Pages

Friday, October 16, 2009

ತಂಬುಳಿ


'ಸಖಿ ' ಪಾಕ್ಷಿಕ (october 1-15 ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ


ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಬಹುವಾಗಿ ಬಳಕೆಯಲ್ಲಿರುವ ಒಂದು ಬಗೆಯ ಮೇಲೋಗರಕ್ಕೆ ತಂಬುಳಿ ಎಂದು ಹೆಸರು.
ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ!! ಹಲವು ವಿಧದ ಸೊಪ್ಪು, ಚಿಗುರುಗಳನ್ನು ಬಳಸಿ ತಂಬುಳಿ ಮಾಡುವಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದವರು ಸಿದ್ಧ ಹಸ್ತರು. "ತಂಬುಳಿ ಅಂಥ ಊಟವಿಲ್ಲ. ಕಂಬಳಿ ಅಂಥ ಹೊದಿಕೆಯಿಲ್ಲ " ಎಂಬ ಗಾದೆ ಜನಪ್ರಿಯವಾಗಿದೆ.
ನನ್ನ ಸಹೋದ್ಯೋಗಿ ಮಿತ್ರರಾದ ಶ್ರೀ ರವಿರಾಜ ಭಟ್ಟರು ತಂಬುಳಿ ಬಗ್ಗೆ ಈ ರೀತಿ ಬರೆದಿದ್ದಾರೆ :

ತಾರಕ್ಕ ತಂಬುಳಿ
ನಾ ಊಟಕ್ಕೆ ಬರುವೆನು
ತಾರೆ ತಂಬುಳಿಯಾ

ತಂಬುಳಿ ಹೀರಿದರೆ
ತಲೆಯೆ ತಂಪು
ತಾರೆ ತಂಬುಳಿಯಾ

ಬೇಸಿಗೆಯ ಬಿಸಿಲಿಗೆ
ತಂಪಾದ ತಂಬುಳಿ
ತಾರೆ ತಂಬುಳಿಯಾ

ನಾಲಗೆಗೆ ರುಚಿ ಆರೋಗ್ಯಕ್ಕೆ ಹಿತಕರವಾಗಿರುವ ತಂಬುಳಿಯನ್ನು ತಯಾರಿಸುವುದು ಅತ್ಯಂತ ಸುಲಭ. ಇದರ ಮೂಲವಸ್ತು ತೆಂಗಿನ ತುರಿ, ಜೀರಿಗೆ , ಮಜ್ಜಿಗೆ ಮತ್ತು ಒಗ್ಗರಣೆ. ವಿಧಾನ ಒಂದೇ ರೀತಿಯಾಗಿದ್ದರೂ , ಕೆಲವನ್ನು ಹುರಿದು, ಕೆಲವನ್ನು ಬೇಯಿಸಿ, ಕೆಲವನ್ನು ಸುಟ್ಟು ಹೀಗೆ ಕೊಂಚ ವ್ಯತ್ಯಾಸಗಳಿವೆ.
ಬನ್ನಿ, ವಿಧ ವಿಧ ರೀತಿಯ ತಂಬುಳಿಗಳನ್ನು ಮಾಡಿ ಸವಿಯೋಣ.

-----------------------------------
೧. ಮೆಂತೆ ತಂಬುಳಿ
-----------------------------------





ಬೇಕಾಗುವ ಸಾಮಗ್ರಿಗಳು
ಮೆಂತೆ:ಅರ್ಧ ಚಮಚ
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಅರ್ಧ ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲ :ಒಂದು ಸಣ್ಣ ಚೂರು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಕೆಂಪು ಮೆಣಸು :2

ವಿಧಾನ :
೧.ಮೆಂತೆಯನ್ನು ಹುರಿದುಕೊಂಡು, ತೆಂಗಿನಕಾಯಿ ತುರಿಯ ಜತೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಬೆಲ್ಲವನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಕಲಕಿ.
೫.ಇದೇ ತಂಬುಳಿ.ಇನ್ನೇಕೆ ತಡ..ಅನ್ನದ ಜತೆ ಕಲಸಿ ತಿನ್ನಿ .

ಮೆಂತೆ ಕಹಿಯಿರುವ ಕಾರಣ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ. ಸ್ವಲ್ಪ ಜಾಸ್ತಿ ಹಾಕಿದರೂ ತಂಬುಳಿ ಕಹಿಯಾಗುತ್ತದೆ. ಬೇಕಿದ್ದರೆ ಕಾಲು ಚಮಚ ಜೀರಿಗೆ, ಕಾಲು ಚಮಚ ಕಾಳು ಮೆಣಸನ್ನು ಕೂಡ ಮೆಂತೆ ಜತೆ ಹುರಿದು ಒಟ್ಟಿಗೆ ರುಬ್ಬಬಹುದು.

