Pages

Thursday, March 24, 2011

ವರ್ಲಿ ಚಿತ್ರಕಲೆ ಮತ್ತೊಮ್ಮೆ

ಈ ಹಿಂದೆ ವರ್ಲಿ ಚಿತ್ರಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಆ ಲೇಖನ ( ಇಲ್ಲಿದೆ. )

ಈ ಸಲ ನಾನು ವರ್ಲಿ ಚಿತ್ರಗಳ ಪ್ರಮುಖ ಪ್ರಕಾರವಾದ ಟರ್ಪಾ ನೃತ್ಯದ ಚಿತ್ರ ಅಭ್ಯಾಸ ಮಾಡಿದೆ. ಒಂದು ಪ್ರಯತ್ನ ಇಲ್ಲಿದೆ.


ಟರ್ಪಾ ಎನ್ನುವುದು ಒಂದು ರೀತಿಯ ಕೊಳವೆಯ ಆಕೃತಿಯ ವಾದ್ಯ. ಅದನ್ನು ಊದುವವನ ಸುತ್ತ ಜನರು ವೃತ್ತಾಕಾರವಾಗಿ ಸುತ್ತುವರೆದು ನೃತ್ಯ ಮಾಡುತ್ತಾರೆ.ವೃತ್ತ ಆಕೃತಿಯು ಸೂರ್ಯ ,ಚಂದ್ರರಿಂದ ಪ್ರೇರಣೆ ಪಡೆದು ರಚಿಸಿದ ಆಕೃತಿ. ವೃತ್ತ ಎನ್ನುವುದು ವರ್ಲಿ ಜನರಲ್ಲಿ ಜೀವನವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಸಾವು, ಬದುಕಿನ ಕೊನೆಯಲ್ಲ. ಅದು ಇನ್ನೊಂದು ಹೊಸ ಬದುಕಿನ ಆರಂಭ. ವೃತ್ತಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ವರ್ಲಿ ಚಿತ್ರಗಳಲ್ಲಿ ಪ್ರಕೃತಿಯ ಜತೆಗೆ ಮಿಳಿತವಾಗಿರುವ ಬದುಕು ಎದ್ದು ತೋರುತ್ತದೆ.

ಅಂದ ಹಾಗೆ ಈ ಚಿತ್ರದಲ್ಲಿ ಟರ್ಪಾ ನೃತ್ಯಕ್ಕೆ ಜನ ತಯಾರಾಗುತ್ತಿದ್ದಾರೆ ಅಷ್ಟೆ. ಇನ್ನೂ ವೃತ್ತಾಕಾರ ಪೂರ್ತಿಯಾಗಿ ರೂಪುಗೊಂಡಿಲ್ಲ .

Friday, March 18, 2011

ಬಗೆ ಬಗೆ ಶರಬತ್ತು..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

೧. ಬೆಲ್ಲದ ಪಾನಕ..

ಮನೆಗೆ ಅತಿಥಿಗಳು ಬಂದಾಗ ಬೆಲ್ಲ ನೀರು ಕೊಡುವುದು ವಾಡಿಕೆ. ಬೆಲ್ಲ ನೀರು ದಣಿವನ್ನು ನಿವಾರಿಸುತ್ತದೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೇಕಾಗುವ ವಸ್ತುಗಳು

ನೀರು :ಎರಡು ಲೋಟ
ಬೆಲ್ಲದ ಪುಡಿ: ಅರ್ಧ ಲೋಟ
ಏಲಕ್ಕಿ :ಚಿಟಿಕೆ
ಕಾಳು ಮೆಣಸಿನ ಪುಡಿ :ಚಿಟಿಕೆ.

