Pages

Monday, August 24, 2009

'ಹೊಟ್ಟೆಗೆ ಹಿಟ್ಟು' ಅಂಕಣ...

'ಸಖಿ ' ಪಾಕ್ಷಿಕ (ಆಗಸ್ಟ್ ೧೬- ೩೧ ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ


ಅಕ್ಕಿ ವಿಶ್ವದಾದ್ಯಂತ ಬಹು ಜನರ ಪ್ರಮುಖ ಆಹಾರವಾಗಿದ್ದು, ಲ್ಯಾಟಿನ್ ಅಮೇರಿಕ , ವೆಸ್ಟ್ ಇಂಡೀಸ್ ಮತ್ತು ಏಶಿಯಾ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. 'ಅಕ್ಕಿ ತಿಂದವನು ಹಕ್ಕಿಯಂತಾಗುವನು ' ಎಂಬ ಗಾದೆ ಬಹಳ ಪ್ರಚಲಿತವಾಗಿದೆ. 'ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ,ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ' ಇಲ್ಲಿ ಅನ್ನ ಎನ್ನುವುದು ಆಹಾರ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಅನ್ನವನ್ನು ಪರಬ್ರಹ್ಮ ಸ್ವರೂಪಿ ಎಂತಲೂ , ಅನ್ನದಾನವನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ.

ಅಕ್ಕಿಯಲ್ಲಿ ಕಾರ್ಬೊಹೈಡ್ರೇಟ ಅಂಶ ಹೇರಳವಾಗಿದೆ. (ಪ್ರತಿ ನೂರು ಗ್ರಾಮಿಗೆ ೭೯ ಗ್ರಾಮಿನಷ್ಟು ). ವಿಟಮಿನ್ ಬಿ ೬,ವಿಟಮಿನ್ ಬಿ ೯,ಕ್ಯಾಲ್ಸಿಯಂ, ಕಬ್ಬಿಣ ಮುಂತಾದ ಪೋಷಕಾಂಶಗಳನ್ನು ಹೊಂದಿದೆ.

ಸಾಮಾನ್ಯವಾಗಿ ಅಕ್ಕಿಯನ್ನು ಅನ್ನ ಮಾಡಿ, ಸಾರು ಸಾಂಬಾರುಗಲ ಜತೆ ಸವಿಯುವುದು ಒಂದು ವಿಧವಾದರೆ, ಇನ್ನೊಂದು ಪ್ರಕಾರದಲ್ಲಿ ಅಕ್ಕಿಯ ಜತೆ ವಿವಿಧ ಪದಾರ್ಥಗಳನ್ನು ಮಿಶ್ರ ಮಾಡಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.

--------------------------------------------------------
1.ಪುಳಿಯೋಗರೆ
---------------------------------------------------------





ಬೇಕಾಗುವ ಸಾಮಗ್ರಿಗಳು:

ಗೊಜ್ಜು ತಯಾರಿಸಲು:
ಹುಣಸೇ ಹಣ್ಣು: ಎರಡು ಹಿಡಿ
ಜೀರಿಗೆ,ಕಾಳು ಮೆಣಸು: ತಲಾ ಒಂದು ಚಮಚ
ಮೆಂತ್ಯ: ಕಾಲು ಚಮಚ
ಕೊತ್ತಂಬರಿ ಕಾಳು: ಆರ್ಧ ಹಿಡಿ
ಎಳ್ಳು:ಒಂದು ಚಮಚ
ನೆಲಕಡಲೆ: ಒಂದು ಹಿಡಿ
ಇಂಗು: ಒಂದು ಚಿಟಿಕೆ
ಕೆಂಪು ಮೆಣಸು: ೬
ಉಪ್ಪು: ರುಚಿಗೆ ತಕ್ಕಷ್ಟು
ಬೆಲ್ಲ: ಒಂದು ತುಂಡು

ಒಗ್ಗರಣೆಗೆ:
ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ: ತಲಾ ಒಂದು ಚಮಚ
ಗೋಡಂಬಿ: ಒಂದು ಹಿಡಿ
ಅರಿಶಿಣ: ಕಾಲು ಚಮಚ
ಬೇವಿನ ಎಲೆ: ೧೦ ಎಸಳು
ಕೊಬ್ಬರಿ ತುರಿ: ಅರ್ಧ ಲೋಟ


ವಿಧಾನ :

ಗೊಜ್ಜು ತಯಾರಿ:

