Pages

Saturday, June 2, 2007

ಮಳೆಯಲ್ಲಿ ನೆನೆದದ್ದು...

ಕಳೆದ ಸಲ ಊರಿಗೆ ಹೋಗಿದ್ದಾಗ,ನನ್ನನ್ನು ಕಂಡು ತಂಗಿ 'ಡ್ರಮ್ಮು' ಥರ ಆಗಿದ್ದಿ ಅಂತ ಹೇಳಿದ್ದು , ನಾನು ವಾಕಿಂಗ್ ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಪ್ರೇರೆಪಿಸಿತು.ಆಫೀಸಿನಿಂದ ನನ್ನ ಮನೆಗೆ ಇರುವ ಸುಮಾರು ಎರಡುವರೆ ಕಿ.ಮೀ. ದೂರ ನಡೆಯುತ್ತಾ ಬಂದರೆ ,ಆಟೊವಾಲಾರ ನಖರಾಗಳನ್ನು ಕೇಳಿಸಿಕೊಳ್ಳುವುದೂ ಬೇಡಾ,ಆರೋಗ್ಯಕ್ಕೂ ಒಳ್ಳೆಯದು, ಮೇಲಾಗಿ ಡ್ರಮ್ಮಿನಿಂದ ಸ್ಲಿಮ್ಮಿಗೆ ಇಳಿಯಬಹುದೇನೂ ಎಂಬ ದೂರಾಲೋಚನೆ..
ಒಂದು ಕಲ್ಲಿಗೆ ಮೂರು ಹಕ್ಕಿ!!

ಸರಿ, ಇವತ್ತು ನಡೆಯುತ್ತಾ ಬರುತ್ತಿದ್ದೆ.ಅಷ್ಟರಲ್ಲಿ ತುಂತುರು ಮಳೆ ಬೀಳಲಾರಂಭಿಸಿತು..ಬಿಸಿಲಿನ ಬೇಗೆಗೆ ಬಳಲಿ ಬೆಂಡಾದ ಬೆಂಗಳೂರಿಗೆ ಅಮೃತ ಸಿಂಚನ ನೀಡುತಿದೆಯೋ ಎನಿಸತೊಡಗಿತು.ಮಳೆದೇವರು ಒಬ್ಬರೇ ಬರಲಿಲ್ಲ..ಸಿಡಿಲು, ಗುಡುಗುಗಳೆಂಬ ಫೊಟೊಗ್ರಾಫರ್,ವಾದ್ಯಗಾರರ ಜತೆಯೇ ಬಂದಿಳಿದರು.ನನ್ನ ಹತ್ತಿರ ಕೊಡೆ ಇರಲಿಲ್ಲ. ಹಾಗಾಗಿ ಹತ್ತಿರದಲ್ಲೇ ಇದ್ದ ಅಂಗಡಿಯ ಬಳಿ ಹೋಗಿ ,ಮಳೆ ನೋಡುತ್ತಾ ನಿಂತೆ..

ಅಚಾನಕ್ಕಾಗಿ ಸುರಿದ ಮಳೆ ನನ್ನಲ್ಲಿ ಬಾಲ್ಯದ ನೆನಪುಗಳನ್ನು ಹಸಿರಾಗಿಸಿತು..ನಾನು ಹುಟ್ಟಿ ಬೆಳೆದದ್ದು ಮಳೆಗಾಲದ ಸಮಯದಲ್ಲಿ ದಿನದ ಹೆಚ್ಚಿನ ಭಾಗ ಮಳೆ ಸುರಿಯುವ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ.ಮೇ ತಿಂಗಳು ಕೊನೆಯಾಗುತ್ತಿದ್ದಂತೆ ,ಧುತ್ತನೆ ಪ್ರತ್ಯಕ್ಷವಾಗುತ್ತಿದ್ದ ಮಳೆರಾಯನ ವೇಳಾಪಟ್ಟಿ ನನ್ನಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತಿತ್ತು.ಮೊದಲ ಮಳೆ ಬೀಳುವಾಗ ಉಂಟಾಗುವ ಮಣ್ಣಿನ ವಾಸನೆ ...ವ್ಹಾವ್ಹ್!! ಎಷ್ಟೊಂದು ಮಧುರ!ಆಲಿಕಲ್ಲು ಬಿದ್ದರಂತೂ ಅದನ್ನು ಹೆಕ್ಕಿ ತಿನ್ನುವ ತನಕ ಸಮಾಧಾನವಿಲ್ಲ..

