ಕೈಲಾಸ ಮಾನಸ ಸರೋವರ ಯಾತ್ರೆಯ ನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದರೆ ಶ್ರದ್ಧಾಳುಗಳಿಗೆ ಅದು ದೇವರ ವಾಸಸ್ಥಾನ ,ಪ್ರಕೃತಿಯ ಆರಾಧಕರಿಗೆ ಸೌಂದರ್ಯದ ಖಜಾನೆ, ಯಾತ್ರಿಕರಿಗೆ ಅನಿಶ್ಚಿತತೆಗಳ ಸರಮಾಲೆ ಎಂದೇ ಹೇಳಬಹುದು . ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ ,ಭೂಕುಸಿತ ,ಚೀನಾ ಸರ್ಕಾರದ ನೀತಿ ನಿಯಮಗಳು ,ಆರೋಗ್ಯದ ಲ್ಲಿ ಉಂಟಾಗಬಹುದಾದ ಏರುಪೇರು,ಆಮ್ಲಜನಕದ ಕೊರತೆ ,ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿಗಳಷ್ಟು ಎತ್ತರ ಇವೆಲ್ಲವೂ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಅತ್ಯಂತ ಕಠಿಣವಾಗಿಸುತ್ತವೆ .ಹಾಗಾಗಿ ಇದಕ್ಕೆ ಬಹಳ ಹೆಚ್ಚಿನ ದೈಹಿಕ ಹಾಗೂ ಮಾನಸಿಕ ದೃಢತೆ ಅತ್ಯಗತ್ಯ.
ನನ್ನ ಟ್ರೆ ಕ್ಕಿಂಗ್ ಸ್ನೇಹಿತೆಯೋರ್ವರು ಕಳೆದ ಫೆಬ್ರವರಿಯಲ್ಲಿ (2019) ಕೈಲಾಸ ಯಾತ್ರೆಯ ತಯಾರಿಯಲ್ಲಿದ್ದೇನೆ ಎಂದು ಹೇಳಿದರು. ನಾನೂ ಆಕೆಯೂ ಜತೆಯಾಗಿ ಪ್ರವಾಸ ಮಾಡುವುದೆಂದು ನಿರ್ಧರಿಸಿದೆವು. ಪ್ರತಿ ವರ್ಷವೂ ಭಾರತ ಸರಕಾರವು ಈ ಯಾತ್ರೆಯನ್ನು ಆಯೋಜಿಸುತ್ತದೆ. ಇದು ಸುಮಾರು ೨೧ ದಿನಗಳದ್ದು. ಖಾಸಗಿ ಪ್ರವಾಸ ಆಯೋಜಕರು ಕೂಡ ಈ ಯಾತ್ರೆಯನ್ನು ಆಯೋಜಿಸುತ್ತಾರೆ .ಇದು ಸುಮಾರು ೧೪ ದಿನಗಳದ್ದು. ನಾವು ಖಟ್ಮಂಡುವಿನಿಂದ ಹೊರಡುವ ಖಾಸಗಿ ಪ್ರವಾಸ ಆಯೋಜಕರ ಯಾತ್ರೆಗೆ ಹೆಸರು ನೋಂದಾಯಿಸಿದೆವು.
ಪ್ರವಾಸಕ್ಕೆ ಹೊರಡುವ ಮುನ್ನ ಪೂರ್ವ ತಯಾರಿ ಮಾಡುವುದಾದರೆ -ಪ್ರಾಣಾಯಾಮ ,ದೈಹಿಕ ಕಸರತ್ತು, ಯೋಗ ,ವಾಕಿಂಗ್ ಇತ್ಯಾದಿಗಳನ್ನು ಸುಮಾರು ಮೂರು ನಾಲ್ಕು ತಿಂಗಳ ಹಿಂದೆಯೇ ಶುರು ಮಾಡುವುದು ಸೂಕ್ತ .ಇಷ್ಟೇ ಅಲ್ಲದೆ ಒಂದಿಷ್ಟು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಕುಟುಂಬದ ವೈದ್ಯರ ಸಲಹೆ ಮತ್ತು ಅವರ ಒಪ್ಪಿಗೆ ಪಡೆಯಬೇಕು.
ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ತಲುಪಿದೆ .ಮುಂಬೈಯಿಂದ ಬಂದ ನನ್ನ ಸ್ನೇಹಿತೆ ದೆಹಲಿಯಿಂದ ನನ್ನ ಜೊತೆಯಾದರು. ಅಲ್ಲಿಂದ ಖಟ್ಮಂಡುವಿಗೆ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸಿದೆವು. ನಮ್ಮ ತಂಡದಲ್ಲಿ ಒಟ್ಟು ೪೬ ಜನರಿದ್ದರು. ಅವರೆಲ್ಲರೂ ನಾವಿಳಿದುಕೊಂಡ ಹೋಟೆಲ್ನಲ್ಲಿಯೇ ಇದ್ದರು. ಹೆಚ್ಚಿನವರು ಗುಜರಾಥ್ ಮತ್ತು ಮಹಾರಾಷ್ಟ್ರದಿಂದ ಬಂದವರು. ಮರುದಿನ ಖಟ್ಮಂಡು ದರ್ಶನ. ಖ್ಯಾತ ಪಶುಪತಿ ನಾಥ ದೇವಾಲಯಕ್ಕೆ ಭೇಟಿ ನೀಡಿದೆವು. ಇಲ್ಲಿ ಕರ್ನಾಟಕದ ಅರ್ಚಕರು ಇದ್ದಾರೆ. ಕೇದಾರನಾಥ ಶಿವಲಿಂಗದ ಅರ್ಧ ಭಾಗ ಪಶುಪತಿನಾಥ ಶಿವಲಿಂಗವೆಂದು ಭಕ್ತರ ನಂಬಿಕೆ. ಬಳಿಕ ಜಲನಾರಾಯಣ ದೇಗುಲಕ್ಕೆ ಹೊರಟೆವು. ನೀರಿನಲ್ಲಿ ತೇಲುವಂತೆ ಕಾಣುವ ವಿಷ್ಣುವಿನ ಮೂರ್ತಿ ಬಹಳ ಸುಂದರವಾಗಿದೆ. ಈ ಮೂರ್ತಿಯು ಆಗಸದ ಕಡೆ ಮುಖ ಮಾಡಿ ಮಲಗಿದ್ದರೂ , ನೀರಿನಲ್ಲಿ ಅದರ ಪ್ರತಿಬಿಂಬದಲ್ಲಿ ಮೂರ್ತಿಯ ಮುಖವು ಕಾಣುವುದು ಅಚ್ಚರಿಯ ವಿಷಯ.
