Pages

Saturday, September 12, 2009

ಚಹಾ ಬಗೆ ಬಗೆ..

'ಹೊಟ್ಟೆಗೆ ಹಿಟ್ಟು' ಅಂಕಣ...
'ಸಖಿ ' ಪಾಕ್ಷಿಕ (ಸಪ್ಟಂಬರ್ ೧-೧೫ ) 'ಹೊಟ್ಟೆಗೆ ಹಿಟ್ಟು' ಅಂಕಣದಲ್ಲಿ ಪ್ರಕಟಿತ

ಚಹಾ ಬಗೆ ಬಗೆ..

ಕಲ್ಪಿಸಿಕೊಳ್ಳಿ ..ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಿಮ್ಮ ಕೈಯಲ್ಲೊಂದು ಲೋಟ ಹಬೆಯಾಡುವ ಚಹಾ..ಆಹಾ..ಮಳೆಯ ಚಳಿಗೆ ಬೆಚ್ಚನೆಯ ಚಹಾ !! ಎಷ್ಟೊಂದು ಹಿತ!

ಚೈನಾದ ದಂತ ಕಥೆಯ ಪ್ರಕಾರ ಅಲ್ಲಿಯ ಚಕ್ರವರ್ತಿಯಾಗಿದ್ದ ಶೆನಂಗ್ ಬಿಸಿ ನೀರು ಕುಡಿಯುತ್ತಿದ್ದಾಗ ಗಾಳಿಗೆ ಹಾರಿ ಬಂದ ಸಸ್ಯವೊಂದರ ಎಲೆಗಳು ಬಿಸಿ ನೀರಿಗೆ ಬಿದ್ದು ,ನೀರಿನ ಬಣ್ಣ ಬದಲಾಗುವುದನ್ನು ಕಂಡನಂತೆ. ಆತನೇ ಟೀ ಯನ್ನು ಕಂಡು ಹುಡುಕಿದ ಎನ್ನುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಝೆನ್ ಗುರು ಬೋಧಿಧರ್ಮ ಎಂಬಾತನ ಕಣ್ಣ ರೆಪ್ಪೆಗಳೇ ಚಹಾ ಗಿಡಗಳು ಆದವು ಎಂಬ ಪ್ರತೀತಿ. ಬ್ರಿಟಿಷರು ಜಾರಿಗೆ ತಂದ ಟೀ ಶಾಸನದ ವಿರುದ್ದ ಸಿಡಿದೆದ್ದ ಬೋಸ್ಟನ್ ನಿವಾಸಿಗಳ ಪ್ರತಿಭಟನೆಯ ಪರಿ 'ಬೋಸ್ಟನ್ ನ ಟೀ ಪಾರ್ಟಿ' ಎಂದು ಚರಿತ್ರೆಯಲ್ಲಿ
ದಾ ಖಲಾಗಿದೆ.
ಅತ್ಯುತ್ತಮ ಜೋಡಿಗೆ ಉತ್ತರ ಕರ್ನಾಟಕದ ಮಂದಿ 'ಚಹಾ ದ ಜೋಡಿ ಚೂಡಾದ ಹಂ~ಗ ' ಅನ್ನುವ ಉಪಮೆಯನ್ನು ನೀಡಿಯಾರು!!

ಕಥೆ ಏನೇ ಇರಲಿ, ಹಿತ ಮಿತವಾದ ಚಹಾ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ಸಂಶೋಧನೆಗಳಿಂದ ಸಾಬೀತಾಗಿದೆ. ಇದು ನಮ್ಮ ನಿಮ್ಮೆಲ್ಲರ ದಿನ ನಿತ್ಯದ ಪೇಯವಾಗಿ ಮಹತ್ತರ ಸ್ಥಾನ ಪಡೆದಿದೆ.

ನವೀನತೆಯ ಅನ್ವೇಷಣೆಯಲ್ಲಿ ಮನುಷ್ಯ ಈ ವರೆಗೆ ಅನೇಕ ಪ್ರಕಾರಗಳಲ್ಲಿ ತನ್ನ ಚಾತುರ್ಯವನ್ನು ಪ್ರಚುರಪಡಿಸಿದ್ದಾನೆ. ಇದಕ್ಕೆ ಚಹಾವೂ ಹೊರತಲ್ಲ.
ನಿತ್ಯವೂ ಮಾಡುವ ಚಹಾ ಕ್ಕೆ ಕೊಂಚ ಹೊಸತನವನ್ನು ಸೇರಿಸಿ, ಮತ್ತಷ್ಟು ಉಲ್ಲಾಸದಾಯಕ ಅನುಭವ ವನ್ನು ಉಂಟು ಮಾಡಬೇಕೆ ? ಕೆಳಗಿನ ಪ್ರಯೋಗಗಳನ್ನು ಮಾಡಿ ನೋಡಿ.