ವಿಧಾನ
೧.ನೀರಿನಲ್ಲಿ ಬೆಲ್ಲದ ಪುಡಿಯನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿ ಇಡಿ.
೨.ಬೆಲ್ಲ ಸಂಪೂರ್ಣವಾಗಿ ಕರಗಿದಾಗ ಅದಕ್ಕೆ ಏಲಕ್ಕಿ ಪುಡಿ ಮತ್ತು ಕಾಳು ಮೆಣಸಿನ ಪುಡಿ ಬೆರೆಸಿ ಕಲಕಿ,ಕುಡಿಯಿರಿ.


೨. ಬಣ್ಣದ ಸೌತೆಕಾಯಿ ಪಾನಕ (ಮಂಗಳೂರು ಸೌತೆ ಪಾನಕ )

ಬೇಕಾಗುವ ವಸ್ತುಗಳು

ನೀರು : ಎರಡು ಲೋಟ
ಬೆಲ್ಲದ ಪುಡಿ: ಅರ್ಧ ಲೋಟ

ಮಂಗಳೂರು ಸೌತೆಕಾಯಿ : ಒಂದು

ವಿಧಾನ

೧. ಸಿಪ್ಪೆ ಸುಲಿದ ಸೌತೆಯನ್ನು ಸಣ್ಣಗೆ ಹೆಚ್ಚಿ,ಮಿಕ್ಸಿಯಲ್ಲಿ ರುಬ್ಬಿ .
೨.ಇದಕ್ಕೆ ಬೆಲ್ಲದ ಪುಡಿ, ನೀರು ಹಾಕಿ ಕಲಕಿ. ಬೇಕಿದ್ದರೆ ಏಲಕ್ಕಿ ಪುಡಿ ಹಾಕಿಕೊಳ್ಳಬಹುದು.
ಬಿಸಿಲಿನ ಬೇಗೆಗೆ ಅತ್ಯುತ್ತಮವಾದ ಪಾನಕ ಇದು.

೩.ಕರಬೂಜದ ಮಿಲ್ಕ್ ಶೇಕ್

ಬೇಕಾಗುವ ವಸ್ತುಗಳು

ಕರಬೂಜ : ಒಂದು
ಸಕ್ಕರೆ:ಎರಡು ಚಮಚ
ಹಾಲು :ಒಂದು ಲೋಟ
ನೀರು :ಒಂದು ಲೋಟ

ವಿಧಾನ

೧.ಬೀಜ ಮತ್ತು ಸಿಪ್ಪೆ ತೆಗೆದ ಕರಬೂಜವನ್ನು ಸಣ್ಣಗೆ ಹೆಚ್ಚಿ.
೨.ಮಿಕ್ಸಿಯಲ್ಲಿ ಹಾಲು,ಸಕ್ಕರೆ ಮತ್ತು ಕರಬೂಜವನ್ನು ಹಾಕಿ ಒಟ್ಟಿಗೆ ರುಬ್ಬಿ.
೩.ಬೇಕಿದ್ದರೆ ಇದಕ್ಕೆ ಅಇಸ್ ಕ್ರೀಮನ್ನು ಸೇರಿಸಿ ರುಬ್ಬಬಹುದು.
೪.ನೀರು ಸೇರಿಸಿ, ಕಲಕಿ , ಕುಡಿಯಿರಿ.

