Friday, June 28, 2013
Friday, February 15, 2013
ವರ್ಲಿ ಚಿತ್ರಕಲೆ
ಈ ವಾರದ ವಿಜಯ ನೆಕ್ಷ್ಟ್ ನಲ್ಲಿ ಪ್ರಕಟಿತ
ಒಂದಿಷ್ಟು ತ್ರಿಭುಜಗಳು, ಮತ್ತೆ ಕೆಲವು ವೃತ್ತಗಳು. ಹಾಗೆಯೇ ಕೆಲವು ರೇಖೆಗಳು..ಇವಿಷ್ಟನ್ನು ಒಂದು ಹದದಲ್ಲಿ ಜೋಡಿಸಿದರೆ ಕೆಲವು ಜನರು ನಿಮ್ಮ ಮುಂದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗುತ್ತಾರೆ.ರೈತ ನೆಲವನ್ನು ಉಳುತ್ತಾನೆ. ಮಕ್ಕಳು ಮರ ಕೋತಿ ಆಟವಾಡುತ್ತಿರುತ್ತಾರೆ. ಗುಡಿಸಲಿನಲ್ಲಿರುವ ಮುದುಕಿಯು ಗೂಡಿನಲ್ಲಿರುವ ಕೋಳಿಗಳಿಗೆ ಧಾನ್ಯಗಳನ್ನು ಚೆಲ್ಲುತ್ತಿರುತ್ತಾಳೆ. ಹಗಲಿಡೀ ದುಡಿದ ಜನ ಇರುಳಾಗುತ್ತಿದ್ದಂತೆ ಟರ್ಪಾ ನೃತ್ಯದ ಮೂಲಕ ಆಹ್ಲಾದವನ್ನೀಯುತ್ತಾರೆ. ಇಷ್ಟೆಲ್ಲ ಆಗುವ ಹೊತ್ತಿಗೆ ನಿಮ್ಮ ಮುಂದೆ ಸುಂದರ ದೃಶ್ಯ ಕಾವ್ಯ ಪ್ರಕಟವಾಗುತ್ತದೆ. ಗ್ರಾಮೀಣ ಜೀವನ ಕಣ್ಣ ಮುಂದೆ ಮೂಡಿ ಬರುತ್ತದೆ. ಸರಳವೂ ಮನಮೋಹಕವೂ ಆದ ಈ ಚಿತ್ತಾರಗಳ ಹೆಸರು ವರ್ಲಿ ಚಿತ್ರಗಳು!!
ವರ್ಲಿ ಚಿತ್ರಗಳು ಹೆಸರೇ ಸೂಚಿಸುವಂತೆ ಮಹಾರಾಷ್ಟ್ರದವರ್ಲಿ ಬುಡಕಟ್ಟು ಜನಾಂಗದವರು ತಮ್ಮ ಗುಡಿಸಲುಗಳ ಮೇಲೆ ಬಿಡಿಸುವ ಚಿತ್ರಗಳು. ಸಾಂಪ್ರದಾಯಿಕ ರೀತಿಯಲ್ಲಿ ಅವರು ಸೆಗಣಿ, ಕೆಮ್ಮಣ್ಣಿನ ಹಿನ್ನೆಲೆಗೆ ಅಕ್ಕಿಯ ಹಿಟ್ಟಿನಲ್ಲಿ ಅದ್ದಿದ ಕುಂಚದಿಂದ ಇವುಗಳನ್ನು ಬಿಡಿಸುತ್ತಾರೆ. ಈ ಜನರು ಬಹಳ ಸರಳವಾದ ಜೀವನವನ್ನು ನಡೆಸುತ್ತಾರೆ. ಇವರು ಪ್ರಕೃತಿಯ ಆರಾಧಕರು. ಇವರ ಚಿತ್ರಗಳಲ್ಲಿನ ತ್ರಿಕೋನಗಳಿಗೆ ಬೆಟ್ಟ ಗುಡ್ಡಗಳೇ ಪ್ರೇರಣೆ. ವೃತ್ತಗಳು ಸೂರ್ಯ ಚಂದ್ರನಿಂದ ಪ್ರಭಾವಿತವಾದ ಆಕೃತಿಗಳು. ಸಾಮಾನ್ಯವಾಗಿ ಕೃಷಿ ಇವರ ಪ್ರಮುಖ ಉದ್ಯೋಗ. ಇವರ ಚಿತ್ರಗಳಲ್ಲಿ ಕೃಷಿಯ ಹಲವು ಹಂತಗಳಾದ ಬಿತ್ತುವಿಕೆ, ಫಸಲಿನ ಕೊಯಿಲು ಇತ್ಯಾದಿಗಳನ್ನು ಹೇರಳವಾಗಿ ಕಾಣಬಹುದು. ಇಷ್ಟೇ ಅಲ್ಲದೆ ಬೇಟೆ,ಹಬ್ಬದ ಆಚರಣೆಗಳು, ಪ್ರಕೃತಿ, ನೃತ್ಯ, ವಿನೋದ ಇವುಗಳ ಚಿತ್ತಾರಗಳೂ ಕಾಣಬರುತ್ತವೆ.
