Pages

Saturday, June 2, 2007

ಮಳೆಯಲ್ಲಿ ನೆನೆದದ್ದು...

ಕಳೆದ ಸಲ ಊರಿಗೆ ಹೋಗಿದ್ದಾಗ,ನನ್ನನ್ನು ಕಂಡು ತಂಗಿ 'ಡ್ರಮ್ಮು' ಥರ ಆಗಿದ್ದಿ ಅಂತ ಹೇಳಿದ್ದು , ನಾನು ವಾಕಿಂಗ್ ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಪ್ರೇರೆಪಿಸಿತು.ಆಫೀಸಿನಿಂದ ನನ್ನ ಮನೆಗೆ ಇರುವ ಸುಮಾರು ಎರಡುವರೆ ಕಿ.ಮೀ. ದೂರ ನಡೆಯುತ್ತಾ ಬಂದರೆ ,ಆಟೊವಾಲಾರ ನಖರಾಗಳನ್ನು ಕೇಳಿಸಿಕೊಳ್ಳುವುದೂ ಬೇಡಾ,ಆರೋಗ್ಯಕ್ಕೂ ಒಳ್ಳೆಯದು, ಮೇಲಾಗಿ ಡ್ರಮ್ಮಿನಿಂದ ಸ್ಲಿಮ್ಮಿಗೆ ಇಳಿಯಬಹುದೇನೂ ಎಂಬ ದೂರಾಲೋಚನೆ..
ಒಂದು ಕಲ್ಲಿಗೆ ಮೂರು ಹಕ್ಕಿ!!

ಸರಿ, ಇವತ್ತು ನಡೆಯುತ್ತಾ ಬರುತ್ತಿದ್ದೆ.ಅಷ್ಟರಲ್ಲಿ ತುಂತುರು ಮಳೆ ಬೀಳಲಾರಂಭಿಸಿತು..ಬಿಸಿಲಿನ ಬೇಗೆಗೆ ಬಳಲಿ ಬೆಂಡಾದ ಬೆಂಗಳೂರಿಗೆ ಅಮೃತ ಸಿಂಚನ ನೀಡುತಿದೆಯೋ ಎನಿಸತೊಡಗಿತು.ಮಳೆದೇವರು ಒಬ್ಬರೇ ಬರಲಿಲ್ಲ..ಸಿಡಿಲು, ಗುಡುಗುಗಳೆಂಬ ಫೊಟೊಗ್ರಾಫರ್,ವಾದ್ಯಗಾರರ ಜತೆಯೇ ಬಂದಿಳಿದರು.ನನ್ನ ಹತ್ತಿರ ಕೊಡೆ ಇರಲಿಲ್ಲ. ಹಾಗಾಗಿ ಹತ್ತಿರದಲ್ಲೇ ಇದ್ದ ಅಂಗಡಿಯ ಬಳಿ ಹೋಗಿ ,ಮಳೆ ನೋಡುತ್ತಾ ನಿಂತೆ..

ಅಚಾನಕ್ಕಾಗಿ ಸುರಿದ ಮಳೆ ನನ್ನಲ್ಲಿ ಬಾಲ್ಯದ ನೆನಪುಗಳನ್ನು ಹಸಿರಾಗಿಸಿತು..ನಾನು ಹುಟ್ಟಿ ಬೆಳೆದದ್ದು ಮಳೆಗಾಲದ ಸಮಯದಲ್ಲಿ ದಿನದ ಹೆಚ್ಚಿನ ಭಾಗ ಮಳೆ ಸುರಿಯುವ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ.ಮೇ ತಿಂಗಳು ಕೊನೆಯಾಗುತ್ತಿದ್ದಂತೆ ,ಧುತ್ತನೆ ಪ್ರತ್ಯಕ್ಷವಾಗುತ್ತಿದ್ದ ಮಳೆರಾಯನ ವೇಳಾಪಟ್ಟಿ ನನ್ನಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತಿತ್ತು.ಮೊದಲ ಮಳೆ ಬೀಳುವಾಗ ಉಂಟಾಗುವ ಮಣ್ಣಿನ ವಾಸನೆ ...ವ್ಹಾವ್ಹ್!! ಎಷ್ಟೊಂದು ಮಧುರ!ಆಲಿಕಲ್ಲು ಬಿದ್ದರಂತೂ ಅದನ್ನು ಹೆಕ್ಕಿ ತಿನ್ನುವ ತನಕ ಸಮಾಧಾನವಿಲ್ಲ..