೪. ಬ್ರಾಹ್ಮಿ ಎಲೆಯ ಶರಬತ್ತು

ಬೇಕಾಗುವ ಸಾಮಗ್ರಿಗಳು :
ಎರಡು ಹಿಡಿ ಬ್ರಾಹ್ಮಿ ಎಲೆ
ಬೆಲ್ಲ :ಮಧ್ಯಮ ಗಾತ್ರದ ಚೂರು
ನೀರು ಸ್ವಲ್ಪ




ವಿಧಾನ:
ಬ್ರಾಹ್ಮಿ ಎಲೆಗಳನ್ನು ಚೆನ್ನಾಗಿ ತೊಳೆದು, ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಮತ್ತು ಬೆಲ್ಲ ಸೇರಿಸಿ.ನುಣ್ಣಗೆ ರುಬ್ಬಿ.
ಆಮೇಲೆ ಅದನ್ನು ಮಿಕ್ಸಿ ಯಿಂದ ತೆಗೆದು, ಸೋಸಿ.
ಬೇಕಿದ್ದರೆ ಮಂಜುಗಡ್ಡೆ ಸೇರಿಸಿ.
ಇನ್ನೇಕೆ ತಡ...ರುಚಿ ನೋಡಿ.
ಬೇಸಗೆಯ ಧಗೆಗೆ ತಂಪಾದ ,ಆರೋಗ್ಯಕರವಾದ ಪಾನೀಯ ಇದು!!

೫.ಪುದೀನಾ ನಿಂಬೆ ಶರಬತ್ತು

ಬೇಕಾಗುವ ವಸ್ತುಗಳು
ನಿಂಬೆ ರಸ : ಆರು ಚಮಚ
ಸಕ್ಕರೆ :ಎಂಟು ಚಮಚ
ಪುದೀನಾ ಎಲೆ : ಅರ್ಧ ಲೋಟ
ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ :ಚಿಟಿಕೆ
ಉಪ್ಪು :ರುಚಿಗೆ ತಕ್ಕಷ್ಟು
ನೀರು :ಎರಡು ಲೋಟ

ವಿಧಾನ
೧.ಪುದೀನಾ ಎಲೆಗಳನ್ನು ನೀರು ಹಾಕಿ ನುಣ್ಣಗೆ ರುಬ್ಬಿ.
೨.ಇದಕ್ಕೆ ಸಕ್ಕರೆ,ನಿಂಬೆ ರಸ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಕಿ.
೩.ಬೇಕಿದ್ದರೆ ಮಂಜುಗಡ್ಡೆ ಸೇರಿಸಿ.
೪.ಇನ್ನೇಕೆ ತಡ ಪುದೀನಾ-ನಿಂಬೆ ಶರಬತ್ತು ತಯಾರು. ಇದು ತುಂ ಬಾ ಆಹ್ಲಾದಕರವಾದ ಪಾನೀಯ.

ವಿ.ಸೂ.
ಇದಕ್ಕೆ ಸ್ವಲ್ಪ ಶು ೦ಠಿ ರಸವನ್ನು ಸೇರಿಸಿದರೆ ವಿಶಿಷ್ಟವಾದ ರುಚಿ ಬರುತ್ತದೆ .

೬.ಮಸಾಲ ಮಜ್ಜಿಗೆ

ಬೇಕಾಗುವ ವಸ್ತುಗಳು
ಮಜ್ಜಿಗೆ :ಎರಡು ಲೋಟ
ಕೊತ್ತಂಬರಿ ಸೊಪ್ಪು : ಸ್ವಲ್ಪ
ಶು೦ಠಿ: ಸಣ್ಣ ಚೂರು
ಹಸಿ ಮೆಣಸು : ೨
ಉಪ್ಪು :ರುಚಿಗೆ ತಕ್ಕಷ್ಟು
ಇಂಗು: ಚಿಟಿಕೆ

ವಿಧಾನ
೧.ಕೊತ್ತಂಬರಿ ಸೊಪ್ಪು, ಶು೦ಠಿ ,ಹಸಿ ಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿ.
೨.ಇ೦ಗಿಗೆ ಸ್ವಲ್ಪ ನೀರು ಹಾಕಿ,ಕರಗಿಸಿ.
೩.ಮಜ್ಜಿಗೆಗೆ ಹೆಚ್ಚಿದ ಕೊತ್ತಂಬರಿ,ಶು೦ಠಿ, ಹಸಿ ಮೆಣಸು ,ಇಂಗಿನ ನೀರು ,ಉಪ್ಪು ಹಾಕಿ ಕಲಸಿ.


