Pages

Monday, June 20, 2011

ಬೆಟ್ಟದ ಜೀವ





ಕಾರಂತರ ’ಬೆಟ್ಟದ ಜೀವ’ ಕಾದಂಬರಿ ನನ್ನ ಅತೀ ಪ್ರಿಯವಾದ ಕಾದಂಬರಿಗಳ ಪೈಕಿ ಒಂದು. ನಾನು ಅದನ್ನು ’ನೋಡಿದ್ದು ’ ಮೂರನೇ ತರಗತಿಯಲ್ಲಿರುವಾಗ ನನ್ನ ಗುರುಗಳ ಬಳಿ. ’ಓದಿದ್ದು ’ ಕಾಲೇಜಿಗೆ ಬಂದ ಮೇಲೆ. ನನ್ನ ಆಪ್ತ ಗೆಳತಿಯೋರ್ವಳು ಅದರ ಬಗ್ಗೆ ವಿಮರ್ಶೆ ಬರೆದು, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದಾಗ ನಾನು ಕಾದಂಬರಿಯನ್ನೂ ಆಕೆ ಬರೆದ ವಿಮರ್ಶೆಯನ್ನೂ ಜತೆ ಜತೆಯಾಗಿಯೇ ಓದಿದೆ.


’ಬೆಟ್ಟದ ಜೀವ ’ ಕಾಡಿನ ಮಧ್ಯೆ ಗೂಡು ಕಟ್ಟಿಕೊಂಡು ಪ್ರಕೃತಿಯ ಜತೆ ಜತೆಗೆ ಸಾಗಿಸುವ ಗೋಪಾಲಯ್ಯನವರು ಮತ್ತು ಅವರ ಪತ್ನಿ ಶಂಕರಿಯ ಕಥೆ.ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಚಿತ್ರಿತವಾಗಿದೆ. ಕಾದಂಬರಿ ನಡೆಯುವ ಸ್ಥಳ ನನ್ನ ಹುಟ್ಟೂರಾದ ಹೊಸಮಠದ ಆಸುಪಾಸು-ಪಂಜ ಮತ್ತು ಸುಬ್ರಹ್ಮಣ್ಯ. ಮತ್ತು ಅದರಲ್ಲಿ ಕಾಣಸಿಗುವ ಪ್ರಕೃತಿಯ ವರ್ಣನೆಗಳನ್ನು ನಾನು ಪ್ರತ್ಯಕ್ಷವಾಗಿ ಕಾಣುತ್ತಾ ಬೆಳೆದವಳಾದ ಕಾರಣ ಈ ಕಾದಂಬರಿ ನನ್ನ ಮನಸ್ಸಿಗೆ ಮತ್ತಷ್ಟು ಆಪ್ತವಾದದ್ದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೆ ಮುಗಿಯಲಿಲ್ಲ. ಸಮಾನ ಮನಸ್ಕ ಸ್ನೇಹಿತರು ಭೇಟಿಯಾದಾಗ ’ಬೆಟ್ಟದ ಜೀವ’ ನುಸುಳುವುದುಂಟು.ಹೇಗೆ ಅಂತೀರಾ ? " ಬೆಟ್ಟದ ಜೀವದಲ್ಲಿ ಬರುವ ಥರ ದೊಡ್ಡ ಗಿಂಡಿಯಲ್ಲಿ ಕಾಫಿ ಕುಡಿಯಬೇಕು ಎಂತಲೋ ಅಥವಾ ’ಬೆಟ್ಟದ ಜೀವದಲ್ಲಿ ಬರುವ ಥರ ಎಣ್ಣೆ ಸ್ನಾನ ಮಾಡಬೇಕು’ಎಂತಲೋ ಮಾತು ’ಪರಮ ಸುಖದ ’ ಕಲ್ಪನೆಗಳಲ್ಲಿ ಒಂದಾಗಿ ಹೋಗುತ್ತದೆ!!

