Pages

Thursday, May 10, 2012


ಸಮಾಜ ಸುಧಾರಣೆಗೆ ನೆರವಾದೀತೇ ಸತ್ಯಮೇವ ಜಯತೇ?

 


ಟಿ.ವಿ.ಯ ಸ್ವಿಚ್ಚು ಒತ್ತಿದೊಡನೆ ಸಾಕು ಪುಂಖಾನುಪುಂಖವಾಗಿ ಅತ್ತೆ - ಸೊಸೆ ಜಗಳದ ಸಾವಿರದ ಎಂಟನೆಯ ಕಂತು ಪ್ರಸಾರವಾಗುತ್ತಿರುತ್ತದೆ. ಸಾಸಿವೆ ಕಾಳಿನಷ್ಟು ಮಹತ್ವದ ಸುದ್ದಿ ಬೃಹದಾಕಾರವಾಗಿ ಹಿಗ್ಗಿ ಅಂತಾರಾಷ್ಟ್ರೀಯ ಮಹತ್ವದ್ದಾಗಿಬಿಡುತ್ತದೆ. ರಿಯಾಲಿಟಿ ಶೋಗಳಂತೂ ದುಃಖ ದಾರಿದ್ರ್ಯವನ್ನೇ ಹೈಲೈಟ್ ಮಾಡಿ, ಸ್ಪರ್ಧಾಳುಗಳು ಅಳುವ; ಜಗಳವಾಡುವ ಸಂಗತಿಗಳಿಗೇ ಒತ್ತು ಕೊಡುತ್ತವೆ. ಇಲ್ಲವೇ ಮನೆಯ ಅತ್ಯಂತ ಖಾಸಗಿ ಸಂಗತಿಗಳನ್ನು ಜಗಜ್ಹಾಹೀರು ಮಾಡುವಲ್ಲಿ ಸಫಲವಾಗುತ್ತವೆ. ಇಂತಹ ಸಮಯದಲ್ಲಿ ನಮಗೆ ಬೆಳಕು ತೋರುವ, ಸದಭಿರುಚಿಯ ಮತ್ತು ಉತ್ತಮ ಸಂದೇಶ ನೀಡುವ ಕಾರ್ಯಕ್ರಮಗಳು ಬೇಕು ಎಂದೆನಿಸಲು ಶುರುವಾಗುವ ಹೊತ್ತಿಗೆ 'ಸತ್ಯಮೇವ ಜಯತೇ'ಮೂಡಿಬರುತ್ತಿದೆ.