೧.ಗೊಜ್ಜು ತಯಾರಿಸಲು ಸೂಚಿಸಿರುವ ಪದಾರ್ಥಗಳಲ್ಲಿ ನೆಲಕಡಲೆ, ಹುಣಸೇಹುಳಿ ಹೊರತು ಪಡಿಸಿ, ಉಳಿದವುಗಳನ್ನು ಎಣ್ಣೆ ಹಾಕದೆ ಹುರಿದು, ನೀರು ಹಾಕದೆ ರುಬ್ಬಿ.
೨.ಹುಣಸೇ ಹಣ್ಣನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ, ರಸ ಹಿಂಡಿ ಇಟ್ಟುಕೊಳ್ಳಿ.
೩.ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಅರಸಿನ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ ಇಟ್ಟುಕೊಳ್ಳಿ. ಇದಕ್ಕೆ ನೆಲಕಡಲೆ ಸೇರಿಸಿ ಹುರಿಯಿರಿ.
೪.ಈಗ ಹುಣಸೇ ರಸ,ರುಬ್ಬಿದ ಮಸಾಲೆಯನ್ನು ಇದರ ಜತೆ ಹಾಕಿ ಕಲಸಿ.
೫.ಮಿಶ್ರಣವು ಕುದಿಯುತ್ತಿದ್ದಂತೆ ಇದಕ್ಕೆ ಸ್ವಲ್ಪ ಉಪ್ಪು, ಬೆಲ್ಲ ಸೇರಿಸಿ ಕಲಕಿ.
೬.ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಒಲೆ ಆರಿಸಿ.
೭.ಈ ಗೊಜ್ಜು ಆರಿದ ಮೇಲೆ ಬಾಟಲಿನಲ್ಲಿ ತುಂಬಿಸಿ ಇಟ್ಟುಕೊಳ್ಳಬಹುದು. ಬೇಕೆಂದಾಗ ಪುಳಿಯೋಗರೆ ಮಾಡಿಕೊಳ್ಳಲು ಉಪಯೋಗಿಸಬಹುದು.


ಪುಳಿಯೋಗರೆ ತಯಾರಿಗೆ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೩.ಇದಕ್ಕೆ ಗೋಡಂಬಿ, ನೆಲಕಡಲೆ ಸೇರಿಸಿ,ಕಲಕಿ.
೪.ಗೋಡಂಬಿ, ನೆಲಕಡಲೆ ಕೆಂಪಗಾಗುತ್ತಿದ್ದಂತೆ ಇದಕ್ಕೆ ಕೊಬ್ಬರಿ ತುರಿ ಸೇರಿಸಿ.
೫.ಈಗಾಗಲೇ ತಯಾರಿಸಿರುವ ಗೊಜ್ಜನ್ನು ಹಾಕಿ, ಕಲಸಿ.
೬.ಈಗ ಅನ್ನ, ಉಪ್ಪು ಸೇರಿಸಿ, ಕಲಸಿ.
೭.ಇನ್ನೇಕೆ ತಡ, ಪುಳಿಯೋಗರೆ ತಿನ್ನಿ!




-------------------------------------------------------------------------------
2.ಬಿಸಿ ಬೇಳೆ ಭಾತ್
--------------------------------------------------------------------------------




ಬೇಕಾಗುವ ಪದಾರ್ಥಗಳು


ಮಸಾಲೆಗೆ:
ಕೊತ್ತಂಬರಿ ಕಾಳು: ೪ ಚಮಚ
ಲವಂಗ: ೪
ದಾಲ್ಚಿನ್ನಿ: ೨ ಚೂರು
ಸಾಸಿವೆ, ಜೀರಿಗೆ, ಉದ್ದು, ಅರಸಿನ, ಎಣ್ಣೆ: ತಲಾ ಒಂದು ಚಮಚ
ಇಂಗು: ಚಿಟಿಕೆ
ಕಾಳು ಮೆಣಸು: ಅರ್ಧ ಚಮಚ
ಕೆಂಪು ಮೆಣಸು: ೩
ಬೇವಿನ ಎಲೆ: ೧೦ ಎಸಳು
ಎಣ್ಣೆ: ಒಂದು ಚಮಚ

ಹೆಚ್ಚಿದ ತರಕಾರಿ:

ಬೀನ್ಸು, ಕ್ಯಾರೆಟ್, ನೀರುಳ್ಳಿ, ಬಟಾಣಿ: ತಲಾ ಕಾಲು ಲೋಟ
ಬಟಾಟೆ: ಒಂದು
ತೆಂಗಿನ ತುರಿ: ಒಂದು ಲೋಟ