ಜೂನ್ ತಿಂಗಳು ಶಾಲಾರಂಭ..ಹೊಸ ಪುಸ್ತಕ, ಹೊಸ ಬ್ಯಾಗಿನ ಪರಿಮಳ.ಬ್ಯಾಗ್, ಬುತ್ತಿ,ಛತ್ರಿ ಹಿಡಿದು ಶಾಲೆಗೆ ಹೊರಡುವುದೆಂದರೆ ಎಂಥಹಾ ಸಂಭ್ರಮ. ಛತ್ರಿ ಮೇಲೆ ಕಸೂತಿಯಲ್ಲಿ ಹೆಸರು ಬರೆಯುವ ತವಕ. ದಾರಿಯಲ್ಲಿ ಸಿಗುವ ಒರತೆಯಲ್ಲಿ ಕಾಲಾಡಿಸುತ್ತ,ಓರಗೆಯವರೊಂದಿಗೆ ಪಟ್ಟಾಂಗ ಹೊಡೆಯುತ್ತಾ ಸಾಗುತ್ತಿದ್ದೆವು.ಪುಸ್ತಕಗಳು ಒದ್ದೆಯಾಗಬಾರದೆಂದು ಅವುಗಳನ್ನು ಪ್ಲಾಸ್ಟಿಕ್ ಕವರ್ ನೊಳಗೆ ಇಳಿಬಿಟ್ಟು, ಮತ್ತೆ ಬ್ಯಾಗಿನೊಳಗಿರಿಸಿಕೊಳ್ಳುತ್ತಿದ್ದೆವು.ದಾರಿಯಲ್ಲಿ ಸಿಗುವ ಪುಟ್ಟ ಕಾಲುವೆಯಲ್ಲಿ ಕೆಲವೊಮ್ಮೆ ಕಾಗದದ ದೋಣಿ ತೇಲಿಸಿ, 'ದೋಣೆ ಸಾಗಲಿ' ಹಾಡಿಗೆ ದನಿಯಾಗುತ್ತಿದ್ದೆವು.

ನಮ್ಮೂರಿನ ಗುಂಡ್ಯ ಹೊಳೆ ಮಳೆಗಾಲದಲ್ಲಿ ಭಾರೀ ಸುದ್ದಿ ಮಾಡುತ್ತಿತ್ತು.ಉಳಿದೆಲ್ಲಾ ಸಮಯದಲ್ಲಿ ಕೃಷಿ ಭೂಮಿಗೆ ನೀರೊದಗಿಸುತ್ತಾ ತೆಪ್ಪಗೆ ಹರಿಯುತ್ತಿದ್ದ ನದಿ, ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಹರಿಯುತ್ತಿತ್ತು. ಅದಕ್ಕೆ ಕಟ್ಟಿರುವ ಸೇತುವೆಯ ಮೇಲೆಲ್ಲಾ ನೀರು ಉಕ್ಕಿ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿತ್ತು.ಸೇತುವೆ ಮೇಲೆ ನೀರು ಉಕ್ಕಿದಾಗಲೂ ವಾಹನ ಚಲಾಯಿಸಹೊರಟ ಮೊಂಡು ಧೈರ್ಯದವರನ್ನು ಬಲಿ ತೆಗೆದುಕೊಳ್ಳುತ್ತಿತ್ತು.ಸೇತುವೆ ಮೇಲೆ ನೀರುಕ್ಕಿದಾಗ 'ಸಂಕ block ಅಂತೆ' ಅಂತ ಜನ ಮಾತಾಡಿಕೊಳ್ಳುತ್ತಿದ್ದರು.ಅದನ್ನು ನೋಡಲು ನಮಗೆ ಭಾರೀ ಕುತೂಹಲ.ಹೇಗಾದರೂ ಮಾಡಿ ಹಿರಿಯರ ಅನುಮತಿ ಪಡೆದು ನೋಡಿ ಬರುತ್ತಿದ್ದೆವು.ಅದರ ಎರಡೂ ಬದಿಯಲ್ಲಿ ಕಾವಲು ಕಾಯುತ್ತಿದ್ದ ಪೋಲೀಸರನ್ನು ಕಂಡಾಗ ಒಂಥರಾ ಭಯ ನಮಗೆಲ್ಲ!!

ಮಳೆಗಾಲದಲ್ಲಿ ಬಸ್ಸು ಹತ್ತುವುದೆಂದರೆ ಒಂದು ಸಾಹಸ.ಎಲ್ಲರ ಅರೆತೆರೆದ ಕೊಡೆಗಳು..ಬಸ್ಸು ಹತ್ತಬೇಕು, ನಾವೂ ಒದ್ದೆಯಾಗಬಾರದು..ಹಾವೂ ಸಾಯಬಾರದು ಕೋಲೂ ಮುರಿಯಬಾರದು.ಆಗಲೇ ತುಂಬಿ ತುಳುಕುತ್ತಿರುವ ಬಸ್ಸಿಗೆ ಕಂಡಕ್ಟರು ರೈಟ್ ಹೇಳುವ ಮುನ್ನ ಹತ್ತಬೇಕು.ಮೂರೇ ಬಸ್ಸುಗಳಿದ್ದ ಆ ಕಾಲದಲ್ಲಿ ,ಸಿಕ್ಕಿದ ಬಸ್ಸಿಗೆ ಹತ್ತಿ, ಗುರಿ ಸೇರುವ ಆತುರ.

ಅಂತೂ ಇಂತೂ ಬಸ್ಸು ಹತ್ತಿದ್ದಾಯ್ತು.ತೊಯ್ದ ಡ್ರೆಸ್ಸು,ಮೈ,ಮಣಭಾರದ ಚೀಲ,ನೀರು ತೊಟ್ಟಿಕ್ಕುವ ಕೊಡೆ,ಅತ್ತಿತ್ತ ಅಲ್ಲಾಡಲೂ ಜಾಗವಿಲ್ಲ ಬಸ್ಸಿನೊಳಗೆ.
ಕಂಡಕ್ಟರನಂತೂ ದೂರದಿಂದಲೇ ಪಾಸನ್ನು ಕೇಳುತ್ತಿದ್ದ.ಎಷ್ಟೋ ಕೈಗಳನ್ನು ದಾಟಿ ಪಾಸ್ ಆತನ ದರ್ಶನ ಪಡೆಯುತ್ತಿತ್ತು.