ರಾಷ್ಟ್ರದ ವಿವಿಧ ಭಾಷೆಗಳಲ್ಲಿ , ಖಾಸಗಿ ಹಾಗೂ ದೂರದರ್ಶನ ಚಾನೆಲ್‌ಗಳಲ್ಲಿ ಏಕ ಕಾಲಕ್ಕೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಖ್ಯಾತ ನಟ ಆಮೀರ್ ಖಾನ್ ಕಲ್ಪನೆಯ ಕೂಸು. ಸಾಮಾಜಿಕ ಸಮಸ್ಯೆಯೊಂದರ ಬೆನ್ನು ಹತ್ತಿ,ಆ ಸಮಸ್ಯೆಯ ಹಲವು ಆಯಾಮಗಳನ್ನು ತೆರೆದಿಡುವ ಪ್ರಯತ್ನವನ್ನು ಈ ಕಾರ್ಯಕ್ರಮ ಮಾಡಿದೆ. ಮೊದಲ ಕಂತಿನಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಚಾರದತ್ತ ಬೆಳಕು ಹರಿಸಿದ್ದಾರೆ. ಈ ಸಮಸ್ಯೆಗೆ ಬಲಿಯಾದವರ, ಈ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿರುವ ಮಹಿಳೆಯರ ಸಂದರ್ಶನವಂತೂ ಕಟು ವಾಸ್ತವತೆಗೆ ಕನ್ನಡಿ ಹಿಡಿದಂತಿದೆ. ಇಲ್ಲಿ ಅವರು ಖ್ಯಾತ ವೈದ್ಯರು, ವಕೀಲರು, ಸಮಾಜ ಸೇವಕರು, ಪತ್ರಕರ್ತರು ಹಾಗೂ ಜನಸಾಮಾನ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಇದು ಅವಿದ್ಯಾವಂತರಲ್ಲಿ, ಹಳ್ಳಿಯವರಲ್ಲಿ ಮಾತ್ರ ಇರುವುದೆಂಬ ಜನರ ಕಲ್ಪನೆಗೆ ವಿರೋಧವಾಗಿ , ಸಮಾಜದ ಎಲ್ಲ ಸ್ತರಗಳಲ್ಲೂ ಇದು ಯಾವ ಪರಿಯಾಗಿ ಹಾಸುಹೊಕ್ಕಾಗಿದೆ ಎಂಬ ವಿಚಾರ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಪ್ರಾಣವನ್ನು ರಕ್ಷಿಸಬೇಕಾದ ವೈದ್ಯರೇ ಇದನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಒಂದು ಸಮಸ್ಯೆಯ ಬಗೆಗೆ, ಅದರ ಪರಿಣಾಮಗಳು ಮತ್ತು ಅದರಿಂದ ಹೊರ ಬರುವ ಬಗೆಗೆ, ಆ ಸಮಸ್ಯೆಯನ್ನು ಎದುರಿಸುವವರ ಬಗೆಗೆ ಆಮೀರ್ ಖಾನ್ ಮತ್ತು ತಂಡ ಸಮಗ್ರವಾಗಿ ಅಧ್ಯಯನ ನಡೆಸಿದೆ. ಅವರು ನೀಡುವ ಅಂಕಿ ಅಂಶಗಳು ನಮ್ಮಲ್ಲಿ ಭೀತಿ ಹುಟ್ಟಿಸುವ ಹೊತ್ತಿಗೆ, ಅವರು ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿಸಿ, ಅದರಲ್ಲಿ ಯಶಸ್ವಿಯಾದ ಊರಿನ ಕಥೆಯನ್ನೂ ಹೇಳುತ್ತಾರೆ. ಸಕಾರಾತ್ಮಕ ಚಿಂತನೆಗೆ ಅನುವು ಮಾಡಿಕೊಡುತ್ತಾರೆ. ಅವರೇ ಅನ್ನುವಂತೆ ಒಂದು ಕಾರ್ಯಕ್ರಮ ಮಾಡಿದ ಕೂಡಲೇ ಸಮಸ್ಯೆ ಪರಿಹಾರವಾಯಿತೆಂದು ಅರ್ಥವಲ್ಲ. ನಮ್ಮ ನಿಮ್ಮೆಲ್ಲರ ದೃಷ್ಟಿಕೋನ ಬದಲಾದರೆ ಮಾತ್ರ ಇದು ಸಾಧ್ಯ ಎನ್ನುವ ಸಂದೇಶವನ್ನು ನೀಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ನಮಗೆ ಇಂತಹ ಒಂದು ಕಾರ್ಯಕ್ರಮದ ಅವಶ್ಯಕತೆ ಬಹಳವಿತ್ತು. ಆಮೀರ್ ಖಾನ್ ಇದನ್ನು ಪೂರೈಸಿದ್ದಾರೆ.

ಯಾವುದೇ ಸಿನಿಮಾ ಆಗಲೀ, ಧಾರಾವಾಹಿಯೇ ಆಗಲೀ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಸಂಗತಿಗಳ ಬಗ್ಗೆ ಮಾತನಾಡತೊಡಗಿದಾಗ ನಾವು ಅವುಗಳ ಜತೆಗೆ ಕೂಡಲೇ ಸ್ಪಂದಿಸತೊಡಗುತ್ತೇವೆ. ಒಂದೊಮ್ಮೆ ನಮ್ಮ ಜೀವನದಲ್ಲಿ ನಾವು 'ಅಸಾಧ್ಯ' ಎನ್ನುವ ಸಂಗತಿಗಳನ್ನು ಸಿನಿಮಾದ ನಾಯಕ ಮಾಡಿ ತೋರಿಸಿದಾಗ ನಾವು ಭ್ರಾಮಕ ಲೋಕಕ್ಕೆ ತೆರೆದುಕೊಳ್ಳುತ್ತೇವೆ. ಆಮೀರ್ ಖಾನ್‌ರ ಚಲನಚಿತ್ರಗಳು ನಮಗೆ ಮತ್ತಷ್ಟು ಇಷ್ಟವಾಗಲು ಕಾರಣ ಅವರು ಎತ್ತಿಕೊಳ್ಳುವ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಭಿನ್ನ ಚಿಂತನೆ. ಅವರ 'ತಾರೆ ಜಮೀನ್ ಪರ' ಬಂದಾಗ ನಾವು ನಮ್ಮ ನಡುವೆಯೇ ಇರುವ 'ವಿಶೇಷ' ಮಕ್ಕಳ ಬಗೆಗೆ ಯೋಚಿಸತೊಡಗಿ, ಆ ಸಿನಿಮಾವನ್ನು ಮತ್ತಷ್ಟು ಆಪ್ತವಾಗಿಸಿಕೊಂಡೆವು. ಅಂತೆಯೇ ಆತನ ಮುಂದಿನ ಚಿತ್ರ 'ತ್ರೀ ಈಡಿಯೆಟ್ಸ್' ಇಂದಿನ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಯಿತು. ಅವರ 'ಸತ್ಯಮೇವ ಜಯತೆ' ಕಾರ್ಯಕ್ರಮಕ್ಕೆ, ಡಬ್ಬಿಂಗ್ ಕುರಿತಾದ ಎಷ್ಟೇ ಅಪಸ್ವರಗಳು ಎದ್ದರೂ ನಾವು ಆ ಕಾರ್ಯಕ್ರಮವನ್ನು ಬಹಳಷ್ಟು ಖುಷಿಯಿಂದಲೇ ಸ್ವೀಕರಿಸಿದ್ದೇವೆ.

