’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’
--------------------------------------------------
ಸಾರು
--------------------------------------------------

ದಕ್ಷಿಣ ಭಾರತೀಯ ಆಹಾರಕ್ರಮದಲ್ಲಿ ಅತಿ ಮುಖ್ಯವಾದ ಒಂದು ಪ್ರಕಾರವೆಂದರೆ ಸಾರು.
ರಸಂ, ಸಾರು, ಚಾರು ಎಂಬ ವಿವಿಧ ನಾಮಾಂಕಿತ ಸಾರು ಅತ್ಯಂತ ಸರಳ ಮತ್ತು ರುಚಿಕರವಾದದ್ದು.ಯಾರಿಗಾದರೂ ಅಡುಗೆ ಮಾಡಲು ಬರುವುದಿಲ್ಲ ಎಂದಿದ್ದರೆ ಅದನ್ನು ವ್ಯಕ್ತಪಡಿಸುವ ವಾಕ್ಯವೇನು ಗೊತ್ತೆ? ಆಕೆಗೆ/ಆತನಿಗೆ ಒಂದು ಅನ್ನ ಸಾರು ಮಾಡಲು ಬರುವುದಿಲ್ಲ ಎಂದು!!ಗಗನಕ್ಕೇರಿದ ಬೇಳೆ ಬೆಲೆಯಿಂದಾಗಿ ಸಾರಿಗೆ ಬೇಳೆ ಬೇಯಿಸುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ತೊಗರಿ ಬೇಳೆ ಇಲ್ಲದೆ ಮಾಡಬಹುದಾದ ಸಾರಿನ ವಿಧಾನಗಳನ್ನು ಬರೆಯುತ್ತಿದ್ದೇನೆ.ಇವುಗಳು ಮಳೆಗಾಲದಲ್ಲಿ ಕಾಡುವ ಜ್ವರ,ಶೀತ,ಕೆಮ್ಮಿಗೆ ಕೊಂಚ ಕಡಿವಾಣವನ್ನೂ ಹಾಕಬಲ್ಲವು. ಓದಿ , ಮನೆಯಲ್ಲಿ ಇವುಗಳನ್ನು ಮಾಡಿ ನೋಡಿ,ಹೇಗಾಯ್ತು ಅಂತ ತಿಳಿಸುತ್ತೀರಲ್ಲಾ ?
-----------------------------
೧.ಕಾಳು ಮೆಣಸು-ಜೀರಿಗೆ ಸಾರು
-----------------------------

ಕಾಳು ಮೆಣಸು : ಅರ್ಧ ಚಮಚ
ಜೀರಿಗೆ:ಒಂದು ಚಮಚ
ಬೆಲ್ಲದ ಪುಡಿ : ಒಂದು ಚಮಚ
ಬೆಳ್ಳುಳ್ಳಿ ಎಸಳು :೪
ಅರಸಿನ :ಕಾಲು ಚಮಚ
ಸಾಸಿವೆ :ಒಂದು ಚಮಚ
ತುಪ್ಪ :ಒಂದು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಹುಣಸೆ ಹುಳಿ: ನಿಂಬೆ ಗಾತ್ರದಷ್ಟು
ಬೇವಿನೆಲೆ :ಹತ್ತು ಎಸಳು
ಇಂಗು:ಚಿಟಿಕೆ
ವಿಧಾನ :
ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.
ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.
ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು, ಬೇವಿನೆಲೆ ಹಾಕಿ ಕಲಕಿ, ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಕಿ.ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ.
ಇದೀಗ ನೋಡಿ ,ನಾಲಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ತಯಾರಾಯಿತು. ಇನ್ನೇಕೆ ತಡ, ಬಿಸಿ ಬಿಸಿ ಅನ್ನಕ್ಕೆ ಕಲಕಿ ತಿನ್ನುವುದೊಂದೇ ಬಾಕಿ!!
ಕಾಳು ಮೆಣಸು,ಜೀರಿಗೆ ಕೆಮ್ಮು,ಕಫಕ್ಕೆ ಅತ್ಯುತ್ತಮ ಔಷಧಿ!
---------------------------------------------
೨.ಸಾಂಬ್ರಾಣಿ ಎಲೆಯ ಸಾರು :
---------------------------------------------
ಬೇಕಾಗುವ ಸಾಮಗ್ರಿಗಳು:
ಸಾಂಬ್ರಾಣಿ ಎಲೆ : ಎರಡು ಹಿಡಿ
ನೀರುಳ್ಳಿ :ಒಂದು
ತುಪ್ಪ :ಎರಡು ಚಮಚ
ಉದ್ದು,ಅರಿಸಿನ,ಸಾಸಿವೆ ,ಜೀರಿಗ,ಎಣ್ಣೆ, : ತಲಾ ಒಂದು ಚಮಚ
ಕೆಂಪು ಮೆಣಸು : 3
ಹುಣಸೆ ರಸ :4 ಚಮಚ
ಬೆಲ್ಲ :ಮಧ್ಯಮ ಗಾತ್ರದ ಚೂರು
ಉಪ್ಪು :ರುಚಿಗೆ ತಕ್ಕಷ್ಟು
ಮೊದಲಿಗೆ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ.
ನೀರಿಗೆ ಹುರಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ.
ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ.
ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ.
ಆಮೇಲೆ ಒಲೆಯಿಂದ ಇಳಿಸಿ.
ಈಗ ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.
ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಒಲೆಯಿಂದ ಇಳಿಸಿ,ಕುದಿಸಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳ ಮಿಶ್ರಣಕ್ಕೆ ಹಾಕಿ.
ಈ ಸಾರು ಬಹಳ ರುಚಿ.ಅನ್ನಕ್ಕೆ ಬಹಳ ಒಳ್ಳೆಯ ಜತೆ!!
-------------------------
೩.ನಿಂಬೆ ಸಾರು
------------------------