ಬೆಟ್ಟದ ಜೀವ ಇಷ್ಟೆಲ್ಲಾ ಆಗಿರುವಾಗ ಈ ಸಿನೆಮಾ ಬಂದಾಗ ನನಗೆ ಇದನ್ನು ನೋಡಲೇಬೇಕೆಂದು ಅನಿಸಿದುದರಲ್ಲಿ ಅಚ್ಚರಿಯೇನೂ ಇಲ್ಲ. ಕಾದಂಬರಿ ಮತ್ತು ಚಲನಚಿತ್ರ ಎರಡೂ ವಿಭಿನ್ನ ಮಾಧ್ಯಮಗಳು. ಕಾದಂಬರಿಯು ಕೆಲವೊಂದು ಸಂಗತಿಗಳನ್ನು ಅತ್ಯುತ್ಕೃಷ್ಟವಾಗಿ ಅಭಿವ್ಯಕ್ತಿಗೊಳಿಸಿದರೆ ಮತ್ತೆ ಕೆಲವು ವಿಚಾರಗಳನ್ನು ಚಲನಚಿತ್ರ ಸೊಗಸಾಗಿ ಧ್ವನಿಸೀತು. ’ಬೆಟ್ಟದ ಜೀವ’ ದ ನಿರೂಪಣೆ ಮತ್ತು ಕಥಾನಾಯಕನ ಆಲೋಚನೆಗಳನ್ನು ಚಲನಚಿತ್ರದಲ್ಲಿ ಯಾವ ರೀತಿ ತೋರಿಸಿಯಾರೆಂದು ನನಗೆ ಕುತೂಹಲವಿತ್ತು.

ಸಿನೆಮಾದಲ್ಲಿ ಕೆಲವು ಕಡೆ ಮೂಲ ಕಥೆಗಿಂತ ಕೊಂಚ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಚಳುವಳಿಯು ಕಥೆಯ ಜತೆ ಜತೆಗೆ ಸಾಗುತ್ತದೆ. ಚಳುವಳಿಯಲ್ಲಿ ಭಾಗವಹಿಸಿದ ಶಿವರಾಮು ಓಡುತ್ತಾ ಓಡುತ್ತಾ ದೇರಣ್ಣ ಮತ್ತು ಬಟ್ಯನನ್ನು ಭೇಟಿಯಾಗುವುದು ಮತ್ತು ಅವರ ಮೂಲಕ ಭಟ್ಟರ ಮನೆ ತಲುಪುವುದರಿಂದ ಕಥೆ ಶುರುವಾಗುತ್ತದೆ. ಮಗನ ಅಗಲಿಕೆಯಿಂದ ಕಂಗಾಲಾಗಿರುವ ದಂಪತಿಗಳು ಶಿವರಾಮುವಿನಲ್ಲಿ ಮಗನನ್ನು ಕಾಣುತ್ತಾರೆ. ಊಟ,ತಿಂಡಿ ನೀಡಿ ಉಪಚರಿಸುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಅವರ ಮಗನು ಮದುವೆಯಾಗಿ ಅವರಿಂದ ದೂರವಾಗಿರುತ್ತಾನೆ. ಆದರೆ ಇಲ್ಲಿ ಎರಡು-ಮೂರು ಬೇರೆ ಕಾರಣಗಳು ಹೆಣೆದುಕೊಳ್ಳುತ್ತವೆ. ಭಟ್ಟರು ತಮ್ಮ ಸ್ವಂತ ಮಗಳು-ಅಳಿಯನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದ ಲಕ್ಷ್ಮಿ, ನಾರಾಯಣರ ಮನೆಗೆ ಹೋದಾಗ ಲಕ್ಷ್ಮಿಯು "ಶಂಭು ( ಭಟ್ಟರ ಮಗ) ,ತನ್ನ ಜತೆ ಸಲುಗೆ ಮೀರಿ ವರ್ತಿಸಿದ ವಿಚಾರವನ್ನು ಅರುಹುತ್ತಾಳೆ. ಆದರೆ ತಾನು ಅದಕ್ಕೆ ಯಾವ ಪ್ರೋತ್ಸಾಹವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟುಹೋದ ’ ಎಂದು ಹೇಳುತ್ತಾಳೆ.

