Pages

Saturday, August 5, 2017

ಹಿಮಾಲಯ ಚಾರಣ- ಖಾಲಿಯಾ ಟಾಪ್ ಚಿಕ್ಕಂದಿನಿಂದಲೂ ನನಗೆ ಹಿಮಾಲಯವೆಂದರೆ ಕೌತುಕ ಭರಿತ ಬೆರಗು. ಶಾಲಾ ಪಠ್ಯಪುಸ್ತಕಗಳಲ್ಲಿ, ಪುರಾಣ ಕಥೆಗಳಲ್ಲಿ ,ಕಾವ್ಯಗಳಲ್ಲಿ ಹಿಮಾಲಯದ ಬಗ್ಗೆ ಓದುವಾಗ ಹಿಮಾಲಯ ಹೇಗಿರಬಹುದು ಎಂದು ಕಲ್ಪಿಸುತ್ತಿದ್ದೆ.  ಹಿಮಾಲಯ ಚಾರಣವೆಂದರೆ ಎವರೆಸ್ಟ್ ಏರುವುದು ಎಂದೇ ನನ್ನ ಗಟ್ಟಿ ನಂಬಿಕೆಯಾಗಿತ್ತು.   ನನ್ನ ಮಿತ್ರ ವರ್ಗದ ಹಲವಾರು ಹಿಮಾಲಯದ ಕೆಲವು ಪ್ರದೇಶಗಳಿಗೆ ಚಾರಣ ಮಾಡಿದುದನ್ನು ಕಥೆಯಂತೆ ಕೇಳುತ್ತಿದ್ದೆ. ಹಿಮಾಲಯ ಅಷ್ಟೊಂದು ವಿಶಾಲವಾಗಿದೆ, ಅಲ್ಲಿ ಹಲವಾರು ಪರ್ವತ ಶ್ರೇಣಿಗಳು ಇವೆ .ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ ಅಂತೆಲ್ಲ ವಿಚಾರಗಳು ನನ್ನಲ್ಲಿ  ಕನಸಿನ ಲೋಕವನ್ನು ಸೃಷ್ಟಿಸುತ್ತಿದ್ದವು.  ಹೀಗಿರುವಾಗ ಇತ್ತೀಚೆಗೆ ನನಗೂ ಹಿಮಾಲಯದಲ್ಲಿ ಚಾರಣ ಮಾಡುವ ಅವಕಾಶ ಒದಗಿ ಬಂದಿತು .ಯೂತ್ ಹಾಸ್ಟೆಲ್ ಆರ್ಗನೈಜೇಷನ್ ಆಫ್ ಇಂಡಿಯಾದವರು ಹಲವಾರು ಹಿಮಾಲಯ ಚಾರಣ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.  ಅಂತಹ ಒಂದು ಚಾರಣವಾದ ಖಾಲಿಯಾ ಟಾಪ್ ಗೆ ನಾನು ಹೆಸರು ನೋಂದಾಯಿಸಿದೆ.

ಪೂರ್ವ ತಯಾರಿ

ಪರ್ವತ ಪ್ರದೇಶದಲ್ಲಿ ಚಾರಣ ಮಾಡಲು ಬೇಕಾದ ಮೊದಲ ತಯಾರಿ ಫಿಸಿಕಲ್ ಫಿಟ್ನೆಸ್ .ಸಮುದ್ರ ಮಟ್ಟದಿಂದ ೧೦,೦೦ ೦ ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲಿರುವ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುತ್ತದೆ. ಅಲ್ಲಿ ಚಾರಣ ಮಾಡಲು ನಮ್ಮ ಶರೀರ ಶಕ್ತಿಯುತವಾಗಿರಬೇಕು. ಚಾರಣಕ್ಕೆ ಎರಡು ತಿಂಗಳು ಇರುವಾಗಿನಿಂದ ದಿನಕ್ಕೆ ಐದು ಕಿಲೋಮೀಟರ್ ನಂತೆ ವಾಕಿಂಗ್ ಮಾಡುವ ಗುರಿ ಇರಿಸಿಕೊಂಡೆ.   ಜತೆಗೆ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದೆ . ಕಚೇರಿಯಲ್ಲಿ ಲಿಫ್ಟಿನ ಬದಲಾಗಿ ಮೆಟ್ಟಿಲುಗಳನ್ನು ಬಳಸಿದೆ .  ಆಹಾರದ ಬಗ್ಗೆಯೂ ಸರಿಯಾದ ಗಮನ ಹರಿಸಿದೆ. ಚಾರಣಕ್ಕೆ ಬೇಕಾದ ಮೆಡಿಕಲ್ ಸರ್ಟಿಫಿಕೇಟನ್ನು ಪಡೆದದ್ದು ಆಯಿತು .ಅಂತೂ ಚಾರಣದ ದಿನ ಬಂದೇ ಬಿಟ್ಟಿತು!