ಜೂನ್ ತಿಂಗಳು ಶಾಲಾರಂಭ..ಹೊಸ ಪುಸ್ತಕ, ಹೊಸ ಬ್ಯಾಗಿನ ಪರಿಮಳ.ಬ್ಯಾಗ್, ಬುತ್ತಿ,ಛತ್ರಿ ಹಿಡಿದು ಶಾಲೆಗೆ ಹೊರಡುವುದೆಂದರೆ ಎಂಥಹಾ ಸಂಭ್ರಮ. ಛತ್ರಿ ಮೇಲೆ ಕಸೂತಿಯಲ್ಲಿ ಹೆಸರು ಬರೆಯುವ ತವಕ. ದಾರಿಯಲ್ಲಿ ಸಿಗುವ ಒರತೆಯಲ್ಲಿ ಕಾಲಾಡಿಸುತ್ತ,ಓರಗೆಯವರೊಂದಿಗೆ ಪಟ್ಟಾಂಗ ಹೊಡೆಯುತ್ತಾ ಸಾಗುತ್ತಿದ್ದೆವು.ಪುಸ್ತಕಗಳು ಒದ್ದೆಯಾಗಬಾರದೆಂದು ಅವುಗಳನ್ನು ಪ್ಲಾಸ್ಟಿಕ್ ಕವರ್ ನೊಳಗೆ ಇಳಿಬಿಟ್ಟು, ಮತ್ತೆ ಬ್ಯಾಗಿನೊಳಗಿರಿಸಿಕೊಳ್ಳುತ್ತಿದ್ದೆವು.ದಾರಿಯಲ್ಲಿ ಸಿಗುವ ಪುಟ್ಟ ಕಾಲುವೆಯಲ್ಲಿ ಕೆಲವೊಮ್ಮೆ ಕಾಗದದ ದೋಣಿ ತೇಲಿಸಿ, 'ದೋಣೆ ಸಾಗಲಿ' ಹಾಡಿಗೆ ದನಿಯಾಗುತ್ತಿದ್ದೆವು.

ನಮ್ಮೂರಿನ ಗುಂಡ್ಯ ಹೊಳೆ ಮಳೆಗಾಲದಲ್ಲಿ ಭಾರೀ ಸುದ್ದಿ ಮಾಡುತ್ತಿತ್ತು.ಉಳಿದೆಲ್ಲಾ ಸಮಯದಲ್ಲಿ ಕೃಷಿ ಭೂಮಿಗೆ ನೀರೊದಗಿಸುತ್ತಾ ತೆಪ್ಪಗೆ ಹರಿಯುತ್ತಿದ್ದ ನದಿ, ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಹರಿಯುತ್ತಿತ್ತು. ಅದಕ್ಕೆ ಕಟ್ಟಿರುವ ಸೇತುವೆಯ ಮೇಲೆಲ್ಲಾ ನೀರು ಉಕ್ಕಿ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿತ್ತು.ಸೇತುವೆ ಮೇಲೆ ನೀರು ಉಕ್ಕಿದಾಗಲೂ ವಾಹನ ಚಲಾಯಿಸಹೊರಟ ಮೊಂಡು ಧೈರ್ಯದವರನ್ನು ಬಲಿ ತೆಗೆದುಕೊಳ್ಳುತ್ತಿತ್ತು.ಸೇತುವೆ ಮೇಲೆ ನೀರುಕ್ಕಿದಾಗ 'ಸಂಕ block ಅಂತೆ' ಅಂತ ಜನ ಮಾತಾಡಿಕೊಳ್ಳುತ್ತಿದ್ದರು.ಅದನ್ನು ನೋಡಲು ನಮಗೆ ಭಾರೀ ಕುತೂಹಲ.ಹೇಗಾದರೂ ಮಾಡಿ ಹಿರಿಯರ ಅನುಮತಿ ಪಡೆದು ನೋಡಿ ಬರುತ್ತಿದ್ದೆವು.ಅದರ ಎರಡೂ ಬದಿಯಲ್ಲಿ ಕಾವಲು ಕಾಯುತ್ತಿದ್ದ ಪೋಲೀಸರನ್ನು ಕಂಡಾಗ ಒಂಥರಾ ಭಯ ನಮಗೆಲ್ಲ!!