ಆದರೆ, ಒಂದು ಮಾತು. ಯಾವುದೇ ಟಿ.ವಿ. ವಾಹಿನಿಯ ಮುಖ್ಯ ಉದ್ದೇಶ ಟಿ.ಆರ್.ಪಿ. ಹೆಚ್ಚಿಸುವುದು ಮತ್ತು ತನ್ಮೂಲಕ ಹೆಚ್ಚು ಲಾಭ ಗಳಿಸುವುದು. ಇಂತಹುದರಲ್ಲಿ ಕಡಿಮೆ ಶ್ರಮದಲ್ಲಿ ಹೆಚ್ಚು ಹಣ ಗಳಿಸುವ ರಸಪ್ರಶ್ನೆಯಂತಹ ರಿಯಾಲಿಟಿ ಶೋಗಳು ಅಥವಾ ಜನರ ಖಾಸಗಿ ವಿಚಾರಗಳನ್ನು ಮತ್ತಷ್ಟು ಹಿರಿದಾಗಿಸಿ, ಜಗಜ್ಜಾಹೀರು ಮಾಡುವಂಥ ರಿಯಾಲಿಟಿ ಶೋಗಳು ಬರುತ್ತಿರುವ ಕಾಲಕ್ಕೆ 'ಸತ್ಯಮೇವ ಜಯತೆ'ಯ ನಿಜವಾದ ಉದ್ದೇಶ ಏನು ಎಂಬ ಪ್ರಶ್ನೆ ಏಳುತ್ತದೆ. ಮನೆಯೊಳಗೇ ಕುಳಿತು ಅಥವಾ ಕುಟುಂಬದ ಜತೆಯೇ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಾದ ವಿಚಾರಗಳನ್ನು ಟಿ.ವಿ. ವಾಹಿನಿಯ ಮೂಲಕ ಜಗತ್ತಿಗೆ ಬಿತ್ತರಿಸಿ, ಇರುವ ಅಸಮಾಧಾನಗಳನ್ನು, ಮನಸ್ಸಿನ ಗೋಜಲುಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆಯೇ? ಮೇಲ್ನೋಟಕ್ಕೆ ಇಂತಹ ಶೋಗಳು ಸಮಾಜಮುಖಿ ಅನಿಸಿದರೂ ಇವು ಕುಟುಂಬದ ಖಾಸಗಿತನವನ್ನು ಬಯಲುಗೊಳಿಸುತ್ತಿವೆಯೇ? ಭಾವನೆಗಳನ್ನು ಮಾರಾಟದ ಸರಕಾಗಿಸುವ ಹಿನ್ನೆಲೆಯಲ್ಲಿ ಇಂತಹ ದಿನನಿತ್ಯದ ಘಟನೆಗಳನ್ನು ಇನ್ನಷ್ಟು ಹಿಗ್ಗಿಸಿ ಅಪಾಯ ತಂದೊಡ್ಡುತ್ತಿದ್ದೇವೆಯೇ? ಇದು ಚಿಂತಿಸಬೇಕಾದ ವಿಚಾರ.

ಇಷ್ಟೆಲ್ಲ ಇದ್ದರೂ ನಮಗೆಲ್ಲ ಒಂದೇ ಆಸೆ. ಈ ಕಾರ್ಯಕ್ರಮದ ಸಂದೇಶ ಹುಸಿಯಾಗದಿರಲಿ. ಸಮಾಜದಲ್ಲಿ ನೊಂದವರಿಗೆ ದೀವಿಗೆಯಾಗಿ, ಅವರ ಬಾಳು ಹಸನಾಗಲಿ. 

(ಇವತ್ತಿನ ವಿಜಯಕರ್ನಾಟಕ ದಲ್ಲಿ ಪ್ರಕಟಿತ

Image courtesy : http://www.satyamevjayate.in/issue01/images/images/Watch-Full-Episode.jpg