Pages

Monday, October 25, 2021

ಕೈಲಾಸ ಮಾನಸ ಸರೋವರ ಯಾತ್ರೆ

ಕೈಲಾಸ ಮಾನಸ ಸರೋವರ ಯಾತ್ರೆಯ ನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದರೆ ಶ್ರದ್ಧಾಳುಗಳಿಗೆ ಅದು ದೇವರ ವಾಸಸ್ಥಾನ ,ಪ್ರಕೃತಿಯ ಆರಾಧಕರಿಗೆ ಸೌಂದರ್ಯದ ಖಜಾನೆ, ಯಾತ್ರಿಕರಿಗೆ ಅನಿಶ್ಚಿತತೆಗಳ ಸರಮಾಲೆ ಎಂದೇ ಹೇಳಬಹುದು .  ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ ,ಭೂಕುಸಿತ ,ಚೀನಾ ಸರ್ಕಾರದ ನೀತಿ ನಿಯಮಗಳು ,ಆರೋಗ್ಯದ ಲ್ಲಿ ಉಂಟಾಗಬಹುದಾದ ಏರುಪೇರು,ಆಮ್ಲಜನಕದ ಕೊರತೆ ,ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿಗಳಷ್ಟು ಎತ್ತರ ಇವೆಲ್ಲವೂ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಅತ್ಯಂತ ಕಠಿಣವಾಗಿಸುತ್ತವೆ .ಹಾಗಾಗಿ ಇದಕ್ಕೆ  ಬಹಳ ಹೆಚ್ಚಿನ ದೈಹಿಕ ಹಾಗೂ ಮಾನಸಿಕ ದೃಢತೆ  ಅತ್ಯಗತ್ಯ. 

ನನ್ನ ಟ್ರೆ ಕ್ಕಿಂಗ್  ಸ್ನೇಹಿತೆಯೋರ್ವರು ಕಳೆದ ಫೆಬ್ರವರಿಯಲ್ಲಿ (2019)    ಕೈಲಾಸ ಯಾತ್ರೆಯ ತಯಾರಿಯಲ್ಲಿದ್ದೇನೆ ಎಂದು ಹೇಳಿದರು. ನಾನೂ ಆಕೆಯೂ ಜತೆಯಾಗಿ ಪ್ರವಾಸ ಮಾಡುವುದೆಂದು ನಿರ್ಧರಿಸಿದೆವು.  ಪ್ರತಿ ವರ್ಷವೂ ಭಾರತ ಸರಕಾರವು ಈ ಯಾತ್ರೆಯನ್ನು ಆಯೋಜಿಸುತ್ತದೆ.  ಇದು ಸುಮಾರು ೨೧ ದಿನಗಳದ್ದು.  ಖಾಸಗಿ ಪ್ರವಾಸ ಆಯೋಜಕರು ಕೂಡ  ಈ ಯಾತ್ರೆಯನ್ನು ಆಯೋಜಿಸುತ್ತಾರೆ .ಇದು ಸುಮಾರು ೧೪ ದಿನಗಳದ್ದು.   ನಾವು ಖಟ್ಮಂಡುವಿನಿಂದ ಹೊರಡುವ ಖಾಸಗಿ ಪ್ರವಾಸ ಆಯೋಜಕರ ಯಾತ್ರೆಗೆ ಹೆಸರು ನೋಂದಾಯಿಸಿದೆವು. 

ಪ್ರವಾಸಕ್ಕೆ  ಹೊರಡುವ ಮುನ್ನ ಪೂರ್ವ ತಯಾರಿ ಮಾಡುವುದಾದರೆ -ಪ್ರಾಣಾಯಾಮ ,ದೈಹಿಕ ಕಸರತ್ತು, ಯೋಗ ,ವಾಕಿಂಗ್ ಇತ್ಯಾದಿಗಳನ್ನು ಸುಮಾರು ಮೂರು ನಾಲ್ಕು ತಿಂಗಳ ಹಿಂದೆಯೇ ಶುರು ಮಾಡುವುದು ಸೂಕ್ತ .ಇಷ್ಟೇ ಅಲ್ಲದೆ ಒಂದಿಷ್ಟು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಕುಟುಂಬದ ವೈದ್ಯರ ಸಲಹೆ ಮತ್ತು ಅವರ ಒಪ್ಪಿಗೆ ಪಡೆಯಬೇಕು.  

ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ತಲುಪಿದೆ .ಮುಂಬೈಯಿಂದ ಬಂದ ನನ್ನ ಸ್ನೇಹಿತೆ ದೆಹಲಿಯಿಂದ ನನ್ನ ಜೊತೆಯಾದರು. ಅಲ್ಲಿಂದ ಖಟ್ಮಂಡುವಿಗೆ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸಿದೆವು. ನಮ್ಮ ತಂಡದಲ್ಲಿ ಒಟ್ಟು ೪೬ ಜನರಿದ್ದರು. ಅವರೆಲ್ಲರೂ ನಾವಿಳಿದುಕೊಂಡ ಹೋಟೆಲ್ನಲ್ಲಿಯೇ ಇದ್ದರು. ಹೆಚ್ಚಿನವರು ಗುಜರಾಥ್ ಮತ್ತು ಮಹಾರಾಷ್ಟ್ರದಿಂದ ಬಂದವರು. ಮರುದಿನ ಖಟ್ಮಂಡು ದರ್ಶನ. ಖ್ಯಾತ ಪಶುಪತಿ ನಾಥ ದೇವಾಲಯಕ್ಕೆ ಭೇಟಿ ನೀಡಿದೆವು. ಇಲ್ಲಿ ಕರ್ನಾಟಕದ ಅರ್ಚಕರು ಇದ್ದಾರೆ. ಕೇದಾರನಾಥ ಶಿವಲಿಂಗದ ಅರ್ಧ ಭಾಗ ಪಶುಪತಿನಾಥ ಶಿವಲಿಂಗವೆಂದು ಭಕ್ತರ ನಂಬಿಕೆ. ಬಳಿಕ ಜಲನಾರಾಯಣ ದೇಗುಲಕ್ಕೆ ಹೊರಟೆವು. ನೀರಿನಲ್ಲಿ ತೇಲುವಂತೆ ಕಾಣುವ ವಿಷ್ಣುವಿನ ಮೂರ್ತಿ ಬಹಳ ಸುಂದರವಾಗಿದೆ. ಈ ಮೂರ್ತಿಯು ಆಗಸದ ಕಡೆ ಮುಖ ಮಾಡಿ ಮಲಗಿದ್ದರೂ ,  ನೀರಿನಲ್ಲಿ ಅದರ ಪ್ರತಿಬಿಂಬದಲ್ಲಿ ಮೂರ್ತಿಯ ಮುಖವು ಕಾಣುವುದು ಅಚ್ಚರಿಯ ವಿಷಯ. 


ಸಾಲಿಗ್ರಾಮ ಮತ್ತು ರುದ್ರಾಕ್ಷದ ಅಂಗಡಿಗಳು ನೇಪಾಳದಲ್ಲಿ ಬಹಳಷ್ಟಿವೆ. ರುದ್ರಾಕ್ಷಿ ಮರವು ನೇಪಾಳದಲ್ಲಿ ಬೆಳೆಯುತ್ತದೆ ಮತ್ತು ಸಾಲಿಗ್ರಾಮ ಶಿಲೆ ಅಲ್ಲಿಯ ಗಂಡಕಿ ನದಿಯಲ್ಲಿ ಸಿಗುತ್ತದೆ. ಬಳಿಕ ನಾವು ಸ್ವಯಂಭೂ ಮಂದಿರಕ್ಕೆ ಹೋದೆವು. ಬೌದ್ಧರಿಗೆ ಇದು ಪವಿತ್ರ ವಾದದ್ದು. 


ಪ್ರವಾಸದ ಮೂರನೆಯ ದಿನ ನಾವು ವೇಳಾಪಟ್ಟಿಯ ಪ್ರಕಾರ ನೇಪಾಳ ದ ಸ್ಯಾಬಿರುಬೇಸಿ ಗೆ ಹೋರಡಬೇಕಿತ್ತು. ಆದರೆ ಟಿಬೆಟ್ ತಲುಪಲು ಬೇಕಾದ ಅನುಮತಿ ಪತ್ರ ಮತ್ತು ಚೀನಾ ವೀಸಾ ದೊರೆಯಲು ತಡವಾಯಿತು. ಹಾಗಾಗಿ ನಾವು ಮುಂದಿನ ನಾಲ್ಕು ದಿನಗಳನ್ನು ಖಟ್ಮಂಡುವಿನಲ್ಲಿಯೇ ಕಳೆಯಬೇಕಾಯಿತು. ಒಂದು ದಿನವಿಡೀ ಸುಮ್ಮನೆ ಕಳೆದು ಹೋಯಿತು. ಮರುದಿನ ನಾವು ಉಳಿದುಕೊಂಡಿದ್ದ  ಥಮೇಲ್  ಪ್ರದೇಶದಲ್ಲಿ ಅಡ್ಡಾಡಿ ಬಂದೆವು. ಇದು ಖಟ್ಮಂಡುವಿನ ಪ್ರಮುಖ ಮಾರುಕಟ್ಟೆ ಪ್ರದೇಶವಾಗಿದ್ದು ಟ್ರೆಕಿಂಗ್ ಗೆ ಬೇಕಾದ ಬ್ಯಾಗ್, ಷೂ ಇತ್ಯಾದಿಗಳು ದೊರಕುತ್ತವೆ. ಇಷ್ಟೇ ಅಲ್ಲದೆ ಟಿಬೆಟ್ ನ ಕರಕುಶಲ ವಸ್ತುಗಳು, ಮಣಿಗಳು,ಹಾರಗಳು, ಯಾಕ್ ಉಣ್ಣೆಯ ಬೆಚ್ಚನೆಯ ಶಾಲು ಇತ್ಯಾದಿಗಳೂ ಬಹಳಷ್ಟಿವೆ. ಭಾರತದ ೧೦೦ ರೂಪಾಯಿ ನೇಪಾಳದ ೧೬೦ ರೂಪಾಯಿಗೆ ಸಮ. ಹೆಚ್ಚಿನ ಅಂಗಡಿಗಳಲ್ಲಿ ಭಾರತೀಯ ಕರೆನ್ಸಿಯನ್ನು ಸ್ವೀಕರಿಸುತ್ತಾರೆ.  ೫೦೦ ಕ್ಕಿಂತ ಕಡಿಮೆ ಮೌಲ್ಯದ ನೋಟುಗಳನ್ನಷ್ಟೇ ತೆಗೆದುಕೊಳ್ಳುತ್ತಾರೆ. 

ಆಫೀಸ್ ನಲ್ಲಿ ಕೆಲವೊಮ್ಮೆ ಅತೀ ಹೆಚ್ಚು ಕೆಲಸವಿರುವಾಗ ಅನಿಸುವುದುಂಟು..ಏನೂ ಮಾಡದೆ ಸುಮ್ಮನೆ ರಜೆ ಹಾಕಿ ರೆಸ್ಟ್ ತೆಗೆದುಕೊಳ್ಳಬೇಕು ಅಂತ. ಆದರೆ ನಾವು ನಮ್ಮ ಬ್ಯುಸಿ ಜೀವನ ಶೈಲಿಗೆ ಹೊಂದಿಕೊಂಡಿದ್ದೇವೆ ಎಂದರೆ ನಾಲ್ಕು ದಿನ ಏನೂ ಕೆಲಸವಿಲ್ಲದೇ ಕುಳಿತುಕೊಳ್ಳುವುದೆಂದರೆ ಬಹಳ ಕಷ್ಟ. ಶಾಂತವಾಗಿ ಕುಳಿತುಕೋ ಎಂದರೆ ನಮಗೆ ಚಡಪಡಿಕೆ ಶುರು ವಾಗುತ್ತದೆ.  ನಮ್ಮ ತಂಡದವರೆಲ್ಲರೂ ಖಟ್ಮಂಡುವಿನ ಆಸುಪಾಸಿನ ಸ್ಥಳಗಳಿಗೆ ಭೇಟಿ ನೀಡುವುದೆಂದು ನಿರ್ಧರಿಸಿದೆವು. ಮನೋಕಾಮನ ದೇವಸ್ಥಾನಕ್ಕೆ ರೋಪ್ ವೆಯಲ್ಲಿ ಹೋಗಬೇಕು. ಹಗ್ಗದ ಹಾದಿಯಲ್ಲಿ ಸುಮಾರು ೧೫-೨೦ ನಿಮಿಷಗಳ ಕಾಲ ಗಾಜಿನ ಡಬ್ಬಿಯೊಳಗೆ ಕೂತು ಮೇಲೆಕ್ಕೆ ಏರಬೇಕು. ಸುರಕ್ಷಿತವಾಗಿ ತಲುಪಿದರೆ ಸಾಕಪ್ಪ ಎಂದು ಅನಿಸುತ್ತಿತ್ತು. ಕೆಳಗೆ ಬಗ್ಗಿ ನೋಡಿದರೆ ಸಾಲು ಸಾಲಾಗಿ ಕಾಣುವ ಹಿಮಾಲಯ ಪರ್ವತ ಶ್ರೇಣಿ. ಅದರ ಮಧ್ಯೆ ರಭಸವಾಗಿ ಹರಿಯುವ ಕೆಂಬಣ್ಣದ ನದಿ. ಈ ರೋಪ್ ವೆ ಯ ಪ್ರಯಾಣವು ರೋಮಾಂಚಕವೇ ಸರಿ. ನೇಪಾಲದಲ್ಲಿ ೫-೬ ವರ್ಷದ ಬಾಲಕಿಯನ್ನು ದೇವಿಯೆಂದು ಆಯ್ಕೆ ಮಾಡಿ ಜೀವಂತ ದೇವತೆಯೆಂದು ಪೂಜಿಸಲಾಗುತ್ತದೆ. ಖಟ್ಮಂಡುವಿನ ದರ್ಬಾರ್ ಸ್ಕ್ವಾರ್ ನಲ್ಲಿ ಆಕೆ ವಾಸಿಸುತ್ತಾಳೆ. ನೇಪಾಳದಲ್ಲಿ ತಂತ್ರ ಪದ್ಧತಿಯ ಪೂಜಾ ವಿಧಾನವು ಚಾಲ್ತಿಯಲ್ಲಿದೆ. . ಪ್ರಾಣಿಬಲಿಯು ಇಲ್ಲಿ ಸಾಮಾನ್ಯ. 