ಮಳೆಗಾಲದಲ್ಲಿ ಬಸ್ಸು ಹತ್ತುವುದೆಂದರೆ ಒಂದು ಸಾಹಸ.ಎಲ್ಲರ ಅರೆತೆರೆದ ಕೊಡೆಗಳು..ಬಸ್ಸು ಹತ್ತಬೇಕು, ನಾವೂ ಒದ್ದೆಯಾಗಬಾರದು..ಹಾವೂ ಸಾಯಬಾರದು ಕೋಲೂ ಮುರಿಯಬಾರದು.ಆಗಲೇ ತುಂಬಿ ತುಳುಕುತ್ತಿರುವ ಬಸ್ಸಿಗೆ ಕಂಡಕ್ಟರು ರೈಟ್ ಹೇಳುವ ಮುನ್ನ ಹತ್ತಬೇಕು.ಮೂರೇ ಬಸ್ಸುಗಳಿದ್ದ ಆ ಕಾಲದಲ್ಲಿ ,ಸಿಕ್ಕಿದ ಬಸ್ಸಿಗೆ ಹತ್ತಿ, ಗುರಿ ಸೇರುವ ಆತುರ.

ಅಂತೂ ಇಂತೂ ಬಸ್ಸು ಹತ್ತಿದ್ದಾಯ್ತು.ತೊಯ್ದ ಡ್ರೆಸ್ಸು,ಮೈ,ಮಣಭಾರದ ಚೀಲ,ನೀರು ತೊಟ್ಟಿಕ್ಕುವ ಕೊಡೆ,ಅತ್ತಿತ್ತ ಅಲ್ಲಾಡಲೂ ಜಾಗವಿಲ್ಲ ಬಸ್ಸಿನೊಳಗೆ.
ಕಂಡಕ್ಟರನಂತೂ ದೂರದಿಂದಲೇ ಪಾಸನ್ನು ಕೇಳುತ್ತಿದ್ದ.ಎಷ್ಟೋ ಕೈಗಳನ್ನು ದಾಟಿ ಪಾಸ್ ಆತನ ದರ್ಶನ ಪಡೆಯುತ್ತಿತ್ತು.

ಇವೆಲ್ಲದರ ಮಧ್ಯೆ ಯಾವುದಾದರೂ ಸೀಟ್ ಖಾಲಿಯಾಗುತ್ತದೆ ಎಂದಾದರೆ ,ಅದನ್ನು ಗಬಕ್ಕನೆ ಆವರಿಸುವ ಪರಿಯನ್ನು ನೀವು ನೋಡಿದರೆ,ಓಹ್! ಸೀಟಿಗಾಗಿ ಜನ ಎಷ್ಟೊಂದು ಪರದಾಡುತ್ತಾರೆ ಎಂದು ಅನಿಸದಿರದು!!

