನಮೂದಿಸಿರುವ ಕವನಗಳೆಲ್ಲವೂ ವಿವಿಧ ಶ್ರೇಷ್ಠ ಸಂಗೀತಗಾರರು ಹಿಂದೂಸ್ತಾನಿ ಸಂಗೀತ ಪರಂಪರೆಗೆ ಕೊಟ್ಟ ಕೊಡುಗೆ. 

೧. ನಂದ ಗೋಕುಲದಲ್ಲಿ ಕೃಷ್ಣನ ಆಗಮನ 
ಶ್ರೇಷ್ಠ ವಾಗ್ಗೇಯಕಾರ  ಪಂಡಿತ್ ರಾಮಶ್ರೇಯ ಝಾ  "ರಾಮರಂಗ"ರು ತಮ್ಮ ಬಂದಿಶ್ ನಲ್ಲಿ  ಯಶೋದೆಯನ್ನು ಈ ಪರಿಯಾಗಿ ವಿನಂತಿಸುತ್ತಾರೆ :

ರಾಗ: ನಂದ್     ತಾಳ:  ಏಕ್ ತಾಲ್ 

ನಂದ್ ಘರ್ ಆನಂದ್ ಕೀ 
ಬಧಾಯೀ ಬಾಜೇ 
ಯಶುದಾ ತಿಹಾರೇ ಆಜ್ 
ಭಾಗ್ ರಾಗ್  ಜಾಗೇ ಜಾಗೇ ।

ಐಸೊ ಲಾಲ್ ಪಾಯೋರೀ 
ಜೈಸೊ ಕೋಉ ಪಾವೇ ನಾಹೀ 
"ರಾಮರಂಗ್"  ನಯನ್ ಮೇರೋ 
ದರಸ್ ದಾನ್ ಮಾಂಗೇ ಮಾಂಗೇ ।।

ಗೋಕುಲದ ನಂದನ ಮನೆಯಲ್ಲಿ ಆನಂದದ ವಾದ್ಯಗಳು ಮೊಳಗಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಕೃಷ್ಣನ ಆಗಮನದಿಂದ ಯಶೋದೆಗೆ ಅಪರಿಮಿತ ಹರ್ಷವಾಗಿದೆ. ಇಂತಹ ಸಂದರ್ಭದಲ್ಲಿ ಕವಿಯು ತಾಯಿ ಯಶೋದೆಯನ್ನು " ನಿನಗೆ ಅಪೂರ್ವವಾದ ,ಬೇರೆಲ್ಲೂ ಕಾಣಸಿಗದಂತಹ ಸುಂದರ ಶಿಶುವು ದೊರಕಿದೆ. ಅಂತಹ ಮಗುವಿನ ದರ್ಶನವನ್ನು ನನಗೆ ಕರುಣಿಸು " ಎಂದು ಪ್ರಾರ್ಥಿಸುತ್ತಾರೆ. 

ರಾಗ: ಕೋಮಲ ರಿಷಭ  ಅಸಾವರಿ      ತಾಳ:  ತೀನ್  ತಾಲ್ 

ಬಢಯ್ಯಾ ಲಾವೋ ಲಾವೊರೆ ಲಾವೋ 
ರೀ ಆಜ್ ಸುಘರ ಘಡ್ ಪಲನಾ ।

ರತನ್ ಜತನ ಸೊ ಜಡಿತ್ ಹಿಂಡೋಲನಾ 
ಝುಲಾವತ್  ಜಸೋಮತ್  ಲಲನಾ ।।

ಬಾಲ ಕೃಷ್ಣನ ದಿನಚರಿಯ ಪ್ರಮುಖ ಅಂಗ ನಿದ್ದೆ. ಯಶೋದೆಯು ನಂದನ ಬಳಿ ಸುಂದರವಾದ  ತೊಟ್ಟಿಲನ್ನು ತರಲು ಆದೇಶಿಸುತ್ತಿರುವ ಚಿತ್ರಣ ಇಲ್ಲಿದೆ. ಹಾಗೆ ಆದೇಶಿಸಿ ತರಿಸಿದ ತೊಟ್ಟಿಲು ಸಾಮಾನ್ಯವಾದದಲ್ಲ. ರತ್ನಖಚಿತವಾದದ್ದು.  ಈ ವಿಶೇಷವಾದ ತೊಟ್ಟಿಲನ್ನು ತೂಗುತ್ತಾ ಯಶೋದೆಯು ಕೃಷ್ಣನನ್ನು ಮಲಗಿಸುತ್ತಾಳೆ . 

ರಾಗ : ಕೋಮಲ ರಿಷಭ  ಅಸಾವರಿ      ತಾಳ:   ಆಡಾ  ಚೌತಾಲ್ 

ಯೇ ಮಾ ಕೌನ್ ಜೋಗೀ ಆಯಾ 
ನಜರ್ ಜೋ ಲಾಗೀ ಮೇರಾ ತೋ  ಕಾನ್ಹಾ ರೋವೆ ।

ಘರ್ ಘರ್ ಜಸೋದಾ ಲಿಯೇ ಫಿರತ್ ಹೇ 
ನಾ ದೂಧ್ ಪೀವೆ ನಾ ಸೋವೆ ।।


ಎಲ್ಲ ತಾಯಂದಿರಿಗೆ ಇರುವಂತೆ ಯಶೋದೆಗೂ ತನ್ನ ಮಗುವಿನ ಬಗೆಗೆ ಎಲ್ಲಿಲ್ಲದ ಕಳಕಳಿ. ಶಿವನು  ಕೃಷ್ಣನನ್ನು ಜೋಗಿಯ ರೂಪದಲ್ಲಿ ಬಂದು ಭೇಟಿಯಾಗಿ ಹೋಗುತ್ತಾನೆ. ಜೋಗಿಯು ಹೋದ ಬಳಿಕ ಬಾಲಕೃಷ್ಣನು ಹೆದರಿಕೊಂಡಿದ್ದಾನೆ. ಮಂಕಾಗಿದ್ದಾನೆ. ಸತತವಾಗಿ ಅಳುತ್ತಿದ್ದಾನೆ. ಮಲಗಲು ನಿರಾಕರಿಸುತ್ತಿದ್ದಾನೆ. ಹಾಲನ್ನು ಸೇವಿಸಲೂ ಒಲ್ಲೆನೆನ್ನುತ್ತಾನೆ. ಆತನಿಗೆ ಆ ಜೋಗಿಯದೇ ದೃಷ್ಟಿಯಾಗಿರಬೇಕು ಎಂದು ಯಶೋದಾ ಮಾತೆಯು ಗೋಕುಲದ ಮನೆಮನೆಗಳಲ್ಲಿ ಕೃಷ್ಣನ್ನು ಹೊತ್ತೊಯ್ದು ಹೇಳುತ್ತಿರುವ ಸನ್ನಿವೇಶವನ್ನು ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಸಾಹೇಬರು ಇಲ್ಲಿ ಸುಂದರವಾಗಿ ವಿವರಿಸಿದ್ದಾರೆ. 

ರಾಗ: ಶ್ಯಾಮ್ ಕಲ್ಯಾಣ್  ತಾಳ :   ತೀನ್  ತಾಲ್ 

ಝೂಲತ ಗೋಪಾಲ ಹೋ ಪಲನಾ 
ಘು೦ಘರಿ  ಲಲ್ ಕೆ ಲಲ್ ಕೇ  ಕಪೋಲ ಭಾಲ್  ಹೋ ಪಲನಾ ।

ಬಾಲ ಮುಕುಂದ ಆನಂದ ಕಂದ 
ಪುನಿ ಪುನಿ ಮಲಕೆ ಕಿಲಕೆ "ಪ್ರಣವೇಶ" ನಂದ ಲಾಲ್  ಹೋ ಪಲನಾ ।।


ಬಾಲ ಕೃಷ್ಣನು  ಜೋಕಾಲಿ ಆಡುವ ಪರಿ ಇಲ್ಲಿದೆ. ಕೃಷ್ಣನ ಗುಂಗುರು ಕೂದಲು ಜೋಕಾಲಿ ಆಟದ ಸಂದರ್ಭದಲ್ಲಿ ಹಣೆ ಮತ್ತು ಗಲ್ಲಗಳ ಮೇಲೆ ನಲಿದಾಡುತ್ತಿವೆ. ಹೀಗಿರುವಾಗ ಕೃಷ್ಣನು ನಸುನಗುತ್ತಾ ಕೇಕೆ ಹಾಕುತ್ತಾ ಇನ್ನೂ ಜೋರಾಗಿ ಜೋಕಾಲಿ ಆಡುತ್ತಿದ್ದಾನೆ . 

೨. ಬಾಲಕೃಷ್ಣನ ಲೀಲೆಗಳು 

ರಾಗ: ಶ್ಯಾಮ್ ಕಲ್ಯಾಣ್       ತಾಳ: ಏಕ್ ತಾಲ್

ಬೇಲಾ ಹೋ ಸಾಂಝ ಕೀ  
ಸುಖದ್ ಸುಹಾವನೋ
ಭಯೋ ರೀ ಆಲೀ ಆಜ್ ತೋ  ।

ಅಚಾನಕ್ ಆಯೇ ಶ್ಯಾಮ್  
ಬರಜೋರಿ ಅಚರಾ ಥಾಮ್ 
ಸರಬಸ್ ಲಯ್ "ರಾಮರಂಗ್"
ಚಲೇ ಜಗಾಯೆ ಬಾಲ್ ಕೋ ।।

ಗೋಕುಲದ ಸ್ತ್ರೀಯರಿಗೆ ಸಂಜೆಯ ಹೊತ್ತು ತುಂಬಾ ಸುಂದರವಾಗಿ ಕಾಣಹತ್ತಿದೆ. ಕಾರಣವಿಷ್ಟೇ.  "ಪ್ರತಿದಿನ ಸಂಜೆಯ ಸುಂದರ ಹೊತ್ತಿನಲ್ಲಿ ಕೃಷ್ಣನು ಅಚಾನಕ್ಕಾಗಿ ತಮ್ಮ ಮನೆಗಳಿಗೆ ನುಗ್ಗಿ ತನ್ನ ಯಾವತ್ತಿನ ತುಂಟಾಟದ ವಿವಿಧ ನಮೂನೆಗಳನ್ನು ಪ್ರಸ್ತುತಪಡಿಸಿ, ಧಾ೦ಧಲೆ ಎಬ್ಬಿಸಿ ಇನ್ನೇನು ಹೊರನಡೆಯುತ್ತಿದಂತೆ ತಮ್ಮ ಮನೆಗಳಲ್ಲಿ ಶಾಂತವಾಗಿ ನಿದ್ರಿಸುತ್ತಿರುವ ಹಸುಗೂಸುಗಳನ್ನು ಎಬ್ಬಿಸಿ ಕಾಲು   ಕೀಳುತ್ತಾನೆ ". ಪರಮಾತ್ಮನ ಈ ಲೀಲೆಯು ಯಾರಿಗೆ ತಾನೇ ಇಷ್ಟವಾಗದು ? 