ಸಾಲಿಗ್ರಾಮ ಮತ್ತು ರುದ್ರಾಕ್ಷದ ಅಂಗಡಿಗಳು ನೇಪಾಳದಲ್ಲಿ ಬಹಳಷ್ಟಿವೆ. ರುದ್ರಾಕ್ಷಿ ಮರವು ನೇಪಾಳದಲ್ಲಿ ಬೆಳೆಯುತ್ತದೆ ಮತ್ತು ಸಾಲಿಗ್ರಾಮ ಶಿಲೆ ಅಲ್ಲಿಯ ಗಂಡಕಿ ನದಿಯಲ್ಲಿ ಸಿಗುತ್ತದೆ. ಬಳಿಕ ನಾವು ಸ್ವಯಂಭೂ ಮಂದಿರಕ್ಕೆ ಹೋದೆವು. ಬೌದ್ಧರಿಗೆ ಇದು ಪವಿತ್ರ ವಾದದ್ದು.
ಪ್ರವಾಸದ ಮೂರನೆಯ ದಿನ ನಾವು ವೇಳಾಪಟ್ಟಿಯ ಪ್ರಕಾರ ನೇಪಾಳ ದ ಸ್ಯಾಬಿರುಬೇಸಿ ಗೆ ಹೋರಡಬೇಕಿತ್ತು. ಆದರೆ ಟಿಬೆಟ್ ತಲುಪಲು ಬೇಕಾದ ಅನುಮತಿ ಪತ್ರ ಮತ್ತು ಚೀನಾ ವೀಸಾ ದೊರೆಯಲು ತಡವಾಯಿತು. ಹಾಗಾಗಿ ನಾವು ಮುಂದಿನ ನಾಲ್ಕು ದಿನಗಳನ್ನು ಖಟ್ಮಂಡುವಿನಲ್ಲಿಯೇ ಕಳೆಯಬೇಕಾಯಿತು. ಒಂದು ದಿನವಿಡೀ ಸುಮ್ಮನೆ ಕಳೆದು ಹೋಯಿತು. ಮರುದಿನ ನಾವು ಉಳಿದುಕೊಂಡಿದ್ದ ಥಮೇಲ್ ಪ್ರದೇಶದಲ್ಲಿ ಅಡ್ಡಾಡಿ ಬಂದೆವು. ಇದು ಖಟ್ಮಂಡುವಿನ ಪ್ರಮುಖ ಮಾರುಕಟ್ಟೆ ಪ್ರದೇಶವಾಗಿದ್ದು ಟ್ರೆಕಿಂಗ್ ಗೆ ಬೇಕಾದ ಬ್ಯಾಗ್, ಷೂ ಇತ್ಯಾದಿಗಳು ದೊರಕುತ್ತವೆ. ಇಷ್ಟೇ ಅಲ್ಲದೆ ಟಿಬೆಟ್ ನ ಕರಕುಶಲ ವಸ್ತುಗಳು, ಮಣಿಗಳು,ಹಾರಗಳು, ಯಾಕ್ ಉಣ್ಣೆಯ ಬೆಚ್ಚನೆಯ ಶಾಲು ಇತ್ಯಾದಿಗಳೂ ಬಹಳಷ್ಟಿವೆ. ಭಾರತದ ೧೦೦ ರೂಪಾಯಿ ನೇಪಾಳದ ೧೬೦ ರೂಪಾಯಿಗೆ ಸಮ. ಹೆಚ್ಚಿನ ಅಂಗಡಿಗಳಲ್ಲಿ ಭಾರತೀಯ ಕರೆನ್ಸಿಯನ್ನು ಸ್ವೀಕರಿಸುತ್ತಾರೆ. ೫೦೦ ಕ್ಕಿಂತ ಕಡಿಮೆ ಮೌಲ್ಯದ ನೋಟುಗಳನ್ನಷ್ಟೇ ತೆಗೆದುಕೊಳ್ಳುತ್ತಾರೆ.
ಆಫೀಸ್ ನಲ್ಲಿ ಕೆಲವೊಮ್ಮೆ ಅತೀ ಹೆಚ್ಚು ಕೆಲಸವಿರುವಾಗ ಅನಿಸುವುದುಂಟು..ಏನೂ ಮಾಡದೆ ಸುಮ್ಮನೆ ರಜೆ ಹಾಕಿ ರೆಸ್ಟ್ ತೆಗೆದುಕೊಳ್ಳಬೇಕು ಅಂತ. ಆದರೆ ನಾವು ನಮ್ಮ ಬ್ಯುಸಿ ಜೀವನ ಶೈಲಿಗೆ ಹೊಂದಿಕೊಂಡಿದ್ದೇವೆ ಎಂದರೆ ನಾಲ್ಕು ದಿನ ಏನೂ ಕೆಲಸವಿಲ್ಲದೇ ಕುಳಿತುಕೊಳ್ಳುವುದೆಂದರೆ ಬಹಳ ಕಷ್ಟ. ಶಾಂತವಾಗಿ ಕುಳಿತುಕೋ ಎಂದರೆ ನಮಗೆ ಚಡಪಡಿಕೆ ಶುರು ವಾಗುತ್ತದೆ. ನಮ್ಮ ತಂಡದವರೆಲ್ಲರೂ ಖಟ್ಮಂಡುವಿನ ಆಸುಪಾಸಿನ ಸ್ಥಳಗಳಿಗೆ ಭೇಟಿ ನೀಡುವುದೆಂದು ನಿರ್ಧರಿಸಿದೆವು. ಮನೋಕಾಮನ ದೇವಸ್ಥಾನಕ್ಕೆ ರೋಪ್ ವೆಯಲ್ಲಿ ಹೋಗಬೇಕು. ಹಗ್ಗದ ಹಾದಿಯಲ್ಲಿ ಸುಮಾರು ೧೫-೨೦ ನಿಮಿಷಗಳ ಕಾಲ ಗಾಜಿನ ಡಬ್ಬಿಯೊಳಗೆ ಕೂತು ಮೇಲೆಕ್ಕೆ ಏರಬೇಕು. ಸುರಕ್ಷಿತವಾಗಿ ತಲುಪಿದರೆ ಸಾಕಪ್ಪ ಎಂದು ಅನಿಸುತ್ತಿತ್ತು. ಕೆಳಗೆ ಬಗ್ಗಿ ನೋಡಿದರೆ ಸಾಲು ಸಾಲಾಗಿ ಕಾಣುವ ಹಿಮಾಲಯ ಪರ್ವತ ಶ್ರೇಣಿ. ಅದರ ಮಧ್ಯೆ ರಭಸವಾಗಿ ಹರಿಯುವ ಕೆಂಬಣ್ಣದ ನದಿ. ಈ ರೋಪ್ ವೆ ಯ ಪ್ರಯಾಣವು ರೋಮಾಂಚಕವೇ ಸರಿ. ನೇಪಾಲದಲ್ಲಿ ೫-೬ ವರ್ಷದ ಬಾಲಕಿಯನ್ನು ದೇವಿಯೆಂದು ಆಯ್ಕೆ ಮಾಡಿ ಜೀವಂತ ದೇವತೆಯೆಂದು ಪೂಜಿಸಲಾಗುತ್ತದೆ. ಖಟ್ಮಂಡುವಿನ ದರ್ಬಾರ್ ಸ್ಕ್ವಾರ್ ನಲ್ಲಿ ಆಕೆ ವಾಸಿಸುತ್ತಾಳೆ. ನೇಪಾಳದಲ್ಲಿ ತಂತ್ರ ಪದ್ಧತಿಯ ಪೂಜಾ ವಿಧಾನವು ಚಾಲ್ತಿಯಲ್ಲಿದೆ. . ಪ್ರಾಣಿಬಲಿಯು ಇಲ್ಲಿ ಸಾಮಾನ್ಯ.