ಇವೆಲ್ಲದರ ಮಧ್ಯೆ ಯಾವುದಾದರೂ ಸೀಟ್ ಖಾಲಿಯಾಗುತ್ತದೆ ಎಂದಾದರೆ ,ಅದನ್ನು ಗಬಕ್ಕನೆ ಆವರಿಸುವ ಪರಿಯನ್ನು ನೀವು ನೋಡಿದರೆ,ಓಹ್! ಸೀಟಿಗಾಗಿ ಜನ ಎಷ್ಟೊಂದು ಪರದಾಡುತ್ತಾರೆ ಎಂದು ಅನಿಸದಿರದು!!

ಇಷ್ಟೆಲ್ಲಾ ಕಷ್ಟಪಟ್ಟು ಶಾಲೆಗೆ ಹೋದಾಗ ಕೆಲವೊಮ್ಮೆ ವಿಪರೀತ ಮಳೆಯೆಂದು ಶಾಲೆಗೆ ರಜೆ ಘೋಷಣೆ ಆಗುತ್ತಿದ್ದದ್ದೂ ಉಂಟು.ಆಗೆಲ್ಲ್ಲಾ ನನಗೆ ತೀರಾ ನಿರಾಶೆಯಾಗುತ್ತಿತ್ತು
ಮಳೆಗಾಲದಲ್ಲಿ ತೋಟಕ್ಕೆ ಮದ್ದು ಬಿಡುವ ಸಮಯ.ಮೈಲುತುತ್ತು, ಸುಣ್ಣದ ಮಿಶ್ರಣದ ನೀಲಿ ಬಣ್ಣದ ದ್ರಾವಣ ನೋಡಲು ಭಾರೀ ಚಂದ.ಮಳೆಯ ಕಾರಣದಿಂದ ಎರಡು ಮೂರು ದಿನಗಳಲ್ಲಿ ಮುಗಿಯಬೇಕಾದ ಕೆಲಸ ಹದಿನೈದು-ಇಪ್ಪತ್ತು ದಿನಗಳನ್ನು ತೆಗೆದುಕೊಳ್ಳುತ್ತಿದ್ದದ್ದೂ ಉಂಟು.

ಹಪ್ಪಳ ,ಸಾಂತಾಣಿ(ಹಲಸಿನ ಬೀಜ),ಹುಣಿಸೇಬೀಜ,ಸುಟ್ಟ ಕೊಬ್ಬರಿ ಇವು ನಮ್ಮ ಬಾಯಿಚಪಲಕ್ಕೆ ಗುರಿಯಾಗುತ್ತಿದ್ದವು.ಹಲಸಿನ ಹಪ್ಪಳ,ಹೊರಗಡೆ ಮಳೆಯ ಸಪ್ಪಳ,ಕವಿದ ಕಾರ್ಗತ್ತಲು--ಸ್ವರ್ಗಕ್ಕೆ ಮೂರೇ ಗೇಣು!!

ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಅಮ್ಮ ಪಡುತ್ತಿದ್ದ ಪಾಡು ಹೇಳತೀರದು.ಒಲೆಯ ಹತ್ತಿರದ ತಂತಿಯಲ್ಲಿ ಬಟ್ಟೆ ಹಾಕಿ, ಆಗಾಗ್ಗೆ ಅದನ್ನು ತಿರುವಿ,ಶಾಲೆಗೆ ಹೋಗುವಶ್ಟರಲ್ಲಿ ಒಣಗಿದ ಬಟ್ಟೆ ಸಿದ್ಧವಾಗಿರುತ್ತಿತ್ತು.ಸಂಜೆ ಶಾಲೆಯಿಂದ ಬಂದೊಡನೆ ಅಮ್ಮ ಬೆಚ್ಚಗಿನ ಹಾಲು ಕುಡಿಯಲು ಕೊಡುತ್ತಿದ್ದಳು.ಮಳೆಯಿಂದಾಗಿ ಬಸ್ಸು ತಡವಾದರೆ ಅಪ್ಪ,ಅಮ್ಮ ಇಬ್ಬರಲ್ಲೂ ಮೂಡುತ್ತಿದ್ದ ಆತಂಕ ನನ್ನನ್ನು ಕಂಡೊಡನೆ ದೂರವಾಗುತ್ತಿತ್ತು.

