Pages

Tuesday, August 12, 2008

ಹೀಗೊಂದು ಸ್ವಗತ...

ಸುಮಾರು ದಿನಗಳಿಂದ ಅಂದುಕೊಳ್ಳುತ್ತಿದ್ದೆ.ಕನ್ನಡ ಅಕ್ಷರ ಬರೆಯದೆ ಬಹಳ ದಿನಗಳಾದವು.ಏನಾದರೂ ಲೇಖನ ಬರೆಯಲೆ? ಉಹ್ಮ್ಮ್..ಕವನ..ಕಥೆ..ಅಂತೂ ಏನೋ ಒಂದು..ಮನಸ್ಸಿಗೆ ತೋಚಿದ್ದು..ಕಾಗದ,ಪೆನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಮನಸ್ಸೆಲ್ಲಾ ಖಾಲಿ ಖಾಲಿ..ಮನಸ್ಸು ಮೌನದ ಮೊರೆ ಹೊಕ್ಕಿಬಿಟ್ಟಿದೆ..ಯಾಕೆ ಹೀಗಾಯ್ತು? ನನ್ನ ಏಕತಾನದ ಜೀವನ ನನ್ನನ್ನು ಈ ಪರಿಯಾಗಿಸಿದೆಯೇ ? ನನಗೆ ಗೊತ್ತಿಲ್ಲ !! :(

ಇವತ್ತಿಗೆ ಆರು ತಿಂಗಳ ಹಿಂದೆ ನನ್ನ ಅಫೀಸು , ನನ್ನ ಮನೆಯಿಂದ ೧೬ ಕಿ.ಮೀ.ದೂರಕ್ಕೆ ಸ್ಥಳಾಂತರಗೊಂಡಿತು.ಗಡಿಯಾರದ ಟಿಕ್ ಟಿಕ್ ಸದ್ದಿಗೆ ಅನುಗುಣವಾಗಿ ನಡೆಯುವ ನನ್ನ ದಿನಚರಿ ಅಲ್ಲಿಂದ ಶುರುವಾಯಿತು..ಬೆಳಗ್ಗೆ ೬ ೩೦ ಗೆ ಅಲಾರ್ಮ್ ಸದ್ದಿಗೆ ಎದ್ದು, ಆಫೀಸಿಗೆ ಹೊರಡಲು ತಯಾರಾಗಿ,ತಿಂಡಿ ತಯಾರಿಸಿ,ತಿಂದು (ಮಾಡಿದ್ದುಣ್ಣೋ ಮಹಾರಾಯ !! ), ೭ ೪೫ ಕ್ಕೆ ಬಸ್ ಸ್ಟಾಪ್ ಗೆ ಬರುವ ಆಫೀಸ್ ಬಸ್ಸನ್ನು ಹಿಡಿಯುತ್ತೇನೆ.ಬಸ್ಸಲ್ಲಿ ಕುಳಿತಾಗ ಬೆಳಗ್ಗಿಂದ ಆ ಕ್ಷಣದವರೆಗಿನ ಗಡಿಬಿಡಿ ಕೊಂಚ ಹತೋಟಿಗೆ ಬಂದು,ಮನಸ್ಸು ನಿರಾಳವೆನಿಸುತ್ತದೆ.ಆಗೊಮ್ಮೆ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ, ಅಗೋ ನೋಡಿ ಶುರುವಾಯಿತು..ಬಸ್ಸಿನ ಯಾತ್ರೆ.ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ,ನೊಂದು,ಬೆಂದು,ಬಸವಳಿಯುವ ದುರವಸ್ಥೆಯನ್ನು ಅನುಭವಿಸಿದರೆ ಮಾತ್ರ ಅರಿಯಬಹುದೇ ವಿನಹ ನನ್ನ ಲೇಖನಿಯಿಂದ ಹೊರಬರುವ ಪದಗುಚ್ಛಗಳ ಸೆಣಸಾಟದಿಂದಲ್ಲ!!