 ಮರುದಿನ ಭಕ್ತಪುರ ಮತ್ತು ಪಾಟಣ ಕ್ಕೆ ಹೊರಟೆವು. ಇವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಮರದ ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಹೊಂದಿರುವ ಹಲವಾರು ಕಟ್ಟಡಗಳಿವೆ. ಭೂಕಂಪದ ಬಳಿಕ ಬಹಳಷ್ಟು ಕಡೆ ಹಾನಿ ಸಂಭವಿಸಿದ್ದರೂ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ.  ಭಕ್ತಪುರದಲ್ಲಿ ಬಾಲಿವುಡ್ ನ  ಚಲನಚಿತ್ರ  'ಬೇಬಿ '  ಚಿತ್ರೀಕರಣವಾದ ಸ್ಥಳವನ್ನು ನೋಡಿದೆವು. 





ನಾವು ಉಳಿಕೊಂಡಿದ್ದ ಹೋಟೆಲ್ ಸುಸಜ್ಜಿತವಾದ ಹೋಟೆಲ್. ೩-೪ ದಿನ ಕಳೆದರೂ ಟಿಬೆಟ್ ಪರ್ಮಿಟ್ ನ ಪತ್ತೆಯೇ ಇಲ್ಲ. ನಮಗೆಲ್ಲರಿಗೂ ಸಿಟ್ಟು,ಹತಾಶೆ ಶುರುವಾಯಿತು . ಯಾವಾಗ ಮಾನಸ ಸರೋವರ ನೋಡುತ್ತೇವೆಯೋ, ಯಾವಾಗ ಕೈಲಾಶ ಕಾಣುತ್ತದೋ, ಆಫೀಸಿನ ರಜೆಯನ್ನು ಇನ್ನೂ ಎಷ್ಟು ದಿನಗಳ ತನಕ ವಿಸ್ತರಿಸಬೇಕು, ಮರಳಿ ಬರುವ ವಿಮಾನದ ಟಿಕೇಟನ್ನು ಯಾವ ದಿನಕ್ಕೆ ಬದಲಾಯಿಸಬೇಕು ಇತ್ಯಾದಿ ಯೋಚನೆಗಳಿಂದ ಮನಸ್ಸು ಗೊಂದಲದ ಗೂಡಾಗಿತ್ತು.  

 ಪ್ರವಾಸದ ೭ ನೇ ದಿನ ನಾವು ಬೆಳಗ್ಗೆ  ಸ್ಯಾಬಿರುಬೇಸಿಗೆ ಬಸ್ ನಲ್ಲಿ ಸಾಗಿದೆವು.  ಸುಮಾರು ೨೫೦ ಕಿಮಿ ಗಳ  ಪ್ರಯಾಣವಾದರೂ ಇಡೀ ದಿನವನ್ನು ತೆಗೆದುಕೊಂಡಿತು. ಪರ್ವತ ಪ್ರದೇಶದ ರಸ್ತೆ, ಹಲವಾರು ತಿರುವುಗಳು, ಒಂದೆಡೆ ಪರ್ವತ, ಇನ್ನೊಂದೆಡೆ ಪ್ರಪಾತ ಮತ್ತು ರಭಸವಾಗಿ ಹರಿಯುವ ನದಿ .ಚಾಲಕನೇನಾದರೂ ಒಂದು ಕ್ಷಣ ಮೈ ಮರೆತರೂ ಕೂಡಲೇ ನಾವು ಕೈಲಾಸವಾಸಿಗಳಬಹುದು. ಕೆಲವೆಡೆ ರಸ್ತೆಯೂ  ಮಣ್ಣಿನದೇ. ಮತ್ತೆ ಕೆಲವೆಡೆ ಭೂಕುಸಿತದ ಕಾರಣ ರಸ್ತೆಯನ್ನು ಸರಿ ಮಾಡುತ್ತಿದ್ದಾರೆ. ಕೆಲವು ಕಡೆ  ವಿಪರೀತ ಧೂಳು. ಡಸ್ಕ್ ಮಾಸ್ಕ್ ಅನ್ನು ಮುಖಕ್ಕೆ ಕಟ್ಟಿಕೊಂಡೆವು. ನಮ್ಮ ಎದುರು ರಸ್ತೆ ದುರಸ್ತಿ ನಡೆಯುತ್ತಿತ್ತು. ಅದು ಸರಿಯಾಗಲು ಸುಮಾರು ೨ ಗಂಟೆಗಳ ಕಾಲ ಕಾಯಬೇಕಾಯಿತು. ಸ್ವಲ್ಪ ದೂರ ಸಾಗಿದಾಗ ನಮ್ಮ ಎದುರಿನ ಬಸ್ಸು ಕೆಸರಿನಲ್ಲಿ ಹೂತು ಹೋಗಿ, ಜನ ಅದನ್ನು ದೂಡಿ ಹೊರತೆಗೆಯಲು ಪ್ರಯತ್ನಿಸುತ್ತಿದ್ದರು. ಕೈಲಾಶ ಯಾತ್ರೆಯು ಪ್ರತಿ ಕ್ಷಣವೂ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿತ್ತು. ಅಂತೂ ಸಂಜೆಯ ಹೊತ್ತಿಗೆ ಸ್ಯಾಬಿರುಬೇಸಿ ತಲುಪಿದೆವು. ಸಮುದ್ರ ಮಟ್ಟದಿಂದ ಇದು ೭೦೦೦ ಅಡಿಗಳಷ್ಟು ಎತ್ತರದಲ್ಲಿದೆ.

ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಮೇಲಕ್ಕೇರುತ್ತಿದ್ದ ಹಾಗೆ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಪ್ರವಾಸ ಆಯೋಜಕರು ದಿನ ಕ್ಕೆ ಸುಮಾರು ೩೦೦೦ ಅಡಿಗಳಷ್ಟೇ ಮೇಲೇರಿ  ಅಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡುತ್ತಾರೆ. ಈ ವ್ಯವಸ್ಥೆಯು ಗುರಿ ತಲುಪಲು ಹೆಚ್ಚಿನ ದಿನಗಳನ್ನು ತೆಗೆದುಕೊಂಡರೂ , ನಮ್ಮ ಶರೀರ ಕಡಿಮೆ ಆಮ್ಲಜನಕಕ್ಕೆ 
ಹೊಂದಿಕೊಳ್ಳುವ ಪ್ರಕ್ರಿಯೆಗೆ ನೆರವಾಗುತ್ತದೆ. ನಮ್ಮ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಡಲು ಸಾಧ್ಯವಾಗುತ್ತದೆ. 

ಸ್ಯಾಬಿರುಬೇಸಿ ಹಿಮಾಲಯದ ಒಂದು ಪುಟ್ಟ ಊರು. ೩-೪ ಹೋಟೆಲ್ ಗಳಿವೆ. ಪರ್ವತಾರೋಹಿಗಳು ಇಲ್ಲಿ ತಂಗುತ್ತಾರೆ. ನಾವು ಉಳಿದು ಕೊಂಡಿದ್ದ ಹೋಟೆಲ್ ಚಿಕ್ಕದಾದರೂ ಚೊಕ್ಕವಾಗಿತ್ತು. ಮರುದಿನ ಬೆಳಗ್ಗೆ ನಮ್ಮ ತಂಡದ ಒಂದಿಷ್ಟು ಜನರೊಂದಿಗೆ ನಾವು ಅಲ್ಲಿನ ಗುಡ್ಡಗಳನ್ನು ಹತ್ತಿ ಬಂದೆವು. ಅಲ್ಲಿ ಪಕ್ಕದಲ್ಲಿ ಬಿಸಿ ನೀರಿನ ಕುಂಡವೊಂದಿದೆ. ಅಲ್ಲಿ ಸುತ್ತಾಡಿ, ಪ್ರಕೃತಿಯ ಸೌನ್ದರ್ಯವನ್ನು ಆಸ್ವಾದಿಸಿದೆವು. ಹಿಮಾಲಯದಲ್ಲಿ ಹರಿಯುವ ನದಿಗಳು ನಮ್ಮಲ್ಲಿಯ ನದಿಗಳಂತೆ ಶಾಂತವಾಗಿ ಹರಿಯುವುದಿಲ್ಲ. ಅಬ್ಬರದಿಂದ ಭಯ ಹುಟ್ಟಿಸುವಂತೆ ಅವು ಸಾಗುತ್ತವೆ.  ನದಿಯ ಹಲವೆಡೆ ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ಒಂದು ಸಣ್ಣ ಗುಹೆಯಿದೆ. ಅಲ್ಲೆಲ್ಲ ಸುತ್ತಾಡಿ ನಮ್ಮ ಮಿನಿ ಟ್ರೆಕ್ ಮುಗಿಸಿ, ಮತ್ತೆ ಹೋಟೆಲ್ ಗೆ ಬಂದು ವಿಶ್ರಾ೦ತಿ ಪಡೆದೆವು. ಸಾಯಂಕಾಲ ನಮ್ಮ ತಂಡದ ಸ್ನೇಹಿತೆಯರು ಗುಜರಾತಿ ಭಜನೆಗಳನ್ನು ಸುಶ್ರಾವ್ಯವಾಗಿ  ಹಾಡಿದರು. ಹಿಮಾಲಯದ ಮಡಿಲಲ್ಲಿ ಸಾಯಂಕಾಲದ ಹೊತ್ತು ಭಜನೆಯ ಜತೆ ಎಲ್ಲರ ಮನದಲ್ಲಿ ಶಾಂತಿ ಪಸರಿಸಿತ್ತು.  ಕೈಲಾಶ ಪರ್ವತವನ್ನು ತಲುಪುವುದಕ್ಕಿಂತಲೂ ಅದನ್ನು ತಲುಪುವ ಪ್ರಯಾಣವೇ ಒಂದು ವಿಶಿಷ್ಟ ಅನುಭವ. ಪದಗಳಲ್ಲಿ ಕಟ್ಟಿಕೊಡಲಾಗದ್ದು ಅದು. 

ಮರುದಿನ ನಾವು  ಘಟ್ಟ ಕೋಲಾ ಎಂಬ ಊರನ್ನು ತಲುಪಿದೆವು. ಇಲ್ಲಿಯ ಸೇತುವೆ ದಾಟಿದರೆ ನಾವು ಟಿಬೆಟ್ ನಲ್ಲಿರುತ್ತೇವೆ. ಕೊನೆಗೂ ನಮ್ಮ ಪಾಸ್ಪೋರ್ಟ್ ಮತ್ತು ಪರ್ಮಿಟ್ ಗಳ  ಜತೆ ನಮ್ಮ ಟೂರ್ ಗೈಡ್ ಪ್ರತ್ಯಕ್ಷವಾದರು . ಸಾಕ್ಷಾತ್ ಶಿವನೇ ಪ್ರತ್ಯಕ್ಷವಾದರೂ ನಮಗೆ ಅಷ್ಟು ಖುಷಿ ಆಗುತ್ತಿರಲಿಲ್ಲವೇನೋ! ಟಿಬೆಟ್ ಚೀನಾದ ವಶದಲ್ಲಿರುವ ಕಾರಣ  ಟಿಬೆಟ್ ತಲುಪಲು ಚೀನಾದ ಅನುಮತಿ ಪತ್ರ ಅಗತ್ಯ. ಅದನ್ನು ನೀಡುವಲ್ಲಿ ಹಲವು ನೀತಿ ನಿಯಮಗಳು ಇರುವುದರಿಂದ ಮತ್ತು ಅವು ಕೆಲವೊಮ್ಮೆ ಹಠಾತ್ ಆಗಿ ಬದಲಾಗುವುದರಿಂದರೂ ಇಂತಹ ವಿಳಂಬ ಉಂಟಾಗಬಹುದು. ಮಾನಸ ಸರೋವರ ಯಾತ್ರೆಗೆಂದೇ  ವಿಶೇಷವಾದ ವೀಸಾ ನೀಡಲಾಗುತ್ತದೆ. ಇದು ಇಡೀ ತಂಡಕ್ಕೆ ಒಂದು ವೀಸಾ. ಅಂದರೆ ನಮ್ಮ ಪಾಸ್ಪೋರ್ಟ್ ಮೇಲೆ ವೀಸಾ ಸ್ಟಾ೦ಪ್  ಇರುವುದಿಲ್ಲ. ಬದಲಾಗಿ ಪ್ರತ್ಯೇಕ ಅನುಮತಿ ಪ ತ್ರದಲ್ಲಿ ಇಡೀ ಗುಂಪಿನ ಹೆಸರು ಮತ್ತು ಪಾಸ್ ಪೊರ್ಟ್ ಸಂಖ್ಯೆಗಳು ಇರುತ್ತವೆ. ಹಾಗಾಗಿ ಟಿಬೆಟ್ ಪ್ರವೇಶ ಮತ್ತು ವಾಪಸ್ ಬರುವಾಗ ಇಡೀ ಗುಂಪು ಜತೆಗೆ ಇರಬೇಕಾಗುತ್ತದೆ.  ಒಂದೊಮ್ಮೆ ಮುಂಚಿತವಾಗಿ ಬರಬೇಕೆಂದರೆ ಪ್ರತ್ಯೇಕ ಶುಲ್ಕ ನೀಡಬೇಕಾಗುತ್ತದೆ.  