ಈಗಲೂ ಅಷ್ಟೆ..ಮಳೆ ಎಂದರೆ ನನಗೆ ನೆನಪಾಗುವುದು ,ಸುತ್ತಲೂ ಕತ್ತಲು ಆವರಿಸಿ,ಧೊ ಧೋ ಎಂದು ಸುರಿಯುವ ನಮ್ಮೂರಿನ ಮಳೆ.ಮಳೆಯ ಸದ್ದಿಗೆ,ಅದರ ಪರಿಮಳಕ್ಕೆ, ಅದು ಇಳೆಯ ಮೇಲೆ ಮೊಡಿಸುವ ನವ ಚೈತನ್ಯಕ್ಕೆ,ಅದರ ಸೌಂದರ್ಯಕ್ಕೆ ,ಅದರ ಗಾಂಭೀರ್ಯಕ್ಕೆ ನಾನು ತಲೆ ಬಾಗುತ್ತೇನೆ.
ಮಳೆ ಮನೆಯಂಗಳದಲ್ಲಿ ಸೃಷ್ಟಿಸುತ್ತಿದ್ದ ಪುಟ್ಟ ಒರತೆ, ಅದರಲ್ಲಿ ಹುಟ್ಟಿಕೊಳ್ಳುವ ಪುಟ್ಟ ಜಲತರಗಳು,ಮಳೆಗಾಲದ ನೀರವ ರಾತ್ರಿಯಲ್ಲಿ ( ಕರೆಂಟೂ ಇಲ್ಲ ) ಆಗೊಮ್ಮೆ ಈಗೊಮ್ಮೆ ಕೇಳುವ ಕಪ್ಪೆಗಳ ವಟಗುಟ್ಟುವಿಕೆ,ಮಳೆ ಬಿದ್ದೊಡನೆ ಪಲ್ಲವಿಸುವ ಕೆಲವು ಹೂವುಗಳು,ಕಾಡಿನ ದಾರಿಯಲ್ಲಿ ಝರಿಯ ಝುಳು ಝುಳು ನಿನಾದ..ಎಷ್ಟು ಚಂದ !!

ವಿಪರೀತ ಮಳೆಯಿಂದ ಬೆಳೆಗೆ ಹಾನಿಯಾದಾಗಲೂ, ಟಿ.ವಿ., ಪೋನ್ ಹಾಳಾದಾಗಲೂ , ಜನರನ್ನು ಬಲಿ ತೆಗೆದುಕೊಂಡಾಗಲೂ ನಾನು ಅದರ ರೌದ್ರ ಶಕ್ತಿಗೆ ಬೆಚ್ಚಿದ್ದೂ ಇದೆ.

ನನ್ನ ಮನಸ್ಸಿಡೀ ನಾನು ಬಾಲ್ಯದಲ್ಲಿ ಕಂಡ ಮಳೆಯನ್ನು ಮೆಲುಕು ಹಾಕುತ್ತಿತ್ತು.ಜೋರಾಗಿ ಒಮ್ಮೆ ಗುಡುಗಿನ ಸದ್ದು ಕೇಳಿಸಿತು.ಒಹ್!! ನಾನು ಬೆಂಗಳೂರಿನಲ್ಲಿದ್ದೇನೆ..ಮಳೆನೀರು ರಸ್ತೆಯಲ್ಲಿ ಶೇಖರವಾಗಿ, ಕೊಚ್ಚೆಯ ನೀರೂ ಸೇರಿಕೊಂಡು ಹರಿಯುತ್ತಿದೆ.ವಾಹನಗಳು ಸಾಲು ಸಾಲಾಗಿ ಮುಂದೆ ಸಾಗಲು ಹವಣಿಸುತ್ತಿವೆ.

ಮಳೆ ಸ್ವಲ್ಪ ನಿಧಾನವಾಗತೊಡಗಿತ್ತು.ಮತ್ತೆ ನಡೆಯತೊಡಗಿದೆ.ಯಾರದ್ದೊ ವಾಹನ ಕೊಚ್ಚೆ ನೀರನ್ನು ನನ್ನ ಮೇಲೆ ಸಿಡಿಸಿತು..ಮನೆಗೆ ಹೋಗಿ, ಸ್ನಾನ ಮಾಡಿ, ಅಡಿಗೆಯಾಗಬೇಕು..ತರಕಾರಿ ಏನೂ ತಂದಿಲ್ಲ..ಇವತ್ತಿಗೆ ಸಾರು ಸಾಕು..ಜತೆಗೆ ಅಮ್ಮ ಕೊಟ್ಟ ಹಪ್ಪಳ ಇದೆ..ಅಂತ ಯೋಚಿಸುತ್ತಾ ಮನೆಗೆ ಬಂದೆ..

ಈ ಲೇಖನ ದಾಟ್ಸ್ ಕನ್ನಡಲ್ಲ್ಲಿ ಪ್ರಕಟವಾಗಿದೆ..

26 comments:

Anonymous said...

ಜಿನುಗುತೊಮ್ಮೆ ಇಳಿಯುತೊಮ್ಮೆ ಸುರಿಯುತೊಮ್ಮೆ ಬಾರೋ ನೀ... ಈ ಜಗವ ತೊಯ್ಯೊ ನೀ... ಎಂದು ಮಳೆಯ ಬಗ್ಗೆ ಒಂದು ಪದ್ಯವಿತ್ತು ನಮಗಿಂತ ಹಿಂದಿನ ಸಿಲೆಬಸ್‍ನವರಿಗೆ, ನಾಲ್ಕು-ಅಥವಾ-ಐದನೆ ಕ್ಲಾಸ್‍ನಲ್ಲಿ. ಮಳೆಯ ಬಗ್ಗೆ ನನಗೆ ನೆನಪಿರುವ ಒಳ್ಳೆಯ ಕವಿತೆ ಅದು.

ಮತ್ತೆ ಮಳೆಗಾಲಕ್ಕೆ ಸಂಬಂಧಿಸಿದಂತೆ ನನ್ನ ಬಾಲ್ಯವೂ ಇದೇರೀತಿ ಇದ್ದುದರಿಂದ ಈ ಬರಹ ಆಪ್ತವೆನಿಸಿದ್ದು ಆಶ್ಚರ್ಯವಲ್ಲ.