ಮರುದಿನ ಭಕ್ತಪುರ ಮತ್ತು ಪಾಟಣ ಕ್ಕೆ ಹೊರಟೆವು. ಇವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಮರದ ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಹೊಂದಿರುವ ಹಲವಾರು ಕಟ್ಟಡಗಳಿವೆ. ಭೂಕಂಪದ ಬಳಿಕ ಬಹಳಷ್ಟು ಕಡೆ ಹಾನಿ ಸಂಭವಿಸಿದ್ದರೂ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ. ಭಕ್ತಪುರದಲ್ಲಿ ಬಾಲಿವುಡ್ ನ ಚಲನಚಿತ್ರ 'ಬೇಬಿ ' ಚಿತ್ರೀಕರಣವಾದ ಸ್ಥಳವನ್ನು ನೋಡಿದೆವು.
ನಾವು ಉಳಿಕೊಂಡಿದ್ದ ಹೋಟೆಲ್ ಸುಸಜ್ಜಿತವಾದ ಹೋಟೆಲ್. ೩-೪ ದಿನ ಕಳೆದರೂ ಟಿಬೆಟ್ ಪರ್ಮಿಟ್ ನ ಪತ್ತೆಯೇ ಇಲ್ಲ. ನಮಗೆಲ್ಲರಿಗೂ ಸಿಟ್ಟು,ಹತಾಶೆ ಶುರುವಾಯಿತು . ಯಾವಾಗ ಮಾನಸ ಸರೋವರ ನೋಡುತ್ತೇವೆಯೋ, ಯಾವಾಗ ಕೈಲಾಶ ಕಾಣುತ್ತದೋ, ಆಫೀಸಿನ ರಜೆಯನ್ನು ಇನ್ನೂ ಎಷ್ಟು ದಿನಗಳ ತನಕ ವಿಸ್ತರಿಸಬೇಕು, ಮರಳಿ ಬರುವ ವಿಮಾನದ ಟಿಕೇಟನ್ನು ಯಾವ ದಿನಕ್ಕೆ ಬದಲಾಯಿಸಬೇಕು ಇತ್ಯಾದಿ ಯೋಚನೆಗಳಿಂದ ಮನಸ್ಸು ಗೊಂದಲದ ಗೂಡಾಗಿತ್ತು.
ಪ್ರವಾಸದ ೭ ನೇ ದಿನ ನಾವು ಬೆಳಗ್ಗೆ ಸ್ಯಾಬಿರುಬೇಸಿಗೆ ಬಸ್ ನಲ್ಲಿ ಸಾಗಿದೆವು. ಸುಮಾರು ೨೫೦ ಕಿಮಿ ಗಳ ಪ್ರಯಾಣವಾದರೂ ಇಡೀ ದಿನವನ್ನು ತೆಗೆದುಕೊಂಡಿತು. ಪರ್ವತ ಪ್ರದೇಶದ ರಸ್ತೆ, ಹಲವಾರು ತಿರುವುಗಳು, ಒಂದೆಡೆ ಪರ್ವತ, ಇನ್ನೊಂದೆಡೆ ಪ್ರಪಾತ ಮತ್ತು ರಭಸವಾಗಿ ಹರಿಯುವ ನದಿ .ಚಾಲಕನೇನಾದರೂ ಒಂದು ಕ್ಷಣ ಮೈ ಮರೆತರೂ ಕೂಡಲೇ ನಾವು ಕೈಲಾಸವಾಸಿಗಳಬಹುದು. ಕೆಲವೆಡೆ ರಸ್ತೆಯೂ ಮಣ್ಣಿನದೇ. ಮತ್ತೆ ಕೆಲವೆಡೆ ಭೂಕುಸಿತದ ಕಾರಣ ರಸ್ತೆಯನ್ನು ಸರಿ ಮಾಡುತ್ತಿದ್ದಾರೆ. ಕೆಲವು ಕಡೆ ವಿಪರೀತ ಧೂಳು. ಡಸ್ಕ್ ಮಾಸ್ಕ್ ಅನ್ನು ಮುಖಕ್ಕೆ ಕಟ್ಟಿಕೊಂಡೆವು. ನಮ್ಮ ಎದುರು ರಸ್ತೆ ದುರಸ್ತಿ ನಡೆಯುತ್ತಿತ್ತು. ಅದು ಸರಿಯಾಗಲು ಸುಮಾರು ೨ ಗಂಟೆಗಳ ಕಾಲ ಕಾಯಬೇಕಾಯಿತು. ಸ್ವಲ್ಪ ದೂರ ಸಾಗಿದಾಗ ನಮ್ಮ ಎದುರಿನ ಬಸ್ಸು ಕೆಸರಿನಲ್ಲಿ ಹೂತು ಹೋಗಿ, ಜನ ಅದನ್ನು ದೂಡಿ ಹೊರತೆಗೆಯಲು ಪ್ರಯತ್ನಿಸುತ್ತಿದ್ದರು. ಕೈಲಾಶ ಯಾತ್ರೆಯು ಪ್ರತಿ ಕ್ಷಣವೂ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿತ್ತು. ಅಂತೂ ಸಂಜೆಯ ಹೊತ್ತಿಗೆ ಸ್ಯಾಬಿರುಬೇಸಿ ತಲುಪಿದೆವು. ಸಮುದ್ರ ಮಟ್ಟದಿಂದ ಇದು ೭೦೦೦ ಅಡಿಗಳಷ್ಟು ಎತ್ತರದಲ್ಲಿದೆ.
ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಮೇಲಕ್ಕೇರುತ್ತಿದ್ದ ಹಾಗೆ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಪ್ರವಾಸ ಆಯೋಜಕರು ದಿನ ಕ್ಕೆ ಸುಮಾರು ೩೦೦೦ ಅಡಿಗಳಷ್ಟೇ ಮೇಲೇರಿ ಅಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡುತ್ತಾರೆ. ಈ ವ್ಯವಸ್ಥೆಯು ಗುರಿ ತಲುಪಲು ಹೆಚ್ಚಿನ ದಿನಗಳನ್ನು ತೆಗೆದುಕೊಂಡರೂ , ನಮ್ಮ ಶರೀರ ಕಡಿಮೆ ಆಮ್ಲಜನಕಕ್ಕೆ
ಹೊಂದಿಕೊಳ್ಳುವ ಪ್ರಕ್ರಿಯೆಗೆ ನೆರವಾಗುತ್ತದೆ. ನಮ್ಮ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಡಲು ಸಾಧ್ಯವಾಗುತ್ತದೆ.
ಸ್ಯಾಬಿರುಬೇಸಿ ಹಿಮಾಲಯದ ಒಂದು ಪುಟ್ಟ ಊರು. ೩-೪ ಹೋಟೆಲ್ ಗಳಿವೆ. ಪರ್ವತಾರೋಹಿಗಳು ಇಲ್ಲಿ ತಂಗುತ್ತಾರೆ. ನಾವು ಉಳಿದು ಕೊಂಡಿದ್ದ ಹೋಟೆಲ್ ಚಿಕ್ಕದಾದರೂ ಚೊಕ್ಕವಾಗಿತ್ತು. ಮರುದಿನ ಬೆಳಗ್ಗೆ ನಮ್ಮ ತಂಡದ ಒಂದಿಷ್ಟು ಜನರೊಂದಿಗೆ ನಾವು ಅಲ್ಲಿನ ಗುಡ್ಡಗಳನ್ನು ಹತ್ತಿ ಬಂದೆವು. ಅಲ್ಲಿ ಪಕ್ಕದಲ್ಲಿ ಬಿಸಿ ನೀರಿನ ಕುಂಡವೊಂದಿದೆ. ಅಲ್ಲಿ ಸುತ್ತಾಡಿ, ಪ್ರಕೃತಿಯ ಸೌನ್ದರ್ಯವನ್ನು ಆಸ್ವಾದಿಸಿದೆವು. ಹಿಮಾಲಯದಲ್ಲಿ ಹರಿಯುವ ನದಿಗಳು ನಮ್ಮಲ್ಲಿಯ ನದಿಗಳಂತೆ ಶಾಂತವಾಗಿ ಹರಿಯುವುದಿಲ್ಲ. ಅಬ್ಬರದಿಂದ ಭಯ ಹುಟ್ಟಿಸುವಂತೆ ಅವು ಸಾಗುತ್ತವೆ. ನದಿಯ ಹಲವೆಡೆ ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ಒಂದು ಸಣ್ಣ ಗುಹೆಯಿದೆ. ಅಲ್ಲೆಲ್ಲ ಸುತ್ತಾಡಿ ನಮ್ಮ ಮಿನಿ ಟ್ರೆಕ್ ಮುಗಿಸಿ, ಮತ್ತೆ ಹೋಟೆಲ್ ಗೆ ಬಂದು ವಿಶ್ರಾ೦ತಿ ಪಡೆದೆವು. ಸಾಯಂಕಾಲ ನಮ್ಮ ತಂಡದ ಸ್ನೇಹಿತೆಯರು ಗುಜರಾತಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಹಿಮಾಲಯದ ಮಡಿಲಲ್ಲಿ ಸಾಯಂಕಾಲದ ಹೊತ್ತು ಭಜನೆಯ ಜತೆ ಎಲ್ಲರ ಮನದಲ್ಲಿ ಶಾಂತಿ ಪಸರಿಸಿತ್ತು. ಕೈಲಾಶ ಪರ್ವತವನ್ನು ತಲುಪುವುದಕ್ಕಿಂತಲೂ ಅದನ್ನು ತಲುಪುವ ಪ್ರಯಾಣವೇ ಒಂದು ವಿಶಿಷ್ಟ ಅನುಭವ. ಪದಗಳಲ್ಲಿ ಕಟ್ಟಿಕೊಡಲಾಗದ್ದು ಅದು.