ಸಾಂಪ್ರದಾಯಿಕ ರೀತಿಯ ಈ ಚಿತ್ರಗಳು ಆಧುನಿಕ ರೂಪ ತಾಳುತ್ತಿವೆ. ಸೆಗಣಿ ಅಥವಾ ಕೆಮ್ಮಣ್ಣಿನ ಹಿನ್ನೆಲೆಗೆ ಬದಲಾಗಿ ಆ ಬಣ್ಣದ ಪೈಂಟುಗಳು ಬಳಕೆಯಾಗುತ್ತಿವೆ. ಅಕ್ಕಿಯ ಹಿಟ್ಟಿಗೆ ಬದಲಾಗಿ ಬಿಳಿಯ ಅಕ್ರಲಿಕ್ ವರ್ಣಗಳ ಬಳಕೆಯಾಗುತ್ತಿದೆ. ಮನೆಯ ಒಳಾಂಗಣ ಮತ್ತು ಹೊರಾಂಗಣ ಅಲಂಕಾರದಲ್ಲಿ, ವಸ್ತ್ರಗಳ ಮೇಲೆ,ಕಾಫಿ ಕಪ್ ಗಳ ಮೇಲೆ, ಪೆನ್ ಸ್ಟಾಂಡ್ ಗಳ ಮೇಲೆ ಹೀಗೆ ವರ್ಲಿ ಯ ವ್ಯಾಪ್ತಿ ವಿಸ್ತಾರವಾಗುತ್ತಾ ಸಾಗಿದೆ. ಎಷ್ಟೊ ರೆಶ್ಟೋರೆಂಟುಗಳು ಹಳ್ಳಿಯ ಥೀಮ್ ನೀಡಲು ಈ ಚಿತ್ರಗಳನ್ನು ತಮ್ಮ ಒಳಾಂಗಣ ಅಲಂಕಾರಕ್ಕೆ ಬಳಸುವುದಿದೆ. ಹಾಗಾಗಿ ಈಗ ವರ್ಲಿ ಚಿತ್ರಕಲೆ ಬಹಳ ಬೇಡಿಕೆಯಲ್ಲಿರುವ ಉದ್ಯೋಗವಾಗಿ ಪರಿವರ್ತಿತವಾಗುತ್ತದೆ. ಕೆಲವು ಸಮಯದ ಹಿಂದೆ ತಂಪು ಪಾನೀಯದ ಜಾಹೀರಾತೊಂದರಲ್ಲಿಯೂ ವರ್ಲಿ ಚಿತ್ತಾರಗಳು ಕಂಗೊಳಿಸಿದ್ದವು. ನೀವು ಲಾಲ್ ಬಾಗಿನ ಕಡೆಗೆ ಹೋದರೆ ಅಲ್ಲಿ ಹೊರಗೆ ರಸ್ತೆಯಲ್ಲಿ ಕಂಪೌಂಡು ಗೋಡೆಗಳನ್ನು ಅಲಂಕರಿಸಿದ ವರ್ಲಿ ಯನ್ನು ಕಾಣಬಹುದು.
ಕಲಿಯುವುದು ಹೇಗೆ ?