೭.ಮಾ೦ಗೋ ಲಸ್ಸಿ

ಮೊಸರು :ಎರಡು ಲೋಟ
ಮಾವಿನ ಹಣ್ಣಿನ ಹೋಳುಗಳು :ಅರ್ಧ ಲೋಟ
ಸಕ್ಕರೆ:ಅರ್ಧ ಲೋಟ

ವಿಧಾನ

ಮೊಸರು,ಮಾವಿನ ಹಣ್ಣು ಮತ್ತು ಸಕ್ಕರೆಯನ್ನು ಒಟ್ಟಿಗೆ ರುಬ್ಬಿ, ಲೋಟದಲ್ಲಿ ಹಾಕಿ ಕುಡಿಯಿರಿ.

ವಿ.ಸೂ. ಸಕ್ಕರೆಯ ಪ್ರಮಾಣ ಮಾವಿನ ಸಿಹಿಯ ಮೇಲೆ ಅವಲಂಬಿತ.

೮. ಠ೦ಡಾಯೀ

ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾದ ಪೇಯ ಇದು.

ಬೇಕಾಗುವ ವಸ್ತುಗಳು

ಹಾಲು :ಒಂದು ಲೋಟ
ಬಾದಾಮಿ : ಹತ್ತು
ಏಲಕ್ಕಿ :ಚಿಟಿಕೆ
ಗಸಗಸೆ :ಒಂದು ಚಮಚ
ಗುಲಾಬಿ ನೀರು : ಎರಡು ಚಮಚ

ವಿಧಾನ
೧.ಬಾದಾಮಿಯನ್ನು ನೀರಿನಲ್ಲಿ ನಾಲ್ಕೈದು ಗಂಟೆಗಳ ಕಾಲ ನೆನೆಸಿ, ಬಳಿಕ ಸಿಪ್ಪೆ ತೆಗೆಯಿರಿ.
೨.ಸಿಪ್ಪೆ ತೆಗೆದ ಬಾದಾಮಿ, ಏಲಕ್ಕಿ,ಗಸಗಸೆ, ಗುಲಾಬಿ ನೀರು ಇವುಗಳನ್ನು ಒಟ್ಟಿಗೆ ರುಬ್ಬಿ.
೩.ರುಬ್ಬಿದ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿ.
೪.ಸ್ವಲ್ಪ ಮಂಜುಗಡ್ಡೆ ಚೂರುಗಳನ್ನು ಸೇರಿಸಿ. ಠ೦ಡಾಯೀ ತಯಾರು .



೯.ಕಲ್ಲಂಗಡಿ ಜೂಸ್

ಕಲ್ಲಂಗಡಿ ಹೋಳುಗಳು : ಮೂರು ಲೋಟ
ಸಕ್ಕರೆ : ಎರಡು ಚಮಚ

ವಿಧಾನ
೧.ಕಲ್ಲಂಗಡಿಯ ಸಿಪ್ಪೆ ತೆಗೆದು, ಹಣ್ಣಿನ ಸಣ್ಣ ಚೂರುಗಳನ್ನಾಗಿ ಮಾಡಿ.
೨.ಸಕ್ಕರೆಯ ಜತೆ ಈ ಹೋಳುಗಳನ್ನು ರುಬ್ಬಿ.
೩.ತೆಳುವಾದ ಬಟ್ಟೆಯಲ್ಲಿ ಇದನ್ನು ಸೋಸಿ, ಕುಡಿಯಿರಿ.

ವಿ.ಸೂ. ಇದಕ್ಕೆ ನೀರು ಹಾಕಬೇಕಾಗಿಲ್ಲ.