ಮರುದಿನ ನಾವು ಘಟ್ಟ ಕೋಲಾ ಎಂಬ ಊರನ್ನು ತಲುಪಿದೆವು. ಇಲ್ಲಿಯ ಸೇತುವೆ ದಾಟಿದರೆ ನಾವು ಟಿಬೆಟ್ ನಲ್ಲಿರುತ್ತೇವೆ. ಕೊನೆಗೂ ನಮ್ಮ ಪಾಸ್ಪೋರ್ಟ್ ಮತ್ತು ಪರ್ಮಿಟ್ ಗಳ ಜತೆ ನಮ್ಮ ಟೂರ್ ಗೈಡ್ ಪ್ರತ್ಯಕ್ಷವಾದರು . ಸಾಕ್ಷಾತ್ ಶಿವನೇ ಪ್ರತ್ಯಕ್ಷವಾದರೂ ನಮಗೆ ಅಷ್ಟು ಖುಷಿ ಆಗುತ್ತಿರಲಿಲ್ಲವೇನೋ! ಟಿಬೆಟ್ ಚೀನಾದ ವಶದಲ್ಲಿರುವ ಕಾರಣ ಟಿಬೆಟ್ ತಲುಪಲು ಚೀನಾದ ಅನುಮತಿ ಪತ್ರ ಅಗತ್ಯ. ಅದನ್ನು ನೀಡುವಲ್ಲಿ ಹಲವು ನೀತಿ ನಿಯಮಗಳು ಇರುವುದರಿಂದ ಮತ್ತು ಅವು ಕೆಲವೊಮ್ಮೆ ಹಠಾತ್ ಆಗಿ ಬದಲಾಗುವುದರಿಂದರೂ ಇಂತಹ ವಿಳಂಬ ಉಂಟಾಗಬಹುದು. ಮಾನಸ ಸರೋವರ ಯಾತ್ರೆಗೆಂದೇ ವಿಶೇಷವಾದ ವೀಸಾ ನೀಡಲಾಗುತ್ತದೆ. ಇದು ಇಡೀ ತಂಡಕ್ಕೆ ಒಂದು ವೀಸಾ. ಅಂದರೆ ನಮ್ಮ ಪಾಸ್ಪೋರ್ಟ್ ಮೇಲೆ ವೀಸಾ ಸ್ಟಾ೦ಪ್ ಇರುವುದಿಲ್ಲ. ಬದಲಾಗಿ ಪ್ರತ್ಯೇಕ ಅನುಮತಿ ಪ ತ್ರದಲ್ಲಿ ಇಡೀ ಗುಂಪಿನ ಹೆಸರು ಮತ್ತು ಪಾಸ್ ಪೊರ್ಟ್ ಸಂಖ್ಯೆಗಳು ಇರುತ್ತವೆ. ಹಾಗಾಗಿ ಟಿಬೆಟ್ ಪ್ರವೇಶ ಮತ್ತು ವಾಪಸ್ ಬರುವಾಗ ಇಡೀ ಗುಂಪು ಜತೆಗೆ ಇರಬೇಕಾಗುತ್ತದೆ. ಒಂದೊಮ್ಮೆ ಮುಂಚಿತವಾಗಿ ಬರಬೇಕೆಂದರೆ ಪ್ರತ್ಯೇಕ ಶುಲ್ಕ ನೀಡಬೇಕಾಗುತ್ತದೆ.
ಭಾರತದ ಸಮಯಕ್ಕೂ ನೇಪಾಳದ ಸಮಯಕ್ಕೂ ಹದಿನೈದು ನಿಮಿಷಗಳ ವ್ಯತ್ಯಾಸ. ಭಾರತದ ಸಮಯಕ್ಕೂ ಟಿಬೆಟ್ ಸಮಯಕ್ಕೂ ಎರಡೂವರೆ ಗಂಟೆ ವ್ಯತ್ಯಾಸ. ಯುವಾನ್ ಇಲ್ಲಿಯ ಕರೆನ್ಸಿ. ೧ ಯುವಾನ್ ಎಂದರೆ ಸುಮಾರು ೧೧ ರೂಪಾಯಿ . ಅಂತೂ ನೇಪಾಳದ ಗಡಿ ದಾಟಿ ಟಿಬೆಟ್ ಪ್ರವೇಶಿದ್ದಾಯಿತು. ಇಲ್ಲಿಂದ ನಾವು ಇನ್ನೊಂದು ಬಸ್ಸಿನಲ್ಲಿ ಮುಂದುವರಿಯಬೇಕು .ಇಲ್ಲಿಯ ರಸ್ತೆಗಳಿಗೂ ನೇಪಾಳದ ರಸ್ತೆಗಳಿಗೂ ಅಜಗಜಾಂತರ .ನುಣುಪಾದ ರಸ್ತೆಗಳು ,ಪರ್ವತದ ಕಡೆ ವ್ಯವಸ್ಥಿತವಾಗಿ ಭೂ ಕುಸಿತವಾಗದಂತೆ ತಡೆಯಲು ಕಟ್ಟಿದ ಲೋಹದ ಬಲೆಗಳು ನಮ್ಮ ಪ್ರಯಾಣವನ್ನು ಸುಖಕರ ವಾಗಿಸುತ್ತವೆ . ಟಿಬೆಟ್ಟಿನಲ್ಲಿ ರಸ್ತೆಯ ಬಲಗಡೆ ಪ್ರಯಾಣ .ಬಸ್ಸಿನ ಬಾಗಿಲು ಬಲಗಡೆ ಇದ್ದು ಚಾಲಕನ ಸೀಟು ಎಡಗಡೆ ಇರುತ್ತದೆ .