ಅಕ್ಕಿ: ಒಂದು ಲೋಟ
ತುಪ್ಪ: ೨ ಚಮಚ
ತೊಗರಿ ಬೇಳೆ: ಅರ್ಧ ಲೋಟ

ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ರಸ: ಎರಡು ಚಮಚ

ವಿಧಾನ

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಬೇಳೆ ಮತ್ತು ತರಕಾರಿಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ಮಸಾಲೆಗೆ ಹೇಳಿದ ಸಾಮಗ್ರಿಗಳನ್ನು ಎಣ್ಣೆಯಲ್ಲಿ ಹುರಿದು, ತೆಂಗಿನ ತುರಿಯ ಜತೆ ರುಬ್ಬಿ. ಸ್ವಲ್ಪ ನೀರು ಹಾಕಬೇಕು.
೪.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ ಕರಿದು ಇಟ್ಟುಕೊಳ್ಳಿ.ಇದಕ್ಕೆ ಬೇಯಿಸಿದ ತರಕಾರಿ, ಬೇಳೆ ಮತ್ತು ರುಬ್ಬಿಟ್ಟ ಮಿಶ್ರಣವನ್ನು ಸೇರಿಸಿ ಕಲಕಿ.
೫.ಸ್ವಲ್ಪ ಉಪ್ಪು ಹಾಕಿ ಕಲಕಿ.
೬.ದಪ್ಪನೆಯ ಹದಕ್ಕೆ ಬರುತ್ತಿದ್ದಂತೆ ಅನ್ನವನ್ನು ಸೇರಿಸಿ. ಇನ್ನೂ ಸ್ವಲ್ಪ ಉಪ್ಪು ಹಾಕಿ ಕಲಕಿ. ಇದಕ್ಕೆ ಹುಣಸೆ ರಸ ಸೇರಿಸಿ. ಬೇಕಿದ್ದರೆ ಸಣ್ಣ ತುಂಡು ಬೆಲ್ಲ ಹಾಕಬಹುದು.
೭.ಈಗ ಬಿಸಿ ಬೇಳೆ ಭಾತ್ ತಯಾರು.
೮.ಚಿಪ್ಸ್ ಅಥವಾ ಖಾರ ಬೂಂದಿ ಕಾಳು / ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಸವಿಯಿರಿ.


-----------------------------------------------
3.ಕಾಪ್ಸಿಕಮ್ ರೈಸ್ (ದೊಣ್ಣೆ ಮೆಣಸಿನ ಕಾಯಿ ಅನ್ನ)
--------------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬೇವಿನೆಲೆ: ೧೦ ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಕೊತ್ತಂಬರಿ ಕಾಳು: ಎರಡು ಚಮಚ
ನೆಲಕಡಲೆ: ಒಂದು ಹಿಡಿ
ಕೆಂಪು ಮೆಣಸು: ೩
ಜೀರಿಗೆ, ಸಾಸಿವೆ, ಉದ್ದು: ತಲಾ ಒಂದು ಚಮಚ

ದೊಣ್ಣೆ ಮೆಣಸು ಸಣ್ಣಗೆ ಹೆಚ್ಚಿದ್ದು: ೧ ಲೋಟ
ತುಪ್ಪ: ೨ ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ

ವಿಧಾನ:

೧.ಕೊತ್ತಂಬರಿ ಕಾಳು, ನೆಲಕಡಲೆ, ಕೆಂಪು ಮೆಣಸು, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಎಣ್ಣೆ ಹಾಕದೆ ಹುರಿಯಿರಿ. ಪರಿಮಳ ಬರುತ್ತಿದ್ದಂತೆ ಬೇವಿನ ಎಲೆ ಹಾಕಿ.
೨.ಹುರಿದ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ. ಈ ಪುಡಿಯನ್ನು ಡಬ್ಬದಲ್ಲಿ ಇಟ್ಟುಕೊಂಡರೆ, ದೊಣ್ಣೆ ಮೆಣಸಿನ ಅನ್ನಕ್ಕೆ ಬೇಕೆಂದಾಗ ಬಳಸಬಹುದು.
೩.ತುಪ್ಪವನ್ನು ಬಾಣಲೆಗೆ ಹಾಕಿ, ಸ್ವಲ್ಪ ಬಿಸಿಯಾಗುತ್ತಿದ್ದಂತೆ ಹೆಚ್ಚಿದ ದೊಣ್ಣೆ ಮೆಣಸಿನ ತುಂಡುಗಳನ್ನು ಹಾಕಿ, ಬಾಡಿಸಿ. ಬೇಕೆಂದರೆ ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳದಿಂದ ಮುಚ್ಚಿ.
೪.ದೊಣ್ಣೆ ಮೆಣಸು ಸರಿಯಾಗಿ ಬಾಡುತ್ತಿದ್ದಂತೆ, ಇದಕ್ಕೆ ರುಬ್ಬಿಟ್ಟ ಪುಡಿಯನ್ನು ಹಾಕಿ ಕಲಕಿ. ಉಪ್ಪು ಸೇರಿಸಿ. ೨-೩ ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
೫.ದೊಣ್ಣೆ ಮೆಣಸಿನ ಮಸಾಲೆಯ ಜತೆ ಅನ್ನ ಕಲಸಿ. ಸ್ವಲ್ಪ ಉಪ್ಪು, ನಿಂಬೆ ರಸ ಹಾಕಿ. ಕಲಕಿ.
೬.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೭.ದೊಣ್ಣೆ ಮೆಣಸಿನ ಅನ್ನ ತಯಾರು. ಇದನ್ನು ಸೌತೆಕಾಯಿ ಮೊಸರು ಗೊಜ್ಜಿನ ಜತೆ ಸವಿಯಿರಿ.