ರಾಗ: ಸೋಹನಿ        ತಾಳ:  ತೀನ್  ತಾಲ್

ಏರೀ ಏ ಯಶೋದಾ ತೋಸೆ ಕರೂಂಗೀ ಲರಾಯೀ 
ತುಮ್ ಹರೇ ಕುಂ ವರ್ ನೇ ಧೂಮ್ ಮಚಾಯೀ ।

ಕಾಹು ಕೆ ಸರ್ ಸೇ ಮಟಕಿಯಾ ಛೀನೀ 
ಕಾಹುಕೇ ಸರ್ ಸೇ ಮಟಕಿಯಾ ಡುರ್ ಕಾಯೀ 
ಬಾಟ್ ಚಲತ್ ಮೋಹೇ ಛೇಡತ್  ಸಾಂವರ್ 
ಚಾ೦ದ್ ಹಸೇ ಔರ್ ಬೃಜ್ ಕೀ ಲುಗಾಯೀ ।।

ಗೋಪಿಯರು ಕೃಷ್ಣನ ತುಂಟಾಟಗಳನ್ನು ಸಹಿಸುತ್ತಲೇ ಇದ್ದರೂ ಕೆಲವೊಮ್ಮೆ ಸಹನ ಶಕ್ತಿಯ ಎಲ್ಲೆ  ಮೀರಿದಾಗ ಯಶೋದೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಕೃಷ್ಣನು ತಮ್ಮ ನೀರಿನ ಮಡಕೆಗಳನ್ನು ಕಸಿದುಕೊಂಡು ,ಕೆಲವರ ಮಡಕೆಗಳನ್ನು ಒಡೆದು ,ತಮ್ಮನ್ನು ಛೇಡಿಸುತ್ತಿದ್ದರೂ ಗೋಕುಲದ ಜನರು ಇದನ್ನು ಕಂಡು ಆನಂದ ಪಡುತ್ತಿದ್ದಾರೆ ಎಂದು ದೂರುತ್ತಾರೆ. 

ರಾಗ: ದೇಸ್        ತಾಳ: ರೂಪಕ್  

ನಿರತತ್ ಶ್ಯಾಮ್ ಆಜ್ ನಟವರ್ ಭೇಷ್  
ಮುರಲೀ ಕರ್ ಧಾರೆ ।

ನಿರತತ್ ಗಾವೇ ಕಾಲಿಯಾ ಫನ್ ಪೇ 
"ರಾಮರ೦ಗ್" ಉಮಂಗೀ ತಾತಾ ಥೈಯ್ಯಾ ಕರೇ  ।।

ಕೃಷ್ಣನ ಬಾಲಲೀಲೆಗಳಲ್ಲಿ ಪ್ರಮುಖವಾದ ಕಾಳಿಂಗ ಮರ್ದನದ ಸಂದರ್ಭದಲ್ಲಿ ಕೃಷ್ಣನು ದೈತ್ಯ ಕಾಳಿಂಗನ ಹೆಡೆಯನ್ನೇರಿ ನರ್ತಿಸಿದ ವಿಚಾರವನ್ನು ಈ ಕವನದಲ್ಲಿ ಪ್ರಸ್ತುತಪಡಿಸಲಾಗಿದೆ. 

೩. ಕೃಷ್ಣನ   ಯೌವನ 

ಕವಿಯು ರಾಧಾ ಕೃಷ್ಣರನ್ನು ಜೊತೆಯಾಗಿ ಕಾಣುತ್ತಾನೆ. 

ರಾಗ: ಮುಲ್ತಾನೀ  ತಾಳ: ಆಡಾ ಚೌತಾಲ್  

ಗೋಕುಲ್ ಗಾಂವ್ ಕೇ ಛೋರಾ 
ಬರಸಾನೇ ಕೀ  ನಾರೀ ರೇ ।

ಇನ್ ದೋಉನ್ ಮನ್ ಮೋಹ್ ಲಿಯೋ ಹೇ 
ರಹೇ "ಸದಾರಂಗ್" ನಿಹಾರ್ ರೇ ।।

ಗೋಕುಲದ ಹುಡುಗನಾದ  ಕೃಷ್ಣ  ಮತ್ತು ಬರ್ಸಾನಾ ಎಂಬ ಊರಿನ ಹುಡುಗಿಯಾದ  ರಾಧೆ - ಇವರಿಬ್ಬರನ್ನು ಜತೆಯಾಗಿ ಕಂಡು ಕವಿಗೆ (ಸದಾರಂಗ್) ಮನಸ್ಸು ತುಂಬಿ ಬಂತು. 

ರಾಗ: ಜೋನ್ ಪುರೀ        ತಾಳ : ಏಕ್ ತಾಲ್ 

ಮೋರೆ  ಮಂದಿರ್ ಶ್ಯಾಮ್ ಆಯೆ 
ಸಪನೇ ನಿಶಿ ದರಶ್ ಪಾಯೇ 
ರಾಧಾ ಸಂಗ್ ಹಸತ್ ಬೋಲತ್ 
ಜಮುನಾ ಜಲ ಡಗ್ ಮಗಾಯೇ  ।

"ದೀನ್" ದೇಖಿ ಪುಲಕಿತ್ ಮನ್ 
ಧಾಯೇ ಧೋಯ್ ಜುಗಲ್ ಚರನ್ 
ಕರ್ ಆರತಿ ಆನಂದ್ ಭರೇ 
ಗಾಯೇ ಗಾಯೇ ನಾಚೆ ನಾಚೆ  ।।

ಕವಿಯ ಕನಸಿನಲ್ಲಿ ರಾಧೆಯ ಜತೆ ಕೃಷ್ಣ ನಗುತ್ತಾ ಸರಸವಾಡುತ್ತ ಯಮುನಾ ನದಿಯಲ್ಲಿ  ಜಲ ತರಂಗ ಗಳನ್ನು ಎಬ್ಬಿಸುವ ಪ್ರಸಂಗ ನಡೆಯುತ್ತದೆ. ಅವರಿಬ್ಬರನ್ನು ಕಂಡ ಕವಿಗೆ ಅತ್ಯಂತ ಹರ್ಷವಾಗಿ, ಅವರಿಬ್ಬರ ಚರಣಗಳನ್ನು ತೊಳೆದು, ಆರತಿ ಮಾಡಿ, ಹಾಡಿ ನರ್ತಿಸುತ್ತಾನೆ.   

ರಾಗ : ರಾಗೇಶ್ರೀ    ತಾಳ: ತೀನ್  ತಾಲ್ 

ಜಾನೇ ದೇ ಜಾನೇ ದೇ ಸಖೀ ಜಾನೇ ದೇ 
ಮೋಹನ್ ಯಾದ್ ಕರೇ ಜಾನೇ ದೇ ।

ಮನ್ ಮೋಹನ್ ಕೀ ಪ್ರೀತ್ ಹೀ ನ್ಯಾರೀ 
ಮನ್ ಕೋ ಲುಭಾವತ್  ಸುಖದ್  ಕರೇ  ಜಾನೇ ದೇ ।।

ರಾಧೆಯು ತನ್ನ ಸಖಿಯರಲ್ಲಿ "ಮನಮೋಹನ ಕೃಷ್ಣನ ಪ್ರೀತಿಯು ತನ್ನ ಮನಸ್ಸಿಗೆ ಆಪಾರ ಸುಖವನ್ನು ನೀಡುವುದು. ತನ್ನ ಪ್ರಿಯತಮ ಕೃಷ್ಣನನ್ನು ಭೇಟಿಯಾಗಲು ಅವಕಾಶ ನೀಡಿ " ಎಂದು  ಈ ಪರಿಯಾಗಿ ವಿನಂತಿಸುತ್ತಾಳೆ. 

ರಾಗ : ತಿಲಕ್  ಕಾಮೋದ್     ತಾಳ:  ಜತ್   

ದೇಖೋ ಸಖೀ ಶ್ಯಾಮ್ ನಿಠುರ್ ನಾಹೀ ಮಾನತ್ 
ಕರತ್  ಠಿಠೋರೀ ಕಾನ್ಹಾ ರೋಕತ್ ಮಗ್  ಚಲತ್ । 

ಜಮುನಾ ತಟ ಪರ್  ಬನ್ಸೀ  ಬಜಾವತ್ 
"ದೀನ್" ಕೆ ತನ್ ಮನ್  ಸಬ್ ಅಕುಲಾವತ್ 
ಘರ್ ಆ೦ಗನ್ ಮೋಹೇ ಕಛು ನಾ ಸುಹಾವತ್ ।।

ಇದು ಒಂದು ಠುಮ್ರಿ.   ರಾಧೆಯು ತನ್ನ ಸಖಿಯರಲ್ಲಿ " ಯಮುನೆಯ ದಡದಲ್ಲಿ ತೇಲಿ ಬರುತ್ತಿರುವ ಮುರಳಿನಾದವು ಮತ್ತು ಮುರಳೀಧರನ ಸುಂದರ ಸರಸ ಲೀಲೆಗಳು ನನ್ನ ಹೃದಯವನ್ನು ಆವರಿಸಿಕೊಂಡಿವೆ. ಬೇರಾವುದರ ಪರಿವೆಯೂ ನನಗಿಲ್ಲ " ಎಂದು ಭಾವಪರವಶಳಾಗಿ ನುಡಿಯುತ್ತಾಳೆ .
ರಾಗ : ದೇವ  ಗಾಂಧಾರ್   ತಾಳ: ತೀನ್  ತಾಲ್
ಬರಜೋರಿ ನಾ  ಕರೋರೆ ಏ ಕಾನ್ಹಾಯೀ 
ಜಮುನಾ ಕೆ ಘಾಟ್ ಪನಿಯಾ ಜೋ ಭರನ್ 
ಗಗರ್  ಮೋರೀ ಗಿರಾಯೀ ಮೋಸೇ  ಕರ್ ಕೇ  ಲರಾಯೀ ।

"ಮನ್ ರಂಗ್"  ಹೋ  ತುಮ ಢೀಟ್ ಲಂಗರ್ ವಾ 
ವಹೀ ರಹೋ ಜಹಾಂ ರೈನ್ ಬಿರಮಾಯೀ   
ಮೋಸೇ ಕರ್ ಕೇ ಲರಾಯೀ  ।।

ರಾಧಾ ಕೃಷ್ಣರ ಹುಸಿಮುನಿಸಿನ ವರ್ಣನೆ ಇಲ್ಲಿದೆ. ರಾಧೆಯು ಕೃಷ್ಣನಲ್ಲಿ "ನನ್ನನ್ನು ಛೇಡಿಸಬೇಡ, ಯಮುನೆಯ ತೀರದಲ್ಲಿ ನೀರು ತುಂಬುತ್ತಿರುವ ನನ್ನ ಕೆಲಸಕ್ಕೆ ಅಡ್ಡಿ ಬರಬೇಡ, ಜಗಳವಾಡಬೇಡ. ನಿನ್ನೆ ರಾತ್ರಿಯನ್ನು ನೀನು ಎಲ್ಲಿ ಕಳೆದಿದ್ದೀಯ ಅಲ್ಲಿಯೇ  ಇರು. ನನ್ನ ಬಳಿ ಬರಬೇಡ." ಎಂದು ಕೋಪಗೊಳ್ಳುತ್ತಾಳೆ. 