 ಭಾರತದ ಸಮಯಕ್ಕೂ  ನೇಪಾಳದ ಸಮಯಕ್ಕೂ ಹದಿನೈದು ನಿಮಿಷಗಳ ವ್ಯತ್ಯಾಸ. ಭಾರತದ ಸಮಯಕ್ಕೂ ಟಿಬೆಟ್ ಸಮಯಕ್ಕೂ ಎರಡೂವರೆ ಗಂಟೆ ವ್ಯತ್ಯಾಸ. ಯುವಾನ್ ಇಲ್ಲಿಯ ಕರೆನ್ಸಿ.  ೧ ಯುವಾನ್ ಎಂದರೆ ಸುಮಾರು ೧೧  ರೂಪಾಯಿ . ಅಂತೂ  ನೇಪಾಳದ ಗಡಿ ದಾಟಿ ಟಿಬೆಟ್ ಪ್ರವೇಶಿದ್ದಾಯಿತು. ಇಲ್ಲಿಂದ ನಾವು ಇನ್ನೊಂದು ಬಸ್ಸಿನಲ್ಲಿ ಮುಂದುವರಿಯಬೇಕು .ಇಲ್ಲಿಯ ರಸ್ತೆಗಳಿಗೂ ನೇಪಾಳದ ರಸ್ತೆಗಳಿಗೂ ಅಜಗಜಾಂತರ .ನುಣುಪಾದ ರಸ್ತೆಗಳು ,ಪರ್ವತದ ಕಡೆ ವ್ಯವಸ್ಥಿತವಾಗಿ ಭೂ ಕುಸಿತವಾಗದಂತೆ ತಡೆಯಲು ಕಟ್ಟಿದ ಲೋಹದ ಬಲೆಗಳು ನಮ್ಮ ಪ್ರಯಾಣವನ್ನು ಸುಖಕರ ವಾಗಿಸುತ್ತವೆ . ಟಿಬೆಟ್ಟಿನಲ್ಲಿ ರಸ್ತೆಯ  ಬಲಗಡೆ ಪ್ರಯಾಣ .ಬಸ್ಸಿನ ಬಾಗಿಲು ಬಲಗಡೆ ಇದ್ದು ಚಾಲಕನ ಸೀಟು  ಎಡಗಡೆ ಇರುತ್ತದೆ .

ನಾವು ಕೈ ರಂಗ್ ಎಂಬ ಟಿಬೆಟ್ಟಿನ ಪಟ್ಟಣ ವೊಂದನ್ನು ತಲುಪಿದೆವು .ಸಮುದ್ರ ಮಟ್ಟದಿಂದ ೯೫೦೦ ಅಡಿ ಎತ್ತರದಲ್ಲಿರುವ ಇದು  ಸುಂದರವಾದ ಪಟ್ಟಣ . ಸುತ್ತಲೂ ಹಿಮಾಲಯ ಪರ್ವತಗಳ ಸಾಲು.  ರಸ್ತೆಯ ಯಾವ ತುದಿಗೆ ಹೋದರೂ ಹಿನ್ನೆಲೆಯಾಗಿ ಹಿಮಾಲಯ ಕಾಣುತ್ತದೆ .ಎಲ್ಲ ಕಡೆಯೂ ಚೈನೀಸ್ ಲಿಪಿಯ ಅಕ್ಷರಗಳು . ಯಾವುದೇ ಅಂಗಡಿಯ ಹೆಸರುಗಳನ್ನು ನಮಗೆ ಓದಲಾಗುವುದಿಲ್ಲ .ಇಲ್ಲಿಯ ಜನರಿಗೆ ಇಂಗ್ಲೀಷಿನ ಗಂಧ ಗಾಳಿಯಿಲ್ಲ.  ಅಂಗಡಿಯಲ್ಲಿ ಏನನ್ನಾದರೂ ಖರೀದಿಸಬೇಕೆಂದರೆ ಫೋನ್ ಆ್ಯಪ್ ಮೂಲಕ ಇಂಗ್ಲಿಷ್ನಲ್ಲಿ ಹೇಳಿ ಚೈನೀಸ್ ಗೆ ಭಾಷಾಂತರಿಸಿ ಆ ಮೂಲಕ ವ್ಯವಹರಿಸಬೇಕಾಗುತ್ತದೆ .ಕೆಲವೊಮ್ಮೆ ಕೈ ಸನ್ನೆ ಬಾಯಿ ಸನ್ನೆಗಳ ಮೂಲಕವೇ ನಮ್ಮ ವಿಚಾರ ವಿನಿಮಯವಾಗುತ್ತದೆ .ಆ ದಿನ ಕೈರಂಗ್  ನ ಹೋಟೆಲ್ ವೊಂದರಲ್ಲಿ ಉಳಿದುಕೊಂಡು ಮರುದಿನ ಊರು  ಸುತ್ತಾಡಿದೆವು.  ಅಲ್ಲಿ ಬೌದ್ಧ ಧರ್ಮವು ಪ್ರಧಾನವಾಗಿದ್ದು ಒಂದು ಪುಟ್ಟ ಮೊನಾಸ್ಟರಿ ಇದೆ.  ಅಲ್ಲಿಯ ಅಂಗಡಿಗಳಲ್ಲಿ ಟಿಬೆಟ್ಟಿನ ಕರಕುಶಲ ವಸ್ತುಗಳು ಹೇರಳ .ಒಂದು ಅಪರಿಚಿತ ಪಟ್ಟಣದಲ್ಲಿ ಭಾಷೆ ಬರದ ಪ್ರಾಂತ್ಯದಲ್ಲಿ ತಿರುಗಾಡಿ ನಮಗೆ ಬೇಕಾದುದನ್ನು ಖರೀದಿಸಿ ಮೊನಾಸ್ಟರಿ ಯಲ್ಲಿ ಧ್ಯಾನ ಮಾಡಿ ಬಂದದ್ದು ನನ್ನ ಮನಪಟಲದಲ್ಲಿ ಸುಂದರ ಸ್ಮೃತಿಯಾಗಿ ಅಚ್ಚೊತ್ತಿದೆ .

ಮರುದಿನ ನಮ್ಮ ಪ್ರಯಾಣ ಸಾಗಾ ಎಂಬ ಊರಿಗೆ.ಕೈ ರಂಗಿನಿಂದ ಸಾಗರಕ್ಕೆ ಸಾಗುವ ರಸ್ತೆಯು ಬಣ್ಣ ಬಣ್ಣದ ಪರ್ವತಗಳ ವಿಸ್ಮಯಲೋಕ . ಸ್ವಲ್ಪ ಸಮಯ ಸಿಮೆಂಟ್ ವರ್ಣದ ಪರ್ವತಗಳು ಕಂಡರೆ ಮತ್ತೆ ಮುಂದೆ ಸಾಗಿದಂತೆ ಕೆಂಬಣ್ಣ ಮಿಶ್ರಿತ ಪರ್ವತಗಳು .ಮತ್ತೆ ಸಾಗುತ್ತಿದ್ದಂತೆ ತಿಳಿ ಹಸಿರು ಹಸಿರು ವರ್ಣಗಳ ಪರ್ವತಗಳ ಸಾಲು .ನಮ್ಮ ಹಾದಿ ಸಾಗುತ್ತಿದ್ದಂತೆ ದಟ್ಟವಾದ ಹಿಮಾಲಯದ ಕಾಡು ಮರೆಯಾಗಿ ಕುರುಚಲು ಪೊದೆಗಳು ಕಾಣ ತೊಡಗಿದ್ದವು .
ರಸ್ತೆಯಂತೂ ನೇರವಾದದ್ದು.  ನಮ್ಮ ಪ್ರವಾಸದ ಬಸ್ ಹೊರತುಪಡಿಸಿ ಬೇರಾವ ವಾಹನವೂ ನಮ್ಮ ಕಣ್ಣಳತೆಗೆ ಕಾಣಸಿಗುವುದಿಲ್ಲ .ಈ ಪ್ರಯಾಣದಲ್ಲಿ ನಾವು ಸುಮಾರು  ಹದಿನೈದು ಸಾವಿರದ ಐನೂರು ಅಡಿಗಳಷ್ಟು ಎತ್ತರ ಏರುತ್ತೇವೆ .ಸುಮಾರು ಏಳು ಎಂಟು ಗಂಟೆಗಳ ಹಾದಿ ರಸ್ತೆಯಂತೂ ನೇರ ಹಾಗಾಗಿ ಅಷ್ಟೊಂದು ಸುಸ್ತು ಎನಿಸಲಿಲ್ಲ .ಆದರೆ ಎತ್ತರದ ಆಲ್ಟಿಟ್ಯೂ ಡ್   ತನ್ನ  ಪ್ರಭಾವವನ್ನು ತೋರಿಸಲಾರಂಭಿಸಿತು .ಸಣ್ಣಗೆ ತಲೆ ನೋವು.ಮುಂದೆ ಸಾಗಿದಂತೆ ಬ್ರಹ್ಮಪುತ್ರ ನದಿಯ ಉಗಮ ಸ್ಥಾನವೂ ಎದುರಾಯಿತು .ಅಷ್ಟೊಂದು ಭವ್ಯವಾದ ನದಿಯ ಮೂಲ ಸ್ಥಾನವನ್ನು ಕಂಡು   ನಮಿಸಿದೆವು.ಅಲ್ಲಿ ಇಳಿದು  ಒಂದಷ್ಟು ಫೋಟೋಗಳನ್ನು ತೆಗೆದೆವು . 

ಮತ್ತೆ ಮುಂದಕ್ಕೆ ಹೋದಾಗ ಬಂದೇ ಬಿಟ್ಟಿತ್ತು ನಮ್ಮೆಲ್ಲರ ಬಹುನಿರೀಕ್ಷಿತ ಮಾನಸ ಸರೋವರ ! ಅಲ್ಲಿ ಇಳಿದು ಮಾನಸ ಸರೋವರ ಪರಿಕ್ರಮಕ್ಕೆ ಮೀಸಲಾದ ವಿಶೇಷ ಬಸ್ಸಿನಲ್ಲಿ ಹತ್ತಬೇಕು .ಆ ಬಸ್ಸು ನಮ್ಮನ್ನು ಮಾನಸ ಸರೋವರದ ಸುತ್ತಲೂ ಸುಮಾರು ಎಪ್ಪತ್ತು  ಕಿಲೋಮೀಟರ್ ಪ್ರದಕ್ಷಿಣೆ ಮಾಡಿಸುತ್ತದೆ .ಮಧ್ಯೆ ಒಂದೆರಡು ಬಾರಿ ಬಸ್ಸನ್ನು ನಿಲ್ಲಿಸುತ್ತಾರೆ.  ನಾವು ಸರೋವರದ ತಟದಲ್ಲಿ ಇಳಿದು ಓಡಾಡಬಹುದು. ಮೈ ನಡುಕ ಹತ್ತುವಷ್ಟು ಜೋರಾಗಿ  ಗಾಳಿ ಬೀಸುತ್ತಿತ್ತು .ನೀಲ ವರ್ಣದ ಜಲರಾಶಿಯನ್ನು ನಮ್ಮ ಎದುರು ಕಂಡಾಗ ನಮ್ಮ ತಂಡ ಮೂಕ ವಿಸ್ಮಿತ ವಾಯಿತು .ಈ ಸರೋವರದ ಸೌಂದರ್ಯದ ವರ್ಣನೆಯನ್ನು ಅದರ ಭವ್ಯತೆಯನ್ನು ಲೇಖನಿಯಲ್ಲಿ ಹಿಡಿದಿಡುವುದು ಕಠಿಣ .




ಮತ್ತೂ ಮುಂದಕ್ಕೆ ಸಾಗಿದಂತೆ ಇನ್ನೊಂದು ಸರೋವರ ಕಾಣಿಸುತ್ತದೆ ಅದು ರಾಕ್ಷಸ ತಾಲ.  ನೀಲ ಸಾಗರದಂತೆ ಕಂಡುಬರುತ್ತದೆ . 