---------------------------------
4. ಸಬ್ಜಿಯೋಂಕಿ ತೆಹ್ರಿ
------------------------------------

ಇದು ಉತ್ತರ ಪ್ರದೇಶದ ಖಾದ್ಯ.

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೨ ಚಮಚ
ಜಜ್ಜಿದ ಬೆಳ್ಳುಳ್ಳಿ: ೬ ಎಸಳು
ಜಾಯಿಕಾಯಿ ಪುಡಿ, ಏಲಕ್ಕಿ ಪುಡಿ: ತಲಾ ಒಂದು ಚಮಚ
ಕಸೂರಿ ಮೇಥಿ: ೧ ಲೋಟ
ಹಸಿ ಮೆಣಸು: ೪
ತೆಳ್ಳನೆ ಹೆಚ್ಚಿದ ಶುಂಠಿ: ೨ ಚಮಚ
ಕ್ಯಾರ್‍ಎಟ್: ೨
ಬೀನ್ಸ್ : ೧೦
ಬಟಾಟೆ: ೨
ಹಸಿ ಬಟಾಣಿ: ಒಂದು ಹಿಡಿ
ತುಪ್ಪ: ೫ ಚಮಚ
ಮೊಸರು: ಅರ್ಧ ಲೋಟ
ಮೆಣಸಿನ ಹುಡಿ: ಒಂದು ಚಮಚ
ಅರಸಿನ: ಕಾಲು ಚಮಚ
ಹಾಲಿನ ಕೆನೆ: ಅರ್ಧ ಲೋಟ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಬಟಾಟೆ, ಕ್ಯಾರೆಟ್, ಬೀನ್ಸ್ ಇವುಗಳನ್ನು ೧ ಇಂಚು ಉದ್ದನೆಯ ಹೋಳುಗಳಾಗಿ ಹೆಚ್ಚಿಕೊಳ್ಳಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಕಸೂರಿ ಮೇಥಿ ಎಲೆಗಳನ್ನು ಹಾಕಿ ಕಲಕಿ.
೩.ಹೆಚ್ಚಿದ ತರಕಾರಿ, ಬಟಾಣಿ, ಉಪ್ಪು ಹಾಕಿ ಮಂದ ಉರಿಯಲ್ಲಿ ಸುಮಾರು ಐದು ನಿಮಿಷ ಕಲಕಿ.
೪.ಇದಕ್ಕೆ ಮೊಸರು, ಮೆಣಸಿನ ಹುಡಿ, ಅರಸಿನ ಹುಡಿ ಸೇರಿಸಿ. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು.
೫.ಸ್ವಲ್ಪ ಹೊತ್ತು ಹಾಗೇ ಕುದಿಸಿ.
೬.ಇದಕ್ಕೆ ಹೆಚ್ಚಿದ ಹಸಿ ಮೆಣಸು, ಏಲಕ್ಕಿ, ಜಾಯಿಕಾಯಿ ಹುಡಿ, ಸ್ವಲ್ಪ ನೀರು ಮತ್ತು ಅಕ್ಕಿಯನ್ನು ಸೇರಿಸಿ.
೭.ಪಾತ್ರೆಗೆ ಮುಚ್ಚಳ ಇಟ್ಟು ಸುಮಾರು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ.
೮.ಅನ್ನ ಬೆಂದಿದೆಯೆ ಇಲ್ಲವೇ ಪರೀಕ್ಷಿಸಿ. ಇಲ್ಲವೆಂದಾದಲ್ಲಿ ಇನ್ನೂ ಸ್ವಲ್ಪ ನೀರು ಚಿಮುಕಿಸಿ,ಬೇಯಿಸಿ.
೯.ಅನ್ನ ಸರಿಯಾಗಿ ಬೆಂದ ಮೇಲೆ, ಇದಕ್ಕೆ ಸ್ವಲ್ಪ ಉಪ್ಪು, ಹಾಲಿನ ಕೆನೆ ಹಾಕಿ ಕಲಕಿ.
೧೦.ಇದೀಗ ’ಸಬ್ಜಿಯೋಂಕಿ ತೆಹ್ರಿ’ ತಯಾರು. ಬಿಸಿ ಬಿಸಿ ಇರುವಾಗಲೇ ತಿನ್ನಿ.