೧೦. ಕ್ಯಾರೆ ಟ್-ಶು೦ ಠಿ ಜ್ಯೂಸ್

ಕ್ಯಾರೆಟ್ :ಎರಡು
ಶು೦ ಠಿ :ಸಣ್ಣ ಚೂರು
ಸಕ್ಕರೆ :ಎರಡು ಚಮಚ
ನೀರು :ಎರಡು ಲೋಟ

ವಿಧಾನ
೧.ಕ್ಯಾರೆಟ್,ಶುಮ್ಥಿಯನ್ನು ನೀರಿನ ಜತೆ ಚೆನ್ನಾಗಿ ರುಬ್ಬಿ.
೨.ರುಬ್ಬಿದ ಮಿಶ್ರಣವನ್ನು ಬಟ್ಟೆಯಲ್ಲಿ ಸೋಸಿ.
೩. ಸೋಸಿದ ರಸಕ್ಕೆ ಸಕ್ಕರೆ ಹಾಕಿ ಕುಡಿಯಿರಿ.

--------------------------------------------------------------

Thursday, March 3, 2011

ಪಲ್ಯ..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಆಲೂಗೆಡ್ಡೆ-ಹುಣಸೆ ರಸ ಪಲ್ಯಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)


೧.ತೊಂಡೆಕಾಯಿ ,ಗೋಡಂಬಿ ಪಲ್ಯ




ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.

ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.

ಸೂಚನೆ :
೧.ಗೋಡಂಬಿಯ ಬದಲು ನೆನೆದ ಕಡಲೆಯನ್ನು ಬಳಸಬಹುದು.
೨.ಭಿನ್ನವಾದ ರುಚಿಗೊಸ್ಕರ ತೆಂಗಿನ ಕಾಯಿಯ ಜತೆ ಸಾಸಿವೆಯ ಬದಲು ಜೀರಿಗೆ ರುಬ್ಬಿ ಪಲ್ಯ ಮಾಡಬಹುದು.
------------------------------------------------------------------------------------------------------------------------------------------

೨.ಸುಟ್ಟ ಬದನೇಕಾಯಿ ಪಲ್ಯ
--------------------------------------------------------------


ಬೇಕಾಗುವ ಸಾಮಗ್ರಿಗಳು:

ಬದನೇಕಾಯಿ :ದೊಡ್ಡದು (ನೇರಳೆ ಬಣ್ಣದ್ದು ) : ೨
ನೀರುಳ್ಳಿ : ಒಂದು

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ
ಹಸಿ ಮೆಣಸು : ನಾಲ್ಕು
ಬೆಳ್ಳುಳ್ಳಿ : ೧೦ ಎಸಳು

ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಬದನೆ ಕಾಯಿಯನ್ನು ತೊಳೆದು ಗ್ಯಾಸ್ ನ ಒಲೆಯ ಮೇಲೆ ನೇರವಾಗಿ ಇಟ್ಟು, ಒಲೆ ಉರಿಸಿ.
೨.ಬದನೆ ಕಾಯಿಯು ಬೆಂಕಿಯಲ್ಲಿ ಚೆನ್ನಾಗಿ ಸುಡುವ ತನಕ ಒಲೆಯಲ್ಲಿ ಇರಿಸಿ. ಆಗಾಗ್ಗೆ ಅದನ್ನು ಮಗುಚಿ ಇಟ್ಟು,ಎಲ್ಲಾ ಭಾಗಗಳೂ ಸಮಾನವಾಗಿ ಸುಡುವಂತೆ ಮಾಡಿ. ಅದರ ಮೇಲ್ಗಡೆಯ ಸಿಪ್ಪೆ ಏಳುವಷ್ಟರ ತನಕ ಇದನ್ನು ಸುಡಬೇಕು.
೩.ಈಗ ಒಲೆ ಆರಿಸಿ, ಬದನೆಕಾಯಿಯ ಸಿಪ್ಪೆಯನ್ನು ಸುಲಿಯಿರಿ.
೪.ಸಿಪ್ಪೆ ರಹಿತ ಭಾಗವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಈ ಹಂತದಲ್ಲಿ ಅದನ್ನು ಚೆನ್ನಾಗಿ ಪರಿಶೀಲನೆ ಮಾಡಿ. (ಕೆಲವೊಮ್ಮೆ ಬದನೆಕಾಯಿಯ ಒಳಗೆ ಹುಳ ಇರುತ್ತದೆ. ಹಾಗಾಗೆ ಪರಿಶೀಲನೆ ಅತೀ ಅಗತ್ಯ!! )
೫. ಬೆಂದಿರುವ ಬದನೆಕಾಯಿಯನ್ನು ಚೆನ್ನಾಗಿ ಕಿವುಚಿ.
೬.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ಹಸಿಮೆಣಸಿನ ಚೂರು,ಬೆಳ್ಳುಳ್ಳಿಚೂರು , ಸಣ್ಣಗೆ ಹೆಚ್ಚಿದ ನೀರುಲ್ಲಿಯನ್ನು ಹಾಕಿ ,ಚೆನ್ನಾಗಿ ಹುರಿಯಿರಿ.
೭.ಬಳಿಕ ಕಿವುಚಿದ ಬದನೆ ,ಉಪ್ಪು,ನಿಂಬೆ ರಸ ಹಾಕಿ ಚೆನ್ನಾಗಿ ಕಲಕಿ. ಈಗ ಸುಟ್ಟ ಬದನೆ ಕಾಯಿ ಪಲ್ಯ ತಯಾರು!