-----------------------------------
೨.ಶುಂಠಿ ತಂಬುಳಿ
----------------------------------


ಬೇಕಾಗುವ ಸಾಮಗ್ರಿಗಳು
ಶುಂಠಿ :ಒಂದು ಇಂಚು
ಜೀರಿಗೆ:ಒಂದು ಚಮಚ
ಹಸಿ ಮೆಣಸು :ಒಂದು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ


ವಿಧಾನ :
೧. ಶುಂಠಿ,ಜೀರಿಗೆ,ಹಸಿ ಮೆಣಸು,ತೆಂಗಿನ ಕಾಯಿ ತುರಿ ಇವುಗಳನ್ನು ನುಣ್ಣಗೆ ರುಬ್ಬಿ.
೨.ಈ ಮಿಶ್ರಣಕ್ಕೆ ಮಜ್ಜಿಗೆ,ಉಪ್ಪು ಹಾಕಿ ಕಲಸಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ
೪.ಇದನ್ನು ರುಬ್ಬಿ ಇಟ್ಟ ಮಿಶ್ರಣಕ್ಕೆ ಹಾಕಿ. ಕಲಸಿ.

ಅಜೀರ್ಣವಾಗಿದ್ದರೆ,ಬಾಯಿ ರುಚಿ ಕೆಟ್ಟಿದ್ದರೆ ಈ ತಂಬುಳಿ ಅತ್ಯುತ್ತಮ ಔಷಧಿ.ಮಜ್ಜಿಗೆ ಹಾಕದೆ ಗಟ್ಟಿಯಾಗಿ ಮಾಡಿದರೆ ಇದು ಶುಂಠಿ ಚಟ್ನಿ ಯಾಗುತ್ತದೆ.

--------------------------------
೩.ನೆಲ್ಲಿಕಾಯಿ ತಂಬುಳಿ
-------------------------------


ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ :ಹತ್ತು
ಮಜ್ಜಿಗೆ:ಎರಡು ಲೋಟ
ತೆಂಗಿನ ಕಾಯಿ ತುರಿ:ಕಾಲು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಹಸಿ ಮೆಣಸು :ಒಂದು



ವಿಧಾನ :
೧.ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ.
೨.ಬೀಜರಹಿತ ನೆಲ್ಲಿಕಾಯಿ,ತೆಂಗಿನ ತುರಿ , ಹಸಿ ಮೆಣಸು, ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ.
೩.ಇದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ.


ವಿ.ಸೂ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ತಂಬುಳಿ ಸಹಕಾರಿ.
ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಿ, ಬಳಿಕ ತೆಂಗಿನ ತುರಿ ಜತೆ ರುಬ್ಬಬೇಕು. ಹಸಿ ನೆಲ್ಲಿಕಾಯಿಯನ್ನು ಬೇಯಿಸಿ ಬಳಸಿದರೆ ತಂಬುಳಿಗೆ ವಿಭಿನ್ನ ರೀತಿಯ ರುಚಿ ಬರುತ್ತದೆ. ಹಸಿ ಮೆಣಸಿನ ಬದಲು ಕಾಳು ಮೆಣಸನ್ನು ಬಳಸಬಹುದು.

೪.ಸಾಂಬ್ರಾಣಿ ತಂಬುಳಿ /ಸೀಬೇಕಾಯಿ ಚಿಗುರಿನ ತಂಬುಳಿ /ಮೆಂತೆ ಸೊಪ್ಪಿನ ತಂಬುಳಿ/ ಪಾಲಕ್ ತಂಬುಳಿ

ಯಾವುದೇ ಸೊಪ್ಪಿನ ತಂಬುಳಿ ಮಾಡಬೇಕಾದಲ್ಲಿ ಒಂದು ಹಿಡಿ ಎಲೆಗಳನ್ನು ಬೆಣ್ಣೆ ಅಥವಾ ತುಪ್ಪದಲ್ಲಿ ಹುರಿದು, ತೆಂಗಿನಕಾಯಿ, ಜೀರಿಗೆ,ಹಸಿ ಮೆಣಸಿನ ಜತೆ ರುಬ್ಬಿ. ಉಪ್ಪು ಹಾಕಿ. ಒಗ್ಗರಣೆಗೆ ತುಪ್ಪ ಬಳಸಬೇಕು .


5.ಬ್ರಾಹ್ಮಿ ತಂಬುಳಿ





ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

ಸ್ಮರಣ ಶಕ್ತಿಯ ವೃದ್ಧಿಗೆ ಈ ತಂಬುಳಿ ಅತ್ಯುತ್ತಮ. ಬ್ರಾಹ್ಮಿ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಎಲೆಗಳನ್ನು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಅತೀ ಉತ್ತಮ.

6.ಮಾವಿನ ಮಿಡಿ ತಂಬುಳಿ


ಬೇಕಾಗುವ ಸಾಮಗ್ರಿಗಳು
ಉಪ್ಪಿನಕಾಯಿಯಲ್ಲಿರುವ ಮಾವಿನ ಮಿಡಿ :೧
ತೆಂಗಿನ ತುರಿ :ಅರ್ಧ ಲೋಟ
ಮಜ್ಜಿಗೆ:ಎರಡು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ:ಎಣ್ಣೆ :ಒಂದು ಚಮಚ
ಬೇವಿನೆಲೆ :೬ ಎಸಳು
ಜೀರಿಗೆ:ಅರ್ಧ ಚಮಚ
ಸಾಸಿವೆ:ಅರ್ಧ ಚಮಚ
ಇಂಗು :ಚಿಟಿಕೆ
ಕೆಂಪು ಮೆಣಸು :2

