ಹೌದು..ಮತ್ತೊಮ್ಮೆ ಕಣ್ಣುಜ್ಜಿಕೊಂಡೆ..ನಾನು ನೋಡುತ್ತಿರುವುದು ಕನಸೋ ಅಥವಾ ನಿಜವೋ ಎಂದು ಅರಿಯಲು ಕೊಂಚ ಸಮಯವೇ ಬೇಕಾಯಿತು. ಹೌದು..ನಾನು ಇಂಗ್ಲೆಂಡಿನಲ್ಲೇ ಇದ್ದೇನೆ.’ಮೊನೊಪಲಿ’ ಎಂಬ ಆಟದಲ್ಲಿ ಬರುವ ಬೀದಿಗಳು,ರೈಲ್ವೇ ನಿಲ್ದಾಣಗಳು ಇವೆಲ್ಲಾ ನನ್ನ ಕಣ್ಣ ಮುಂದೆಯೇ ಇವೆ!! ಸೊನ್ನೆ ಡಿಗ್ರಿಯಷ್ಟು ಕೊರೆಯುವ ಚಳಿಯಲ್ಲಿ ಟೊಪ್ಪಿ,ಕೈಗವಸು,ಶೂ,ಕೋಟು ಹಾಕಿಯೇ ಜನ ಓಡಾಡುತ್ತಿದ್ದಾರೆ.
ಬಹುಷ: ಇಂಗ್ಲೆಂಡಿನ ಬಗ್ಗೆ ಕೇಳಿದಷ್ಟು ,ಛಾಯಾಚಿತ್ರಗಳನ್ನು ನೋಡಿದಷ್ಟು ನಾನು ಬೇರಾವ ದೇಶದ ಬಗ್ಗೆಯೂ ಮಾಡಿಲ್ಲ.ನನ್ನ ಆಪ್ತ ವರ್ಗದ ಹಲವರು ಅಲ್ಲಿ ನೆಲೆಸಿಬಂದವರೋ, ನೆಲೆಸಿರುವವರೋ ಆಗಿರುವ ಕಾರಣ ಮತ್ತು ಅವರೆಲ್ಲರೂ ಇಂಗ್ಲೆಂಡಿನ ಪ್ರ್‍ಏಕ್ಷಣೀಯ ಸ್ಥಳಗಳ ಬಗ್ಗೆ,ಅಲ್ಲಿಯ ಜನಜೀವನದ ಬಗ್ಗೆ ವರ್ಣಿಸಿದಾಗ ನನಗೂ ಅಲ್ಲಿ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಮೂಡುತ್ತಿದ್ದದ್ದು ಸುಳ್ಳಲ್ಲ.
ಕಡೆಗೂ ನನ್ನ ಆಸೆ ಈಡೇರುವ ದಿನ ಬಂದೇ ಬಿಟ್ಟಿತು.ಕಂಪನಿ ಕೆಲಸದ ನಿಮಿತ್ತ ನನ್ನ ಇಂಗ್ಲೆಂಡ್ ಪ್ರವಾಸ ನಿಶ್ಚಯವಾಯಿತು.ಸ್ವಾಮಿ ಕಾರ್ಯ,ಸ್ವಕಾರ್ಯ ಎರಡನ್ನೂ ಒಟ್ಟಿಗೇ ಮಾಡುವ ಹಂಬಲ ನನ್ನದು.ಹಾಗಾಗಿ ಕಿರುಅವಧಿಯ ಪ್ರವಾಸದಲ್ಲೇ ಆಫ಼ೀಸು ಕೆಲಸದ ಜತೆಗೆ ಸಾಕಷ್ಟು ಪ್ರ್‍ಏಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಮತ್ತು ನನ್ನ ಆತ್ಮೀಯ ಸ್ನೇಹಿತೆಯೋರ್ವಳನ್ನು ಭೇಟಿಯಾಗುವ ಕಾರ್ಯಕ್ರಮಗಳನ್ನು ಯೋಜಿಸಿದೆ.
ಎರಡು ದಿನಗಳ ಬಿಡುವು ಮಾಡಿಕೊಂಡು ಲಂಡನ್ ಸುತ್ತಿದೆ.ಬಿಗ್ ಬೆನ್,ಟವರ್ ಬ್ರಿಡ್ಜ್,ಬಂಕಿಂಗ್ ಹಾಮ್ ಅರಮನೆ,ಲಂಡನ್ ಐ ,ಮೇಡಮ್ ಟುಸಾಟ್ಸ್ ಇವುಗಳನ್ನು ಸಂದರ್ಶಿಸಿದೆ.ಹತ್ತು ಹಲವು ಚರ್ಚುಗಳೂ,ಸುಂದರ ವಾಸ್ತುವಿನ್ಯಾಸದ ಕಟ್ಟಡಗಳೂ ನನ್ನ ಮನಸ್ಸನ್ನು ಸೆಳೆದವು.ಕ್ರಿಸ್ಮಸ್ ಗೆ ಈಗಾಗಲೇ ನಗರವು ಸಜ್ಜುಗೊಂಡಿತ್ತು.ಎಲ್ಲಿ ನೋಡಿದರೂ ಕ್ರಿಸ್ಮಸ್ ಟ್ರೀ ಅಲಂಕಾರ !! ಅಂಗಡಿಗಳೆಲ್ಲವೂ ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ!!
