Pages

Wednesday, August 15, 2007

ಸ್ವಾತಂತ್ರ್ಯ ದಿನಾಚರಣೆ .....


ಅಗೋಸ್ತು ಹದಿನೈದು ಯಾವ ವಾರ ಬಂದಿದೆ ಅಂತ ಕಣ್ಣಾಡಿಸಿದೆ..ವಾವ್ಹ್!!ಬುಧವಾರ..ಈ ಸಲ ರಜೆ ನಷ್ಟವಾಗಲಿಲ್ಲ ಅಂತ ಮನದಾಳದಲ್ಲಿ ಹರ್ಷದ ಬುಗ್ಗೆಗಳೆದ್ದವು. ಜತೆಗೆ ನಾನು ಬಾಲ್ಯದಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನ ಕಣ್ಣೆದುರು ಬಂತು.

ಸ್ವಾತಂತ್ರ್ಯ ದಿನಾಚರಣೆ ಶಾಲೆಯಲ್ಲಿ ಆಚರಿಸುತ್ತಿದ್ದ ಬಲು ದೊಡ್ಡ ಹಬ್ಬ. ಸುಮರು ಹದಿನೈದು ದಿನಗಳ ಮುಂಚೆಯೇ ಅದಕ್ಕೆ ತಯಾರಿ ಆರಂಭವಾಗುತಿತ್ತು.
ಧ್ವಜ ಗೀತೆ,ರಾಷ್ಟ್ರ ಭಕ್ತಿಗೀತೆಗಳ ತಾಲೀಮಿನ ಜತೆಗೆ,ಭಾಷಣ,ನೃತ್ಯ,ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸುವ ತರಾತುರಿ.ನಾಟಕದ ಪಾತ್ರದ ಮಾತುಗಳಂತೂ ಮನೆಯವರಿಗೆಲ್ಲ ಬಾಯಿಪಾಠವಾಗುತ್ತಿದ್ದವು.ಅಮ್ಮನ ಸೀರೆ,ಅಪ್ಪನ ಮುಂಡು ಇವಕ್ಕೆಲ್ಲ ಎಲ್ಲಿಲ್ಲದ ಬೇಡಿಕೆ.ಕೋಲಾಟ,ಲೇಜಿಮು,ಗೀ ಗೀ ಪದ,ಸುಗ್ಗಿ ಕುಣಿತ ಒಂದೇ ಎರಡೇ ಎಷ್ಟೊಂದು ಬಗೆಯ ಕಾರ್ಯಕ್ರಮಗಳು!!

ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗುತ್ತಿತ್ತು.ಸ್ವಾತಂತ್ರ್ಯೋತ್ಸವದ ದಿನವಂತೂ ನಮ್ಮ ಸಂಭ್ರಮವನ್ನು ಕೇಳುವುದೇ ಬೇಡ. ಬೇಗನೆ ಎದ್ದು,ಸಮವಸ್ತ್ರ ಧರಿಸಿ ತಯಾರಾಗುತ್ತಿದ್ದೆವು, ಮನೆಯ ಹೂದೋಟದಲ್ಲಿ ಎಷ್ಟು ಹೂವುಗಳು ಸಿಗುತ್ತವೋ ಅವುಗಳನ್ನೆಲ್ಲ ಕೊಯ್ದು,ಶಾಲೆಗೆ ಕೊಂಡೊಯ್ಯುತ್ತಿದ್ದೆವು.ದ್ವಜದ ಒಳಗೆ ಬಣ್ಣ ಬಣ್ಣದ ಹೂವುಗಳನ್ನು ತುಂಬಿಸಿ,ಧ್ವಜಾರೋಹಣಕ್ಕೆ ಅಣಿ ಮಾಡುತ್ತಿದ್ದೆವು.ಧ್ವಜಸ್ಥಂಭದ ಸುತ್ತ ಹೂವಿನ ರಂಗೋಲಿಯ ಸೊಬಗು. ಧ್ವಜಾರೋಹಣ ಆದಾಗ , ಎಲ್ಲರೂ ಒಕ್ಕೊರಲಿನಿಂದ ’ಝಂಡಾ ಊಂಚಾ ರಹೇ ಹಮಾರಾ ’ ಎಂದು ಹಾಡುತ್ತಿದ್ದೆವು ಅದರ ಅರ್ಥವೇನೆಂದು ಗೊತ್ತಿಲ್ಲದಿದ್ದರೂ..

ನಮ್ಮೆಲ್ಲರ ಕಣ್ಣಲ್ಲಿ ಸಂಭ್ರಮದ ನಗು.ಮಕ್ಕಳ ನೃತ್ಯ,ನಾಟಕ ಇವನ್ನೆಲ್ಲಾ ನೋಡಲು ಬಂದ ಹೆತ್ತವರ ಮೊಗದಲ್ಲಂತೂ ಹೆಮ್ಮೆಯ ಸೊಬಗು!! ಮೇಷ್ಟ್ರೋ ಅಥವಾ ಹಿರಿಯರೋ ಬರೆದುಕೊಟ್ಟ ಭಾಷಣವನ್ನು ಉರು ಹೊಡೆದು ಹೇಳುವುದಂತೂ ಸಣ್ಣ ಕೆಲಸವೇನಲ್ಲ!!
ಬಹುಮಾನ ಗೆದ್ದರಂತೂ ಜಗವನ್ನೇ ಗೆದ್ದ ಹರ್ಷ!! ಬಹುಮಾನ ಒಂದು ಸಣ್ಣ ಪೆನ್ಸಿಲ್ ಇರಲಿ ಅಥವಾ ಪುಟ್ಟ ಲೋಟವೇ ಇರಲಿ,ಖುಷಿಯೇನೂ ಪುಟ್ಟದಾಗಿರುತ್ತಿರಲಿಲ್ಲ!!

ಸಭಾಕಾರ್ಯಕ್ರಮ ಮುಗಿದ ಮೇಲೆ ಎಲ್ಲರಿಗೂ ಬೆಲ್ಲ,ತೆಂಗಿನಕಾಯಿ ಜತೆ ಕಲಸಿದ ಅವಲಕ್ಕಿ ನೀಡಲಾಗುತ್ತಿತ್ತು.ಎಲ್ಲ ಕಾರ್ಯಕ್ರಮಗಳು ಮುಗಿದು ಮನೆಗೆ ಬಂದ ಮೇಲೂ ಸ್ವಲ್ಪ ದಿನ ಆ ಸಂಭ್ರಮದ ದಿನದ್ದೇ ಗುಂಗು!!

ಶಾಲಾದಿನಗಳಲ್ಲಿದ್ದ ಆ ಸಂಭ್ರಮದ ದಿನವನ್ನು ಈಗ ನಾನು ಕೇವಲ ರಜಾದಿನದ ದೃಷ್ಟಿಯಲ್ಲಿ ಕಾಣುತ್ತಿರುವುದನ್ನು ಯೋಚಿಸಿ ಒಮ್ಮೆ ವಿಷಾದವಾಯಿತು.ಯಾಕೆ ನನ್ನ ಮನಸ್ಠಿತಿ ಈ ರೀತಿಯಾಗಿ ಬದಲಾಗಿದೆ ಎಂದು ಯೋಚಿಸಲಾರಂಭಿಸಿದೆ.