ಆ ಸಂಜೆ ನಾವು ಮಾನಸ ಸರೋವರದ ದಡ ವೊಂದರ ವಸತಿ ಗೃಹಕ್ಕೆ ಹೋದೆವು .ಪ್ರವಾಸದ ವೇಳಾಪಟ್ಟಿಯಂತೆ ಬರುತ್ತಿದ್ದರೆ ಹುಣ್ಣಿಮೆಯ ದಿನ ನಾವು ಮಾನಸ ಸರೋವರ ತಲುಪಬೇಕಿತ್ತು .ಆಗಸ ಹೇಗೆ ಕಾಣುತ್ತದೆಯೋ ಎಂದು ರೂಮಿನಿಂದ ಹೊರಗೆ ಬಂದು ನೋಡಿದೆ . ಅಲ್ಲಿ ನಕ್ಷತ್ರಗಳ ಸರಮಾಲೆ ಪೋಣಿಸಿ ದಂತಿತ್ತು .ಕೊರೆಯುವ ಚಳಿ, ರೊಯ್ಯನೆ ಬೀಸುವ ಗಾಳಿ, ಎದುರುಗಡೆ ಮಾನಸ ಸರೋವರ ಇದು ದಿವ್ಯ ಅನುಭವವೇ ಸರಿ .ಆ ದಿನದ ಅಡುಗೆಯೂ ಬಹಳ ವಿಶಿಷ್ಟವಾಗಿತ್ತು ಏಕೆಂದರೆ ಅದನ್ನು ಮಾನಸ ಸರೋವರದ ನೀರಿನಿಂದ ತಯಾರಿಸಿದ್ದರು .ಮುಂಜಾನೆ ಬೇಗ ಎದ್ದು ಸರೋವರದ ದಡದಲ್ಲಿ ಸುಮಾರು ಅರ್ಧ ಗಂಟೆ ಕುಳಿತೆ. ಮನಸ್ಸು ಶಾಂತಿಯಿಂದ ತುಂಬಿತ್ತು .


ನಮ್ಮ ತಂಡದ ಹೆಚ್ಚಿನವರು ಆ ಕೊರೆಯುವ ಚಳಿಯಲ್ಲಿ ಮಾನಸ ಸರೋವರದಲ್ಲಿ ಮುಳುಗಿ ಎದ್ದರು.ಸ್ವಲ್ಪ ಹೊತ್ತಿನಲ್ಲಿ ಹೆಚ್ಚಿನವರಿಗೆ ಶೀತ ತಲೆನೋವು ಕಾಡತೊಡಗಿತ್ತು . ನಾನಂತೂ ಆ ಸಾಹಸಕ್ಕೆ ಕೈಹಾಕಲಿಲ್ಲ .ಆಕಾಶ ಶುಭ್ರವಾಗಿ ದ್ದಾಗ ಇಲ್ಲಿಂದಲೇ ಕೈಲಾಸ ಪರ್ವತ ಗೋಚರವಾಗುತ್ತದೆ .

ಆ ದಿನ ಸಂಜೆ ನಾವು ದಾರ್ಶನ್ ಎಂಬ ಊರಿಗೆ ಹೊರತೆವು. ಸ್ವಲ್ಪ ಸ್ವಲ್ಪವಾಗಿ ದಾರಿಯುದ್ದಕ್ಕೂ  ಕೈಲಾಸ ಪರ್ವತ ಕಾಣಿಸುತ್ತದೆ .ಕೈಲಾಸ ಪರ್ವತ ವೆಂದರೆ ಶಿವನ ವಾಸ ಸ್ಥಾನವೆಂದು ಹಿಂದೂಗಳು ನಂಬುತ್ತಾರೆ ಬೌದ್ಧ ಧರ್ಮ ,ಜೈನ ಮತ್ತು ಬಾನ್  ಧರ್ಮೀಯ ರಿ ಗೂ ಪವಿತ್ರ ಸ್ಥಾನವಾಗಿದೆ .ಕೈಲಾಸ ಪರ್ವತವನ್ನು ಹತ್ತಲು ಯಾರಿಗೂ ಅನುಮತಿ ಇಲ್ಲ ಅದರ ಸುತ್ತಲೂ ನಾವು ಪ್ರದಕ್ಷಿಣೆ ಮಾಡಬಹುದು . ಸಾಮಾನ್ಯವಾಗಿ ಯಾತ್ರಿಕರು ಕುದುರೆಯ ಮೇಲೆ/ನಡೆದುಕೊಂಡು ಪರಿಕ್ರಮವನ್ನು ಮಾಡುತ್ತಾರೆ .ಈ ಪ್ರದಕ್ಷಿಣೆ ಹಾಕುವುದನ್ನು ಕೋರ ಎಂದು ಕರೆಯುತ್ತಾರೆ . ಕೆಲವು ಭಕ್ತರು  ಹೆಜ್ಜೆ ನಮಸ್ಕಾರ ಹಾಕಿಯೂ ಇದಕ್ಕೆ ಪ್ರದಕ್ಷಿಣೆ ಬರುತ್ತಾರೆ. ದರ್ಶನ್ ನಿಂದ ನಾವು ಯಮ ದ್ವಾರ ತನಕ ಬಸ್ಸಿನಲ್ಲಿ ತಲುಪಿದೆವು . ಪೋರ್ಟರ ಒಬ್ಬನನ್ನು ಕರೆದೊಯ್ದೆವು .ಅಲ್ಲಿ ಒಂದು ಕೆಜಿ ತೂಕವು ಅತ್ಯಂತ ಭಾರವೆಂದು ಅನ್ನಿಸುತ್ತದೆ .ಹಾಗಾಗಿ ಪೋರ್ಟರ್ ಜೊತೆಗಿದ್ದರೆ ಆತ ನಮಗೆ ಬೇಕಾದ ಅತ್ಯಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವ  ಕಾರಣ ಸ್ವಲ್ಪ ಸಹಾಯವಾಗುತ್ತದೆ. 
 ಯಮ ದ್ವಾರದಿಂದ ನಾವು ನಡೆಯುತ್ತ ಸಾಗಿದೆವು .ಕೈಲಾಸ ಪರ್ವತ ಸುಂದರವಾಗಿ ಕಾಣಿಸತೊಡಗುತ್ತದೆ ಕೆಲವು ಕಡೆ ಗುಡ್ಡ ಹತ್ತುವಂತೆ ಇದ್ದರೂ ಮತ್ತೆ ಕೆಲವೆಡೆ ನೆರವಾದ ಮಾರ್ಗವೇ ಇದೆ.  ಆದರೆ ಇಲ್ಲಿ ಗಂಟೆಗೆ ಸುಮಾರು ಒಂದೆರಡು ಕಿಲೋಮೀಟರುಗಳಷ್ಟು ಸಾಗಬಹುದು .


ಆ ದಿನ ಸಾಯಂಕಾಲದ ಹೊತ್ತಿಗೆ ನಾವು ದರಾ ಪಕ್ ತಲುಪಿದೆವು .ನಮ್ಮ ರೂಮಿನ ಕಿಟಕಿಯಿಂದಲೇ ಕೈಲಾಸ ಪರ್ವತ ಕಾಣುತ್ತಿತ್ತು .  ನಮ್ಮ ನಡಿಗೆಯ ಉದ್ದಕ್ಕೂ ಹವಾಮಾನ ಅತ್ಯುತ್ತಮವಾಗಿತ್ತು.  ಒಮ್ಮೆ ಒಂದಿಷ್ಟು ಮಳೆ ಹನಿ, ಮಂಜಿನ ಹನಿ ಬಿದ್ದದ್ದು ಬಿಟ್ಟರೆ ವಾತಾವ ರಣ ಶುಭ್ರವಾಗಿ ಇದ್ದು ನಮ್ಮ ದಾರಿಯುದ್ದಕ್ಕೂ ನಮ್ಮ ಉತ್ಸಾಹವನ್ನು ಹೆಚ್ಚಿಸಿತು. ಕೈಲಾಸವನ್ನು ಕಂಡು ಕಣ್ಣು ತುಂಬಿಕೊಂಡವು .



ದಿರಾ ಪುಕ್ಕ ನಿಂದ ಜೋತು ಲ್ ಪು ಕ್ ನವರೆಗೆ ಮಂಜು ತುಂಬಿದ ಕಾರಣ ನಾವು ಮರಳಿ ದಾ ರ್ಶನ್  ಗೆ  ಬಂದೆವು .ಆರೋಗ್ಯದ ಏರುಪೇರಾದದ್ದರಿಂದ ನಮ್ಮ ತಂಡದ ಕೆಲವು ಸದಸ್ಯರು ಪರಿಕ್ರಮ ಮಾಡಲು ಬಂದಿರಲಿಲ್ಲ ಅವರು ದಾ ರ್ಶನ್ ಹೋಟೆಲ್ ನಲ್ಲಿಯೇ  ಉಳಿದುಕೊಂಡು ವಿಶ್ರಾ ೦ತಿ  ಪಡೆದರು. 

ಈಗ ಮರಳಿ ಕಾಠ್ಮಂಡು ಗೆ ಪ್ರಯಾಣ. ನಾವು ಹೋದ ಮಾರ್ಗದಲ್ಲಿಯೇ ಮರಳಿ ಬಂದೆವು. ನಿಗದಿತ ಸಮಯಕ್ಕಿಂತ ನಮ್ಮ ಪ್ರವಾಸ ಐದು ದಿನ  ತಡವಾಯಿತು . .ಪ್ರವಾಸದ ಉದ್ದಕ್ಕೂ ರೋಟಿ, ಆಲೂಗಡ್ಡೆ, ರಾಜ್ಮ ಸಬ್ಜಿ ಗಳನ್ನೇ ಕಂಡು ಎಲ್ಲರಿಗೂ ಅವರವರ ಊರಿನ  ತಿಂಡಿ ತಿನಿಸುಗಳ  ನೆನಪು ಬರುತ್ತಿತ್ತು .ಕೈಲಾಶ ಯಾತ್ರೆ ಒಂದು ಅತ್ಯದ್ಭುತ ಅನುಭವ .ಪ್ರಕೃತಿಯ ಈ  ಸಾಂಗತ್ಯ ಜೀವನವಿಡೀ ನೆನಪಿನಲ್ಲಿ ಇಟ್ಟುಕೊಳ್ಳುವಂಥ ದ್ದು .ನಮ್ಮ ತಂಡದವರೆಲ್ಲಾ ಒಟ್ಟಿಗೆ ಒಂದು ಕುಟುಂಬದಂತೆ ದಿನ ಕಳೆದಿದ್ದೆವು .ಎಲ್ಲರ ಜೊತೆ ಬಹಳಷ್ಟು ಆತ್ಮೀಯತೆ ಬೆಳೆದಿತ್ತು . ಮರಳಿ ಬೆಂಗಳೂರಿಗೆ ಬಂದು ಪ್ರವಾಸದ ಅನುಭವನ್ನು ಬರೆಯುತ್ತಿರುವಾಗ  ಇದು ಕನಸೇ ಎಂದು ಭಾಸವಾಗುತ್ತಿದೆ. 


Thursday, July 30, 2020

ಪಯಣ

ಬಾಳ ಪಯಣವೇ ಹೀಗಂತೆ
ಬಾಲ್ಯದಾಟ,ವಿದ್ಯಾಭ್ಯಾಸ,
ಮತ್ತೆ ಕೆಲಸಕ್ಕಾಗಿ ಅಲೆದಾಟ 
ಮದುವೆ ಮಕ್ಕಳು ಮರಿ
ಅಂತೂ ಇಂತೂ 
ಒಂದು ಹಂತಕ್ಕೆ ಬರುವಲ್ಲಿ
ದೋಣಿ ನಿಲ್ಲದು ಒಂದೇ ಕಡೆ 
ಹುಟ್ಟು ಹಾಕುತ್ತಲೇ ಇರಬೇಕು||

ಬಿರುಗಾಳಿ,ಕುಳಿರ್ಗಾಳಿ,

ಧೋ ಎಂದು ಸುರಿಯುವ ಮಳೆ
ಮತ್ತೊಮ್ಮೆ ಮಂದಾನಿಲ 
ಬರುವಅಲೆಗಳನ್ನೆಲ್ಲಾ ಎದುರಿಸಿ
 ಸಾಗುವ ಹೊತ್ತಿಗೆ ಸಾಕೋ ಸಾಕು||

ಹೀಗೆಲ್ಲಾ ಇರುವಾಗ 

ಸುಂದರ ಸೂರ್ಯಾಸ್ತ,
ಇರುಳಲ್ಲಿ ಮಿನುಗುವ ತಾರೆ
ಉಹೂ..ನೋಡಲು ಪುರುಸೊತ್ತಿಲ್ಲ 
ಅಥವಾ ಗುರಿ ತೇರುವ ತವಕದಲ್ಲಿ
ಸಮತೋಲನ ತಪ್ಪುವ ಆತಂಕದಲ್ಲಿ 
ಎಡವಟ್ಟಾಗುತ್ತಿರಬೇಕು ||

ದೋಣಿ ಮುಪ್ಪಾಗಿ 

ಅಂಬಿಗನ ಕೈ ಸುಸ್ತಾಗಿ
ಒಂದು ದಿನ ಪಯಣ ನಿಲ್ಲುತ್ತದೆ
ಅಥವಾ ಪಯಣ ನಿಂತಂತೆ ಅನಿಸುತ್ತದೆ
ಅಷ್ಟರಲ್ಲೆ ಹೊಸ ದೋಣಿ -ಯಾಂತ್ರೀಕೃತವಂತೆ 
ಮತ್ತೆ ಹೊಸ ಪಯಣಿಗರು
ಹೊಸ ಪಯಣ 
ಶುರುವಾಗಬೇಕು||

Thursday, November 1, 2018

ಕಡಲ ತಡಿಯ ನಡಿಗೆ

ಪ್ರಕೃತಿಯ ಸಾಂಗತ್ಯವು ಎಂದೆoದಿಗೂ ಆಪ್ಯಾಯಮಾನ.ನಾವು ಹೆಚ್ಚು ಹೆಚ್ಚು ಆಧುನಿಕ ಜೀವನಕ್ಕೆ ತೆರೆದುಕೊಳ್ಳುತ್ತಾ ಹೋದಂತೆ , ಸಹಜ ಪರಿಸರದಿಂದ ದೂರವಾಗುತ್ತಾ ಸಾಗುತ್ತಿರುವುದು  ವಿಪರ್ಯಾಸವೇ ಸರಿ.ಅಲ್ಲೊಮ್ಮೆ ಇಲ್ಲೊಮ್ಮೆ ಬಿಡುವು ಮಾಡಿಕೊಂಡು , ಬೆಟ್ಟ ಗುಡ್ಡಗಳನ್ನು ಏರುವುದು, ಕಾಡು ಮೇಡುಗಳಲ್ಲಿ ಅಲೆಯುವುದು ನಮ್ಮ ದೈನಂದಿನ ಒತ್ತಡಭರಿತ ಜೀವನ ಶೈಲಿಗೆ ಬ್ರೇಕ್ ನೀಡಿ ,ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ನಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಬೀಚ್ ಟ್ರೆಕ್ ಅಥವಾ ಕಡಲ ತಡಿಯ ನಡಿಗೆ ಇತ್ತೀಚೆಗಿನ ಟ್ರೆಂಡ್ ಗಳಲ್ಲಿ ಒಂದು. ಸಮುದ್ರದ  ಗಾಳಿಗೆ ಮೈಯೊಡ್ಡಿ ,ಸಮುದ್ರ ತೀರದ ಉದ್ದಕ್ಕೂ  ನಡೆಯುವುದು ಒಂದು ಸುಂದರ ಅನುಭವ. 