ಹೀಗೆಯೇ ಬರೆಯುತ್ತಿರಿ. ಮಳೆ ಬೀಳಲಿ, ಕೊಳೆ ತೊಳೆಯಲಿ, ಬೆಳೆ ಬೆಳೆಯಲಿ, ಇಳೆ ಬೆಳಗಲಿ!

Jagali bhaagavata said...

ಬಾಲ್ಯದ ನೆನಪು ಯಾವತ್ತೂ ಆಪ್ಯಾಯಮಾನ. ಸಮಾನ ಸಾಮಾಜಿಕ ಹಿನ್ನೆಲೆಯಿಂದ ಬಂದಿದ್ದರಿಂದ ನನಗೂ ಈ ಬರವಣಿಗೆ ಇಷ್ಟವಾಯ್ತು.

shashanka said...

saaru neeraaythaa hege???
barali maLe... toLeyali koLe...
aadare aduve keLe andaadare???
olleya chitraNa.

shashanka said...

'photographer, vaadyagaarara jathe banda' chennaagide.'iavattu saaru saaku, amma kotta happala ide' annuvudaralli haleya nenapina sambhramakke hechchina shakti ide.
bareetha iri.

ಸುಧನ್ವಾ ದೇರಾಜೆ. said...

shashankana comment chennagide

Dr Medha Dongre said...

ಓದುತ್ತಿರುವಂತೆ ದಕ್ಷಿಣಕನ್ನಡದಲ್ಲೇ ಇದ್ದೇನೆಂದು ಅನಿಸಿತು.ಮುಗಿದಾಗ ಒಮ್ಮೆಲೇ ಸುಂದರ ಕನಸಿನಿಂದ ಎಚ್ಚೆತ್ತಂತೆ ಭ್ರಮನಿರಸನವಾಯಿತು...ಲೇಖನ ಇನ್ನೂಸ್ವಲ್ಪ ಉದ್ದ ಇದ್ದಿದ್ದರೆ ಇನ್ನೂ ಸ್ವಲ್ಪ ಹೊತ್ತು ನಮ್ಮೂರ[ಕನಸಿನ]ಲ್ಲಿ ಇರಬಹುದಿತ್ತು ಅನಿಸಿತು..ಆದರೆ ಏನೂ ಚಿಂತೆ ಇಲ್ಲ..ಇವತ್ತೇ ೧ ತಿಂಗಳ ರಜೆಗಾಗಿ ಊರಿಗೆ ಹೊರಟಿದ್ದೇನೆ.ನಿಮ್ಮ ಲೇಖನದಲ್ಲಿ ವರ್ಣಿಸಿರುವಂತೆಯೇ ಈ ಮಳೆಗಾಲವನ್ನು ಅಮ್ಮ ಮಾಡಿದ ಹಪ್ಪಳ ಮೆಲ್ಲುತ್ತಾ enjoy ಮಾಡುತ್ತೇನೆ..

Unknown said...

lekhana thumba chennagide.monneyashte maganige thanda hosa pusthakada vasane noduththa omme balyada nenapu madikonde.dhoo endu suriyuva malege attada mele musaku hakikondu malagodu esto hottina thanaka phattanga kochchodu.chimani deepada belakalli mane mandi ella ondede seri khabryo madodu.estella majavagiththalla? Lekhana odi malege happala kasi thindhangaythu.heege barithiru.

Anveshi said...

ನೀವು ಹೇಳಿದ ಹಾಗೆ, ಸಾಂತಾಣಿ ಮತ್ತು ಪುಳ್ಕೊಟ್ಟೆ (ಹುಣಸೆಬೀಜ)ತಿನ್ನೋದಕ್ಕಾಗಿಯಾದರೂ ಮಳೆ ಬೀಳುತ್ತಲೇ ಇರಲಿ ಅಂತ ಆಸೆಯಾಗ್ತಾ ಇದೆ.

ಯಾಕಂದ್ರೆ ಉಳಿದ ದಿನಗಳಲ್ಲಿ ಅವುಗಳ ರುಚಿ ಮಳೆಗಾಲದಲ್ಲಿ ತಿಂದಂತೆ ಇರೋದಿಲ್ಲ....

ಗುಂಡು ಗುಂಡಿಯಕ್ಕೆ ಹೋಗೋವಾಗ ಡ್ರಮ್ಮು ತುಂಬಾ ಸಾಂತಾಣಿ ತಗೊಂಬನ್ನಿ...

Anonymous said...

how do you come up with good quality kannada words being in Bangalore?

Anonymous said...

lekhana chennagi moodi bandide. Balayada nenapannu matte manadalli moodisuvantide. heegeye jeevanada dinanityada prasangagala bagge bareyutta eri......:)

ನಂದಕಿಶೋರ said...