ನಾವು ಕೈ ರಂಗ್ ಎಂಬ ಟಿಬೆಟ್ಟಿನ ಪಟ್ಟಣ ವೊಂದನ್ನು ತಲುಪಿದೆವು .ಸಮುದ್ರ ಮಟ್ಟದಿಂದ ೯೫೦೦ ಅಡಿ ಎತ್ತರದಲ್ಲಿರುವ ಇದು ಸುಂದರವಾದ ಪಟ್ಟಣ . ಸುತ್ತಲೂ ಹಿಮಾಲಯ ಪರ್ವತಗಳ ಸಾಲು. ರಸ್ತೆಯ ಯಾವ ತುದಿಗೆ ಹೋದರೂ ಹಿನ್ನೆಲೆಯಾಗಿ ಹಿಮಾಲಯ ಕಾಣುತ್ತದೆ .ಎಲ್ಲ ಕಡೆಯೂ ಚೈನೀಸ್ ಲಿಪಿಯ ಅಕ್ಷರಗಳು . ಯಾವುದೇ ಅಂಗಡಿಯ ಹೆಸರುಗಳನ್ನು ನಮಗೆ ಓದಲಾಗುವುದಿಲ್ಲ .ಇಲ್ಲಿಯ ಜನರಿಗೆ ಇಂಗ್ಲೀಷಿನ ಗಂಧ ಗಾಳಿಯಿಲ್ಲ. ಅಂಗಡಿಯಲ್ಲಿ ಏನನ್ನಾದರೂ ಖರೀದಿಸಬೇಕೆಂದರೆ ಫೋನ್ ಆ್ಯಪ್ ಮೂಲಕ ಇಂಗ್ಲಿಷ್ನಲ್ಲಿ ಹೇಳಿ ಚೈನೀಸ್ ಗೆ ಭಾಷಾಂತರಿಸಿ ಆ ಮೂಲಕ ವ್ಯವಹರಿಸಬೇಕಾಗುತ್ತದೆ .ಕೆಲವೊಮ್ಮೆ ಕೈ ಸನ್ನೆ ಬಾಯಿ ಸನ್ನೆಗಳ ಮೂಲಕವೇ ನಮ್ಮ ವಿಚಾರ ವಿನಿಮಯವಾಗುತ್ತದೆ .ಆ ದಿನ ಕೈರಂಗ್ ನ ಹೋಟೆಲ್ ವೊಂದರಲ್ಲಿ ಉಳಿದುಕೊಂಡು ಮರುದಿನ ಊರು ಸುತ್ತಾಡಿದೆವು. ಅಲ್ಲಿ ಬೌದ್ಧ ಧರ್ಮವು ಪ್ರಧಾನವಾಗಿದ್ದು ಒಂದು ಪುಟ್ಟ ಮೊನಾಸ್ಟರಿ ಇದೆ. ಅಲ್ಲಿಯ ಅಂಗಡಿಗಳಲ್ಲಿ ಟಿಬೆಟ್ಟಿನ ಕರಕುಶಲ ವಸ್ತುಗಳು ಹೇರಳ .ಒಂದು ಅಪರಿಚಿತ ಪಟ್ಟಣದಲ್ಲಿ ಭಾಷೆ ಬರದ ಪ್ರಾಂತ್ಯದಲ್ಲಿ ತಿರುಗಾಡಿ ನಮಗೆ ಬೇಕಾದುದನ್ನು ಖರೀದಿಸಿ ಮೊನಾಸ್ಟರಿ ಯಲ್ಲಿ ಧ್ಯಾನ ಮಾಡಿ ಬಂದದ್ದು ನನ್ನ ಮನಪಟಲದಲ್ಲಿ ಸುಂದರ ಸ್ಮೃತಿಯಾಗಿ ಅಚ್ಚೊತ್ತಿದೆ .
ಮರುದಿನ ನಮ್ಮ ಪ್ರಯಾಣ ಸಾಗಾ ಎಂಬ ಊರಿಗೆ.ಕೈ ರಂಗಿನಿಂದ ಸಾಗರಕ್ಕೆ ಸಾಗುವ ರಸ್ತೆಯು ಬಣ್ಣ ಬಣ್ಣದ ಪರ್ವತಗಳ ವಿಸ್ಮಯಲೋಕ . ಸ್ವಲ್ಪ ಸಮಯ ಸಿಮೆಂಟ್ ವರ್ಣದ ಪರ್ವತಗಳು ಕಂಡರೆ ಮತ್ತೆ ಮುಂದೆ ಸಾಗಿದಂತೆ ಕೆಂಬಣ್ಣ ಮಿಶ್ರಿತ ಪರ್ವತಗಳು .ಮತ್ತೆ ಸಾಗುತ್ತಿದ್ದಂತೆ ತಿಳಿ ಹಸಿರು ಹಸಿರು ವರ್ಣಗಳ ಪರ್ವತಗಳ ಸಾಲು .ನಮ್ಮ ಹಾದಿ ಸಾಗುತ್ತಿದ್ದಂತೆ ದಟ್ಟವಾದ ಹಿಮಾಲಯದ ಕಾಡು ಮರೆಯಾಗಿ ಕುರುಚಲು ಪೊದೆಗಳು ಕಾಣ ತೊಡಗಿದ್ದವು .
ರಸ್ತೆಯಂತೂ ನೇರವಾದದ್ದು. ನಮ್ಮ ಪ್ರವಾಸದ ಬಸ್ ಹೊರತುಪಡಿಸಿ ಬೇರಾವ ವಾಹನವೂ ನಮ್ಮ ಕಣ್ಣಳತೆಗೆ ಕಾಣಸಿಗುವುದಿಲ್ಲ .ಈ ಪ್ರಯಾಣದಲ್ಲಿ ನಾವು ಸುಮಾರು ಹದಿನೈದು ಸಾವಿರದ ಐನೂರು ಅಡಿಗಳಷ್ಟು ಎತ್ತರ ಏರುತ್ತೇವೆ .ಸುಮಾರು ಏಳು ಎಂಟು ಗಂಟೆಗಳ ಹಾದಿ ರಸ್ತೆಯಂತೂ ನೇರ ಹಾಗಾಗಿ ಅಷ್ಟೊಂದು ಸುಸ್ತು ಎನಿಸಲಿಲ್ಲ .ಆದರೆ ಎತ್ತರದ ಆಲ್ಟಿಟ್ಯೂ ಡ್ ತನ್ನ ಪ್ರಭಾವವನ್ನು ತೋರಿಸಲಾರಂಭಿಸಿತು .ಸಣ್ಣಗೆ ತಲೆ ನೋವು.ಮುಂದೆ ಸಾಗಿದಂತೆ ಬ್ರಹ್ಮಪುತ್ರ ನದಿಯ ಉಗಮ ಸ್ಥಾನವೂ ಎದುರಾಯಿತು .ಅಷ್ಟೊಂದು ಭವ್ಯವಾದ ನದಿಯ ಮೂಲ ಸ್ಥಾನವನ್ನು ಕಂಡು ನಮಿಸಿದೆವು.ಅಲ್ಲಿ ಇಳಿದು ಒಂದಷ್ಟು ಫೋಟೋಗಳನ್ನು ತೆಗೆದೆವು .
