Pages

Sunday, April 20, 2008

ತೊಂಡೆಕಾಯಿ ,ಗೋಡಂಬಿ ಪಲ್ಯ



ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.

ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.

Sunday, April 13, 2008

ಉದರ ನಿಮಿತ್ತಂ ಬಹುಕೃತ ಪಾಕಂ


ಅದೊಂದು ಕಾಲವಿತ್ತು. ನನಗೆ ಅನ್ನ ಸಾರು ಮಾಡುವುದಿರಲಿ ನೀರು ಬಿಸಿ ಮಾಡಲು ಸಹ ಬರುತ್ತಿರಲಿಲ್ಲ! ವಿದ್ಯಾಭ್ಯಾಸದ ಹೆಚ್ಚಿನ ಸಮಯವನ್ನು ಹಾಸ್ಟೆಲ್ ವಾಸದಲ್ಲಿ ಕಳೆದುದರಿಂದಲೊ ಏನೊ, ಮನೆಗೆ ಹೋದಾಗಲೂ ಅಡುಗೆ ಮಾಡುವ ಅವಶ್ಯಕತೆ ಇಲ್ಲದಿದ್ದುದರಿಂದಲೊ ಏನೊ, ನನ್ನ ಗಮನ ಅಡುಗೆಮನೆಯತ್ತ (ಐ ಮೀನ್, ಅಡುಗೆ ಮಾಡಲಿಕ್ಕೆ) ಹರಿದದ್ದೇ ಇಲ್ಲ! ತಿನ್ನಲಿಕ್ಕಾದರೆ ರೆಡಿ ಇದ್ದೇನಲ್ಲ... ದೊಡ್ಡ ಬಟ್ಟಲಮ್ಮ ದೊಡ್ಡ ಬಟ್ಟಲು!

ನನ್ನ ಇಂಜನಿಯರಿಂಗ್ ಶಿಕ್ಷಣ ಮುಗಿದು, ಮದುವೆಯಾದ ಮೇಲೆ ಅಡುಗೆ ಕಲಿಯುವುದು ಅನಿವಾರ್ಯವಾಯಿತು. ಆಗ ಶುರುವಾಯಿತು ನೋಡಿ... "ಕೆಲವಂ ಬಲ್ಲವರಿಂದ ಕಲ್ತು... ಕೆಲವಂ ಶಾಸ್ತ್ರಗಳಮ್ ಓದುತಲಿ... ಕೆಲವಂ ದೂರದರ್ಶವಂ ನೋಡುತಲಿ..." ಅಡುಗೆಮನೆಯಲ್ಲಿ ನನ್ನ ನಿತ್ಯ ಪ್ರಯೋಗಗಳು!! ನನ್ನ ಬಡಪಾಯಿ ಗಂಡ (ತುಂಬ ಪ್ರೀತಿಸ್ತಾರೆ ಕಣ್ರೀ ನನ್ನನ್ನು!) ನನ್ನೀ ಪ್ರಯೋಗಗಳ ಗಿನ್ನಿ ಪಿಗ್ ಎಂದು ಬೇರೆ ಹೇಳಬೇಕಿಲ್ಲ ತಾನೆ?

ನನ್ನ ಪಾಕಪ್ರಾವೀಣ್ಯವನ್ನು ದಾಖಲೆಯಾಗಿರಿಸುವುದಕ್ಕಾಗಿ ನನ್ನ ಪಾಕಕಲಾ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಆ ಚಿತ್ರಗಳದೊಂದು "ಕೊಲಾಜ್" ಮಾಡಿದ್ದೇನೆ. ಅದಕ್ಕೆ "ಉದರ ನಿಮಿತ್ತಂ ಬಹುಕೃತ ಪಾಕಂ" ಎಂಬ ಟೈಟಲ್ ಕೊಟ್ಟು ನಿಮಗೀಗ ಆ ಚಿತ್ರಗಳನ್ನಿಲ್ಲಿ ತೋರಿಸುತ್ತಿದ್ದೇನೆ.

Thursday, April 10, 2008

ಬ್ರಾಹ್ಮಿ ಎಲೆಯ ತಂಬುಳಿ



ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.