ನಮಸ್ಕಾರ.
ಪುಸ್ತಕ ಒದ್ದೆಯಾಗಬಾರೆದೆಂದು ಪ್ಲಾಸ್ಟಿಕ್ಕಿನಲ್ಲಿಟ್ಟುಕೊಳ್ಳುವುದು ಮಾತ್ರ ಅಲ್ಲ; ಚೀಲವನ್ನು (ಚೀಲ=ಇಂದಿನ ಸ್ಕೂಲ್‍ಬ್ಯಾಗ್) ಬೆನ್ನಿನ ಬದಲು ಎದೆಗೆ ಆನಿಸಿಕೊಂಡು ಮೇಲೆ ಮಳೆಯಂಗಿ ಧರಿಸಿಯೋ, ಕೊಡೆಯನ್ನು ಹಿಡಿದೋ ಹೋಗುತ್ತಿದ್ದೆವು. ಕೃತಕ ನೆರೆ ಬಂದಾಗ ಆ ನೀರಿನಲ್ಲಿ ಸೊಂಟಮಟ್ಟ ಶಾಲೆಯವರೆಗೆ ಹೋಗಿ ವಾಪಸ್ಸು ಬರುವುದೇ ಸಂಭ್ರಮ! ಸ್ವಲ್ಪ ನೆಂದರೆ ಅದಕ್ಕೆ ಬೆಲೆಯಿಲ್ಲ ಅಂತ ಬೇಕಂತಲೇ ಪೂರ್ತಿಯಾಗಿ ನೆಂದು ತರಗತಿಗೆ ಹೋಗುವುದರಲ್ಲಿ ಏನೋ ಒಂದು ಲೋಕ ಜಯಿಸಿದ ಹೆಮ್ಮೆ; ಸೈಕಲ್‍ನಲ್ಲಿ ಒಂದು ಕೈಯಲ್ಲಿ ಕೊಡೆ ಬ್ಯಾಲೆನ್ಸ್ ಮಾಡಿಕೊಂಡು ಇನ್ನೊಂದರಲ್ಲಿ ಜಾರುತ್ತಿದ್ದ ಬ್ರೇಕ್ ಹಾಕಿಕೊಂಡು ವೇಗವಾಗಿ ಮನೆಗೆ ಬರುವುದು ಇನ್ನೊಂದು ಸಾಹಸ. ಅಯ್ಯಬ್ಬ, ಎಲ್ಲವನ್ನೂ ನೆನಪಿಸಿದ್ದಕ್ಕೆ, ನೆನಪಿಸುತ್ತಿರುವುದಕ್ಕೆ ಧನ್ಯವಾದ.
ಒಳ್ಳೆಯ ಬರಹ. ಬರೆಯುತ್ತಿರಿ.

Kuldeep Dongre said...

Ye daulat bhii le lo, Ye shoharat bhii le lo
Bhale chhiin lo mujhase merii javaanii
magar mujhako lautaa do bachapan kaa saavan
Wo Kagaz ki Kashti,Wo Baarish ka Paani !!

VENU VINOD said...

ಮಳೆ, ಹಪ್ಪಳ, ವ್ಹಾವ್....ನಾನಂತೂ ನಾಸ್ಟಾಲ್ಜಿಯಾದಲ್ಲಿ ಮುಳುಗಿಬಿಟ್ಟೆ.
ನಿಮ್ಮ ಬ್ಲಾಗನ್ನು ನನ್ನ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತೇನೆ. ಆಗಬಹುದೇ.

Archu said...

ಶ್ರೀವತ್ಸ ಜೋಶಿಯವರಿಗೆ,
ಮಳೆಯ ಕವನ ನೆನಪಿಸಿದ್ದಕ್ಕೆ ಧನ್ಯವಾದಗಳು..
ಮಳೆ ಬೀಳಲಿ..ಕೊಳೆ ತೊಳೆಯಲಿ...ಬೆಳೆ ಬೆಳೆಯಲಿ..ಒಳ್ಳೆಯ ಆಶಯ...

ನನಗೆ ಕಾಮನ ಬಿಲ್ಲಿನ ಬಗ್ಗೆ ಒಂದು ಪದ್ಯ ನೆನಪಾಯಿತು.."ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ " ಅಂತ..

ಜಗಲಿ ಭಾಗವತರೇ,
ಥಾಂಕ್ಯು..ಲೇಖನ ಮೆಚ್ಚಿಕೊಂಡದ್ದಕ್ಕೆ..

ಶಶಾಂಕ,
ಸಾರು ನೀರಾಗಲಿಲ್ಲ ಮಹಾರಾಯರೇ..ಮಳೆ ಸರಿ ಇಲ್ಲದೆ ನೀರೇ ಇರಲಿಲ್ಲ..ಹಾಗಾಗಿ ಇನ್ನು ಹೀಗೇ ಮಳೆ ಬಂದರೆ, ನೀರು ಸರಿಯಾಗಿ ಬರಲು ಶುರು ಆದರೆ , ಸಾರು ನೀರಾಗಿಸಲು ಪ್ರಯತ್ನಿಸಬಹುದು :-)

ಸುಧನ್ವ,
ಥಾಂಕ್ಯು..

ಮೇಧಾ..
ಒಂದು ತಿಂಗಳ ರಜೆಗೆ ಊರಿಗೆ ಹೋಗುವ ಸುದ್ದಿ ನನ್ನ ಹೊಟ್ಟೆ ಸ್ವಲ್ಪ ಉರಿಸಿತು..ಗಮ್ಮತ್ತು ಮಾಡಿ ಮನೆಯಲ್ಲಿ..