 ಇತ್ತೀಚಿಗೆ ನಮ್ಮ ಮಿತ್ರ ವೃ೦ದದವರೆಲ್ಲ ಇಂತಹ ಒಂದು ನಡಿಗೆಯನ್ನು ಮಾಡುವುದೆಂದು ತೀರ್ಮಾನಿಸಿದೆವು. ಈ ಟ್ರೆಕ್ ಗೆ ಹೆಚ್ಚಿನ ತಯಾರಿಯೇನೂ ಅಗತ್ಯವಿಲ್ಲ. ೨ -೩ ಲೀಟರ್ ನೀರು ಮತ್ತು ಒಂದಿಷ್ಟು ಲಘು ಆಹಾರ ನಿಮ್ಮ ಕೈಯಲ್ಲಿ ಇದ್ದರೆ  ಸಾಕು.ಕುಮಟಾದಿಂದ ಗೋಕರ್ಣಕ್ಕೆ ಸುಮಾರು ೧೮ ಕಿ.ಮೀ ಉದ್ದಕ್ಕೂ ನಡೆಯುವ  ಯೋಜನೆ ತಯಾರಾಯಿತು. 

ಕುಮಟೆಯ ದರ್ಶನ ನನಗೆ ಮೊದಲ ಬಾರಿ ಆದದ್ದು ಶಿವರಾಮ ಕಾರಂತರ 'ಅಳಿದ ಮೇಲೆ 'ಕಾದಂಬರಿಯಲ್ಲಿ . ಅದರಲ್ಲಿ ಬರುವ  ಯಶವಂತ ರಾಯರು ಹುಟ್ಟಿ ಬೆಳೆದ ಊರು ಕುಮಟೆಯೇ. ಅದರ ಬಳಿಕ ಕುಮಟೆಯನ್ನು ನಾನು ಕಂಡದ್ದು ಚಿತ್ತಾಲರ ಕಥೆಗಳಲ್ಲಿ. ಕುಮಟೆ  ಪೇಟೆಯಲ್ಲಿ ಅಲೆದಾಡುವಾಗ ಧಾರೇಶ್ವರದ ಶೀನ ಮುಂತಾದ ಪಾತ್ರಗಳು ನನ್ನ ಮನದಲ್ಲಿ ಸುಳಿದಾಡಿದವು.  

ಸ್ನೇಹಿತರಾದ ಮಂಜು ಹಾಗೂ ವಾದಿರಾಜರ ಮಾರ್ಗದರ್ಶನದಲ್ಲಿ  ನಮ್ಮ ಬೀಚ್ ಟ್ರೆಕ್ ಪ್ರಾರಂಭವಾಯಿತು. ಬೆಳಗಿನ ಜಾವವೇ ಎದ್ದು ತಯಾರಾದೆವು. ಕುಮಟೆಯ ಸಮುದ್ರ ತೀರದಿಂದ ಬೆಳಗ್ಗೆ ಆರು ಗಂಟೆಗೆ ನಮ್ಮ ನಡಿಗೆ ಶುರುವಾಯಿತು. ಕೆಲವೊಂದು ಕಡೆ ಸಮುದ್ರ ತೀರ ಮತ್ತೆ ಕೆಲವೆಡೆ ಸಣ್ಣ ಪುಟ್ಟ ಗುಡ್ಡ ಹತ್ತಿ ಮತ್ತೆ ಇಳಿದು ,ಸಮುದ್ರ ತೀರವನ್ನು ಸೇರಿಕೊಳ್ಳಬೇಕು. ಬೆಳಗಿನ ತಿಳಿ ಬಿಸಿಲು ಮತ್ತು ಆರಂಭದ ಉತ್ಸಾಹವು ನಮಗೆ ಬಹಳಷ್ಟು ಖುಷಿ ಕೊಟ್ಟಿತು. 

ಕಡಲು ಅನಂತ . ಅದರ ವಿಶಾಲತೆ, ಆಳವನ್ನು  ಅರಿಯಲು  ನಮಗೆ ಕಷ್ಟವೇ ಸರಿ. ಕಡಲಿನ ತೆರೆಗಳ ಉದ್ದಕ್ಕೂ ಅಲೆಗಳ ಶಬ್ದಗಳ ಜತೆ ಹೆಜ್ಜೆ ಹಾಕುತ್ತ  ಮೌನವಾಗಿ  ಸಾಗುವುದು  ಒಂದು ರೀತಿಯ ಧ್ಯಾನದಂತೆ. ಕಡಲ ಬಣ್ಣವು ನೀಲಿ ಮಿಶ್ರಿತ ಬೂದು ಬಣ್ಣವಾದರೂ ಕಡಲತೀರದ ಜೀವನಕ್ಕೆ ಅದೆಷ್ಟು ಬಣ್ಣಗಳು! ಕಡಲಿನ ಉದ್ದಕ್ಕೂ ಹಲವು ವರ್ಣದ ಚಿತ್ರಗಳು. ದೋಣಿಯನ್ನು ಸಮುದ್ರದೆಡೆಗೆ ಸಾಗಿಸುವವರು, ಕಡಲಿನ ಅಲೆಗಳ ಏರಿಳಿತಕ್ಕೆ ಅಂಜದೆ ದೋಣಿಯನ್ನು ಮುನ್ನುಗ್ಗಿಸಿ ,ಮೀನು ಹಿಡಿಯುವ ಧೀರರು ,ದಡದಲ್ಲಿ ಬಲೆಯಿಂದ ಮೀನುಗಳನ್ನು ಪ್ರತ್ಯೇಕಿಸಿ ,ಬುಟ್ಟಿಗೆ ತುಂಬಿ ಮಾರಾಟಕ್ಕೆ ಒಯ್ಯುವ ಮಹಿಳೆಯರು ,ಮರಳಿನ ಅಡಿಯಲ್ಲಿ ತೆರೆಗಳ ಜತೆಯಲ್ಲಿ ಆಟವಾಡುವ ಮಕ್ಕಳು -ಒಂದೇ ಎರಡೇ .ಕಡಲ ತೀರ ಹಲವರಿಗೆ ಜೀವನವನ್ನು ಕೊಟ್ಟಿದೆ . ಕೆಲವರ ಜೀವನವನ್ನು ಕಸಿದುಕೊಂಡಿದೆ ಕೂಡ. 

ನಮ್ಮ ನಡಿ ಗೆ ಸಾಗುತ್ತಿದ್ದಂತೆ ಅಘನಾಶಿನಿ ನದಿಯು ಸಮುದ್ರವನ್ನು ಸೇರುವ ಸ್ಥಳ ಎದುರಾಯಿತು.  ಅದನ್ನು ದಾಟಬೇಕಾದರೆ ದೋಣಿಯಲ್ಲಿ ಸಾಗಬೇಕು. ದೋಣಿ ಇರುವ ತನಕ ಬಸ್ ನಲ್ಲಿ ಹೋಗಿ, ದೋಣಿ ಹತ್ತಿ ,ನದಿ ದಾಟಿದೆವು. ಬಳಿಕ ಮರಳಿ ಕಡಲ ತೀರ. 



ನಡಿಗೆಯ ಉದ್ದಕ್ಕೂ ಕಂಡ ಬೀಚ್ ಗಳು ಎಷ್ಟೊಂದು ಸುಂದರ ಮತ್ತು ಸ್ವಚ್ಛ. ಜನ ಸಂದಣಿ ಇಲ್ಲದ ಕಾರಣ ಅವು ಬಹಳ ಶುಚಿಯಾಗಿಯೇ ಉಳಿದಿವೆ. ಹಾಗಾಗಿ ಈ ನಡಿಗೆ ಮತ್ತಷ್ಟು ಹರ್ಷ  ನೀಡಿತು. . ಸುಮಾರು ೧೮ ಕಿ.ಮೀ. ನಾವು ಕ್ರಮಿಸಿದೆವು.   ಮುಂದೆ ನಡೆಯುತ್ತಿದ್ದಂತೆ ಗೋಕರ್ಣ ಸಮೀಪಿಸಿತು . ಮಧ್ಯಾಹ್ನ ೨ ಗಂಟೆ.ಹೊಟ್ಟೆ ತಾಳ ಹಾಕಲಾರಂಭಿಸಿತ್ತು. ಗೋಕರ್ಣದಲ್ಲಿ ಇರುವ  zostel  ನಲ್ಲಿ ಊಟ ಮುಗಿಸಿದೆವು.  ಅರ್ಧ ದಿನವನ್ನು ಹೀಗೆ  ಸ್ನೇಹಿತರ ಜತೆ  ,ಪ್ರಕೃ ತಿಯ  ಮಡಿಲಲ್ಲಿ ಕಳೆದದ್ದು ಒಂದು ಸುಂದರ ನೆನಪು. 

ಛಾಯಾ ಚಿತ್ರಗಳು : ಶ್ರೀಕಂಠ 

Monday, August 14, 2017

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೃಷ್ಣ

ಶ್ರೀಕೃಷ್ಣಪರಮಾತ್ಮನ ಲೀಲೆಗಳು ಅಪಾರ. ಕಾವ್ಯ ಪ್ರಪಂಚದಲ್ಲಿ ,ನೃತ್ಯ ನಾಟಕಗಳಲ್ಲಿ ಕೃಷ್ಣನಷ್ಟು ವರ್ಣನೆಗೆ ಒಳಗಾದವರು ಬೇರಾರೂ ಇಲ್ಲವೆಂದೇ ಹೇಳಬೇಕು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿಯಂತೂ ಬಂದಿಶ್, ಠುಮ್ರಿ ,ಧಮಾರ್  ಮತ್ತು ಭಜನ್ ಗಳಲ್ಲಿ ಕೃಷ್ಣನ ಗುಣಗಾನವು  ಯಥೇಚ್ಛವಾಗಿ ಕಾಣಸಿಗುತ್ತದೆ. ಆತನ ಬಾಲಲೀಲೆ, ಗೋಪಿಯರೊಡನೆ ಸರಸ,ರಾಧೆಯ ಪ್ರೇಮ ಮತ್ತು ವಿರಹ, ಭಕ್ತನ ಪ್ರಾರ್ಥನೆ ಇವುಗಳೆಲ್ಲ ಅತ್ಯಂತ ಸೊಗಸಾಗಿ ಚಿತ್ರಿತವಾಗಿವೆ. ಧಮಾರ್  ಎನ್ನುವ ಪ್ರಕಾರವು  ಕೃಷ್ಣನ ಹೋಳಿ ಹಬ್ಬದ ವರ್ಣನೆಗೆಂದೇ  ಮೀಸಲಾಗಿದೆ. ಹಿಂದೂಸ್ತಾನೀ ಸಂಗೀತದಲ್ಲಿ ಕೃಷ್ಣನನ್ನು ವಿವಿಧ ಹೆಸರುಗಳಿಂದ ಸಂಬೋಧಿಸಲಾಗುತ್ತದೆ. ಶ್ಯಾಮ್, ಮನಮೋಹನ, ಮೋಹನ, ಕಾನ್ಹಾ, ಕೃಷ್ಣ, ಗೋಪಾಲ, ಮುರಳೀಧರ, ವಿಹಾರೀ, ಮುಕುಂದ, ನಂದನಂದನ, ಯದುನಂದನ, ಯಶೋದಾನಂದನ, ಗಿರಿಧರ, ಮುರಾರಿ ಮುಂತಾದ ಹೆಸರುಗಳೆಲ್ಲವೂ ಕೃಷ್ಣನದ್ದೇ. ಕೃಷ್ಣನದ್ದು ತುಂಬು ಜೀವನ. ಆತನ ಜೀವನದ ಪ್ರತಿಯೊಂದು ಘಟ್ಟವೂ ಸಂಭ್ರಮ ಸಡಗರದಿಂದ ಕೂಡಿದ್ದು. ಕವಿಗಳು, ಸಾಹಿತಿಗಳೆಲ್ಲ ತಮ್ಮ ಕಲ್ಪನೆಯ ಆಗಸದಲ್ಲಿ ಕೃಷ್ಣನನ್ನು ವಿಧ ವಿಧ ರೀತಿಗಳಲ್ಲಿ ಕಂಡು ಆ ಸೃಷ್ಟಿಯ ಸಂತಸವನ್ನು ತಮ್ಮ ಅಸಂಖ್ಯಾತ ರಚನೆಗಳ ಮೂಲಕ ನಮ್ಮೊಂದಿಗೆಲ್ಲ ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ ನಮೂದಿಸಿರುವ ಕವನಗಳೆಲ್ಲವೂ ವಿವಿಧ ಶ್ರೇಷ್ಠ ಸಂಗೀತಗಾರರು ಹಿಂದೂಸ್ತಾನಿ ಸಂಗೀತ ಪರಂಪರೆಗೆ ಕೊಟ್ಟ ಕೊಡುಗೆ. 