ರಾಗ : ಪೂರಿಯಾ ಕಲ್ಯಾಣ್       ತಾಳ: ತೀನ್  ತಾಲ್ 

ಇತನೀ ಬಿನತೀ ಮೋರೀ ಮಾನ್ ಶಾಮ್ ಜೀ 
ಪನ್ ಘಟ್ ಪೇ ಮೋಹೇ ಛೇಡೊ ನಾ ಛೇಡೊ ನಾ।

ದೇಖತ್ ಹೇ ಸಬ್ ಬ್ರಿಜ್ ಕೇ ಲುಗವಾ 
ಜಾಕೇ ಕಹೇಂಗೇ ಘರ್ ಘರ್ ವಾ ।।

"ನೀರು ತುಂಬುವ ಜಾಗದಲ್ಲಿ ನಮ್ಮನ್ನು ಛೇಡಿಸಬೇಡ. ಬ್ರ೦ದಾವನದ ಜನರೆಲ್ಲಾ ನಮ್ಮನ್ನು ನೋಡುತ್ತಾರೆ. ಮನೆಮನೆಗಳಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ" ಎಂದು ಗೋಪಿಕೆಯರೆಲ್ಲ ಕೃಷ್ಣನಲ್ಲಿ ವಿನಂತಿಸಿ ಕೊಳ್ಳುತ್ತಾರೆ. ಅವರೆಲ್ಲರ ಮನದಲ್ಲಿ ಕೃಷ್ಣನು ತಮ್ಮನ್ನು  ಛೇಡಿಸಲಿ ಎಂದೇ ಬಯಕೆಯಿದೆ. ಆದರೂ ಜನರು ಏನೆಂದು ಕೊಳ್ಳುತ್ತಾರೆ ಎಂಬ ಆತಂಕವೂ ಇದೆ.  ಕೃಷ್ಣನ ಒಡನಾಟವೇ ಅಂಥದ್ದು. 

೪. ಸಂಗೀತಗಾರ ಕೃಷ್ಣ 

ಬೃಂದಾವನೀ ಸಾರಂಗದಲ್ಲಿ ನಿಬದ್ಧವಾಗಿರುವ ಈ ರಚನೆಗಳು  ಕೃಷ್ಣನ  ವೇಣುವಾದನದ ನಿಪುಣತೆಯನ್ನು ಎತ್ತಿ ಹಿಡಿಯುತ್ತದೆ. 

ರಾಗ : ಬೃಂದಾವನೀ  ತಾಳ : ತೀನ್ ತಾಲ್ 

ಮಧುರ್ ಧುನ್ ಬಾಜೇ ಬಾಜೇ ರೀ  ಕಿತ 
ಸುನ್ ಸುನ್ ಜಿಯಾ ಅಕುಲಾತ್ ಆಜ್ ಸಖಿ ।

ಯಹ್ ಮುರಲೀ  ಬೈರನ್ ಭಯೀ  ಹಮ್ ರೀ 
ಅಧರನ್ ಬೈಠಿ ಸತಾವತ್  ಸಬ್  ಹೀ 
"ರಾಮ್ ರಂಗ" ಬಸೀ ಬೋದೂ ಬರ ಸಖೀ  ।।

ಕೃಷ್ಣನ ಕೊಳಲಿನ ನಾದವು ಮಧುರವಾಗಿದೆ. ಆತನ ತುಟಿಯ ಮೇಲಿರುವ ಕೊಳಲಿನ ನಾದವು ತನ್ನ ಇಂಪಾದ ಧ್ವನಿಯಿಂದ ಎಲ್ಲರನ್ನು ಸತಾಯಿಸುತ್ತಿದೆ. 

ರಾಗ : ಬೃಂದಾವನೀ  ತಾಳ: ಮಠ್ಯ 

ನಾದ ಮುರಳೀಧರ ಗೋಪೀ ಮನೋಹರ 
ಬನ ಬನ ಸುಂದರ್ ಖೇಲತ್ ರಾಧೇ ।

ಬಛರನ್ ಚರಾವತ್ ಬನ ಬನ ಆವತ್ 
ತಾನನ  ತಾನನ  ತಾನ ಸುನಾವೇ ।।

ಕೃಷ್ಣನು ಅತ್ಯಂತ ಮನೋಹರವಾದ ವೇಣುವಾದಕ. ಆತನ ವೇಣುವಾದನವು ನಾದವೇ ಮೂರ್ತಿವೆತ್ತಂತೆ.  ಅರಣ್ಯಗಳು, ಗೋಕುಲದ ಗೋವುಗಳು, ರಾಧೆ ಮತ್ತು ಗೋಪಿಯರು  ಈ ಅದ್ಭುತ  ಕೊಳಲು ವಾದನದ ಆಸ್ವಾದಕರು. 

೫.  ಹೋಳಿಯ ರಂಗು

ಕೃಷ್ಣನ ಜೀವನದ ರಸಮಯ ಘಟ್ಟಗಳಲ್ಲಿ ಒಂದು  ಹೋಳಿ ಹಬ್ಬದ ಆಚರಣೆ ಮತ್ತು ಸಂಭ್ರಮ ಇಲ್ಲಿದೆ . 

ರಾಗ: ಭೀಮ್ ಪಲಾಸಿ  ತಾಳ : ತೀನ್ ತಾಲ್ 

ಮಲತ  ಹೇ ಗುಲಾಲ್ ಲಾಲ್ ಹೋರೀ ಮೇ
ನಾ ಮಾನೇ ಬರ ಜೋರೀ ಕ ರ್ ಪ ಕ ರ ತ್  ಹೇ ।

ತಕ್ ತಕ್ ಮಾರತ್  ಹೇ ಪಿಚ್ಕಾರೀ 
ಚೂನರ್ ಮೋರೀ ಭೀಗೀ ಸಾರೀ 
ಉಡತ್  ಗುಲಾಲ್ ಲಾಲ್ ಭಯೇ ಬಾದರ್ 
ರಂಗ್ ಕೀ ಫುಹಾರ್ ಪರತ್ ಹೇ ।।

ಹೋಳಿ ಹಬ್ಬದ ಸಂದರ್ಭದಲ್ಲಿ ಕೃಷ್ಣನು ಗೋಪಿಕೆಯರ ಮೇಲೆ ಗುಲಾಬಿ ಬಣ್ಣವನ್ನು ಎರಚುತ್ತಿದ್ದಾನೆ. ಗೋಪಿಯರು ಒಲ್ಲೆನೆಂದರೂ ಕೇಳದೆ ಅವರ ಸೀರೆ ಸೆರಗುಗಳನ್ನು ಪಿಚಕಾರಿಯ ಬಣ್ಣದ ನೀರಿನಿಂದ ತೋಯಿಸುತ್ತಿದ್ದಾನೆ. ವರ್ಣಗಳ ಅಬ್ಬರದಿಂದ ಆಕಾಶವೂ ಕೆಂಪಾದಂತೆ ಕಾಣುತ್ತಿದೆ. 

ಧಮಾರ್ ಸಾಹಿತ್ಯದ ಒಂದು ರಚನೆ.  

ರಾಗ: ಗೋರಖ್      ತಾಳ : ಧಮಾರ್ 

ಅಬೀರ್ ಗುಲಾಲ್ ಛಾಯೋ ಹೇ ರೀ 
ಚಹೂ ದಿಸ್ ಅಂಬರ್ ಮೇ।

ಕುಂಕುಮ್ ಕೀ ಕೀಚ್ ಮಚೀ  ಹೇ 
ಬ್ರಿಜ್ ಕೀ ಡಗರ್ ಡಗರ್ ಮೇ ।।

ಮಥುರೆಯ ಗಲ್ಲಿ ಗಲ್ಲಿಗಳಲ್ಲಿ ಹೋಳಿಯ ಸಡಗರವು ಆಗಸವನ್ನು ವರ್ಣಮಯವಾಗಿಸಿತು. 

ರಾಗ : ಬಸಂತ್          ತಾಳ: ತೀನ್  ತಾಲ್ 

ಫಗವಾ ಬ್ರಜ್ ದೇಖನ ಕೋ ಚಲೋ ರೀ 
ಫಗವೆ ಮೇ ಮಿಲೇಂಗೆ ಕುಂವರ್ ಕಾನ್ಹಾಯೀ 
ಜಹಾ೦ ಬಾಟ್ ಚಲತ್ ಬೋಲೇ ಕಗವಾ ।

ಆಯೀ ಬಹಾರ್ ಸಕಲ ಬನ ಫೂಲೇ 
ರಸೀಲೇ ಲಾಲ್ ಕೋ ಲೇ ಅಗವಾ ।।

ಹೋಳಿಯನ್ನು ಆಸ್ವಾದಿಸಬೇಕೆಂದರೆ ನೀವು ಮಥುರೆಗೇ  ಹೋಗಬೇಕು. ಅಲ್ಲಿ ಹೋದಲ್ಲಿ ನಿಮಗೆ ಕೃಷ್ಣನ ದರ್ಶನವಾದೀತು ಎಂದು ಕಾಗೆಯು ಶುಭಶಕುನವನ್ನು ನುಡಿಯುತ್ತಿದೆ. ವನವೆಲ್ಲ ಚಿಗುರುವ ಈ ವಸಂತ ಕಾಲದಲ್ಲಿ ಕೃಷ್ಣನನ್ನು ಎತ್ತಿಕೊಂಡು ಹೋಗಿ ಹೋಳಿ ಆಡೋಣ ಎಂದು ನಾಯಿಕೆಯು ಆಶಿಸುತ್ತಿದ್ದಾಳೆ. 

೬. ದ್ವಾರಕೆಗೆ ಪಯಣ 

ರಾಗ: ತಿಲಂಗ್     ತಾಳ:  ಜತ್   

ಮೋರೀ ಸುಧ ಬಿಸರಾಯೀ  
ನಂದ ದುಲ್ಹಾರೇ  ।

ಆಪ್ ತೋ ಜಾಯೇ ದ್ವಾರಿಕಾ ಮೇ ಛಾಯೇ 
ಹಮ್ ಕಾ ಜೋಗ್ ಪಠಾಯೇ ।।

ಮುಂದೆ ಕೃಷ್ಣನು ಮಥುರೆಯನ್ನು ತ್ಯಜಿಸಿ, ದ್ವಾರಕೆಯಲ್ಲಿ ತನ್ನ ರಾಜ್ಯಭಾರವನ್ನು ನಡೆಸುತ್ತಿದ್ದಾಗ ಕೃಷ್ಣನ ವಿರಹದಿಂದ ವ್ಯಾಕುಲಿತರಾದ ಗೋಪಿಕೆಯರ ಮನಸ್ಥಿತಿಯನ್ನು ಈ ಠುಮ್ರಿಯಲ್ಲಿ ಚಿತ್ರಿಸಲಾಗಿದೆ.  
"ನಮ್ಮ ನೆಮ್ಮದಿಯನ್ನು ನೀನು ನಿನ್ನೊಂದಿಗೆ ದ್ವಾರಕೆಗೆ ಹೊತ್ತೊಯ್ದಿದ್ದೀಯಾ. ಅಲ್ಲಿ ರಾಜ್ಯವಾಳುತ್ತಿರುವ ನೀನು ನಮ್ಮನ್ನೆಲ್ಲ ಜೋಗಿನಿಯರನ್ನಾಗಿ ಮಾಡಿದ್ದೀಯಾ" ಎಂದು ದುಃಖಿಸುತ್ತಾರೆ. 