ಇಷ್ಟೆಲ್ಲಾ ಕಷ್ಟಪಟ್ಟು ಶಾಲೆಗೆ ಹೋದಾಗ ಕೆಲವೊಮ್ಮೆ ವಿಪರೀತ ಮಳೆಯೆಂದು ಶಾಲೆಗೆ ರಜೆ ಘೋಷಣೆ ಆಗುತ್ತಿದ್ದದ್ದೂ ಉಂಟು.ಆಗೆಲ್ಲ್ಲಾ ನನಗೆ ತೀರಾ ನಿರಾಶೆಯಾಗುತ್ತಿತ್ತು
ಮಳೆಗಾಲದಲ್ಲಿ ತೋಟಕ್ಕೆ ಮದ್ದು ಬಿಡುವ ಸಮಯ.ಮೈಲುತುತ್ತು, ಸುಣ್ಣದ ಮಿಶ್ರಣದ ನೀಲಿ ಬಣ್ಣದ ದ್ರಾವಣ ನೋಡಲು ಭಾರೀ ಚಂದ.ಮಳೆಯ ಕಾರಣದಿಂದ ಎರಡು ಮೂರು ದಿನಗಳಲ್ಲಿ ಮುಗಿಯಬೇಕಾದ ಕೆಲಸ ಹದಿನೈದು-ಇಪ್ಪತ್ತು ದಿನಗಳನ್ನು ತೆಗೆದುಕೊಳ್ಳುತ್ತಿದ್ದದ್ದೂ ಉಂಟು.

ಹಪ್ಪಳ ,ಸಾಂತಾಣಿ(ಹಲಸಿನ ಬೀಜ),ಹುಣಿಸೇಬೀಜ,ಸುಟ್ಟ ಕೊಬ್ಬರಿ ಇವು ನಮ್ಮ ಬಾಯಿಚಪಲಕ್ಕೆ ಗುರಿಯಾಗುತ್ತಿದ್ದವು.ಹಲಸಿನ ಹಪ್ಪಳ,ಹೊರಗಡೆ ಮಳೆಯ ಸಪ್ಪಳ,ಕವಿದ ಕಾರ್ಗತ್ತಲು--ಸ್ವರ್ಗಕ್ಕೆ ಮೂರೇ ಗೇಣು!!

ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಅಮ್ಮ ಪಡುತ್ತಿದ್ದ ಪಾಡು ಹೇಳತೀರದು.ಒಲೆಯ ಹತ್ತಿರದ ತಂತಿಯಲ್ಲಿ ಬಟ್ಟೆ ಹಾಕಿ, ಆಗಾಗ್ಗೆ ಅದನ್ನು ತಿರುವಿ,ಶಾಲೆಗೆ ಹೋಗುವಶ್ಟರಲ್ಲಿ ಒಣಗಿದ ಬಟ್ಟೆ ಸಿದ್ಧವಾಗಿರುತ್ತಿತ್ತು.ಸಂಜೆ ಶಾಲೆಯಿಂದ ಬಂದೊಡನೆ ಅಮ್ಮ ಬೆಚ್ಚಗಿನ ಹಾಲು ಕುಡಿಯಲು ಕೊಡುತ್ತಿದ್ದಳು.ಮಳೆಯಿಂದಾಗಿ ಬಸ್ಸು ತಡವಾದರೆ ಅಪ್ಪ,ಅಮ್ಮ ಇಬ್ಬರಲ್ಲೂ ಮೂಡುತ್ತಿದ್ದ ಆತಂಕ ನನ್ನನ್ನು ಕಂಡೊಡನೆ ದೂರವಾಗುತ್ತಿತ್ತು.