ತಲುಪುವುದು ಹೇಗೆ ?

ಉತ್ತರಾಖಂಡ ರಾಜ್ಯ ದೇವಭೂಮಿ ಎಂದೇ ಖ್ಯಾತವಾಗಿದೆ.  ಹಿಮಾಲಯದ ಅಂಚಿನಲ್ಲಿರುವ ಈ ರಾಜ್ಯ ಪ್ರಕೃತಿ ಸಂಪತ್ತಿನ ಗಣಿ .ಪೈನ್ ಮರಗಳ ಕಾಡು, ಹಿಮಾಲಯದ ಗಿರಿ ಶಿಖರಗಳು, ಅಲ್ಲಲ್ಲಿ ಕಾಣಸಿಗುವ ಝರಿಗಳು ಜಲಪಾತಗಳು ವೇಗವಾಗಿ ಹರಿಯುವ ನದಿಗಳು ಒಂದೇ ಎರಡೇ ಪ್ರಕೃತಿ ಮಾತೆಯ ಸುಂದರ ರೂಪವೇ ಇಲ್ಲಿ ಮೂರ್ತಿವೆತ್ತಂತೆ ಇದೆ .ನನ್ನ ಚಾರಣ ಪ್ರದೇಶ ಇರುವುದು  ಪಿತ್ತೊರಗರ  ಜಿಲ್ಲೆಯ ಮುನ್ಶಿಯಾರಿ ಎಂಬ ಊರಿನ ಬಳಿ .  ದೆಹಲಿಯಿಂದ ಕಾಠ್ ಗೋದಾಮಿನ ತನಕ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ಮುನ್ಶಿಯಾರಿ ತಲುಪಲು ಟ್ಯಾಕ್ಸಿ ವ್ಯಾನ್ ಅಥವಾ ಬಸ್ಸಿನಲ್ಲಿ ಹೋಗಬೇಕು.  ನಮ್ಮ ಚಾರಣ ತಂಡ  ಅಲ್ಲಿಂದ ವ್ಯಾನಿನಲ್ಲಿ ಪ್ರಯಾಣಿಸಿದೆವು. ಕಾಠ್  ಗೋದಾಮ  ನಿಂದ   ಮುನ್ಶಿಯಾರಿಗೆ ಇರುವ ದೂರ ಸುಮಾರು ಇನ್ನೂರ ಎಪ್ಪತ್ತೈದು  ಕಿಲೋ ಮೀಟರ್ ಗಳು.  ಅದು  ಪರ್ವತ ಪ್ರದೇಶದ ಅಪಾಯಕಾರಿ ಕಿರು ಹಾದಿ ಆದುದರಿಂದ ಪ್ರಯಾಣದ ಅವಧಿ ಸುಮಾರು ಹನ್ನೆರಡು ಗಂಟೆಗಳಷ್ಟು ಆಗಿರುತ್ತದೆ . ಈ ಪ್ರಯಾಣ ರುದ್ರ ರಮಣೀಯವೇ ಸರಿ. .ಹಿಮಾಲಯದ ಅದ್ಭುತ ಸೌಂದರ್ಯವನ್ನು ಹಾದಿಯುದ್ದಕ್ಕೂ ಕಾಣಬಹುದು .ಈ ಪರ್ವತ ಶ್ರೇಣಿಗಳು ಎಷ್ಟು ವಿಶಾಲವಾಗಿದೆ ಎಂದರೆ  ಅವುಗಳನ್ನು  ಒಂದು ಕ್ಯಾಮೆರಾದ  ಫ್ರೆಮಿ ನೊಳಗೆ  ಕಟ್ಟಿ ಹಾಕಲಾಗದು . ಪರ್ವತದ ಅಂಚಿನ ಕಿರು ಹಾದಿಯಲ್ಲಿ ಕೊಂಚ ಮೈಮರೆತರೂ ದೇವ ಭೂಮಿಯಿಂದ ನೇರವಾಗಿ ಸ್ವರ್ಗಕ್ಕೆ ಪ್ರವೇಶ ಸಿಗುವುದು ಗ್ಯಾರಂಟಿ .ಅಷ್ಟೇ ಅಲ್ಲ ಅಲ್ಲಲ್ಲಿ ಕಾಣಸಿಗುವ ಭೂಕುಸಿತ, ರಭಸವಾಗಿ ಹರಿಯುವ ನದಿಗಳು ಇವುಗಳೆಲ್ಲ ಒಂದು ರೀತಿಯ ಭೀತಿಯನ್ನು ಉಂಟು ಮಾಡುತ್ತವೆ .ಅಂತೂ ಈ ಸುದೀರ್ಘ ಪ್ರಯಾಣದ ಬಳಿಕ ಮುನ್ಶಿಯಾರಿ ಬೇಸ್ ಕ್ಯಾಂಪ್ ತಲುಪಿದ್ದಾಯಿತು .  