ಇಂಗ್ಲೆಂಡ್ ಗೆ ಹೋಗುವ ಮುನ್ನ ನನ್ನ ಮನಸ್ಸಲ್ಲಿ ಇದ್ದ ಕೊಂಚ ಗೊಂದಲ ಮೂಡಿಸಿದ್ದ ವಿಷಯಗಳೆಂದರೆ ೧)ವಿಪರೀತ ಚಳಿ :ಬೆಂಗಳೂರಿನ ೧೮-೨೦ ಡಿಗ್ರಿಗಳಷ್ಟು ತಾಪಮಾನದಲ್ಲೇ ಚಳಿ ಎಂದು ಗಟ್ಟಿ ಹೊದಿಕೆ ಹೊದ್ದು ಮಲಗುವ ನಾನು ,೦ ಡಿಗ್ರಿಯ ತಾಪಮಾನದಲ್ಲಿ ವಾಸಮಾಡುವುದು ಹೇಗೆ ಎಂದು. ಸಾಕಷ್ಟು ಬೆಚ್ಚನೆಯ ವಸ್ತ್ರಗಳು ಚಳಿಯಿಂದ ನನ್ನನ್ನು ರಕ್ಷಿಸಿಕೊಳ್ಳಲು ನೆರವಾದವು.ಹೋಟೆಲ್,ಕಛೇರಿ ಗಳಲ್ಲಿ ಹೀಟರ್ ಇದ್ದ ಕಾರಣ ಏನೂ ತೊಂದರೆ ಆಗಲಿಲ್ಲ. ೨) ಇನ್ನೊಂದು ವಿಷಯವೆಂದರೆ ಲಂಡನ್ ನ ಸಂಚಾರಿ ವ್ಯವಸ್ಥೆ. ಇಲ್ಲಿ ಟ್ಯೂಬ್ (ಭೂಮಿಯೊಳಗೆ ಚಲಿಸುವ ವಾಹನ),ಟ್ರೈನ್, ಬಸ್ಸು ಇವೆಲ್ಲವೂ ನನಗೆ ಕೊಂಚ ಹೆದರಿಕೆ ಹುಟ್ಟಿಸಿದ್ದವು.ನಾನು ಟ್ರೈನ್ ನಿಂದ ಹೊರಗೆ ಬರುವ ಮುಂಚೆಯೇ ಬಾಗಿಲು ಮುಚ್ಚಿಕೊಂಡರೆ ಏನು ಮಾಡಲಿ ? ನಕಾಶೆ ಓದುವಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ನನಗೆ ಟ್ಯೂಬ್ ನ ನಕಾಶೆಯನ್ನು ಓದಿ ಅದರಲ್ಲಿ ಸಂಚರಿಸಲಾದೀತೆ ಇತ್ಯಾದಿ ನನಗಿದ್ದ ಸಂಶಯಗಳು.ಆದರೆ ಅಲ್ಲಿ ಹೋದ ಮೇಲೆ ನನಗೆ ಅತೀವ ಆತ್ಮವಿಶ್ವಾಸ ಮೂಡಿ,ಲಂಡನ್ ನ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಗಳಲ್ಲೂ ಸಂಚಾರ ಮಾಡಿದೆ!! ನನಗೆ ಈಗಲೂ ಅದು ಹೇಗೆ ಸಾಧ್ಯವಾಯಿತು ಎಂದು ನಂಬಲಾಗುತ್ತಿಲ್ಲ!!
ನನ್ನ ಮುಂದಿನ ಭೇಟಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ. ಆಕ್ಸ್ ಫರ್ಡ್ ಎನ್ನುವುದು ಒಂದು ಪುಟ್ಟ ಊರು. ಊರು ತುಂಬಾ ಕಾಲೇಜುಗಳು. ಎಲ್ಲಿ ನೋಡಿದರೂ ವಿದ್ಯಾರ್ಥಿಗಳು.ಕಾಲೇಜು ಕಟ್ಟಡಗಳೆಲ್ಲವೂ ಹಳೆಯ ಕಾಲದ ವಾಸ್ತುವಿನ್ಯಾಸವನ್ನು ಹೊಂದಿದ್ದವು. ನನಗ್ಯಾಕೋ ನಾನೊಂದು ಬೇರೆಯೇ ಪ್ರಪಂಚಕ್ಕೆ ಬಂದಂತೆ ಅನಿಸಿತು. ಚಿಕ್ಕದಾಗಿ,ಚೊಕ್ಕದಾಗಿ ಇರುವ ಈ ಸುಂದರ ಊರು ನನ್ನನ್ನು ಬಹಳಷ್ಟು ಆಕರ್ಷಿಸಿತು.