೭. ಭಕ್ತರ ದೃಷ್ಠಿಯಲ್ಲಿ ಕೃಷ್ಣ 

ಶ್ರೀಕೃಷ್ಣನ ಪರಮ ಭಕ್ತೆಯಾದ ಮೀರಾ ಬಾಯಿಯ ಭಜನೆಗಳು ಸುಪ್ರಸಿದ್ಧ. 

ರಾಗ: ಪೂರ್ವಿ  ತಾಳ: ಆಧಾ 

ಮಾಯೀ ಮೋರೆ ನೈನನ್ ಬಾನ್ ಪರೀ ರೀ 
ಜಾದಿನ್ ನೈನಾ ಶ್ಯಾಮ್ ನಾ ದೇಖೂಂ  
ಬಿಸರತ್ ನಾಹೀ ಘರೀ ರೀ  ।

ಚಿತ್  ಮೇ ಬಸ್ ಗಯೀ ಸಾ೦ವರೀ ಸೂರತ್ 
ಉತರೇ ನಾಹೀ ಧರೀ ರೀ 
"ಮೀರಾ" ಹರೀ ಕೇ ಹಾಥ್  ಬಿಕಾನೀ 
ಸರಬಸ್ ದೇನೀ  ಬರೀ ರೀ ।।

ಕೃಷ್ಣನನ್ನು ನೋಡದೆ ಕಣ್ಣುಗಳಿಗೆ ಬಾಣ ಬಿದ್ದಂತಾಗಿದೆ, ಸಮಯವೂ ಯುಗಗಳಂತೆ ಕಳೆಯುತ್ತಿದೆ. ಆತನ ಸ್ವರೂಪವು ತನ್ನ ಹೃದಯದಲ್ಲಿ ಅಚ್ಚಳಿಯದೆ ನಿಂತಿದೆ ಎಂದು ಪರಮಭಕ್ತೆ ಮೀರಾಬಾಯಿ ತನ್ನ 
ಭಜನೆಯೊಂದರಲ್ಲಿ ಹೇಳುತ್ತಾಳೆ  . 

ಆಕೆ ತನ್ನ ಇನ್ನೊಂದು ಭಜನೆಯಲ್ಲಿ ಕೃಷ್ಣನ ಬರುವಿಕೆಗಾಗಿ ಪ್ರಾರ್ಥಿಸುತ್ತಿದ್ದಾಳೆ.  

ರಾಗ : ಭೈರವಿ    ತಾಳ : ಭಜನ್ ತಾಲ್ 
ಕೋಯೀ ಕಹಿಯೋ ರೇ ಪ್ರಭು ಆವನ್ ಕೀ  
ಆವನ್ ಕೀ ಮನ್ ಭಾವನ್ ಕೀ  ।

ಆಪ್ ನಾ ಆವೇ ಲಿಖ್ ನಹೀ ಭೇಜೇ 
ಬಾನ್ ಪರೇ ಲಲ್ಚಾವನ್ ಕೀ ।।

ಏ ದೋ  ನೈನಾ ಕಹಾ ನಹೀ ಮಾನೆ 
ನದಿಯಾ ಬಹೆ ಜೈಸೇ ಸಾವನ್ ಕೀ ।।

"ಮೀರಾ" ಕಹೇ  ಪ್ರಭು ಕಬ್  ರೇ ಮಿಲೋಗೆ 
ಚೇರಿ  ಭಯೀ  ತೇರೇ  ದಾಮನ್  ಕೀ  ।।

ಮೀರಾಬಾಯಿಯು ಈ ಭಜನೆಯ ಮೂಲಕ ಕೃಷ್ಣನನ್ನು ಪ್ರೇಮದಿಂದ ಪ್ರತ್ಯಕ್ಷವಾಗಲು ವಿನಂತಿಸುತ್ತಿದ್ದಾಳೆ. ಕೃಷ್ಣನು ಬಂದಲ್ಲಿ ತನ್ನ ಮನಸ್ಸಿಗೆ ತುಂಬಾ ಸಂತಸವಾಗುವುದು. ಆದರೆ ಕೃಷ್ಣನು ಬರಲೂ ಇಲ್ಲ. ತಾನು ಬರುತ್ತೇನೆ ಎಂಬ ಸಂದೇಶವನ್ನೂ ಕಳುಹಿಸಿಲ್ಲ. ಈ ಸ್ಥಿತಿಯಲ್ಲಿ ಮೀರಾಬಾಯಿಯು ದುಃಖದಿಂದ ಅಳುತ್ತಿದ್ದಾಳೆ. ಇಷ್ಟು ಹತಾಶೆಗೆ ಒಳಗಾಗಿದ್ದರೂ ಆಕೆಗೆ ಕೃಷ್ಣ ಮುಂದೊಂದು ದಿನ ತನಗೆ ದರ್ಶನವನ್ನು ಕೊಟ್ಟು ತನ್ನ ಬಳಿ ವಿರಮಿಸುವ ಸೌಭಾಗ್ಯವನ್ನು ನೀಡುತ್ತಾನೆ ಎಂಬ ಆಶಾವಾದವನ್ನು ಹೊಂದಿದ್ದಾಳೆ. ಇದು ಆಕೆಯ ಕೃಷ್ಣ ಭಕ್ತಿಗೆ ಸಾಕ್ಷಿ. 

( ಈ ಲೇಖನವನ್ನು ಸಿದ್ಧಪಡಿಸುವಲ್ಲಿ ಪೂರಕ ಮಾಹಿತಿಯನ್ನು ಒದಗಿಸಿದ  ಪಂ. ಕುಲದೀಪ್ ಡೋಂಗ್ರೆಯವರಿಗೆ ಆಭಾರಿ ) 

ಗ್ರಂಥ ಋಣ :
೧.ಅಭಿನವ ಗೀತಾಂಜಲಿ - ಪಂಡಿತ್ ರಾಮಶ್ರೇಯ ಝಾ  "ರಾಮರಂಗ"
೨. ಕ್ರಮಿಕ್ ಪುಸ್ತಕ ಮಾಲಿಕಾ -ಪಂಡಿತ್ ವಿಷ್ಣು ನಾರಾಯಣ ಭಾತಖಂಡೆ 
೩. ಸಂಗೀತಾಂಜಲಿ - ಪಂಡಿತ್ ಓಂಕಾರ್ ನಾಥ್ ಠಾಕೂರ್ 


ವಿಜಯವಾಣಿಯಲ್ಲಿ ಪ್ರಕಟಿತ


Saturday, August 5, 2017

ಹಿಮಾಲಯ ಚಾರಣ- ಖಾಲಿಯಾ ಟಾಪ್



 ಚಿಕ್ಕಂದಿನಿಂದಲೂ ನನಗೆ ಹಿಮಾಲಯವೆಂದರೆ ಕೌತುಕ ಭರಿತ ಬೆರಗು. ಶಾಲಾ ಪಠ್ಯಪುಸ್ತಕಗಳಲ್ಲಿ, ಪುರಾಣ ಕಥೆಗಳಲ್ಲಿ ,ಕಾವ್ಯಗಳಲ್ಲಿ ಹಿಮಾಲಯದ ಬಗ್ಗೆ ಓದುವಾಗ ಹಿಮಾಲಯ ಹೇಗಿರಬಹುದು ಎಂದು ಕಲ್ಪಿಸುತ್ತಿದ್ದೆ.  ಹಿಮಾಲಯ ಚಾರಣವೆಂದರೆ ಎವರೆಸ್ಟ್ ಏರುವುದು ಎಂದೇ ನನ್ನ ಗಟ್ಟಿ ನಂಬಿಕೆಯಾಗಿತ್ತು.   ನನ್ನ ಮಿತ್ರ ವರ್ಗದ ಹಲವಾರು ಹಿಮಾಲಯದ ಕೆಲವು ಪ್ರದೇಶಗಳಿಗೆ ಚಾರಣ ಮಾಡಿದುದನ್ನು ಕಥೆಯಂತೆ ಕೇಳುತ್ತಿದ್ದೆ. ಹಿಮಾಲಯ ಅಷ್ಟೊಂದು ವಿಶಾಲವಾಗಿದೆ, ಅಲ್ಲಿ ಹಲವಾರು ಪರ್ವತ ಶ್ರೇಣಿಗಳು ಇವೆ .ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ ಅಂತೆಲ್ಲ ವಿಚಾರಗಳು ನನ್ನಲ್ಲಿ  ಕನಸಿನ ಲೋಕವನ್ನು ಸೃಷ್ಟಿಸುತ್ತಿದ್ದವು.  ಹೀಗಿರುವಾಗ ಇತ್ತೀಚೆಗೆ ನನಗೂ ಹಿಮಾಲಯದಲ್ಲಿ ಚಾರಣ ಮಾಡುವ ಅವಕಾಶ ಒದಗಿ ಬಂದಿತು .ಯೂತ್ ಹಾಸ್ಟೆಲ್ ಆರ್ಗನೈಜೇಷನ್ ಆಫ್ ಇಂಡಿಯಾದವರು ಹಲವಾರು ಹಿಮಾಲಯ ಚಾರಣ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.  ಅಂತಹ ಒಂದು ಚಾರಣವಾದ ಖಾಲಿಯಾ ಟಾಪ್ ಗೆ ನಾನು ಹೆಸರು ನೋಂದಾಯಿಸಿದೆ.

ಪೂರ್ವ ತಯಾರಿ

ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ಬೇಕಾದ ಮೊದಲ ತಯಾರಿ ಫಿಸಿಕಲ್ ಫಿಟ್ನೆಸ್ .ಸಮುದ್ರ ಮಟ್ಟದಿಂದ ೧೦,೦೦ ೦ ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲಿರುವ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುತ್ತದೆ. ಅಲ್ಲಿ ಚಾರಣ ಮಾಡಲು ನಮ್ಮ ಶರೀರ ಶಕ್ತಿಯುತವಾಗಿರಬೇಕು. ಚಾರಣಕ್ಕೆ ಎರಡು ತಿಂಗಳು ಇರುವಾಗಿನಿಂದ ದಿನಕ್ಕೆ ಐದು ಕಿಲೋಮೀಟರ್ ನಂತೆ ವಾಕಿಂಗ್ ಮಾಡುವ ಗುರಿ ಇರಿಸಿಕೊಂಡೆ.   ಜತೆಗೆ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದೆ . ಕಚೇರಿಯಲ್ಲಿ ಲಿಫ್ಟಿನ ಬದಲಾಗಿ ಮೆಟ್ಟಿಲುಗಳನ್ನು ಬಳಸಿದೆ .  ಆಹಾರದ ಬಗ್ಗೆಯೂ ಸರಿಯಾದ ಗಮನ ಹರಿಸಿದೆ. ಚಾರಣಕ್ಕೆ ಬೇಕಾದ ಮೆಡಿಕಲ್ ಸರ್ಟಿಫಿಕೇಟನ್ನು ಪಡೆದದ್ದು ಆಯಿತು .ಅಂತೂ ಚಾರಣದ ದಿನ ಬಂದೇ ಬಿಟ್ಟಿತು!

ತಲುಪುವುದು ಹೇಗೆ ?