೧. ನಂದ ಗೋಕುಲದಲ್ಲಿ ಕೃಷ್ಣನ ಆಗಮನ 
ಶ್ರೇಷ್ಠ ವಾಗ್ಗೇಯಕಾರ  ಪಂಡಿತ್ ರಾಮಶ್ರೇಯ ಝಾ  "ರಾಮರಂಗ"ರು ತಮ್ಮ ಬಂದಿಶ್ ನಲ್ಲಿ  ಯಶೋದೆಯನ್ನು ಈ ಪರಿಯಾಗಿ ವಿನಂತಿಸುತ್ತಾರೆ :

ರಾಗ: ನಂದ್     ತಾಳ:  ಏಕ್ ತಾಲ್ 

ನಂದ್ ಘರ್ ಆನಂದ್ ಕೀ 
ಬಧಾಯೀ ಬಾಜೇ 
ಯಶುದಾ ತಿಹಾರೇ ಆಜ್ 
ಭಾಗ್ ರಾಗ್  ಜಾಗೇ ಜಾಗೇ ।

ಐಸೊ ಲಾಲ್ ಪಾಯೋರೀ 
ಜೈಸೊ ಕೋಉ ಪಾವೇ ನಾಹೀ 
"ರಾಮರಂಗ್"  ನಯನ್ ಮೇರೋ 
ದರಸ್ ದಾನ್ ಮಾಂಗೇ ಮಾಂಗೇ ।।

ಗೋಕುಲದ ನಂದನ ಮನೆಯಲ್ಲಿ ಆನಂದದ ವಾದ್ಯಗಳು ಮೊಳಗಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಕೃಷ್ಣನ ಆಗಮನದಿಂದ ಯಶೋದೆಗೆ ಅಪರಿಮಿತ ಹರ್ಷವಾಗಿದೆ. ಇಂತಹ ಸಂದರ್ಭದಲ್ಲಿ ಕವಿಯು ತಾಯಿ ಯಶೋದೆಯನ್ನು " ನಿನಗೆ ಅಪೂರ್ವವಾದ ,ಬೇರೆಲ್ಲೂ ಕಾಣಸಿಗದಂತಹ ಸುಂದರ ಶಿಶುವು ದೊರಕಿದೆ. ಅಂತಹ ಮಗುವಿನ ದರ್ಶನವನ್ನು ನನಗೆ ಕರುಣಿಸು " ಎಂದು ಪ್ರಾರ್ಥಿಸುತ್ತಾರೆ. 

ರಾಗ: ಕೋಮಲ ರಿಷಭ  ಅಸಾವರಿ      ತಾಳ:  ತೀನ್  ತಾಲ್ 

ಬಢಯ್ಯಾ ಲಾವೋ ಲಾವೊರೆ ಲಾವೋ 
ರೀ ಆಜ್ ಸುಘರ ಘಡ್ ಪಲನಾ ।

ರತನ್ ಜತನ ಸೊ ಜಡಿತ್ ಹಿಂಡೋಲನಾ 
ಝುಲಾವತ್  ಜಸೋಮತ್  ಲಲನಾ ।।

ಬಾಲ ಕೃಷ್ಣನ ದಿನಚರಿಯ ಪ್ರಮುಖ ಅಂಗ ನಿದ್ದೆ. ಯಶೋದೆಯು ನಂದನ ಬಳಿ ಸುಂದರವಾದ  ತೊಟ್ಟಿಲನ್ನು ತರಲು ಆದೇಶಿಸುತ್ತಿರುವ ಚಿತ್ರಣ ಇಲ್ಲಿದೆ. ಹಾಗೆ ಆದೇಶಿಸಿ ತರಿಸಿದ ತೊಟ್ಟಿಲು ಸಾಮಾನ್ಯವಾದದಲ್ಲ. ರತ್ನಖಚಿತವಾದದ್ದು.  ಈ ವಿಶೇಷವಾದ ತೊಟ್ಟಿಲನ್ನು ತೂಗುತ್ತಾ ಯಶೋದೆಯು ಕೃಷ್ಣನನ್ನು ಮಲಗಿಸುತ್ತಾಳೆ . 

ರಾಗ : ಕೋಮಲ ರಿಷಭ  ಅಸಾವರಿ      ತಾಳ:   ಆಡಾ  ಚೌತಾಲ್ 

ಯೇ ಮಾ ಕೌನ್ ಜೋಗೀ ಆಯಾ 
ನಜರ್ ಜೋ ಲಾಗೀ ಮೇರಾ ತೋ  ಕಾನ್ಹಾ ರೋವೆ ।

ಘರ್ ಘರ್ ಜಸೋದಾ ಲಿಯೇ ಫಿರತ್ ಹೇ 
ನಾ ದೂಧ್ ಪೀವೆ ನಾ ಸೋವೆ ।।


ಎಲ್ಲ ತಾಯಂದಿರಿಗೆ ಇರುವಂತೆ ಯಶೋದೆಗೂ ತನ್ನ ಮಗುವಿನ ಬಗೆಗೆ ಎಲ್ಲಿಲ್ಲದ ಕಳಕಳಿ. ಶಿವನು  ಕೃಷ್ಣನನ್ನು ಜೋಗಿಯ ರೂಪದಲ್ಲಿ ಬಂದು ಭೇಟಿಯಾಗಿ ಹೋಗುತ್ತಾನೆ. ಜೋಗಿಯು ಹೋದ ಬಳಿಕ ಬಾಲಕೃಷ್ಣನು ಹೆದರಿಕೊಂಡಿದ್ದಾನೆ. ಮಂಕಾಗಿದ್ದಾನೆ. ಸತತವಾಗಿ ಅಳುತ್ತಿದ್ದಾನೆ. ಮಲಗಲು ನಿರಾಕರಿಸುತ್ತಿದ್ದಾನೆ. ಹಾಲನ್ನು ಸೇವಿಸಲೂ ಒಲ್ಲೆನೆನ್ನುತ್ತಾನೆ. ಆತನಿಗೆ ಆ ಜೋಗಿಯದೇ ದೃಷ್ಟಿಯಾಗಿರಬೇಕು ಎಂದು ಯಶೋದಾ ಮಾತೆಯು ಗೋಕುಲದ ಮನೆಮನೆಗಳಲ್ಲಿ ಕೃಷ್ಣನ್ನು ಹೊತ್ತೊಯ್ದು ಹೇಳುತ್ತಿರುವ ಸನ್ನಿವೇಶವನ್ನು ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಸಾಹೇಬರು ಇಲ್ಲಿ ಸುಂದರವಾಗಿ ವಿವರಿಸಿದ್ದಾರೆ. 

ರಾಗ: ಶ್ಯಾಮ್ ಕಲ್ಯಾಣ್  ತಾಳ :   ತೀನ್  ತಾಲ್ 

ಝೂಲತ ಗೋಪಾಲ ಹೋ ಪಲನಾ 
ಘು೦ಘರಿ  ಲಲ್ ಕೆ ಲಲ್ ಕೇ  ಕಪೋಲ ಭಾಲ್  ಹೋ ಪಲನಾ ।

ಬಾಲ ಮುಕುಂದ ಆನಂದ ಕಂದ 
ಪುನಿ ಪುನಿ ಮಲಕೆ ಕಿಲಕೆ "ಪ್ರಣವೇಶ" ನಂದ ಲಾಲ್  ಹೋ ಪಲನಾ ।।


ಬಾಲ ಕೃಷ್ಣನು  ಜೋಕಾಲಿ ಆಡುವ ಪರಿ ಇಲ್ಲಿದೆ. ಕೃಷ್ಣನ ಗುಂಗುರು ಕೂದಲು ಜೋಕಾಲಿ ಆಟದ ಸಂದರ್ಭದಲ್ಲಿ ಹಣೆ ಮತ್ತು ಗಲ್ಲಗಳ ಮೇಲೆ ನಲಿದಾಡುತ್ತಿವೆ. ಹೀಗಿರುವಾಗ ಕೃಷ್ಣನು ನಸುನಗುತ್ತಾ ಕೇಕೆ ಹಾಕುತ್ತಾ ಇನ್ನೂ ಜೋರಾಗಿ ಜೋಕಾಲಿ ಆಡುತ್ತಿದ್ದಾನೆ . 

೨. ಬಾಲಕೃಷ್ಣನ ಲೀಲೆಗಳು 

ರಾಗ: ಶ್ಯಾಮ್ ಕಲ್ಯಾಣ್       ತಾಳ: ಏಕ್ ತಾಲ್

ಬೇಲಾ ಹೋ ಸಾಂಝ ಕೀ  
ಸುಖದ್ ಸುಹಾವನೋ
ಭಯೋ ರೀ ಆಲೀ ಆಜ್ ತೋ  ।

ಅಚಾನಕ್ ಆಯೇ ಶ್ಯಾಮ್  
ಬರಜೋರಿ ಅಚರಾ ಥಾಮ್ 
ಸರಬಸ್ ಲಯ್ "ರಾಮರಂಗ್"
ಚಲೇ ಜಗಾಯೆ ಬಾಲ್ ಕೋ ।।

ಗೋಕುಲದ ಸ್ತ್ರೀಯರಿಗೆ ಸಂಜೆಯ ಹೊತ್ತು ತುಂಬಾ ಸುಂದರವಾಗಿ ಕಾಣಹತ್ತಿದೆ. ಕಾರಣವಿಷ್ಟೇ.  "ಪ್ರತಿದಿನ ಸಂಜೆಯ ಸುಂದರ ಹೊತ್ತಿನಲ್ಲಿ ಕೃಷ್ಣನು ಅಚಾನಕ್ಕಾಗಿ ತಮ್ಮ ಮನೆಗಳಿಗೆ ನುಗ್ಗಿ ತನ್ನ ಯಾವತ್ತಿನ ತುಂಟಾಟದ ವಿವಿಧ ನಮೂನೆಗಳನ್ನು ಪ್ರಸ್ತುತಪಡಿಸಿ, ಧಾ೦ಧಲೆ ಎಬ್ಬಿಸಿ ಇನ್ನೇನು ಹೊರನಡೆಯುತ್ತಿದಂತೆ ತಮ್ಮ ಮನೆಗಳಲ್ಲಿ ಶಾಂತವಾಗಿ ನಿದ್ರಿಸುತ್ತಿರುವ ಹಸುಗೂಸುಗಳನ್ನು ಎಬ್ಬಿಸಿ ಕಾಲು   ಕೀಳುತ್ತಾನೆ ". ಪರಮಾತ್ಮನ ಈ ಲೀಲೆಯು ಯಾರಿಗೆ ತಾನೇ ಇಷ್ಟವಾಗದು ? 


ರಾಗ: ಸೋಹನಿ        ತಾಳ:  ತೀನ್  ತಾಲ್

ಏರೀ ಏ ಯಶೋದಾ ತೋಸೆ ಕರೂಂಗೀ ಲರಾಯೀ 
ತುಮ್ ಹರೇ ಕುಂ ವರ್ ನೇ ಧೂಮ್ ಮಚಾಯೀ ।

ಕಾಹು ಕೆ ಸರ್ ಸೇ ಮಟಕಿಯಾ ಛೀನೀ 
ಕಾಹುಕೇ ಸರ್ ಸೇ ಮಟಕಿಯಾ ಡುರ್ ಕಾಯೀ 
ಬಾಟ್ ಚಲತ್ ಮೋಹೇ ಛೇಡತ್  ಸಾಂವರ್ 
ಚಾ೦ದ್ ಹಸೇ ಔರ್ ಬೃಜ್ ಕೀ ಲುಗಾಯೀ ।।

ಗೋಪಿಯರು ಕೃಷ್ಣನ ತುಂಟಾಟಗಳನ್ನು ಸಹಿಸುತ್ತಲೇ ಇದ್ದರೂ ಕೆಲವೊಮ್ಮೆ ಸಹನ ಶಕ್ತಿಯ ಎಲ್ಲೆ  ಮೀರಿದಾಗ ಯಶೋದೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಕೃಷ್ಣನು ತಮ್ಮ ನೀರಿನ ಮಡಕೆಗಳನ್ನು ಕಸಿದುಕೊಂಡು ,ಕೆಲವರ ಮಡಕೆಗಳನ್ನು ಒಡೆದು ,ತಮ್ಮನ್ನು ಛೇಡಿಸುತ್ತಿದ್ದರೂ ಗೋಕುಲದ ಜನರು ಇದನ್ನು ಕಂಡು ಆನಂದ ಪಡುತ್ತಿದ್ದಾರೆ ಎಂದು ದೂರುತ್ತಾರೆ. 