ಆಶಾ ಮಾಮಿ,
ಥಾಂಕ್ಸ್..ನೆನಪುಗಳನ್ನು ಹಂಚಿಕೊಂಡದ್ದಕ್ಕೆ..
ಅಸತ್ಯ ಅನ್ವೇಷಿಗಳೇ,
ಡ್ರಮ್ಮು ತುಂಬಾ ಸಾಂತಾಣಿ!! ಒಳ್ಳೆಯ ಆಲೋಚನೆ..

ಕೀರ್ತಿ,
ಕನ್ನಡ ಭಾಷೆಯಲ್ಲಿರುವ ಆಸಕ್ತಿಯೇ ಕಾರಣ..ಒಳ್ಳೆಯ ಕನ್ನಡ ಪದಗಳು ಅಂತ ಕೇಳಿ ಖುಷಿಯಾಯಿತು. :-)

ಶ್ರೀನಿ,
ಧನ್ಯವಾದ ..ಮಳೆ ನನ್ನನ್ನು ಯಾವಾಗಲೂ ಬಾಲ್ಯದ ನೆನಪಿನತ್ತ ತಳ್ಳುತ್ತದೆ..

ಯಾತ್ರಿಕರೇ,
ನಿಮ್ಮ ನೆನಪುಗಳು ತುಂಬಾ ಮಧುರವಾಗಿವೆ..ಧನ್ಯವಾದಗಳು ..ಹಂಚಿಕೊಂಡದ್ದಕ್ಕೆ..

ಕುಲದೀಪ್,
ಥಾಂಕ್ಸ್,ಹಿಂದಿ ಗೀತೆಯೊಂದನ್ನು ನೆನಪಿಸಿದ್ದಕ್ಕೆ..

ವೇಣು,
ಖಂಡಿತ,ನನ್ನದೇನೂ ಅಭ್ಯಂತರವಿಲ್ಲ..

ಪ್ರೀತಿಯಿಂದ,
ಅರ್ಚನಾ

ಮಂಜು ಶಂಕರ್ said...

Nice one.

Just being a visitor to Subramanya or Malenadu region during rainy season, it amazes so much! Lucky you've spent your childhood over there ;-)

I wish I can spend at least a week in the rains (and survive any viral fever I might catch ;-) ) - esp. to see the subramanya forest as descried in bettada jeeva!

So when are we getting halasina happaLa ;-) ?

Sushrutha Dodderi said...

ಸ್ವಲ್ಪ ತಡವಾಗಿ, ಪೂರ್ತಿ ಮಳೆ ಹಿಡಿದಮೇಲೇ ಓದಿದೆ ನಿಮ್ಮ ಆರ್ಟಿಕಲ್ಲು. ಹೀಗಾಗಿ, ನನಗೆ 'ಸ್ಪೆಶಲ್ ಎಫೆಕ್ಟ್' ಸಿಕ್ಕಿತು ಎನ್ನಬಹುದು!

ತುಂಬಾ ಚೆನ್ನಾಗಿ ಬರೆದಿದ್ದೀರಾ. ಮಳೆ ಬರಲೇಬೇಕೆಂದಿಲ್ಲ; ಇಂತಹ ಲೇಖನ ಓದಿದರೂ ಸಾಕು- ಸೀದಾ ನಾನು ಊರಿಗೆ ಹೋಗುತ್ತೇನೆ ನೆನಪಿನ ದೋಣಿಯಲ್ಲಿ... ಎಂಥಾ ಹದವಿತ್ತು ಆ ದಿನಗಳಲಿ...

ಖುಷಿಕೊಟ್ಟ ಬರೆಹ ಓದಿಸಿದ್ದಕ್ಕೆ ಧನ್ಯವಾದಗಳು...

Sanath said...

ನಾನು ಮೊನ್ನೆ ಊರಿಗೆ ಹೋಗಿದ್ದಾಗ ಒಂದು ದಿನ ಭಾರಿ ಮಳೆಯಾಯಿತು. ಆ ಮಳೆಗೆ ಮನೆಲಿ ಕೂತು ಹಪ್ಪಳ ತಿನ್ನುತ್ತಿದ್ದ ನಾನು ಯಾಕೋ ಕೊಡೆ ಹಿಡಿದು ನನ್ನ ಪ್ರೈಮರಿ ಶಾಲೆಯವರೆಗೆ ಹೋಗಿ ಬಂದೆ.
ಶಾಲೆಯ ರಜಾದಿನಗಳಾದ್ದರಿಂದ ಯಾರೂ ಇರಲಿಲ್ಲ. ಆದ್ರೂ ಶಾಲೆ ಕಟ್ಟೆಯಲ್ಲಿ ಕುಳಿತು ಮಳೆಯನ್ನ "ಆಸ್ವಾದಿಸಿದೆ".
ಮೈಸೂರಿಗೆ ವಾಪಾಸ್ ಬಂದ ಮೇಲೆ ಯಾಕೋ ಊರಿನ ಮಳೆ ಮಿಸ್ಸ್ ಮಾಡ್ತಾ ಇದ್ದೇನೆ ಅನ್ನಿಸುತ್ತಾ ಇದೆ .

Shanmukharaja M said...

ಚೆನ್ನಾಗಿದೆ!

ಇವನು ಇನಿಯನಲ್ಲ... ಧಾಟಿಯಲಿ ಓದಿ:-)

ನಿಮಗೆ ಅಲ್ಲಿ ಮಳೆಯೆ?
ನಮಗೆ ಇಲ್ಲಿ ಬೆವರಿನ ಸಾಲೆ;-)

ನಮ್ಮ ಬೆವರ ಮುತ್ತಿನ ಹನಿಯು
ನಿಮಗೆ ಅಲ್ಲಿ ಮಳೆಯಾಗಿಹುದೆ
ಎನೂ ತಿಳಿಯೆನು?

