Pages

Wednesday, July 9, 2014

ಅಕ್ಕಿ,ಬೆಲ್ಲ ಮತ್ತು ತೆಂಗಿನಕಾಯಿ....

ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಅಕ್ಕಿ,ಬೆಲ್ಲ ಮತ್ತು ತೆಂಗಿನಕಾಯಿ ಯನ್ನು ಬಳಸಿ ಮಾಡುವ ವಿಶಿಷ್ಟ ಪಾಕ ವೈವಿಧ್ಯಗಳಿವೆ.ಬನ್ನಿ ಇವುಗಳನ್ನು ಮಾಡುವ ವಿಧಾನವನ್ನು ಅರಿತುಕೊಳ್ಳೋಣ.

------------------
೧.ಪಾತ್ತಳಿ
------------------

ಬೇಕಾಗುವ ವಸ್ತುಗಳು

ಅಕ್ಕಿ:ಒಂದು ಲೋಟ

ತೆಂಗಿನ ತುರಿ:ಅರ್ಧ ಲೋಟ
ಪುಡಿ ಮಾಡಿದ ಬೆಲ್ಲ:ಒಂದು ಲೋಟ
ಏಲಕ್ಕಿ:ಚಿಟಿಕೆ.
ಉಪ್ಪು:ಚಿಟಿಕೆ



೧.ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿ.
೨.ಬಳಿಕ ಅಕ್ಕಿಯನ್ನು ಉಪ್ಪು ಮತ್ತು ಸ್ವಲ್ಪ ನೀರಿನ ಜತೆ ರುಬ್ಬಬೇಕು. ಈ ಹಿಟ್ಟು ನೀರು ನೀರಾಗಿರಬಾರದು.
೩.ಒಂದು ಪಾತ್ರೆಯಲ್ಲಿ ಬೆಲ್ಲದ ಪುಡಿ ಮತ್ತು ತೆಂಗಿನ ತುರಿಯನ್ನು ಒಟ್ಟಿಗೆ ಕಲಸಿ.ಇದು ಹೂರಣ.
೪.ಬಾಳೆ ಎಲೆಯ ಮೇಲೆ ಮೊದಲು ಒಂದು ಸೌಟು ರುಬ್ಬಿದ ಹಿಟ್ಟನ್ನು ಹರಡಿ, ಬಳಿಕ ಅದರ ಮೇಲೆ ಹೂಅಣವನ್ನು ಹರಡಿ, ಬಾಳೆ ಎಲೆಯನ್ನು ಮಡಚಬೇಕು.
೫.ಹಿಟ್ಟು ತುಂಬಿದ ಮಡಚಿದ ಬಾಳೆ ಎಲೆಗಳನ್ನು ಹಬೆಯಲ್ಲಿ ಬೇಯಿಸಿ.
೬.ಪಾತ್ತೊಳಿ ತಯಾರಾಯಿತು.ಇನ್ನೇಕೆ ತಡ, ತುಪ್ಪದ ಜತೆ ತಿನ್ನಿ. ಬಲು ರುಚಿ!


ವಿ.ಸೂ. ಬಾಳೆ ಎಲೆಯ ಬದಲು ಅರಸಿನದ ಎಲೆಗಳನ್ನು ಬಳಸಬಹುದು.ಆಗ ಪಾತ್ತೊಳಿಗೆ ವಿಶಿಷ್ಟವಾದ ಪರಿಮಳ ಬರುತ್ತದೆ.
ಬಾಳೆ ಎಲೆ/ಅರಸಿನ ಎಲೆ ಸಿಗದಿದ್ದರೆ, ಇಡ್ಲಿ ಸ್ಟಾಂಡಿನಲ್ಲಿ ಹಿಟ್ಟು ಹಾಕಿ,ಅದರಲ್ಲಿ ತೆಂಗಿನಕಾಯಿ ಹೂರಣವನ್ನು ಹಾಕಿ, ಹಬೆಯಲ್ಲಿ ಬೇಯಿಸಬಹುದು.


-------------------------------------------------------------------
೨.ಅಕ್ಕಿ ಮೋದಕ
-------------------------------------------------------------------

ಬೇಕಾಗುವ ವಸ್ತುಗಳು

ಅಕ್ಕಿ:ಒಂದು ಲೋಟ

ತೆಂಗಿನ ತುರಿ:ಅರ್ಧ ಲೋಟ
ಪುಡಿ ಮಾಡಿದ ಬೆಲ್ಲ:ಒಂದು ಲೋಟ
ಏಲಕ್ಕಿ:ಚಿಟಿಕೆ.
ಉಪ್ಪು:ಚಿಟಿಕೆ


ವಿಧಾನ:

೧.ಒಂದು ಪಾತ್ರೆಯಲ್ಲಿ ಬೆಲ್ಲದ ಪುಡಿ ಮತ್ತು ತೆಂಗಿನ ತುರಿಯನ್ನು ಒಟ್ಟಿಗೆ ಕಲಸಿ.
೨.ಅಕ್ಕಿಯನ್ನು ನೀರಿನಲ್ಲಿ ಒಂದು ಗಂಟೆ ಕಾಲ ನೆನೆಸಿ ,ನಯವಾಗಿ ರುಬ್ಬಿ.
೩.ಒಲೆಯ ಮೇಲೆ ರುಬ್ಬಿದ ಅಕ್ಕಿಯನ್ನು ಇಟ್ಟು,ಗೊಟಾಯಿಸಿ. ನೀರು ನೀರಾಗಿರುವ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಬರುವ ತನಕ ಗೊಟಾಯಿಸಬೇಕು.
೪.ಕೈಗೆ ಎಣ್ಣೆ ಸವರಿ,ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ,ಪೂರಿಯ ಥರ ಲಟ್ಟಿಸಿ.
೫.ಪ್ರತಿ ಪೂರಿಯ ಮೇಲೆ ಹೂರಣ ಹರಡಿ ಮೋದಕದ ಆಕಾರದಲ್ಲಿ ಮಡಚಿ.
೬.ಅರ್ಧ ಗಂಟೆ ಹಬೆಯಲ್ಲಿ ಬೇಯಿಸಿ.

-----------------------------------------
೩.ಅಕ್ಕಿ ಉಂಡಿ ಮತ್ತು ಒತ್ತು ಶ್ಯಾವಿಗೆ
----------------------------------------
ಬೇಕಾಗುವ ವಸ್ತುಗಳು

ಅಕ್ಕಿ:ಒಂದು ಲೋಟ
ತೆಂಗಿನ ತುರಿ:ಅರ್ಧ ಲೋಟ
ಉಪ್ಪು:ಚಿಟಿಕೆ

ವಿಧಾನ


೧.ಅಕ್ಕಿಯನ್ನು ನೀರಿನಲ್ಲಿ ಒಂದು ಗಂಟೆ ಕಾಲ ನೆನೆಸಿ ,ಬಳಿಕ ತರಿ ತರಿಯಾಗಿ ರುಬ್ಬಿ.
೨.ಒಲೆಯ ಮೇಲೆ ರುಬ್ಬಿದ ಅಕ್ಕಿಯನ್ನು ಇಟ್ಟು,ಗೊಟಾಯಿಸಿ. ನೀರು ನೀರಾಗಿರುವ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಬರುವ ತನಕ ಗೊಟಾಯಿಸಬೇಕು.
೩.ಕೈಗೆ ಎಣ್ಣೆ ಸವರಿ,ಹಿಟ್ಟಿನಿಂದ ಚೆಂಡಿನಾಕಾರದ ಉಂಡೆಗಳನ್ನಾಗಿ ಮಾಡಿ,ಹಬೆಯಲ್ಲಿ ಬೇಯಿಸಿ.ಈಗ ಅಕ್ಕಿ ಉಂಡಿ ತಯಾರು.ತೆಂಗಿನ ಚಟ್ನಿಯ ಜತೆ ಈ ಉಂಡಿ ತಿನ್ನಲು ಬಹಳ ರುಚಿ.


ಅಕ್ಕಿ ಉಂಡಿಯನ್ನು ಶ್ಯಾವಿಗೆ ಅಚ್ಚಿನಲ್ಲಿ ಹಾಕಿ ಒತ್ತಿದರೆ ಒತ್ತು ಶ್ಯಾವಿಗೆ ತಯಾರು.ಇದರ ಜತೆ ಬಾಳೆ ಹಣ್ಣಿನ ರಸಾಯನ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ.


-------------------------------------------------
೫.ಸಿಹಿ ಅಕ್ಕಿ ಉಂಡಿ
-----------------------------------------------
ಮೇಲೆ ತಿಳಿಸಿದ ವಿಧಾನದಂತೆ ಅಕ್ಕಿಯನ್ನು ರುಬ್ಬುವಾಗ ಒಂದು ಲೋಟ ಬೆಲ್ಲದ ಪುಡಿ,ತೆಂಗಿನ ತುರಿ ಅರ್ಧ ಲೋಟ ಹಾಕಿ ರುಬ್ಬಬೇಕು.ಬೇರೆಲ್ಲಾ ವಿಧಾನ ಅಕ್ಕಿ ಉಂಡಿಯಂತೆಯೇ.