ಭಟ್ಟರ ಪತ್ನಿ- "ತಾನು ಮಗನಿಗೆ ಚಿನ್ನವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟು ಹೋದನೆಂದು ಹಲುಬಿ,ಚಿನ್ನವನ್ನು ಶಿವರಾಮುವಿನ ಕೈಗೊಪ್ಪಿಸುವ ದೃಶ್ಯವಂತೂ ಮನಕಲಕುತ್ತದೆ. ಹೊನ್ನಿನ ಮೋಹಕ್ಕಿಂತಲೂ ಸಂತಾನದ ಮೋಹವೇ ಮಿಗಿಲೆಂದು ಆಕೆ ಹೇಳುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಭಟ್ಟರು ಚಳುವಳಿಗೆಂದು ಮನೆ ಬಿಟ್ಟು ಹೋದ ಮಗನ ಸಂಗತಿಯನ್ನು ತಿಳಿಸುತ್ತಾರೆ. "ಪ್ರಕೃತಿಯನ್ನು ಮಣಿಸಿರುವ ತನಗೆ ಮಗನನ್ನು ಮಣಿಸಲು ಅಸಾಧ್ಯವಾಯಿತು ಎಂಬುವುದು ಬಲು ದೊಡ್ಡ ಕೊರಗಾಗುತ್ತದೆ. ಮಗನ ಛಾಯಾಚಿತ್ರವನ್ನು ನೋಡುವಾಗ ಅವರಾಡುವ ಮಾತು " ವಾಸ್ತವದಲ್ಲಿ ಕಾಣಲಾಗದ್ದನ್ನು ನೆರಳಿನಾಟದಲ್ಲಿ ಕಾಣುವುದು ಹೇಗೆ" ಎನ್ನುವುದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.


ಮೂಲ ಕಥೆಯಲ್ಲಿ ಶಿವರಾಮು ಅವರಿಗೆ ಜ್ವರ ಬರುವ ವಿಚಾರವಿದ್ದರೆ ಇಲ್ಲಿ ಅವರಿಗೆ ಕಾಲು ಉಳುಕುವುದು, ’ಮಾಂಕು’ ಬಂದು ಔಷಧಿ ನೀಡುವುದು, ನಾರಾಯಣ,ಲಕ್ಷ್ಮಿಯರು ಅವರನ್ನು ನೋಡಿಕೊಳ್ಳುವುದು ಇತ್ಯಾದಿ ಮಾರ್ಪಾಡು ಮಾಡಿದ್ದಾರೆ. ಹುಲಿಯನ್ನು ಕೊಲ್ಲಬೇಡಿರೆಂದು ಹೇಳುವುದು ’ಅಹಿಂಸಾತ್ಮಕ ಚಳುವಳಿಯ ’ ಒಂದು ರೂಪ ಎನ್ನಬಹುದು. ಅಂತೆಯೇ ’ಯಾವ ಜೀವಿಗೂ-ಮನುಷ್ಯನಿಗೂ,ಪ್ರಾಣಿಗೂ ತನ್ನ ಇಚ್ಛೆಯ ಪ್ರಕಾರ ಜೀವಿಸಲು ಬಿಡುವುದು, ಸ್ವಾತಂತ್ರ್ಯ ನೀಡುವುದು ಎಂಬ ಅರ್ಥವನ್ನೂ ಬಿಂಬಿಸುತ್ತದೆ. ಮಗನ ಅಗಲುವಿಕೆಯ ನೋವನ್ನು ಕಂಡ ಶಿವರಾಮು ತನ್ನ ಹೆತ್ತವರಲ್ಲಿ ಇಂಥ ನೋವನ್ನು ಉಂಟುಮಾಡಲಾರೆ ಎನ್ನುತ್ತಾ ತನ್ನ ಹೆತ್ತವರನ್ನು ನೋಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಭಟ್ಟ್ರು ಮಗನನ್ನು ಹುಡುಕಲು ಪುಣೆಗೆ ಹೊರಡುವಲ್ಲಿ ಕಥೆ ಕೊನೆಗೊಳ್ಳುತ್ತದೆ. ಚಲನಚಿತ್ರದಲ್ಲಿ ಆಧುನಿಕ ಕಾಲದಲ್ಲಿ ಮಧ್ಯ ವಯಸ್ಕ ಶಿವರಾಮು ಅವರು ಮಗನ ಜತೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು,ಅಲ್ಲಿಯ ಪ್ರಕೃತಿಯನ್ನು ಆರಾಧಿಸುವುದು, ಮತ್ತು ವೃದ್ಧ ದಂಪತಿಗಳ ಮಾತನ್ನು ಮೆಲುಕು ಹಾಕುವಲ್ಲಿ ಚಲನಚಿತ್ರಕ್ಕೆ ತೆರೆ ಬೀಳುತ್ತದೆ.