ರಾಗ: ದೇಸ್        ತಾಳ: ರೂಪಕ್  

ನಿರತತ್ ಶ್ಯಾಮ್ ಆಜ್ ನಟವರ್ ಭೇಷ್  
ಮುರಲೀ ಕರ್ ಧಾರೆ ।

ನಿರತತ್ ಗಾವೇ ಕಾಲಿಯಾ ಫನ್ ಪೇ 
"ರಾಮರ೦ಗ್" ಉಮಂಗೀ ತಾತಾ ಥೈಯ್ಯಾ ಕರೇ  ।।

ಕೃಷ್ಣನ ಬಾಲಲೀಲೆಗಳಲ್ಲಿ ಪ್ರಮುಖವಾದ ಕಾಳಿಂಗ ಮರ್ದನದ ಸಂದರ್ಭದಲ್ಲಿ ಕೃಷ್ಣನು ದೈತ್ಯ ಕಾಳಿಂಗನ ಹೆಡೆಯನ್ನೇರಿ ನರ್ತಿಸಿದ ವಿಚಾರವನ್ನು ಈ ಕವನದಲ್ಲಿ ಪ್ರಸ್ತುತಪಡಿಸಲಾಗಿದೆ. 

೩. ಕೃಷ್ಣನ   ಯೌವನ 

ಕವಿಯು ರಾಧಾ ಕೃಷ್ಣರನ್ನು ಜೊತೆಯಾಗಿ ಕಾಣುತ್ತಾನೆ. 

ರಾಗ: ಮುಲ್ತಾನೀ  ತಾಳ: ಆಡಾ ಚೌತಾಲ್  

ಗೋಕುಲ್ ಗಾಂವ್ ಕೇ ಛೋರಾ 
ಬರಸಾನೇ ಕೀ  ನಾರೀ ರೇ ।

ಇನ್ ದೋಉನ್ ಮನ್ ಮೋಹ್ ಲಿಯೋ ಹೇ 
ರಹೇ "ಸದಾರಂಗ್" ನಿಹಾರ್ ರೇ ।।

ಗೋಕುಲದ ಹುಡುಗನಾದ  ಕೃಷ್ಣ  ಮತ್ತು ಬರ್ಸಾನಾ ಎಂಬ ಊರಿನ ಹುಡುಗಿಯಾದ  ರಾಧೆ - ಇವರಿಬ್ಬರನ್ನು ಜತೆಯಾಗಿ ಕಂಡು ಕವಿಗೆ (ಸದಾರಂಗ್) ಮನಸ್ಸು ತುಂಬಿ ಬಂತು. 

ರಾಗ: ಜೋನ್ ಪುರೀ        ತಾಳ : ಏಕ್ ತಾಲ್ 

ಮೋರೆ  ಮಂದಿರ್ ಶ್ಯಾಮ್ ಆಯೆ 
ಸಪನೇ ನಿಶಿ ದರಶ್ ಪಾಯೇ 
ರಾಧಾ ಸಂಗ್ ಹಸತ್ ಬೋಲತ್ 
ಜಮುನಾ ಜಲ ಡಗ್ ಮಗಾಯೇ  ।

"ದೀನ್" ದೇಖಿ ಪುಲಕಿತ್ ಮನ್ 
ಧಾಯೇ ಧೋಯ್ ಜುಗಲ್ ಚರನ್ 
ಕರ್ ಆರತಿ ಆನಂದ್ ಭರೇ 
ಗಾಯೇ ಗಾಯೇ ನಾಚೆ ನಾಚೆ  ।।

ಕವಿಯ ಕನಸಿನಲ್ಲಿ ರಾಧೆಯ ಜತೆ ಕೃಷ್ಣ ನಗುತ್ತಾ ಸರಸವಾಡುತ್ತ ಯಮುನಾ ನದಿಯಲ್ಲಿ  ಜಲ ತರಂಗ ಗಳನ್ನು ಎಬ್ಬಿಸುವ ಪ್ರಸಂಗ ನಡೆಯುತ್ತದೆ. ಅವರಿಬ್ಬರನ್ನು ಕಂಡ ಕವಿಗೆ ಅತ್ಯಂತ ಹರ್ಷವಾಗಿ, ಅವರಿಬ್ಬರ ಚರಣಗಳನ್ನು ತೊಳೆದು, ಆರತಿ ಮಾಡಿ, ಹಾಡಿ ನರ್ತಿಸುತ್ತಾನೆ.   

ರಾಗ : ರಾಗೇಶ್ರೀ    ತಾಳ: ತೀನ್  ತಾಲ್ 

ಜಾನೇ ದೇ ಜಾನೇ ದೇ ಸಖೀ ಜಾನೇ ದೇ 
ಮೋಹನ್ ಯಾದ್ ಕರೇ ಜಾನೇ ದೇ ।

ಮನ್ ಮೋಹನ್ ಕೀ ಪ್ರೀತ್ ಹೀ ನ್ಯಾರೀ 
ಮನ್ ಕೋ ಲುಭಾವತ್  ಸುಖದ್  ಕರೇ  ಜಾನೇ ದೇ ।।

ರಾಧೆಯು ತನ್ನ ಸಖಿಯರಲ್ಲಿ "ಮನಮೋಹನ ಕೃಷ್ಣನ ಪ್ರೀತಿಯು ತನ್ನ ಮನಸ್ಸಿಗೆ ಆಪಾರ ಸುಖವನ್ನು ನೀಡುವುದು. ತನ್ನ ಪ್ರಿಯತಮ ಕೃಷ್ಣನನ್ನು ಭೇಟಿಯಾಗಲು ಅವಕಾಶ ನೀಡಿ " ಎಂದು  ಈ ಪರಿಯಾಗಿ ವಿನಂತಿಸುತ್ತಾಳೆ. 

ರಾಗ : ತಿಲಕ್  ಕಾಮೋದ್     ತಾಳ:  ಜತ್   

ದೇಖೋ ಸಖೀ ಶ್ಯಾಮ್ ನಿಠುರ್ ನಾಹೀ ಮಾನತ್ 
ಕರತ್  ಠಿಠೋರೀ ಕಾನ್ಹಾ ರೋಕತ್ ಮಗ್  ಚಲತ್ । 

ಜಮುನಾ ತಟ ಪರ್  ಬನ್ಸೀ  ಬಜಾವತ್ 
"ದೀನ್" ಕೆ ತನ್ ಮನ್  ಸಬ್ ಅಕುಲಾವತ್ 
ಘರ್ ಆ೦ಗನ್ ಮೋಹೇ ಕಛು ನಾ ಸುಹಾವತ್ ।।

ಇದು ಒಂದು ಠುಮ್ರಿ.   ರಾಧೆಯು ತನ್ನ ಸಖಿಯರಲ್ಲಿ " ಯಮುನೆಯ ದಡದಲ್ಲಿ ತೇಲಿ ಬರುತ್ತಿರುವ ಮುರಳಿನಾದವು ಮತ್ತು ಮುರಳೀಧರನ ಸುಂದರ ಸರಸ ಲೀಲೆಗಳು ನನ್ನ ಹೃದಯವನ್ನು ಆವರಿಸಿಕೊಂಡಿವೆ. ಬೇರಾವುದರ ಪರಿವೆಯೂ ನನಗಿಲ್ಲ " ಎಂದು ಭಾವಪರವಶಳಾಗಿ ನುಡಿಯುತ್ತಾಳೆ .
ರಾಗ : ದೇವ  ಗಾಂಧಾರ್   ತಾಳ: ತೀನ್  ತಾಲ್
ಬರಜೋರಿ ನಾ  ಕರೋರೆ ಏ ಕಾನ್ಹಾಯೀ 
ಜಮುನಾ ಕೆ ಘಾಟ್ ಪನಿಯಾ ಜೋ ಭರನ್ 
ಗಗರ್  ಮೋರೀ ಗಿರಾಯೀ ಮೋಸೇ  ಕರ್ ಕೇ  ಲರಾಯೀ ।

"ಮನ್ ರಂಗ್"  ಹೋ  ತುಮ ಢೀಟ್ ಲಂಗರ್ ವಾ 
ವಹೀ ರಹೋ ಜಹಾಂ ರೈನ್ ಬಿರಮಾಯೀ   
ಮೋಸೇ ಕರ್ ಕೇ ಲರಾಯೀ  ।।

ರಾಧಾ ಕೃಷ್ಣರ ಹುಸಿಮುನಿಸಿನ ವರ್ಣನೆ ಇಲ್ಲಿದೆ. ರಾಧೆಯು ಕೃಷ್ಣನಲ್ಲಿ "ನನ್ನನ್ನು ಛೇಡಿಸಬೇಡ, ಯಮುನೆಯ ತೀರದಲ್ಲಿ ನೀರು ತುಂಬುತ್ತಿರುವ ನನ್ನ ಕೆಲಸಕ್ಕೆ ಅಡ್ಡಿ ಬರಬೇಡ, ಜಗಳವಾಡಬೇಡ. ನಿನ್ನೆ ರಾತ್ರಿಯನ್ನು ನೀನು ಎಲ್ಲಿ ಕಳೆದಿದ್ದೀಯ ಅಲ್ಲಿಯೇ  ಇರು. ನನ್ನ ಬಳಿ ಬರಬೇಡ." ಎಂದು ಕೋಪಗೊಳ್ಳುತ್ತಾಳೆ. 

ರಾಗ : ಪೂರಿಯಾ ಕಲ್ಯಾಣ್       ತಾಳ: ತೀನ್  ತಾಲ್ 

ಇತನೀ ಬಿನತೀ ಮೋರೀ ಮಾನ್ ಶಾಮ್ ಜೀ 
ಪನ್ ಘಟ್ ಪೇ ಮೋಹೇ ಛೇಡೊ ನಾ ಛೇಡೊ ನಾ।

ದೇಖತ್ ಹೇ ಸಬ್ ಬ್ರಿಜ್ ಕೇ ಲುಗವಾ 
ಜಾಕೇ ಕಹೇಂಗೇ ಘರ್ ಘರ್ ವಾ ।।

"ನೀರು ತುಂಬುವ ಜಾಗದಲ್ಲಿ ನಮ್ಮನ್ನು ಛೇಡಿಸಬೇಡ. ಬ್ರ೦ದಾವನದ ಜನರೆಲ್ಲಾ ನಮ್ಮನ್ನು ನೋಡುತ್ತಾರೆ. ಮನೆಮನೆಗಳಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ" ಎಂದು ಗೋಪಿಕೆಯರೆಲ್ಲ ಕೃಷ್ಣನಲ್ಲಿ ವಿನಂತಿಸಿ ಕೊಳ್ಳುತ್ತಾರೆ. ಅವರೆಲ್ಲರ ಮನದಲ್ಲಿ ಕೃಷ್ಣನು ತಮ್ಮನ್ನು  ಛೇಡಿಸಲಿ ಎಂದೇ ಬಯಕೆಯಿದೆ. ಆದರೂ ಜನರು ಏನೆಂದು ಕೊಳ್ಳುತ್ತಾರೆ ಎಂಬ ಆತಂಕವೂ ಇದೆ.  ಕೃಷ್ಣನ ಒಡನಾಟವೇ ಅಂಥದ್ದು. 

೪. ಸಂಗೀತಗಾರ ಕೃಷ್ಣ 

ಬೃಂದಾವನೀ ಸಾರಂಗದಲ್ಲಿ ನಿಬದ್ಧವಾಗಿರುವ ಈ ರಚನೆಗಳು  ಕೃಷ್ಣನ  ವೇಣುವಾದನದ ನಿಪುಣತೆಯನ್ನು ಎತ್ತಿ ಹಿಡಿಯುತ್ತದೆ. 

ರಾಗ : ಬೃಂದಾವನೀ  ತಾಳ : ತೀನ್ ತಾಲ್ 

ಮಧುರ್ ಧುನ್ ಬಾಜೇ ಬಾಜೇ ರೀ  ಕಿತ 
ಸುನ್ ಸುನ್ ಜಿಯಾ ಅಕುಲಾತ್ ಆಜ್ ಸಖಿ ।

ಯಹ್ ಮುರಲೀ  ಬೈರನ್ ಭಯೀ  ಹಮ್ ರೀ 
ಅಧರನ್ ಬೈಠಿ ಸತಾವತ್  ಸಬ್  ಹೀ 
"ರಾಮ್ ರಂಗ" ಬಸೀ ಬೋದೂ ಬರ ಸಖೀ  ।।

ಕೃಷ್ಣನ ಕೊಳಲಿನ ನಾದವು ಮಧುರವಾಗಿದೆ. ಆತನ ತುಟಿಯ ಮೇಲಿರುವ ಕೊಳಲಿನ ನಾದವು ತನ್ನ ಇಂಪಾದ ಧ್ವನಿಯಿಂದ ಎಲ್ಲರನ್ನು ಸತಾಯಿಸುತ್ತಿದೆ. 

ರಾಗ : ಬೃಂದಾವನೀ  ತಾಳ: ಮಠ್ಯ 

ನಾದ ಮುರಳೀಧರ ಗೋಪೀ ಮನೋಹರ 
ಬನ ಬನ ಸುಂದರ್ ಖೇಲತ್ ರಾಧೇ ।

ಬಛರನ್ ಚರಾವತ್ ಬನ ಬನ ಆವತ್ 
ತಾನನ  ತಾನನ  ತಾನ ಸುನಾವೇ ।।

ಕೃಷ್ಣನು ಅತ್ಯಂತ ಮನೋಹರವಾದ ವೇಣುವಾದಕ. ಆತನ ವೇಣುವಾದನವು ನಾದವೇ ಮೂರ್ತಿವೆತ್ತಂತೆ.  ಅರಣ್ಯಗಳು, ಗೋಕುಲದ ಗೋವುಗಳು, ರಾಧೆ ಮತ್ತು ಗೋಪಿಯರು  ಈ ಅದ್ಭುತ  ಕೊಳಲು ವಾದನದ ಆಸ್ವಾದಕರು. 