ಉತ್ತರಾಖಂಡ ರಾಜ್ಯ ದೇವಭೂಮಿ ಎಂದೇ ಖ್ಯಾತವಾಗಿದೆ.  ಹಿಮಾಲಯದ ಅಂಚಿನಲ್ಲಿರುವ ಈ ರಾಜ್ಯ ಪ್ರಕೃತಿ ಸಂಪತ್ತಿನ ಗಣಿ .ಪೈನ್ ಮರಗಳ ಕಾಡು, ಹಿಮಾಲಯದ ಗಿರಿ ಶಿಖರಗಳು, ಅಲ್ಲಲ್ಲಿ ಕಾಣಸಿಗುವ ಝರಿಗಳು ಜಲಪಾತಗಳು ವೇಗವಾಗಿ ಹರಿಯುವ ನದಿಗಳು ಒಂದೇ ಎರಡೇ ಪ್ರಕೃತಿ ಮಾತೆಯ ಸುಂದರ ರೂಪವೇ ಇಲ್ಲಿ ಮೂರ್ತಿವೆತ್ತಂತೆ ಇದೆ .ನನ್ನ ಚಾರಣ ಪ್ರದೇಶ ಇರುವುದು  ಪಿತ್ತೊರಗರ  ಜಿಲ್ಲೆಯ ಮುನ್ಶಿಯಾರಿ ಎಂಬ ಊರಿನ ಬಳಿ .  ದೆಹಲಿಯಿಂದ ಕಾಠ್ ಗೋದಾಮಿನ ತನಕ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ಮುನ್ಶಿಯಾರಿ ತಲುಪಲು ಟ್ಯಾಕ್ಸಿ ವ್ಯಾನ್ ಅಥವಾ ಬಸ್ಸಿನಲ್ಲಿ ಹೋಗಬೇಕು.  ನಮ್ಮ ಚಾರಣ ತಂಡ  ಅಲ್ಲಿಂದ ವ್ಯಾನಿನಲ್ಲಿ ಪ್ರಯಾಣಿಸಿದೆವು. ಕಾಠ್  ಗೋದಾಮ  ನಿಂದ   ಮುನ್ಶಿಯಾರಿಗೆ ಇರುವ ದೂರ ಸುಮಾರು ಇನ್ನೂರ ಎಪ್ಪತ್ತೈದು  ಕಿಲೋ ಮೀಟರ್ ಗಳು.  ಅದು  ಪರ್ವತ ಪ್ರದೇಶದ ಅಪಾಯಕಾರಿ ಕಿರು ಹಾದಿ ಆದುದರಿಂದ ಪ್ರಯಾಣದ ಅವಧಿ ಸುಮಾರು ಹನ್ನೆರಡು ಗಂಟೆಗಳಷ್ಟು ಆಗಿರುತ್ತದೆ . ಈ ಪ್ರಯಾಣ ರುದ್ರ ರಮಣೀಯವೇ ಸರಿ. .ಹಿಮಾಲಯದ ಅದ್ಭುತ ಸೌಂದರ್ಯವನ್ನು ಹಾದಿಯುದ್ದಕ್ಕೂ ಕಾಣಬಹುದು .ಈ ಪರ್ವತ ಶ್ರೇಣಿಗಳು ಎಷ್ಟು ವಿಶಾಲವಾಗಿದೆ ಎಂದರೆ  ಅವುಗಳನ್ನು  ಒಂದು ಕ್ಯಾಮೆರಾದ  ಫ್ರೆಮಿ ನೊಳಗೆ  ಕಟ್ಟಿ ಹಾಕಲಾಗದು . ಪರ್ವತದ ಅಂಚಿನ ಕಿರು ಹಾದಿಯಲ್ಲಿ ಕೊಂಚ ಮೈಮರೆತರೂ ದೇವ ಭೂಮಿಯಿಂದ ನೇರವಾಗಿ ಸ್ವರ್ಗಕ್ಕೆ ಪ್ರವೇಶ ಸಿಗುವುದು ಗ್ಯಾರಂಟಿ .ಅಷ್ಟೇ ಅಲ್ಲ ಅಲ್ಲಲ್ಲಿ ಕಾಣಸಿಗುವ ಭೂಕುಸಿತ, ರಭಸವಾಗಿ ಹರಿಯುವ ನದಿಗಳು ಇವುಗಳೆಲ್ಲ ಒಂದು ರೀತಿಯ ಭೀತಿಯನ್ನು ಉಂಟು ಮಾಡುತ್ತವೆ .ಅಂತೂ ಈ ಸುದೀರ್ಘ ಪ್ರಯಾಣದ ಬಳಿಕ ಮುನ್ಶಿಯಾರಿ ಬೇಸ್ ಕ್ಯಾಂಪ್ ತಲುಪಿದ್ದಾಯಿತು .  


ಚಾರಣಕ್ಕೆ ಮುನ್ನ :
ಮುನ್ಶಿಯಾರಿ ಕ್ಯಾಂಪ್ ನಲ್ಲಿ ಆರಂಭಿಕ ಪ್ರವೇಶ  ದಾಖಲಾತಿಯ ಕಾರ್ಯಕ್ರಮ ಮುಗಿಸಿದೆವು.   ಭಾರತದ ಹಲವಾರು ಪ್ರಾಂತ್ಯಗಳಿಂದ ಬಂದ ಸಹ ಚಾರಣಿಗರ ಪರಿಚಯ ಮಾಡಿಕೊಂಡೆವು .ಅವರಲ್ಲಿ ಅನೇಕರು ಹಲವಾರು ಚಾರಣಗಳನ್ನು ಮಾಡಿದಂತಹ ಅನುಭವಿಗಳು.ಕೆಲವರು ವರ್ಷ ಐವತ್ತು ಮೀರಿದರೂ ಇಪ್ಪತ್ತರ ಉತ್ಸಾಹಿಗಳು . ಅವರಲ್ಲೆಲ್ಲ ಮಾತಾಡುತ್ತಿದ್ದಂತೆ ನನಗೂ ಹೊಸ ಹುರುಪು ಬಂತು.  ಮರುದಿನ ನಮ್ಮನ್ನು ಕಿರುವಿಹಾರಕ್ಕೆ  ಕರೆದೊಯ್ದರು.  ಎತ್ತರದ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುವ ಕಾರಣ ನಮ್ಮ ದೇಹ ಅಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಇದು ಅತ್ಯಗತ್ಯ. ಮುನ್ಶಿಯಾರಿಯಿಂದ  ಪಂಚ ಚೂಲಿ  ಶಿಖರಗಳ ಸಮೂಹ ಅದ್ಭುತವಾಗಿ ಕಾಣಿಸುತ್ತದೆ. ಸ್ವಲ್ಪ ನಡೆಯುತ್ತಿದ್ದಂತೆಯೇ ಏದುಸಿರು ಬರಲಾರಂಭಿಸಿತು . ನಡಿಗೆಯನ್ನು ನಿಧಾನ ಮಾಡಿ ಹತ್ತಲು ಆರಂಭಿಸಿದೆವು .ಅಲ್ಲಿಯೇ ಇರುವ ದೇವಿಯ ಮಂದಿರ ವೊಂದಕ್ಕೆ ಭೇಟಿ ನೀಡಿದ ಬಳಿಕ ಬೇಸ್ ಕ್ಯಾಂಪಿಗೆ ಮರಳಿ ಬಂದು ,ಮರುದಿನದ ಚಾರಣಕ್ಕೆ ಸಿದ್ಧತೆ ನಡೆಸಿದೆವು . ಚಾರಣಕ್ಕೆ ಅಗತ್ಯವಾದಷ್ಟು ಸಾಮಗ್ರಿಗಳನ್ನು ಬ್ಯಾಕ್ ಪ್ಯಾಕ್ನಲ್ಲಿ ತುಂಬಿಸಿ ಉಳಿದೆಲ್ಲ ಸಾಮಗ್ರಿಗಳನ್ನು ಬೇಸ್ ಕ್ಯಾಂಪಿನಲ್ಲಿ ಇಟ್ಟು ನಿದ್ದೆ ಹೋದೆ .

ಚಾರಣ 
ಮರುದಿನ ಮುಂಜಾನೆ ೬ ಗಂಟೆ ಗೆ ನಿಗದಿತ ಸಮಯಕ್ಕೆ ಚಾರಣ ಪ್ರಾರಂಭವಾಯಿತು .ದಾರಿಯುದ್ದಕ್ಕೂ ಕಾಣಸಿಗುವ ಪ್ರಕೃತಿಯ ಬಣ್ಣಗಳನ್ನು ಕಾಣುವಾಗ ಹಿಂದಿ ಚಲನಚಿತ್ರದ ಹಾಡು " ಯೇ  ಕೌನ್  ಚಿತ್ರ ಕಾರ್ ಹೇ " ನೆನಪಾಯಿತು .ಮೇ ತಿಂಗಳಿನ ಅವಧಿ ಯಾದ ಕಾರಣ ಹಿಮ ಇರಲಿಲ್ಲ . ಬರೀ ಗುಡ್ಡಗಳು .ಒಂದಾದ ಮೇಲೆ ಇನ್ನೊಂದು . ನಾವು ಎತ್ತರಕ್ಕೆ ಏರುತ್ತಿದ್ದಂತೆ ಪ್ರಕೃತಿ ಮತ್ತಷ್ಟು ಸುಂದರವಾಗಿ ಕಾಣತೊಡಗಿತ್ತು.  ಮೊದಲ ದಿನದ ಕ್ಯಾಂಪ್  ಮಾರ್ಟೋಲಿ ಎಂಬ  ಪ್ರದೇಶದಲ್ಲಿ .  ಜನವಸತಿ ಯಾವುದೂ ಇಲ್ಲದ ಕಡೆ ಹಿಮಾಲಯದ ಪರ್ವತ ವೊಂದರಲ್ಲಿ ರಾತ್ರಿ ಕಳೆಯುವುದು ಒಂದು ಅಪೂರ್ವ ಅನುಭವ. ಟಿವಿ ,ಕಂಪ್ಯೂಟರ್ ,ಕರೆಂಟು ಇವ್ಯಾವುದೂ ಇಲ್ಲ .ಮೊಬೈಲಿನ ಗಂಟೆ   ಮೊಳಗುವುದೇ ಇಲ್ಲ . ಅಷ್ಟೊಂದು ವಿಶಾಲವಾದ  ಪರ್ವತ ಶ್ರೇಣಿಯಲ್ಲಿ ಅಲ್ಲಲ್ಲಿ ಮೇಯುವ ಕುರಿಗಳ ಗಂಟೆಗಳ ನಾದ, ಝರಿಗಳು ಹರಿಯುವ ಸದ್ದು  .ಅಚಾನಕ್ಕಾಗಿ ಸುರಿಯುವ ಮಳೆ .ದಿನವಿಡಿ ಟ್ರೆಕ್ಕಿಂಗ್ ಮಾಡಿ ದಣಿದ ದೇಹಕ್ಕೆ ಸ್ಲೀಪಿಂಗ್ ಬ್ಯಾಗ್ನೊಳಗೆ ನುಸುಳುತ್ತಿದ್ದ ಗಾಢ ನಿದ್ದೆ .ರಾತ್ರಿಯಲ್ಲಿ   ಟೆಂಟ್  ನಿಂದ  ಹೊರಬಂದು ಆಗಸದ ಕಡೆ ಕತ್ತು ಮಾಡಿದರೆ ಮೇಲುಗಡೆ ನಕ್ಷತ್ರಗಳ ಛಾವಣಿ .  ಒಮ್ಮೆ ಹಿಮಾಲಯ ಚಾರಣಕ್ಕೆ ಹೋದವರು ಮತ್ತೆ ಮತ್ತೆ ಹೊಸ ಚಾರಣಗಳಿಗೆ ಹೋಗುವುದು ಇಂತಹ ದಿವ್ಯ  ಅನುಭವಕ್ಕೇ  ಇರಬೇಕು! 