ಮತ್ತೆ ಮುಂದಕ್ಕೆ ಹೋದಾಗ ಬಂದೇ ಬಿಟ್ಟಿತ್ತು ನಮ್ಮೆಲ್ಲರ ಬಹುನಿರೀಕ್ಷಿತ ಮಾನಸ ಸರೋವರ ! ಅಲ್ಲಿ ಇಳಿದು ಮಾನಸ ಸರೋವರ ಪರಿಕ್ರಮಕ್ಕೆ ಮೀಸಲಾದ ವಿಶೇಷ ಬಸ್ಸಿನಲ್ಲಿ ಹತ್ತಬೇಕು .ಆ ಬಸ್ಸು ನಮ್ಮನ್ನು ಮಾನಸ ಸರೋವರದ ಸುತ್ತಲೂ ಸುಮಾರು ಎಪ್ಪತ್ತು ಕಿಲೋಮೀಟರ್ ಪ್ರದಕ್ಷಿಣೆ ಮಾಡಿಸುತ್ತದೆ .ಮಧ್ಯೆ ಒಂದೆರಡು ಬಾರಿ ಬಸ್ಸನ್ನು ನಿಲ್ಲಿಸುತ್ತಾರೆ. ನಾವು ಸರೋವರದ ತಟದಲ್ಲಿ ಇಳಿದು ಓಡಾಡಬಹುದು. ಮೈ ನಡುಕ ಹತ್ತುವಷ್ಟು ಜೋರಾಗಿ ಗಾಳಿ ಬೀಸುತ್ತಿತ್ತು .ನೀಲ ವರ್ಣದ ಜಲರಾಶಿಯನ್ನು ನಮ್ಮ ಎದುರು ಕಂಡಾಗ ನಮ್ಮ ತಂಡ ಮೂಕ ವಿಸ್ಮಿತ ವಾಯಿತು .ಈ ಸರೋವರದ ಸೌಂದರ್ಯದ ವರ್ಣನೆಯನ್ನು ಅದರ ಭವ್ಯತೆಯನ್ನು ಲೇಖನಿಯಲ್ಲಿ ಹಿಡಿದಿಡುವುದು ಕಠಿಣ .
ಮತ್ತೂ ಮುಂದಕ್ಕೆ ಸಾಗಿದಂತೆ ಇನ್ನೊಂದು ಸರೋವರ ಕಾಣಿಸುತ್ತದೆ ಅದು ರಾಕ್ಷಸ ತಾಲ. ನೀಲ ಸಾಗರದಂತೆ ಕಂಡುಬರುತ್ತದೆ .
ಆ ಸಂಜೆ ನಾವು ಮಾನಸ ಸರೋವರದ ದಡ ವೊಂದರ ವಸತಿ ಗೃಹಕ್ಕೆ ಹೋದೆವು .ಪ್ರವಾಸದ ವೇಳಾಪಟ್ಟಿಯಂತೆ ಬರುತ್ತಿದ್ದರೆ ಹುಣ್ಣಿಮೆಯ ದಿನ ನಾವು ಮಾನಸ ಸರೋವರ ತಲುಪಬೇಕಿತ್ತು .ಆಗಸ ಹೇಗೆ ಕಾಣುತ್ತದೆಯೋ ಎಂದು ರೂಮಿನಿಂದ ಹೊರಗೆ ಬಂದು ನೋಡಿದೆ . ಅಲ್ಲಿ ನಕ್ಷತ್ರಗಳ ಸರಮಾಲೆ ಪೋಣಿಸಿ ದಂತಿತ್ತು .ಕೊರೆಯುವ ಚಳಿ, ರೊಯ್ಯನೆ ಬೀಸುವ ಗಾಳಿ, ಎದುರುಗಡೆ ಮಾನಸ ಸರೋವರ ಇದು ದಿವ್ಯ ಅನುಭವವೇ ಸರಿ .ಆ ದಿನದ ಅಡುಗೆಯೂ ಬಹಳ ವಿಶಿಷ್ಟವಾಗಿತ್ತು ಏಕೆಂದರೆ ಅದನ್ನು ಮಾನಸ ಸರೋವರದ ನೀರಿನಿಂದ ತಯಾರಿಸಿದ್ದರು .ಮುಂಜಾನೆ ಬೇಗ ಎದ್ದು ಸರೋವರದ ದಡದಲ್ಲಿ ಸುಮಾರು ಅರ್ಧ ಗಂಟೆ ಕುಳಿತೆ. ಮನಸ್ಸು ಶಾಂತಿಯಿಂದ ತುಂಬಿತ್ತು .
ನಮ್ಮ ತಂಡದ ಹೆಚ್ಚಿನವರು ಆ ಕೊರೆಯುವ ಚಳಿಯಲ್ಲಿ ಮಾನಸ ಸರೋವರದಲ್ಲಿ ಮುಳುಗಿ ಎದ್ದರು.ಸ್ವಲ್ಪ ಹೊತ್ತಿನಲ್ಲಿ ಹೆಚ್ಚಿನವರಿಗೆ ಶೀತ ತಲೆನೋವು ಕಾಡತೊಡಗಿತ್ತು . ನಾನಂತೂ ಆ ಸಾಹಸಕ್ಕೆ ಕೈಹಾಕಲಿಲ್ಲ .ಆಕಾಶ ಶುಭ್ರವಾಗಿ ದ್ದಾಗ ಇಲ್ಲಿಂದಲೇ ಕೈಲಾಸ ಪರ್ವತ ಗೋಚರವಾಗುತ್ತದೆ .
ಆ ದಿನ ಸಂಜೆ ನಾವು ದಾರ್ಶನ್ ಎಂಬ ಊರಿಗೆ ಹೊರತೆವು. ಸ್ವಲ್ಪ ಸ್ವಲ್ಪವಾಗಿ ದಾರಿಯುದ್ದಕ್ಕೂ ಕೈಲಾಸ ಪರ್ವತ ಕಾಣಿಸುತ್ತದೆ .ಕೈಲಾಸ ಪರ್ವತ ವೆಂದರೆ ಶಿವನ ವಾಸ ಸ್ಥಾನವೆಂದು ಹಿಂದೂಗಳು ನಂಬುತ್ತಾರೆ ಬೌದ್ಧ ಧರ್ಮ ,ಜೈನ ಮತ್ತು ಬಾನ್ ಧರ್ಮೀಯ ರಿ ಗೂ ಪವಿತ್ರ ಸ್ಥಾನವಾಗಿದೆ .ಕೈಲಾಸ ಪರ್ವತವನ್ನು ಹತ್ತಲು ಯಾರಿಗೂ ಅನುಮತಿ ಇಲ್ಲ ಅದರ ಸುತ್ತಲೂ ನಾವು ಪ್ರದಕ್ಷಿಣೆ ಮಾಡಬಹುದು . ಸಾಮಾನ್ಯವಾಗಿ ಯಾತ್ರಿಕರು ಕುದುರೆಯ ಮೇಲೆ/ನಡೆದುಕೊಂಡು ಪರಿಕ್ರಮವನ್ನು ಮಾಡುತ್ತಾರೆ .ಈ ಪ್ರದಕ್ಷಿಣೆ ಹಾಕುವುದನ್ನು ಕೋರ ಎಂದು ಕರೆಯುತ್ತಾರೆ . ಕೆಲವು ಭಕ್ತರು ಹೆಜ್ಜೆ ನಮಸ್ಕಾರ ಹಾಕಿಯೂ ಇದಕ್ಕೆ ಪ್ರದಕ್ಷಿಣೆ ಬರುತ್ತಾರೆ. ದರ್ಶನ್ ನಿಂದ ನಾವು ಯಮ ದ್ವಾರ ತನಕ ಬಸ್ಸಿನಲ್ಲಿ ತಲುಪಿದೆವು . ಪೋರ್ಟರ ಒಬ್ಬನನ್ನು ಕರೆದೊಯ್ದೆವು .ಅಲ್ಲಿ ಒಂದು ಕೆಜಿ ತೂಕವು ಅತ್ಯಂತ ಭಾರವೆಂದು ಅನ್ನಿಸುತ್ತದೆ .ಹಾಗಾಗಿ ಪೋರ್ಟರ್ ಜೊತೆಗಿದ್ದರೆ ಆತ ನಮಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವ ಕಾರಣ ಸ್ವಲ್ಪ ಸಹಾಯವಾಗುತ್ತದೆ.