ಚಾರಣಕ್ಕೆ ಮುನ್ನ :
ಮುನ್ಶಿಯಾರಿ ಕ್ಯಾಂಪ್ ನಲ್ಲಿ ಆರಂಭಿಕ ಪ್ರವೇಶ  ದಾಖಲಾತಿಯ ಕಾರ್ಯಕ್ರಮ ಮುಗಿಸಿದೆವು.   ಭಾರತದ ಹಲವಾರು ಪ್ರಾಂತ್ಯಗಳಿಂದ ಬಂದ ಸಹ ಚಾರಣಿಗರ ಪರಿಚಯ ಮಾಡಿಕೊಂಡೆವು .ಅವರಲ್ಲಿ ಅನೇಕರು ಹಲವಾರು ಚಾರಣಗಳನ್ನು ಮಾಡಿದಂತಹ ಅನುಭವಿಗಳು.ಕೆಲವರು ವರ್ಷ ಐವತ್ತು ಮೀರಿದರೂ ಇಪ್ಪತ್ತರ ಉತ್ಸಾಹಿಗಳು . ಅವರಲ್ಲೆಲ್ಲ ಮಾತಾಡುತ್ತಿದ್ದಂತೆ ನನಗೂ ಹೊಸ ಹುರುಪು ಬಂತು.  ಮರುದಿನ ನಮ್ಮನ್ನು ಕಿರುವಿಹಾರಕ್ಕೆ  ಕರೆದೊಯ್ದರು.  ಎತ್ತರದ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುವ ಕಾರಣ ನಮ್ಮ ದೇಹ ಅಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಇದು ಅತ್ಯಗತ್ಯ. ಮುನ್ಶಿಯಾರಿಯಿಂದ  ಪಂಚ ಚೂಲಿ  ಶಿಖರಗಳ ಸಮೂಹ ಅದ್ಭುತವಾಗಿ ಕಾಣಿಸುತ್ತದೆ. ಸ್ವಲ್ಪ ನಡೆಯುತ್ತಿದ್ದಂತೆಯೇ ಏದುಸಿರು ಬರಲಾರಂಭಿಸಿತು . ನಡಿಗೆಯನ್ನು ನಿಧಾನ ಮಾಡಿ ಹತ್ತಲು ಆರಂಭಿಸಿದೆವು .ಅಲ್ಲಿಯೇ ಇರುವ ದೇವಿಯ ಮಂದಿರ ವೊಂದಕ್ಕೆ ಭೇಟಿ ನೀಡಿದ ಬಳಿಕ ಬೇಸ್ ಕ್ಯಾಂಪಿಗೆ ಮರಳಿ ಬಂದು ,ಮರುದಿನದ ಚಾರಣಕ್ಕೆ ಸಿದ್ಧತೆ ನಡೆಸಿದೆವು . ಚಾರಣಕ್ಕೆ ಅಗತ್ಯವಾದಷ್ಟು ಸಾಮಗ್ರಿಗಳನ್ನು ಬ್ಯಾಕ್ ಪ್ಯಾಕ್ನಲ್ಲಿ ತುಂಬಿಸಿ ಉಳಿದೆಲ್ಲ ಸಾಮಗ್ರಿಗಳನ್ನು ಬೇಸ್ ಕ್ಯಾಂಪಿನಲ್ಲಿ ಇಟ್ಟು ನಿದ್ದೆ ಹೋದೆ .