ಚಾರಣದ ಮುಂದಿನ ಎರಡು  ದಿನ ನಾವು ಎತ್ತರಕ್ಕೆ, ಮತ್ತಷ್ಟು ಎತ್ತರಕ್ಕೆ ಚಾರಣ ಮಾಡುತ್ತಾ ಸಾಗಿದೆವು. ಕಲ್ಲು ಬಂಡೆಗಳ ಹಾದಿ. ಅಲ್ಲಲ್ಲಿ ತೊರೆಗಳು. ಸಣ್ಣ ಪುಟ್ಟ ಸಸ್ಯಗಳು, ಬಣ್ಣ ಬಣ್ಣದ ಪುಟಾಣಿ  ಹೂವುಗಳು ಇಂತಹ ಮಾರ್ಗದಲ್ಲಿ ನಡೆಯುವುದು ಮನಸ್ಸಿಗೆ ಮುದವನ್ನು ನೀಡುತ್ತದೆ.   ರೂಡ್ ಖನ್ ಮತ್ತು ತಂತಿ ಎಂಬ ಪ್ರದೇಶದಲ್ಲಿ ಉಳಿದುಕೊಂಡೆವು. ಎತ್ತರಕ್ಕೆ ಏರುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುವ ಕಾರಣ ಒಂದು ರೀತಿ ವಿಚಿತ್ರ ಅನುಭವವಾಗುತ್ತದೆ. ನಿಧಾನವಾಗಿ ಸಾಗುವುದು, ಹೆಚ್ಚು ನೀರು ಕುಡಿಯುವುದು ತುಂಬಾ ಅಗತ್ಯ. ಕಡೆಯ ದಿನ ನಾವು ತಲುಪಿದ್ದು ಖಾಲಿಯಾ ಟಾಪ್ ಎಂಬ ಹಚ್ಚ ಹಸುರಿನ ಹುಲ್ಲುಗಾವಲಿನ ಪದೇಶಕ್ಕೆ. ಅದರ ಸುತ್ತಲೂ ಪರ್ವತ ಶ್ರೇಣಿಗಳು. ಸಮುದ್ರ ಮಟ್ಟದಿಂದ ೧೨೦೦೦ ಅಡಿಗಳಷ್ಟು ಮೇಲಿರುವ ಇದು ಬಹಳ ಸುಂದರವಾಗಿದೆ. ಚಾರಣಿಗರೆಲ್ಲರಿಗೂ ಗಮ್ಯ ಸ್ಥಾನ ತಲುಪಿದುದಕ್ಕೆ ಆದ ಸಂತಸಕ್ಕೆ ಎಣೆಯೇ ಇಲ್ಲ! 


ಹಿಮಾಲಯದಲ್ಲಿ ಮಂಜು ಮುಸುಕುವಿಕೆ, ಮಳೆ ಯಾವ ಹೊತ್ತಿನಲ್ಲಾದರೂ ಆಗಬಹುದು. ಖಾಲಿಯಾ ಟಾಪ್ ನಲ್ಲಿ ಒಮ್ಮೆಗೆ ಮಂಜು ಮುಸುಕಿ , ೩-೪ ಅಡಿಗಳಷ್ಟು ದೂರದಲ್ಲಿರುವ ವಸ್ತುವೂ ಕಾಣಿಸದಂತಾಯಿತು.  ಅಲ್ಲಿಂದ ಇಳಿದು ವಾಪಸು ಬರುವಾಗ ಒಮ್ಮೆಗೆ ಆಲಿಕಲ್ಲುಗಳ ಸುರಿ ಮಳೆ. ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹವಾಮಾನ ಬದಲಾವಣೆಯೇ ಹಿಮಾಲಯದ ವೈಶಿಷ್ಟ್ಯ. ಚಾರಣಿಗ ಎಲ್ಲದಕ್ಕೂ ಸಿಧ್ಧವಾಗಿಯೇ ಇರಬೇಕು. 

ಒಟ್ಟಿನಲ್ಲಿ ಹೇಳುವುದಾದರೆ ಈ ಚಾರಣವು  ನನ್ನಲ್ಲಿ ಹೊಸ ಹುರುಪನ್ನು ಹುಟ್ಟಿಸಿತು. ನನ್ನ ಕನಸಿನ ಹಿಮಾಲಯವನ್ನು , ಅಲ್ಲಿಯ ಜನಜೀವನವನ್ನೂ ಹತ್ತಿರದಿಂದ ನೋಡುವಂತಾಯಿತು. ಅಂತ ಪ್ರತಿಕೂಲ ವಾತಾವರಣದಲ್ಲೂಕಷ್ಟಪಟ್ಟು  ಜೀವನ ಮಾಡುವ ಜನರ ಮನೋಸ್ಥೈರ್ಯಕ್ಕೆ ತಲೆಬಾಗಿದೆ. ಹಿಮಾಲಯ ಒಂದು ಅದ್ಭುತ ವಿಸ್ಮಯ. ಸೃಷ್ಟಿಯ ಸಮಸ್ತವನ್ನೂ ತನ್ನಲ್ಲಿ ಇರಿಸಿ ಗಂಭೀರವಾಗಿ ತಲೆ ಎತ್ತಿ ನಿಂತಿರುವ ಹಿಮಾಲಯಕ್ಕೆ ನನ್ನ ಶರಣು. 


(ಉದಯವಾಣಿಯಲ್ಲಿ ಪ್ರಕಟಿತ)

Sunday, July 23, 2017

ಡ್ರಯ್ ಫ್ರುಟ್ ಲಡ್ಡು



ಬೇಕಾಗುವ ಸಾಮಗ್ರಿಗಳು
ಬೀಜ ತೆಗೆದ ಖರ್ಜೂರ- ೧ ಲೋಟ
ಬಾದಾಮಿ - ೧/೨ ಲೋಟ
ಪಿಸ್ತಾ - ಕಾಲು ಲೋಟ
ಗೋಡಂಬಿ- ಕಾಲು ಲೋಟ
ಗಸಗಸೆ- ೨ ಚಮಚ
ತುಪ್ಪ-೫ ಚಮಚ
ಏಲಕ್ಕಿ ಪುಡಿ- ಚಿಟಿಕೆ 

ವಿಧಾನ:
೧.ಮೊದಲಿಗೆ ಖರ್ಜೂರವನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿ, ಮಿಕ್ಸಿಯಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿ. 
೨.ಬಾದಾಮಿ,ಪಿಸ್ತಾ,ಗೋಡಂಬಿ ಇವುಗಳನ್ನು ಸಣ್ಣ ಚೂರುಗಳಾಗಿ ಕತ್ತರಿಸಿ. 
೩.ಬಾಣಲೆಯಲ್ಲಿ ೨ ಚಮಚ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ರುಬ್ಬಿದ ಖರ್ಜೂರವನ್ನು ಹಾಕಿ ೨ ನಿಮಿಷಗಳ ಕಾಲ ಹುರಿಯಿರಿ. ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ. 
೪.ಬಾಣಲೆಗೆ ೨ ಚಮಚೆ ತುಪ್ಪ ಹಾಕಿ, ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯ ಚೂರುಗಳನ್ನು ೨ ನಿಮಿಷಗಳ ಕಾಲ ಹುರಿಯಿರಿ. 
೫.ಗಸಗಸೆಯನ್ನು ಪ್ರತ್ಯೇಕವಾಗಿ ಸ್ವಲ್ಪ ಕೆಂಪಗಾಗುವಂತೆ ಹುರಿಯಿರಿ. 
೬.ಕೈಗಳಿಗೆ ತುಪ್ಪ ಸವರಿಕೊಂಡು ,ಖರ್ಜೂರ,ಬಾದಾಮಿ,ಪಿಸ್ತಾ ,ಗೋಡಂಬಿ ,ಏಲಕ್ಕಿ ಪುಡಿ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ,ಸಣ್ಣ ಉಂಡೆಗಳನ್ನಾಗಿ ಮಾಡಿ.
೭.ಹುರಿದ ಗಸಗಸೆಯ ಮೇಲೆ ಉಂಡೆಗಳನ್ನು ಹಾಕಿ,ಅದರ ಮೇಲೆ ಗಸಗಸೆ ಪುಡಿ ಅಂಟಿಕೊಳ್ಳುವಂತೆ ಉರುಳಿಸಿ. 

ಈಗ ಡ್ರಯ್ ಫ್ರುಟ್ ಲಡ್ಡು ತಯಾರಾಯಿತು.  ಮಾಡಲು ಸುಲಭ, ಆರೋಗ್ಯಕ್ಕೆ ಹಿತಕರ ಮತ್ತು ತಿನ್ನಲು ಬಹಳ ರುಚಿ.

Thursday, July 20, 2017

ಜುನಾಗಡದಲ್ಲೊಂದು ಸುತ್ತು







ಇತ್ತೀಚೆಗಷ್ಟೇ ನಾನು ಗುಜರಾತಿನ ಜುನಾಗಡ ಪ್ರಾಂತ್ಯದಲ್ಲೊಮ್ಮೆ ತಿರುಗಾಡಿ ಬಂದೆ. ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನೂ, ಜನಜೀವನವನ್ನೂ ಕಂಡುಬಂದೆ.ಜುನಾಗಡವು ಗುಜರಾತಿನ ನೈಋತ್ಯ ದಿಕ್ಕಿನಲ್ಲಿದೆ. ಇದು ಜಿಲ್ಲಾ ಕೆಂದ್ರವಾಗಿದ್ದು , ಅಹಮದಾಬಾದಿನಿಂದ ೩೫೫ ಕಿ.ಮಿ. ದೂರದಲ್ಲಿದೆ.  ಜುನಾಗಡ ಎಂದರೆ ಹಳೆಯ ಕೋಟೆ ಎಂದು ಅರ್ಥ. ಈ ಊರಿಡೀ ಹಳೆಯ ಕೋಟೆ ಕೊತ್ತಳಗಳಿಂದ ಆವರಿಸಲ್ಪಟ್ಟಿದೆ. ಹಳೆಯ ಬೇರು ಹೊಸ ಚಿಗುರು ಎಂಬಂತೆ ಭವ್ಯವಾದ ಪುರಾತನ ಮಹಲುಗಳ ನಡುವೆಯೇ ಆಧುನಿಕತೆ ಮೈವೆತ್ತುಕೊಂಡಂತೆ ಇರುವ ಈ ಊರು ನಾವು  ಹಳೆಯ ಕಾಲವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಮೌರ್ಯರು , ಕಳಿಂಗರು ,ಶಕರು, ಗುಪ್ತರು , ಮೊಘಲರು ಮತ್ತು ನವಾಬರುಗಳು ಈ ಪ್ರಾಂತ್ಯವನ್ನು ಆಳಿದ್ದಾರೆ. ಅದಕ್ಕೆ ಸಾಕ್ಷಿಯೋ ಎಂಬಂತೆ ಇಲ್ಲಿ ಹಳೆಯ ದೇಗುಲಗಳು, ಬುದ್ಧ ಗುಹೆಗಳು, ಅಶೋಕನ ಶಿಲಾಶಾಸನ, ಜೈನ ಮಂದಿರಗಳು,ಇಸ್ಲಾಂ ವಾಸ್ತು ಶೈಲಿಯ ಕಟ್ಟಡಗಳು ಕಂಡುಬರುತ್ತವೆ. 