ಜನಸಂಖ್ಯೆಯ ಹೆಚ್ಚಳ,ಕಿರಿದಾದ ರಸ್ತೆಗಳು,ಶಿಸ್ತು ಪಾಲಿಸದ (ಪಾಲಿಸುವ ಮಂದಿಯೂ ಇದ್ದಾರೆ ಕೆಲವರು ) ಜನ ಏನೆಲ್ಲ ಕಾರಣಗಳನ್ನು ಪಟ್ಟಿ ಮಾಡಲಿ?ಸಿಗ್ನಲ್ ಗಳಲ್ಲಿ ಒಂದಷ್ಟು ವಾಹನಗಳು ನಿಲ್ಲುತ್ತಿದ್ದಂತೆ ,ಕೆಂಪು ಸಿಗ್ನಲ್ ಕಾಣಿಸಿದರೂ ಸಕಲ ವಾಹನಗಳೂ ಏಕಕಾಲಕ್ಕೆ ಹಾರ್ನ್ ಬಳಸುವಾಗ ಉಂಟಾಗುವ ಶಬ್ದದ ಉತ್ಕಟತೆಗೆ,ಅದರ ನಾದ ತರಂಗಗಳ ವೈಭವಕ್ಕೆ ನಿಮ್ಮ ಕೋಮಲವಾದ ಕರ್ಣಗಳು ಎಷ್ಟೇ ಸಧೃಢವಾದ ಸ್ಥಿತಿಯಲ್ಲಿದ್ದರೂ ಹಾನಿಗೊಳಗಾಗವುವು ಎಂಬ ಮಾತು ಉತ್ಪ್ಪ್ರೇಕ್ಷೆಯಲ್ಲ!!

ರಾಶಿ ರಾಶಿ ವಾಹನಗಳು ಹೊರಹಾಕುವ ಧೂಮಸಾಗರದ ಲೀಲೆಯನ್ನು ಏನೆಂದು ಬರೆಯಲಿ?ಪುರಾಣ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳ ಆವರಣದಲ್ಲಿ ಹೋಮ ಹವನಾದಿಗಳ ಹೊಗೆಯೂ,ಮಂತ್ರಘೋಷವೂ , ಘಂಟಾ ನಾದವೂ ಕೇಳಿಬರುತ್ತಿತ್ತಂತೆ.ಈ ಕಾಲದಲ್ಲಿ ಬೆಂಗಳೂರಿನ ರಸ್ತೆಯಲ್ಲಿ ವಾಹನಗಳ ಹೊಗೆಯೂ,ಹಾರ್ನುಗಳ ಕರ್ಕಶ ಧ್ವನಿಯೂ ತುಂಬಿ ಹೋಗಿದೆ. ಮಧ್ಯ ಮಧ್ಯ ವಾಹನ ಚಾಲಕರಿಂದ ಹೊರಹೊಮ್ಮುವ ಆಣಿಮುತ್ತುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಇವೆಲ್ಲದರ ಮಧ್ಯೆ ವಾಹನಗಳು ಯಾವ ದಿಕ್ಕಿನಿಂದಲೂ ಬರಬಹುದು.ಯಾವುದೇ ಸೂಚನೆ ನೀಡದೆಯೂ ಅವು ಬೇಕಾದ ದಿಕ್ಕಿಗೆ ತಿರುಗಬಹುದು.ನಿಮ್ಮ ಹಣೆಯಲ್ಲಿ ಬ್ರಹ್ಮ ಆಯುಷ್ಯದ ರೇಖೆಯನ್ನು ಸ್ವಲ್ಪ ದೀರ್ಘವಾಗಿ ಎಳೆದಿದ್ದರೆ ನೀವು ಬಚಾವ್.ಇಲ್ಲದಿದ್ದರೆ ಯಮನ ದೂತರು ನಿಮ್ಮನ್ನು ಕರೆದೊಯ್ಯಲು ತಯಾರಾಗಿಯೇ ಇದ್ದಾರೆ.ರಸ್ತೆಗಳ ಮೇಲೆ ವಾಹನಗಳ ಜತೆ ಜತೆಯೇ ಸಾಗುವ ಎಮ್ಮೆಗಳು ಹಾಗೂ ಕೋಣಗಳ ಹಿಂಡು ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ!!

ವಾಹನಗಳ ಬಗ್ಗೆ ಇಶ್ಟೆಲ್ಲಾ ಬರೆದು,ರಸ್ತೆ ಬಗ್ಗೆ ಬರೆಯದಿದ್ದರೆ ಹೇಗೆ? ಕೆಲವೊಂದೆಡೆ ಡಾಮರು , ಕೆಲವೊಂದೆಡೆ ಬರೀ ನೆಲ,ಮತ್ತೆ ಕೆಲವೆಡೆ ತೇಪ ಹಾಕಿದ ರಸ್ತೆಗಳು, ಅನವಶ್ಯಕ ರಸ್ತೆ ಉಬ್ಬುಗಳು ಕೆಲವೆಡೆ..ಮಳೆ ಬಂದರಂತೂ ಬೆಂಗಳೂರಿನ ರಸ್ತೆಗಳು ದೇವರಿಗೇ ಪ್ರೀತಿ.ಒಳಚರಂಡಿಯ ಅಷ್ಟೂ ನೀರು ರಸ್ತೆ ಮೇಲೆ ಬಂದು ಬಿಡುತ್ತದೆ. ಪಾಪ ಅದಕ್ಕೂ ಮಳೆ ನೋಡುವ ಉತ್ಸಾಹ !! ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋದಿರೋ,ಚರಂಡಿ ನೀರು ಚೆಲುವಿನ ಚಿತ್ತಾರವನ್ನು ನಿಮ್ಮ ಮೇಲೆ ಮೂಡಿಸದೇ ಇರುವುದಿಲ್ಲ.
ಒಂದಂತೂ ನಿಜ, ನೀವು ನಾಲ್ಕು ಸಲ ಸ್ನಾನ ಮಾಡದ ಹೊರತು, ನಿಮ್ಮ ಹತ್ತಿರ ಬೇರೆ ಯಾರೂ ಬರಲಾರರು.
" ಹೇಮಾ ಮಾಲಿನಿಯ ಕೆನ್ನೆಗಿಂತಲೂ ನುಣುಪಾಗಿರುವ ರಸ್ತೆಗಳು" ಎಂಬ ವರ್ಣನೆ ನಿಮಗೆ ಕಡತದಲ್ಲಿ ಮಾತ್ರ ಸಿಕ್ಕೀತು.