-------------------------------------------------------------
ನಿಂಬೆ ಚಹಾ
-------------------------------------------------------------
ಬೇಕಾಗುವ ಸಾಮಗ್ರಿಗಳು

ನೀರು :ಅರ್ಧ ಲೋಟ
ಟೀ ಪುಡಿ :ಒಂದು ಚಮಚ
ಸಕ್ಕರೆ :ರುಚಿಗೆ ತಕ್ಕಷ್ಟು
ಲಿಂಬೆ ರಸ :ನಾಲ್ಕು ಚಮಚ

೧.ನೀರಿನೊಂದಿಗೆ ಚಹಾ ಪುಡಿ ಹಾಕಿ ಕುದಿಸಿ.
೨.ಬಳಿಕ ಅದನ್ನು ತಣಿಸಿ ಸೋಸಿ ಇಟ್ಟುಕೊಳ್ಳಿ
೩.ಇದಕ್ಕೆ ಲಿಂಬೆ ರಸ ಮತ್ತು ಸಕ್ಕರೆ ಬೆರೆಸಿ ಕಲಕಿ. ಬೇಕಿದ್ದರೆ ಮಂಜುಗಡ್ಡೆಯ ತುಂಡುಗಳನ್ನು ಸೇರಿಸಿ. ಸವಿಯಿರಿ.

ಬಿಸಿ ನಿಂಬೆ ಚಹಾ ಬೇಕೆಂದಿದ್ದರೆ (೨) ರಲ್ಲಿ ಕುದಿಸಿದ ಚಹವನ್ನು ತಣಿಸುವ ಅವಶ್ಯಕತೆ ಇಲ್ಲ.


--------------------------------------------------------------------
ಮಸಾಲೆ ಚಹಾ
----------------------------------------------------------------
ಮಸಾಲೆ ಪುಡಿಗೆ
ಲವಂಗ : 2
ಏಲಕ್ಕಿ :ಸ್ವಲ್ಪ
ದಾಲ್ಚಿನ್ನಿ :ಒಂದು ಸಣ್ಣ ಚೂರು

ಈ ಮೇಲೆ ಸೂಚಿಸಿದ ಸಾಮಗ್ರಿಗಳನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ.

ಹಾಲು :ಒಂದು ಲೋಟ
ಸಕ್ಕರೆ :ಒಂದು ಚಮಚ
ಚಹಾ ಪುಡಿ: ಒಂದು ಚಮಚ

ವಿಧಾನ
೧.ಹಾಲು, ಸಕ್ಕರೆ, ಚಹಾ ಪುಡಿ ಮತ್ತು ಮಸಾಲೆ ಪುಡಿಗಳನ್ನು ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಕುದಿಸಿ.
೨.ಬಳಿಕ ಸೋಸಿ, ಬಿಸಿ ಬಿಸಿಯಾಗಿ ಕುಡಿಯಿರಿ.

--------------------------------
ಶುಂಠಿ ಚಹಾ
--------------------------------
ಮೇಲೆ ಸೂಚಿಸಿರುವ ವಿಧಾನದಲ್ಲಿ , ಮಸಾಲೆ ಪುಡಿಗೆ ಬದಲಾಗಿ ಹಸಿ ಶುಂಠಿಯ ೩-೪ ಸಣ್ಣ ತುಂಡುಗಳನ್ನು ಸೇರಿಸಿ ಹಾಲು,ಸಕ್ಕರೆ,ಚಹಾ ಪುಡಿ ಯ ಜತೆ ಕುಡಿಸಿದರೆ ಶುಂಠಿ ಚಹಾ ಸಿದ್ಧ.ಉತ್ತರ ಭಾರತದಲ್ಲಿ ಬಹುವಾಗಿ ಬಳಕೆಯಲ್ಲಿರುವ ' ಅಧ್ರಕ್ ವಾಲೀ ಚಾಯಿ ' ಅಂದರೆ ಇದೇ.


-----------------------------------
ಏಲಕ್ಕಿ ಚಹಾ
--------------------------------------------
ಮಸಾಲೆ ಪುಡಿಗೆ ಬದಲಾಗಿ ಏಲಕ್ಕಿ ಯ ಪುಡಿಯನ್ನು ಸೇರಿಸಿದರೆ ಸುವಾಸನಾ ಭರಿತ ಇಲಾಇಚಿ ಟೀ ಅರ್ಥಾತ್ ಏಲಕ್ಕಿ ಚಹಾ ತಯಾರು !


-------------------------------
ತುಳಸಿ ಚಹಾ
-------------------------------
ಅರ್ಧ ಹಿಡಿ ತುಳಸಿಯ ಎಲೆಗಳನ್ನು ಚಹಾ ಪುಡಿ, ಹಾಲು, ಸಕ್ಕರೆಯ ಜತೆ ಕುದಿಸಿ, ಸೋಸಿ , ಕುಡಿಯಿರಿ. ಇದು ವಿಶಿಷ್ಟ ಪರಿಮಳದಿಂದ ಕೂಡಿದ ಚಹಾ. ಪರ್ವತ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಬಳಕೆಯಲ್ಲಿದೆ.