ಚಾರಣ 
ಮರುದಿನ ಮುಂಜಾನೆ ೬ ಗಂಟೆ ಗೆ ನಿಗದಿತ ಸಮಯಕ್ಕೆ ಚಾರಣ ಪ್ರಾರಂಭವಾಯಿತು .ದಾರಿಯುದ್ದಕ್ಕೂ ಕಾಣಸಿಗುವ ಪ್ರಕೃತಿಯ ಬಣ್ಣಗಳನ್ನು ಕಾಣುವಾಗ ಹಿಂದಿ ಚಲನಚಿತ್ರದ ಹಾಡು " ಯೇ  ಕೌನ್  ಚಿತ್ರ ಕಾರ್ ಹೇ " ನೆನಪಾಯಿತು .ಮೇ ತಿಂಗಳಿನ ಅವಧಿ ಯಾದ ಕಾರಣ ಹಿಮ ಇರಲಿಲ್ಲ . ಬರೀ ಗುಡ್ಡಗಳು .ಒಂದಾದ ಮೇಲೆ ಇನ್ನೊಂದು . ನಾವು ಎತ್ತರಕ್ಕೆ ಏರುತ್ತಿದ್ದಂತೆ ಪ್ರಕೃತಿ ಮತ್ತಷ್ಟು ಸುಂದರವಾಗಿ ಕಾಣತೊಡಗಿತ್ತು.  ಮೊದಲ ದಿನದ ಕ್ಯಾಂಪ್  ಮಾರ್ಟೋಲಿ ಎಂಬ  ಪ್ರದೇಶದಲ್ಲಿ .  ಜನವಸತಿ ಯಾವುದೂ ಇಲ್ಲದ ಕಡೆ ಹಿಮಾಲಯದ ಪರ್ವತ ವೊಂದರಲ್ಲಿ ರಾತ್ರಿ ಕಳೆಯುವುದು ಒಂದು ಅಪೂರ್ವ ಅನುಭವ. ಟಿವಿ ,ಕಂಪ್ಯೂಟರ್ ,ಕರೆಂಟು ಇವ್ಯಾವುದೂ ಇಲ್ಲ .ಮೊಬೈಲಿನ ಗಂಟೆ   ಮೊಳಗುವುದೇ ಇಲ್ಲ . ಅಷ್ಟೊಂದು ವಿಶಾಲವಾದ  ಪರ್ವತ ಶ್ರೇಣಿಯಲ್ಲಿ ಅಲ್ಲಲ್ಲಿ ಮೇಯುವ ಕುರಿಗಳ ಗಂಟೆಗಳ ನಾದ, ಝರಿಗಳು ಹರಿಯುವ ಸದ್ದು  .ಅಚಾನಕ್ಕಾಗಿ ಸುರಿಯುವ ಮಳೆ .ದಿನವಿಡಿ ಟ್ರೆಕ್ಕಿಂಗ್ ಮಾಡಿ ದಣಿದ ದೇಹಕ್ಕೆ ಸ್ಲೀಪಿಂಗ್ ಬ್ಯಾಗ್ನೊಳಗೆ ನುಸುಳುತ್ತಿದ್ದ ಗಾಢ ನಿದ್ದೆ .ರಾತ್ರಿಯಲ್ಲಿ   ಟೆಂಟ್  ನಿಂದ  ಹೊರಬಂದು ಆಗಸದ ಕಡೆ ಕತ್ತು ಮಾಡಿದರೆ ಮೇಲುಗಡೆ ನಕ್ಷತ್ರಗಳ ಛಾವಣಿ .  ಒಮ್ಮೆ ಹಿಮಾಲಯ ಚಾರಣಕ್ಕೆ ಹೋದವರು ಮತ್ತೆ ಮತ್ತೆ ಹೊಸ ಚಾರಣಗಳಿಗೆ ಹೋಗುವುದು ಇಂತಹ ದಿವ್ಯ  ಅನುಭವಕ್ಕೇ  ಇರಬೇಕು! 