ಹ್ಮ್ಮ್..ಮರಗಳು..ಮನೆಗೊಂದು ಮರ..ಊರಿಗೊಂದು ವನ..ಗಾದೆಯೇನೋ ಇದೆ. ರಸ್ತೆ ಅಗಲೀಕರಣದ ನೆಪದಲ್ಲಿ ಇರುವ ಮರಗಳು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ ಹಾಕುವವರ ಮಧ್ಯೆ "ಪರಿಸರ ಉಳಿಸಿ" ಘೋಷಣೆ ಮೆತ್ತಗಾಗಿ ಬಿಡುತ್ತದೆ. ಕಾಂಕ್ರೀಟ್ ಕಾಡಿನಲ್ಲಿ ಹಸಿರ ಹುಡುಕುವ ನಿಮ್ಮ ಕಣ್ಣುಗಳು ಸುಸ್ತಾಗಿ ಹೋಗುತ್ತವೆ.ಧೂಳಿನ ಕಣಗಳು ನಿಮ್ಮ ಕಣ್ಣಲ್ಲಿ ತುಂಬಿ ಕಣ್ಣು ಮಂಜಾಗುವಂತೆ ಮಾಡುತ್ತವೆ.

ನನ್ನ ಶಾಲಾ ದಿನಗಳಲ್ಲೂ ನಾನು ಬಸ್ನಲ್ಲಿ ಪಯಣಿಸುತ್ತಿದ್ದೆ.ಹೆಗಲಲ್ಲಿ ಪುಸ್ತಕದ ಹೊರೆ,ಕೈಯಲ್ಲಿ ಬುತ್ತಿ ಛತ್ರಿ.ದಾರಿಯುದ್ದಕ್ಕೂ ಕಾಡು ಅಥವಾ ಕಾಡಿನ ಮಧ್ಯದಲ್ಲೇ ದಾರಿ ಎನ್ನಲೆ? ಆಗ ಇದ್ದ ೨-೩ ಬಸ್ಸುಗಳು,೪-೫ ಜೀಪುಗಳು,ಮತ್ತೆ ಕೆಲವು ಮಿನಿ ವಾಹನಗಳು ಟ್ರಾಫಿಕ್ ಜಾಮ್ ಗೆ ಕಾಣಿಕೆ ನೀಡಲು ಸೋತಿದ್ದವು.ಮಳೆ,ಹಕ್ಕಿಗಳ ಚಿಲಿಪಿಲಿ,ತಲೆಯಲ್ಲಿ ಮುಡಿದ ಮಲ್ಲಿಗೆ,ಗುಲಾಬಿಯ ಪರಿಮಳ,ಸಹಪಯಣಿಗ ವಿದ್ಯಾರ್ಥಿಗಳ ಸ್ನೇಹದ ನುಡಿಗಳು ಆ ಬಸ್ ಪಯಣದ ಸಂತಸಕ್ಕೆ ಕಾರಣವಾಗಿದ್ದವು.ಆಗಲೂ ನಾನು ದಿನಕ್ಕೆ ೩೨ ಕಿ.ಮೀ ಪಯಣಿಸುತ್ತಿದ್ದೆ. ಈಗಲೂ ಅಷ್ಟೇ ದೂರ ..ಆದರೆ ಬಸ್ ಪಯಣದ ಅನುಭವಕ್ಕೆ ಅಜ ಗಜಾಂತರ!!