ಸೂಚನೆ : ಇದನ್ನೇ ಉತ್ತರ ಭಾರತದ ಕಡೆ 'ಬೆಂಗನ್ ಭರ್ತ' ಎನ್ನುತ್ತಾರೆ.
ಈ ಪಲ್ಯ ಆರಿದ ಬಳಿಕ ಬೇಕಿದ್ದರೆ ಮೊಸರು ಹಾಕಿ ಕಲಕಬಹುದು. ಬದನೆಕಾಯಿಯ ಮೊಸರುಗೊಜ್ಜು ತಯಾರಾಗುತ್ತದೆ.

-------------------------------------------------------------------------------------------------------------------------------------
೩.ಆಲೂಗೆಡ್ಡೆ-ಹುಣಸೆ ರಸ ಪಲ್ಯ
--------------------------------------------------------------------------------------------------------------------------------------

ಬೇಕಾಗುವ ಸಾಮಗ್ರಿಗಳು:
ಸಣ್ಣ ಗಾತ್ರದ ಆಲೂಗಡ್ಡೆ : ೬

ಹುಣಸೆ ರಸ : ಕಾಲು ಲೋಟ
ಸಾರಿನ ಪುಡಿ:ಒಂದು ಚಮಚ
ಬೆಲ್ಲ :ಸಣ್ಣ ಚೂರು
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ

ಅಲಂಕಾರಕ್ಕೆ :
ನೀರುಳ್ಳಿ ಚೂರು :ಸ್ವಲ್ಪ
ಕೊತ್ತಂಬರಿ ಚೂರು :ಸ್ವಲ್ಪ

ವಿಧಾನ :
೧.ಸಣ್ಣ ಅಲೂಗದ್ದೆಗಳನ್ನು ಬೇಯಿಸಿ, ಸಿಪ್ಪೆ ಬೇರ್ಪಡಿಸಿ ಇಟ್ಟುಕೊಳ್ಳಿ.
೨.ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ.
೩.ಇದಕ್ಕೆ ಬೆಂದ ಆಲೂಗಡ್ಡೆಗಳನ್ನೂ ಸೇರಿಸಿ.
೪.ಬಳಿಕ ಹುಣಸೆ ರಸ,ಸಾರಿನ ಪುಡಿ,ಬೆಲ್ಲ,ಉಪ್ಪು ಹಾಕಿ ನಿಧಾನವಾಗಿ ಕಲಕಿ . ಅಲೂಗಡ್ಡೆಯ ಮೇಲೆ ಈ ಮಸಾಲೆಗಳೆಲ್ಲ ಸರಿಯಾಗಿ ತಗಲುವಂತೆ ಕಲಕಬೇಕು.
೫.ಸುಮಾರು ಹತ್ತು ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
೬.ಸಣ್ಣಗೆ ಹೆಚ್ಚಿದ ನೀರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