ವಿಧಾನ :
೧.ಮಾವಿನ ಮಿಡಿಯನ್ನು ಉಪ್ಪಿನ ಕಾಯಿಯಿಂದ ಹೊರತೆಗೆದು, ಸಣ್ಣದಾಗಿ ಹೆಚ್ಚಿ. ಅದರಲ್ಲಿ ಗೊರಟೆನಾದರೂ ಬಲಿತಿದ್ದರೆ, ಹೆಚ್ಚುವಾಗ ಜಾಗ್ರತೆವಹಿಸಿ, ಗೊರಟನ್ನು ನಿಧಾನವಾಗಿ ಹೊರತೆಗೆದು ಉಳಿದ ಮಾವಿನ ಕಾಯಿಯನ್ನು ಬಳಸಿ.
೨. ಇದನ್ನು ತೆಂಗಿನ ತುರಿಯ ಜತೆ ರುಬ್ಬಿ.
೩.ಸಣ್ಣ ಪಾತ್ರೆಯಲ್ಲಿ/ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಬಿಸಿಯಾಗುತ್ತಿದ್ದಂತೆ,ಸಾಸಿವೆ,ಜೀರಿಗೆ,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ,ಬೇವಿನ ಎಸಳು,ಇಂಗು ಹಾಕಿ.
೪.ಸಿದ್ಧಪಡಿಸಿದ ಒಗ್ಗರಣೆಯನ್ನು ರುಬ್ಬಿದ ತೆಂಗಿನ ತುರಿ,ಮಾವಿನ ಮಿಶ್ರಣಕ್ಕೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಕಲಸಿ.
೫.ಇನ್ನೇಕೆ ತಡ , ತಂಬುಳಿ ಸವಿಯಿರಿ !

ವಿ.ಸೂ : ಮಾವಿನ ಮಿಡಿ ಇರುವ ಕಾಲದಲ್ಲಿ ಹಸಿ ಮಾವಿನ ಮಿಡಿಯನ್ನು ಬಳಸಬಹುದು.



7.ದಾಳಿಂಬೆ ಸಿಪ್ಪೆ ತಂಬುಳಿ /ಕಿತ್ತಳೆ ಸಿಪ್ಪೆ ತಂಬುಳಿ

ಒಣಗಿದ ದಾಳಿಂಬೆ ಸಿಪ್ಪೆಯನ್ನು ತುಪ್ಪದಲ್ಲಿ ಹುರಿಯಿರಿ. ಇದನ್ನು ತೆಂಗಿನ ತುರಿಯ ಜತೆ ರುಬ್ಬಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ತುಪ್ಪದ ಒಗ್ಗರಣೆ ಕೊಡಿ. ಇದೇ ಥರ ಕಿತ್ತಳೆ ಸಿಪ್ಪೆಯ ತಂಬುಳಿಯನ್ನು ಮಾಡಬಹುದು. ಎಚ್ಚಿರಿಕೆ ವಹಿಸಬೇಕಾದ ವಿಚಾರವೆಂದರೆ ದಾಳಿಂಬೆಯ ಸಿಪ್ಪೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಸಬೇಕು . ಇಲ್ಲವೆಂದಾದಲ್ಲಿ ತಂಬುಳಿ ಒಗರಾಗುತ್ತದೆ.

೮. ಬಾಳೆ ಹೂವಿನ ತಂಬುಳಿ

ಬಾಳೆ ಹೂವನ್ನು ಬಿಡಿಸಿ, ಅದರ ಒಳ ತಿರುಳನ್ನು ಕೆಂಡದ ಮೇಲೆ /ಗ್ಯಾಸ್ ಮೇಲೆ ನೀರವಾಗಿ / ಮೈಕ್ರೋ ವೇವ್ ಓವನ್ ನಲ್ಲಿ ಸುಟ್ಟು ಬಳಿಕ ತೆಂಗಿನಕಾಯಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

೯.ಕೇಪುಳ ಹೂವಿನ ತಂಬುಳಿ


ಒಂದು ಹಿಡಿ ಕೇಪುಳ ಹೂವನ್ನು ನೀರಿನಲ್ಲಿ ಬೇಯಿಸಬೇಕು. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

೧೦. ಪುನರ್ಪುಳಿ ತಂಬುಳಿ

೫-೬ ಪುನರ್ಪುಳಿ (ಕೋಕಂ ) ಅನ್ನು ನೀರಿನಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ಇದನ್ನು ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ .
ಇದಕ್ಕೆ ಎರಡು ಲೋಟ ಮಜ್ಜಿಗೆ , ಉಪ್ಪು ಹಾಕಿ ಕಲಸಿ. ಒಗ್ಗರಣೆ ಕೊಡಿ .

ಬಿಸಿಲಿಂದಾಗಿ ತೀರಾ ದಣಿವಾಗಿದ್ದರೆ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟಿದ್ದರೆ ಈ ತಂಬುಳಿ ಅತ್ಯತ್ತಮ auShadhi .