ಮತ್ತೆ ಸ್ವಲ್ಪ ದಿನಗಳ ಕಾಲ ನಾನು ಕಚೇರಿ ಕೆಲಸದಲ್ಲಿ ಮಗ್ನಳಾದೆ.ನಾನು ವಾಸಮಾಡಿದ್ದ ಊರಿನ ಹೆಸರು ’ರೆಡ್ಡಿಂಗ್ ’. ಒಂದು ಪುಟ್ಟ ಊರು. ಅದೂ ಸಹ ಬಹಳ ಸುಂದರವಾಗಿತ್ತು. ನನಗೆ ಅದು ಕಲಾವಿದ ಬಿಡಿಸಿದ ಒಂದು ಚಂದದ ಚಿತ್ರದಂತೆ ಭಾಸವಾಗುತ್ತಿತ್ತು.
ಕೆಲವೊಂದು ಆಂಗ್ಲ ಭಾಷಾ ಚಲನಚಿತ್ರಗಳಲ್ಲಿ ನೋಡಿದ್ದ ಊರುಗಳಂತೆ...ಎಲ್ಲವೂ ಅಚ್ಚುಕಟ್ಟು..ಎಲ್ಲೆಡೆಯೂ ಸ್ವಚ್ಛತೆ...ಶಿಸ್ತು..ನನಗೇಕೋ ನಾನೊಂದು ಕನಸಿನ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು.ರೆಡ್ಡಿಂಗ್ ನಲ್ಲಿ ಇರುವ ’ಥೇಮ್ಸ್ ವ್ಯಾಲಿ ಪಾರ್ಕ್’ :ಥೇಮ್ಸ್ ನದಿಯ ದಂಡೆಯ ಮೇಲೆ ಇರುವ ಹಲವಾರು ಸಾಫ಼್ಟ್ ವೇರ್ ಕಂಪನಿಗಳ ಸಮೂಹ. ನನಗೆ ವಿಶಿಷ್ಟ ಎನಿಸಿದ್ದು : ಅಲ್ಲಿಯ ಕಟ್ಟಡಗಳು ಹೆಚ್ಚೆಂದರೆ ೩ ಮಹಡಿಗಳಷ್ಟೇ ಎತ್ತರ!!
ಕಛೇರಿ ಕೆಲಸದ ನಂತರ ನನ್ನ ಮುಂದಿನ ಪಯಣ ಬ್ಲಾಕ್ ಪೂಲ್ ನಲ್ಲಿರುವ ನನ್ನ ಸ್ನೇಹಿತೆಯ ಮನೆಗೆ. ರೆಡ್ಡಿಂಗ್ ನಿಂದ ಲಂಡನ್ ಗೆ ನನ್ನ ಲಗ್ಗೇಜುಗಳ ಜತೆ ಸಾಗಿದೆ.ಲಂಡನ್ ಸ್ಟೇಶನ್ ನಲ್ಲಿ ನನ್ನ ಸ್ನೇಹಿತೆಯ ಪತಿ ಕಾಯುತ್ತಿದ್ದರು.ನನ್ನ ಸ್ಯೂಟ್ ಕೇಸ್ ಗಳನ್ನು ಅವರಿಗೆ ವರ್ಗಾಯಿಸಿದೆ.. ನಾನೊಬ್ಬಳೇ ಲಂಡನ್ ಸುತ್ತುವಾಗ ಇದ್ದ ಆತಂಕ,ನಕಾಶೆಗಳನ್ನು ಓದುವ ಕೆಲಸ ಯಾವುದೂ ನನ್ನ ಜತೆಗಿರಲಿಲ್ಲ.ಪುಟ್ಟ ಬ್ಯಾಗ್ ಗಳನ್ನು ನಾನು ಹಿಡಿದುಕೊಂಡು ಅವರನ್ನು ಹಿಂಬಾಲಿಸಿದೆ. ದಿಕ್ಕು ಸೂಚನಾ ಫಲಕಗಳನ್ನು ಓದುವ ಗೋಜಿಗೂ ಹೋಗಲಿಲ್ಲ!! ನನ್ನ ಲಂಡನ್ ಪ್ರವಾಸದಲ್ಲಿ ನಿರಾತಂಕದಿಂದ ಇದ್ದ ಕ್ಷಣಗಳವು!!:)