-------------------------------------------------------------------------------------------------------------------------

4.ತುರಿದ ಬೀಟ್ರೂಟ್ ಪಲ್ಯ
-------------------------------------------------------------------------------------------------------


ಬೀಟ್ರೂಟ್ : ಒಂದು
ತೆಂಗಿನ ತುರಿ :ಕಾಲು ಲೋಟ
ಬೆಲ್ಲ :ಸಣ್ಣ ಚೂರು
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಅರ್ಧ ಚಮಚ

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ
ಕೆಂಪು ಮೆಣಸು : ನಾಲ್ಕು
ಇಂಗು : ಚಿಟಿಕೆ

ವಿಧಾನ
೧.ಬೀಟ್ರೂಟ್ ಸಿಪ್ಪೆ ತೆಗೆದು, ಅದನ್ನು ತುರಿಯಿರಿ.
೨,ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ,ಕೆಂಪು ಮೆಣಸು ,ಇಂಗು ಹಾಕಿ ಒಗ್ಗರಣೆ ತಯಾರಿಸಿ.
೩.ಇದರಲ್ಲಿ ತುರಿದ ಬೀಟ್ರೂಟ್ ಹಾಕಿ ಬಾಡಿಸಿ.
೪.ಬಳಿಕ ಇದಕ್ಕೆ ತೆಂಗಿನ ತುರಿ,ಬೆಲ್ಲ,ಹುಣಸೆ ರಸ,ಉಪ್ಪು ಹಾಕಿ ಚೆನ್ನಾಗಿ ಕಲಕಿ.

----------------------------------------------------------------------------------------------------------------------------------------------------

5.ಟೊಮೇಟೊ ಮಸಾಲ
--------------------------------------------------------------------------------------------------------------------------


ಬೇಕಾಗುವ ಸಾಮಗ್ರಿಗಳು:
ಟೊಮೇಟೊ:೪
ನೀರುಳ್ಳಿ : ೨
ಎಣ್ಣೆ :ನಾಲ್ಕು ಚಮಚ

ದಾಲ್ಚಿನ್ನಿ :ಸಣ್ಣ ಚೂರು
ಲವಂಗ : 3
ಬೆಳ್ಳುಳ್ಳಿ : ೬ ಎಸಳು
ಕರಿಬೇವು : ೧೦ ಎಸಳು
ಹಸಿ ಮೆಣಸು : ೫
ಜೀರಿಗೆ: ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಜೀರಿಗೆ,ಕರಿಬೇವು, ಹಸಿ ಮೆಣಸು ಹಾಕಿ ಬಾಡಿಸಿಕೊಳ್ಳಿ.
೨.ಇದರಲ್ಲಿ ಹೆಚ್ಚಿದ ಟೊಮೇಟೊ,ನೀರುಳ್ಳಿ,ಬೆಳ್ಳುಳ್ಳಿ ಹಾಕಿ ಕಲಕಿ.
೩.ಟೊಮೇಟೊ ಸರಿಯಾಗಿ ಬೇಯುವ ತನಕ ಹಾಗೇ ಬಿಡಿ.ಈಗ ದಾಲ್ಚಿನ್ನಿ ಮತ್ತು ಲವಂಗ ಹಾಕಿ. ಮಧ್ಯ ಮಧ್ಯ sauTininda ತಿರುವುತ್ತಿರಿ.
೪.ಇದಕ್ಕೆ ಉಪ್ಪು ಹಾಕಿ, ಮತ್ತೆ ಮೂರು-ನಾಲ್ಕು ನಿಮಿಷ ಬೇಯಲು ಬಿಡಿ.

ಇದೀಗ ಟೊಮೇಟೊ ಮಸಾಲ ತಯಾರಾಯಿತು. ಚಪಾತಿಗೆ ಹೇಳಿ ಮಾಡಿಸಿದ ಜತೆ ಇದು