
ಈ ಚಿತ್ರ ಕಿಶೋರ್ ಅವರು ಬರೆದದ್ದು.
ಅಕ್ಕ ತಮ್ಮನ ಜೋಡಿ ನಿಂತಿಹುದು
ಮೆಟ್ಟಿಲಿನ ಬಳಿಯಲ್ಲಿ
ಹುಸಿಮುನಿಸು -ತಮ್ಮನ ಜತೆಗೆ
ಮುಗುಳುನಗೆ -ಅಕ್ಕನ ಮೊಗದಲ್ಲಿ||
ನೋಡು ತಮ್ಮಾ ಏರಬೇಕಾದ ದಾರಿಯೆಡೆಗೆ
ಒಮ್ಮೆ ತಿರುಗಿ ನೋಡು..
ಮುಖತಿರುಗಿಸಿದರೆ ಹೇಗೆ ? ನಮ್ಮ ನಾಳೆಗಳು
ಇರುವುದಲ್ಲಿ! ಅತ್ತ ಓಡು..||
ಒಂದರ ನಂತರ ಇನ್ನೊಂದು
ಹತ್ತಬೇಕು ಮೆಟ್ಟಲು
ಸತತ ಪ್ರಯತ್ನ , ಛಲ ಬೇಕೇ
ಬೇಕು ಗುರಿ ಮುಟ್ಟಲು||
ನೋವೊ ನಲಿವೋ ಪಯಣಿಸುತಿರಬೇಕು
ಪಯಣಕೆ ಹೆದರಬೇಡ,ನೀ ಮುಂದೆ ಸಾಗು
ನ್ಯಾಯ ಮಾರ್ಗದಲಿಮುನ್ನಡೆದರೆ ಸಾಕು
ಧೈರ್ಯದಿಂದಲೆ ನೀ ಮುನ್ನಗ್ಗು||
ಬೇರೆಬೇರೆಯಾದರೂ ನಮ್ಮ ಪಯಣದ ಹಾದಿ
ಜತೆಗಿರುವೆ ನಾ , ನೆನಪಾದಾಗಲೆಲ್ಲ
ನಮ್ಮ ಒಡನಾಟ,ಪ್ರೀತಿ ಮರೆಯಾಗದು
ಮಮತೆ ಇಹುದು ಹೃದಯದದೊಳಗೆಲ್ಲ||