ಇಡೀ ಚಿತ್ರದ ಚಿತ್ರೀಕರಣ ಬಹಳ ಸೊಗಸಾಗಿದೆ. ಕಾಡು,ಬೆಟ್ಟ,ಗುಡ್ಡ,ನದಿ ಇವುಗಳ ಅನನ್ಯ ಸೌಂದರ್ಯವನ್ನು ಅತ್ಯಂತ ಸೊಗಸಾಗಿ ಚಿತ್ರೀಕರಣ ಮಾಡಿದ್ದಾರೆ. ಭೂತದ ಕೋಲ, ತೋಟ ಇವೆಲ್ಲ ತುಳುನಾಡಿನಲ್ಲಿ ಹುಟ್ಟಿ ಬೆಳೆದವರನ್ನೆಲ್ಲಾ ’ನಾಸ್ತಾಲ್ಜಿಯಾಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.ಭಟ್ಟರು, ಅವರ ಪತ್ನಿಯ ಅಭಿನಯವಂತೂ ಮನೋಜ್ನವಾಗಿದೆ. ದೇರಣ್ಣ,ಬಟ್ಯ ಅವರು ಹಾಡುವ ಹಾಡುಗಳು, ಅವರ ಮುಗ್ಧತೆಯಂತೂ ಕಣ್ಣಿಗೆ ಕಟ್ಟುತ್ತದೆ. ಸಂಭಾಷಣೆಯಲ್ಲಿ ತುಳು,ದಕ್ಷಿಣ ಕನ್ನಡ ಮತ್ತು ಹವ್ಯಕ ಶೈಲಿಯ ಕನ್ನಡ ಕಂಡುಬರುತ್ತದೆ. ದಕ್ಷಿಣ ಕನ್ನಡ ಶೈಲಿಯ ಕನ್ನಡವನ್ನು ಇನ್ನಷ್ಟು ಆಡುಮಾತಿನ ಶೈಲಿಯಲ್ಲಿ ಮಾತನಾಡುತ್ತಿದ್ದರೆ ಇನ್ನೂ ಸೊಗಸಾಗಿರುತ್ತಿತ್ತೇನೊ!


ಇಷ್ಟೆಲ್ಲಾ ಆದ ಮೇಲೆ ಇನ್ನೊಂದು ವಿಚಾರ ಹೇಳಬೇಕು. ಹಳ್ಳಿಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಪೇಟೆ ಸೇರುತ್ತಿದ್ದಾರೆ. ಹಳ್ಳಿಗಳಲ್ಲಿ ಕಾಣುವುದು ವೃದ್ಧ ತಂದೆ ತಾಯಿಯರು ಮಾತ್ರ. ನಮ್ಮೊರಿಗೆ ಬಂದರೆ ನಿಮಗೆ ಪ್ರತಿ ಮನೆಯಲ್ಲೂ ’ಬೆಟ್ಟದ ಜೀವ’ಗಳು ಕಾಣಸಿಕ್ಕೇ ಸಿಗುತ್ತಾರೆ!!




ಚಿತ್ರ ಕೃಪೆ : http://cdn2.supergoodmovies.com/FilesTwo/b3a1e2cf74074353baf7c06002387664.jpg

14 comments:

Dkrbhat said...

ಈಗ ಬೆಟ್ಟದ ಜೀವ ಬತ್ತಿದ ಜೀವ ಆಗಿದೆ.