ಚಾರಣದ ಮುಂದಿನ ಎರಡು  ದಿನ ನಾವು ಎತ್ತರಕ್ಕೆ, ಮತ್ತಷ್ಟು ಎತ್ತರಕ್ಕೆ ಚಾರಣ ಮಾಡುತ್ತಾ ಸಾಗಿದೆವು. ಕಲ್ಲು ಬಂಡೆಗಳ ಹಾದಿ. ಅಲ್ಲಲ್ಲಿ ತೊರೆಗಳು. ಸಣ್ಣ ಪುಟ್ಟ ಸಸ್ಯಗಳು, ಬಣ್ಣ ಬಣ್ಣದ ಪುಟಾಣಿ  ಹೂವುಗಳು ಇಂತಹ ಮಾರ್ಗದಲ್ಲಿ ನಡೆಯುವುದು ಮನಸ್ಸಿಗೆ ಮುದವನ್ನು ನೀಡುತ್ತದೆ.   ರೂಡ್ ಖನ್ ಮತ್ತು ತಂತಿ ಎಂಬ ಪ್ರದೇಶದಲ್ಲಿ ಉಳಿದುಕೊಂಡೆವು. ಎತ್ತರಕ್ಕೆ ಏರುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುವ ಕಾರಣ ಒಂದು ರೀತಿ ವಿಚಿತ್ರ ಅನುಭವವಾಗುತ್ತದೆ. ನಿಧಾನವಾಗಿ ಸಾಗುವುದು, ಹೆಚ್ಚು ನೀರು ಕುಡಿಯುವುದು ತುಂಬಾ ಅಗತ್ಯ. ಕಡೆಯ ದಿನ ನಾವು ತಲುಪಿದ್ದು ಖಾಲಿಯಾ ಟಾಪ್ ಎಂಬ ಹಚ್ಚ ಹಸುರಿನ ಹುಲ್ಲುಗಾವಲಿನ ಪದೇಶಕ್ಕೆ. ಅದರ ಸುತ್ತಲೂ ಪರ್ವತ ಶ್ರೇಣಿಗಳು. ಸಮುದ್ರ ಮಟ್ಟದಿಂದ ೧೨೦೦೦ ಅಡಿಗಳಷ್ಟು ಮೇಲಿರುವ ಇದು ಬಹಳ ಸುಂದರವಾಗಿದೆ. ಚಾರಣಿಗರೆಲ್ಲರಿಗೂ ಗಮ್ಯ ಸ್ಥಾನ ತಲುಪಿದುದಕ್ಕೆ ಆದ ಸಂತಸಕ್ಕೆ ಎಣೆಯೇ ಇಲ್ಲ! 


ಹಿಮಾಲಯದಲ್ಲಿ ಮಂಜು ಮುಸುಕುವಿಕೆ, ಮಳೆ ಯಾವ ಹೊತ್ತಿನಲ್ಲಾದರೂ ಆಗಬಹುದು. ಖಾಲಿಯಾ ಟಾಪ್ ನಲ್ಲಿ ಒಮ್ಮೆಗೆ ಮಂಜು ಮುಸುಕಿ , ೩-೪ ಅಡಿಗಳಷ್ಟು ದೂರದಲ್ಲಿರುವ ವಸ್ತುವೂ ಕಾಣಿಸದಂತಾಯಿತು.  ಅಲ್ಲಿಂದ ಇಳಿದು ವಾಪಸು ಬರುವಾಗ ಒಮ್ಮೆಗೆ ಆಲಿಕಲ್ಲುಗಳ ಸುರಿ ಮಳೆ. ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹವಾಮಾನ ಬದಲಾವಣೆಯೇ ಹಿಮಾಲಯದ ವೈಶಿಷ್ಟ್ಯ. ಚಾರಣಿಗ ಎಲ್ಲದಕ್ಕೂ ಸಿಧ್ಧವಾಗಿಯೇ ಇರಬೇಕು. 

ಒಟ್ಟಿನಲ್ಲಿ ಹೇಳುವುದಾದರೆ ಈ ಚಾರಣವು  ನನ್ನಲ್ಲಿ ಹೊಸ ಹುರುಪನ್ನು ಹುಟ್ಟಿಸಿತು. ನನ್ನ ಕನಸಿನ ಹಿಮಾಲಯವನ್ನು , ಅಲ್ಲಿಯ ಜನಜೀವನವನ್ನೂ ಹತ್ತಿರದಿಂದ ನೋಡುವಂತಾಯಿತು. ಅಂತ ಪ್ರತಿಕೂಲ ವಾತಾವರಣದಲ್ಲೂಕಷ್ಟಪಟ್ಟು  ಜೀವನ ಮಾಡುವ ಜನರ ಮನೋಸ್ಥೈರ್ಯಕ್ಕೆ ತಲೆಬಾಗಿದೆ. ಹಿಮಾಲಯ ಒಂದು ಅದ್ಭುತ ವಿಸ್ಮಯ. ಸೃಷ್ಟಿಯ ಸಮಸ್ತವನ್ನೂ ತನ್ನಲ್ಲಿ ಇರಿಸಿ ಗಂಭೀರವಾಗಿ ತಲೆ ಎತ್ತಿ ನಿಂತಿರುವ ಹಿಮಾಲಯಕ್ಕೆ ನನ್ನ ಶರಣು. 


(ಉದಯವಾಣಿಯಲ್ಲಿ ಪ್ರಕಟಿತ)

3 comments:

VENU VINOD said...

nicely written...himalaya is always favorite to nature lovers

sunaath said...

ವಿವರಪೂರ್ಣವಾದ ಸುಂದರ ಬರಹ. ಅಭಿನಂದನೆಗಳು.

Archu said...

Thank you Venu Vinod and Sunaath Kaaka !!