----------------------
ಬ್ಲಾಕ್ ಟೀ
---------------------
ಒಂದು ಲೋಟ ನೀರಿಗೆ ಒಂದು ಚಮಚ ಚಹಾ ಪುಡಿಯನ್ನು ಹಾಕಿ .ಕುದಿಸಿ, ಸೋಸಿ ಕುಡಿಯಿರಿ.

--------------------
ಗ್ರೀನ್ ಟೀ
-------------------
ಗ್ರೀನ್ ಟೀಯು ಇತ್ತೀಚೆಗಿನ ದಿನಗಳಲ್ಲಿ ಬಹುವಾಗಿ ಉಪಯೋಗಿಸಲ್ಪಡುವ ಆರೋಗ್ಯಕರ ಪೇಯಗಳಲ್ಲಿ ಒಂದೆಂದು ಖ್ಯಾತವಾಗಿದೆ. ಚಹಾ ಎಲೆಗಳನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಗ್ರೀನ್ ಟೀ ಪುಡಿಯನ್ನು ತಯಾರಿಸಲಾಗುತ್ತದೆ.

ಒಂದು ಲೋಟ ಕುದಿಯುವ ಬಿಸಿ ನೀರಿಗೆ ಒಂದು ಟೀ ಬ್ಯಾಗ್ ಗ್ರೀನ್ ಟೀ ಯನ್ನು ಸುಮಾರು ಐದು ನಿಮಿಷಗಳ ಕಾಲ ಮುಳುಗಿಸಿಡಬೇಕು. ಆ ಬಳಿಕ ಟೀ ಬ್ಯಾಗನ್ನು ಹೊರ ತೆಗೆಯಿರಿ. ಹಸಿರು ಚಹಾ ಪುಡಿಯ ಸ್ವಾದವನ್ನು, ಬಣ್ಣವನ್ನು ಹೀರಿಕೊಂಡ ಬಿಸಿ ನೀರನ್ನು ಹಾಗೇ ಅಥವಾ ಜೇನು ತುಪ್ಪ ಬೆರೆಸಿ ಕುಡಿಯಬಹುದು.

----------------------------------------------------------------------------------------------------------------------------------------------------------------------

5 comments:

sunaath said...

ಅರ್ಚು,
ಚಹಾದ ವಿವಿಧ ನಮೂನೆಗಳನ್ನು ಓದಿ ಸಂತೋಷವಾಯಿತು. ಇನ್ನು ಇವುಗಳ ಪ್ರಾತ್ಯಕ್ಷಿಕೆಯನ್ನು ದಿನಕ್ಕೆ ಒಂದರಂತ ಮಾಡಿ, ಸವಿಯಬೇಕಾಗಿದೆ.
Thanks for the info.

ಸಾಗರದಾಚೆಯ ಇಂಚರ said...

ಏನ್ರಿ, ಮಾತಲ್ಲೇ ಚಹಾ ಕುಡಿಸಿಬಿಡ್ತಿರಾ, ಆ ವಿಧ ವಿಧ ದ ಚಹಾ ಯಾವಾಗ ಮಾಡಿ ಕರಿತಿರಾ,
ತಿಳಿಸಿದ್ದಕ್ಕೆ ಧನ್ಯವಾದಗಳು

shivu.k said...

ವಾಹ್! ಸೂಪರ್. ನಾನು ಚಹ ಪ್ರಿಯ. ಇದರಲ್ಲಿ ಇಷ್ಟೊಂದು ವಿಧಾನಗಳಿವೆಯೆಂದು ತಿಳಿದಿರಲಿಲ್ಲ...ನಾನು ಮನೆಯಲ್ಲಿ ಪ್ರಯತ್ನಿಸುತ್ತೇನೆ...

ಧನ್ಯವಾದಗಳು.

Unknown said...

ಚಹಾ... ಊರಲ್ಲಿ ಹೋದಾಗ ಇವಾಗ್ಲೂ ಕೇಳ್ತಾರೆ... "ಕಿತ ಪ್ಯೇಸಶ್ರೆ?? ಕಾಫಿ ಕಾ ಚಾ??" :-)..
ಮೇಲೆ ತಿಳಿಸಿದ ಎಲ್ಲ ಚಹಾ ಬಹುಶ ಕುಡಿದಿದ್ದೇನೆ.. ತುಳಸಿ ಟೀ ಬಗ್ಗೆ ಗೊತ್ತಿರಲಿಲ್ಲ.. ಪ್ರಯತ್ನಿಸುವೆ...

ಚಕೋರ said...

ಚಹಾ ಇಷ್ಟಪಡುವವರೂ ಅದರಲ್ಲಿನ ರುಚಿಭೇದ, ಸ್ವಾದ ಹೆಚ್ಚಿಸುವ ವಿಧಾನಗಳ ಬಗೆಗೆ ಚಿಂತಿಸಿರಲಾರರು.(ನನ್ನಂತೆ)

ಇದನ್ನು ಸಖಿಯಲ್ಲೇ ಓದಿದ್ದೆ, ಚಹಾದಲ್ಲಿನ ಭಿನ್ನವಾದ ರುಚಿಯನ್ನು ಪ್ರಯತ್ನಿಸಬೇಕಂತಿದ್ದೇನೆ.