ವರ್ಲಿ ಚಿತ್ರವನ್ನು ಬಿಡಿಸುವುದು ಬಹಳ ಸುಲಭ. ಇಲ್ಲಿ ನಿಮಗೆ ತಿಳಿದಿರಬೇಕಾದದ್ದು ತ್ರಿಭುಜ ಮತ್ತು ವೃತ್ತದ ರಚನೆ. ಮುಖ್ಯವಾಗಿ ಗೆರೆಗಳು ಬಹಳ ಸ್ಪಷ್ಟವಾಗಿರಬೇಕು. ಹಾಗಾಗಿ ದಿನವೂ ನೇರ ಮತ್ತು ಅಡ್ಡ ಗೆರೆಗಳನ್ನು ಅಭ್ಯಾಸ ಮಾಡಬೇಕು. ಇದಲ್ಲದೇ ವೃತ್ತಗಳನ್ನು ಸರಿಯಾಗಿ ಬಿಡಿಸಲು ಅಭ್ಯಾಸ ಬೇಕಾಗುತ್ತದೆ. ಮೊದಲಿಗೆ ಯಾವುದಾದರೂ ಸಿದ್ಧವಿರುವ ಚಿತ್ರದ ನಕಲು ಮಾಡುವ ಮೂಲಕ ಅಭ್ಯಾಸ ನಡಿಸಿ ಬಳಿಕ ,ನಿಮ್ಮ ಕಲ್ಪನೆಗೆ ಅನುಗುಣವಾಗಿ ವಿಭಿನ್ನ ಚಿತ್ತಾರಗಳನ್ನು ವಿಸ್ತರಿಸುತ್ತ ಹೋಗಬಹುದು. ವರ್ಲಿ ಬಿಡಿಸಲು ಕಾನ್ವಾಸ್, ಉಡುಪು, ಟೆರ್ರಕೋಟಾ ವಸ್ತುಗಳು, ಪುಟ್ಟ ಮಡಿಕೆಗಳು ಹೀಗೆ ಹಲವು ಪರಿಕರಗಳನ್ನು ಬಳಸಬಹುದು.
ಕಿರು ಉದ್ಯೋಗವಾಗಿ ಹೇಗೆ ?
ಈಗ ಇದರ ಬೇಡಿಕೆ ಹೆಚ್ಚುತ್ತಿರುವುದರಿಂದ ಇದನ್ನು ಒಂದು ಕಿರು ಉದ್ಯೋಗವಾಗಿ ಮಾಡಿಕೊಳ್ಳಬಹುದು.ಗ್ರೀಟಿಂಗ್ ಕಾರ್ಡು, ವಾಲ್ ಹಾಂಗಿಂಗ್, ಹೂದಾನಿ,ಕ್ಲಾತ್ ಪೈಂಟಿಂಗ್ ಇವುಗಳ ಮೇಲೆ ನಿಮ್ಮ ಕಲ್ಪನಾ ಲಹರಿಯನ್ನುವರ್ಲಿ ಜತೆ ಸೇರಿಸಿ ಮಾರಾಟ ಮಾಡಬಹುದು. ಯಾವುದಾದರೂ ಆರ್ಟ್ ಗ್ಯಾಲರಿಯ ಜತೆ ಅಥವಾ ಒಳಾಂಗಣ ವಿನ್ಯಾಸಕಾರರ ಜತೆ ಟೈ ಅಪ್ ಮಾಡಿಕೊಂಡು ಆರ್ಡರ್ ಗಳನ್ನು ಪೂರೈಸಬಹುದು. ಇಂಟರ್ ನೆಟ್ ನಲ್ಲಿಯಂತೂ ಇದಕ್ಕೆ ವಿಪುಲ ಅವಕಾಶಗಳಿವೆ. ಇದರ ಮೂಲಕವೂ ನಿಮ್ಮವರ್ಲಿ ಚಿತ್ರಪಟಗಳು ಮತ್ತು ಹಲವು ವಾರ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಬೇಡಿಕೆಗೆ ತಕ್ಕಂತೆ ಆರ್ಡರುಗಳನ್ನು ಸರಿಯಾಗಿ ಪೂರೈಸಿದರೆ ಖಂಡಿತವಾಗಿಯೂ ಇದರಲ್ಲಿ ನೀವು ಯಶಸ್ವಿಯಾಗಬಹುದು.
Subscribe to:
Posts (Atom)