ದಿನ ಬೆಳಗಾದರೆ ಸಾಕು,ಯಾವುದೇ ಚ್ಯಾನಲನ್ನು ಒತ್ತಿದರೂ ಸಾಮಾನ್ಯವಾಗಿ ಕಾಣಿಸುವ ಕಾರ್ಯಕ್ರಮ ’ರಿಯಾಲಿಟಿ ಶೋ’.ಸಂಗೀತ ಕ್ಷೇತ್ರಕ್ಕೆ ಇದು ಪ್ರೋತ್ಸಾಹವನ್ನು ನೀಡುತ್ತಿರುವಂತೆ ಮೇಲ್ನೊಟಕ್ಕೆ ಅನಿಸಿದರೂ, ಕೆಳಕಂಡ ಅಂಶಗಳು ಅದಕ್ಕೆ ವಿರುದ್ಧವಾದ ವಾದವನ್ನು ಪುಷ್ಟೀಕರಿಸುತ್ತವೆ.
೧.ಸಂಗೀತ ಸ್ಪರ್ಧೆಯನ್ನು ಒಂದು ರೀತಿಯ ಯುದ್ಧದಂತೆ ಬಿಂಬಿಸಲಾಗುತ್ತದೆ.ವೇದಿಕೆಯು ಸಮರಾಂಗಣ.ಅದಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಅಬ್ಬರ.ಭಯಭೀತರಾಗಿರುವ ಸ್ಪರ್ಧಿಗಳು!!
೨.ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ,ಮನೆಯ ಆರ್ಥಿಕ ಪರಿಸ್ಥಿತಿ,ಅವರ ಹೆತ್ತವರ/ಸಂಬಧಿಕರ ಆತಂಕ,ಹಾರೈಕೆ,ಸ್ಪರ್ಧಿಗಳ ಮಾನಸಿಕ ತುಮುಲಗಳ ಬಗ್ಗೆ ಕಾಮೆರ ಹಾಯಿಸಲಾಗುತ್ತದೆ.ಕ್ಯಾಮರಾದ ಕಣ್ಣ ಮುಂದೆಯೇ ತೀರ್ಪುಗಾರರ ವಾಗ್ವಿವಾದವೂ ನಡೆಯುತ್ತದೆ.ಕೆಲವೊಮ್ಮೆ ಸ್ಪರ್ಧಿಯ ಧಾರ್ಮಿಕ ನಂಬಿಕೆಗಳ ಚಿತ್ರೀಕರಣವನ್ನೂ ಪ್ರೇಕ್ಷಕರಿಗೆ ತೋರಿಸಲಾಗುತ್ತದೆ.ಇವೆಲ್ಲವೂ ಚ್ಯಾನಲ್ ನ ಟಿ.ಆರ್.ಪಿ.ಹೆಚ್ಚಿಸುವ ತಂತ್ರಗಳೆಂದು ಬೇರೆ ಹೇಳಬೇಕಾಗಿಲ್ಲ.
೩.ಸ್ಪರ್ಧೆಯಲ್ಲಿ ಖ್ಯಾತ ಹಾಡುಗಾರರು ತೀರ್ಪುಗಾರರಾಗಿ ಬಂದರೂ, ಫಲಿತಾಂಶ ತೀರ್ಮಾನವಾಗುವುದು ಎಸ್.ಎಮ್.ಎಸ್.ಮೂಲಕ.ಹೀಗಾಗಿ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರೂ ಮುಂದಿನ ಹಂತಗಳಿಗೆ ಹೋಗುವ ಅವಕಾಶದಿಂದ ವಂಚಿತರಾಗುತ್ತಾರೆ.