ಯಮ ದ್ವಾರದಿಂದ ನಾವು ನಡೆಯುತ್ತ ಸಾಗಿದೆವು .ಕೈಲಾಸ ಪರ್ವತ ಸುಂದರವಾಗಿ ಕಾಣಿಸತೊಡಗುತ್ತದೆ ಕೆಲವು ಕಡೆ ಗುಡ್ಡ ಹತ್ತುವಂತೆ ಇದ್ದರೂ ಮತ್ತೆ ಕೆಲವೆಡೆ ನೆರವಾದ ಮಾರ್ಗವೇ ಇದೆ. ಆದರೆ ಇಲ್ಲಿ ಗಂಟೆಗೆ ಸುಮಾರು ಒಂದೆರಡು ಕಿಲೋಮೀಟರುಗಳಷ್ಟು ಸಾಗಬಹುದು .
ಆ ದಿನ ಸಾಯಂಕಾಲದ ಹೊತ್ತಿಗೆ ನಾವು ದರಾ ಪಕ್ ತಲುಪಿದೆವು .ನಮ್ಮ ರೂಮಿನ ಕಿಟಕಿಯಿಂದಲೇ ಕೈಲಾಸ ಪರ್ವತ ಕಾಣುತ್ತಿತ್ತು . ನಮ್ಮ ನಡಿಗೆಯ ಉದ್ದಕ್ಕೂ ಹವಾಮಾನ ಅತ್ಯುತ್ತಮವಾಗಿತ್ತು. ಒಮ್ಮೆ ಒಂದಿಷ್ಟು ಮಳೆ ಹನಿ, ಮಂಜಿನ ಹನಿ ಬಿದ್ದದ್ದು ಬಿಟ್ಟರೆ ವಾತಾವ ರಣ ಶುಭ್ರವಾಗಿ ಇದ್ದು ನಮ್ಮ ದಾರಿಯುದ್ದಕ್ಕೂ ನಮ್ಮ ಉತ್ಸಾಹವನ್ನು ಹೆಚ್ಚಿಸಿತು. ಕೈಲಾಸವನ್ನು ಕಂಡು ಕಣ್ಣು ತುಂಬಿಕೊಂಡವು .
ದಿರಾ ಪುಕ್ಕ ನಿಂದ ಜೋತು ಲ್ ಪು ಕ್ ನವರೆಗೆ ಮಂಜು ತುಂಬಿದ ಕಾರಣ ನಾವು ಮರಳಿ ದಾ ರ್ಶನ್ ಗೆ ಬಂದೆವು .ಆರೋಗ್ಯದ ಏರುಪೇರಾದದ್ದರಿಂದ ನಮ್ಮ ತಂಡದ ಕೆಲವು ಸದಸ್ಯರು ಪರಿಕ್ರಮ ಮಾಡಲು ಬಂದಿರಲಿಲ್ಲ ಅವರು ದಾ ರ್ಶನ್ ಹೋಟೆಲ್ ನಲ್ಲಿಯೇ ಉಳಿದುಕೊಂಡು ವಿಶ್ರಾ ೦ತಿ ಪಡೆದರು.
ಈಗ ಮರಳಿ ಕಾಠ್ಮಂಡು ಗೆ ಪ್ರಯಾಣ. ನಾವು ಹೋದ ಮಾರ್ಗದಲ್ಲಿಯೇ ಮರಳಿ ಬಂದೆವು. ನಿಗದಿತ ಸಮಯಕ್ಕಿಂತ ನಮ್ಮ ಪ್ರವಾಸ ಐದು ದಿನ ತಡವಾಯಿತು . .ಪ್ರವಾಸದ ಉದ್ದಕ್ಕೂ ರೋಟಿ, ಆಲೂಗಡ್ಡೆ, ರಾಜ್ಮ ಸಬ್ಜಿ ಗಳನ್ನೇ ಕಂಡು ಎಲ್ಲರಿಗೂ ಅವರವರ ಊರಿನ ತಿಂಡಿ ತಿನಿಸುಗಳ ನೆನಪು ಬರುತ್ತಿತ್ತು .ಕೈಲಾಶ ಯಾತ್ರೆ ಒಂದು ಅತ್ಯದ್ಭುತ ಅನುಭವ .ಪ್ರಕೃತಿಯ ಈ ಸಾಂಗತ್ಯ ಜೀವನವಿಡೀ ನೆನಪಿನಲ್ಲಿ ಇಟ್ಟುಕೊಳ್ಳುವಂಥ ದ್ದು .ನಮ್ಮ ತಂಡದವರೆಲ್ಲಾ ಒಟ್ಟಿಗೆ ಒಂದು ಕುಟುಂಬದಂತೆ ದಿನ ಕಳೆದಿದ್ದೆವು .ಎಲ್ಲರ ಜೊತೆ ಬಹಳಷ್ಟು ಆತ್ಮೀಯತೆ ಬೆಳೆದಿತ್ತು . ಮರಳಿ ಬೆಂಗಳೂರಿಗೆ ಬಂದು ಪ್ರವಾಸದ ಅನುಭವನ್ನು ಬರೆಯುತ್ತಿರುವಾಗ ಇದು ಕನಸೇ ಎಂದು ಭಾಸವಾಗುತ್ತಿದೆ.