------------------------------------------------
೬.ಹಾಲು ಬಾಯಿ
----------------------------------------------

ಬೇಕಾಗುವ ವಸ್ತುಗಳು

ಅಕ್ಕಿ:ಒಂದು ಲೋಟ

ತೆಂಗಿನ ತುರಿ:ಅರ್ಧ ಲೋಟ
ಪುಡಿ ಮಾಡಿದ ಬೆಲ್ಲ:ಒಂದು ಲೋಟ
ಏಲಕ್ಕಿ:ಚಿಟಿಕೆ.
ಉಪ್ಪು:ಚಿಟಿಕೆ


ವಿಧಾನ

೧.ಅಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ಸಣ್ಣಗೆ ರುಬ್ಬಬೇಕು.
೨.ಒಲೆಯ ಮೇಲೆ ರುಬ್ಬಿದ ಈ ಮಿಶ್ರಣವನ್ನು  ಇಟ್ಟು,ಗೊಟಾಯಿಸಿ. ನೀರು ನೀರಾಗಿರುವ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಬರುವ ತನಕ ಗೊಟಾಯಿಸಬೇಕು.
೩.ತಟ್ಟೆಗೆ ತುಪ್ಪ ಸವರಿ,ಗೊಟಾಯಿಸಿದ ಮಿಶ್ರಣವನ್ನು ಹರಡಿ, ಬಿಲ್ಲೆಗಳಾಗಿ ಕತ್ತರಿಸಿ.

--------------------------------
೭.ಅತ್ರಸ
---------------------------------

ಬೇಕಾಗುವ ವಸ್ತುಗಳು

ಅಕ್ಕಿ:ಒಂದು ಲೋಟ

ತೆಂಗಿನ ತುರಿ:ಅರ್ಧ ಲೋಟ
ಪುಡಿ ಮಾಡಿದ ಬೆಲ್ಲ:ಒಂದು ಲೋಟ
ಏಲಕ್ಕಿ:ಚಿಟಿಕೆ.
ಉಪ್ಪು:ಚಿಟಿಕೆ
ಕರಿಯಲು ಎಣ್ಣೆ ಅಥವಾ ತುಪ್ಪ: ಒಂದು ಲೋಟ



ವಿಧಾನ

೧.ಅಕ್ಕಿಯನ್ನು ನೀರಿನಲ್ಲಿ ಒಂದು ಗಂಟೆ ಕಾಲ ನೆನೆಸಿ  ಒಣಗಿಸಿ.
೨.ಒಣಗಿದ ಅಕ್ಕಿಯನ್ನು ರುಬ್ಬಿ ಹಿಟ್ಟು ಮಾಡಿಟ್ಟುಕೊಳ್ಳಿ.ನೀರು ಹಾಕಬಾರದು.
೩.ಬೆಲ್ಲ, ಮೂರುಚಮಚ ನೀರು ಇವುಗಳನ್ನು ಒಟ್ಟಿಗೆ ಒಲೆಯ ಮೇಲೆ ಇಡಿ.ಬೆಲ್ಲ ನೀರಾಗುತ್ತಿದ್ದಂತೆ,ತೆಂಗಿನಕಾಯಿ ಮತ್ತು ಈಗಾಗಲೇ ತಯಾರಿಸಿ ಇಟ್ಟುಕೊಂಡಿರುವ ಅಕ್ಕಿ ಹಿಟ್ಟಿನ್ನು ಹಾಕಿ ಕಲಕಿ.ಇದು ಚಪಾತಿ ಹಿಟ್ಟಿನ ದಪ್ಪಕ್ಕೆ ಬರಬೇಕು.
೪.ಬಳಿಕ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ,ಪೂರಿಯ ಹಾಗೆ ಲಟ್ಟಿಸಿ.
೫.ತುಪ್ಪದಲ್ಲಿ ಕಂದು ಮಿಶ್ರಿತ ಹೊಂಬಣ್ಣ ಬರುವ ತನಕ ಕರಿಯಿರಿ.
೬.ಅತ್ರಸ ತಯಾರಾಯಿತು.ಇದು ಮೂರು -ನಾಲ್ಕು ದಿನ ಇಟ್ಟರೂ ಹಾಳಾಗುವುದಿಲ್ಲ.