ಜುನಾಗಡವು ಖ್ಯಾತಿ ಹೊಂದಿರುವುದು ಇಲ್ಲಿಯ ಗಿರ್ನಾರ್ ಪರ್ವತ ಶ್ರೇಣಿಗಳಿಂದ. ಇವು ಹಿಮಾಲಯಕ್ಕಿಂತಲೂ ಹಳೆಯದಾದ ಪರ್ವತಗಳು.ಆಧ್ಯಾತ್ಮಿಕ ಮತ್ತು ಭೌಗೋಳಿಕ ಹಿನ್ನೆಯಲ್ಲಿಯೂ ಇವು ಬಹಳಷ್ಟು ಮಹತ್ವವನ್ನು ಹೊಂದಿವೆ. ಶಿವರಾತ್ರಿಯ ಸಮಯದಲ್ಲಿ  ಇಲ್ಲಿ ಗಿರ್ನಾರ್ ಪರಿಕ್ರಮ ನಡೆಯುತ್ತದೆ. ಪರ್ವತದ ಸುತ್ತಲೂ ೩೬ ಕಿ,ಮೀ . ದೂರವನ್ನು ಕಾಲ್ನಡಿಗೆಯಲ್ಲಿ ದಟ್ಟ ಕಾಡಿನ ಮೂಲಕ ಕ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಸುಮಾರು ೭-೮ ಲಕ್ಷ ಜನರು ಪಾಲ್ಗೊಳ್ಳುತ್ತಾರೆ. ಪರಿಕ್ರಮದ  ದ್ವಾರದಲ್ಲಿ ಪರ್ವತವನ್ನು ಅವಲೋಕಿಸಿದಾಗ ಅದು ಶಿವನ ಮುಖವನ್ನು ಹೋಲುತ್ತದೆ.ಸಹಸ್ರಾರು ಸಾಧುಗಳು ಗಿರ್ನಾರ್ ಅರಣ್ಯ ಪ್ರದೇಶದಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ತಪಸ್ಸು ಮಾಡುತ್ತಿರುವ ಬಗ್ಗೆ ನಮ್ಮ ಚಾರಣದ ಮಾರ್ಗದರ್ಶಕರು ತಿಳಿಸಿದರು. ಅವರು ಜನಸಾಮಾನ್ಯರ ಕಣ್ಣಿಗೆ ಸಾಮಾನ್ಯವಾಗಿ ಗೋಚರವಾಗುವುದಿಲ್ಲ.  ಈ ಪರ್ವತವನ್ನು ಏರಲು ಕಡಿದಾದ ಮೆಟ್ಟಲುಗಳಿವೆ. ಇವುಗಳ ಸಂಖ್ಯೆ ಎಷ್ಟು ಗೊತ್ತೇ ?  -ಒಂದಲ್ಲ ಎರಡಲ್ಲ. ..ಹತ್ತು ಸಾವಿರ!!  ಮೆಟ್ಟಲುಗಳನ್ನು ಏರಲು ಸ್ವಲ್ಪ ಮಟ್ಟಿಗಾದರೂ ವ್ಯಾಯಾಮ ಮತ್ತು ಧೃಢ  ಸಂಕಲ್ಪ ಅತ್ಯಗತ್ಯವಾಗಿ ಬೇಕು . ಪರ್ವತವನ್ನು ಏರಲು ಕಷ್ಟ ವಾಗುವವರಿಗೆ ಡೋಲಿಯ ವ್ಯವಸ್ಥೆಯೂ  ಇದೆ.  

ನಾವು ನಮ್ಮ ಚಾರಣ ತಂಡದ ಮಿತ್ರರೊಡನೆ ಗಿರ್ನಾರ್ ಪರ್ವತವನ್ನು ಹತ್ತಲಾರಂಭಿಸಿದ್ದು ಸಂಜೆಯ ೪ ಗಂಟೆ ಹೊತ್ತಿಗೆ. ನಿಧಾನವಾಗಿ ಮೇಲಕ್ಕೆರುತ್ತಿದ್ದಂತೆ ಕಾಣಸಿಗುವ ಸೂರ್ಯಾಸ್ತದ ದೃಶ್ಯ ನಯನ ಮನೋಹರ. ಸುತ್ತಲಿನ ಗಿರ್ ಅರಣ್ಯದ ಸೊಬಗು, ಪರ್ವತದ ಭವ್ಯತೆ, ಸೂರ್ಯನ ಬೆಳಕಿಗೆ ಕೆಂಪಾದ ಆಕಾಶ, ಪ್ರಾಣಿ ಪಕ್ಷಿಗಳ ಸ್ವರ  ಮಾಧುರ್ಯ,ಪರ್ವತ ಪ್ರದೇಶದಲ್ಲಿರುವ ಅಲೌಕಿಕ ಶಕ್ತಿ ಇವೆಲ್ಲವನ್ನೂ ಅನುಭವಿಸಿಯೇ ಅರಿಯಬೇಕು . ಇವೆಲ್ಲದರ ನಡುವೆ ನಾವು  ತೃಣ  ಮಾತ್ರರು !! ಸುಮಾರು ನಾಲ್ಕೂವರೆ ಸಾವಿರ ಮೆಟ್ಟಲುಗಳನ್ನು ಏರಿದ ಬಳಿಕ ಅಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಆಶ್ರಮದಲ್ಲಿ ರಾತ್ರಿ ಕಳೆದೆವು. ದೇವ ಸನ್ನಿಧಿ, ಆಗಸದಲ್ಲಿ ನಕ್ಷತ್ರಗಳ ಚಿತ್ತಾರ -ಇವೆಲ್ಲವೂ ನಮಗೆ ಅವಿಸ್ಮರಣೀಯ ಅನುಭವ. ಇಡೀ ಗಿರ್ನಾರ್ ಒಮ್ಮೆ ಆಧ್ಯಾತ್ಮಿಕ ಶಿಖರದಂತೆ ಗೋಚರವಾದರೆ ಇನ್ನೊಮ್ಮೆ ಸಕಲ ಪ್ರಾಣಿ ಪಕ್ಷಿಗಳನ್ನೂ ತನ್ನಲ್ಲಿ ಬಚ್ಚಿಟ್ಟು ನಮ್ಮೆದುರು ಸವಾಲೆಸೆಯುವ ತುಂಟನಂತೆ ಕಾಣುತ್ತದೆ. ಅವರವರ ಭಾವಕ್ಕೆ  ಅವರವರ ಭಕುತಿಗೆ !! ಹಿಂದಿಯ ಖ್ಯಾತ ಚಲನಚಿತ್ರ 'ಸರಸ್ವತಿ ಚಂದ್ರ ' ದ   ಹಾಡು 'ಛೋ ಡ್ ದೇ ಸಾರಿ ದುನಿಯಾ ಕಿಸಿ ಕೇ ಲಿಯೇ '  ಚಿತ್ರೀಕ ರಣವಾದದ್ದು ಇಲ್ಲಿಯೆ. ಆ ಚಿತ್ರೀಕರಣದ ನೆನಪುಗಳನ್ನು ಅಲ್ಲಿಯ ಪೂಜಾರಿಯೋಬ್ಬರು ನಮ್ಮಲ್ಲಿ ಹಂ ಚಿ ಕೊಂಡರು 


ಮರುದಿನ ಬೆಳಗ್ಗೆ ೫ ಗಂಟೆಗೆ ನಾವು ಮತ್ತುಳಿದ ಐದುವರೆ ಸಾವಿರ ಮೆಟ್ಟಲುಗಳನ್ನು ಏರಿದೆವು. ಸೂರ್ಯೋದಯ ಮತ್ತೂ ಸುಂದರ. ಪ್ರಕೃತಿ ಮಾತೆಯ ಉಡುಗೆಗೆ ಅದೆಷ್ಟು ವರ್ಣಗಳು!!  ಪರ್ವತದ ಹಾದಿಯುದ್ದಕ್ಕೂ ಹಲವಾರು ಗುಡಿಗಳಿವೆ. ಜೈನ ಮಂದಿರಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಅಂಬಾಜಿ ಮಂದಿರ. ಇದು ಮಹಾಭಾರತ ಕಾಲದಿಂದಲೂ ಮಹತ್ವವನ್ನು ಪಡೆದಿದೆ. ಹೊಸದಾಗಿ ಮದುವೆಯಾದ ದಂಪತಿಗಳು ಇಲ್ಲಿ ದೇವಿಯ ದರ್ಶನವನ್ನು ಪಡೆಯಲು ಬರುವುದು ವಾಡಿಕೆ. ಗಿರ್ನಾರ್ ನ ತುತ್ತ ತುದಿಯಲ್ಲಿ ದತ್ತ ಪೀಠವಿದೆ. ಬೆಳಗ್ಗೆ ಸುಮಾರು ೮:೩೦ ಕ್ಕೆ ಪರ್ವತದ ತುದಿಯನ್ನು ತಲುಪಿದೆವು. ಅಲ್ಲಿ ದತ್ತಾತ್ರೆಯನ ದರ್ಶನ ಪಡೆದೆವು.  ಗುರು ದತ್ತಾತ್ರೇಯರು ಇಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿ ಪಡೆದ ಸ್ಥಳ ಇದು. ಇದರ ಸ್ವಲ್ಪ ಕೆಳಗೆ ದತ್ತ ಜ್ವಾಲೆಯಿರುವ ಮಂದಿರವಿದೆ. ಇಲ್ಲಿಯ ಜ್ವಾಲೆಯನ್ನು  ವಾರಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಅದು ಎಂದಿಗೂ ಆರುವುದೇ ಇಲ್ಲ. ದತ್ತನ   ಮಹಿಮೆ ಎಂದು ಜನ ನಂಬುತ್ತಾರೆ. ಹಲವಾರು ವಿಜ್ಞಾನಿಗಳು ಬಂದು ಈ ವಿಸ್ಮಯವನ್ನು ಅರಿಯಲಾರದೆ ಹೋಗಿದ್ದಾರೆ ಎಂದು ಮಂದಿರದ ಪೂಜಾರಿ ನಮಗೆ ತಿಳಿಸಿದರು. ಅಲ್ಲಿಯ ಆಹ್ಲಾದಕರ ಪರಿಸರ ನಮಗೆ   ಮುದವನ್ನು ನೀಡಿತು. ಅಲ್ಲಿ ಭಕ್ತರಿಗೆ ರೋಟಿ, ದಾಲ್, ಪಲ್ಯ ಮತ್ತು ಖಿಚಡಿಗಳ ಪ್ರಸಾದವನ್ನು ನೀಡುತ್ತಾರೆ.ಅಲ್ಲಿ ಪ್ರಸಾದ ಸೇವಿಸಿ ನಾವು ನಿಧಾನವಾಗಿ ಇಳಿಯಲಾರಂಭಿಸಿದೆವು. 