ಆದರೆ ಇದ್ದುದರಲ್ಲೇ ನೆಮ್ಮದಿಯ ವಿಷಯವೆಂದರೆ ನಾನು ಆಫೀಸ್ ಬಸ್ ನಲ್ಲಿ ಸಂಚರಿಸುವ ಕಾರಣ ಬಸ್ ನೊಳಗಿನ ನೂಕು ನುಗ್ಗಲು,ಸ್ಥಳಾವಕಾಶದ ಕೊರತೆ,ಪಿಕ್ ಪಾಕೆಟ್ ಭಯ ಇತ್ಯಾದಿಗಳ ಚಿಂತೆ ಇಲ್ಲ.ಕೆಲವು ಖಾಸಗಿ ಬಸ್ ಗಳಲ್ಲಿ ಕೇಳಿಸುವಂತಹ ಕರ್ಕಷ ಹಾಡುಗಳಿಲ್ಲ.



ಅಂತೂ ಇಂತೂ ಸುದೀರ್ಘ ಪಯಣ, ಆಫೀಸಿನ ಕೆಲಸ ಮುಗಿಸಿ ಮನೆಗೆ ಬಂದು ಮತ್ತೆ ಮನೆಕೆಲಸದಲ್ಲಿ ತೊಡಗುತ್ತೇನೆ.ಒಂದಷ್ಟು ಹೊತ್ತು ಮೌನವಾಗಿದ್ದು,ಧ್ಯಾನ ಮಾಡಿ,ದೇವರ ಸ್ತೋತ್ರ ಹೇಳಿ,ಪಿಟೀಲು ನುಡಿಸಿ, ಕೆಲವೊಮ್ಮೆ ಯಾವುದಾದರೂ ಪುಸ್ತಕ ತಿರುವಿ ಹಾಕಿ,ಅಡಿಗೆ ಮಾಡಿ,ಊಟ ಮಾಡಿ, ನಿದ್ದೆಗೆ ಜಾರುತ್ತೇನೆ. ಮರುದಿನ ಯಥಾಪ್ರಕಾರ...

Sunday, August 3, 2008

ಕಣಿಲೆ ಪಲ್ಯ




ಮಲೆನಾಡಿನಲ್ಲಿ ಮಳೆಗಾಲದ ಸಮಯ ಚಿಗುರುವ ಎಳೆ ಬಿದಿರು ವಿಧ ವಿಧದ ಖಾದ್ಯಗಳಾಗಿ ಪರಿವರ್ತನೆಯಾಗುತ್ತದೆ.
ಕಣಿಲೆಯ ಪಲ್ಯವನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸುತ್ತಿದ್ದೇನೆ.

ಹೆಚ್ಚಿದ ಕಣಿಲೆ :೩ ಕಪ್
ಎಣ್ಣೆ:ಸ್ವಲ್ಪ
ಸಾಸಿವೆ,ಜೀರಿಗೆ,ಅರಸಿನ,ಉದ್ದಿನ ಬೇಳೆ ತಲಾ ಒಂದು ಚಮಚ
ಕೆಂಪು ಮೆಣಸು : ೫
ಬೆಲ್ಲ : ಸ್ವಲ್ಪ (ಸಣ್ಣ ಅಡಿಕೆ ಗಾತ್ರದಷ್ಟು)
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ

ಕಣಿಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. (ಸುಮಾರು ೭-೮ ಸೀಟಿ ಬರುವ ತನಕ )
ಅಮೇಲೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ,ಮೆಣಸು,ಅರಸಿನ, ಉದ್ದು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಬೇಯಿಸಿದ ಕಣಿಲೆಯನ್ನು ಸೇರಿಸಿ. ಬೆಲ್ಲ,ಉಪ್ಪು ಹಾಕಿ, ಮಂದ ಉರಿಯಲ್ಲಿ ೧೦ ನಿಮಿಷ ಬೇಯಿಸಿ.

ಈಗ ಕಣಿಲೆಯ ಪಲ್ಯ ತಯಾರು.

ವಿ.ಸೂ. ಕಣಿಲೆಯನ್ನು ಕತ್ತರಿಸಿ ತಂದ ಕೂಡಲೇ ತಿನ್ನುವಂತಿಲ್ಲ. ಅದನ್ನು ಸಣ್ಣದಾಗಿ ಹೆಚ್ಚಿ, ನೀರಿನಲ್ಲಿ ಮೂರು-ನಾಲ್ಕು ದಿನ ನೆನೆ ಹಾಕಿದ ಬಳಿಕವಷ್ಟೇ ಬಳಕೆಗೆ ಯೋಗ್ಯವಾಗುತ್ತದೆ. ಕಣಿಲೆಯ ತೊಗಟೆಯನ್ನು ನಮ್ಮ ಕಡೆ ನೆಲದಲ್ಲಿ ಹೂತು ಹಾಕುತ್ತಾರೆ.ಕಾರ್‍ಅಣ ಜಾನುವಾರುಗಳು ತಿಂದು ಅವಕ್ಕೆ ಅಪಾಯವಾಗದಿರಲಿ ಎಂದು.