ಆಗಿನ ಕಾಲದಲ್ಲಿ, ತುಂಬು ಸಂಸಾರ. ಸಂಸಾರ ಸಾಗಿಸುವದು ಸುಲಭವಾಗಿರಲ್ಳಿಲ್ಳ. ಸಂಸಾರದ ೧ -೨ ಮಕ್ಕಳು ಊದ್ಯೊಗ ಹುಡುಕಿ ನಗರಕ್ಕೆ ಹೊದರು. ಈಗ ಊರಲ್ಲಿ ಉಳಿದವರು ವ್ರುದ್ದಾರಾದರು. ಊರು ವೃದ್ಡಾಶ್ರಮವಾಗಿದೆ.

Dkrbhat said...

ಈಗ ಬೆಟ್ಟದ ಜೀವ ಬತ್ತಿದ ಜೀವ ಆಗಿದೆ.

ಆಗಿನ ಕಾಲದಲ್ಲಿ, ತುಂಬು ಸಂಸಾರ. ಸಂಸಾರ ಸಾಗಿಸುವದು ಸುಲಭವಾಗಿರಲ್ಳಿಲ್ಳ. ಸಂಸಾರದ ೧ -೨ ಮಕ್ಕಳು ಊದ್ಯೊಗ ಹುಡುಕಿ ನಗರಕ್ಕೆ ಹೊದರು. ಈಗ ಊರಲ್ಲಿ ಉಳಿದವರು ವ್ರುದ್ದಾರಾದರು. ಊರು ವೃದ್ಡಾಶ್ರಮವಾಗಿದೆ.

Raghavendra Udupa said...

let me see the movie.. I was hearing from my relative last time.. there's a place called Kamalashile near Kundapura.. guys with lot of land are not getting any girls to marry.. all the girls need some 'city' guys.. so this nagareekarana is kind of affectionate disease; male or female or any caste does not matter. Villages have become hope-less with the kind of system we are moving now..

sunaath said...

ಅರ್ಚನಾ,
ಸಿನಿಮಾವನ್ನು ಇನ್ನೂ ನೋಡಿಲ್ಲ. ಸಿನೆಮಾ ಹಾಗು ಕಾದಂಬರಿಗಳ ನಡುವಿನ ಸಾಮ್ಯ, ವ್ಯತ್ಯಾಸಗಳನ್ನು ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಗಳು

ಸಿಂಧು sindhu said...

ಅರ್ಚನಾ,

ನಿಮ್ಮ ಅಭಿಪ್ರಾಯ ಓದಿದೆ.
ನಾನೂ ನೋಡ್ದೆ ಸಿನಿಮಾ. ಅಷ್ಟೊಂಡು ಇಷ್ಟ ಆಗಲಿಲ್ಲ. ಶೇಷಾದ್ರಿ ಅಂದ್ರೆ, ಒಂದು ನಿರೀಕ್ಷೆ ಇತ್ತು. ಅತಿಥಿ, ಹಸೀನಾ, ಮುನ್ನುಡಿ ಎಲ್ಲ ಸ್ವಲ್ಪ ಬೇರೆದೇ ನಿರೀಕ್ಷೇ ಹುಟ್ಟಿಸಿತ್ತು. ಮತ್ತೆ ಬೆಟ್ಟದ ಜೀವ ಕಾದಂಬರಿ ಓದಿ, ಓದಿ ಹುಟ್ಟಿದ ಸ್ಪೆಷಲ್ ನಿರೀಕ್ಷೆ ಬೇರೆ. :) ಸಿನಿಮಾ ಕಾದಂಬರಿ ಎರಡೂ ಬೇರೆದೇ ಅನುಭವ ನೀಡೋದೆ ಆದ್ರೂ.. ಗೋಪಾಲಯ್ಯನವರನ್ನ ಜೀವಂತ ನೋಡೋ ಒಂದಾಸೆ ಇದ್ದಿದ್ದು ನಿಜ.
ಭಾಷೆ ಮಾತ್ರ ನಿಮ್ಮ ಮಂಗಳೂರು ರೀತಿಲಿ ಹೇಳದಾದ್ರೆ ಭಾಷೆಗೇಡು. :) ಸುಮ್ಮನೆ ಯಾವ್ದಾದ್ರು ಒಂದು ರೀತಿ ಕನ್ನಡವನ್ನ ಆಡುಭಾಷೆಯಲ್ಲಿ ಹೇಳಿದ್ರೂ ಈ ವ್ಯತ್ಯಾಸ ಆಗ್ತಿರ್ ಲಿಲ್ಲ ಅನ್ನುಸ್ತು ನಂಗೆ. ಎಲ್ಲರೂ ಒಂದು ಸಂಭಾಷಣೆ ಒಂದು ರೀತೀಲಿ ಮತ್ತೆ ಮುಂದಿಂದು ರಂಗಸ್ಥಳದ ಮೇಲಿನ ಪುಸ್ತಕಭಾಷೆ ಮಾತಾಡಿ - ಒಂದ್ರೀತಿ ಸಿನಿಮಾ ನೋಡಕ್ಕೆ ಅಡ್ಡಿ ಅದು.
ದೃಶ್ಯಾವಳಿಗಳನ್ನ ತುಂಬ ಚೆನಾಗಿ ತೆಗದಿದ್ದಾರೆ. ಒಂದೊಂದೆ ಫ್ರೇಮುಗಳನ್ನ ಬಿಡಿಬಿಡಿಯಾಗಿ ನೋಡಿದ್ರೆ ಖುಶಿಯಾಗುತ್ತೆ.