ಇಳಿಯುವುದು ಹತ್ತುವುದಕ್ಕಿಂತಲೂ ಬಹಳ ತ್ರಾಸದಾಯಕವಾಗಿತ್ತು. ಹಿಂದಿನ ದಿನದ ಸುಸ್ತೂ ಸೇರಿ ಕಾಲುಗಳು ನಿಧಾವಾಗುತ್ತಿದ್ದವು. ಪ್ರತಿ ಹೆಜ್ಜೆಯೂ ಭಾರವೆನಿಸತೊಡಗಿತು. ನಿಧಾನವಾಗಿ ಬಿಸಿಲೇರುತ್ತಿತ್ತು. ದಾರಿ ಮಧ್ಯ ಸಿಗುವ ಪುಟ್ಟ ಅಂಗಡಿಗಳಲ್ಲಿ ನಿಂಬೆ ರಸ, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸುತ್ತಾ, ವಿಶ್ರಾಂತಿ ಪಡೆಯುತ್ತಾ ಇಳಿಯುತ್ತಿದ್ದೆವು. ಬೇಸ್  ಕ್ಯಾಂಪ್ ಗೆ ತಲುಪುವುದು ಹೇಗೆ ಎಂದು ಚಿಂತೆ ಕಾಡ ತೊಡಗಿತು. ಕಡೆಗೆ ಹೇಗಾದರೂ ಮಾಡಿ ಇಳಿದೇ ಬಿಡುತ್ತೇವೆ ಎಂಬ ಸಂಕಲ್ಪದೊಂದಿಗೆ ನಮ್ಮ ಚಾರಣದ ಮಿತ್ರವರ್ಗ ಒಬರನ್ನೊಬ್ಬರು ಹುರಿದುಂಬಿಸುತ್ತಾ ಸುಮಾರು ೨:೩೦ ಮಧ್ಯಾಹ್ನದ ಹೊತ್ತಿಗೆ ನಮ್ಮ ಬೇಸ್  ಕ್ಯಾಂಪ್ ತಲುಪಿದ್ದಾಯ್ತು . ಆಹ.. ನಾವು ಗಿರ್ನಾರ್ ಹತ್ತಿ ಬಂದೆವು !! ನಮ್ಮ ಸಂತಸಕ್ಕೆ ಪಾರವೇ ಇಲ್ಲ. ಮತ್ತೆರಡು ದಿನ ಸ್ವಲ್ಪ ಕುಂಟುತ್ತ ನಡೆದದ್ದು ಬೇರೆ ವಿಷಯ !! 

 ಗಿರ್  ಬಗ್ಗೆ ಶಾಲೆಯಲ್ಲಿ ಸಮಾಜ ಪುಸ್ತಕದಲ್ಲಿ ಓದಿದ ನೆನಪು. ಗಿರ್  ಅರಣ್ಯಗಳು ಸಿಂಹಗಳಿಂದಾಗಿ ವಿಶ್ವ ವಿಖ್ಯಾತವಾಗಿವೆ.ಇಲ್ಲಿ ಅದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಒದಗಿ ಬಂದಿತು. ಸಿಂಹಗಳ  ರಕ್ಷಣೆಗಾಗಿ ಇರುವ ಈ ಅರಣ್ಯವನ್ನು ರಕ್ಷಿತಾರಣ್ಯವೆಂದು ಘೋಶಿಸಲಾಗಿದೆ. ಸಿಂಹಗಳ  ಬಗ್ಗೆ ಅಧ್ಯಯನ ಮತ್ತು ಸಂರಕ್ಷಣೆಗೆ ಒತ್ತು   ನೀ ಡಲಾಗುತ್ತದೆ. ಅರಣ್ಯದ ಸ್ವಲ್ಪ ಭಾಗದಲ್ಲಷ್ಟೇ ಪ್ರವಾಸಿಗರಿಗೆ ಪ್ರವೇಶ. ಅದೂ ಕೂಡ ಅವರ ಜೀಪ್ ನಲ್ಲಿ ಗೈಡ್  ಜತೆ.  ಕಾಡಿನ ಹಾದಿ ಉದ್ದಕ್ಕೂ  ಜಿಂಕೆ,ನೀಲ್ಗಾಯ್  ಮುಂತಾದ ಪ್ರಾಣಿಗಳನ್ನು ಕಾಣಬಹುದು. ಸಿಂಹ ಕಾಣ ಸಿಗುವುದರ ಬಗ್ಗೆ ನಮ್ಮ ಗೈಡ್ ಖಾತ್ರಿ ನೀಡಿರಲಿಲ್ಲ. ನಮ್ಮ ಅದೃಷ್ಟವೋ ಏನೋ ನಮ್ಮ ಜೀಪ್ ಮುಂದೆಯೆ ಸಿಂಹ ಮತ್ತು ಸಿಂಹಿಣಿ  ಹಾದು ಹೋಗಬೇಕೆ !! ಆ ಕ್ಷಣ ಅತ್ಯಂತ ರೋಮಾಂಚಕಾರಿ . ಕಾಡಿನ ರಾಜ ನಮ್ಮ ಎದುರಲ್ಲಿ.. ಅದರ ನಡಿಗೆಯ ಗಾಂಭೀರ್ಯವಂತೂ ಅಹಾ.. ರಾಜನಲ್ಲವೇ !! ನಾವೆಲ್ಲಾ ಉಸಿರು ಬಿಗಿ ಹಿಡಿದು ಅದನ್ನು ನೋಡುತ್ತ ಫೊಟೊ ತೆಗೆಯುತ್ತ ಇರುವಾಗಲೂ ಅದು  ನಮ್ಮನ್ನು ಕ್ಯಾರೆ ಮಾಡಲಿಲ್ಲ.  ಕಾಡಿನ ನಡುವೆ ಮಾಲ್ಧಾರಿ ಎಂಬ ಬುಡಕಟ್ಟು ಜನರು ವಾಸಿಸುತ್ತಾರೆ. ಸಿಂಹ ಮತ್ತು ಮನುಷ್ಯ ಜತೆ ಜತೆಯಾಗಿ ಜೀವನ ಸಾಗಿಸುವ ಪರಿ ನಮಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. 

ಗಿರ್ನಾರ್ ನಿಂದ ಸುಮಾರು ೭೫ ಕಿ.ಮಿ. ದೂರದಲ್ಲಿ ಸೋಮನಾಥ ದೇವಾಲಯವಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಮೊದಲನೆಯದು. ಸಮುದ್ರ ಘೋಷದ ಪಕ್ಕದಲ್ಲೇ ಇರುವ ಈ ದೇಗುಲ ಶತಶತಮಾನಗಳ ಕಾಲ ಪರಕೀಯರ ದಾಳಿಗೊಳಗಾಗಿ, ಸಂಪತ್ತೆಲ್ಲ ಸೂರೆ ಹೋದರೂ ಮತ್ತೆ ತಲೆ ಎತ್ತಿ ನಿಂತಿದೆ. ಭಕ್ತಿ ಭಾವಗಳ ಪರಾಕಾಷ್ಟೆ ,ಸಾಗರನ  ಸಾಮೀಪ್ಯ,ಸಮರ್ಪಕ ನಿರ್ವಹಣೆ ಮತ್ತು ಶುಚಿತ್ವ ಇವೆಲ್ಲವೂ ನನ್ನ ಮನ ಮುಟ್ಟಿದವು. ಇಲ್ಲಿ ಒಳಗೆ ಹೋಗಬೇಕಾದರೆ ಕ್ಯಾಮರ, ಫೋನ್ ಇವುಗಳನ್ನು ಯವುದನ್ನೂ ತೆಗೆದುಕೊಂಡು  ಹೋಗುವಂತಿಲ್ಲ. 

ಒಂದು ದಿನವಿಡೀ ನಾವು ಜುನಾಗಡ  ನಗರವನ್ನು ಸುತ್ತಾಡಿದೆವು. ಅಲ್ಲಿಯ ಉಪ್ಪರ್ ಕೋಟ್, ನವಾಬರ ವಸ್ತು  ಸಂಗ್ರಹಾಲಯ,ಸಕ್ಕರ್ ಬಾಗ್ ಪ್ರಾಣಿ ಸಂಗ್ರಹಾಲಯ ,ಮಹಬತ್ ಖಾನ್ ಗೋರಿ ಇವೆಲ್ಲವನ್ನೂ ವೀಕ್ಷಿಸಿದೆವು. ಪ್ರಾಚೀನ ಕಾಲದಲ್ಲಿ ಧಾನ್ಯಗಳನ್ನು ಸಂಗ್ರಹಿಸಿ ಇಡಲು ಕೋಟೆಯೊಳಗೆ ಮಾಡಿರುವ ನೆಲ  ಮಾಳಿಗೆಗಳು,ನೀರಿನ ಸಂರಕ್ಷಣೆಗಾಗಿ ಆಳವಾದ ಮೆಟ್ಟಿಲು ಮೆಟ್ಟಿಲಾಗಿ ಇರುವ ಬಾವಿಗಳು ಇತ್ಯಾದಿ ಆಗಿನ ಕಾಲದ ವಾಸ್ತು ಕೌಶಲ್ಯಕ್ಕೆ ದ್ಯೋತಕವಾಗಿವೆ. ಇತಿಹಾಸದ ಗುಹೆಯನ್ನು ಹೊಕ್ಕು ಬಂದoತಾಯಿತು. 

ಒಟ್ಟಿನಲ್ಲಿ ಹೇಳುವುದಾದರೆ  ಈ ಪ್ರವಾಸ ವಿಭಿನ್ನವಾಗಿತ್ತು.ಚಾರಣ, ವನ ವಿಹಾರ ,ಇತಿಹಾಸ ಮತ್ತು ಭಕ್ತಿಭಾವದಲ್ಲಿ ಮುಳುಗೆದ್ದು ಬಂದದ್ದು ಒಂದು ಸುಂದರ ಅನುಭವ. ಇದು  ಬಹಳಷ್ಟು ಹುರುಪು ಉತ್ಸಾಹ ನೀಡಿತು. ಅಲ್ಲಿಂದ ವಾಪಸು ಬಂದ ಮೇಲೂ  ನನ್ನ ಮನಸ್ಸು ಅಲ್ಲಿಯೇ ಇದೆ. 
(ಉದಯವಾಣಿಯಲ್ಲಿ ಪ್ರಕಟಿತ)

ಯುತ್ ಹಾಸ್ಟೆಲ್ ನವರು ಆಯೋಜಿಸಿದ್ದ ಪ್ರವಾಸ ಇದು. ಈ ವರುಷದ ಪ್ರವಾಸಕ್ಕೆ ನೀವು ಹೋಗಬೇಕೆಂದಿದ್ದರೆ ಈ ಲಿಂಕ್ 

ಒತ್ತಿ.