೫.  ಹೋಳಿಯ ರಂಗು

ಕೃಷ್ಣನ ಜೀವನದ ರಸಮಯ ಘಟ್ಟಗಳಲ್ಲಿ ಒಂದು  ಹೋಳಿ ಹಬ್ಬದ ಆಚರಣೆ ಮತ್ತು ಸಂಭ್ರಮ ಇಲ್ಲಿದೆ . 

ರಾಗ: ಭೀಮ್ ಪಲಾಸಿ  ತಾಳ : ತೀನ್ ತಾಲ್ 

ಮಲತ  ಹೇ ಗುಲಾಲ್ ಲಾಲ್ ಹೋರೀ ಮೇ
ನಾ ಮಾನೇ ಬರ ಜೋರೀ ಕ ರ್ ಪ ಕ ರ ತ್  ಹೇ ।

ತಕ್ ತಕ್ ಮಾರತ್  ಹೇ ಪಿಚ್ಕಾರೀ 
ಚೂನರ್ ಮೋರೀ ಭೀಗೀ ಸಾರೀ 
ಉಡತ್  ಗುಲಾಲ್ ಲಾಲ್ ಭಯೇ ಬಾದರ್ 
ರಂಗ್ ಕೀ ಫುಹಾರ್ ಪರತ್ ಹೇ ।।

ಹೋಳಿ ಹಬ್ಬದ ಸಂದರ್ಭದಲ್ಲಿ ಕೃಷ್ಣನು ಗೋಪಿಕೆಯರ ಮೇಲೆ ಗುಲಾಬಿ ಬಣ್ಣವನ್ನು ಎರಚುತ್ತಿದ್ದಾನೆ. ಗೋಪಿಯರು ಒಲ್ಲೆನೆಂದರೂ ಕೇಳದೆ ಅವರ ಸೀರೆ ಸೆರಗುಗಳನ್ನು ಪಿಚಕಾರಿಯ ಬಣ್ಣದ ನೀರಿನಿಂದ ತೋಯಿಸುತ್ತಿದ್ದಾನೆ. ವರ್ಣಗಳ ಅಬ್ಬರದಿಂದ ಆಕಾಶವೂ ಕೆಂಪಾದಂತೆ ಕಾಣುತ್ತಿದೆ. 

ಧಮಾರ್ ಸಾಹಿತ್ಯದ ಒಂದು ರಚನೆ.  

ರಾಗ: ಗೋರಖ್      ತಾಳ : ಧಮಾರ್ 

ಅಬೀರ್ ಗುಲಾಲ್ ಛಾಯೋ ಹೇ ರೀ 
ಚಹೂ ದಿಸ್ ಅಂಬರ್ ಮೇ।

ಕುಂಕುಮ್ ಕೀ ಕೀಚ್ ಮಚೀ  ಹೇ 
ಬ್ರಿಜ್ ಕೀ ಡಗರ್ ಡಗರ್ ಮೇ ।।

ಮಥುರೆಯ ಗಲ್ಲಿ ಗಲ್ಲಿಗಳಲ್ಲಿ ಹೋಳಿಯ ಸಡಗರವು ಆಗಸವನ್ನು ವರ್ಣಮಯವಾಗಿಸಿತು. 

ರಾಗ : ಬಸಂತ್          ತಾಳ: ತೀನ್  ತಾಲ್ 

ಫಗವಾ ಬ್ರಜ್ ದೇಖನ ಕೋ ಚಲೋ ರೀ 
ಫಗವೆ ಮೇ ಮಿಲೇಂಗೆ ಕುಂವರ್ ಕಾನ್ಹಾಯೀ 
ಜಹಾ೦ ಬಾಟ್ ಚಲತ್ ಬೋಲೇ ಕಗವಾ ।

ಆಯೀ ಬಹಾರ್ ಸಕಲ ಬನ ಫೂಲೇ 
ರಸೀಲೇ ಲಾಲ್ ಕೋ ಲೇ ಅಗವಾ ।।

ಹೋಳಿಯನ್ನು ಆಸ್ವಾದಿಸಬೇಕೆಂದರೆ ನೀವು ಮಥುರೆಗೇ  ಹೋಗಬೇಕು. ಅಲ್ಲಿ ಹೋದಲ್ಲಿ ನಿಮಗೆ ಕೃಷ್ಣನ ದರ್ಶನವಾದೀತು ಎಂದು ಕಾಗೆಯು ಶುಭಶಕುನವನ್ನು ನುಡಿಯುತ್ತಿದೆ. ವನವೆಲ್ಲ ಚಿಗುರುವ ಈ ವಸಂತ ಕಾಲದಲ್ಲಿ ಕೃಷ್ಣನನ್ನು ಎತ್ತಿಕೊಂಡು ಹೋಗಿ ಹೋಳಿ ಆಡೋಣ ಎಂದು ನಾಯಿಕೆಯು ಆಶಿಸುತ್ತಿದ್ದಾಳೆ. 

೬. ದ್ವಾರಕೆಗೆ ಪಯಣ 

ರಾಗ: ತಿಲಂಗ್     ತಾಳ:  ಜತ್   

ಮೋರೀ ಸುಧ ಬಿಸರಾಯೀ  
ನಂದ ದುಲ್ಹಾರೇ  ।

ಆಪ್ ತೋ ಜಾಯೇ ದ್ವಾರಿಕಾ ಮೇ ಛಾಯೇ 
ಹಮ್ ಕಾ ಜೋಗ್ ಪಠಾಯೇ ।।

ಮುಂದೆ ಕೃಷ್ಣನು ಮಥುರೆಯನ್ನು ತ್ಯಜಿಸಿ, ದ್ವಾರಕೆಯಲ್ಲಿ ತನ್ನ ರಾಜ್ಯಭಾರವನ್ನು ನಡೆಸುತ್ತಿದ್ದಾಗ ಕೃಷ್ಣನ ವಿರಹದಿಂದ ವ್ಯಾಕುಲಿತರಾದ ಗೋಪಿಕೆಯರ ಮನಸ್ಥಿತಿಯನ್ನು ಈ ಠುಮ್ರಿಯಲ್ಲಿ ಚಿತ್ರಿಸಲಾಗಿದೆ.  
"ನಮ್ಮ ನೆಮ್ಮದಿಯನ್ನು ನೀನು ನಿನ್ನೊಂದಿಗೆ ದ್ವಾರಕೆಗೆ ಹೊತ್ತೊಯ್ದಿದ್ದೀಯಾ. ಅಲ್ಲಿ ರಾಜ್ಯವಾಳುತ್ತಿರುವ ನೀನು ನಮ್ಮನ್ನೆಲ್ಲ ಜೋಗಿನಿಯರನ್ನಾಗಿ ಮಾಡಿದ್ದೀಯಾ" ಎಂದು ದುಃಖಿಸುತ್ತಾರೆ. 

೭. ಭಕ್ತರ ದೃಷ್ಠಿಯಲ್ಲಿ ಕೃಷ್ಣ 

ಶ್ರೀಕೃಷ್ಣನ ಪರಮ ಭಕ್ತೆಯಾದ ಮೀರಾ ಬಾಯಿಯ ಭಜನೆಗಳು ಸುಪ್ರಸಿದ್ಧ. 

ರಾಗ: ಪೂರ್ವಿ  ತಾಳ: ಆಧಾ 

ಮಾಯೀ ಮೋರೆ ನೈನನ್ ಬಾನ್ ಪರೀ ರೀ 
ಜಾದಿನ್ ನೈನಾ ಶ್ಯಾಮ್ ನಾ ದೇಖೂಂ  
ಬಿಸರತ್ ನಾಹೀ ಘರೀ ರೀ  ।

ಚಿತ್  ಮೇ ಬಸ್ ಗಯೀ ಸಾ೦ವರೀ ಸೂರತ್ 
ಉತರೇ ನಾಹೀ ಧರೀ ರೀ 
"ಮೀರಾ" ಹರೀ ಕೇ ಹಾಥ್  ಬಿಕಾನೀ 
ಸರಬಸ್ ದೇನೀ  ಬರೀ ರೀ ।।

ಕೃಷ್ಣನನ್ನು ನೋಡದೆ ಕಣ್ಣುಗಳಿಗೆ ಬಾಣ ಬಿದ್ದಂತಾಗಿದೆ, ಸಮಯವೂ ಯುಗಗಳಂತೆ ಕಳೆಯುತ್ತಿದೆ. ಆತನ ಸ್ವರೂಪವು ತನ್ನ ಹೃದಯದಲ್ಲಿ ಅಚ್ಚಳಿಯದೆ ನಿಂತಿದೆ ಎಂದು ಪರಮಭಕ್ತೆ ಮೀರಾಬಾಯಿ ತನ್ನ 
ಭಜನೆಯೊಂದರಲ್ಲಿ ಹೇಳುತ್ತಾಳೆ  . 

ಆಕೆ ತನ್ನ ಇನ್ನೊಂದು ಭಜನೆಯಲ್ಲಿ ಕೃಷ್ಣನ ಬರುವಿಕೆಗಾಗಿ ಪ್ರಾರ್ಥಿಸುತ್ತಿದ್ದಾಳೆ.  

ರಾಗ : ಭೈರವಿ    ತಾಳ : ಭಜನ್ ತಾಲ್ 
ಕೋಯೀ ಕಹಿಯೋ ರೇ ಪ್ರಭು ಆವನ್ ಕೀ  
ಆವನ್ ಕೀ ಮನ್ ಭಾವನ್ ಕೀ  ।

ಆಪ್ ನಾ ಆವೇ ಲಿಖ್ ನಹೀ ಭೇಜೇ 
ಬಾನ್ ಪರೇ ಲಲ್ಚಾವನ್ ಕೀ ।।

ಏ ದೋ  ನೈನಾ ಕಹಾ ನಹೀ ಮಾನೆ 
ನದಿಯಾ ಬಹೆ ಜೈಸೇ ಸಾವನ್ ಕೀ ।।

"ಮೀರಾ" ಕಹೇ  ಪ್ರಭು ಕಬ್  ರೇ ಮಿಲೋಗೆ 
ಚೇರಿ  ಭಯೀ  ತೇರೇ  ದಾಮನ್  ಕೀ  ।।

ಮೀರಾಬಾಯಿಯು ಈ ಭಜನೆಯ ಮೂಲಕ ಕೃಷ್ಣನನ್ನು ಪ್ರೇಮದಿಂದ ಪ್ರತ್ಯಕ್ಷವಾಗಲು ವಿನಂತಿಸುತ್ತಿದ್ದಾಳೆ. ಕೃಷ್ಣನು ಬಂದಲ್ಲಿ ತನ್ನ ಮನಸ್ಸಿಗೆ ತುಂಬಾ ಸಂತಸವಾಗುವುದು. ಆದರೆ ಕೃಷ್ಣನು ಬರಲೂ ಇಲ್ಲ. ತಾನು ಬರುತ್ತೇನೆ ಎಂಬ ಸಂದೇಶವನ್ನೂ ಕಳುಹಿಸಿಲ್ಲ. ಈ ಸ್ಥಿತಿಯಲ್ಲಿ ಮೀರಾಬಾಯಿಯು ದುಃಖದಿಂದ ಅಳುತ್ತಿದ್ದಾಳೆ. ಇಷ್ಟು ಹತಾಶೆಗೆ ಒಳಗಾಗಿದ್ದರೂ ಆಕೆಗೆ ಕೃಷ್ಣ ಮುಂದೊಂದು ದಿನ ತನಗೆ ದರ್ಶನವನ್ನು ಕೊಟ್ಟು ತನ್ನ ಬಳಿ ವಿರಮಿಸುವ ಸೌಭಾಗ್ಯವನ್ನು ನೀಡುತ್ತಾನೆ ಎಂಬ ಆಶಾವಾದವನ್ನು ಹೊಂದಿದ್ದಾಳೆ. ಇದು ಆಕೆಯ ಕೃಷ್ಣ ಭಕ್ತಿಗೆ ಸಾಕ್ಷಿ. 

( ಈ ಲೇಖನವನ್ನು ಸಿದ್ಧಪಡಿಸುವಲ್ಲಿ ಪೂರಕ ಮಾಹಿತಿಯನ್ನು ಒದಗಿಸಿದ  ಪಂ. ಕುಲದೀಪ್ ಡೋಂಗ್ರೆಯವರಿಗೆ ಆಭಾರಿ ) 

ಗ್ರಂಥ ಋಣ :
೧.ಅಭಿನವ ಗೀತಾಂಜಲಿ - ಪಂಡಿತ್ ರಾಮಶ್ರೇಯ ಝಾ  "ರಾಮರಂಗ"
೨. ಕ್ರಮಿಕ್ ಪುಸ್ತಕ ಮಾಲಿಕಾ -ಪಂಡಿತ್ ವಿಷ್ಣು ನಾರಾಯಣ ಭಾತಖಂಡೆ 
೩. ಸಂಗೀತಾಂಜಲಿ - ಪಂಡಿತ್ ಓಂಕಾರ್ ನಾಥ್ ಠಾಕೂರ್ 


ವಿಜಯವಾಣಿಯಲ್ಲಿ ಪ್ರಕಟಿತ