ಬೆಟ್ಟದ ಜೀವದ ಬಗ್ಗೆ ಬರೆದ್ರಲ್ಲ. ಥ್ಯಾಂಕ್ಸ್. ಓದಿ ಖುಶಿಯಾಯ್ತು.

ಒಮ್ಮೆ ನೋಡಿ ಪ್ರೋತ್ಸಾಹಿಸಬೇಕಾದ ಪ್ರಯತ್ನ ಒಟ್ಟಿನಲ್ಲಿ.

ಪ್ರೀತಿಯಿಂದ,ಸಿಂಧು

Vanita Hegde said...

Bettada Jeeva, is one of my favorit too. Nice to know that's a movie now.

I might be the last one to watch, but will make it a point to watch for sure.

Missing Karantajja. :(

And thank you for writing this article.

shivu.k said...

ಮೇಡಮ್,
ಮೊದಲೇ ಈ ಸಿನಿಮಾ ನೋಡಬೇಕೆಂದುಕೊಂಡಿದ್ದೆ. ಬಿಡುವಾಗಲಿಲ್ಲ. ನಿಮ್ಮ ಅಭಿಪ್ರಾಯವನ್ನು ನೋಡಿದ ಮೇಲೆ ಖಂಡಿತ ನೋಡುತ್ತೇನೆ.

Raveesh Kumar said...

archana avre,

nanagu chitra bahala ishtavaayitu. dakshina kannada davanaaddarinda tusu hechche irabeku! oorina haleya nenapugalu marukalisidavu. chitrada bagge nanna vimarsheyannu nodi - Link

manjunath Shanubhoganahalli said...

namaskaara archana aVare namma orrallu "bettda jeevaGalu" iddare .. E kaadambariYannu nanu eradu baari odiddene unnatha mattada kadambari.
Thanks
Manju

nenapina sanchy inda said...

Watched and loved this movie
:-)
malathi S

saviraj said...

nanu odiddene thu,ba adbhutha ansutte haage aa gopaliah navara dhruda manassu mathe sankari ammanavara atheeva vada preethi vathsaly ahaa. adbhutha intha ondu utthamavada ondu kadambariyannu rachisi odugarige kotta namma olavina karantharige nanna namana,,,,saviraj

saviraj said...

namasthe archana jee.
nanu aa kadambariyannu thunba sala odiddene bahala abhuthavagide. aa datta kadina thappalina madhye gopalaiah shankari emba eredu muppina jeevagala manasina midithagalannu ele eleyagi bannisi estu andavagi rachisiddare namma karantharu.
thank u so much & hats up to him..
saviraj

kanasina putagalu....! said...

nija kelavondu kadambarigalu vastava jivandinda yelgo karedkond hogi bittirtave....tumba channagide kadambari bettada jeva..

kanasina putagalu....! said...

tumba channagide bettada jeeva kelavondu kadambarigalu namma jivanakke tumba hattira eirtave adestu visma ansutte friend avaga....thank once again