-------------------------------------

೮.ಬಾಳೆ ಹಣ್ಣಿನ ರಸಾಯನ

-------------------------------------
ತೆಂಗಿನ ತುರಿ:ಒಂದು ಲೋಟ
ಬೆಲ್ಲದ ಪುಡಿ:ಒಂದು ಲೋಟ
ಬಾಳೆ ಹಣ್ಣು :ನಾಲ್ಕು
ಏಲಕ್ಕಿ:ಚಿಟಿಕೆ

ವಿಧಾನ

೧.ತೆಂಗಿನ ತುರಿಯನ್ನು ನೀರಿನ ಜತೆ ರುಬ್ಬಿ,ಹಿಂಡಿ, ರಸ ತೆಗೆದು ಇಟ್ಟುಕೊಳ್ಳಿ.
೨.ಇದಕ್ಕೆ ಬೆಲ್ಲದ ಪುಡಿ,ಸಣ್ಣಗೆ ಹೆಚ್ಚಿದ ಬಾಳೆ ಹಣ್ಣು,ಏಲಕ್ಕಿ ಪುಡಿ ಹಾಕಿ ಕಲಕಿ.
೩.ರುಚಿಯಾದ ಬಾಳೆಹಣ್ಣಿನ ರಸಾಯನ ತಯಾರಾಯಿತು.



--------------------------------
೯.ಅಕ್ಕಿ ಸಿಹಿ ಉಂಡೆ
---------------------------
ತೆಂಗಿನ ತುರಿ:ಒಂದು ಲೋಟ
ಬೆಲ್ಲದ ಪುಡಿ:ಒಂದು ಲೋಟ
ಏಲಕ್ಕಿ:ಚಿಟಿಕೆ
ಅಕ್ಕಿ ರವೆ:ಒಂದು ಲೋಟ
ಮೈದಾ:ಒಂದು ಲೋಟ
ಕರಿಯಲು ಎಣ್ಣೆ ಅಥವಾ ತುಪ್ಪ :ಒಂದುವರೆ ಲೋಟ
ಉಪ್ಪು:ಚಿಟಿಕೆ

ವಿಧಾನ

೧.ಒಂದುವರೆ ಲೋಟ ನೀರನ್ನು ಬಿಸಿ ಮಾಡಿ,ಅದರಲ್ಲಿ ಅಕ್ಕಿ ರವೆ ಹಾಕಿ ಸುಮಾರು ಹತ್ತು ನಿಮಿಷಗಳ ಕಾಲ ಬೇಯಿಸಿ.
೨.ಬಳಿಕ ಇದಕ್ಕೆ ಬೆಲ್ಲ, ತೆಂಗಿನ ತುರಿ, ಏಲಕ್ಕಿ,ಉಪ್ಪು  ಹಾಕಿ ಕಲಸಿ.
೩.ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಬರುತ್ತಿದ್ದಂತೆ ಇದನ್ನು ಒಲೆಯಿಂದ ಇಳಿಸಿ, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.
೪.ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕಲಕಿ.
೫.ಹಂತ (೩) ರಲ್ಲಿ ತಯಾರಿಸಿದ ಉಂಡೆಗಳನ್ನು ಮೈದಾದಲ್ಲಿ ಅದ್ದಿ ಕರಿಯಿರಿ.


-------------------------------
೧೦.ಕಾಯಿ ಹೋಳಿಗೆ
----------------------------
ಬೆಲ್ಲ ಒಂದು ಲೋಟ
ತೆಂಗಿನ ತುರಿ :ಒಂದು ಲೋಟ
ಏಲಕ್ಕಿ ಚಿಟಿಕೆ
ಮೈದಾ ಹಿಟ್ಟು:ಒಂದು ಲೋಟ
ಎಣ್ಣೆ:ಸ್ವಲ್ಪ

ವಿಧಾನ

೧.ಹೂರಣ
ಬೆಲ್ಲ ಮತ್ತು ಮೂರು ಚಮಚ ನೀರನ್ನು ಒಟ್ಟಿಗೆ ಹಾಕಿ ಬಿಸಿ ಮಾಡಿ.ಬೆಲ್ಲ ನೀರಾಗುತ್ತಿದ್ದಂತೆ ತೆಂಗಿನ ತುರಿ,ಏಲಕ್ಕಿ ಹಾಕಿ ಕಲಕಿ.
ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಒಲೆ ಆರಿಸಿ.

*ನೀರು ದೋಸೆಯ ಜತೆ ಈ  ಹೂರಣ  ಅತ್ಯುತ್ತಮ ಜತೆ.
*ಈ ಹೂರಣಕ್ಕೆ ಅವಲಕ್ಕಿ ಸೇರಿಸಿದರೆ ಸಿಹಿ ಅವಲಕ್ಕಿ ತಯಾರು.

೨.ಮೈದಾಹಿಟ್ಟಿಗೆ ಎಣ್ಣೆ ಸೇರಿಸಿ ಕಲಕಿ, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಇದರ ನಡುವೆ ಹೂರಣವನ್ನು ಇಟ್ಟು ಮಡಚಿ,ಚಪಾತಿಯ ಹಾಗೆ ಲಟ್ಟಿಸಿ.ಕಾವಲಿಯಲ್ಲಿ ಬೇಯಿಸಿ.