ಲಂಡನ್-->ಪ್ರೆಸ್ಟನ್-->ಬ್ಲಾಕ್ ಪೂಲ್ ಗೆ ತಲುಪಿದೆ. ನನ್ನ ಸ್ನೇಹಿತೆ ಬಿಸಿಬೇಳೆ ಭಾತ್,ಅನ್ನ,ತಂಬುಳಿ,ಪಾಯಸ ತಯಾರಿಸಿ ನನಗಾಗಿ ಕಾಯುತ್ತಿದ್ದಳು. ಇಷ್ಟು ದಿನಗಳ ಪ್ರವಾಸದ ಸಮಯದಲ್ಲಿ ಬರೀ ತರಕಾರಿ,ಬ್ರ್‍ಎಡ್,ಪಿಜ಼ಾಗಳನ್ನೇ ಕಂಡ ನನಗೆ ಆಕೆ ತಯಾರಿಸಿದ ಖಾದ್ಯಪದಾರ್ಥಗಳನ್ನು ಕಂಡು ಬಾಯಿಯಲ್ಲಿ ನೀರೂರಿತು :) ನನ್ನ ಗೆಳತಿಗೆ ನಾನು ’ಬೆಸ್ಟ್ ಕುಕ್ ’ ಎಂಬ ಬಿರುದನ್ನು ಘೋಷಿಸಿದೆ. ಅಷ್ಟೊಂದು ರುಚಿಕರವಾಗಿ ಅಡುಗೆ ತಯಾರಿಸಿದ್ದಳು!!ನನಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು!!
ಮರುದಿನ ನಾವು ಮಾಂಚೆಸ್ಟರ್ ನ ಶೋಪಿಂಗ್ ಸೆಂಟರ್ ಗೆ ಹೋದೆವು. ಟ್ರಾಫರ್ಡ್ ಸ್ಕ್ವಾರ್ ಎನ್ನುವುದು ಅದರ ಹೆಸರು. ಇಡೀ ದಿನ ಅಲ್ಲಿ ಸುತ್ತಾಡಿ ಬಂದೆವು. ನನ್ನ ಪ್ರವಾಸದಲ್ಲಿ ನಾನು ಬಹಳಷ್ಟು ಖುಶಿ ಪಟ್ಟ ಸ್ಥಳ ’ಲೇಕ್ ಡಿಸ್ಟ್ರಿಕ್ಟ್. ನಾನು ಇಷ್ಟರವರೆಗೆ ಹಿಮ ಕವಿದ ಪ್ರದೇಶವನ್ನು ಕಂಡಿರಲಿಲ್ಲ. ಸುತ್ತಮುತ್ತಲೂ ಹಿಮದ ಚಾದರ ಹರಡಿದರೆ ಅದು ಹೇಗೆ ಕಂಡೀತೆಂದು ಛಾಯಾಚಿತ್ರಗಳಲ್ಲಿ ಮಾತ್ರ ಕಂಡಿದ್ದೆ. ಹಿಮವನ್ನು ನನ್ನ ಕಣ್ಣಾರೆ ಕಂಡಾಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟು ಚಳಿ ಕೊರೆಯುತ್ತಿದ್ದರೂ ಹಿಮವನ್ನು ಕೈಯಲ್ಲಿ ಹಿಡಿದುಕೊಂಡು ಛಾಯಾಚಿತ್ರ ತೆಗೆದುಕೊಳ್ಳಲು ಮರೆಯಲಿಲ್ಲ.ನಾನು ಅತೀವ ಹರ್ಷಿಸಿದ ಸಮಯ ಅದು!!
ಲೇಕ್ ಡಿಸ್ಟ್ರಿಕ್ಟ್ ಹೆಸರೇ ಸೂಚಿಸುವಂತೆ ಅನೇಕ ಸರೋವರಗಳನ್ನು ಹೊಂದಿರುವ ಊರು. ಹಿಮದ ಹೊದಿಕೆ ಹೊದ್ದಿರುವ ,ಚಂದದ ಚಿತ್ರ ಅದು.ಜನಸಂಖ್ಯೆಯಂತೂ ತೀರಾ ಕಡಿಮೆ.ಚಳಿಗೆ ಇಡೀ ಊರೇ ನಿದ್ದೆಯಲ್ಲಿರುವಂತೆ ಕಾಣುತ್ತದೆ.ಅಲ್ಲಿಯ ಸೌಂದರ್ಯವನ್ನು ಬಣ್ಣಿಸಲು ನನ್ನ ಲೇಖನಿಗೆ ಶಕ್ತಿ ಸಾಲದು ಎನಿಸುತ್ತಿದೆ. ಅಷ್ಟೊಂದು ಸೊಗಸು.
ಒಟ್ಟಿನಲ್ಲಿ ನನ್ನ ಇಂಗ್ಲೆಂಡ್ ಪ್ರವಾಸವು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "short,sweet and cold "!! :)