೪.ಹೊಸ ಚಲನಚಿತ್ರ ತೆರೆ ಕಾಣುವುದಿದ್ದಲ್ಲಿ,ಅದರ ನಟ/ನಟಿ/ನಿರ್ದೇಶಕರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ.ಹೊಸ ಚಿತ್ರಗಳು ಹಿಟ್ ಆಗುವಲ್ಲಿ ಇಂತಹ ಜಾಹೀರಾತು ತಂತ್ರಗಳು ಚಿತ್ರತಂಡಕ್ಕೆ ಅಗತ್ಯವೆನಿಸಿವೆ.
೫.ಸತತ ಸಾಧನೆ,ಸ್ವರ,ಲಯ,ತಾಳಗಳ ನಿರಂತರ ಅಭ್ಯಾಸದಿಂದ ಕರಗತವಾಗುವ ವಿದ್ಯೆ -ಸಂಗೀತ.ಇಂತಹ ರಿಯಾಲಿಟಿ ಶೊಗಳು ಜನರಲ್ಲಿ ಹಾಡಬೇಕೆಂಬ ಆಸೆ ಹುಟ್ಟಿಸುವುದು ನಿಜ.ಟಿ.ವಿ.ಯಲ್ಲಿ ತಮ್ಮ ಮಗ/ಮಗಳು ಹಾಡುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಡಿ.ವಿ.ಜಿ.ಯವರು ಹೇಳಿದಂತೆ ’ಮನ್ನಣೆಯ ದಾಹವೀ ಎಲ್ಲಕ್ಕಿಂತ ತೀಕ್ಷ್ಣತಮ!! ’. ಆದರೂ ಇಂತಹ ಸ್ಪರ್ಧೆಗಳು ಜನರಲ್ಲಿ ಕ್ಷಿಪ್ರ ಕಲಿಕೆಯ ಭ್ರಾಂತಿಯನ್ನು ಹುಟ್ಟಿಸುತ್ತವೆ.ನನ್ನ ಸಂಗೀತ ಟೀಚರು ಮೊನ್ನೆ ಹೀಗೇ ಮಾತಾಡುವಾಗ ಅಂದರು "ನನ್ನಲ್ಲಿ ಸಂಗೀತ ಕಲಿಯಲು ಬರುವ ಕೆಲವರದ್ದು ಈ ಪರಿಯ ಪ್ರಶ್ನೆ "ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" ಟೀಚರಂದರಂತೆ "ಸಂಗೀತವೇನೂ ಕ್ರೇಶ್ ಕೋರ್ಸ್ ಅಲ್ಲ..ಇಂತಿಷ್ಟು ದಿನದಲ್ಲಿ ಕಲಿಯಲು."
ಕೆಲವೆಡೆ ಇಂತಹ ಸ್ಪರ್ಧೆಗಳಿಗಾಗಿಯೇ ತರಬೇತಿ ನೀಡಲಾಗುತ್ತದೆ.ಸಂಗೀತದ ಕಲಿಕೆಗಿಂತಲೂ ಕೆಲವು ಹಾಡುಗಳನ್ನು ಹಾಡಲು ಅಭ್ಯಾಸ ಮಾಡಿಸಲಾಗುತ್ತದೆ. ಆದರೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಗಮನಾಹ್ರವಾಗಿ ಮುಂದೆ ಬರುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಹೀಗೆಂದು ಬರುವ ಎಲ್ಲರೂ ಇದೇ ರೀತಿ ಎಂದು ನಾನು ಹೇಳುವುದಿಲ್ಲ.ಬಲು ಸೊಗಸಾಗಿ ಹಾಡುವವರೂ ಇದ್ದಾರೆ. ಆದರೆ ರಿಯಾಲಿಟಿ ಶೊದ ಆಯ್ಕೆ ಪ್ರಕ್ರಿಯೆಯು ಎಸ್.ಎಮ್.ಎಸ್.ಮತ್ತು ಪ್ರಚಾರತಂತ್ರಗಳ ಮೇಲೆ ಅವಲಂಬಿತವಾಗಿರುವುದು ವಿಶಾದನೀಯ!!