ನಿಮಗೆ ಅಲ್ಲಿ ಮಳೆಯೆ?
ನಮಗೆ ಇಲ್ಲಿ ಬೆವರಿನ ಸಾಲೆ;-)

ಬಾನ ತುಂಬ ಇಲ್ಲಿ..
ಕರಿಯ-ಕಪ್ಪು ಮೊಡಗಳಿಹವು:-)
ಗಾಳಿ ಬಂದು ಬೀಸುತ ಇರಲು
ಒಂದು ಹನಿಯ ಬೀಳಲು ಬಿಡದು
ಯಾಕೆ ಈತರ..

ನಿಮಗೆ ಅಲ್ಲಿ ಮಳೆಯೆ?
ನಮಗೆ ಇಲ್ಲಿ ಬೆವರಿನ ಸಾಲೆ;-)

--Shan! (www.swarachitha.blogspot.com)

ಸುಪ್ತದೀಪ್ತಿ suptadeepti said...

ಮೊನ್ನೆಯೇ ದಟ್ಸ್'ಕನ್ನಡದಲ್ಲಿ ಓದಿದ್ದೆ, ತುಂಬಾ ಖುಷಿಯಾಯ್ತು. ಡ್ರಮ್ಮಿನಿಂದ ಸ್ಲಿಮ್ಮಿಗೆ ಇಳಿಯೋ ಕಷ್ಟ ನನಗೂ ಗೊತ್ತು, ಮಳೆಯಲ್ಲಿ ನೆನೆಯೋ ಸುಖವೂ ಗೊತ್ತು. ಲೇಖನ ಅವೆಲ್ಲ ಆಯಾಮಗಳನ್ನು ಸವರಿದ್ದರಿಂದ ಇಷ್ಟವಾಯ್ತೋ, ಬರವಣಿಗೆಯ ಚುರುಕುತನದಿಂದ ಇಷ್ಟವಾಯ್ತೋ ಹೇಳಲಾರೆ. ಅಂತೂ ಹಿಡಿಸಿತು. ಹೀಗೇ ಬರೆಯುತ್ತಿರಿ.

Kalidas geleyara balaga said...

Hi Archana ma'm,

Bijapur dalliyava nagiddarind, maleya anubhava...nimmastu illa kanri.... aadre lekhani oodid mele
mungaru maleyalli nenede bitte....

Superb.!!

I don't have words to describe ur script....
eager to see ur scripts... oftenly...


Vandanegalu,
Lokesh

Jagali bhaagavata said...

ಮಳೆಗಾಲ ಮುಗ್ದಾಯ್ತಲ್ಲ. ಮುಂದಿನ ಲೇಖನ...

Unknown said...

yintha saamaanya anisbahudaad visyagalannu Aapyaaya maanavaagi baredre yi thara Khushi kodutte

Karthik CS said...

ನಾನ್ ಆಫೀಸ್ ನಲ್ಲಿ ಓದ್ತಾ ಇದ್ದ್ರೆ, ಇಲ್ಲೆ ಮೈ ಮೇಲೆ ಮಳೆ ಬಿದ್ದ ಹಾಗಾಯ್ತು.. ಬಹಳ ಚೆನ್ನಾಗಿದೆ .. ಹೀಗೇ ಬರೀತಿರಿ. ನಿಮ್ಮನ್ನು ನನ್ನ ಬ್ಲಾಗಿಗೆ ಸೇರಿಸಿದೆ..

Shree said...

ಯಾಕೆ ಬರೀತಿಲ್ಲ?

Anonymous said...

ನಿಮ್ಮ ಬ್ಲಾಗ್ ಒದಿದೆ,... ಮನಸ್ಸಿಗೆ ತುಂಬ ಸಂತೋಷ ಸಿಕ್ಕಿತು.. ನಿಜಕ್ಕು ತುಂಬಾ ಚೆನ್ನಾದ ಬರಹಗಳು.. ನಿಮ್ಮ ವ್ಹಿಕ್ಕಂದಿನ ಅನುಭವ ನಮ್ಮಂತಃ ಮಕ್ಕಳ ಅನುಭವವ ಹೌದು.. ನಾನೂ ನಿಮ್ ತರಾನೆ ಮಳೆ ಅಂದ್ರೆ ಇಷ್ಟ ಪಡೋನು... ನೆನಿಯೋದು ಅಂದ್ರಂತು ಪಂಚಪ್ರಾಣ.. ನಿಮ್ಮ ಬ್ಲಾಗ್ ಓದ್ತಾ ಇದ್ದಾಗ ನಾನು ಸಣ್ಣಂದಿನಲ್ಲಿ ಇರೋವಾಗಿನ ಘಟನೆಗಳು ನೆನಪಿಗೆ ಬಂದುವು... ನಿಜಕ್ಕೂ ಚೆನ್ನಾಗಿರೋ ಬರಹ....

Anonymous said...

modalaneyadaagi, dhanyavaadagalu, kannada nodiye bahala dinagalaaitu. Adenu, hunase beeja tintaaraa?

Guru Prasad N.