ನಿಂಬೆ ರಸ ವಿಟಮಿನ್ ಸಿ ಯನ್ನು ಹೊಂದಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಂಬೆ ರಸ ಬಳಸುವುದು ಅತೀ ಉತ್ತಮ.
ಸಾಮಗ್ರಿಗಳು
ನಿಂಬೆ ರಸ:ಎರಡು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ನೀರು :ಎರಡು ಲೋಟ
ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು
------------------
ವಿಧಾನ
-------------------
೧.ನೀರನ್ನು ಕುದಿಸಿ, ಅದಕ್ಕೆ ಉಪ್ಪು,ಬೆಲ್ಲದ ಪುಡಿ ಹಾಕಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.ಸಾರಿಗೆ ನಿಂಬೆ ರಸ ಹಿಂಡಿ,
೩.ಬೇಕಿದ್ದರೆ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಹಾಕಬಹುದು.
----------------------
೪.ಪುನರ್ಪುಳಿ ಸಾರು
---------------------
ದಕ್ಷಿಣ ಕನ್ನಡದಲ್ಲಿ ಬಹಳ ಜನಪ್ರಿಯವಾದ ಸಾರು ಇದು.ಪುನರ್ಪುಳಿಯನ್ನು ಸಾಮಾನ್ಯವಾಗಿ ಪಿತ್ತ ಹೆಚ್ಚಾದಾಗ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟರೆ, ತಲೆ ತಿರುಗುವಿಕೆ, ಅಲರ್ಜಿಯಂತಹ ತೊಂದರೆಗಳುಂಟಾದಾಗ ಹೆಚ್ಚಾಗಿ ಬಳಸುತ್ತಾರೆ.
ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ (ಕೋಕಮ್) : ೮ ರಿಂದ ಹತ್ತು
ನೀರು :ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ಕಾಳುಮೆಣಸಿನ ಪುಡಿ:ಕಾಲು ಚಮಚ
ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು
ವಿಧಾನ :
೧.ಪುನರ್ಪುಳಿಯನ್ನು ನೀರಿನಲ್ಲಿ ಹದಿನೈದು ನಿಮಿಷಗಳ ಕಾಲ ನೆನೆಸಿ ಇಡಿ
೨.ಉಪ್ಪು,ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಇವುಗಳನ್ನು ಈ ನೀರಿಗೆ ಹಾಕಿ,ಕುದಿಯಲು ಬಿಡಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.
ಅತ್ಯಂತ ಸರಳವೂ ರುಚಿಕರವೂ ಆದ ಸಾರು ಇದು.