ಈಗಲೂ ಅಷ್ಟೆ..ಮಳೆ ಎಂದರೆ ನನಗೆ ನೆನಪಾಗುವುದು ,ಸುತ್ತಲೂ ಕತ್ತಲು ಆವರಿಸಿ,ಧೊ ಧೋ ಎಂದು ಸುರಿಯುವ ನಮ್ಮೂರಿನ ಮಳೆ.ಮಳೆಯ ಸದ್ದಿಗೆ,ಅದರ ಪರಿಮಳಕ್ಕೆ, ಅದು ಇಳೆಯ ಮೇಲೆ ಮೊಡಿಸುವ ನವ ಚೈತನ್ಯಕ್ಕೆ,ಅದರ ಸೌಂದರ್ಯಕ್ಕೆ ,ಅದರ ಗಾಂಭೀರ್ಯಕ್ಕೆ ನಾನು ತಲೆ ಬಾಗುತ್ತೇನೆ.
ಮಳೆ ಮನೆಯಂಗಳದಲ್ಲಿ ಸೃಷ್ಟಿಸುತ್ತಿದ್ದ ಪುಟ್ಟ ಒರತೆ, ಅದರಲ್ಲಿ ಹುಟ್ಟಿಕೊಳ್ಳುವ ಪುಟ್ಟ ಜಲತರಗಳು,ಮಳೆಗಾಲದ ನೀರವ ರಾತ್ರಿಯಲ್ಲಿ ( ಕರೆಂಟೂ ಇಲ್ಲ ) ಆಗೊಮ್ಮೆ ಈಗೊಮ್ಮೆ ಕೇಳುವ ಕಪ್ಪೆಗಳ ವಟಗುಟ್ಟುವಿಕೆ,ಮಳೆ ಬಿದ್ದೊಡನೆ ಪಲ್ಲವಿಸುವ ಕೆಲವು ಹೂವುಗಳು,ಕಾಡಿನ ದಾರಿಯಲ್ಲಿ ಝರಿಯ ಝುಳು ಝುಳು ನಿನಾದ..ಎಷ್ಟು ಚಂದ !!

ವಿಪರೀತ ಮಳೆಯಿಂದ ಬೆಳೆಗೆ ಹಾನಿಯಾದಾಗಲೂ, ಟಿ.ವಿ., ಪೋನ್ ಹಾಳಾದಾಗಲೂ , ಜನರನ್ನು ಬಲಿ ತೆಗೆದುಕೊಂಡಾಗಲೂ ನಾನು ಅದರ ರೌದ್ರ ಶಕ್ತಿಗೆ ಬೆಚ್ಚಿದ್ದೂ ಇದೆ.

ನನ್ನ ಮನಸ್ಸಿಡೀ ನಾನು ಬಾಲ್ಯದಲ್ಲಿ ಕಂಡ ಮಳೆಯನ್ನು ಮೆಲುಕು ಹಾಕುತ್ತಿತ್ತು.ಜೋರಾಗಿ ಒಮ್ಮೆ ಗುಡುಗಿನ ಸದ್ದು ಕೇಳಿಸಿತು.ಒಹ್!! ನಾನು ಬೆಂಗಳೂರಿನಲ್ಲಿದ್ದೇನೆ..ಮಳೆನೀರು ರಸ್ತೆಯಲ್ಲಿ ಶೇಖರವಾಗಿ, ಕೊಚ್ಚೆಯ ನೀರೂ ಸೇರಿಕೊಂಡು ಹರಿಯುತ್ತಿದೆ.ವಾಹನಗಳು ಸಾಲು ಸಾಲಾಗಿ ಮುಂದೆ ಸಾಗಲು ಹವಣಿಸುತ್ತಿವೆ.

ಮಳೆ ಸ್ವಲ್ಪ ನಿಧಾನವಾಗತೊಡಗಿತ್ತು.ಮತ್ತೆ ನಡೆಯತೊಡಗಿದೆ.ಯಾರದ್ದೊ ವಾಹನ ಕೊಚ್ಚೆ ನೀರನ್ನು ನನ್ನ ಮೇಲೆ ಸಿಡಿಸಿತು..ಮನೆಗೆ ಹೋಗಿ, ಸ್ನಾನ ಮಾಡಿ, ಅಡಿಗೆಯಾಗಬೇಕು..ತರಕಾರಿ ಏನೂ ತಂದಿಲ್ಲ..ಇವತ್ತಿಗೆ ಸಾರು ಸಾಕು..ಜತೆಗೆ ಅಮ್ಮ ಕೊಟ್ಟ ಹಪ್ಪಳ ಇದೆ..ಅಂತ ಯೋಚಿಸುತ್ತಾ ಮನೆಗೆ ಬಂದೆ..

ಈ ಲೇಖನ ದಾಟ್ಸ್ ಕನ್ನಡಲ್ಲ್ಲಿ ಪ್ರಕಟವಾಗಿದೆ..